Udayavni Special

ಕೆಟ್ಟುಹೋದ ಧ್ವನಿಪೆಟ್ಟಿಗೆ


Team Udayavani, Dec 31, 2017, 6:50 AM IST

dwanipettige.jpg

ಬೆಳಗಿನ ಜಾವ ಇದ್ದಕ್ಕಿದ್ದಂತೆ ಗಂಟಲಿನಿಂದ ಹೊರಬಿದ್ದ ಕೆಮ್ಮು ನನ್ನ ಸುಖನಿದ್ರೆಗೆ ಭಂಗ ತಂದಿತು. ಕೆಮ್ಮಿನ ಜೊತೆಯಲ್ಲಿ ಹೊರಟ ಸ್ವರದಲ್ಲೇನೋ ತೊಡಕಿದೆ ಎಂದೆನಿಸಿತು. ಜಗತ್ತೆಲ್ಲ ಮಲಗಿದ್ದಾಗ ಎದ್ದ ಸಿದ್ಧಾರ್ಥನಂತೆ ನನ್ನಲ್ಲೇ ಮಾತನಾಡಿದೆ. ಸರಿಪಡಿಸಲು ಪ್ರಯತ್ನಿಸಿದರೂ ಸ್ವರ ಸರಿಯಾಗದೆ ಒಡಕಾದಂತೆನಿಸಿತು. ಮನೆಯಲ್ಲಿ ಇನ್ನೂ ಯಾರೂ ಎದ್ದಿಲ್ಲವಾದ್ದರಿಂದ ಯಥಾಪ್ರಕಾರ ಕೆಲಸಗಳನ್ನು ಮುಗಿಸುವ ತರಾತುರಿ. ನಿತ್ಯಕಾರ್ಯಕ್ರಮಗಳ ನಡುವೆ ಹಲವು ವರ್ಷಗಳಿಂದ ನನ್ನ ಸಂಗಾತಿಯಾದ ಪುಟ್ಟ ರೇಡಿಯೋವನ್ನು ಅದುಮಿ ಒಂದರ್ಧ ಗಂಟೆಯ ಕಾಲವಾದರೂ ಕಿವಿಯಾನಿಸುವುದು ನನ್ನ ಗೀಳಾಗಿತ್ತು. ಆ ಗೀತೆಗಳಿಗೆ ದನಿಗೂಡಿಸಿದಾಗ ಮನೆಮಂದಿಗೆಲ್ಲ ಹಾಸಿಗೆ ಬಿಟ್ಟು ಏಳಲು ಉದಯರಾಗವಾಗಿ ಅನುಕೂಲವಾಗುತ್ತಿತ್ತು. ಹಾಗೆ ಜೊತೆಗಾತಿಯ ಕಿವಿ ಹಿಂಡಿದೆ. “ಕಮಲಾ… ಕುಚಚೂಚುಕ ಕುಂಕಮತೋ…’ ವೆಂಕಟೇಶ ಸುಪ್ರಭಾತದ ಜೊತೆಯಲ್ಲಿ ಗುನುಗುನಿಸತೊಡಗಿದೆ. ಬೇಕಾದಂತೆ ಸ್ವರ ಹೊರಡದಾಯಿತು. “ಕುಸ್‌… ಟುಸ್‌… ಉಂ… ಉಯ್‌…’ ಎಂದು ವಿಚಿತ್ರವಾಗಿ ಸದ್ದು ಬಂತು. ಶಕ್ತಿ ಪ್ರಯೋಗಿಸಿ ಗಂಟಲು ಸರಿಪಡಿಸಿದಷ್ಟು ಮತ್ತೂ ಮೆತ್ತಗಾಯಿತು. ಒಂದೆರಡು ಪಾತ್ರೆಗಳ ಸದ್ದಾದಾಗ ಸುಪ್ರಭಾತದ ಮಾಧುರ್ಯದಿಂದ ವಂಚಿತರಾದವರೆಲ್ಲ ಹಾಯಾಗಿ ಎದ್ದರು.

“ಮಾತೇ ಮುತ್ತು, ಮಾತೇ ಮೃತ್ಯು’ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವ ಸೂಕ್ತಿ. ಈ ಮಾತೇ ಇಲ್ಲದಿದ್ದರೆ ಅಥವಾ ಯಾವಾಗಲೂ ವಟಗುಟ್ಟುತ್ತಲೇ ಇರುವವರಿಗೆ ಮಾತು ಒಮ್ಮೆಲೇ ನಿಂತುಹೋದರೆ ಹೇಗಾಬೇಕು! ಬಹುಶಃ ಕೇಶೀರಾಜನು ತನ್ನ ಶಬ್ದಮಣಿ ದರ್ಪಣದಲ್ಲಿ ವರ್ಣಮಾಲೆಯ ಬಗ್ಗೆ ಹೇಳುವ ಸಂದರ್ಭದಲ್ಲಿ ಗಂಟಲಿನ ಸಂಬಂಧವಾದ ತೊಂದರೆಗೆ ಒಳಗಾಗಿರಬೇಕು. ಧ್ವನಿ, ಸ್ವರ, ಮಾತು ಇವುಗಳ ಮೂಲವಾದ ಧ್ವನಿಪೆಟ್ಟಿಗೆ ಕೈಕೊಟ್ಟ ಸಂದರ್ಭದಲ್ಲಿ “ಸ್ವರದಿಂದ ಪದ, ಪದದಿಂದ ಅರ್ಥಾವಲೋಕನ’ ಆಗುವುದೆಂದು ಹೇಳಿರಬೇಕು ಎಂಬ ಹೊಸತರ್ಕ ನನ್ನಲ್ಲಿ ಮೂಡಿ ಮರೆಯಾಯಿತು.

ನನ್ನ ಗೆಳತಿಯೊಬ್ಬಳಿಗೆ ವರ್ಷಕ್ಕೊಮ್ಮೆ ವಕ್ಕರಿಸುವ ನೆಂಟನಂತೆ ಈ ಸಮಸ್ಯೆ ಕಾಡುತ್ತಿರುವುದರಿಂದ ಅವಳಿಗೆ ಯೋಗ್ಯ ಪರಿಹಾರ ತಿಳಿದಿರಬಹುದೆಂದುಕೊಂಡು ಫೋನು ಕೈಗೆತ್ತಿಕೊಂಡೆ. ಆ ಕಡೆಯಿಂದ “ಹಲೋ…’ ಎಂದ ಧ್ವನಿ ಗೆಳತಿಯದೇ ಎಂದು ಖಚಿತವಾಯಿತು. ತುಂಬ ಸಂತೋಷದಿಂದ, “ಹಲೋ… ರಾಜಿ, ನಾನು, ನಾನು ಕಣೇ…’ ಎಂದು ಒದರಿದೆ. “ರಾಂಗ್‌ ನಂಬರ್‌’ ಎಂದು ಕೋಪದಿಂದ ಫೋನು ಕುಕ್ಕಿದ್ದು ತಿಳಿಯಿತು.

ಉಪ್ಪುನೀರು ಗಂಟಲಿಗೆ ಇಳಿಬಿಟ್ಟು ಗಳಗಳನೆ ಬಾಯಿ ಮುಕ್ಕಳಿಸಿದರೆ ಗಂಟಲ ತೊಂದರೆ ಕಡಿಮೆಯಾಗುವುದೆಂಬ ಟಿಪ್ಸ್‌ ನೆನಪಾಯಿತು. ಹಾಗೆ ಮಾಡಿದಾಗ ಸ್ವಲ್ಪ ಹಾಯೆನಿಸಿತು. ಬಾಯಿ, ನಾಲಗೆ, ಹಲ್ಲು ಹೀಗೆ ಯಾವ ಭಾಗದಲ್ಲೂ ನೋವಿಲ್ಲದೆ, ಗಂಟಲು ಹಾಗೂ ಇಚ್ಛಾಶಕ್ತಿ ಎಲ್ಲವೂ ಸರಿಯಾಗಿರಲು ಕೈಕೊಟ್ಟ ಭಾಗ ಯಾವುದೆಂದು ತಿಳಿಯದಾಯಿತು. ಶೀತ, ನೆಗಡಿ ಯಾವುದೂ ಆಗದೆ ನನ್ನ ಧ್ವನಿಪೆಟ್ಟಿಗೆ ಹೇಗೆ ಕೈಕೊಟ್ಟಿತು ಎಂಬುದರ ನಿಗೂಢ ತಿಳಿಯಲಿಲ್ಲ.

