ವಿಮಾನ ಮೇಳ

Team Udayavani, Feb 17, 2019, 12:30 AM IST

ಒಂದಾನೊಂದು ಕಾಲದಲ್ಲಿ ಆಕಾಶದೆತ್ತರದಲ್ಲಿ ಸ್ವತಂತ್ರವಾಗಿ ಹಾರುವವುಗಳೆಲ್ಲ ಹಕ್ಕಿಗಳಾಗಿದ್ದವು. ಕಾವ್ಯಕಲ್ಪನೆ ಅಥವಾ ಲೌಕಿಕದ ನಿತ್ಯದ ಬದುಕಿನಲ್ಲಿ ದೇಹದ ಉತ್ಸಾಹಕ್ಕೂ ಮನಸಿನ ಆಹ್ಲಾದಕ್ಕೂ “ಪಕ್ಷಿಯಂತೆ ಹಾರುವ’ ಎಂದು ಉದಾಹರಿಸುವುದು ಸಾಮಾನ್ಯವಾಗಿತ್ತು. ಆ ಒಂದಾನೊಂದು ಕಾಲ ವಿಮಾನಗಳು  ಆಕಾಶದಲ್ಲಿ ಹಾರಾಟ ಆರಂಭಿಸುವುದಕ್ಕಿಂತ ಮೊದಲಿನ ಕಾಲ. ಮನುಷ್ಯನಿಗೆ ಹಾರಾಟದ ಮೊದಲ ಪಾಠ ಹಕ್ಕಿಗಳಿಂದಲೇ. ಅಂತಹ ನೈಸರ್ಗಿಕ ಶಿಕ್ಷಣ ಮತ್ತು  ಪ್ರೇರಣೆಯಿಂದಲೇ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಮಾನ ಹಾರಾಟದ ಪ್ರಯತ್ನ ಆರಂಭವಾಯಿತು. ಇಂದು ನಾವು ತಿಳಿದ ವಿಮಾನ ಚರಿತ್ರೆಯ ಪ್ರಕಾರ ಮೊದಲ ಹಾರಾಟ ದಾಖಲಾದದ್ದು 1903ರಲ್ಲಿ  ಅಮೆರಿಕದ ರೈಟ್‌ ಸಹೋದರರ ಮೂಲಕ‌. ಈಗ ಅವಲೋಕಿಸಿದರೆ ಒಂದು ಶತಮಾನಕ್ಕಿಂತ ಮಿಕ್ಕಿದ ಕಲಿಕೆ, ಅನುಭವಗಳು ವಿಮಾನ ಲೋಕಕ್ಕೆ ಅದಮ್ಯ ಚೇತನ ಹಾಗೂ ಆತ್ಮವಿಶ್ವಾಸ ನೀಡಿವೆ. ಇಂದು ಪ್ರತಿಕ್ಷಣವೂ ಐದೋ-ಹತ್ತೋ ಸಾವಿರ ವಿಮಾನಗಳು ಆಕಾಶದಲ್ಲಿವೆ. ಅಂದರೆ ಅಮೆರಿಕ ಮಲಗಿದ್ದರೆ ಕೆಲವು ಸಾವಿರ ಕಮ್ಮಿ, ಅಮೆರಿಕದಲ್ಲಿ ಬೆಳಗಾಗಿದ್ದರೆ ಕೆಲವು ಸಾವಿರ ಹೆಚ್ಚು ವಿಮಾನಗಳು ಹತ್ತಿಳಿಯುತ್ತವೆ. ವಿಮಾನಯಾನವನ್ನು ಬಹಳ ಬಳಸುವ ಅಮೆರಿಕ ಎದ್ದಿದೆಯೋ ಮಲಗಿದೆಯೋ ಎನ್ನುವುದರ ಮೇಲೆ ಆಕಾಶದಲ್ಲಿ ಹಾರುವ  ವಿಮಾನಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚು-ಕಡಿಮೆ ಆಗುತ್ತದೆ. ವಿಮಾನಯಾನ ಸಂಚಾರ ಜಾಲವನ್ನು  ದೇಶದೊಳಗೆ ಕ್ಷಿಪ್ರಗತಿಯಲ್ಲಿ  ವಿಸ್ತರಿಸಿಕೊಳ್ಳುತ್ತಿರುವ ಚೈನಾ-ಭಾರತಗಳೂ ಮುಂಬರುವ ದಶಕ ಗಳಲ್ಲಿ  ಅತ್ಯಂತ ಹೆಚ್ಚು ವಿಮಾನಗಳನ್ನು ಬಳಸುವ ದೇಶ ಎನ್ನುವ ಹೆಗ್ಗಳಿಕೆಯನ್ನು ಹೊಂದಲಿವೆ. ಈಗಿನ ಲೆಕ್ಕಾಚಾರದಲ್ಲಿ ಇಡೀ ಜಗತ್ತಿನಲ್ಲಿ  ಪೂರ್ತಿ ದಿನವೊಂದಕ್ಕೆ ಒಂದು ಲಕ್ಷಕ್ಕೂ ಮೀರಿ ವಿಮಾನಗಳು ಹಾರಿ ಇಳಿದಿರುತ್ತವೆ. ಏಕಕಾಲಕ್ಕೆ ನಮ್ಮ ಮೇಲಿನ ವಾಯುಸ್ಥಳವನ್ನು  ಬಳಸಿ ಹಾರಾಡುವ ವಿಮಾನಗಳಿಗೆ ಇಂತಿಷ್ಟು ಎತ್ತರದಲ್ಲಿ ಇಂತಹ ದಿಕ್ಕಿನಲ್ಲಿ ಇಂತಿಷ್ಟು ಹೊತ್ತಿಗೆ ಏರುವ-ಹಾರುವ-ಇಳಿಯುವ ಸಂದೇಶ ಹಾಗೂ ಆ ದೇಶ ನೆಲದ ಮೇಲಿರುವ ವಿಮಾನನಿಲ್ದಾಣದೊಳಗಿನ ನಿಯಂತ್ರಣಾ ಕೊಠಡಿಯಿಂದ ಸಿಗುತ್ತಲೇ ಇರುತ್ತದೆ. ಮತ್ತೆ ಈ ವಿಮಾನಗಳು ತಮ್ಮ ಪ್ರಯಾಣದ ಉದ್ದಕ್ಕೂ ಭೂಪ್ರದೇಶದ ಮೇಲಿರುವ ಒಂದಿಲ್ಲೊಂದು ದೇಶದ ಊರಿನ ವಿಮಾನ ನಿಲ್ದಾಣದ ನಿಯಂತ್ರಣಾ ಸಿಬ್ಬಂದಿಗಳ ಜೊತೆ ಮಾತಾಡುತ್ತ ಸಲಹೆ ಪಡೆಯುತ್ತ ಸಾಗುತ್ತವೆ. ಗಗನಗಾಮಿ ನಾಗರಿಕ ಸೇವೆ ಮಾಡುವ ಸಣ್ಣ-ದೊಡ್ಡ ವಿಮಾನಗಳೆಲ್ಲ ಹೀಗೆ ನೆಲದೊಟ್ಟಿಗೆ ಸಂಪರ್ಕ ಇಟ್ಟುಕೊಂಡೇ ಹತ್ತಿ ಇಳಿಯುವವು. ಆಕಾಶವೆಲ್ಲ ತಮ್ಮದೇ ಎಂದು ಖುಷಿಯಲ್ಲಿ ರೆಕ್ಕೆ ಪಟಪಟಗುಡಿಸುವ ಹಕ್ಕಿಪಿಕ್ಕಿಗಳು ತಮ್ಮ ಅಧಿಕಾರದ ಆಕಾಶಮಾರ್ಗವನ್ನು ಈಗ ಹೆಚ್ಚು ಹೆಚ್ಚು ವಿಮಾನಗಳ ಜೊತೆ ಹಂಚಿಕೊಳ್ಳಬೇಕಾಗಿದೆ. ಹಾರಲು-ತೇಲಲು ಕಲಿಸಿದ ಗುರುಗಳ ಮನೆಯಲ್ಲೇ ಶಿಷ್ಯರ ಠಿಕಾಣಿ-ವಿಸ್ತಾರ ಆಗುತ್ತಿದೆ! 

