ನಿರೀಕ್ಷಿತವಾದುದನ್ನು ಕಾಯುವಾಗ ಅಲ್ಲ ; ಅನಿರೀಕ್ಷಿತವನ್ನು ಕಾಯುವಾಗ !


Team Udayavani, Jun 3, 2018, 6:00 AM IST

ss-8.jpg

ನಡೆದುಬಂದ ದಾರಿ ಕಡೆಗೆ ತಿರುಗಿಸಬೇಡ ಕಣ್ಣ-ಹೊರಳಿಸಬೇಡ” ಎಂದು ಎಷ್ಟು ಹೇಳಿಕೊಂಡರೂ ನಮ್ಮ ನೋಟದಲ್ಲೇ ನಾವು ನಡೆದದ್ದು, ನಡೆದು ಪಡೆದದ್ದು ಇರುತ್ತದೆ. ಕಣ್ಣಿನಲ್ಲೇ ಕಣ್ಣು ತಪ್ಪಿಸಿ ಇರುತ್ತದೆ. ಆದುದರಿಂದ, ಪ್ರಜ್ಞಾಪೂರ್ವಕವಾಗಿ (ನಡೆದುಬಂದುದನ್ನು) ಮರೆಯಬೇಕು ಎನ್ನುವ ಮಾತಿನಲ್ಲೇ ಒಂದು ಸ್ವ-ವಿರೋಧವಿದೆ. ಪ್ರಜ್ಞಾಪೂರ್ವಕವಾಗಿ ಮರೆಯುವುದು ಹೇಗೆ? “ಪ್ರಜ್ಞಾಪೂರ್ವಕ’ವೆನ್ನುವುದೇ ಮರೆವಿಗೆ ವಿರುದ್ಧವಾದ ಸಂಗತಿಯಲ್ಲವೆ? ಅಲ್ಲದೆ, ಗೋಪಾಲಕೃಷ್ಣ ಅಡಿಗರ ಕಾವ್ಯ, ತನ್ನ ನವ್ಯಮುಖದಲ್ಲಿ ಸರ್ವತೋಮುಖ ಸಂಕಲ್ಪ ಬಲದ ಜಾಗರಣೆಯ ಕಾವ್ಯವಾದರೂ, ಆ ಜಾಗರಣೆಯಲ್ಲಿ ಅನಿರೀಕ್ಷಿತವಾದುದನ್ನು ಎದುರುಗೊಳ್ಳುವ ಹಂಬಲವೂ ಅಡಗಿರುವುದು. “ಜಾಗರಣೆ’ ಎಂದಾಗ ಎಚ್ಚರದಿಂದ ಬೆಳಕಾಗುವುದನ್ನು ಕಾಯುವುದು ಎಂಬರ್ಥವೂ ಇದೆಯಲ್ಲವೆ? ಕಾಯುವುದು ಜೀವಂತವಾಗುವುದು ನಿರೀಕ್ಷಿತವಾದುದನ್ನು ಕಾಯುವಾಗ ಅಲ್ಲ ; ಅನಿರೀಕ್ಷಿತವನ್ನು ಕಾಯುವಾಗ. ಹೀಗೆ ಕಾಯುವುದೆನ್ನುವುದು ಅಡಿಗ ಕಾವ್ಯಸೂತ್ರಗಳಲ್ಲಿ ಮೊದಲನೆಯದು. ನಿರೀಕ್ಷಿತವನ್ನೇ ಕವಿ ಕರೆಯುವುದೆಂದರೆ ತನ್ನ ಭಾಷಾ ವ್ಯವಸ್ಥೆಯನ್ನು ಒಪ್ಪಿ ಬಾ ಎಂದು ಅತಿಥಿಯನ್ನು ಕರೆದಂತೆ. ಅನಿರೀಕ್ಷಿತವನ್ನು ಕರೆಯುವುದೆಂದರೆ- ನಿನಗೆ ಹೇಗೆ ಬೇಕೋ ಹಾಗೆ ಭಾಷೆಯನ್ನು ನೀನೇ ವ್ಯವಸ್ಥೆಗೊಳಿಸಿಕೊಂಡು ನನ್ನಲ್ಲಿಗೆ ಬಂದುಬಿಡು ಎಂದಂತೆ. “ಮಾತು’ ಎಲ್ಲಿ ಹರಿಯುತ್ತ ಭೂಮಿಯ ಯಾವ ಆಕಾರಕ್ಕೆ ಹೊಂದಿ, ಹೊಂದದೆ ಯಾವ ತಿರುವನ್ನು ಹೇಗೆ ಪಡೆದು ತನ್ನನ್ನು ಹೊಸಯಿಸಿಕೊಳ್ಳುತ್ತ ಹೊಳೆಯಂತೆ ಸಾಗುತ್ತದೆನ್ನುವುದನ್ನು ಪ್ರಜ್ಞಾಪೂರ್ವಕವಾಗಿ ನಾನು ಚಿಂತಿಸಲಾರೆ, ಹಾಗೆ ಚಿಂತಿಸಿದರೆ ಮಾತು ಹೊಸದಾಗಲು ಅದೇ ಅಡ್ಡಿಯಾಗಬಹುದು- ಎಂದಂತೆ. ನಡೆದುಬಂದ ದಾರಿಯನ್ನು ಸವೆದುಹೋದ ಮಾತುಗಳನ್ನು-ತಾನು ಮರೆಯುವುದೊಂದು ರೀತಿ. ಮುಂದೆ ಬರಲಿರುವ ಮಾತುಗಳಿಗೆ ಅವು ತನ್ನನ್ನು ಮರೆಯಲು ಅನುವು ಮಾಡಿಕೊಡುವಂತೆ ಇರುವುದು ಇನ್ನೊಂದು ರೀತಿ. ಇದು ಕಾಯುವಿಕೆಯ ರೀತಿ! ಕಾವ್ಯಕ್ಕೆ-ನಿಜವಾದ ಕಾವ್ಯಕ್ಕೆ-ಸಂಕಲ್ಪ ಬಲದ ಜಾಗರಣೆಯ ಜೊತೆಗೆ ತನ್ನನ್ನು ಮರೆಯಲು ಅನುವು ಮಾಡಿಕೊಡುವ ಕಾಯುವಿಕೆಯೂ ಬೇಕು. ಈ ಎರಡು ವಿಧದ ಆರೈಕೆಗಳೂ ಬೇಕು. ಇದು ಮಕ್ಕಳನ್ನು ಆರೈಕೆ ಮಾಡಿದಂತೆಯೇ. ಮಕ್ಕಳಿಗೆ ಎಚ್ಚರದ ಸಂಕಲ್ಪಿತ ವಿಶೇಷ ಆರೈಕೆಯೂ ಬೇಕು. ಅವುಗಳ ಪಾಡಿಗೆ ಆಟವಾಡಿಕೊಂಡಿರುವಂತೆ ಬಿಡಲೂ ಬೇಕು. ಅಂದರೆ ನಮ್ಮನ್ನು ಮರೆಯಲು ಮಕ್ಕಳಿಗೆ ಅನುವುಮಾಡಿಕೊಡಲೂ ಬೇಕು! ಇದೂ ಒಂದು ಅಗತ್ಯವಾದ ಆರೈಕೆಯೇ ಸರಿ. ಇದ್ದಕ್ಕಿದ್ದಂತೆ ಆಟವನ್ನು ಬಿಟ್ಟುಕೊಟ್ಟು ಅಮ್ಮ-ನೀನೆಲ್ಲಿದ್ದೀಯೆ ಎಂದು ಮಕ್ಕಳು ಅಳುವಾಗ ತಾಯಿ ಅಲ್ಲಿ ಹಾಜರಾಗುವ ಚೆಲುವೇ ಬೇರೆ. ತಾಯಿಗೆ ಇದು ನಿರೀಕ್ಷಿತವೇ ಆದರೂ ಇದು ತತ್‌ಕ್ಷಣದ ಸ್ಪಂದನವೂ ಹೌದು. ಈ ಸ್ಪಂದನ ಎಂದೆಂದೂ ಹೊಸತೇ. ತನ್ನನ್ನು ಮರೆತಂತಿರುವುದು ಎದುರಾದಾಗ ಅಲ್ಲಿ ಮಿಡಿಯುವ ಕಂಪನಗಳೇ ಬೇರೆ. ನಿಜವಾದ ಕಾವ್ಯದಲ್ಲಿ ಇಂಥ ಜೀವಂತಿಕೆ ಇರುತ್ತದೆ ಎನ್ನುವುದು ಅಡಿಗರ ನಿಲುವು. ಇದು ಅರಿವು-ಮರೆವಿನ ಆಟ. ನೆರಳು-ಬೆಳಕುಗಳ ಆಟ. ಎಲ್ಲ ಸೃಷ್ಟಿಶೀಲ ಕ್ರಿಯೆಗಳಲ್ಲಿಯೂ ಈ ಅರಿವು-ಮರೆವಿನ ಹಾಸುಹೊಕ್ಕು ಇವೆ. ವಚನಯುಗದಲ್ಲಿ ಇದು ದಟ್ಟವಾಗಿತ್ತು. ವಚನ ಮೀಮಾಂಸೆಯ ಭಾಗವೇ ಆಗಿತ್ತು ಅರಿವು-ಮರೆವಿನ ಈ ವಿನ್ಯಾಸ.

ಈ ಬಗೆಗೆ ಸೂತ್ರಗಳನ್ನು ರೂಪಿಸುವುದು ಸುಲಭ. ಆದರೆ, ನಿಜಜೀವನದಲ್ಲಿ ತಾಜಾ ಅನುಭವಗಳನ್ನು ಧಾರಣಮಾಡುವುದು ತೀರಾ ಕಷ್ಟ. ಅದರಲ್ಲೂ ಗಂಡು-ಹೆಣ್ಣು ಸಂಬಂಧದಲ್ಲಿ ಪರಸ್ಪರ ಒದಗಿಯೂ ಒದಗದ, ಒದಗದೆಯೂ ಒದಗುವ ನೂರು ರೀತಿಗಳಲ್ಲಿ ಅರಿವು-ಮರೆವುಗಳ ವಿನ್ಯಾಸಗಳನ್ನು ತಾಳಿಕೊಳ್ಳುವುದು ಕಷ್ಟ. ಅಡಿಗರ ಉತ್ತರಕಾಲೀನ ಎರಡು ಕವಿತೆಗಳನ್ನು ನೋಡಬಹುದು. ಮೌನದ ಸುವರ್ಣ ಪುತ್ಥಳಿ  ಮತ್ತು ಬಾ ಇತ್ತ ಇನ್ನೂ ಇತ್ತ ಎಂಬೆರಡು ಕವಿತೆಗಳು. ಇವೆರಡೂ ಒಂದೇ ಕವಿತೆಯ ಭಿನ್ನ ಆವೃತ್ತಿಗಳಂತಿವೆ. ಒಟ್ಟಾಗಿಯೇ ನೋಡಬೇಕು. ಸುವರ್ಣ ಪುತ್ಥಳಿಯ ಮುಖ್ಯ ನೋಟ ಇದು:

ಮೌನದ ಸುವರ್ಣ ಪುತ್ಥಳಿ ನೀನು, ನಿನ್ನ ಹೊರ ರೂಪಕ್ಕೆ
ಮರುಳಾಗಿದ್ದೆನಂದು ನಾನು
ಈಗಲೂ ಕೂಡ ಆ ಮರುಳು ಮೈಬಿಟ್ಟಿಲ್ಲ
ನಿನ್ನಂತರಂಗದ ವ್ಯಕ್ತ ಕಂಪು ಸೊಂಪು ಆಗಾಗ ಒಂದಿಷ್ಟು
ಹೊರಪಟ್ಟಿರದೆ ಒಂದು ಭಾರೀ ಪವಾಡ.
ಇಷ್ಟು ದಿನ ನೀನೆಂತು ಅರ್ಧಾಂಗಿಯಾಗಿಯೂ
ಬಾಯಿರದ ಈ “ಬಾಳ ತಾಳಿ ಬಂದೆ?’
ಮೂವತ್ತಮೂರನೆಯ ಸಾಲಭಂಜಿಕೆ ನೀನು ನಿನ್ನೆದೆಯ
ಕಥೆಯನೇತಕ್ಕಿಂತು ತಡೆದುಕೊಂಡೆ?
ತಾಳಿಭಾಗ್ಯಕ್ಕಿಷ್ಟು ಬೆಲೆಯೆ? ಏತಕ್ಕಾಗಿ ಇಷ್ಟು ತೆತ್ತೆ?
ಮೌನದಂಚಿಗೆ ಬಂದು ನಿಂತ ಮಿಡುಕಾಟವೇ ಏ ಚೆನ್ನೆ
ಮನೆಯ ನಂದನ ಮಾಡಿ ಮರೆನಿಂತ ಸುರಸುರಭಿಯೇ
ನಿನ್ನೀ ನಿರಂತರ ಶ್ರಮಕ್ಕೇನು ಸಂಭಾವನೆ?
ಸೊಲ್ಲಿರದೆ ಸಲ್ಲಿಸಿದ ಈ ಕಠೊರವ್ರತಕ್ಕೆಂದು ಉದ್ಯಾಪನೆ?
ಏನಿದು ಚಿತ್ರ? ವಿಚಿತ್ರ? ಕವಿ, ಸಾಧನೆಯಲ್ಲಿ ನಿರತನಾಗಿದ್ದಾನೆ. ಏನು ಸಾಧನೆ? ತನ್ನದೇ ನುಡಿಯನ್ನು ಪಡೆಯುವ ಸಾಧನೆ. ಮೀಸಲು ನುಡಿ. ಮೀಸಲು ಮಾತು. “ಬಗೆಯೊಳಗನೇ ತೆರೆದು ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ’ಯನ್ನು ಪಡೆವ ಸಾಧನೆ ಭಾವತರಂಗ ಕವನದಿಂದಲೇ ಪ್ರಾರಂಭವಾಗಿದೆ. ಇದೇನೋ ನಿಜವೇ. ಆದರೆ, ಇನ್ನೊಂದು ಬದಿಯಲ್ಲಿ ಏನಾಗಿದೆ? ತನ್ನ ಅರ್ಧಾಂಗಿ, ಮೂಕ ಬಾಳೊಂದನ್ನು ಬಾಳೊಂದನ್ನು ಬಾಳಿದ್ದಾಳೆ! “ಮೂವತ್ತಮೂರನೆಯ ಸಾಲಭಂಜಿಕೆ ನೀನು’.ವಿಕ್ರಮಾದಿತ್ಯನ ಸಿಂಹಾಸನದ ಮೂವತ್ತೆರಡು ಗೊಂಬೆಗಳು ಒಂದೊಂದೂ ಕಥೆ ಹೇಳುವ ಗೊಂಬೆಗಳಾದರೆ, ತನ್ನ ನುಡಿಯನ್ನು ಪಡೆವ ಸಾಧನೆಯ ಹಾದಿಯಲ್ಲಿರುವ ಕವಿಯ ಕೈಹಿಡಿದ ಮಡದಿ ಮಾತ್ರ ತನ್ನ ಕಥೆಯನ್ನು ತನ್ನಲ್ಲೇ ತಡೆದಿಟ್ಟುಕೊಂಡಿದ್ದಾಳೆ! ಮಡದಿಯ ಮೌನವೂ ಒಂದು ಸಾಧನೆಯೇ ಆಗಿದೆಯೆ? ಕವಿಗೆ ತಿಳಿಯುತ್ತಿಲ್ಲ. ಈ ಎರಡಕ್ಕೂ ಸಂಬಂಧವಿದೆಯೆ? ಅದೂ ತಿಳಿಯುತ್ತಿಲ್ಲ. ತಾಳಿಭಾಗ್ಯಕ್ಕಿಷ್ಟು ಬೆಲೆಯೆ? ಎಂಬ ಮಾತಿನಲ್ಲಿ ವ್ಯಂಗ್ಯವಿದೆ. ಮುಖ್ಯವಾದ ಮಾತೆಂದರೆ, ಇಷ್ಟು ಕಾಲದ ಮೇಲೆ ಕವಿಗೆ ತನ್ನ ಮಡದಿಯ ಮೌನ, ಅನುಭವಕ್ಕೆ ಬಂದು ಗುರುತಾಗಿದೆ. ಕಸಿವಿಸಿಯಾಗಿದೆ. ತಾಳಿಕೊಳ್ಳಲು ಕಷ್ಟವಾಗುತ್ತಿದೆ. ಆಕೆಯನ್ನೆ ಕೇಳುತ್ತಿದ್ದಾರೆ: ಏನು ಈ ನಿತಾಂತ ಮೌನದ ಅರ್ಥ? ಮಾತಿನಲ್ಲಿ ಸ್ವಲ್ಪ ವ್ಯಂಗ್ಯನೂ ಇದೆ; ನಿರ್ಮಲ ಪ್ರಶಂಸೆಯೂ ಇದೆ. ತಾನು ಕಂಗೆಟ್ಟದ್ದನ್ನು ತುಸುವೇ ಸೂಚಿಸಿ ತನ್ನದೇ ನಿಲುವಿಗೆ ಕವಿ ಬಂದಿದ್ದಾರೆ. ಅದು ಹೀಗೆ:

ನಿನ್ನಂತರಂಗದ ಮೃದುತ್ವ ಕಾರುಣ್ಯ ಅನುಕಂಪ
ಎಲ್ಲವೂ ಪ್ರತ್ಯಕ್ಷ ಕೃತಿರೂಪದಲ್ಲಿ
ಎರಡು ಮಾತುಗಳಲ್ಲಿ ನೂರೊಂದು ಧ್ವನಿ ಮೊಳಗಿಸುವ
ಪ್ರೌಢಕಾವ್ಯದ ರೀತಿ ನಿನ್ನ ನೀತಿ
ಹೀಗೆ ಹೇಳಿದರೂ ಅದು ಕವಿ ತನಗೆ ತಾನೇ ಮಾಡಿಕೊಂಡ ಸಮಾಧಾನದಂತಿದೆ. ಆದುದರಿಂದಲೇ ಕವಿತೆ ಇಲ್ಲಿಗೇ ಮುಗಿಯುವುದಿಲ್ಲ. ಇದೇ ವಸ್ತು “ಬಾ ಇತ್ತ ಇತ್ತ ಇನ್ನೂ ಇತ್ತ’ ಎನ್ನುವ ಕವಿತೆಯಲ್ಲಿ, ಇತ್ತ ಇತ್ತ ಎಂದು ಹತ್ತಿರ ಕರೆದು ತನ್ನೊಳಗಿನ ಮಾತುಗಳನ್ನು ಹೇಳುತ್ತ ಒಂದು ವಿಹ್ವಲತೆಯೊಂದಿಗೆ ಬೆಳೆಯುತ್ತದೆ. ಆ ಕವಿತೆಯ ಕೆಲವು ಸಾಲುಗಳು ಹೀಗಿವೆ:
ನೀನು ನನ್ನವಳಾಗಿ ಬಂದಾಗ ಮುಗ್ಧ ಕಿಶೋರಿ,
ನಾನೊ ಪ್ರೌಢ ವಿದಗ್ಧ , ಅಧ್ಯಾಪಕ ವರಾಕ,
ಆಗ ನಿನಗೆ ನಿನ್ನಂತರಂಗದ ಎಲ್ಲ ತುಡಿತಕ್ಕು
ರಕ್ಷಾಕವಚ ಲಜ್ಜೆ ; ಸಂಕೋಚ; ಹಿಂಜರಿಕೆ.
ಆಗ ಹತ್ತಿರ ಕರೆದು ಬರಸೆಳೆದು ಮನವೊಲಿಸಿ
ಮೂಕಪಿಕ ಕುಕಿಲುವೊಲು ಮಾಡಬೇಕಿತ್ತು. ಹಾಗೆ
ಮಾಡದೇ ಇದ್ದದ್ದು ಮೊದಲ ಭಾರೀ ತಪ್ಪು
ಈಗ ತಿಳಿವುದು ಈ ತನಕ ತಿಳಿಯದಿದ್ದದ್ದು.

