ಮನರಂಜನೆಯಿಂದ ಆತ್ಮರಂಜನೆಯ ಕಡೆಗೆ!


Team Udayavani, Mar 10, 2019, 12:30 AM IST

s-5.jpg

ಹಿಂದಿನ ವಾರ ಭಾರತೀಯ ಶಾಸ್ತ್ರೀಯ ಸಂಗೀತದ ಮೂಲ ತತ್ವ, ಘರಾನಾ, ಪ್ರಕೃತಿಯ ಮೇಲೆ ಸಂಗೀತದ ಪ್ರಭಾವ ಮತ್ತು ಅದಕ್ಕೆ ಕಿಶೋರಿ ಅಮೋಣ್ಕರ್‌ ವಿಚಾರವನ್ನು ಚರ್ಚಿಸಿದ್ದೆವು.
ಸುರ್‌ ನಾ ಸಜೆ ಕ್ಯಾ ಗಾವುಂ ಮೈ, 
ಸುರ್‌ ಕೆ ಬಿನಾ ಜೀವನ್‌ ಸೂನಾ…
ಕೊನೆಯ ಸಾಲು…
ಸಂಗೀತ್‌ ಮನ್‌ ಕೊ ಫ‌ಂಖ್‌ ಲಗಾಯೆ ಗೀತೋಂಸೆ ರಿಮ್‌ ಝಿಮ್‌ ರಸ್‌ ಬರಸಾಯೆ
ಸುರಕಿ ಸಾಧನಾ ಪರಮೇಶ್ವರ್‌ ಕಿ…
ಈ ಹಾಡನ್ನು ಹಾಡಿದವರು ಮನ್ನಾಡೆ. ಆದರೆ, ಯಾವಾಗ ಸ್ವರ ಮತ್ತು ಪರಮೇಶ್ವರನ ಉಲ್ಲೇಖವಾಗುತ್ತದೆಯೋ ಆಗ ಆ ಹಾಡಿನ ಕತೃì, ಹಾಡುಗಾರ ಇತ್ಯಾದಿ ದಾಖಲೆಗಳನ್ನು ಮೀರಿ ನನಗೆ ಕಿಶೋರಿ ತಾಯಿ ನೆನಪಾಗುತ್ತಾಳೆ. ತಾಯಿಯ ಪ್ರಭಾವವೇ ಅಂತಹದ್ದು. ಸಾಧನೆ ಮತ್ತು ಸಾಧಿಸಿದ ಎತ್ತರ ಹಾಗೆ ಮಾಡಿಸುವುದೂ ಸಹಜವೇ. 

ಕಿಶೋರಿ ತಾಯಿಯನ್ನು ಎರಡು ಕಾಲಘಟ್ಟದಲ್ಲಿ ಗಮನಿಸಬೇಕು ಎಂದು ಮೊದಲೇ ನಾನು ಉಲ್ಲೇಖೀಸಿದ್ದಿದೆ. ಮೊದಲ ಕಾಲಘಟ್ಟದಲ್ಲೇ ಪ್ರಸ್ತುತಪಡಿಸಿದ ಖ್ಯಾಲ್‌ ಸಂಗೀತ, ಮೀರಾ ಭಜನ್‌, ಮರಾಠಿ ಸಂಗೀತ, ಚಲನಚಿತ್ರ ಸಂಗೀತ ಕೂಡ ಬಹಳ ಶ್ರೇಷ್ಟ ಮಟ್ಟದ್ದು. ರಾಗ ಭೂಪ್‌, ಭಾಗೇಶ್ರೀ, ಬಿಭಾಸ್‌, ಹಂಸಧ್ವನಿ ಭಿನ್ನ ಶಡ್ಜದಲ್ಲಿ ತೋರಿಸಿದ ವಿಶಿಷ್ಟ ಸ್ವರ ವಿನ್ಯಾಸದ ಸಾಧ್ಯತೆ, ಅದರಿಂದುಂಟಾದ ಅಮೂರ್ತತೆ ಕೇವಲ ಅನುಭೂತಿ ಅಷ್ಟೆ. ಹೀಗೂ ಭೂಪ್‌ ಹಾಡಬಹುದೆ? ಭೂಪ್‌ ಈ ಭಾವವನ್ನೂ ಕೊಡಬಹುದೆ? ಇನ್ನೂ ಕಾಣದ ಹೊಸ ಭಾವಜಗತ್ತೂಂದನ್ನು ಭೂಪ್‌ದಲ್ಲಿ, ಭಾಗೇಶ್ರೀಯಲ್ಲಷ್ಟೇ ಅಲ್ಲ ಹಾಡುವ ಎಲ್ಲ ರಾಗಗಳಲ್ಲೂ ತೋರಿಸುತ್ತಿದ್ದಾಳೆ ಎಂದು ಭಾಸವಾಗುತ್ತದೆ. 

