ಅಮೆರಿಕದಲ್ಲಿ ಗಣೇಶ

Team Udayavani, Sep 1, 2019, 5:50 AM IST

ಗಣೇಶೋತ್ಸವ ಎಂಬ ಸಮಷ್ಟಿ ಪ್ರಜ್ಞೆ

ಪ್ರಪಂಚಕ್ಕೆ ಪ್ರದಕ್ಷಿಣೆ ಹಾಕುವ ಸ್ಪರ್ಧೆಯಲ್ಲಿ ಅಣ್ಣ ಕಾರ್ತಿಕೇಯ ನವಿಲನ್ನೇರಿ ನಿಜವಾಗಿಯೂ ಭೂಮಂಡಲಕ್ಕೊಂದು ಪ್ರದಕ್ಷಿಣೆ ಹಾಕಿ ಬಂದ. ಬುದ್ಧಿವಂತ ತಮ್ಮ ಗಣೇಶ, ತಾಯಿ-ತಂದೆಯರೇ ಪ್ರಪಂಚ ಎಂದು ಬಗೆದು ಅವರಿಗೊಂದು ಪ್ರದಕ್ಷಿಣೆ ಸುತ್ತಿ ತಾನೇ ಗೆದ್ದವನೆಂದ! ಈಗ ನೋಡಿದರೆ ಗಣೇಶನೇ ಪ್ರಪಂಚ ಪರ್ಯಟನೆ ಮಾಡುತ್ತಿದ್ದಾನೆ, ಪ್ರಪಂಚದಲ್ಲೆಲ್ಲ ಪ್ರಸಿದ್ಧಿ ಪಡೆದಿದ್ದಾನೆ.

ಕಾರ್ತಿಕೇಯನ ಪರಿಚಯ ಕೆಲವರಿಗಷ್ಟೇ ಇದೆಯಾದರೆ “ಎಲಿಫೆಂಟ್‌ ಹೆಡ್ಡೆಡ್‌ ಗಾಡ್‌’ ಎಂದು ಗಣೇಶ‌ ಎಲ್ಲರಿಗೂ ಗೊತ್ತು. ಆತನ ವಿಸ್ಮಯಕಾರಿ ವಿಚಿತ್ರ ರೂಪವೂ ಬಹುಶಃ ಪ್ರಸಿದ್ಧಿಗೊಂದು ಕಾರಣ. ಹಿಂದೂಗಳಲ್ಲದವರಿಗೂ ಗಣೇಶನೆಂದರೆ ಎಲ್ಲಿಲ್ಲದ ಆಸಕ್ತಿ, ಏನೋ ಒಂದು ವಿಶೇಷ ಕುತೂಹಲ.

ಅಮೆರಿಕದ ಜನಪ್ರಿಯ ಥೀಮ್‌ ಪಾರ್ಕ್‌ ಡಿಸ್ನಿ ಲ್ಯಾಂಡ್‌ನ‌ ಜಂಗಲ್‌ ಕ್ರೂಸ್‌ನಲ್ಲಿ ಸಾಗುವಾಗ ಗಣೇಶನ ದೊಡ್ಡದೊಂದು ಮೂರ್ತಿ ಕಲ್ಲಿನಲ್ಲಿ ಕೆತ್ತಿದ್ದು ಕಾಣಿಸುತ್ತದೆ. ಟೂರಿಸ್ಟ್‌ ಗೈಡುಗಳು ದಟ್‌ ವನ್‌ ಈಸ್‌ ಹಿಂಡೂ ಗಾಡ್‌ ಗನೇಶಾ… ಎಂದು ಹೆಮ್ಮೆಯಿಂದ ಅದನ್ನು ಪರಿಚಯಿಸುತ್ತಾರೆ. ಪ್ರವಾಸಿಗರಲ್ಲಿ ಕೆಲವರು “ವಾವ್‌!’ ಎನ್ನುತ್ತ ಫೋಟೊ ಕ್ಲಿಕ್ಕಿಸುತ್ತಾರೆ. ಕೆಲವರು ಭಕ್ತಿ ಉಕ್ಕಿಬಂದು ಬಸ್ಕಿ ತೆಗೆಯುವ ಟಿಪಿಕಲ್‌ ಭಂಗಿಯಲ್ಲಿ ಗಣೇಶನಿಗೆ ನಮಸ್ಕಾರ ಮಾಡುವವರೂ ಇರುತ್ತಾರೆ. ಡಿಸ್ನಿಯ ಲಾಂಛನ ಮಿಕ್ಕಿಮೌಸ್‌ ಇಲಿಗೆ ಜೊತೆಯಾಗಿ ಈಗಿನ್ನು “ಮಿಕ್ಕಿಗಣೇಶ ಡಿಸ್ನಿಲ್ಯಾಂಡ್‌ನ‌ ಪ್ಯಾರಿಸ್‌, ದುಬೈ ಮತ್ತು ಜಪಾನ್‌ ಶಾಖೆಗಳಲ್ಲೂ ಸ್ಥಾಪಿತನಾಗಲಿದ್ದಾನಂತೆ.

