ದೇವನೂ ಕಾಯುತ್ತಿದ್ದಾನೆ, ಈ ಜೀವಕ್ಕೆ ಯಾವಾಗ ಎಚ್ಚರವಾಗುತ್ತದೆ ಎಂದು !


Team Udayavani, Jun 30, 2019, 5:00 AM IST

Untitled-1

ಉಪನಿಷತ್ತು ತಾನು ಪ್ರಕಟವಾಗಬೇಕಾದರೆ ತಂದೆಯ ಮುಖದಿಂದ ಮಗ ಎಂಥ ಮಾತುಗಳನ್ನು ಕೇಳಬೇಕಾಯಿತು! “ನಿನ್ನನ್ನು ಮೃತ್ಯುವಿಗೆ ಕೊಟ್ಟು ಬಿಟ್ಟಿದ್ದೇನೆ” ಎಂಬ ಮಾತು! ಅಹಂಕಾರ ಮಾತ್ರ ತನ್ನ ಕುದಿಕೋಪದಲ್ಲಿ ಆಡಬಹುದಾದ ಮಾತು. ಆಶ್ರಮದ ಒಳಗಡೆ ಇದ್ದ ನಚಿಕೇತನ ತಾಯಿಗೆ ಈ ಮಾತು ಕೇಳಿ ಹೇಗೆ ಎದೆಯೊಡೆದಿರಬಹುದು! ಉಪನಿಷತ್ತು ಈ ಕುರಿತು ಏನೂ ಹೇಳುವುದಿಲ್ಲ. ಈ ಮೌನವೇ ಒಂದು ಬಗೆಯ ದಿಗಿಲನ್ನು ಹುಟ್ಟಿಸುತ್ತದೆ. ಅದಿರಲಿ. ಆ ಮಾತು ಬೇರೆ. ಆದರೆ, ಮಗ ನಚಿಕೇತನೇ ಮಗುವನ್ನು ಉಳಿಸಲು ತನ್ನ ಸಾವನ್ನು ಲೆಕ್ಕಿಸದೆ ಸರ್ವಾಂಗ ವಾತ್ಸಲ್ಯದ ತಾಯಿಯಂತೆ ಇದ್ದ. ಅದು ಅವನಲ್ಲಿ ಅರಳುತ್ತಿದ್ದ ಶ್ರದ್ಧೆಯ ಸ್ವರೂಪ. ಲೋಕದಲ್ಲಿ ಗೆಲ್ಲಬೇಕಾದದ್ದು ಇಂಥ ಹೆಂಗರುಳು !

ಆಶ್ಚರ್ಯವೆಂದರೆ “ಅಹಂಕಾರ’ ಮತ್ತು “ಶ್ರದ್ಧೆ’ ಇವೆರಡೂ ಸಾವನ್ನು ಕುರಿತು ಚಿಂತಿಸುತ್ತಿರುತ್ತವೆ. ತಂದೆ ವಾಜಶ್ರವಸನ “ಅಹಂಕಾರ’ ಮತ್ತು ಮಗ ನಚಿಕೇತನ “ಶ್ರದ್ಧೆ’. ಅಹಂಕಾರವು ಪರರ ಸಾವನ್ನು ಸಂಭ್ರಮಿಸುತ್ತದೆ. ಗುಪ್ತವಾಗಿ ಅದನ್ನು ಬಯಸುತ್ತಲೂ ಇರುತ್ತದೆ. ಕೆಲವೊಮ್ಮೆ ಪ್ರಕಟವಾಗಿ ಕೂಡ. ಪರರ ಸಾವಿನಲ್ಲಿ ಅದು ತನ್ನ ಬದುಕನ್ನು ನೋಡುತ್ತದೆ. ನೋಡಿ, ತನ್ನ ಬದುಕನ್ನು ಸಂಭ್ರಮಿಸುತ್ತದೆ. ಇದೊಂದು ವಿಪರ್ಯಾಸ ಎಂದು ಅದಕ್ಕೆ ಹೊಳೆಯುವುದೇ ಇಲ್ಲ. ಹೊಳೆಯುತ್ತಿದ್ದರೆ ಬದುಕಿನಲ್ಲಿ ಸಾವು ತಳಕು ಹಾಕಿಕೊಂಡೇ ಇರುವುದನ್ನು ಅಹಂಕಾರವು ತಿಳಿಯಬಹುದಿತ್ತು. ತಿಳಿದು, ಪರಸ್ಪರ ವಿರೋಧವೆಂದು ತಿಳಿದಿದ್ದ ಸಾವು ಮತ್ತು ಬದುಕು ಹೀಗೆ ಒಟ್ಟಿಗೇ ತಳಕು ಹಾಕಿಕೊಂಡಿರುವ ವಿದ್ಯಮಾನಕ್ಕೆ ಅಹಂಕಾರವು ಚಕಿತಗೊಳ್ಳಬಹುದಿತ್ತು. ಅಹಂಕಾರವು ಆಶ್ಚರ್ಯಚಕಿತವಾದರೆ ಅದರ ಸ್ವರೂಪವೇ ಗುಣಾತ್ಮಕವಾಗಿ ಬದಲಾಗಿ ಬಿಡುವುದು. ಆದುದರಿಂದಲೇ ಇರಬೇಕು- ತನಗೆ ಎಲ್ಲವೂ ಗೊತ್ತು ಅಥವಾ ತಾನು ಎಲ್ಲವನ್ನೂ ಗೊತ್ತು ಮಾಡಿಕೊಳ್ಳಬಲ್ಲೆನೆಂದುಕೊಳ್ಳುವ ಅಹಂಕಾರಕ್ಕೆ ಚಕಿತಗೊಳ್ಳುವ ಗುಣವಿಲ್ಲ. ಇದ್ದರೂ ಅದು ಕ್ವಚಿತ್‌. ಅದು ನಗಣ್ಯ. ಅದು ಕ್ಷಣಿಕ. ಇನ್ನೊಬ್ಬರನ್ನು ನೀನು ಸಾಯಿ ಎನ್ನುವುದೂ ಒಂದೇ ನಿನ್ನನ್ನು ತಡಕೊಳ್ಳುವ ಶಕ್ತಿ ನನ್ನ ಬದುಕಿಗೆ ಇಲ್ಲ ಎನ್ನುವುದೂ ಒಂದೇ ಎಂದು ಅದಕ್ಕೆ ಹೊಳೆಯಲಾರದು. ಉದ್ರೇಕಗೊಂಡು ಆಡುವ ಮಾತುಗಳು ಆಳದಲ್ಲಿ ದೌರ್ಬಲ್ಯವನ್ನು ಸೂಚಿಸುವ ಮಾತುಗಳೂ ಆಗಿವೆ ಎಂದೂ ಅಹಂಕಾರಕ್ಕೆ ಹೊಳೆಯಲಾರದು. ಪರರ ಸಾವನ್ನು ಸಂಭ್ರಮಿಸಬಹುದಾದರೆ ತನ್ನ ಸಾವನ್ನೇ ಏಕೆ ಸಂಭ್ರಮಿಸಬಾರದು? ಸಾವಿಗೆ ಅಂಜಿಕೊಂಡೇ ಬದುಕುತ್ತಿರಬೇಕೇಕೆ? ಎಂಬ ಸಹಜ ಪ್ರಶ್ನೆ ಅದಕ್ಕೆ ಎದುರಾಗುವುದೇ ಇಲ್ಲ. ಎದುರಾದರೂ ಇದೊಂದು ಆತ್ಮಘಾತಕವಾದ ಹುಚ್ಚು ಪ್ರಶ್ನೆ ಎಂದೇ ಅಹಂಕಾರಕ್ಕೆ ಅನ್ನಿಸುತ್ತದೆ. ಪರರ ಸಾವಿಗೆ ಸಂಭ್ರಮಿಸುವುದು ಕೂಡ ಹುಚ್ಚಲ್ಲವೇ ಎಂದು ಅದು ಯೋಚಿಸದು. ಅಹಂಕಾರದ ಧಾರಣಶಕ್ತಿಯೇ ಮಿತವಾದದ್ದು.

ಅಹಂಕಾರ ಉಳಿಸಿಕೊಳ್ಳುವುದು ಮತ್ತು ಅಳಿಸಿಕೊಳ್ಳುವುದು !
