ಕತೆಯ ಹೊಸ್ತಿಲಲ್ಲಿ ನಿಂತು ನಸುನಗುವ ಪ್ರಬಂಧಗಳು

Team Udayavani, Jan 13, 2019, 12:30 AM IST

ಕತೆ, ಕಾದಂಬರಿ, ಪ್ರಬಂಧ- ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಗಣನೀಯವಾದ ಕೃತಿಗಳನ್ನು ಕನ್ನಡಕ್ಕೆ ನೀಡಿರುವ
ಡಾ. ಗುರುಪ್ರಸಾದ್‌ ಕಾಗಿನೆಲೆ, ಇನ್ನಷ್ಟು ಹೊಸ ಪ್ರಬಂಧಗಳ ಗುಚ್ಛವನ್ನು ನಮ್ಮ ಕೈಗಿಟ್ಟಿದ್ದಾರೆ. ಛಂದ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಹೆಸರು ಸಾವೆಂಬ ಲಹರಿ. ಬದುಕಿನ ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡ ಜನ ತಮ್ಮ ಅನುಭವವನ್ನು ಬರವಣಿಗೆಗಿಳಿಸಿದಾಗ ಆ ಸಾಹಿತ್ಯ ಲೋಕ ಇನ್ನೂ ಸಮೃದ್ಧವಾಗುತ್ತದೆ ಎನ್ನುವ ಮಾತಿದೆ. ಪೊಲೀಸ್‌, ವಕೀಲ, ವೈದ್ಯ, ವಿಜ್ಞಾನಿ, ಸೈನಿಕ ಇಂತಹ ವಿರಳ ವೃತ್ತಿಜೀವನದ ಆಗುಹೋಗುಗಳ ಬಗ್ಗೆ ಎಲ್ಲರಿಗೂ ಕುತೂಹಲವೇ. ಆದರೆ, ಅವು “ಸೃಜನಾತ್ಮಕ’ ಬರಹ ರೂಪದಲ್ಲಿ ನಮಗೆ ದಕ್ಕಿರುವುದು ಕಡಿಮೆಯೇ. ಬ್ರಿಟಿಷ್‌ ಸರಕಾರದಲ್ಲಿ ಅಮಲ್ದಾರರಾಗಿದ್ದ ನವರತ್ನ ರಾಮರಾವ್‌ ಅವರ ಕೆಲವು ನೆನಪುಗಳು ರಿಂದ ಹಿಡಿದು, ಇತ್ತೀಚಿನ ಸಿ.ಎಚ್‌. ಹನುಮಂತರಾಯರ ವಕೀಲರೊಬ್ಬರ ವಗೈರೆಗಳು ನಡುವೆ ಸಾಹಿತ್ಯೇತರ ಕ್ಷೇತ್ರ ವೈವಿಧ್ಯದ ಕೃತಿಗಳು ಅಲ್ಲಲ್ಲಿ ನಮಗೆ ದೊರಕಿವೆ. ಹಾಗೇ, ಡಾ. ಟಿ. ಎಸ್‌. ರಮಾನಂದ, ರಾಶಿ, ಬೆಸಗರಹಳ್ಳಿ ರಾಮಣ್ಣ ಇವರೆಲ್ಲ ವೈದ್ಯಲೋಕದ ವಿಸ್ಮಯಗಳಿಂದ ಕನ್ನಡ ಅಕ್ಷರ ಜಗತ್ತನ್ನು ಶ್ರೀಮಂತ ಗೊಳಿಸಿದವರೇ. ಈ ಮಧ್ಯೆ ಚಿತ್ರಾನ್ನವೆನ್ನುವ ದಂತವೈದ್ಯರ ಕತೆಗಳೂ, ಡೇರಿ ಡಾಕ್ಟರ್‌ ಹೋರಿ ಮಾಸ್ಟರ್‌ರಂಥ ಪಶುವೈದ್ಯರ ಹರಟೆಗಳೂ ಅಪರೂಪವೆಂಬಂತೆ ಕಾಣಸಿಗುತ್ತವೆ. ಇವರೆಲ್ಲರ ಜೊತೆ ಗುರುಪ್ರಸಾದ್‌ ಕಾಗಿನೆಲೆ ವಿಭಿನ್ನವೆನಿಸುವುದು ಈ ನೆಲದ ಸೊಗಡನ್ನು ಒಳಗೊಳ್ಳುತ್ತಲೇ ದೇಶ, ಪ್ರಾಂತ್ಯದ ಗಡಿಯನ್ನು ದಾಟುವ ಅವರ ಡಾಕ್ಟರಿಕೆಯ ಜೀವನಾನುಭವದಿಂದ. 

