ಜ್ಞಾನದ ಹೆಬ್ಟಾಗಿಲು ಗುರು ದ್ವಾರ

ಗುರು ನಾನಕರ 550ನೇ ಜಯಂತಿ

Team Udayavani, Nov 3, 2019, 4:52 AM IST

ಧೈರ್ಯ, ಶೌರ್ಯ, ಸಾಹಸ, ಉದಾರತೆಯ ಸಿಕ್ಖ್ ಸಮುದಾಯ ಗುರು ನಾನಕರ 550ನೆಯ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿರುವ ವರ್ಷವಿದು. ಜಾತಿ ಧರ್ಮಗಳ ಭೇದವಿಲ್ಲದ ಸರ್ವ ಸಮಾನತೆಯ ಸರಳ ಬದುಕಿನ ಹಾದಿಯಲ್ಲಿ ನಡೆದ ಗುರು ನಾನಕರು, ಜಗತ್ತಿಗೇ ಗುರುಗಳಾದವರು.

ನಾನು ನನ್ನ ಪತಿ, ಮಗಳೊಡನೆ ಅಮೃತಸರದ ಸ್ವರ್ಣಮಂದಿರದ ಒಳಗೆ ಕಾಲಿಡುತ್ತಿದ್ದಂತೆ ಈ ಗುರುವಿನ ದ್ವಾರದಲ್ಲಿ ನಮ್ಮೆಲ್ಲ ಅಹಂಕಾರ ಸಂಹಾರವಾಗಿ, ಮನಸ್ಸು ಮಗುವಾಗಿತ್ತು, ನಮ್ರತೆಯಿಂದ ಹೃದಯ ತೇವವಾಗಿತ್ತು. ಸೇವೆ ಸಲ್ಲಿಸಲು ಅಲ್ಲಿ ನಿಂತ ಹಿರಿಯರೊಬ್ಬರು ನಮ್ಮ ಚಪ್ಪಲಿಗಳನ್ನು ಎತ್ತಿಕೊಂಡು ಮಸ್ತಕಕ್ಕೆ ಒತ್ತಿಕೊಂಡು ಒರೆಸಿ ಒಳಗಿಟ್ಟಾಗ, ವಿನಯದಿಂದ ತಲೆ ಬಾಗಿದ್ದೆ.

ಗುರು ನಾನಕರು 16ನೇ ಶತಮಾನದಲ್ಲಿ ಸಿಕ್ಖ್ ಧರ್ಮವನ್ನು ಸ್ಥಾ§ಪಿಸಿದ್ದರು. ಗುರು ನಾನಕರ ಬೋಧನೆಗಳು ಸರಳವಿದ್ದವು. ನಾಮ್‌ ಜಪ್ನ (ಧ್ಯಾನ), ಕೀರತ್‌ ಕರ್ನ (ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಮಾಡುವುದು) ಮತ್ತು ವಂದ್‌ ಚಖಾ° (ತಮ್ಮ ದುಡಿಮೆಯ ಫ‌ಲವನ್ನು ಎಲ್ಲರೊಡನೆ ಹಂಚಿಕೊಳ್ಳುವುದು).

ದಿಟವಾದ ಜಾತ್ಯತೀತ ಮನೋಭಾವದ ಗುರು ನಾನಕರು ಹಿಂದು- ಮುಸ್ಲಿಮ್‌ ಎಲ್ಲ ಧರ್ಮಗಳನ್ನು ಗೌರವಿಸಿದವರು. ಅವರು ನಡೆದ ಸರ್ವ ಸಮಾನತೆಯ ಹಾದಿಯಲ್ಲಿ ಅವರ ನಂತರದ ಸಿಕ್ಖ್ ಗುರುಗಳೂ ಹೆಜ್ಜೆ ಹಾಕಿದರು. ಈ ಅಮೃತಸರದ ಸ್ವರ್ಣಮಂದಿರ ಹರ್‌ಮಿಂದರ್‌ ಸಾಹಿಬ್‌ಗ ಬುನಾದಿ ಕಲ್ಲು ಹಾಕಲು ಐದನೇ ಸಿಕ್ಖ್ ಗುರು ಅರ್ಜುನ್‌ ದೇವ್‌, ಮುಸ್ಲಿಮ್‌ ಸೂಫಿ ಸಂತರಾದ ಹಸ್ರತ್‌ ಮಿಯಾ ಮೀರ್‌ ಅವರನ್ನು ಆಹ್ವಾನಿಸಿದ್ದರು.