ಹೀಗಿದ್ದರೂ, ಅಹಂಕಾರವು ಸಾವನ್ನು ನೆನೆಯುತ್ತಲೇ ಇರುತ್ತದೆ. ತಾನು ಸೋತಾಗ, ತನ್ನ ತೇಜೋಭಂಗವಾದಾಗ, ತಾನು ಬದುಕುತ್ತಿರುವ ಸಮಾಜದಲ್ಲಿ ತನ್ನ “ಪ್ರತಿಮೆ’ ಮುರಿದು ಬಿದ್ದಾಗ ಅಹಂಕಾರವು ಸಾವನ್ನು ನೆನೆಯುತ್ತದೆ. ಆದರೆ, ಇದೊಂದು ಪಾರಾಗುವ ಉಪಾಯವಾಗಿದೆ. ಸಾವೆಂದರೆ ಕಣ್ಮರೆಯಾದುದರಿಂದ, ಲೋಕದ ಕಣ್ಣುಗಳನ್ನೆದುರಿಸಲಾಗದೆ ಕಣ್ಮರೆಗೆ ಸಲ್ಲುವ ಉಪಾಯವಾಗಿದೆಯಾಗಿ ತಾನು ಸತ್ತರೂ ಸತ್ತಂತಲ್ಲ ! ತನ್ನ ಸಾವಿಗೆ ತಾನೇ ಸಂಭ್ರಮಿಸುವಂತಿಲ್ಲ. ಎಲ್ಲವನ್ನೂ ತನಗನುಕೂಲವಾಗಿ ಬಳಸಿಕೊಳ್ಳುವುದು ಹೇಗೆ ಎಂದು ಮಾತ್ರ ಕಲಿತ ಅಹಂಕಾರವು ಸಾವನ್ನೂ ಈಗ ಕಣ್ಮರೆಯಾಗುವುದಕ್ಕೆ ಬಳಸಿಕೊಂಡಂತಾಯಿತು; ಅಷ್ಟೆ. ಸಾವನ್ನು ತಿಳಿದಂತೆ, ಅರ್ಥಮಾಡಿಕೊಂಡಂತೆ, ಅನುಭವಿಸಿದಂತೆ ಆಗಲಿಲ್ಲ. ಸಾವಿನ ಮರೆಯಲ್ಲಿ ತನ್ನ ಸೋಲನ್ನೇ ಅನುಭವಿಸಿದಂತಾಯಿತು. ರಂಗದಲ್ಲಿ ಮಾತ್ರವಲ್ಲ, ಚೌಕಿಯಲ್ಲಿಯೂ ಸೋತಂತಾಯಿತು. ತನ್ನ ಸೋಲನ್ನೇ ಭೇಟಿಯಾದಂತೆ ಆಯಿತಲ್ಲದೆ ಸಾವನ್ನು ಭೇಟಿಯಾದಂತಾಗಲಿಲ್ಲ. ಹೌದು, ಅಹಂಕಾರವು ದೊಡ್ಡ ಉದ್ದೇಶಕ್ಕಾಗಿ ತಾನು ಬಲಿದಾನವಾಗಬಲ್ಲುದು. ನಿಜ. ಇದು ಉದಾತ್ತವಾದುದೆನ್ನಿಸಿದರೂ ಹಾಗೆ ಬಲಿದಾನಗೊಳ್ಳುವುದು ಕೂಡ ಅಹಂಕಾರವನ್ನು ಉಳಿಸಿಕೊಳ್ಳುವ ಒಂದು ರೀತಿಯೇ ಆಯಿತು. ಅಹಂಕಾರವನ್ನು ಅಳಿಸಿಕೊಳ್ಳುವ ದಾರಿಯಾಗಲಿಲ್ಲ.