ನೆಲ ಮಟ್ಟದಿಂದ ಎಂಟೋ-ಹತ್ತೋ ಕಿ.ಮೀ. ಎತ್ತರದ ಕತೆ ಹೀಗಾದರೆ ಅದಕ್ಕಿಂತ ಸ್ವಲ್ಪ ಕೆಳಗೆ ಅಥವಾ ಮೇಲೆ ಹಾರುವ ಸೇನಾ ವಿಮಾನಗಳು ಎಲ್ಲ ದೇಶಗಳಲ್ಲೂ ಇವೆ. ಸೇನಾ ವಿಮಾನಗಳದ್ದು  ನಿತ್ಯಸೇವೆ ಇಲ್ಲದಿದ್ದರೂ ರಕ್ಷಣೆಯ ಭಾರ ಬಿ¨ªಾಗ ಆಗಸದಲ್ಲಿ ಗುಡುಗುತ್ತವೆ. ಇಷ್ಟಲ್ಲದೇ, ವಿಮಾನ ಸಂತತಿಯ ದೂರದ ಬಂಧುವಿನಂತೆ ತೋರುವ ಹೆಲಿಕಾಪ್ಟರ್‌ಗ‌ಳು ರಕ್ಷಣೆ ಅಥವಾ ಇನ್ಯಾವುದೋ ತುರ್ತು ಸೇವೆಯ ನೆಪದಲ್ಲಿ ಅಲ್ಲದಿದ್ದರೆ ಯಾವುದೊ ಐಷಾರಾಮಿಗಳ ಸಂಚಾರಕ್ಕೆ ಅನುಕೂಲವಾಗಿ ರೆಕ್ಕೆ ಗಿರಗುಡಿಸುತ್ತ ಗಾಳಿಯನ್ನು ಕತ್ತರಿಸುತ್ತ ತಿರುಗಾಡುತ್ತವೆ. ವಿಮಾನಗಳು ಎತ್ತರದಲ್ಲೂ ವೇಗದಲ್ಲೂ ಹೆಲಿಕಾಪ್ಟರ್‌ಗಳಿಗಿಂತ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಂಡರೆ, ಹೆಲಿಕಾಪ್ಟರ್‌ಗಳು ತಮ್ಮದು ನಿಶ್ಚಲ ರೆಕ್ಕೆಯಲ್ಲ, ಸುತ್ತುವ ರೆಕ್ಕೆ , ಎÇÉೆಂದರಲ್ಲಿ ಸಣ್ಣ ಜಾಗದಲ್ಲಿ ಇಳಿಯಬಹುದು ಹಾರಬಹುದು ಎನ್ನುವ ಹಿರಿಮೆಯಲ್ಲಿ ಬೀಗುತ್ತವೆ. ಹಕ್ಕಿಯ ವಂಶಕ್ಕೂ ಸೇರದ ವಿಮಾನ-ಹೆಲಿಕಾಪ್ಟರ್‌ಗಳ ಜಾತಿಪಂಗಡವೂ ಅಲ್ಲದ ಮೋಜಿನ ಯಾನ ಮಾಡಿಸಬಲ್ಲ  ಬಿಸಿಗಾಳಿ ಬಲೂನ್‌ಗಳೂ ನಮ್ಮ  ತಲೆಯ ಮೇಲೆ ಹಾರುವವುಗಳೇ. ಒಟ್ಟಾರೆ ಆಕಾಶ ಎಂದರೆ ಅವಸರದ ಬಿಡುವಿಲ್ಲದ ಅವಕಾಶ. ಗಗನಗಾಮಿ ಚಟುವಟಿಕೆಗಳ ಬಗ್ಗೆ ಇಷ್ಟೇ ಹೇಳಿದರೆ ಇವೆಲ್ಲವೂ ಒಂದಾನೊಂದು ಕಾಲದ ಕತೆಗಳೇ ಆಗುತ್ತವೆ. 

ಇದೀಗ ಡ್ರೋನ್‌ ಯುಗ !
ಇಂದಿನ  ಆಕಾಶದ  ಚಟುವಟಿಕೆಯ ಅಲ್ಲ , ಆಟಿಕೆಯ ಬಗ್ಗೆ ಹೇಳಬೇಕಾದರೆ ವಿಶ್ವವ್ಯಾಪಿ ಡ್ರೋನ್‌ಗಳ ಬಗ್ಗೆ ಹೇಳಲೇಬೇಕು. ಇದೀಗ ಡ್ರೋನ್‌ ಯುಗ. ಡ್ರೋನ್‌ ಎನ್ನುವ ಚಾಲಕರಹಿತ ಹಾರುವ ಸಾಧನದ ಹುಟ್ಟು ಎಂದೋ ಆಗಿದ್ದರೂ ಅದು ಜನಸಾಮಾನ್ಯರ ಕೈಸೇರಿ “ನಾಗರಿಕ ಡ್ರೋನ್‌’ ಎಂದು ಹೆಸರು ಪಡೆದು, ಯಾರೂ ಹಾರಿಸಬಲ್ಲ ಯಾರೂ ಪಳಗಿಸಬಲ್ಲ ವಸ್ತುವಾದದ್ದದ್ದು ಕಳೆದ ಒಂದು ದಶಕದಲ್ಲಿಯೇ. ಹಾಗಂತ ಚಾಲಕ ಇಲ್ಲದೆ ಹಾರಿ ಸೆಣಸಬಲ್ಲ ಯುದ್ಧಸಾಧನಗಳು ಬೆಳೆದುಬಂದ ಇತಿಹಾಸದ ಪುಟಗಳನ್ನು  ತಿರುವಿದರೆ, 1849ರಲ್ಲಿ ಆಸ್ಟ್ರಿಯಾ ದೇಶ ಇಟೆಲಿಯ ವೆನಿಸ್‌ ನಗರದ ಮೇಲೆ ಹಾರುವ ಬಲೂನ್‌ಗಳಲ್ಲಿ ಮಾರಕ ಸ್ಫೋಟಕಗಳನ್ನು ತುಂಬಿಸಿ ಹಾರಿಸಿದ್ದನ್ನೇ ಡ್ರೋನ್‌ನ ಉಗಮ ಎಂದು ಕರೆದವರೂ ಇ¨ªಾರೆ. ಅಂದು ಗಾಳಿಯಲ್ಲಿ ಎಲ್ಲೆಂದರಲ್ಲಿ ಹಾರಿಬಿಟ್ಟ  ಕೆಲವು ಸ್ಫೋಟಕ ಬಲೂನ್‌ಗಳು ವಿರೋಧಿ ಪಾಳೆಯಕ್ಕೆ ಹಾನಿ ಉಂಟುಮಾಡಿದರೂ ಗಾಳಿಯೇ ದಿಕ್ಕು ಬದಲಿಸಿದಾಗ ತಮ್ಮನ್ನು ಹಾರಿಸಿದ ಆಸ್ಟ್ರಿಯಾ ಸೇನೆಯ ಮೇಲೆಯೂ ತೇಲಿಬಂದು ಬಿದ್ದು ಹಾನಿ ಮಾಡಿದವು. ಮುಂದೆ ರೆಕ್ಕೆಸಹಿತ ಮಾನವಚಾಲಿತ ವಿಮಾನಗಳು ಹುಟ್ಟಿದ ಮೇಲೆ ಮಿಲಿಟರಿ ಜಗತ್ತಿನಲ್ಲಿಯೂ ಅದೇ ಮಾದರಿಯ ಡ್ರೋನ್‌ಗಳು ಹುಟ್ಟಿದವು. ಮಿಲಿಟರಿ ಜಗತ್ತಿನಲ್ಲಿ ಕಾಯಲು, ಕೊಲ್ಲಲೆಂದು ಬಳಕೆಯಾಗುವ ಡ್ರೋನ್‌ಗಳಿಗೆ  ಶತಮಾನದ ರಕ್ತಸಿಕ್ತ ಇತಿಹಾಸ ಇದೆ. 

ಮಾನವ ಚಾಲಕನನ್ನು ಕೂರಿಸಿಕೊಂಡು ಮೊದಲ ಬಾರಿಗೆ ವಿಮಾನ ಹಾರಿತಲ್ಲ 1903ರಲ್ಲಿ , ಅಲ್ಲಿಂದ ಸುಮಾರು ಹದಿನೈದು ವರ್ಷಗಳ ನಂತರ ಡ್ರೋನ್‌ಗಳು ಸೇನಾಪಡೆಯಲ್ಲಿ ಮೊದಲಾಗಿ ಬಳಸಲ್ಪಟ್ಟವು. ರೇಡಿಯೋ ಸಂದೇಶಗಳನ್ನು ಬಳಸಿ ಹಾರಿಸುವ, ನಿಯಂತ್ರಿಸುವ ಡ್ರೋನ್‌ಗಳು ಅಮೆರಿಕದ, ಯುರೋಪಿನ ರಷ್ಯಾದ ಬಲಿಷ್ಠ ಸೇನಾಪಡೆಗಳ ಖಾಯಂ ಹಾಗೂ ಗುಪ್ತ ಸದಸ್ಯರಾಗಿದ್ದವು. ರಕ್ಷಣಾ ವ್ಯವಸ್ಥೆಯಲ್ಲಿ ಎಲ್ಲೆ ಲ್ಲಿ  ಮಾನವಚಾಲಿತ ಯುದ್ಧ ವಿಮಾನಗಳ ಅಥವಾ ಹೆಲಿಕಾಪ್ಟರ್‌ಗಳ ಬಳಕೆ ಅತ್ಯಂತ ಅಪಾಯಕಾರಿಯೋ, ಸಂಪೂರ್ಣ ಅಸಾಧ್ಯವೋ ಅಲ್ಲೆ ಲ್ಲ ಡ್ರೋನ್‌ಗಳ ಬಳಕೆ ಶುರು