ಧ್ವನಿಪೆಟ್ಟಿಗೆ ಎನ್ನುವಾಗ ಬಹಳ ಮುಖ್ಯವಾಗಿ ಕೆಲವು ವಿಚಾರಗಳು, ಘಟನೆಗಳು ಬಾಲ್ಯದಲ್ಲೇ ನನ್ನ ಮನಸ್ಸಿನಲ್ಲಿ ಸ್ಥಿರವಾಗಿ ಉಳಿದಿದ್ದವು. ಆಗ ನಮ್ಮ ಮನೆಯ ಅಟ್ಟದಲ್ಲೊಂದು ಹಳೆಯ ಹಾರ್ಮೋನಿಯಂ ಇತ್ತು. ಇದನ್ನು ಅಜ್ಜನ ಬಾಲ್ಯದಲ್ಲಿ ಅವರ ಹಿರಿಯರು ಕುಮಾರವ್ಯಾಸ ಭಾರತ ವಾಚನ ಮಾಡುತ್ತಿದ್ದಾಗ ನುಡಿಸುತ್ತಿದ್ದರಂತೆ. ಕಾಲಾನಂತರದಲ್ಲಿ ಮುಂದಿನ ಪೀಳಿಗೆಗೆ ಆಸಕ್ತಿ ಕಡಿಮೆಯಾಗಿ ಅದು ಅಟ್ಟ ಸೇರಿತಂತೆ. ಅಜ್ಜಿಯವರೊಡನೆ ಈ ಕುರಿತು ಹೇಳಿದಾಗ, ಅವರ ಮದುವೆಗೆ ಮೊದಲು ಅಜ್ಜ ನುಡಿಸುತ್ತಿದ್ದರೆಂದೂ, ಮದುವೆಯ ನಂತರ ಮೂಲೆ ಸೇರಿತೆಂದೂ ಹೇಳುತ್ತಿದ್ದರು. ಒಟ್ಟಿನಲ್ಲಿ ಸಂಸಾರದ ಜಂಜಾಟದಲ್ಲೋ, ಅಜ್ಜಿಯ ಧ್ವನಿಯೇ ದೊಡ್ಡದಾಗಿರುವುದರಿಂದಲೋ, ಬದಲಾದ ವ್ಯವಸ್ಥೆಯಿಂದಾಗಿಯೋ ಮೂಲೆಗುಂಪಾಗಿರಬೇಕು.