ಶ್ರದ್ಧೆಯ ಸ್ಥಿತಿಯು ಇದಕ್ಕಿಂತ ಭಿನ್ನವಾಗಿದೆ. ಭಿನ್ನವಾದರೂ ಅಹಂಕಾರದ್ದೇ ಇನ್ನೊಂದು ಮುಖ ಎನ್ನುವಂತೆಯೂ ಇದೆ. ಸತ್ತರೂ ಸತ್ತಂತಲ್ಲ ಎನ್ನುವ ರಿಕ್ತತೆಯು ಅಹಂಕಾರದ ಪಾಡಾದರೆ “ಶ್ರದ್ಧೆ’ಯು ಸಾಯದೇ ಸತ್ತಂತೆ ಎನ್ನುವ ಅವಸ್ಥೆಯಲ್ಲಿ ಅಪೂರ್ವ ಆಧ್ಯಾತ್ಮಿಕ ಸಮೃದ್ಧಿಯನ್ನು ಅನುಭವಿಸುತ್ತದೆ! ಅಹಂಕಾರವು ಸಾವಿನಲ್ಲಿ ಕಣ್ಮರೆಯಾಗುವ ಉಪಾಯವನ್ನು ಮಾಡಿದರೆ ಶ್ರದ್ಧೆಯು ಬದುಕಿನಲ್ಲಿ ಅಡಗಿದಂತೆ, ಕಣ್ಮರೆಯಾದಂತೆ ಇದ್ದು, ಸಾವಿನ ಕುರಿತು ಎಚ್ಚರಗೊಂಡಿರುತ್ತದೆ! ಅಂದರೆ ಇಲ್ಲಿ ಇದೇ ಸಾವಿನ ಅನುಭವವನ್ನು ಪಡೆಯುವುದೆಂದರೆ ಬದುಕೆಂಬ ಪರದೆಯಾಚೆಗಿನ ಸತ್ಯವನ್ನು ಇಲ್ಲಿಂದಲೇ ಕಂಡಂತೆ! ಎಲ್ಲ ಸೂಕ್ಷ್ಮಜ್ಞರನ್ನೂ ಎಲ್ಲ ಕಾಲದಲ್ಲೂ ಕಾಡುತ್ತಿರುವ ಹುಟ್ಟು-ಸಾವುಗಳ ಆಳವಾದ ಸಮಸ್ಯೆಯ ಗುಟ್ಟನ್ನು ಇಲ್ಲಿಂದಲೇ ಕಂಡರಿಸುವುದಕ್ಕಿಂತ ದೊಡ್ಡ ಸಮೃದ್ಧಿಯಾದರೂ ಯಾವುದು? ಇದಕ್ಕಿಂತ ದೊಡ್ಡ ನಿರಾಳತೆಯಾದರೂ ಯಾವುದು? ಇಲ್ಲಿಂದಲೇ ಆ ಇನ್ನೊಂದನ್ನು ಎಂಥ ಅಹಂಕಾರವೂ ಅಂಜುವ ಸಾವೆಂಬ ಸಾವಿನ ನಿಜವನ್ನು ತಿಳಿಯಲಾಗುವುದಾದರೆ ಅದು ಶ್ರದ್ಧೆಗೆ ಮೀಸಲಾದ ಸಂಗತಿಯಾಗಿದೆ. ಶ್ರದ್ಧೆಯ ಜಾಗದಲ್ಲಿಯೇ ಉಪನಿಷತ್ತು ಹುಟ್ಟಿಕೊಳ್ಳುವುದು ಸಾಧ್ಯ.
ಶ್ರದ್ಧೆ ಎನ್ನುವುದು ಕಾಲ ಸಂಬಂಧಿಯಾದ ಮನೋಧರ್ಮ ವಿಶೇಷ. ಈ ಮಾತನ್ನು ನನ್ನೊಳಗೇ ಹೇಗೆ ವಿವರಿಸಿಕೊಳ್ಳುವುದೆಂದು ಪ್ರಯತ್ನಿಸುತ್ತಿದ್ದೇನೆ. ನಚಿಕೇತನೊಳಗೆ ಶ್ರದ್ಧೆಯು ಪ್ರವೇಶಿಸಿತು ಎಂದು ಉಪನಿಷತ್ತಿನ ಮಾತು. ತಂ ಹ ಶ್ರದ್ಧಾsವಿವೇಶ. ಇದು ಯಾವುದೋ ಒಂದು ದಿವ್ಯ ಮುಹೂರ್ತದಲ್ಲಿ ಸಂಭವಿಸಿತು ಎನ್ನೋಣ. ಒಪ್ಪೋಣ. ಅದಕ್ಕಿಂತ ಮುನ್ನ? ಮುನ್ನ ಅದು ಕಾಯುತ್ತಿತ್ತು. ಪ್ರಾಯಃ ದೀರ್ಘ‌ಕಾಲದಿಂದ ಕಾಯುತ್ತಿತ್ತು. ಅಂದರೆ, ಕಾಲವನ್ನು ನಿರೀಕ್ಷಿಸುತ್ತಿತ್ತು. ಕಾಲ ಕೂಡಿ ಬರಬೇಕು ಎನ್ನುತ್ತೇವಲ್ಲ, ಹಾಗೆ. ಕಾಯುತ್ತಲೂ ಇತ್ತು; ಕಾಲ ಕೂಡಿ ಬರುತ್ತದೆ ಎಂಬ ನೆಚ್ಚುಗೆಯೂ ಅದಕ್ಕಿತ್ತು. ಅದು ಶ್ರದ್ಧೆ.