“ಮೂಕಪಿಕ ಕುಕಿಲವೊಲು ಮಾಡಬೇಕಿತ್ತು’- ಎನ್ನುವ ಸಾಲನ್ನು ನೋಡಿ. ತನ್ನ ನುಡಿಯನ್ನು ತಾನು ಪಡೆಯಬೇಕೆನ್ನುವ ಮಾತಿನ ಜೊತೆಗೆ ಈ ಸಾಲು ತನ್ನ ವೈದೃಶ್ಯದಿಂದಲೇ ಒಡೆದುಕಾಯುತ್ತಿದೆ. ತನ್ನ ವಿದಗ್ಧತೆಯನ್ನು ತಾನೇ ಹಳಿದುಕೊಳ್ಳುತ್ತಿದ್ದಾರೆ ಕವಿ. ಆತ್ಮನಿಂದೆ ಕಾಣುತ್ತಿದೆ ಇಲ್ಲಿ. “”ತಿಳುವಳಿಕೆಯಂಥ ತಿಳಿಗೇಡಿ ಎಲ್ಲಿಯೂ ಇಲ್ಲ. ಕಳಕೊಂಡ ಹೊರತು ಬೆಲೆಯರಿಯದು” ಎಂಬ ಬೇಂದ್ರೆಯವರ ಮಾತು ನೆನಪಾಗುತ್ತದೆ. ಅಡಿಗರಲ್ಲಿ ಬೇಂದ್ರೆಯವರಂತೆ ಮಾತೃಭಾವವಿಲ್ಲ. ಅಡಿಗರದು ಮೂಲತಃ ಪಿತೃಪ್ರಧಾನ, ಪುರುಷಪ್ರಧಾನ ಸಂವೇದನೆಯಾಗಿದೆ. ಆದುದರಿಂದ ಬೇಂದ್ರೆ, ಮಧುರ ಚೆನ್ನರಲ್ಲಿರುವಂತೆ ಸ್ತ್ರೀಪಾತ್ರಗಳಿಲ್ಲ; ಸ್ತ್ರೀ ಸಂವೇದನೆ ಇಲ್ಲ. ಮಧುರಚೆನ್ನರು, ಮಧುರಗೀತದಲ್ಲಿ ತನ್ನನ್ನೇ ಸ್ತ್ರೀ ಎಂದುಕೊಂಡಿದ್ದರು. 
ಬೇಂದ್ರೆಯವರ ಅನೇಕ ಕವಿತೆಗಳು ಸ್ತ್ರೀಯರ ಅನುಭವದೊಳಗಿನ ಕವಿತೆಗಳಾಗಿವೆ. ಈ ದೃಷ್ಟಿಯಲ್ಲಿ ಅಡಿಗರ         ಚಿಂತಾಮಣಿಯಲ್ಲಿ ಕಂಡ ಮುಖ ಮಾತ್ರ ವಿಶಿಷ್ಟವಾಗಿದೆ. ಮಾತಿನಾಚೆಯ ಸಹಸ್ಪಂದಿ, ಮಾತಿಲ್ಲದೆಯೆ ಇಂಗಿತವನರಿವ ಸಹಭಾಗಿನಿಯ ಸಹಜ ಮುದ್ರೆ, ನನ್ನ ಆ ಇನ್ನೊಂದು ಮುಖ -ಸ್ತ್ರೀಮುಖ, ಮತ್ತೆ ಯಾವಾಗ ಮರುಭೇಟಿ, ಕಣ್ಣು ಕಣ್ಣುಗಳ ಸಮ್ಮಿಲನ, ಮೌನದ ಗಂಭೀರ ಸಂವಾದದ ಚಟಾಕಿ- ಇಂಥ ಮಾತುಗಳಿವೆ ಆ ಕವಿತೆಯಲ್ಲಿ. ಇದು ಮೌನದ ಮಿಂಚುಬಲ! ಮಾತು ದೂರದ ಮಿಂಚುತಂತಿಗಳಿರುವ ಹಾಗೆ-ಒದೆಸಿಕೊಳ್ಳದೆ ಒಳಗು ಮಿಂಚು ಬಲ ತಿಳಿಯದು- ಎಂದವರು ಅಡಿಗ. ಮೌನದ ಮಿಂಚುಬಲ ಕೂಡ ಚಿಂತಾಮಣಿಯಲ್ಲಿ ಕಂಡ ಮುಖದಲ್ಲಿ ಕವಿಗೆ ಅನುಭವವಾಗಿತ್ತು. ಆದರೆ, ಇದೇನಾಯಿತೀಗ? ಮಡದಿಯ ಮೌನವನ್ನು ಅರ್ಥಮಾಡಿಕೊಳ್ಳಲಾರರು- ಕವಿ. ಈ ಮೌನದ ಮುಂದೆ ವಿಹ್ವಲರಾಗಿದ್ದಾರೆ. ತನ್ನ ಸೃಷ್ಟಿಶೀಲತೆಯೇ ಕುಸಿದಿದೆ ಎಂಬ ಸಂದರ್ಭದಲ್ಲಿ ಆ ಒಳಕುಸಿತವನ್ನೇ ಕವಿತೆಯ ವಸ್ತುವಾಗಿಸಿ ಕೂಪ ಮಂಡೂಕವನ್ನು ಬರೆದವರು ಅದರಿಂದಲೇ ಪುನರುಜ್ಜೀವನವನ್ನು ಪಡೆದವರು-ಈಗೇನಾಗಿದೆ? ಮೌನ-ವಿಹ್ವಲ ಕವಿ. ತನ್ನ ನುಡಿ ತನಗೆ ಸಿಗದ ತನಕ ತನ್ನ ಬಾಳಿದು ನರಕ- ಎಂಬ ವಿಹ್ವಲತೆಯ ಇನ್ನೊಂದು ಮುಖವಿದು. ಇದು ನುಡಿಗಿಂತ ಹೆಚ್ಚು ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿಹ್ವಲತೆಯಾಗಿ ತೋರುತ್ತದೆ.