ಸ್ವರ ಸಂಚಾರ, ಒಂದು ಸ್ವರ ಇನ್ನೊಂದರೊಡನೆ ಏರ್ಪಡುವ ಸಂಬಂಧ, ಆಯಾ ರಾಗದ ಭಾವಕ್ಕನುಗುಣವಾದ ಮೈಕ್ರೋ ಟೋನಿನ ಅಧಿಕಾರಯುತ ಬಳಕೆ, ಸ್ವರದ ನಿರ್ದಿಷ್ಟ ಬಿಂದುವನ್ನು ಮುಟ್ಟಿದ ರೀತಿ ಹಾಗೂ ಅದರಿಂದಾದ ಒಟ್ಟೂ ಪರಿಣಾಮ ಅದ್ಭುತವಾದದ್ದು. ಆ ಸಂದರ್ಭದಲ್ಲಿ ಜನ ಈ ಪ್ರತಿಭೆಯನ್ನು ನೋಡಿ ಆಶ್ಚರ್ಯಗೊಂಡಿದ್ದು ಸಹಜವೇ. (ಹೆದರಿದರು! ಎನ್ನುವುದೂ ಹೆಚ್ಚು ಸಮಂಜಸವಾದೀತು). ಮಾರೋ ಪ್ರಣಾಮ್‌ ಮತ್ತು ಬೊಲಾವ ವಿಠuಲದಂತಹ ಭಕ್ತಿ ಪ್ರಧಾನ ಕೃತಿಗಳನ್ನು ಹೇಗೆ ಮರೆಯುವುದು? ಅವಳು ತೋರಿಸಿದ ಆ ಭಕ್ತಿ ರಸದ ಅನುಭೂತಿಯನ್ನು ಯಾರು ತೋರಿಸಿಯಾರು? ಕಿಶೋರಿ ತಾಯಿ ಹಾಡಿದ ಒಂದೇ ಒಂದು ಚಲನಚಿತ್ರ ಗೀತೆಯನ್ನೂ ನೀವು ಕೇಳಬೇಕು. ಅದೂ ಯಾವ ಮಟ್ಟದ್ದು ಎಂದು ನಿಮಗೆ ತಿಳಿಯುತ್ತದೆ. 