ಆಗಿತ್ತು. ಡ್ರೋನ್‌ನಂಥ ಮಾನವರಹಿತ ಹಾರುವ ಸಾಧನಗಳ ಬಳಕೆ ಮೊದಲ ಮಹಾಯುದ್ಧದ ನಂತರ ಹೆಚ್ಚಾಯಿತು. ಸೇನೆಗಳಲ್ಲಿ ಬಳಕೆಯಾಗುತ್ತಿದ್ದ ಡ್ರೋನ್‌ಗಳು ಇಂದು ನಾವು ಕೈಯಲ್ಲಿ ಹಿಡಿದು ಆಡುವ ನಾಗರಿಕ ಬಳಕೆಯ ಡ್ರೋನ್‌ಗಳಷ್ಟು ಚಿಕ್ಕವು ಅಲ್ಲ. ಉದ್ದೇಶಿತ ಕೆಲಸವನ್ನು ಅವಲಂಬಿಸಿ ಮಿಲಿಟರಿ ಡ್ರೋನ್‌ಗಳು ಗಾತ್ರದಲ್ಲಿ  ಸುಮಾರಿಗೆ ಚಿಕ್ಕ ವಿಮಾನಗಳಂತೆಯೇ ಕಾಣಿಸುತ್ತವೆ. ಅಂತಹ ಡ್ರೋನ್‌ಗಳ ಪುರಾತನ ಸಂತತಿಯಲ್ಲೇ ಹೊಸ ಕವಲೊಂದು ಹುಟ್ಟಿ  ಜನಸಾಮಾನ್ಯರ ಬಳಕೆಯ ಗಗನಗಾಮಿ ಕೆಮರಾದಂಥ ಸಾಧನವಾಗಿ ಮಾರ್ಪಡುವಾಗ ತುಸು ಸಮಯದ ಮಟ್ಟಿಗೆ ಸಣ್ಣ ತೂಕ ಹೊತ್ತು ಹಾರಿ, ಸುತ್ತಿ ಕೆಳಗಿಳಿಯುವ ಅರ್ಧ ಕೆಜಿಯೋ ಒಂದು ಕೆಜಿಯೋ  ಭಾರದ ಪುಟಾಣಿ ಹಕ್ಕಿಯಂತಾದವು. ಇಂದು ಊರೂರಲ್ಲಿ ಕಾಣಸಿಗುವ ಡ್ರೋನ್‌ಗಳು ಇಂತಹ ಆಕಾಶಕಾಯಗಳೇ. ಮನೆಯೊಳಗೋ ಬಯಲಲ್ಲಿಯೋ ಸುರಸುರ ಸುತ್ತುತ್ತ ನೆಗೆಯುವ, ಹಾರುವ ತಾಜಾ ಆಟಿಕೆಗಳೂ ಹೌದು. 

ಛಾಯಾಗ್ರಹಣಕ್ಕೆ ಚಲನಚಿತ್ರಗಳಿಗೆ ಹೊಸ ದೃಷ್ಟಿಕೋನವನ್ನು ಒದಗಿಸಿರುವ ನಾಗರಿಕ ಬಳಕೆಯ ಅಥವಾ “ಕಮರ್ಷಿಯಲ… ಡ್ರೋನ್‌’ಗಳು ನಮಗೆ ಹೊಸ ನೇತ್ರವನ್ನು ನೀಡಿವೆ. ನಮ್ಮೆಲ್ಲರ ಎರಡು ಕಣ್ಣುಗಳು ಮುಖದ ಮೇಲಿದ್ದರೆ ಮೂರನೆಯದು ಹಾರುವ ಡ್ರೋನ್‌ ಮೇಲಿದೆ. ನಾವು ನೋಡದ ನಮ್ಮೂರಿನ ನದಿ-ಸಮುದ್ರಗಳ, ಬೆಟ್ಟ-ಗುಡ್ಡ-ಕಂದರಗಳ ಆಸುಪಾಸಿನ ಭೂಪ್ರದೇಶಗಳ ಬಗ್ಗೆ ಕಲ್ಪನೆಗಳನ್ನು ಒರೆಸಿ ನೈಜಚಿತ್ರಣವನ್ನು ಒದಗಿಸಿವೆ. ಮಿಲಿಟರಿ ಡ್ರೋನ್‌ಗಳಂತೆ ಯಾರ ಮೇಲೋ ಗೂಢಚಾರಿಕೆ ಮಾಡುವ ಅಥವಾ ಕೊಲ್ಲುವ ಉದ್ದೇಶ ಇರದ ಅಹಿಂಸಾವಾದಿ ಸೌಮ್ಯಸ್ವರೂಪಿ ಸಂಭಾವಿತ ಡ್ರೋನ್‌ಗಳು ಇಂದು ಹೊಸ ಹವ್ಯಾಸದ, ನವ್ಯ ಆಟದ ಸಾಧನವಾಗಿ ಜನಪ್ರಿಯವಾಗಿವೆ. 

ಡ್ರೋನ್‌ಗಳ ಸೈಡ್‌ ಇಫೆಕ್ಟ್ !