ಮೈನಸ್‌ 25- ಒಂದು ಪ್ರಾರ್ಥನೆ ಎನ್ನುವ ಮೊದಲ ಪ್ರಬಂಧದಲ್ಲೇ ಅವರು ಮನಸ್ಸಿಗೆ ಮಂಜುಗಡ್ಡೆಯ ಸ್ಪರ್ಶ ನೀಡುತ್ತಾರೆ. ಮೈನಸ್‌ 32 ಡಿಗ್ರಿಯ ಕಲ್ಪನೆಗೂ ದಕ್ಕದ ವಾತಾವರಣದ ಹಿನ್ನೆಲೆಯಲ್ಲಿ ಮೌನದ ಹಲವು ರೂಪಗಳ ದರ್ಶನವಿದೆ ಇಲ್ಲಿ. “ಮೈಸೂರಿನ ಚಳಿಯಲ್ಲೇ ಹೊರಗೆ ವಾಕಿಂಗ್‌ ಹೋಗದ ವೃದ್ಧ ದಂಪತಿಯನ್ನು ಅಮೆರಿಕಾದ ಈ ಮೈನಸ್‌ ಶೀತದಲ್ಲಿ ಹೊರದಬ್ಬುವ ಅದೆಂಥ ಮೌನ ಇರಬೇಕು ಮನೆಯೊಳಗೆ?’ ಎನ್ನುವ ಪ್ರಶ್ನೆ ಓದುಗನನ್ನೂ ಮೂಕನಾಗಿಸುವಂಥದ್ದು. ಚಚೊìಂದನ್ನು ಕೊಂಡು, ಅದನ್ನು ದೇವಸ್ಥಾನವನ್ನಾಗಿ ಬದಲಾಯಿಸಿ, ಅದರ ನೆಲಮಾಳಿಗೆಯಲ್ಲಿ ಮುಸ್ತಾಫಾನ ಮಗನ ಹುಟ್ಟಿದ ಹಬ್ಬ ಆಚರಿಸಿ, ದೇವರನ್ನು ಜೀವಂತವಾಗಿಡುವ ಈ ಪ್ರಬಂಧ; “ಮುಂದೆಂದೋ ಆಗುವ ಉತ್ಖನನದ ನಂತರ ದೇವರುಗಳು ಜಗಳಾಡದಿರಲಿ’ ಎನ್ನುವ ಲೇಖಕನ ಅಂತರಂಗದ ಪ್ರಾರ್ಥನೆಯನ್ನು ಸಾರ್ವತ್ರಿಕವಾಗಿಸುವ ಸತುವುಳ್ಳದ್ದು. 

ವಿಮಾನಯಾನದ ನಡುವೆ ಪ್ರಯಾಣಿಕರಾರಿ ಗಾದರೂ ತೀವ್ರ ಎದೆನೋವು ಕಾಣಿಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವುದು ತಪ್ಪಾದ ಜಾಗದಲಿ, ತಪ್ಪಾದ ಸಮಯದಲಿ ಎನ್ನುವ ಪ್ರಬಂಧ. ಅದೇ ವಿಮಾನದಲ್ಲಿದ್ದ ಡಾಕ್ಟರನೊಬ್ಬ ತನ್ನ ವೃತ್ತಿಪರತೆ ಮೆರೆಯಹೊರಟಾಗ ಆಗಬಹುದಾದ ಪರಿಣಾಮಗಳ ಬಗ್ಗೆ ಒಬ್ಬ ಡಾಕ್ಟರೇ ಬರೆಯಬೇಕು ಹಾಗೂ ಆ ಡಾಕ್ಟರು ನುರಿತ ಬರಹಗಾರನೇ ಆಗಿರಬೇಕು. ತನ್ನ ಜೀವ ಉಳಿಸಲು ಕಾರಣವಾದ ಡಿಫಿಬ್ರಿಲೇಟರ್‌ ಯಂತ್ರದ ಕಂಪೆನಿಯ ಮಾಲಿಕನೇ ತಾನಾಗಿರುವ ಸೋಜಿಗದ; ಮಗುವಿನ ಗಂಟಲಿನಲ್ಲಿ ಸಿಕ್ಕಿಕೊಂಡ ನಾಣ್ಯ ತೆಗೆಯಲು ಹೋಗಿ ತಾನೇ ಸಿಕ್ಕಿಬೀಳುವ ಪೇಚಿನ; ಹೆಣದ ಪಕ್ಕವೇ ಕುಳಿತು ಪ್ರಯಾಣಿಸಬೇಕಾದಂತ ಮೈ ಜುಮ್ಮೆನ್ನುವ ಘಟನೆಗಳನ್ನೆಲ್ಲ ರಸವತ್ತಾಗಿ ಅರುಹುವ ಈ ಲೇಖನ, ಸಾವಿನ ಹೊಸ್ತಿಲಲ್ಲೂ ಪುಟಿದೇಳುವ ವರ್ಣಬೇಧದ ಸೂಕ್ಷ್ಮತೆಗಳಿಂದಾಗಿ ಅಚ್ಚರಿ ಹುಟ್ಟಿಸಬಹುದು. 