ಈ ಹಿಂದೆ ಮೈಕ್ರೋಟೋನಿನ ಪ್ರಸ್ತಾಪ ಬಂತು. ಶ್ರುತಿ, ಸ್ವರ ಮತ್ತು ಒಂದು ಸ್ವರದಲ್ಲೇ ಇರುವ ಅನಂತ ಸಾಧ್ಯತೆಗಳ ಬಗ್ಗೆ ಕಿಶೋರಿ ತಾಯಿಯಂತೇ ಚಿಂತನೆ ನಡೆಸಿದವರು ಬಹಳ ವಿರಳ. ಕಾರಣ ಅವಳ ಹುಡುಕಾಟವೇ ಸ್ವರ ಮತ್ತು ಅದರ ಸ್ವಭಾವ. ಅವಳ ಪ್ರಕಾರ ಪ್ರೀತಿ ಎನ್ನುವುದು ಒಂದೇ ಆದರೂ ಅದನ್ನು ತೋರುವ ಬಗೆ ಬೇರೆ ಬೇರೆ ; ತಾಯಿ ಮಕ್ಕಳಿಗೆ, ಹೆಂಡತಿ ಗಂಡನಿಗೆ, ಹುಡುಗ ಹುಡುಗಿಗೆ ಇತ್ಯಾದಿ! ಹಾಗೆಯೇ ರಿಷಭ ಒಂದೇ ಆದರೂ ಶುದ್ಧ ಕಲ್ಯಾಣದ ರಿಷಭಕ್ಕೂ ಭೂಪ್‌ದ ರಿಷಭಕ್ಕೂ ವ್ಯತ್ಯಾಸವಿದೆ. ನಿಷಾದ ಒಂದೇ ಆದರೂ ಕೌಶಿಕ್‌ ಕಾನಡಾದ ನಿಷಾದಕ್ಕೂ ದರ್ಬಾರಿಯ ನಿಷಾದಕ್ಕೂ ವ್ಯತ್ಯಾಸವಿದೆ. ಸ್ವರ ಎನ್ನುವುದು ಬಿಂದುವಾದುದರಿಂದ ಅದನ್ನು ಈ ಅನಂತ ಸಾಧ್ಯತೆಗಳ ನಡುವೆಯೇ ಹುಡುಕಬೇಕು. ಆಯಾ ರಾಗದ ಭಾವನೆಗೆ ತಕ್ಕ ಸ್ವರಾಲಂಕಾರ ಅಷ್ಟೆ ಅಲ್ಲ , ಅವಕ್ಕೆ ಸರಿ ಹೊಂದುವ ಯಾವ ಮೀಂಡ್‌ ಬಳಸಬೇಕು ಎನ್ನುವುದು ಕಿಶೋರಿ ತಾಯಿಯ ವಾದವಷ್ಟೇ ಅಲ್ಲ, ಅವಳು ಅದನ್ನು ಸಹೃದಯನಿಗೆ ತೋರಿಸಿ ಕೊಟ್ಟಿದ್ದಳು ಕೂಡ. ಶಬ್ದಗಳ ಬಳಕೆ ಉದಾಹರಣೆಗೆ ವಿಠuಲ ಅಥವಾ ಸಯ್ನಾ ಹೇಗಾಗಬೇಕು? ಹೇಗೆ ಬಳಸಿದರೆ ಆ ಉಚ್ಚಾcರಣೆಯಲ್ಲಿ ಸ್ವರವನ್ನು ಕೇಳಿಸಬಹುದೆಂದು ತಿಳಿಸಿದವಳು, ತೀವ್ರ ಮಧ್ಯಮ ಕಡಿಮೆಯಾಗಿ ಬಳಕೆಯಾಗಬೇಕು ಎನ್ನುವುದರ ಕಾರಣವೇನು? ಅದು ನಮ್ಮ ದೇಹ-ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಹಾಗಿದ್ದರೆ ಅದನ್ನು ಸ್ಥಾಯಿಯಾಗದೇ ಹೇಗೆ ಬಳಸಬೇಕು? ಮತ್ತು ಅತಿ ಮುಖ್ಯವಾಗಿ “ಸ’ ಮತ್ತು “ಪ’ ನಿಜವಾಗಲೂ ಅಚಲ ಸ್ವರವೇ? ಅವೂ ಪಕ್ಕದ ಸ್ವರಗಳೊಡನೆ ಬೇರೆ ಭಾವವನ್ನು ಕೊಡುವುದಿಲ್ಲವೆ? (ಉದಾ : ಹಂಸಧ್ವನಿಯ ಕಾಕಲಿ ನಿಷಾದದ ಜಾಗ). ಹೀಗೆ ಕಿಶೋರಿ ತಾಯಿ ಎತ್ತುವ ವಿಚಾರಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವೆಲ್ಲದರೊಂದಿಗೆ ಇಷ್ಟು ಜಾಗೃತ ಮತ್ತು ಬೌದ್ಧಿಕ ಮನಸ್ಸು ಕೊನೆಗೆ ಹೇಳುವ ವಿಚಾರವೇನೆಂದರೆ, ಎಲ್ಲಿಯವರೆಗೆ ನಾನು ಹಾಡುತ್ತೇನೆ ಎಂದುಕೊಳ್ಳುತ್ತೇವೆಯೋ ಅಲ್ಲಿಯವರೆಗೆ ಅವರಿಗೆ ಆ ರಾಗದ ಪ್ರಸ್ತುತಿ ಸಾಧ್ಯವಿಲ್ಲ. ನನಗೇನೂ ತಿಳಿದಿಲ್ಲ ಎಂದು ಶರಣಾದರೆ ತಾಯಿ ಭಾಗೇಶ್ರೀ, ಭೂಪ್‌ ಅದರ ಪ್ರಭೆ ತೋರಿಸಿಯಾಳು, ಕರುಣಿಸಿಯಾಳು ಎಂದು. 