ಚಿಕ್ಕಂದಿನಲ್ಲಿ ಮಕ್ಕಳೆಲ್ಲ ಸೇರಿ ಕಣ್ಣಾಮುಚ್ಚಾಲೆ ಆಟ ಆಡುವಾಗ, “ಕಣ್ಣೇ ಮುಚ್ಚೇ ಕಾಡೇ ಗೂಡೇ…’ ಎಂದು ಕಣ್ಣು ಮುಚ್ಚಿ ಹೇಳುವಷ್ಟರಲ್ಲಿ ದಡದಡನೆ ಓಡಿ ಮನೆಯ ಅಟ್ಟ ಸೇರುತ್ತಿದ್ದೆವು. ಎಷ್ಟೋ ವರ್ಷ ಹಳೆಯದಾದ ವಸ್ತುಗಳು ಅಲ್ಲಿರುತ್ತಿದ್ದವು. ವರ್ಷಗಟ್ಟಲೆ ಹೊಗೆ ತಾಗಿ ಕಪ್ಪಾದ ಆ ಪ್ರಾಚ್ಯವಸ್ತುಗಳ, ಸಾಮಾನು-ಸರಂಜಾಮುಗಳ ಎಡೆಯಲ್ಲಿ ಗಂಟೆಗಟ್ಟಲೆ ಅಡಗಿ ಕೂತು ಬೆವತರೂ, ಉಸಿರುಗಟ್ಟುವಂತಾದರೂ ಅಲುಗಾಡದೆ ಇರುತ್ತಿದ್ದೆವು. ಕಣ್ಣು ಮುಚ್ಚಿಕೊಂಡವರು ಅಡಗಿದವರನ್ನು ಹುಡುಕಿ ಹುಡುಕಿ ಸುಸ್ತಾಗಿ ಕುಳಿತುಕೊಳ್ಳುತ್ತಿದ್ದರು. ಕೊನೆಗೆ “ಬಂಡಿ’ ಎಂದು ಹೇಳಿ ತಮ್ಮ ಸೋಲನ್ನು ಅಥವಾ ಅಸಹಾಯಕತೆಯನ್ನು ಒಪ್ಪಿಕೊಂಡರೆಂಬ ಸಂದೇಶ ಬಂದಾಗ ಜಂಭದಿಂದ ಹೊರಗೆ ಬರುತ್ತಿದ್ದೆವು. ಆ ಅಟ್ಟದ ಮಸಿಯಲ್ಲಿ ಹೊರಳಿ “ಕರಿವದನ’ರಾಗಿ ಬರುವವರನ್ನು ನೋಡಿ ಖುಷಿಪಡುವ ಸರದಿ ಉಳಿದವರದ್ದು. ಹೀಗೆ ಎಷ್ಟೋ ಬಾರಿ ಅಡಗಿ ಕುಳಿತಿದ್ದಾಗ ಪೆಟ್ಟಿಗೆಯೊಂದನ್ನು ನೋಡಿದ್ದಿದೆ. ಅದು ಏನೆಂದು ಪ್ರಶ್ನಿಸಿದಾಗ, “ಹಾಳಾದ ಧ್ವನಿಪೆಟ್ಟಿಗೆ’ ಎಂದು ದೊಡ್ಡವರು ಹೇಳಿದ್ದರು.

ಅನಂತರ ಧ್ವನಿಪೆಟ್ಟಿಗೆಯ ವಿಚಾರ ಬಂದಿರುವುದು ಪ್ರಾಥಮಿಕ ಶಾಲೆಯಲ್ಲಿ , ವಿಜ್ಞಾನ ಪಾಠದಲ್ಲಿ ವಿಜ್ಞಾನ ಕಲಿಸುತ್ತಿದ್ದ ತಿಮ್ಮಯ್ಯ ಮೇಷ್ಟ್ರು ಗಂಟಲಿನ ಬಗ್ಗೆ ವಿವರಿಸುತ್ತ ಧ್ವನಿಪೆಟ್ಟಿಗೆಯ ಕುರಿತಾಗಿ ವಿವರಣೆ ನೀಡಿದ್ದರು. ಆಜಾನುಬಾಹುವಾಗಿದ್ದ ಅವರು ತಮ್ಮ ಗಂಟಲಿನ ಭಾಗವನ್ನು ಪಾಠೊಪಕರಣವಾಗಿ ಬಳಸಿ ಪಾಠ ಮಾಡುತ್ತಿದ್ದಾಗ ಅಂದಿನವರೆಗೆ ಗಮನಿಸದೆ ಇದ್ದ ಅವರ ಗಂಟಲಿನ ಉಬ್ಬಿದ ಭಾಗವನ್ನು ಗಮನಿಸಿದೆ. ಬಹುಶಃ ಅದೇ ಧ್ವನಿಪೆಟ್ಟಿಗೆ ಇರಬೇಕೆಂದು ಊಹಿಸಿದೆ. ಮುಂದೆ ಅವರ ಯಾವ ಪಾಠಪ್ರವಚನವೂ ತಲೆಗೆ ಹೋಗಲೇ ಇಲ್ಲ. ಅವರು ಮಾತನಾಡುತ್ತಿರುವಾಗ ಮೇಲೆ ಕೆಳಗೆ ಸರಿಯುತ್ತಿದ್ದ ಗಂಟಲ ಕೀಲನ್ನು ನೋಡುತ್ತಿದ್ದೆ. ಗಂಟಲಿನಿಂದ ಹೊರಡುವ ಸ್ವರಕ್ಕೆ ಧ್ವನಿಪೆಟ್ಟಿಗೆಯೇ ಕಾರಣ ಎಂಬುದು ನನ್ನ ಮನಸ್ಸಿನಲ್ಲಿ ಬಲವಾಗಿ ಬೇರೂರಿದ ದಿನಗಳವು.