ಹಾಗೆ, ಕಾಲವೆಂದರೆ ಕಾಯುವಿಕೆ. ಕಾಲವೆಂದರೆ ಸೃಜನಾತ್ಮಕವಾಗಿ ಕಾಯುವಿಕೆ. ಈ ಬಗೆಯ ಕಾಯುವಿಕೆಯೇ ಶ್ರದ್ಧೆ. ದೇವರು ಎಲ್ಲರಲ್ಲೂ ಇದ್ದಾನೆ ಎನ್ನುತ್ತಾರಲ್ಲ. ಅವನೇನು ಮಾಡುತ್ತಿರಬಹುದು? ಅವನು ಕಾಯುತ್ತಿದ್ದಾನೆ. ಯಾವಾಗ ಈ ಜೀವಕ್ಕೆ ಎಚ್ಚರವಾಗುತ್ತದೆ ಎಂದು ಎಚ್ಚರಗೊಳ್ಳುವ ಕಾಲವನ್ನು ಕಾಯುತ್ತಿದ್ದಾನೆ. ಈ ಜೀವದೊಳಗೆ ಇವನ ಎಚ್ಚರವನ್ನು ಕಾಯುತ್ತ ತಾನೊಬ್ಬನಿದ್ದೇನೆ ಬಹುಕಾಲದಿಂದ ಎಂದು ಈ ಜೀವಕ್ಕೆ ತಿಳಿದು ಅದು ಎಚ್ಚರಗೊಳ್ಳುವುದನ್ನು ಕಾಯುತ್ತಿದ್ದಾನೆ ! ಜೀವಕ್ಕೆ-ಎಂದರೆ ನಮಗೆ ಎಚ್ಚರವಾಗುವುದೂ ಉಂಟೆ? ನಿದ್ದೆಯಲ್ಲಿಯೇ ಎಚ್ಚರದ ಕನಸನ್ನು ನಟಿಸುವವರಿಗೆ ನಿಜಕ್ಕೂ ಎಚ್ಚರವಾಗುವುದುಂಟೆ? ಆದರೂ ದೇವರು ಕಾಯುತ್ತಿದ್ದಾನೆ! ಅದು ಶ್ರದ್ಧೆ! ಅದು ಪ್ರೀತಿ!

ಈ ಕಾಯುವಿಕೆಯು ಖನ್ನತೆಯ ಸ್ಥಿತಿಯಲ್ಲ. ಕಾಯುವಿಕೆಯ ಸ್ಥಿತಿಯಲ್ಲಿ ಅದರ ಛಿnಛಿrಜy lಛಿvಛಿl ಉತ್ಕಟವಾಗಿರುತ್ತದೆ. ಪ್ರಾಣಿಯೊಂದು ತನ್ನ ಆಹಾರಕ್ಕಾಗಿ ಹೊಂಚು ಹಾಕುತ್ತಿರುವ ಸ್ಥಿತಿಯಲ್ಲಿ ಆ ಏಕಾಗ್ರತೆಯಲ್ಲಿ, ಅದರ ಛಿnಛಿrಜy lಛಿvಛಿl ಉಚ್ಚಾಂಕದಲ್ಲಿರುವುದಿಲ್ಲವೆ?-ಹಾಗೆ. ಆದುದರಿಂದಲೇ ಶ್ರದ್ಧೆಯ ಶಕ್ತಿಯು ಸಾವನ್ನು ಎಚ್ಚರದಿಂದ ಅಂಜದೆ ನಿರೀಕ್ಷಿಸಬಲ್ಲುದು. ಈ ಗುಟ್ಟನ್ನು ಮೆಲ್ಲನೆ – ಮರಣಭೀತ ಚೇತನರಾದ ನಮ್ಮಲ್ಲಿ ಪಿಸುಗುಟ್ಟುವುದೇ ಉಪನಿಷತ್ತಿನ ದೊಡ್ಡ ಕೊಡುಗೆ.
