ಸಿಂಗಾಪುರದಲ್ಲಿ ಗಣೇಶ

Team Udayavani, Sep 1, 2019, 5:15 AM IST

ಸಿಂಗಾಪುರದಲ್ಲಿ ಈಗ ಆಷಾಢ ಮಾಸ. ಡ್ರ್ಯಾಗನ್‌ ನೃತ್ಯ, ಶುಭಸಮಾರಂಭ, ಹಬ್ಬಹರಿದಿನಗಳಿಗೆ ಕೊಂಚ ವಿರಾಮ. ಬಹುಸಂಖ್ಯಾತ ಚೀನಿಯರ ಈ ದೇಶದಲ್ಲಿ ಈಗ ಗೋಸ್ಟ್‌ ಮಂತ್‌. ಸರಿಸಾಮಾನ್ಯ ಆಗಸ್ಟ್‌ ಹಾಗೂ ಸೆಪ್ಟಂಬರ್‌ನಲ್ಲಿ ಈ ದೆವ್ವದ ಆಚರಣೆ ನೆರವೇರುತ್ತಿರುತ್ತವೆ. ತಮ್ಮ ಪೂರ್ವಜರ ಹೆಸರಿನಲ್ಲಿ ವೈಯಕ್ತಿಕ ಅಥವಾ ಸಾಮೂಹಿಕವಾಗಿ ಸ್ಮತಿಕಾರ್ಯಗಳನ್ನು ನಡೆಸುವಲ್ಲಿ ಚೀನೀಯರು ನಿರತರಾಗಿದ್ದಾರೆ.

ಅಂಕಿಅಂಶದಲ್ಲಿ ಚೀನಿಯರ ಬಳಿಕ ಭಾರತೀಯರದ್ದೇ ಇಲ್ಲಿ ಸಿಂಹಪಾಲು. ಅವರಂತಲ್ಲ ನಾವು. ನಮಗೀಗ ಉತ್ಸವಗಳ ಸಂಭ್ರಮ. ಈಗಾಗಲೇ ಕೆಲ ಹಬ್ಬಗಳನ್ನು ಕಳೆದಿರುವ ನಮಗೆ ಇದೀಗ ಗಣೇಶಚತುರ್ಥಿಯ ಸಡಗರ. ಸಿಂಗಾಪುರದಲ್ಲಿ ಎಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೆ ಎನ್ನುವುದಕ್ಕಿಂತಲೂ ಇಲ್ಲಿ ಆಚರಣೆಗೆ ಅನುಮತಿ ಲಭಿಸುವುದೇ ಅಭಿಮಾನದ ಸಂಗತಿ. ಪ್ರಪಂಚದ ವಿವಿಧ ಭಾಗಗಳ ಜನರು ಒಂದೆಡೆ ನೆಲೆಸಿರುವ ಅಪೂರ್ವ ನಾಡಿದು. ಇಲ್ಲಿ ವಿಭಿನ್ನ ಸಂಸ್ಕೃತಿಗಳು ಪರಸ್ಪರ ಗೌರವದಿಂದ ಇರುತ್ತವೆ.

ಸಿಂಗಾಪುರದಲ್ಲಿರುವ ವಿವಿಧ ಭಾರತೀಯ ಸಮುದಾಯಗಳು ಗಣೇಶಚತುರ್ಥಿಯನ್ನು ಆಚರಿಸುತ್ತವೆ. ಮಹಾರಾಷ್ಟ್ರ ಮಂಡಲವು ಇಲ್ಲಿನ ಮರಾಠಿಗರ ಬಹುದೊಡ್ಡ ಸಮುದಾಯ. ಇಲ್ಲಿ ದೇಣಿಗೆಯನ್ನು ಸಂಗ್ರಹಿಸಿ ಆಚರಣೆಗೆ ಬೇಕಾದ ಖರ್ಚುವೆಚ್ಚಗಳನ್ನು ನಿಭಾಯಿಸಲಾಗುತ್ತದೆ. ಕಲಾತ್ಮಕವಾದ ಬೃಹತ್‌ ಗಣೇಶ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಸ್ಥಾಪಿಸಲಾಗುತ್ತದೆ. ಕೆಲವೊಂದು ಸಮುದಾಯಗಳು ಅನುಮತಿ ದೊರೆತ ಸ್ಥಳಗಳಲ್ಲಿ ಪೆಂಡಾಲ್‌ ಹಾಕಿ ಆಚರಿಸಿದರೆ, ಇನ್ನು ಕೆಲವೊಮ್ಮೆ ಗಣೇಶೋತ್ಸವಕ್ಕಾಗಿ ಅಂತಾರಾಷ್ಟ್ರೀಯ ಶಾಲಾಸಭಾಂಗಣಗಳನ್ನು ಆಶ್ರಯಿಸಲಾಗುತ್ತದೆ. ಹಿಂದೂ ದೇವಾಲಯಗಳಂತೂ ಮುಂಜಾನೆಯಿಂದಲೇ ಪೂಜೆಹೋಮಹವನಾದಿಗಳು ನಡೆಯುತ್ತಿರುತ್ತವೆ.