ಯಾವುದು ಮುಖ್ಯ? ತನ್ನ ಮೀಸಲು ನುಡಿ ತಾನು ಪಡೆಯುವುದು ಮುಖ್ಯವೆ? ತನಗೆ ಮೀಸಲು ಎಂಬಂತೆ ತನ್ನ ಜೊತೆ ಬದುಕುತ್ತಿರುವ ಜೀವ; ತನಗೆ ಮರುನುಡಿಗೊಡುವಂತೆ, ಆ ಜೀವದ ಮಾತಿಗೆ ತಾನು ಮರುನುಡಿಗೊಡುವಂತೆ ನುಡಿಯುವುದು ಮುಖ್ಯವೆ? “”ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ  ದೆಸೆಗಳೇ-ನಿಮಗೆಂದು ಬಹುದು, ಮೀಸಲು ನಿನದ?” ಎಂದು ಭಾವತರಂಗದಲ್ಲಿ ಕವಿ ಕೇಳಿದ್ದರು. ಮರುನುಡಿಗೊಡುವುದನ್ನು ಕಳಪೆ ಎಂದು ಬಗೆದಿದ್ದರು. ಈಗ ಮಡಯೆ ಮೌನದಲ್ಲಿ ತನ್ನ ಮಾತೇ ತನಗೆ ಢಿಕ್ಕಿಯಾಗುತ್ತಿದೆ. ತನ್ನ ನುಡಿಯನ್ನು ಪಡೆಯುವುದೆಂದರೆ ಅವಳ ನುಡಿಯನ್ನು ಕಿತ್ತುಕೊಂಡಂತಾಯಿತೆ? ಒಬ್ಬನೇ ನಡೆವ ಈ ಮೀಸಲು ಶಿಖರಯಾತ್ರೆ ಬೇಕೇ ಇರಲಿಲ್ಲವೆ? ಇಬ್ಬರೂ ಕೂಡಿ ನಡೆದಾಡಿದರೆ ಆ ವರ್ತುಲ ಎಷ್ಟು ಸಣ್ಣದಿದ್ದರೂ- ಅದಕ್ಕೊಂದು ಸ್ವಯಂಪೂರ್ಣತೆ ಇದೆಯೆ? ಒಬ್ಬನೇ ಪಡೆದ ಸಿದ್ಧಿ ಎಷ್ಟು ದೊಡ್ಡದೆನಿಸಿದರೂ ಅಲ್ಲಿಂದ ಮತ್ತೆ ಹಿಮ್ಮರಳಲೇ ಬೇಕೆ? ಮತ್ತೆ ತಾನು ಕಳಕೊಂಡುದೇನು ಎಂದು ಹುಡುಕಾಡಲೇ ಬೇಕೆ? ಇದು ತನ್ನ ವ್ಯಕ್ತಿತ್ವ ಮಾತ್ರವಲ್ಲ ; ಕಾವ್ಯದ ಮೌಲ್ಯಮಾಪನವೂ ಹೌದು.