ಕವಿ ಅಥವಾ ಸಂಗೀತಗಾರನ ಹೃದಯಕ್ಕೆ ಸಮಾನವಾದ ಹೃದಯವುಳ್ಳವನೇ ಸಹೃದಯಿ. ಇವರಿಬ್ಬರೂ ಸೇರಿದರೇ ಈ ಪ್ರಸ್ತುತಿ/ಆಕೃತಿ ಪೂರ್ಣವಾಗುವುದೆಂದು ಅಭಿನವ ಗುಪ್ತ ಹೇಳುತ್ತಾನೆ. ಒಮ್ಮೆ ಅಪೂರ್ಣವಾದರೆ ಕೂಡ ಹೆಚ್ಚಾಗಿ ಇಬ್ಬರೂ ಜವಾಬ್ದಾರರಲ್ಲವೇ ಅನ್ನುವ ವಾದವು ಮುಖ್ಯವೂ ಮತ್ತು ಪ್ರಸ್ತುತವೂ ಕೂಡ. ಎಲ್ಲ ಸಲವೂ ಬೇಜವಾಬ್ದಾರಿ ಪ್ರೇಕ್ಷಕ ಎನ್ನುವ ಹಣೆಪಟ್ಟಿಯೂ ಸಮಂಜಸವಲ್ಲ. ಇರಲಿ, ವಿಷಯಕ್ಕೆ ಬರೋಣ. ಸಹೃದಯಿ ವಿಷಯಕ್ಕೆ ಬಂದಾಗ ಕಿಶೋರಿ ತಾಯಿಯ ಎರಡು-ಮೂರು ಹೇಳಿಕೆಗಳಿವೆ. ಅವನ್ನು ಬೇರೆ ಬೇರೆಯಾಗಿ ಪ್ರಸ್ತಾಪಿಸಿದರೆ ಅನರ್ಥವಂತೂ ಖಂಡಿತ. ಅವಳ ಎಲ್ಲ ವಾದಗಳನ್ನು ಸಮಚಿತ್ತದಲ್ಲಿ ಸ್ವೀಕರಿಸಿ ಪ್ರೇಕ್ಷಕ ಜವಾಬ್ದಾರಿಯುತವಾದ ಹೆಜ್ಜೆಯಿಟ್ಟರೆ ಮಾತ್ರ ಸರಿಯಾದೀತು. “ನಾನು ಗ್ಯಾಲರಿಗೆ ಹಾಡುವವಳಲ್ಲ’ ಎನ್ನುವ ಅವಳ ಪ್ರಸಿದ್ಧ ವಾಕ್ಯವನ್ನು ಹೇಗೆ ಅರ್ಥೈಸುವುದು? ಹಾಗಾದರೆ, ಪ್ರೇಕ್ಷಕರ ನಡುವೆ ಯಾಕೆ ಹಾಡುವುದು ಎಂದು ಪ್ರಶ್ನೆ ಮಾಡಬೇಕೆ?  “ಒಂದು ವ್ಯಕ್ತಿ ಕಾರ್ಯಕ್ರಮದ ನಡುವೆ ಎದ್ದು ಹೋಗುತ್ತಾನೆ ಅಂದರೆ ಆ ವ್ಯಕ್ತಿಯ ಹೃದಯವನ್ನು ಸಂಗೀತದ ಮೂಲಕ ನನಗೆ ಮುಟ್ಟಲಾಗಲಿಲ್ಲ. ಹಾಗಾಗಿ, ನನ್ನಲ್ಲೇ ಏನೋ ತೊಂದರೆ ಇದೆ, ನಾನು ಅದರ ಮೇಲೆ ಗಮನಹರಿಸಬೇಕಲ್ಲವೆ?’ ಎಂದು ಕಿಶೋರಿ ತಾಯಿ ಹೇಳಿದ್ದುಂಟು. ಮುಖದ ಮೇಲೆ ಸ್ವಲ್ಪ$ ಹೆಚ್ಚು ಬೆಳಕು ಬಂದರೆ, ಸಣ್ಣ ಶಬ್ದ ಪ್ರೇಕ್ಷಕನ ಕಡೆಯಿಂದ ಬಂದರೂ ಸಿಟ್ಟು ಮಾಡಿಕೊಂಡು ಕಾರ್ಯಕ್ರಮವನ್ನು ಮೊಟಕುಗೊಳಿಸುವವರೆಗೆ ಹೋಗಿದ್ದೂ ಉಂಟು. ಸ್ಟೇಜಿನ ಮೇಲಿನ ಯಾವುದೋ ತಾಪತ್ರಯದಿಂದ ಕುಳಿತುಕೊಳ್ಳುವ ಜಾಗ, ತಂಬೂರ, ಸ್ವರ ಮಂಡಲ ಹೊಂದದೇ ಸುಮಾರು ಹೊತ್ತು ಕಾರ್ಯಕ್ರಮ ಪ್ರಾರಂಭವಾಗದೇ ಪ್ರೇಕ್ಷಕರಿಗೂ ಬೇಸರ ಹುಟ್ಟಿಸಿದ್ದೂ ಉಂಟು. ಇದಕ್ಕೆ ಕಿಶೋರಿ ತಾಯಿಯ ಉತ್ತರ : ಇಂದಿನ ಕಾರ್ಯಕ್ರಮಕ್ಕೆ ಯಾವ ರಾಗ ಹಾಡುತ್ತೇನೆ ಎನ್ನುವುದನ್ನು ಬಹಳ ಮೊದಲಿನಿಂದಲೇ ನಿರ್ಧರಿಸಿ ರಿಯಾಜಿನಲ್ಲಿ ತೊಡಗುತ್ತೇನೆ, ನನ್ನೊಡನೆಯ ಸಾಥಿದಾರರೊಡನೆ ಆ ಕಾರ್ಯಕ್ರಮದ ಹಿನ್ನೆಲೆ, ಪ್ರಸ್ತುತಪಡಿಸುವ ರಾಗ ಇತ್ಯಾದಿಗಳ ಬಗ್ಗೆ ಚರ್ಚೆ, ಅಭ್ಯಾಸ ನಡೆಸಿ ಅತ್ಯಂತ ಉತ್ತಮ ಪ್ರದರ್ಶನವನ್ನು ಪ್ರೇಕ್ಷಕರಿಗೆ ಕೊಡಬೇಕೆಂದು ಆ ರಾಗದ ಪ್ರಸ್ತುತಿಯ ವಿಧಾನದ ಗುಂಗು ಮನಸ್ಥಿತಿಯಲ್ಲಿರುವ ನನಗೆ ಸ್ವಲ್ಪ$ಗೊಂದಲವಾದರೂ ನಾನು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತೇನೆ. ಹಾಗಾದರೆ ಪ್ರೇಕ್ಷಕರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೆ?