ಬಳ್ಳಾರಿಯಲ್ಲಿ ಎಂಬಿಬಿಎಸ್‌ ಓದುತ್ತಿರುವಾಗಿನ ಕಾಲೇಜು ದಿನಗಳು, ನಂತರ ಹೌಸ್‌ ಸರ್ಜನ್‌ ಆಗಿ ಕೆಲಸ ಮಾಡುತ್ತಿರುವಾಗಿನ ಘಟನೆಗಳ ಜೊತೆ, ಅಮೆರಿಕದ ಆಸ್ಪತ್ರೆಯಲ್ಲಿ ಎಮರ್ಜನ್ಸಿ ಡಾಕ್ಟರಾಗಿ ಕೆಲಸ ಮಾಡಿದ ಹಲವು ಅನುಭವಗಳನ್ನು ಹಾಸ್ಯ ಲೇಪನದೊಂದಿಗೆ ನಮ್ಮ ಮುಂದಿಡುತ್ತಾರೆ ಗುರುಪ್ರಸಾದ. ಇಲ್ಲಿಯ ಹಾಸ್ಯದಲ್ಲಿ ಆತ್ಮೀಯತೆಯ ಎರಕವಿದೆ. ಅದಕ್ಕಿಂತ ಹೆಚ್ಚಾಗಿ, ಅಂತರಂಗಕ್ಕೆ ಮುಟ್ಟುವ ಮಾನವೀಯ ಮೌಲ್ಯಗಳ ಸ್ಪರ್ಶವಿದೆ. 

ಗುರುಪ್ರಸಾದರ ವೈದ್ಯಲೋಕದೊಳಗೆ ಅವರ ತಂದೆಯವರಿಗೂ ಸ್ಥಾನವಿದೆ. ಡಾಕ್ಟರುಗಳಿಗೆ ಸಿಗುವ ಪುಕ್ಕಟೆ ಔಷಧಿ ಸ್ಯಾಂಪಲ್ಲುಗಳ ವಿಲೇವಾರಿಯಲ್ಲದೆ, (ಪುಕ್ಕಟೆ ಔಷಧಿ ಅಂದರೆ ನನಗೂ ತಲೆನೋವು ಅಂದಂತೆ) ಅವರೇ ವೈದ್ಯರಾಗಲು ಹೊರಡುವ (ಅಪ್ಪನ ಡಾಕ್ಟರುಗಿರಿ) ಪ್ರಹಸನದ ಪ್ರಸಂಗಗಳೂ ಓದಿನ ಮುದಕ್ಕೆ ಕಾರಣವಾಗುತ್ತವೆ. ಇವೆಲ್ಲವನ್ನೂ ಮೀರಿ ಅಪ್ಪನ ಶವ ಸಂಸ್ಕಾರದ ಘಟನೆಯ ವಿವರಗಳು ಮನ ಮಿಡಿಯುತ್ತವೆ. (ಅಪ್ಪನ ಆ ಕರಕಲು ತಲೆ) ಹಾಗಂತ ಇಡೀ ಸಂಕಲನ ಕೇವಲ ವೈದ್ಯಕೀಯ ಕ್ಷೇತ್ರದ ಕೌತುಕಗಳಿಗಷ್ಟೇ ಸೀಮಿತವಾಗಿಲ್ಲ. ಕಾರು ಓಡಿಸುತ್ತಿದ್ದವನು ಅರ್ಧದಾರಿಯಲ್ಲಿಯೇ ನಿಲ್ಲಿಸಿ ನಾನು ಈ ಕ್ಷಣದಿಂದ ಕೆಲಸ ಬಿಟ್ಟಿದ್ದೇನೆ ಎನ್ನುವ ಡ್ರೈವರನಿದ್ದಾನಿಲ್ಲಿ. ಮುಟ್ಟು ಮುಂದೂಡುವ ಮಾತ್ರೆಯನ್ನು ತಿಂಗಳುಗಟ್ಟಲೆ ತೆಗೆದುಕೊಂಡ ಕೆಲಸದವನಿದ್ದಾನೆ. ಅದೆಲ್ಲ ಹೋಗಲಿ, ಮುಂಬಯಿ ಏರ್‌ಪೋರ್ಟಿನ ವಿಐಪಿ ಲಾಂಜಿನಲ್ಲಿ ಸಾûಾತ್‌ ಶ್ರೀದೇವಿಯೇ ಎದುರಾಗುತ್ತಾಳೆ. 