ನಮ್ಮ ಸೋದರತ್ತೆಗೆ ಮದುವೆಯಾದ ಹೊಸದು. ಅವರ ಗಂಡ ನಮಗೆ ಮಾವನಾದ ವ್ಯಕ್ತಿಯ ಸ್ವರ ಸ್ವಲ್ಪ ಕೀರಲಾಗಿತ್ತು. ನಮ್ಮಜ್ಜಿಗೆ ಒಂದು ದೊಡ್ಡ ಗುಣವಿತ್ತು. ಮನೆಗೆ ಯಾರಾದರೂ ಅತಿಥಿಗಳು ಬಂದಿದ್ದರೆ ಅಡುಗೆ ಮನೆಯಿಂದ ಹೊರಗೆ ಬರುತ್ತಿದ್ದಂತೆ ಅಕ್ಷಯ ಪಾತ್ರೆಯಲ್ಲಿರುತ್ತಿದ್ದ ಕಾಫಿಯನ್ನು ಲೋಟಗಳಿಗೆ ಹಾಕಿ ಹಿಡಿದುಕೊಂಡೇ ಬರುತ್ತಿದ್ದರು. ಹಾಗೆಯೇ ಮಾವನ ಜೊತೆಯಲ್ಲಿ ಯಾರೋ ಹೆಂಗಸರೂ ಬಂದಿರಬೇಕೆಂದು ಕಾಫಿ ತಂದಿದ್ದರು. ಅದಕ್ಕೆ ಕಾರಣ ಮಾವ ಮಾತನಾಡುವ ಧ್ವನಿಯು ಗಂಡಸು-ಹೆಂಗಸು ಇಬ್ಬರು ಮಾತನಾಡಿದಂತೆ ಕೇಳಿಸುತ್ತಿದ್ದುದು. ಅದನ್ನೇ ಅತ್ತೆಯವರೊಡನೆ ಹೇಳಿದೆ. “ಮಾವನ ಧ್ವನಿಪೆಟ್ಟಿಗೆ ಸರಿಯಿಲ್ಲ ಅಂತನ್ನಿಸುತ್ತೆ’ ಎಂದಾಗ ಅತ್ತೆಗೆ ಏನನ್ನಿಸಿತೋ, ಅವರು ಮಾತನಾಡಲಿಲ್ಲ.