ಮಿಲಿಟರಿ ಡ್ರೋನ್‌ಗಳ ಮಟ್ಟಿಗೆ 2017 ಅತ್ಯಂತ ಕರಾಳ ವರ್ಷ ಎಂದು ಪರಿಗಣಿಸಲ್ಪಡುತ್ತದೆ. ಅಮೆರಿಕವು ಡ್ರೋನ್‌ಗಳನ್ನು  ಬಳಸಿ ಅಫ್ಘಾನಿಸ್ತಾನ, ಪಾಕಿಸ್ತಾನ, ಯೆಮೆನ್‌, ಸಿರಿಯಾಗಳಲ್ಲಿ  ಹಲವು ಧಾಳಿಗಳನ್ನು ನಡೆಸಿದೆ. ಮತ್ತೆ ಇಂತಹ ಧಾಳಿಗಳಲ್ಲಿ ಸಾವಿರಾರು ಜನಸಾಮಾನ್ಯರು ಮೃತರಾಗಿದ್ದಾರೆ. 2017ರ ಅಂಕಿಅಂಶದ ಪ್ರಕಾರ, ಡ್ರೋನ್‌ ಧಾಳಿಯಲ್ಲಿ ಸತ್ತ ಐವರಲ್ಲಿ  ಕನಿಷ್ಠ ಒಬ್ಬ ಅಮಾಯಕ ಜನಸಾಮಾನ್ಯನೂ ಸೇರಿರುತ್ತಾನೆ. ಗುರಿತಪ್ಪಿದ ಅಥವಾ ತಪ್ಪಿಸಿಕೊಂಡ ಡ್ರೋನ್‌ ಮದುವೆಯ ದಿಬ್ಬಣದ ಮೇಲೆ ಬಿದ್ದ, ಮಕ್ಕಳ ಆಟದ ಬಯಲಲ್ಲಿ ಎರಗಿದ, ಹೊಲದಲ್ಲಿ ಉಳುವ ರೈತರನ್ನು ಘಾತಿಸಿದ ವೃತ್ತಾಂತಗಳೂ ಇವೆ. 

2018ರ ಡ್ರೋನ್‌ ಘಟನೆಯ ಬಿಸಿ ಚರ್ಚೆ ಲಂಡನ್‌ನಲ್ಲಿ ಇನ್ನೂ ಆರಿಲ್ಲ. 2018ರ ಡಿಸೆಂಬರ್‌ ಕೊನೆಯ ವಾರ ಬ್ರಿಟನ್ನಿನ ಎರಡನೆಯ ಅತಿ ಬ್ಯುಸಿ ಏರ್‌ಪೋರ್ಟ್‌ ಎನ್ನುವ ಖ್ಯಾತಿಯ ಗ್ಯಾಟ್ ವೀಕ್‌ 36 ಗಂಟೆಗಳ ಕಾಲ ಸ್ಥಗಿತಗೊಂಡಿತು. ಇಳಿಯಬೇಕಿದ್ದ  ನೂರಾರು ವಿಮಾನಗಳು ನೆರೆಯ ದೇಶಗಳಲ್ಲಿ ಲ್ಯಾಂಡ್‌ ಆದವು. ಏರಬೇಕಾದ ನೂರಾರು ವಿಮಾನಗಳು ತಣ್ಣಗೆ ಕಾಯುತ್ತ ಕುಳಿತವು. ಹತ್ತಾರು ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಮಲಗಿ ಎದ್ದು ಕಾದರು. ಕ್ರಿಸ್‌ಮಸ್‌ ಆಚರಣೆಗೆ ಹೊರಟವರು, ರಜೆಗೆ ತೆರಳ ಬೇಕಾದವರು ಅಲ್ಲಲ್ಲೇ ಇರಬೇಕಾಯಿತು. ಗ್ರೀಸ್‌ ದೇಶದಲ್ಲಿ  ತೀವ್ರವಾಗಿ ಅಸ್ವಸ್ಥಳಾಗಿದ್ದ ಅಜ್ಜಿ ಇಂಗ್ಲೆಂಡ್‌ನಿಂದ ತನ್ನ ಮಕ್ಕಳು-ಮೊಮ್ಮಕ್ಕಳು ಕೊನೆಯ ಕ್ಷಣದಲ್ಲಿ ನೋಡಲು ಬರಬೇಕೆಂದು ಬಯಸಿದ್ದ ಆಸೆ ಪೂರೈಸಲೇ ಇಲ್ಲ. ಕಾರಣ ಗಾಟ್‌ವೀಕ್‌ ವಿಮಾನ ನಿಲ್ದಾಣದ ಆವರಣದೊಳಗೆ, ವಿಮಾನ ಪಥದ ಬಳಿ ಹಾರುತ್ತಿದ್ದ ಎರಡು ಡ್ರೋನ್‌ಗಳು. ಈ ಕಮರ್ಷಿಯಲ… ಡ್ರೋನ್‌ಗಳು ಹತ್ತುವ-ಇಳಿಯುವ ವಿಮಾನಕ್ಕೆ ಬಡಿಯುವ ಸಾಧ್ಯತೆ ಇತ್ತು ! ಈ ಡ್ರೋನ್‌ಗಳನ್ನೂ ಹಾರಬಿಟ್ಟವರು ಯಾರು, ಇವನ್ನು ಹೊಡೆಯುವುದು ಬೇಡವೋ, ಹೊಡೆದುರುಳಿಸಿದರೆ ಇನ್ನೇನು ಅನಾಹುತ ಕಾದಿದೆಯೋ ಎಂಬ ಸಮಸ್ಯೆ ಕಗ್ಗಂಟಾಗಿ ಬಲಿಷ್ಠ ದೇಶದ ಜಗದ್ವಿಖ್ಯಾತ ವಿಮಾನನಿಲ್ದಾಣವನ್ನು ತಟಸ್ಥಗೊಳಿಸಿದ್ದವು.