ಇಂತಿರುವ ಗಣೇಶನನ್ನು ಅನಿವಾಸಿ ಭಾರತೀಯರು ನೆಚ್ಚಿಕೊಳ್ಳದೆ ಅಪ್ಪಿಕೊಳ್ಳದೆ ಇರುತ್ತಾರೆಯೇ! ಕಾರುಗಳಲ್ಲಿ ಡ್ಯಾಷ್‌ಬೋರ್ಡ್‌ ಮೇಲೆ, ಆಫೀಸುಗಳಲ್ಲಿ ಡೆಸ್ಕ್-ಕ್ಯೂಬಿಕಲ್‌ಗ‌ಳಲ್ಲೂ ಅವನು ಸದಾ ವಿರಾಜಮಾನ. ಮನೆಗಳಲ್ಲಿ ದೇವರಕೋಣೆಯಲ್ಲಂತೂ ಹೌದೇಹೌದು. ಅಮೆರಿಕದ ದೊಡ್ಡ ನಗರಗಳಲ್ಲಷ್ಟೇ ಅಲ್ಲ ಸಣ್ಣಪುಟ್ಟ ಪಟ್ಟಣಗಳಲ್ಲೂ ಈಗ ಹಿಂದೂ ದೇವಾಲಯಗಳ ಸಂಖ್ಯೆ ಸಾಕಷ್ಟಿದೆ. ಅಲ್ಲೆಲ್ಲ ಗಣೇಶ ಇದ್ದಾನೆ. ನ್ಯೂಯಾರ್ಕ್‌ ನಗರದ ಹೃದಯಭಾಗದಲ್ಲೇ ಇರುವ ಫ್ಲಷಿಂಗ್‌ ಎಂಬಲ್ಲಿ ಗಣೇಶನದೇ ದೇವಸ್ಥಾನವಿದೆ‌, ಅದು ಬಹಳ ಪ್ರಸಿದ್ಧ ಕೂಡ. ದೇವರ ದರ್ಶನದ ಜತೆಜತೆಗೇ ಅಲ್ಲಿನ ಕೆಫೆಟೇರಿಯಾದಲ್ಲಿ ಮಾರಲಾಗುವ ಭಾರತೀಯ ತಿಂಡಿ-ತಿನಸುಗಳ ಆಕರ್ಷಣೆಯಿಂದಾಗಿ ಅಮೆರಿಕನ್ನರೂ ಆ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ವಾಷಿಂಗ್ಟನ್‌ ಡಿಸಿ ಪ್ರದೇಶದಲ್ಲಿಯೂ, ಈಗಾಗಲೇ ಇರುವ ಸುಮಾರು ಇಪ್ಪತ್ತೆçದು ದೇವಸ್ಥಾನಗಳ ಪಟ್ಟಿಗೆ ಇದೀಗ ಹೊಸದಾಗಿ ಸೇರ್ಪಡೆಯಾಗಿರುವುದು ಮೇರಿಲ್ಯಾಂಡ್‌ ಸಂಸ್ಥಾನದ ಗ್ಲೆನ್‌ ಬನೀì ಎಂಬಲ್ಲಿನ ಸಿದ್ಧಿವಿನಾಯಕ ದೇವಸ್ಥಾನ. ಇದರ ಸ್ಥಾಪಕ ಅರ್ಚಕರು ಕಾರ್ಕಳದ ದುರ್ಗ ಮೂಲದ ಸತ್ಯನಾರಾಯಣ ಮರಾಠೆಯವರು ಎನ್ನುವುದೂ ಇಲ್ಲಿ ಉಲ್ಲೇಖನೀಯ. ಅಮೆರಿಕದಲ್ಲಿ ಹೆಚ್ಚಾಕಡಿಮೆ ಎಲ್ಲ ದೇವಸ್ಥಾನಗಳಲ್ಲೂ ಆಯಾ ಪಟ್ಟಣಗಳಲ್ಲಿ ನೆಲೆಸಿರುವ ಭಾರತೀಯರು ಸೇರಿ ಹಿಂದೂ ಹಬ್ಬಗಳನ್ನು ಭಕ್ತಿಶ್ರದ್ಧೆಗಳಿಂದ ಆಚರಿಸುವ ಕ್ರಮ ಒಂದು ಒಳ್ಳೆಯ ಸಂಪ್ರದಾಯವಾಗಿ ಬೆಳೆದುಬಂದಿದೆ. ಅದರಲ್ಲೂ ಗಣೇಶಚೌತಿ, ನವರಾತ್ರಿ, ದೀಪಾವಳಿ ಮುಂತಾದುವು ವೈಭವಪೂರ್ಣವಾಗಿ ಜಾತ್ರೆಯ ಸ್ವರೂಪ ಪಡೆದುಕೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆ.

ದೇವಸ್ಥಾನಗಳಷ್ಟೇ ಅಲ್ಲದೆ ಇಲ್ಲಿನ ಭಾರತೀಯರು ಸ್ಥಾಪಿಸಿರುವ ಭಾಷಾವಾರು ಸಂಘಟನೆಗಳೂ ಸಂಕ್ರಾಂತಿ, ಯುಗಾದಿ, ಚೌತಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಆಯಾ ಹಬ್ಬಗಳ ಪಂಚಾಂಗ ಪ್ರಕಾರ ದಿನದಂದು ಅಲ್ಲದಿದ್ದರೂ ಅನುಕೂಲಸಿಂಧು ಎಂದುಕೊಂಡು ಅದಕ್ಕೆ ಆಸುಪಾಸಿನ ವಾರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಸಾಮಾನ್ಯವಾಗಿ ಸ್ಥಳೀಯ ಶಾಲೆಗಳ ಆಡಿಟೋರಿಯಮ್‌ಗಳನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆದುಕೊಂಡು ಹಾಡು-ಹಸೆ, ಸಂಗೀತ ನೃತ್ಯ ನಾಟಕ ಪ್ರದರ್ಶನ ಇತ್ಯಾದಿ ನಡೆಯುತ್ತವೆ. ಭರ್ಜರಿಯಾಗಿ ಹಬ್ಬದೂಟ ಇರುತ್ತದೆ.