ಕಿಶೋರಿ ತಾಯಿ ಸಂಗೀತದ ಬಹಳಷ್ಟು ಪ್ರಕಾರ/ಮಾಧ್ಯಮಗಳನ್ನು ದೂರ ಮಾಡಿಕೊಂಡವಳು, ಶಬ್ದಗಳಿಂದಲೂ ಆದಷ್ಟು ದೂರ ಸರಿಯುತ್ತ ಸ್ವರಕ್ಕೆ ಆನಿಸಿಕೊಂಡವಳು. ಇದೊಂದು ಪ್ರಯಾಣ ಎಂದು ಮೊದಲೇ ಹೇಳಿದ್ದೇನೆ. ನಾನು ಪ್ರೇಕ್ಷಕರ ನಡುವೆ ಹಾಡುತ್ತಿದ್ದೇನೆ ಎನ್ನುವ ಪೂರ್ತಿ ಕಲ್ಪನೆ ಅವಳಿಗಿತ್ತು. ಈ ರೀತಿ ಒಂದು ಗಂಭೀರ ಚಿಂತನೆ, ಜೀವನಪೂರ್ತಿ ಪರಿಶ್ರಮದಲ್ಲಿ ತೊಡಗಿ ಮೂಲ ಸಂಗೀತದ ಹುಡುಕಾಟದಲ್ಲಿರುವ ತಾಯಿಗೆ ಪ್ರೇಕ್ಷಕರಾದವರು ಹೇಗೆ ನಡೆದುಕೊಳ್ಳಬೇಕು? ಆತನ ಜವಾಬ್ದಾರಿ ಎಂತಹದ್ದು? ಅವಳ ಪ್ರಯಾಣದಲ್ಲಿ ಪ್ರೇಕ್ಷಕ ಸಹ ಪ್ರಯಾಣಿಕನಾಗಬಹುದಿತ್ತು! ತಾಯಿ ಕನಿಷ್ಟ ಅದನ್ನೇ ಬಯಸಿದ್ದು ಅನಿಸುತ್ತದೆ. ಈ ಪ್ರೇಕ್ಷಕನ ವಿಚಾರವನ್ನೇ ಮುಂದುವರಿಸುವುದಾದರೆ ನಿನ್ನೆಯ ಕಾರ್ಯಕ್ರಮವನ್ನು ಕೆಲವು ಬಾರಿ ಪ್ರೇಕ್ಷಕ “ತುಂಬಾ ಚೆನ್ನಾಗಿ ಆಗಿದೆ’ ಎಂದಾಗ ಆ ಪ್ರಸ್ತುತಿಯ ಕ್ಯಾಸೆಟನ್ನು ಕೇಳಿದ್ದಿದೆ. “ಅಯ್ಯೋ ಎಷ್ಟು ಕೆಟ್ಟದಾಗಿ ಹಾಡಿದ್ದೇನೆ. ತೋಡಿಯಲ್ಲಿ ಒಮ್ಮೆಯೂ ಅತಿ ಕೋಮಲ ರೆ ಹಚ್ಚಲೇ ಇಲ್ಲವಲ್ಲ’ ಎಂದು ಮರುಗಿ ನಾವು ಪ್ರೇಕ್ಷಕರ ಹೊಗಳಿಕೆಯನ್ನು ಹೇಗೆ ಕಾಳಜಿಯಿಂದ ತೆಗೆದುಕೊಳ್ಳಬೇಕು ಎಂದು ಜಾಗೃತಿವಹಿಸಿದ್ದಿದೆ. ಕಿಶೋರಿ ತಾಯಿಗೆ ಅವಳ ಬೊಗಸೆ ಮತ್ತು ಪ್ರೇಕ್ಷಕನ ಬೊಗಸೆಯ ಮಿತಿ ಹಾಗೂ ಅದರ ಕಾಳಜಿ ಸ್ಪಷ್ಟವಾಗಿಯೇ ಇತ್ತು. 