ಈಗ ನನ್ನ ಧ್ವನಿಪೆಟ್ಟಿಗೆ ಸರಿಪಡಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಯಜಮಾನರಿಗೆ ಮೊದಲು ಕೈಬಾಯಿ ತಿರುಗಿಸಿ ಸ್ವರ ಇಲ್ಲ ಎಂಬುದನ್ನು ತಿಳಿಸಿದೆ. ಅವರು ಒಳಗೊಳಗೆ ಖುಷಿಪಟ್ಟಂತೆ, ಇನ್ನೆರಡು ದಿನ ಹೀಗೆಯೇ ಇರಲಪ್ಪ ಎಂದು ಹಾರೈಸಿದ ಭಾವ ಕಾಣಿಸಿತು. ನನ್ನ ಹಾವಭಾವ ಅರ್ಥೈಸಿಕೊಂಡು ಕೊನೆಗೆ ಗೂಗಲ್‌ ಸರ್ಚ್‌ ಮಾಡಿ ಗಂಟಲು ಮುಕ್ಕಳಿಸುವ ಯಾವುದೋ ಔಷಧ ಬರೆದಿಟ್ಟರು. ಕೆಟ್ಟುಹೋದ ಗಂಟಲು ಮುಂದೆ ಹಲವಾರು ಅವಾಂತರಗಳಿಗೆ ಕಾರಣವಾಯಿತು.

ಹಾಲಿನ ಹಾಲಪ್ಪ ತನ್ನ ತಿಂಗಳ ಸಂಭಾವನೆಗಾಗಿ ಹಿಂಬಾಗಿಲಿನಲ್ಲಿ ನಿಂತು, “ಅಕ್ಕಾವ್ರೇ’ ಎಂದು ಕೂಗುವುದು ರೂಢಿ. ಕೆಂಪು ಹುಳುಕು ಹಲ್ಲು ತೋರಿಸಿ ವಿಧೇಯತೆಯಿಂದ ಮತ್ತೂಮ್ಮೆ ಕರೆದ. ನಾನು ಒಳಗಿನಿಂದ “ಓ ಬಂದೇ’ ಎಂದರೂ ಅವನಿಗೆ ಕೇಳಿಸದು ತಾನೇ? ಹೊರಗೆ ತಲೆಹಾಕಿ “ಮಾತಾಡ್ಲಿಕ್ಕೆ ಆಗ್ತಾ ಇಲ್ಲ ಮಾರಾಯ’ ಎಂದು ಹೇಳಿದೆ. ಏನೋ ಬಹಳ ಗುಟ್ಟು ಹೇಳುತ್ತಿದ್ದೇನೆಂದು ಭಾವಿಸಿ ಹತ್ತಿರ ಬಂದು, “ಏನಕ್ಕಾವ್ರೇ’ ಎಂದು ಪಿಸುಗುಟ್ಟಿದಂತೆ ಕೇಳಿದ. ಮಾತನಾಡಲು ಆಗದಿರುವ ಅಸಹಾಯಕತೆಯನ್ನು ಮತ್ತೂಮ್ಮೆ ತುಟಿ ಅಲುಗಿಸಿ ಪಿಸಿಪಿಸಿ ಅಂದೆ. “”ಏನೂ— ಯಜಮಾನ್ರು ಮನೇಲಿ ಇಲ್ವಾ? ಎಲ್ಲಿ ಹೋಗವ್ರೇ” ಹಾಲಪ್ಪ ಮತ್ತೆ ಬಗ್ಗಿ ಮೆತ್ತಗೆ ಕೇಳಿದ. ಮುಜುಗರವಾಗಿ ಮೂರಡಿ ಹಿಂದಕ್ಕೆ ಜಡಿದೆ. ಕೈಗೆ ಹಣ ಹಾಕಿ ಗಂಟಲು ಸರಿಯಿಲ್ಲ ಎಂಬುದನ್ನು ಕೈಸನ್ನೆ ಮಾಡಿ ತಿಳಿಸಿದೆ. ಅರ್ಥವಾದವನಂತೆ ತಲೆ ಆಡಿಸಿಕೊಂಡು ಹೋದ.