ಈಗೀಗ “ಬಾಳೆಎಲೆಯಲ್ಲಿ ಊಟ’ ಈ ಸಾಂಸ್ಕೃತಿಕ ಉತ್ಸವಗಳ ಪ್ರಧಾನ ಆಕರ್ಷಣೆ ಆಗಿರುವುದೂ ಇದೆ. ವಾಷಿಂಗ್ಟನ್‌ ಡಿಸಿ ಪ್ರದೇಶದಲ್ಲಿರುವ ಕಾವೇರಿ ಕನ್ನಡಸಂಘದಲ್ಲಿಯೂ ಪ್ರತಿವರ್ಷ ಗಣೇಶ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಈ ವರ್ಷದ ಕಾರ್ಯಕ್ರಮ ಶನಿವಾರ ಸೆಪ್ಟೆಂಬರ್‌ 7ರಂದು ಇದೆ. ಸುಮಾರು ಏಳೆಂಟು ವರ್ಷಗಳಿಂದೀಚೆಗೆ ಇಲ್ಲಿನ ಕನ್ನಡಿಗ, ಮೂಲತಃ ಉಡುಪಿಯವರಾದ ಹರಿದಾಸ್‌ ಲಹರಿ ಅವರು ಗಣೇಶನ ವಿಗ್ರಹ ತಯಾರಿಸುತ್ತಾರೆ. ಇನ್ನೊಬ್ಬ ಕನ್ನಡಿಗ ರಾಜ್‌ ಪರ್ತಾಜೆ ಎಂಬುವವರು ಇಲ್ಲಿಯೇ ಒಂದು ದೊಡ್ಡ ಪಲ್ಲಕ್ಕಿಯನ್ನು ತಯಾರಿಸಿದ್ದಾರೆ. ಗಣೇಶನ ವಿಗ್ರಹವನ್ನು ಅದರಲ್ಲಿಟ್ಟು ಮೆರವಣಿಗೆಯಲ್ಲಿ ತಂದು ಸ್ಥಾಪಿಸಿ ಪೂಜೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಸಂಭ್ರಮ-ಸಡಗರ ಊರಲ್ಲಿದ್ದಂತೆಯೇ ಭಾಸವಾಗಬೇಕು ಎಂದು ಪ್ರತಿಯೊಬ್ಬರಲ್ಲೂ ತುಡಿತ. ಹರಿದಾಸ್‌ ಲಹರಿ ಅವರ ಗಣೇಶವಿಗ್ರಹ ರಚನಾಕೌಶಲ ಎಷ್ಟು ಪ್ರಸಿದ್ಧವೆಂದರೆ ಅವರಿಗೀಗ ವಿಗ್ರಹ ತಯಾರಿಸಲಿಕ್ಕೆ ಬೇರೆ ಕಡೆಗಳಿಂದಲೂ ಬೇಡಿಕೆ ಬರಲಾರಂಭಿಸಿದೆ. ನಾಲ್ಕೈದು ವರ್ಷಗಳ ಹಿಂದೆ ಇಲ್ಲಿನ ಶಿವವಿಷ್ಣು ದೇವಸ್ಥಾನದ ಗಣೇಶೋತ್ಸವಕ್ಕಾಗಿ ಆರು ಅಡಿ ಎತ್ತರದ ಬೃಹತ್‌ ಗಣೇಶನನ್ನು ಪರಿಸರಸ್ನೇಹಿ ಸಾಮಗ್ರಿಗಳನ್ನಷ್ಟೇ ಬಳಸಿ ಹರಿದಾಸ್‌ ತಯಾರಿಸಿದ್ದರು. ಪರಿಸರಸ್ನೇಹಿ ಏಕೆಂದರೆ, ವಿಗ್ರಹ ವಿಸರ್ಜನೆಗೆ ಇಲ್ಲಿನ ಸ್ಥಳೀಯ ಕೆರೆ-ಸರೋವರಗಳನ್ನು ಬಳಸುವುದಾದರೆ ಅದಕ್ಕೆ ಸೂಕ್ತ ದಾಖಲೆಗಳನ್ನೊದಗಿಸಿ ಪರವಾನಗಿ ಪಡೆಯಬೇಕಾಗುತ್ತದೆ.

ಅಕ್ಕ ಮತ್ತು ನಾವಿಕ ಸಂಸ್ಥೆಗಳು ಏರ್ಪಡಿಸುವ ವಿಶ್ವ ಕನ್ನಡ ಸಮ್ಮೇಳನಗಳೂ ಸರಿಸುಮಾರಾಗಿ ಗಣೇಶೋತ್ಸವದ ಆಸುಪಾಸಿನಲ್ಲೇ ನಡೆಯುವುದರಿಂದ ಸಮ್ಮೇಳನ ಸಭಾಂಗಣದಲ್ಲೇ ಸಾಮೂಹಿಕ ಗಣೇಶಪೂಜೆಯನ್ನು ಹಮ್ಮಿಕೊಳ್ಳುತ್ತಾರೆ. ಅದೊಂದು ರೋಮಾಂಚಕಾರಿ ಸುಂದರ ದೃಶ್ಯ.

ಸಮ್ಮೇಳನಕ್ಕೆ ಬರುವ ಸಾವಿರಾರು ಅಮೆರಿಕನ್ನಡಿಗರು ಒಂದೇ ಕಡೆ ಸೇರಿ ಚೌತಿಹಬ್ಬ ಆಚರಿಸುವುದು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಬಾರಿಯ “ನಾವಿಕ’ ಸಮ್ಮೇಳನ ಸಿನ್ಸಿನ್ನಾಟಿ ನಗರದಲ್ಲಿ ಆಯೋಜನೆಯಾಗಿದ್ದು ಅಲ್ಲಿಯೂ ಗಣೇಶಪೂಜೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಲಾಸ್‌ ಏಂಜಲೀಸ್‌ನಲ್ಲಿರುವ ಕನ್ನಡಿಗ ವಲ್ಲೀಶ ಶಾಸ್ತ್ರೀಯವರು ಇಂಥ ವಿಷಯಗಳಲ್ಲಿ ಅತ್ಯುತ್ಸಾಹಿ. ಕೆಲ ವರ್ಷಗಳ ಹಿಂದೆ ಒಮ್ಮೆ ಅವರು ನೂರಾರು ಗಣೇಶ ವಿಗ್ರಹಗಳನ್ನು ಭಾರತದಿಂದ ಅಮೆರಿಕಕ್ಕೆ ಹಡಗಿನ ಮೂಲಕ ತರಿಸಿ ಲಾಸ್‌ ಏಂಜಲೀಸ್‌ನ ಕನ್ನಡ ಸಂಘದ ಆಶ್ರಯದಲ್ಲಿ ಅದ್ದೂರಿಯಾಗಿ ಸಾಮೂಹಿಕ ಗಣೇಶಪೂಜೆ ಕಾರ್ಯಕ್ರಮ ಏರ್ಪಡಿಸಿದ್ದರು!
ಗಣೇಶ ಹಬ್ಬದ ಸಂಭ್ರಮ ಹೆಚ್ಚಿದೆ !