ಸ್ವರಗಳ ಹುಡುಕಾಟದ ಆಧ್ಯಾತ್ಮಿಕ ಅನುಭೂತಿಯ ದಾರಿ ಹೊರ ದೃಷ್ಟಿಯನ್ನು ಬಯಸುವುದಿಲ್ಲ. ಅದು ಬಯಸುವುದು ತನ್ನ ಕಡೆಗೆ ನೋಡುವ ಒಳಗಣ್ಣನ್ನು. ಮೊದಲು ಮಾಡಿದ್ದರೂ ನಂತರ ವಿದೇಶೀ ಪ್ರಯಾಣ, ಜುಗಲಬಂದಿ, ಫ್ಯೂಶನ್‌ ಎಲ್ಲವೂ ಇದಲ್ಲ ಇದಲ್ಲ ಎನ್ನುವ “ನೇತಿ ನೇತಿ’ ಜಾಗೃತವಾಗಿ ಇವು ದೊಂಬರಾಟ, ಸರ್ಕಸ್ಸಿನಂತೇ ಕಂಡು ಹೆಚ್ಚು ಹೆಚ್ಚು ಕರ್ಕಶವಾಗುತ್ತ ಬಂತು. ವಿದೇಶದಲ್ಲಿನ ಫ್ಯೂಶನ್ನಿನಲ್ಲಿ ಸ್ವರ ಮತ್ತು ಸಹೃದಯಿ ಎರಡೂ ಸಿಗಲಿಲ್ಲ ಎನಿಸುತ್ತದೆ. ಈ ಕಂಬೈಂಡ್‌ ಸ್ಟಡಿಯಲ್ಲಿ ಉತ್ತೀರ್ಣವಾಗುವುದು ಕಠಿಣವೆಂದು ಅಂದುಕೊಂಡಿರಬೇಕು. ಆದಷ್ಟು ಏಕಾಂತವನ್ನು ಬಯಸುವ ಈ ತಾಯಿಗೆ ಸ್ಪರ್ಧೆಯಲ್ಲಿ ಸ್ವರ ಹುಡುಕು ಎಂದರೆ? ಮದುವೆಯಲ್ಲಿ ಉಂಗುರ ಹುಡುಕಿದಂತೇ! ಘೋಂದಳ ಘೋಂದಳ. 