ಗಂಟಲು ಕೈಕೊಟ್ಟರೂ ಶರೀರಕ್ಕೆ ಯಾವ ಮುಲಾಜೂ ಇಲ್ಲ ಎಂದುಕೊಂಡು ಕಚೇರಿ ಕೆಲಸಕ್ಕೆ ಹೋಗಲು ಸಿಟಿಬಸ್‌ ಹತ್ತಿದೆ. ಕಂಡಕ್ಟರ್‌ ಚಿಲ್ಲರೆ ಹಣ ಕೊಡಬೇಕಾಗಿದ್ದು, ಅವನಾಗಿಯೇ ಕೊಡುವ ಸೂಚನೆ ಕಾಣಿಸಲಿಲ್ಲ. ಬಸ್ಸಿನಿಂದ ಕೆಳಕ್ಕೆ ದಬ್ಬಿಸಿಕೊಳ್ಳುವ ರಭಸದಲ್ಲಿ “ಚೇಂಜ್‌… ಚೇಂಜ್‌’ ಎಂಬ ಬಾಯಿ ಚಲನೆಯನ್ನು ಗಮನಿಸಿ “ಎಲ್ಲಿಂದ?’ ಎಂದು ಪ್ರಶ್ನಿಸಿದರೂ ಅದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವಿಲ್ಲದೆ ಬಸ್ಸಿಗೆ “ರೈಟ್‌’ ಹೇಳಿದ. ಸ್ವರ ಸರಿಹೋಗುವವರೆಗೆ ಬಸ್ಸಿನ ತೊಂದರೆ ಬೇಡವೆಂದು ಸಂಜೆ ಆಟೋ ಒಂದನ್ನು ನಿಲ್ಲಿಸಿದೆ. ಇಳಿಯಬೇಕಾದ ಸ್ಥಳವನ್ನು ಹೇಳಿದರೆ ತಿಳಿಯದು ಎಂದು ತಲೆಯಾಡಿಸಿದೆ. ಒಂದು ಚೀಟಿಯಲ್ಲಿ ಸ್ಥಳನಾಮ ಬರೆದು ಅವನೆದುರು ಹಿಡಿದೆ. ಸುಶಿಕ್ಷಿತಳಂತೆ ಕಾಣುವ ಕಿಡ್ನಾéಪರ್‌ ಇರಬಹುದೆಂಬ ಭಯ, ಸಂಶಯ ಮಿಶ್ರಿತ ಅನುಮಾನ ಅವನ ಮುಖದಲ್ಲಿ ಕಾಣಿಸಿತು. “ಆಗೋದಿಲ್ಲ’ ಎಂದು ಭರ್ರನೆ ಮುಂದಕ್ಕೆ ಹೋದ. ಅಂತೂ ಒಂದೂವರೆ ತಾಸು ತಡವಾಗಿ ಮನೆ ಸೇರಿದೆ.