ಒಟ್ಟಾರೆಯಾಗಿ ಭಕ್ತಿ ಮತ್ತು ಅದಕ್ಕಿಂತ ಹೆಚ್ಚಾಗಿ ಪ್ರದರ್ಶನಪ್ರಿಯತೆ (ಸೋಶಿಯಲ್‌ ಮೀಡಿಯಾ ಪ್ರಭಾವವೆಂದರೂ ಸರಿಯೇ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವುದರಿಂದ ಚೌತಿಯ ಸಂಭ್ರಮವೂ ಅದಕ್ಕಿಂತ ಹೊರತಾಗಿಲ್ಲ. ತಿಂಗಳ ಹಿಂದೆಯೇ ಇಲ್ಲಿನ ಇಂಡಿಯನ್‌ ಗ್ರೋಸರಿ ಸ್ಟೋರ್‌ಗಳಲ್ಲಿ ಬಣ್ಣಬಣ್ಣದ ವಿವಿಧ ಗಾತ್ರಗಳ ಗಣೇಶವಿಗ್ರಹಗಳು, ಪೂಜಾಸಾಮಗ್ರಿಗಳು ಸಾಲುಸಾಲಾಗಿ ಮಾರಾಟಕ್ಕೆ ಬಂದಿವೆ. ಸಾಹಸಿಗರು ಸೃಜನಶೀಲರು ಇಲ್ಲಿಯೇ ಹೋಮ್‌ ಡಿಪೋ ಮುಂತಾದ “ಮನೆ ನಿರ್ಮಾಣ ಸಾಮಗ್ರಿಗಳು ಸಿಗುವ ಅಂಗಡಿ’ಗಳಲ್ಲಿ ಜೇಡಿ ಮಣ್ಣನ್ನು ಖರೀದಿಸಿ ತಾವೇ ಗಣೇಶವಿಗ್ರಹ ರಚಿಸುವವರೂ ಇದ್ದಾರೆ. ಅಮೆಜಾನ್‌ನಲ್ಲಿ ಆನ್‌ಲೈನ್‌ ಆರ್ಡರ್‌ ಮಾಡಿ ಮಣ್ಣು ತರಿಸಿಕೊಂಡು ಗಣೇಶವಿಗ್ರಹ ನಿರ್ಮಿಸುವವರಿದ್ದಾರೆ. ವಾರಾಂತ್ಯದಲ್ಲಿ ಮಕ್ಕಳಿಗೆ ಗಣೇಶವಿಗ್ರಹ ತಯಾರಿಕೆಯ ಕಾರ್ಯಾಗಾರಗಳನ್ನು ಮಾಡುವವರಿದ್ದಾರೆ.