ಇರಲಿ, ಬಿಡುವಿಲ್ಲದ ಆಗಸದಲ್ಲೀಗ ಹೊಸ ಸಂಶೋಧನೆಗಳು, ನವನವೀನ ಸಾಧನಗಳಂತಹ ಒಂದಿಷ್ಟು  ಉತ್ತರಗಳು, ಮತ್ತೆ ಆ ಉತ್ತರಗಳ ಜೊತೆಗೆ ಉದ್ಭವಿಸುವ ಒಂದಿಷ್ಟು  ಪ್ರಶ್ನೆಗಳು, ಇವುಗಳ ಸಂಗಡ ಅದೇ ಆಕಾಶದೆತ್ತರದಲ್ಲಿ  ನಿತ್ಯವೂ ಲಕ್ಷ ಜೀವಗಳನ್ನು ಸಾಗಿಸುವ ವಿಮಾನಗಳು ತುಂಬಿವೆ. 

ಏರ್‌ ಶೋ ಅಥವಾ ವೈಮಾನಿಕ ಪ್ರದರ್ಶನವನ್ನು ವಿಮಾನಲೋಕದ ಜಾತ್ರೆ, ಮೇಳ, ಹಬ್ಬ ಎಂದುಕೊಳ್ಳಬಹುದು. ಹಳ್ಳಿಯ ಜಾತ್ರೆಯೊಂದರಲ್ಲಿ ಎಲ್ಲಿಂದಲೋ ಬಂದು ಅಂಗಡಿ ತೆರೆದು ಆಟಿಕೆ, ತಿಂಡಿ-ತಿನಿಸುಗಳನ್ನು ಮಾರುವಂತೆ, ಏರ್‌ ಶೋದಲ್ಲಿ ವಿಮಾನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತದೆ. ಜಾತ್ರೆಯಲ್ಲಿ ಕಾಣುವ ಗಿಜಿಗಿಜಿ, ಗೌಜು-ಓಡಾಟ-ಆತುರ-ಧೂಳು ಏರ್‌ ಶೋದಲ್ಲೂ ಕಾಣುತ್ತದೆ. ನಾಗರಿಕ ವಿಮಾನಗಳನ್ನು , ಸೇನಾ ವಿಮಾನಗಳನ್ನು ಉತ್ಪಾದಿಸುವವರು, ವಿಮಾನ ಸಂಬಂಧಿ ಉಪಕರಣಗಳನ್ನು , ವ್ಯವಸ್ಥೆಗಳನ್ನು ತಯಾರಿಸುವವರು ಜಗತ್ತಿನ ಮೂಲೆ ಮೂಲೆಯಿಂದ ಬಂದು ಕಲೆಯುತ್ತಾರೆ. ಐದು ದಿನಗಳ ಕಾಲ ನಡೆಯುವ ವಿಮಾನಗಳ ಈ ಮಹಾಮೇಳಕ್ಕೆ ವಿಮಾನಗಳ ಹಾರಾಟ-ಪ್ರದರ್ಶನಗಳನ್ನು ನೋಡಲೆಂದೇ ಹೋಗುವ ಸಹಸ್ರ ಸಹಸ್ರ ವಿಮಾನ ಪ್ರೇಮಿಗಳು, ವಿಮಾನಗಳ ಸಾಮರ್ಥ್ಯ ತಿಳಿದು ಮಾರಾಟಗಾರರ ಹತ್ತಿರ ಚರ್ಚೆ-ಚೌಕಾಶಿ ಮಾಡಿ ದರ ಹೊಂದಿಸಿ ಖರೀದಿಸುವ ನೂರಾರು  ಗ್ರಾಹಕರು ಎಲ್ಲರೂ ಬರುತ್ತಾರೆ.