ಈ ಪ್ರಬಂಧವೆನ್ನುವ ಸಾಹಿತ್ಯ ಪ್ರಕಾರ ತನ್ನದೇ ಛಾಪುಳ್ಳದ್ದು. ಪ್ರಬಂಧ ಎನ್ನುವ ಶಬ್ದವನ್ನು ಇಂಗ್ಲಿಷಿನ “ಎಸ್ಸೆ’ ಎಂಬ ಶಬ್ದಕ್ಕೆ ಸಮಾನಾರ್ಥಕವಾಗಿ ನಾವು ಬಳಸುತ್ತಿದ್ದೇವಾದರೂ, ಚಾಲ್ತಿಯಲ್ಲಿರುವ ವಿವಿಧ ರೂಪಾಂತರಗಳನ್ನು ನಮ್ಮಲ್ಲಿ ನಿಖರವಾಗಿ ವಿಂಗಡಿಸಿಲ್ಲ. ಚಿಂತನ, ಐತಿಹಾಸಿಕ, ವೈಜ್ಞಾನಿಕ ಈ ರೀತಿಯ ಸೃಜನೇತರ ಪ್ರಕಾರಗಳು ಒಂದೆಡೆಯಾದರೆ; ಕಲಾತ್ಮಕ, ವರ್ಣನಾತ್ಮಕ, ವಿನೋದಾತ್ಮಕ (ಲಘುಪ್ರಬಂಧ, ಹರಟೆ) ಇತ್ಯಾದಿಗಳದ್ದು ಇನ್ನೊಂದು ಪ್ರಭೇದ. ಇಂಗ್ಲಿಷಿನಲ್ಲಿ ಇಂಥ ಬರಹಗಳನ್ನು ಸ್ಕಿಟ್‌, ಸ್ಕೆಚ್‌, ವಿನ್ಯೆಟ್‌ ಎಂದೆಲ್ಲ ಮರುವಿಂಗಡಿಸಿ ಪ್ರತ್ಯೇಕ ವಿಭಾಗಗಳಲ್ಲಿ ಸೇರಿಸಬಹುದಾಗಿದೆ. ಕನ್ನಡದಲ್ಲಿ ಅದಿಲ್ಲ. ಹೀಗಿರುವಾಗ ಕಾಗಿನೆಲೆಯವರ ಇಲ್ಲಿಯ ಲೇಖನಗಳನ್ನು ಸುಲಭದಲ್ಲಿ ಒಂದು ಪ್ರಕಾರಕ್ಕೆ ಸೇರಿಸಲು ಸಾಧ್ಯವಾಗುವುದಿಲ್ಲ. ಇವು “ಲಲಿತ ಪ್ರಬಂಧಗಳು’ ಎಂದು ಅವರು ಹೇಳಿಕೊಂಡಿದ್ದರೂ, ಲಘುಪ್ರಬಂಧವೊಂದರ ಮೂಲ ವ್ಯಾಖ್ಯಾನಕ್ಕೆ ಮೀರಿದ ಅಂಶಗಳನ್ನೂ ನಾವಿಲ್ಲಿ ಧಾರಾಳವಾಗಿ ಕಾಣಬಹುದು. ಶುದ್ಧ ಎಸ್ಸೆಯೊಂದು ಓದುಗನಿಗೆ ಕೊಡಬಹುದಾದ ನಿರ್ಲಿಪ್ತ ರಸಾನಂದದ ಜೊತೆಗೇ, ಆತನನ್ನು ಚಿಂತನೆಗೊಡ್ಡುವ ಗುಣಗಳೂ ಇಲ್ಲಿಯ ಬರಹಗಳಲ್ಲಿವೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದರೆ ಉತ್ತಮ ಸಣ್ಣಕಥೆಯಾಗಬಹುದಾದ ಸಾಧ್ಯತೆಯನ್ನು ಇಲ್ಲಿಯ ಹೆಚ್ಚಿನ ಪ್ರಬಂಧಗಳು ಹೊಂದಿವೆ. 