ಹಿಂದಿ, ಗುಜರಾತಿ, ತೆಲುಗು, ಮರಾಠಿ, ಕನ್ನಡ, ತಮಿಳು… ಈ ಎಲ್ಲ ಭಾಷಿಕರಿಗೂ ಗಣೇಶ ನೆಚ್ಚಿನ ದೇವರು. ಇಳಿಕೆ ಕ್ರಮದಲ್ಲಿ ಈ ಭಾಷಿಕರ ಸಂಖ್ಯೆ ಇಲ್ಲಿ ಗಣನೀಯ ಪ್ರಮಾಣದಲ್ಲಿ ಇದೆ. ಇಲ್ಲಿನ ದೊಡ್ಡದೊಡ್ಡ ನಗರಗಳ ರೆಸಿಡೆನ್ಷಿಯಲ್‌ ಪ್ರದೇಶಗಳಲ್ಲಿ ಭಾಷಾಭೇದವಿಲ್ಲದೆ ಗಣೇಶೋತ್ಸವಕ್ಕೆಂದೇ ಸಂಘಟನೆಗಳು ಹುಟ್ಟಿಕೊಂಡು ದೊಡ್ಡ ಪೆಂಡಾಲ್‌ ಕಟ್ಟಿ ಬೃಹತ್‌ ವಿಗ್ರಹ ಸ್ಥಾಪಿಸಿ ವಾರವಿಡೀ ವೈಭವೋಪೇತ ಜಾತ್ರೆ ನಡೆಸುವುದು, ಮುಂಬಯಿ, ಪುಣೆ, ಹೈದರಾಬಾದ್‌ ಮುಂತಾದ ನಗರಗಳಲ್ಲಿನ ಸಾರ್ವಜನಿಕ ಗಣೇಶೋತ್ಸವಗಳಿಗೆ ಸಾಟಿಯಾಗುವಂಥ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಹೆಚ್ಚಿದೆ. ಭಾರತೀಯರ ಸಂಖ್ಯಾಬಾಹುಳ್ಯವಿರುವ ಕ್ಯಾಲಿಫೋರ್ನಿಯಾದ ಕೊಲ್ಲಿಪ್ರದೇಶ, ನ್ಯೂಜೆರ್ಸಿ, ಫಿಲಡೆಲ್ಫಿಯಾ, ಫ್ಲೋರಿಡಾ, ಹ್ಯೂಸ್ಟನ್‌, ಡಲ್ಲಾಸ್‌, ಶಿಕಾಗೋ ಮುಂತಾದ ನಗರಗಳಲ್ಲಿ ಕಾಣಿಸಿಕೊಳ್ಳುವ ಗಣೇಶ ಪೆಂಡಾಲ್‌ಗ‌ಳನ್ನು ನೋಡಿದರಂತೂ ಇದು ಅಮೆರಿಕ ಹೌದೇ ಅಥವಾ ನಾವೇನಾದರೂ ಭಾರತದಲ್ಲಿದ್ದೇವೆಯೇ ಅಂತನ್ನಿಸಬೇಕು ಅಷ್ಟೂ ಗೌಜಿ-ಗದ್ದಲ. ಹೊರಗಡೆ ಬಯಲು ಪ್ರದೇಶದಲ್ಲಿ ಡೇರೆ ಕಟ್ಟಲಿಕ್ಕಾಗದಿದ್ದರೆ ಮಾಲ್‌ಗ‌ಳ ಒಳಗೆ ಟೆಂಟ್‌ ಕಟ್ಟಿ ಗಣೇಶನ ಮೂರ್ತಿ ಸ್ಥಾಪನೆಯಾಗುತ್ತದೆ! ವಿವಿಧ ಸ್ಪರ್ಧೆಗಳು, ಕಲಾಪ್ರದರ್ಶನಗಳು, ಚಿತ್ರನಟ-ನಟಿಯರು, ಹಿನ್ನೆಲೆ ಗಾಯಕರು ಭಾಗವಹಿಸುವ ರಸಮಂಜರಿ ಕಾರ್ಯಕ್ರಮಗಳು… ಬರೀ ಮೋಜು-ಮಸ್ತಿ ಮಾತ್ರವಲ್ಲದೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರಗಳು, ತಾಯ್ನಾಡಿನಲ್ಲಿ ಪ್ರವಾಹ ಬರಗಾಲ ಮೊದಲಾದ ಪ್ರಕೃತಿವಿಕೋಪಗಳಿಗೆ ತುತ್ತಾದ ಸಂತ್ರಸ್ತರಿಗೆ ನೆರವಾಗುವಂತೆ ದತ್ತಿನಿಧಿ ಸಂಗ್ರಹ- ಇಂತಹ ಕೆಲವು ಸಮಾಜಮುಖೀ ಚಟುವಟಿಕೆಗಳೂ ಈ ಉತ್ಸವಗಳಲ್ಲಿ ಸೇರ್ಪಡೆಗೊಳ್ಳುತ್ತಿರುವುದು ಆರೋಗ್ಯಕರ ಮತ್ತು ಪ್ರಶಂಸನೀಯ ಬೆಳವಣಿಗೆ.

ಅನಿವಾಸಿಗಳಿಗೆ ಕರ್ಮಭೂಮಿ- ಜನ್ಮಭೂಮಿಗಳ ನಡುವೆ ಭಾವನಾತ್ಮಕ ಸೇತುವೆಯನ್ನು ಊರ್ಜಿತದಲ್ಲಿಡಲು ಇಂತಹ ಹಬ್ಬಗಳ ಆಚರಣೆ ಒಂದು ಒಳ್ಳೆಯ ಉಪಾಯ. ಅದರಲ್ಲೂ ಗಣೇಶ ಚೌತಿಯಂಥ ಹಬ್ಬದಲ್ಲಿ ಧಾರ್ಮಿಕ ಮಹಣ್ತೀವೂ ಇರುವುದು ಭಾವಬಂಧವನ್ನು ಇನ್ನಷ್ಟು ಗಾಢವಾಗಿಸುತ್ತದೆ.

ಬಾಲ್ಯದ ನೆನಪುಗಳ ಹಳವಂಡಕ್ಕಷ್ಟೇ ಸೀಮಿತವಾಗಿರದೆ, ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೂ ತೋರಿಸುವುದಕ್ಕೆ, ದಾಟಿಸುವುದಕ್ಕೆ ಹಬ್ಬಗಳ ಆಚರಣೆ ಸುಲಭ ಸುಸಂದರ್ಭ ಆಗುತ್ತದೆ. ಆಧುನಿಕ ತಂತ್ರಜ್ಞಾನದಿಂದಾಗಿ ಸಂಬಂಧಗಳು ಶಿಥಿಲವಾಗುತ್ತಿವೆಯೆಂದೋ, ಒಬ್ಬೊಬ್ಬರೂ ಒಂದೊಂದು ದ್ವೀಪದಂತಾಗಿದ್ದಾರೆಂದೋ ದೂರುವ ಸನ್ನಿವೇಶ ಬಂದಿರುವಾಗ ಈ ರೀತಿ ಹಬ್ಬಗಳ ಆಚರಣೆ, ಖಾಸಗಿ ವಲಯದಿಂದ ಹೊರಬಂದು ಸಮಷ್ಟಿ ಪ್ರಜ್ಞೆ ಮೆರೆಯುವುದು, ದೇಶ-ಭಾಷೆಗಳ ಗಡಿಗಳನ್ನು ಮೀರಿ ಎಲ್ಲರೂ ಒಂದುಗೂಡುವುದು, ಮನುಕುಲದ ಹಿತದೃಷ್ಟಿಯಿಂದಲೂ ಒಳ್ಳೆಯದೇ. ಗಣೇಶನ ವಿಗ್ರಹ ಸಾಂಕೇತಿಕ ಅಷ್ಟೇ. ಅಂತಿಮವಾಗಿ ದೇವರು ನೆಲೆಸಬೇಕಾದ್ದು, ನೆಲೆಸಿದ್ದಾನೆಂದು ಪ್ರತಿಫ‌ಲನವಾಗಬೇಕಾದ್ದು ನಮ್ಮನಮ್ಮ ಎದೆಯ ಗುಡಿಯಲ್ಲೇ ತಾನೆ?