ಇದರ ನಡುವೆಯೇ ಕೆಲಕಾಲ ಅವಳ ಧ್ವನಿ ನಿಂತದ್ದಿದೆ. ಆ ಕಾಲದಲ್ಲಿ ಹಾಡಲಾಗಲಿಲ್ಲ. ಆ ಕಾಲವನ್ನೂ ದೇವರೇ ಕರುಣಿಸಿದ್ದು ಎಂದು ಹೇಳಬೇಕು. ಈ ರೀತಿಯ ಕರುಣೆ ಇನ್ನೂ ಕೆಲವು ಅಪ್ರತಿಮರಿಗಾಗಿದೆ. ಅವಳ ಬದುಕಿನ ಸ್ವರ ಸಾಧನೆಯ, ತನ್ನೊಳಗಿನ ಸ್ವರವನ್ನು ಹುಡುಕುವ, ಹುಡುಕಿದ ಅತಿ ಮುಖ್ಯ ಕಾಲವೆನ್ನುತ್ತೇನೆ.  

ನನಗೆ ಎರಡು ಪ್ರಶ್ನೆಗಳಿವೆ- ಮೊದಲನೆಯದು ಕಿಶೋರಿ ತಾಯಿ ತನ್ನ ಯಾವ ಧೋರಣೆಯನ್ನೂ ಕೇವಲ “ಇಂಟಲೆಕುcವಲ್‌ ಎಕ್ಸರ್‌ಸೈಜ್‌’ಗೆ ಸೀಮೀತವಾಗಿಸದೆ ಪ್ರಾಯೋಗಿಕವಾಗಿ ತೋರಿಸಿ, ಪಾಲಿಸಿದ್ದಳು. ಹಾಗಿದ್ದರೆ ತಾಯಿ ಎತ್ತಿದ ಸ್ವರ-ಭಾವ ಸಂಬಂಧಿ ವಿಚಾರಗಳು, ಸಂಶೋಧನೆ, ಘರಾಣ, ಫ್ಯೂಶನ್‌ ಇತ್ಯಾದಿ ಧೋರಣೆ ಮತ್ತು ನಿರ್ಧಾರಗಳನ್ನು ಇಂದಿನ ಸಂಗೀತಗಾರರ ಸಮುದಾಯ ಹೇಗೆ ಸ್ವೀಕರಿಸಿವೆ? ತಾಯಿಯ ಪಥದಲ್ಲಿ ನಡೆಯುತ್ತಿರುವ ಈಗಿನ ಸಂಗೀತಗಾರರು ಯಾರು? ಮತ್ತು ಆ ವಿಚಾರದ ಇಂದಿನ ತೊಡಕುಗಳೇನು? 

ಎರಡನೆಯದು ನನಗೆ ಸಾತ್ವಿಕ ಕುತೂಹಲವಿರುವುದು ಕಿಶೋರಿ ತಾಯಿ ಆಗ ಎತ್ತಿದ ಪ್ರಶ್ನೆಗಳನ್ನು ಈಗ ಎತ್ತಿದ್ದರೆ ಸಮಾಜ ಹೇಗೆ ಅದನ್ನು ಸ್ವೀಕರಿಸುತ್ತಿತ್ತು ಎಂದು. ಆಗ ಕಿಶೋರಿ ತಾಯಿ “ನನಗೆ ನಿಜವಾದ ಸಂಗೀತದ ಹುಡುಕಾಟಕ್ಕೆ ಘರಾನಾ ಪದ್ಧತಿ ಅಡ್ಡಿಯಾಗುತ್ತಿದೆ’ ಎಂದಾಗ ಬಹಳ ಚರ್ಚೆಯಾಯಿತು. ನನಗೆ ಅನಿಸುವುದು ಅದು ಹೆಚ್ಚಿಗೆ ಚರ್ಚೆಯಾಗಿದ್ದು ಅದರಲ್ಲಿದ್ದ ಇನ್ನೊಂದು ವಾಕ್ಯಕ್ಕೆ. 