ಬ್ರಿಟನ್‌ನ ಫಾರ್ನ್ಬೋರೋ (Farnborough), ದುಬೈ , ಫ್ರಾನ್ಸ್‌ನ ಪ್ಯಾರಿಸ್‌, ಸಿಂಗಾಪುರ- ಹೀಗೆ  ಜಗತ್ತಿನ ವಿಮಾನ ವ್ಯಾಪಾರೀಕೇಂದ್ರಗಳಲ್ಲಿ ವೈಮಾನಿಕ ಪ್ರದರ್ಶನಗಳು ಆಯೋಜನೆಗೊಳ್ಳುತ್ತವೆ. ಭಾರತದ ಮಟ್ಟಿಗೆ ಬೆಂಗಳೂರು ವಿಮಾನ ಉದ್ಯಮದ ರಾಜಧಾನಿಯಾಗಿರುವುದರಿಂದ ವೈಮಾನಿಕ ಪ್ರದರ್ಶನಗಳಿಗೂ ಸಹಜ ಆಯ್ಕೆಯೇ ಆಗಿತ್ತು. ಭಾರತದ ಮೊದಲ ಏರ್‌ಶೋ 1996ರಲ್ಲಿ  ಬೆಂಗಳೂರಿನ ಯಲಹಂಕದ ಸೇನಾವಿಮಾನ ನಿಲ್ದಾಣದಲ್ಲಿ  ನಡೆದಿತ್ತು. ಅಲ್ಲಿಂದ ಮುಂದೆ ಪ್ರತಿ ಎರಡು ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಭಾರತದಲ್ಲಿ ವಿನ್ಯಾಸಗೊಂಡ ಸೇನಾ ವಿಮಾನಗಳ, ಹೆಲಿಕಾಪ್ಟರ್‌ಗಳ ಪ್ರದರ್ಶನದ ಜೊತೆಗೆ ಆಕಾಶದಲ್ಲಿ ಮೈನವಿರೇಳಿಸುವ ಕಸರತ್ತನ್ನು ಮಾಡುವ, ಭೀಕರ ಸದ್ದಿನೊಡನೆ ಬೆಂಕಿಯುಗುಳುವ ರಷ್ಯಾದ ಸೇನಾ ವಿಮಾನಗಳೂ ಬೆಂಗಳೂರಿನ ಏರೋ ಶೋದಲ್ಲಿ ಹಿಂದೆ ಭಾಗವಹಿಸಿ ಜನಾಕರ್ಷಣೆ ಪಡೆದಿದ್ದವು. ಈ ಬಾರಿ ಫ್ರಾನ್ಸ್‌ ನಿರ್ಮಿತ ಫಾಲ್ಕನ್‌, ರಫೇಲ್‌ ಸೇನಾ ವಿಮಾನಗಳು, ಸೇನಾ ಹೆಲಿಕಾಪ್ಟರ್‌ಗಳು, ಏರ್‌ಬಸ್‌ ಕಂಪೆನಿಯ ನಾಗರಿಕ ವಿಮಾನಗಳು ಭಾಗವಹಿಸಲಿವೆ. ಅಮೆರಿಕದ ಬೋಯಿಂಗ್‌ ವಿಮಾನಗಳು, ಎಫ್ ಎ 18 ಸೂಪರ್‌ ಹೋರ್ನೆಟ್‌ ಸೇನಾ ವಿಮಾನಗಳೂ ಪಾಲ್ಗೊಳ್ಳಲಿವೆ.

ಸರಕಾರದ ನಾಗರಿಕ ವಿಮಾನಯಾನ ಸಚಿವಾಲಯದಿಂದ ಆಯೋಜನೆಗೊಳ್ಳುವ ಭಾರತದ ವೈಮಾನಿಕ ಪ್ರದರ್ಶನವು ಏರೋ ಇಂಡಿಯಾ 2019  ಎನ್ನುವ ಔಪಚಾರಿಕ ನಾಮಕರಣದಲ್ಲಿ ಬೆಂಗಳೂರಿನಲ್ಲಿ ನಾಡಿದ್ದು ಫೆ. 20 ರಂದು ಆರಂಭಗೊಂಡು 24ರವರೆಗೆ ನಡೆಯಲಿದೆ. 2024ರ ಹೊತ್ತಿಗೆ ಜಗತ್ತಿನ ಮೂರನೆಯ ಅತಿದೊಡ್ಡ ವಿಮಾನ ಮಾರುಕಟ್ಟೆ ಯಾಗಲಿರುವ ಭಾರತದ ಬಗ್ಗೆ ನಿರೀಕ್ಷೆ  ಹೊಂದಿದ ವಿಮಾನ ತಯಾರಕರಿಗೆ, ಭಾರತದ ದೇಸೀ ವಿಮಾನಗಳ ಸಾಮರ್ಥ್ಯ, ಭಾರತದ ವಿಮಾನ ಉದ್ಯಮದ ಶಕ್ತಿ ಅಲ್ಲದೆ ವಿಮಾನಗಳನ್ನು ಬರೇ ನೋಡುವ, ಅವುಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಇದು ಪ್ರತೀಕ್ಷೆಯ ಕ್ಷಣ. ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಗಳನ್ನು ಕಳೆದೆರಡು ದಶಕಗಳಿಂದ ತನ್ನ ನೆಲ-ಬಾನಿನಲ್ಲಿಯೇ  ಆಯೋಜಿಸಿಕೊಳ್ಳುತ್ತಿರುವ ನಮ್ಮ ಬೆಂಗಳೂರಿಗೂ ಇದು ಪರ್ವ ಕಾಲ.

ಯೋಗಿಂದ್ರ ಮರವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