– ಶ್ರೀವತ್ಸ ಜೋಶಿ ವಾಷಿಂಗ್ಟನ್‌ ಡಿಸಿ.
***

ಕನ್ನಡಿಯಲ್ಲಿ ಕಂಡ ಚೌತಿ ಚಂದ್ರ
ನಮ್ಮ ಅನುಕೂಲಕ್ಕೆ ತದಿಗೆ, ಚೌತಿಗಳನ್ನು ಭಾನುವಾರ ಮಾಡುವ ಈ ನಾಡಿನಲ್ಲಿ ಸೂರ್ಯ ಭಾರತಕ್ಕಿಂತ ಹನ್ನೊಂದು ಗಂಟೆ ತಡವಾಗಿ ಉದಿಸಿದರೂ ಹಬ್ಬಗಳು ಒಂದು ದಿನ ಮುಂಚೆಯೇ ಬರುತ್ತವೆ. ಕಾರಣ ಗೊತ್ತಿರುವುದು ಹಿಂದುಪಂಚಾಂಗ್‌.ಕಾಮ್‌ಗೆ ಅಥವಾ ಶ್ರೀವತ್ಸ ಜೋಶಿಯವರಿಗೆ ಮಾತ್ರ. ಉಳಿದ ನನ್ನಂಥವರಿಗೆ ಹಬ್ಬ ಭಾನುವಾರ ಬಂದಿರುವುದೇ ಖುಷಿ. ಬೆಳ್ಳಂಬೆಳಿಗ್ಗೆ ಆರು ಗಂಟೆಗೆ ಎದ್ದು ಮಡಿಯಲ್ಲಿ ಮೋದಕ ಮಾಡಿ, ಭಾರತೀಯ ದಿನಸಿಯಂಗಡಿಯಲ್ಲಿ “ಈ ಬಾರಿ ಪ್ಲಾಸ್ಟರ್‌ ಅಲ್ಲವೇ ಅಲ್ಲ ಸರ್‌. ಇದು ಪರಿಸರಪ್ರೇಮಿ ಗಣೇಶ, ಒಂದೇ ಒಂದು ತೊಟ್ಟು ನೀರು ಮೈಮೇಲೆ ಬಿದ್ದರೂ ಕರಗಲಿಕ್ಕೆ ಶುರುಮಾಡ್ತಾನೆ, ಹುಷಾರು’ ಎಂದು ಎಚ್ಚರಿಸಿಕೊಟ್ಟಿರುವ ಗಣೇಶನನ್ನು “ಬೆನಕ ಬೆನಕ, ಏಕದಂತ’ ಹೇಳಿ ಪ್ರತಿಷ್ಠಾಪನೆ ಮಾಡುತ್ತೇನೆ.

ಒಂದು ಕಾಲದಲ್ಲಿ ಕೆಸೆಟ್ಟಲ್ಲಿ ಮಂತ್ರ ಹೇಳಿದ್ದ ಗಣಪತಿ ಶಾಸಿŒಗಳು ಈಗ ಯೂಟ್ಯೂಬಿನಿಂದ ಸ್ಟ್ರೀಮ್‌ ಆಗುತ್ತಾರೆ. ಪಾಪ, ಅವರೆಲ್ಲಿ¨ªಾರೋ ಗೊತ್ತಿಲ್ಲ. “ಬಲಗೈಯಿಂದ ಪಂಚಪಾತ್ರೆಯಲ್ಲಿರುವ ನೀರನ್ನು ಉದ್ಧರಣೆಯಿಂದ ಮೂರು ಸಾರಿ ಪ್ರೋಕ್ಷಣೆ ಮಾಡಬೇಕು’ ಎನ್ನುವ ಅವರ ಧ್ವನಿ ಎಲ್ಲ ಎನ್ನಾರೈಗಳ ಮನೆಯಲ್ಲಿ ವರ್ಷಕ್ಕೊಮ್ಮೆಯಾದರೂ ಕೇಳಿ ಅಮರವಾಗಿ ಉಳಿಯುತ್ತದೆ.

ಅಂದೇ ಗೌರಿ ಪೂಜೆಯಾದರೂ ಮನೆಯಲ್ಲಿ ಗೌರಮ್ಮನನ್ನು ಕೂಡಿಸುವ ಸಂಪ್ರದಾಯವಿಲ್ಲದಿರುವುದರಿಂದ ಸ್ನೇಹಿತೆಯ ಮನೆಗೆ ಹೋಗಲು ಈಕೆ ಎಲ್ಲ ಸಿದ್ಧ ಮಾಡಿಕೊಂಡಿ¨ªಾಳೆ. ಬೇಸ್‌ಮೆಂಟಿನಲ್ಲಿ ಜತನವಾಗಿ ಕಾಪಿಟ್ಟುಕೊಂಡಿದ್ದ ಮರದ ಜತೆ ಬೇರೆ ಮುತ್ತೈದೆಯರ ಜತೆ ಕೈ ಬದಲಾಯಿಸಿಕೊಳ್ಳಲು ಸಿದ್ಧವಾಗಿ ಕೂತಿದೆ. ಆಗಸ್ಟ್‌ ತಿಂಗಳ ಮಿನೆಸೊಟಾದ ಬೆಳಗಿನ ತಂಪಲ್ಲಿ ಮನೆಯ ಮುಂದೆ ರಂಗೋಲಿ ಅರಳಿದೆ.