ಜೊತೆಯ ಜೀವದ ಮೌನದಲ್ಲಿ ತಾನು ಆಡದ, ಆಡಬೇಕೆಂದಿರುವ, ಆಡಿದರೆ ಕೃತಾರ್ಥವಾಗುವ ಮಾತುಗಳನ್ನು ಕೇಳಿಸಿಕೊಳ್ಳಬಹುದಿತ್ತು. ಮೌನವನ್ನು ಅದೊಂದು ಕೊರತೆ ಎಂದು ತಾನೇಕೆ ಏಕಮುಖವಾಗಿ ಬಗೆಯಬೇಕು? ನಿಜವಾದ ಕಾವ್ಯಕ್ಕೆ ಅನಿರೀಕ್ಷಿತ ವನ್ನು ಕಾಯುವುದು ಕೂಡ ಮುಖ್ಯ ಎಂದು ತನಗೆ ಗೊತ್ತು. ನಿಜವಾದ ಕಾವ್ಯಕ್ಕೆ ಅದು ಮುಖ್ಯ ಎಂದಮೇಲೆ ನಿಜವಾದ ಬದುಕಿಗೂ ಅದು ಮುಖ್ಯವಲ್ಲವೆ? ಈ ಮೌನದಲ್ಲಿ ಅಂಥದೊಂದು ಕಾಯುವಿಕೆ ಇರಬಾರದೇಕೆ? ಮುಖ್ಯವಾಗಿ ಯಾವ ಜೀವ ಹೇಗೆ ಅರಳಬೇಕೆಂದು ನಿರ್ದಿಷ್ಟಪಡಿಸುವುದು ಸಾಧ್ಯವೆ? ಅರಳುವುದು ಮುಖ್ಯ ನಿಜ. ಅರಳುವಿಕೆಗೆ ಯಾರ ಯಾವುದರ ಅಡ್ಡಿ? ಕವಿಗೆ ಇದೆಲ್ಲ ಗೊತ್ತೇ ಇದೆ. ಈ ಅಂಶಗಳೆಲ್ಲ ಕವಿತೆಯಲ್ಲಿ  ಬರುತ್ತಿದ್ದರೆ ವಿಹ್ವಲತೆಯ ಜತೆಗೆ ಬೆರಗೂ ಉಂಟಾಗಿ ಕವಿತೆಗೆ ಬೇರೆಯೇ ಒಂದು ಆಲ ಒದಗುತ್ತಿತ್ತು. ಆದರೆ ಹಾಗಾಗಲಿಲ್ಲ. “ಈಗ ಪಶ್ಚಾತ್ತಾಪವೊಂದೇ ಸಾಧ್ಯ’ ಎನ್ನುತ್ತಾರೆ.

ಕಾಲ ಮಿಂಚಿದೆ ಈಗ. ಮಿಂಚಿದಾಗಲೆ ಕಣೆ ಕಾಣುವುದು
ಕತ್ತಲಿನ ಪಾತಾಳ ದಳ. ಮುಗಿಯುತ್ತಲಿದೆ ಈಗ
ಕೊನೆಯ ಅಧ್ಯಾಯ. ಈಗ ಪಶ್ಚಾತ್ತಾಪವೊಂದೇ ಸಾಧ್ಯ
ಅಡಿಗರ ಬಗ್ಗೆ ಅಧ್ಯಯನಪೂರ್ಣ ಬರಹಗಳನ್ನು ರಚಿಸಿ ಕೃತಕೃತ್ಯರಾದ ಸುಮತೀಂದ್ರ ನಾಡಿಗರು-ಹೊಸಹಾದಿಯನ್ನು ಹಿಡಿಯುವ ಕಾಲದಲ್ಲಿ ಅಡಿಗರು ಪ್ರಜ್ಞಾಪೂರ್ವಕವಾಗಿ ಬಿಟ್ಟುಕೊಟ್ಟ ಭಾವಕೋಶಗಳು, ಅವರ ಕೊನೆಗಾಲದಲ್ಲಿ ಮತ್ತೆ ತಮ್ಮನ್ನು ಎತ್ತಿಕೋ ಎಂದು ಕಾಡಲು ತೊಡಗಿದವು. ಹಾಗಾಗಿ ಇಂಥ ಕವಿತೆಗಳು ನವ್ಯ ಭಾವಗೀತೆಗಳೆನ್ನಬಹುದು ಎನ್ನುತ್ತಾರೆ. ಹೌದೆನಿಸುತ್ತದೆ.

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

32tmc

ಬಿಜೆಪಿ ಸರ್ಕಾರ ಟಿಎಂಸಿಯತ್ತ ಬೆರಳು ತೋರಿಸಿ ಆರೋಪವೆಸಗುತ್ತಿದೆ: ಕಿರಣ್ ಕಾಂದೋಳಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ದೆಹಲಿಯಲ್ಲಿ ಕೊನೆಯದಾಗಿ ಭಾಷಣ ಮಾಡಿದ್ದ ಸಿಡಿಎಸ್ ಬಿಪಿನ್ ರಾವತ್

udayavani youtube

ಮಂಗಳೂರು: 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಚೋರರ ಬಂಧನ

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

ಹೊಸ ಸೇರ್ಪಡೆ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.