ಸಿಂಗಾಪುರದಲ್ಲಿ ಗಣೇಶೋತ್ಸವವನ್ನು ನಿಜವಾಗಿ ಸಂಭ್ರಮಿಸುವುದು ಭಾರತೀಯ ಮಹಿಳೆಯರು. ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಹಬ್ಬವನ್ನು ಸ್ವಾಗತಿಸಲು ಮನೆಯ ಮುಂಭಾಗದಲ್ಲಿ ಮಾವಿನ ಎಲೆಯ ತೋರಣ ಕಟ್ಟುತ್ತಾರೆ. ಸಣ್ಣ ಗಣೇಶ ವಿಗ್ರಹವನ್ನು ಖರೀದಿಸಿ ಯಥೋಚಿತವಾಗಿ ಅಲಂಕರಿಸುತ್ತಾರೆ. ಗಣೇಶನಿಗೆ ಅರ್ಪಿಸುವ ಮೋದಕ, ಕಡುಬುಗಳು ಹುಟ್ಟೂರನ್ನು ನೆನಪಿಸುವಂತೆ ಮಾಡುತ್ತವೆ. ಗೃಹಿಣಿಯರು ತಮ್ಮ ಗೆಳತಿಯರನ್ನು ಮನೆಗೆ ಆಹ್ವಾನಿಸಿ ಅರಶಿನಕುಂಕುಮ ನೀಡುತ್ತಾರೆ.

ಸಿಂಗಾಪುರಕ್ಕೂ ಗಣೇಶನ ಮೂರ್ತಿಗಳು ಭಾರತದಿಂದಲೇ ಪೂರೈಕೆ ಆಗಬೇಕಲ್ಲವೆ? ಇಲ್ಲೊಂದು ಲಿಟ್ಲ ಇಂಡಿಯಾ  ಪ್ರದೇಶವಿದೆ. ಇಲ್ಲಿ ಎಲ್ಲವೂ ಲಭ್ಯ. ಹಬ್ಬಹರಿದಿನವೆಂದರೆ ಇಲ್ಲಿ ಜನವೋ ಜನ. ಎಲ್ಲೆಲ್ಲೂ ಭಾರತೀಯರೇ. ಲಿಟ್ಲ ಇಂಡಿ ಯಾದಲ್ಲಿ ಓಡಾಡುವುದು ನಿಜವಾಗಿ ಪುಟ್ಟ ಇಂಡಿಯಾದ ಅನುಭವವನ್ನೇ ನೀಡುತ್ತದೆ. ಇಲ್ಲಿ ಜನ ತುಂಬಿದ್ದಾರೆಂದರೆ ಹಬ್ಬ ಹರಿ ದಿನ ಬಂದಿದೆ ಎಂದರ್ಥ.

ಎಲ್ಲ ಸಂಸ್ಕೃತಿಗಳ ಹಬ್ಬಗಳಿಗೂ ಮನ್ನಣೆ ನೀಡುತ್ತದೆ ಸಿಂಗಾಪುರ ಸರ್ಕಾರ, ಜೊತೆಗೆ ಕೆಲವೊಂದು ಕಾನೂನುಗಳನ್ನು ತರುವಲ್ಲಿಯೂ ಮುಂದಿದೆ. ಸಿಕ್ಕ ಸಿಕ್ಕ ಕೆರೆ-ನದಿಗಳಲ್ಲಿ ಗಣೇಶನ ವಿಗ್ರಹಗಳನ್ನು ವಿಸರ್ಜಿಸುವಂತಿಲ್ಲ. ಕಂಡಕಂಡ ಸ್ಥಳಗಳಲ್ಲಿ ಪೆಂಡಾಲ್‌ಗ‌ಳನ್ನು ಹಾಕುವಂತಿಲ್ಲ. ಸಾರ್ವಜನಿಕರಿಗೆ ಅಡಚಣೆ ಆಗುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಎಂಥ ಆಚರಣೆ ಇದ್ದರೂ ರಾತ್ರಿ 10 ಗಂಟೆಗೆ ಮುಕ್ತಾಯವಾಗಬೇಕು. ಮನೆಯಲ್ಲಿ ಕೂರಿಸುವ ಗಣೇಶನಮೂರ್ತಿಗಳ ವಿಸರ್ಜನಕಾರ್ಯಗಳು ಅವರವರ ಮನೆಯ ಬಕೆಟ್‌ಗಳಲ್ಲಿಯೇ ನೆರವೇರಿಸಲ್ಪಡುತ್ತದೆ.

ಇವುಗಳ ಮಧ್ಯೆ ಏನಾದರೂ ಕಾನೂನು ಉಲ್ಲಂಘನೆಯಾಯಿತೋ ಕಾನೂನು ಉಲ್ಲಂ  ಸಿದವರಿಗೆ ದಂಡ ಅಥವಾ ಜೈಲುವಾಸ! ಎಲ್ಲೆಂದರಲ್ಲಿ ಇಟ್ಟಿರುವ ಕೆಮರಾ ಕಣ್ಣುಗಳು ಕಾಯುತ್ತಲೇ ಇರುತ್ತವೆ.

ಶ್ರೀವಿದ್ಯಾ ಸಿಂಗಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ...

  • ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ,...

  • ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ,...

  • "ಕಾಗದ ಬಂದಿದೆ ಕಾಗದವು' ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ....

  • ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ...

ಹೊಸ ಸೇರ್ಪಡೆ