ಅದೇನೆಂದರೆ “ಘರಾನಾ ಜಾತಿ ಪದ್ಧತಿಯಂತೇ, ಇದರಿಂದ ಹೊರ ಬರಬೇಕು’ ಎಂದು. ಈ ವಾಕ್ಯವೇ ಮೂಲ ವಿಷಯಕ್ಕಿಂತ ಹೆಚ್ಚು ಆಕರ್ಷಕ ವಾಯಿತೆಂದುಕೊಳ್ಳುತ್ತೇನೆ. ಹಾಗಾಗಿಯೇ, ಇಂದೂ ಈ ವಾಕ್ಯದ ಬಗ್ಗೆ ಚರ್ಚೆಯಾಗುತ್ತದೆ. ಅದೇ ಸಂದರ್ಭದಲ್ಲಿ ಸಂಪ್ರದಾಯವಾದಿಗಳು ಘರಾನಾ ಪದ್ಧತಿಯನ್ನು ಬಿಡುವು ದೆಂದರೆ ಹೇಗೆ ಎಂದು ವಿರೋಧಿಸಿದ್ದರು. ಘರಾನಾ ಪದ್ಧತಿ ಎನ್ನುವುದರ ಬದಲು “ನನ್ನದು ಭಾರತೀಯ ಮೂಲ ಸಂಗೀತ ತತ್ವ, ವೇದ ಉಪನಿಷತ್ತಿನ ದಾರಿ’ ಎಂದಿದ್ದರೆ ಸಂಪ್ರದಾಯವಾದಿಗಳು ಸುಮ್ಮನಿರುತ್ತಿದ್ದರೇನೋ ಮತ್ತು ಪ್ರಗತಿಪರರಿಗೆ ಹೆಚ್ಚು ಆಸಕ್ತಿದಾಯಕವಾಗುತ್ತಿರಲಿಲ್ಲವೇನೋ. ಮೊಗಲರ ಆಕ್ರಮಣದ ನಂತರ ಭಾರತೀಯ ಸಂಗೀತದ ದಿಕ್ಕು ಬದಲಾಯಿತು, ಸರ್ಕಸ್‌ಗಳು ಹೆಚ್ಚಾದವು ಎನ್ನುವುದನ್ನು ತಾಯಿ ಘಂಟಾಘೋಷವಾಗಿ ಹೇಳಿದ್ದಳು. ಆದರೆ ಇದು ಹೆಚ್ಚಿಗೆ ಚರ್ಚೆಯಾಗಲಿಲ್ಲ. ಫ್ಯೂಶನ್‌ ಇತ್ಯಾದಿ ವಿಶ್ವ ಸಂಗೀತದ ನಿಲುವುಗಳು ಅಷ್ಟು ಸೂಕ್ಷ್ಮ ವಿಷಯವಲ್ಲವಾದ್ದರಿಂದ ಅಲ್ಲೇ ತಣ್ಣಗಾಯಿತು. ಆದರೆ ಸಂಗೀತಗಾರರ ಸಮುದಾಯದಲ್ಲಿ ಒಳಒಳಗೇ ಚರ್ಚೆಯಾಗಿರಬೇಕು. ಲಾಭಕ್ಕೆ ಯಾವುದನ್ನೂ ಬಳಸಿಕೊಳ್ಳುವ, ವ್ಯಾವಹಾರಿಕ ಸಿದ್ಧಾಂತ, ಓಟು, ತನ್ನ ನಾಯಕನನ್ನು ಖುಷಿ ಪಡಿಸುವ ಜನರ ಗುಂಪು ಆಗಲೂ ಇತ್ತು, ಈಗಲೂ ಇದೆ. ಈಗಂತೂ ಅವು ಕಾರ್ಪೋರೇಟ್‌ ಆಗಿವೆ. ಆದರೆ ಈಗ ಕಿಶೋರಿ ತಾಯಿ ತನ್ನ ವಿಚಾರ ವ್ಯಕ್ತಪಡಿಸಿದ್ದರೆ ಇನ್ನೂ ಹೆಚ್ಚು ಚರ್ಚೆಯಾಗಿ ಧರ್ಮವಿರೋಧಿಯೋ, ಆ ವಿರೋಧಿಯೋ ಈ ವಿರೋಧಿಯೋ ಆಗಿ ಟಿಆರ್‌ಪಿಯ ಅಡಕತ್ತರಿಯಲ್ಲಿ ಸಿಲುಕಿ ಒದ್ದಾಡಬೇಕಿತ್ತೇನೋ! ನಡೆಯುವ ಚರ್ಚೆಯಲ್ಲಿ ಸಂಗೀತವನ್ನೊಂದು ಬಿಟ್ಟು ಬೇರೆಲ್ಲ ವಿಷಯವೂ ಚರ್ಚೆಯಾಗುತ್ತಿತ್ತು ಎನ್ನುವುದಂತೂ ಖಂಡಿತ.  

ಹೀಗೆಲ್ಲ ಇರುವಾಗ ಸ್ವರಗಳನ್ನು ಹುಡುಕುವುದು ಹೇಗೆ? ಮತ್ತು ಯಾವಾಗ?

ಸಚ್ಚಿದಾನಂದ ಹೆಗಡೆ

ಟಾಪ್ ನ್ಯೂಸ್

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.