ಕಳೆದ ಬಾರಿ ಬೆಂಗಳೂರಿಗೆ ಹೋದಾಗ ತಂದ ಜಾಗಟೆಯನ್ನು ಮಂಗಳಾರತಿಯ ನಂತರ ಮಗ ಬಾರಿಸಲು ನಿ¨ªೆಗಣ್ಣಿನಲ್ಲಿ ಏಳುತ್ತಾನೆ. ಹಬ್ಬದ ದಿನವಾದರೂ ಬೇಗ ಎದ್ದು ಸ್ನಾನ ಮಾಡಬಾರದೇನೋ ಎಂದು ಈಕೆ ಗೊಣಗುತ್ತಾಳೆ. “ಅಮ್ಮ, ಇವತ್ತು ಒಂದು ದಿನ ರಜಾ. ನಾಳೆಯಿಂದ ಸ್ಕೂಲು ಶುರು’ ಎಂದು ಮಸ್ಕಾ ಹೊಡೆದು, ಜಾಗಟೆ ಬಾರಿಸಿ ಮತ್ತೆ ಹಾಸಿಗೆ ಸೇರುತ್ತಾನೆ. ನೈವೇದ್ಯಕ್ಕೆ ಕಾಯಿ, ಬಾಳೆಹಣ್ಣು, ಸಿಕ್ಕಿದೆ, ಜೇನುತುಪ್ಪದಲ್ಲಿ ಜಿಲ್ಯಾಟಿನ್‌ ಸೇರಿಸಿರಬಹುದೆಂಬ ಭಯದಿಂದ ನೈವೇದ್ಯಕ್ಕೆ ಇಟ್ಟಿಲ್ಲ. ಎಳನೀರು ಚೀನಿ ಅಂಗಡಿಯದು. ನವಗ್ರಹ ಸಾಮಾನು ಅಮೆಜಾನಿನಿಂದ ಬಂದದ್ದು. ಎÇÉೆಲ್ಲಿ ನೈವೇದ್ಯದ ಸಾಮಾನು ಸಿಕ್ಕಿಲ್ಲವೋ ಅಲ್ಲಿ ಗಣಪತಿ ಶಾಸಿŒಗಳು ಹೇಳಿದಂತೆ ಹೂವು, ಅಕ್ಷತೆ ನಡೆಯುತ್ತದೆ. ಮಹಾಮಂಗಳಾರತಿಯ ನಂತರ ತೀರ್ಥ, ಪ್ರಸಾದ ಸ್ವೀಕರಿಸಿ ಬರ್ಮುಡಾ ತೊಟ್ಟು, ಕಾಫಿ ಫಿಲ್ಟರಿಗೆ ಕಾಫಿಪುಡಿ ಹಾಕುತ್ತೇನೆ.

ಕಾಫಿ ಇಳಿಯುತ್ತಿರುವಾಗ ನಾನು ವೈದ್ಯ ನಾಗಿ ಉದ್ಯೋಗ ಮಾಡು ತ್ತಿ ರುವ ಆಸ್ಪತ್ರೆಯ ಇಮೈಲು, ಫೇಸ್‌ಬುಕ್ಕು ನೋಡುತ್ತೇನೆ.

ಫೇಸ್‌ಬುಕ್ಕಿನಲ್ಲಿ ಈಗಾಗಲೇ ಪೂರ್ವಕರಾವಳಿಯವರೆಲ್ಲ ಸಿದ್ಧಿವಿನಾಯಕನ ಪೂಜೆ ಮಾಡಿರುವುದರ ಚಿತ್ರಗಳು ಕಾಣುತ್ತವೆ. ಕುರ್ತಾ, ರೇಷ್ಮೆ ಪಂಚೆ, ಸೀರೆಗಳು ಎ¨ªೆದ್ದು ಕಾಣುತ್ತಿವೆ. ಬಹಳಷ್ಟು ಜನ ಅವರವರ ಗಣೇಶನನ್ನು ಅವರವರೇ ಮಾಡಿಕೊಂಡಿ¨ªಾರೆ, ಈ ದಿನಸಿ ಅಂಗಡಿಯವರ ಮೇಲೆ ನಂಬಿಕೆ ಇಲ್ಲ. ಕಳೆದ ಬಾರಿ ಮಣ್ಣಿನ ಗಣಪ ಎಂದು ಕೊಂಡು ವರ್ಷಾನುಗಟ್ಟಲೆ ಬಕೆಟಿನಲ್ಲಿ ಮೇಕಪ್ಪು ಹೋಗದಂತೆ ಮನೆಯ ಬಕೀಟಿನಲ್ಲಿ ತೇಲುತ್ತಿದ್ದ, ಕೊನೆಗೆ ಚಳಿಗಾಲ ಕಳೆದ ಮೇಲೆ ಮಿಸ್ಸಿಸಿಪ್ಪಿ ನದಿಯ ಮಧ್ಯೆ ದೋಣಿಯಲ್ಲಿ ತೆಗೆದುಕೊಂಡು ಹೋಗಿ ಮತ್ತೂಮ್ಮೆ ವಿಸರ್ಜಿಸಿ ಮುಳುಗಿದೆ ಅಥ ವಾ ತೇಲಿದೆಯಾ ಎಂದು ಹಿಂತಿರುಗಿ ನೋಡದೆ ವಾಪಸು ಬಂದದ್ದು ಇನ್ನೂ ನೆನಪಿದೆ.

ಈಕೆಯ ಮತ್ತು ಸ್ನೇಹಿತೆಯರ ಗೌರೀಪೂಜೆ ಮುಗಿದದ್ದು ಫೇಸ್‌ಬುಕ್‌ ಪೋಸ್ಟಿನಿಂದ ಗೊತ್ತಾಗುತ್ತದೆ. ಮಧ್ಯಾಹ್ನ ಎರಡೆರಡು ಬಗೆಯ ಪಲ್ಯ, ಕೋಸಂಬರಿಯ ಊಟ. ಭಕ್ಷ್ಯಮೋದಕ, ಶ್ಯಾವಿಗೆ ಪಾಯಸ. ಜತೆಗೆ ಸ್ನೇಹಿತರಿ¨ªಾರೆ, ಅಮ್ಮ ಮಾಡುತ್ತಿದ್ದ ಹೂರಣದ ಕಡುಬು ನೆನಪಿಗೆ ಬರುತ್ತದೆ.