ಫೋಟೊಗ್ರಫಿ ಕಲೆಯಲ್ಲಿ ಬೇಟೆಯ ಛಾಯೆಯಿದೆ, ಅಮೆರಿಕ ಭಾರತೀಯರಿಗೆ ಬದುಕಲು ಬೇಕೇ ವಿನಾ ಸಾಯಲಲ್ಲ, ಹಳೆ ಮಾರುತಿ ಕಾರು ಪಕ್ಕಾ ಕನ್ನಡ ಮೀಡಿಯಮ್ಮು- ಇಂತಹ ಹಲವಾರು ಸಾಲುಗಳು ಪ್ರಬಂಧದ ಲಕ್ಷಣವ್ಯಾಪ್ತಿಯ ಪರಿಧಿಯನ್ನು ಹಿಗ್ಗಿಸಿವೆ. ಸತ್ತವನ ಎದೆಗೆ ಸ್ಟೆತಸ್ಕೋಪ್‌ ಹಿಡಿದಾಗ ಕೇಳುತ್ತಿರುವುದು ತನ್ನ ಎದೆಬಡಿತವೋ ಅಥವಾ ಹೆಣ¨ªೋ ಎಂದು ಗೊಂದಲಗೊಳ್ಳುವ ವೈದ್ಯನಲ್ಲಿ ನಮಗೆ ಶುದ್ಧ ಹೃದಯವಂತನೊಬ್ಬ ಕಾಣುತ್ತಾನೆ. ಅಹಮ್ಮಿಗೆ ಗಂಟುಬಿದ್ದು “ರೋಗಿಯ ಪರಿಸ್ಥಿತಿ ಕೊಂಚವೇ ಕೊಂಚ ಹೆಚ್ಚು ಬಿಗಡಾಯಿಸಲಿ’ ಎಂದು ಬಯಸುವವನೊಳಗೆ ಪ್ರಾಮಾಣಿಕ ಮನುಷ್ಯನೊಬ್ಬ ಕಾಣಿಸುತ್ತಾನೆ. ಚಿಕ್ಕಂದಿನಲ್ಲಿ ಪ್ರಾಣ ಉಳಿಸಿದ ಗೆಳೆಯನ ರೋಗ ಗುಣಪಡಿಸಲಾರದೆ “ನಾನು ಅಂಥಾ ದೊಡ್ಡ ವೈದ್ಯನೂ ಅಲ್ಲ, ಮನುಷ್ಯನೂ ಅಲ್ಲ’ ಎಂದು ಮರುಗುವ ಅಸಹಾಯಕತೆಯಲ್ಲಿ ಅತಿ ಭಾವುಕನೊಬ್ಬ ಗೋಚರಿಸುತ್ತಾನೆ. ಒಟ್ಟಾರೆಯಾಗಿ ಇವು ಲಲಿತ ಪ್ರಬಂಧಗಳಷ್ಟೇ ಅಲ್ಲ, ಭಾವ ಪ್ರಬಂಧಗಳು ಕೂಡ. 

  ಈ ಮೊದಲು ಹೇಳಿದಂತೆ, ಕನ್ನಡ ಸಾಹಿತ್ಯದ ಪ್ರಸ್ತುತ ಸ್ಥಿತಿ-ಗತಿ, ಹಾಗೂ ಕ್ಷೇತ್ರ ವೈವಿಧ್ಯದ ಅಗತ್ಯವನ್ನು ಗಮನಿಸಿದಾಗ ಗುರುಪ್ರಸಾದರ ಈ ಪುಸ್ತಕ “ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿ’ ನಮಗೆ ದೊರಕಿದೆ ಎಂದು ಖಂಡಿತವಾಗಿಯೂ ಹೇಳಬಹುದು. 

ಕರ್ಕಿ ಕೃಷ್ಣಮೂರ್ತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ...

  • ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ "ಇಸಂ'...

  • ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ "ಕುಯ್ಯೋ',...

  • ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ...

  • ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು...

ಹೊಸ ಸೇರ್ಪಡೆ