ಮೊದಲೇ ಹೇಳಿದಂತೆ ಯಜಮಾನರು ಬರೆದಿಟ್ಟ ಔಷಧಿ ತಂದು ಗಂಟಲಿಗೆ ಸುರಿದು ಉಗುಳಿಯಾಯಿತು. ತುಳಸಿ, ಶುಂಠಿ, ಕರಿಮೆಣಸು ಹುಡುಕಿ ತಯಾರಿಸಿದ ಒಳ್ಳೆಯ ಖಡಕ್‌ ಕಷಾಯ ಹೊಟ್ಟೆ ಸೇರಿತು. ಎಲ್ಲಾ ರಂಧ್ರಗಳಿಂದಲೂ ಹೊಗೆ ಹೋಯಿತು. ಶೀತ, ಕೆಮ್ಮು, ನೆಗಡಿ ಇತ್ಯಾದಿಗಳಿಗೆ ಮದ್ದಿಲ್ಲ. ಶೀತವನ್ನು ಹಾಗೇ ಬಿಟ್ಟರೆ ಏಳು ದಿನಗಳಲ್ಲಿ ವಾಸಿಯಾಗುತ್ತದೆ, ಔಷಧಿ ತೆಗೆದುಕೊಂಡರೆ ಒಂದು ವಾರದಲ್ಲಿ ಗುಣವಾಗುತ್ತದೆ ಎಂದು ಅಜ್ಜಿ ಹೇಳುತ್ತಿದ್ದ ಜಾಣತನದ ಮಾತು ನೆನಪಾಯಿತು. ಈ ಕಾಯಿಲೆಗೆ ಮೌನವೇ ಮದ್ದು ಎಂದು ಮೌನವ್ರತಾಚರಣೆ ಆರಂಭಿಸಿದೆ. ಮನೆಯಲ್ಲಿ ಏನೋ ಬಹಳ ಶಾಂತಿ ನೆಲೆಸಿದಂತೆ, ನನ್ನ ಉದಯರಾಗದ ಅಲರಾಂ ಇಲ್ಲದೆ ಯಜಮಾನರೂ ಮಕ್ಕಳೂ ಎರಡು ದಿನ ಹಾಯಾಗಿ ಬೆಳಗ್ಗೆ ಎದ್ದು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗುತ್ತಿದ್ದರು. ಸಹನೆಯ ಕಟ್ಟೆ  ಒಡೆದು ಮಹಾಪೂರ ಹೊರಗೆ ಬಂದರೆ ನನ್ನ ಧ್ವನಿಪೆಟ್ಟಿಗೆಗೆ ಎಲ್ಲಿ ಕುತ್ತಾಗುವುದೂ ಎಂದು ಜಾಗ್ರತೆ ವಹಿಸತೊಡಗಿದೆ.

– ಶೈಲಜಾ ಪುದುಕೋಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

ಕೋವಿಡ್-19:  ರಾಜ್ಯದಲ್ಲಿ ಮತ್ತೆ ಜನರಿಗೆ ಸೋಂಕು ದೃಢ

ರಾಜ್ಯದಲ್ಲಿ ಕೋವಿಡ್-19 ಸ್ಪೋಟ; ಮತ್ತೆ 299 ಜನರಿಗೆ ಸೋಂಕು ದೃಢ

ಉಡುಪಿಯಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಮತ್ತೆ 10 ಜನರಿಗೆ ಸೋಂಕು ದೃಢ

ಬಳ್ಳಾರಿ: ಪೊಲೀಸ್ ಸಿಬ್ಬಂದಿ ಸೇರಿ ಮೂವರಿಗೆ ಕೋವಿಡ್ ಸೋಂಕು ದೃಢ

ಬಳ್ಳಾರಿ: ಪೊಲೀಸ್ ಸಿಬ್ಬಂದಿ ಸೇರಿ ಮೂವರಿಗೆ ಕೋವಿಡ್ ಸೋಂಕು ದೃಢ

ಚೆನ್ನೈ, ನೆರೆಯ ಜಿಲ್ಲೆಗಳನ್ನು ಹೊರತು ಪಡಿಸಿ ಬಸ್‌ ಸಂಚಾರ ಆರಂಭ

ಚೆನ್ನೈ, ನೆರೆಯ ಜಿಲ್ಲೆಗಳನ್ನು ಹೊರತು ಪಡಿಸಿ ಬಸ್‌ ಸಂಚಾರ ಆರಂಭ

ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

31-May-26

ಹೆದ್ದಾರಿ ಕಾಮಗಾರಿಗೆ ನೀಲನಕ್ಷೆ ಸಿದ್ಧಪಡಿಸಿ

ಕೋವಿಡ್-19:  ರಾಜ್ಯದಲ್ಲಿ ಮತ್ತೆ ಜನರಿಗೆ ಸೋಂಕು ದೃಢ

ರಾಜ್ಯದಲ್ಲಿ ಕೋವಿಡ್-19 ಸ್ಪೋಟ; ಮತ್ತೆ 299 ಜನರಿಗೆ ಸೋಂಕು ದೃಢ

ಉಡುಪಿಯಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಮತ್ತೆ 10 ಜನರಿಗೆ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.