ಒಂದು ಸಣ್ಣ ನಿ¨ªೆಯ ನಂತರ ಸಂಜೆ ಮಂಗಳಾರತಿಗೆ ಸಿದ್ಧ ಮಾಡಿಕೊಳ್ಳಬೇಕು. ರಾವ್‌, ಕುಲಕರ್ಣಿ, ಶೆಟ್ರಾ, ಮೂರ್ತಿ ಮನೆಗೆ ಹೋಗಿ ಗಣಪತಿ ನೋಡಿ ಬಂದ¨ªಾಯಿತು.

ಕತ್ತಲಾದ ಮೇಲೆ ಶ್ಯಮಂತಕೋಪಾಖ್ಯಾನ, ವಿಸರ್ಜನಾ ಪೂಜೆ. ಗಣಪತಿ ಶಾಸಿŒಗಳ ಉಸ್ತುವಾರಿಯಲ್ಲಿ ನಡೆಯುತ್ತದೆ. ವಿಸರ್ಜನೆ ಮನೆಯ ಹಿಂದೆ ಇದ್ದ ಇನ್‌ ಫ್ಲೇಟಬಲ್‌ ಈಜುಗೊಳದಲ್ಲಿ. ಹೋದವಾರವೇ ಅದನ್ನು ಚೆನ್ನಾಗಿ ತೊಳೆದು ಒರೆಸಿ ಪುಣ್ಯಾಹ ಮಾಡಿಸಿಯಾಗಿದೆ. ಅದನ್ನು ಮಾಡಿಸಿದ್ದು ಕೂಡ ಯುಟ್ಯೂಬಿನ ಗಣಪತಿ ಶಾಸಿŒಗಳೇ.

ಎಲ್ಲ ಮುಗಿದ ಮೇಲೆ ಈಕೆ ಹೇಳುತ್ತಾಳೆ- ನಾಳೆಗೆ ಹಾಲಿಲ್ಲವೆಂದು. ಅಂಗಡಿಗೆ ಹೊರಟಾಗ ಮಗ, “ನಾನು ಬರುತ್ತೇನೆ’ ಎಂದು ಹೊರಡುತ್ತಾನೆ. ಪಾರ್ಕಿಂಗ್‌ ಲಾಟಿನಲ್ಲಿ ಕಾರು ಬಿಟ್ಟು ಇಳಿಯುವುದಿಲ್ಲ, ಫೋನಿನಲ್ಲಿ ಮಗ್ನನಾಗಿ¨ªಾನೆ. ವಾಪಸು ಬರಬೇಕಾದಾಗ “ಡ್ಯಾಡಿ, ಕಾರಿನ ಕನ್ನಡಿಯಲ್ಲಿ ಚಂದ್ರ ಕಾಣಿಸಿದ. ನೇರವಾಗಿ ನಾನು ನೋಡಲಿಲ್ಲ. ಡು ಐ ಹ್ಯಾವ್‌ ಟು ಲಿಸನ್‌ ಟು ದಟ್‌ ಸ್ಟೋರಿ ಅಗೈನ್‌’ ಎಂದು ಕೇಳುತ್ತಾನೆ. ಕಾರಿನ ಹಿಂಗನ್ನಡಿಯಲ್ಲಿ ಕಂಡ ಚೌತಿ ಚಂದ್ರ ಎಷ್ಟು ಅಪಾಯಕಾರಿ ಎಂಬ ಧರ್ಮಸೂಕ್ಷ್ಮ ನನಗೆ ಗೊತ್ತಿಲ್ಲವಾದ್ದರಿಂದ “ಯಾವುದಕ್ಕೂ ಒಮ್ಮೆ ಕೇಳಿಬಿಡು’ ಎನ್ನುತ್ತೇನೆ. ತಕ್ಷಣ ಫೋನಿನಲ್ಲಿ ಆಟ ಮುಚ್ಚಿ “ಹೌ ಡು ಯು ಸ್ಪೆಲ್‌ ಶ್ಯಮಂತಕೋಪಾ ವೈಟ್‌? ಹೌ ಡು ಯು ಸೇ ದಟ್‌’ ಎಂದು ಕೇಳುತ್ತಾನೆ. ಗೂಗಲ್‌ ನನಗಿಂತ ಮುಂಚೆ ನನ್ನ ಮಗನ ಸಹಾಯಕ್ಕೆ ಬಂದಿದೆ.

ಮನೆಗೆ ವಾಪಸು ಬಂದಾಗ ಈಜುಕೊಳಕ್ಕೊಮ್ಮೆ ಇಣುಕಿಹಾಕಿ ಬಣ್ಣ ಕಳೆದುಕೊಳ್ಳುತ್ತಿರುವ ಗಣಪನನ್ನು ನೋಡಿ ನೆಮ್ಮದಿಯಿಂದ “ಪುನರಾಗಮನಾಯ ಚ’ ಹೇಳಿ ಅಪ್ಪಿತಪ್ಪಿಯೂ ಬೆಳದಿಂಗಳು ಒಳಗೆ ಬರದಂತೆ ಪರದೆಗಳನ್ನು ಎಳೆದು ಮಲಗುತ್ತೇನೆ.

– ಗುರುಪ್ರಸಾದ ಕಾಗಿನೆಲೆ ಮಿನೆಸೋಟಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ...

  • ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ,...

  • ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ,...

  • "ಕಾಗದ ಬಂದಿದೆ ಕಾಗದವು' ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ....

  • ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ...

ಹೊಸ ಸೇರ್ಪಡೆ