ಅದು ಕಾದುಕೊಂಡಿತ್ತು ಎನ್ನುವ ಮಾತಿಗೆ ಅನೇಕ ಆಯಾಮಗಳಿವೆ. ಕಾಯುವಿಕೆಯಲ್ಲಿ, ಅನಿರೀಕ್ಷಿತ ವಾದುದೊಂದು ನಿರೀಕ್ಷಿತವಾದುದರ ಒಟ್ಟಿಗೇ-ಸಂಭವಿಸಬಹುದೆನ್ನುವ ಒಳ ಎಚ್ಚರವೊಂದು ಇದ್ದೇ ಇರುತ್ತದೆ. ನಿಸರ್ಗದ ಚಿತ್ರ ಪಡೆದುಕೊಳ್ಳಬೇಕೆನ್ನುವ ಕಲಾವಿದ ತನ್ನ ಯಂತ್ರವನ್ನು ಸರಿಯಾಗಿ ಇಟ್ಟುಕೊಂಡಿರಬೇಕು, ಇಟ್ಟುಕೊಂಡಿರುತ್ತಾನೆ. ಅನುಕೂಲವಾಗುವಂಥ ಕೋನ-ಆಯಾಮಗಳನ್ನು ಗುರುತಿಸಿರುತ್ತಾನೆ. ಅನುಕೂಲವಾದ ಜಾಗವನ್ನು ಕಂಡುಕೊಂಡಿರುತ್ತಾನೆ. ಎಲ್ಲವೂ ಸಿದ್ಧವಾಗಿದೆ, ಸಿದ್ಧವಾದಂತಿದೆ. ಎಲ್ಲವೂ ಪೂರ್ವನಿರ್ಣೀತ. ನಿಜ. ಆದರೆ, ಈ ಎಲ್ಲ ಯಾಂತ್ರಿಕ ಸಿದ್ಧತೆಗಳನ್ನು ಮೀರಿ ತಾನಾಗಿ ಸಂಭವಿಸುವ ಒಂದು ವಿಶೇಷ ಇದ್ದೇ ಇದೆ. ಅದೆಂದರೆ-ಬೆಳಕು! ಇದ್ದಕ್ಕಿದ್ದಂತೆ ಮೋಡ ಕವಿದು ಬೆಳಕು ಮಸುಕಾಗಬಹುದು. ಮಳೆ ಹನಿಯಬಹುದು. ಗಾಳಿ ಬಲವಾಗಿ ಬೀಸಿ ಇನ್ನೇನೋ ಆಗಬಹುದು. ಪ್ರಾಣಿಯೊಂದು ಧಾವಿಸಿ ಬಂದು ಊಹಿಸದೇ ಇದ್ದದ್ದು ಸಂಭವಿಸಬಹುದು ಅಥವಾ ಚಿತ್ರಕಾರನಿಗೇ ಹೃದಯಾಘಾತವಾಗಬಹುದು! ಈ ಒಂದು ಅನಿರೀಕ್ಷಿತ ಅಂಶ-ಎಲ್ಲ ಟlಚnnಜಿnಜನ ನಡುವೆ ಇದ್ದೇ ಇದೆ! ಆದುದರಿಂದಲೇ ಅನುಕೂಲವಾದ ಕಾಲವನ್ನು ಕಾಯಲೇ ಬೇಕಾಗುತ್ತದೆ. ಹಾಗೆ ನಿಜಕ್ಕೂ ಕಾಯಬಲ್ಲವರಿಗೆ-ಆಕಸ್ಮಿಕದ ಬಗ್ಗೆ ಒಂದು ಒಳ ಅರಿವು ಇರುತ್ತದೆ! ಒಂದು ರೋಮಾಂಚನವೂ ಇರುತ್ತದೆ. ಕಾಯಬಲ್ಲವರು ಮಾತ್ರ ಆಕಸ್ಮಿಕವನ್ನು ಅನುಭವಿಸಬಲ್ಲರು. ಲೌಕಿಕಕ್ಕಿಂತ ಹೆಚ್ಚು ಆಧ್ಯಾತ್ಮಿಕವಾಗಿ ಈ ಮಾತು ನಿಜ ಎನ್ನುವುದು ಉಪನಿಷತ್ತಿನ ಪಿಸುನುಡಿ.

-ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.