ಹೊಳೆಯುವ ಸ್ವರ್ಣ ಮಂದಿರ

ಗುರುದ್ವಾರದ ಒಳಗೆ ಕಾಲಿಟ್ಟಂತೆ, ಸರೋವರದ ನಡುವೆ ಸ್ವರ್ಣಮಂದಿರ ಹೊಳೆದಿತ್ತು. ಗುರುವಿನ ಸನ್ನಿಧಿ, ಪ್ರಶಾಂತ ಮನಸ್ಥಿತಿ.

ಪವಿತ್ರ ಗುರುಗ್ರಂಥ ಸಾಹೀಬ್‌ನ ಗುರುವಾಣಿ ಕೇಳಿ ಬರುತ್ತಿತ್ತು. ಸಿಕ್ಕರ ಪವಿತ್ರ ಗ್ರಂಥ ಗುರುಗ್ರಂಥ ಸಾಹೀಬ್‌ನಲ್ಲಿ ಹಿಂದು ಮತ್ತು ಮುಸ್ಲಿಂ ಸಂತರ ಆಧ್ಯಾತ್ಮಿಕ ಚಿಂತನೆಗಳಿವೆ. ಬ್ರಾಹ್ಮಣ, ಚಮ್ಮಾರ, ಕ್ಷೌರಿಕ, ಜಾಟ್‌ ಹಿನ್ನೆಲೆಯ ಚಿಂತಕರೆಲ್ಲರ ಜಾತಿಭೇದವರಿಯದ ವಚನಗಳಿವೆ.
ಸ್ವರ್ಣಮಂದಿರಕ್ಕೆ ಹೋಗಿ ಹರಮಂದಿರ್‌ನಲ್ಲಿ “ಹಣೆಯುಜ್ಜಿ’ ಪ್ರಾರ್ಥಿಸಿದೆವು. ಮತ್ತೆ “ಲಂಗರ್‌’ನಲ್ಲಿ ಊಟ ಮಾಡಲು ಹೊರಟೆವು. ಗುರುವಿನ ಲಂಗರ್‌ಗೆ ಬಹಳ ಮಹತ್ವವಿದೆ. ಅಕºರ್‌ ಚಕ್ರವರ್ತಿ ಕೂಡಾ ಲಂಗರ್‌ನಲ್ಲಿ ಕುಳಿತು ಉಂಡ ಕತೆ ಇದೆ.

ಅಕ್ಬರ್‌ ಸಿಕ್ಖ್ ಗುರುಗಳನ್ನು ಅತ್ಯಂತ ಗೌರವದಿಂದ ಕಂಡಾತ. 1569ರಲ್ಲಿ ಅಕºರ್‌ ಪಂಜಾಬಿಗೆ ಬಂದಾಗ, ಗುರು ಅಮರ್‌ ದಾಸ್‌ ಅವರನ್ನು ಕಾಣಲು ಬಯಸಿದ. ಆತನ ಆಗಮನದ ಸುದ್ದಿ ತಲುಪಿದೊಡನೆ ಗುರುವಿನ ಅನುಯಾಯಿಗಳು ಚಕ್ರವರ್ತಿಯನ್ನು ಸ್ವಾಗತಿಸಲು ಸಂಭ್ರಮದ ತಯಾರಿ ಮಾಡಲು ಸಿದ್ಧವಾದರು. ಅಮರ್‌ ದಾಸ್‌ ಅವರನ್ನು ತಡೆದು ಹೇಳಿದರು, “ಗುರುವಿನ ದ್ವಾರ ಎಲ್ಲರಿಗೂ ಸಮಾನವಾಗಿ ತೆರೆದಿದೆ. ಹಿಂದುವಾಗಲಿ, ಮುಸ್ಲಿಮನಾಗಲಿ, ರಾಜನಾಗಲಿ, ಪ್ರಜೆಯಾಗಲಿ, ಶ್ರೀಮಂತನಾಗಲಿ, ಬಡವನಾಗಲಿ – ಎಲ್ಲರಿಗೂ ಇಲ್ಲಿ ಸಮಾನ ಸ್ವಾಗತ. ಅಕºರ್‌ ಕೂಡ ಮತ್ತೆಲ್ಲ ಆಗಂತುಕರಂತೆಯೇ ಸ್ವಾಗತಿಸಲ್ಪಡಬೇಕು’.

ಗುರುದ್ವಾರಕ್ಕೆ ಆಗಮಿಸಿದ ಅಕ್ಬರ್‌, ಗುರುವಿನ ಲಂಗರ್‌ನಲ್ಲಿ ಪಾಲ್ಗೊಂಡ. ಗುರುವಿನ ಲಂಗರ್‌ನಲ್ಲಿ ಹಗಲು-ರಾತ್ರಿ ಹಸಿದವರಿಗೆ ಸರಳವಾದ ಊಟ ಕಾದಿರುತ್ತದೆ. ಗುರುವಿನ ಲಂಗರ್‌ನಲ್ಲಿ ಅಕºರ್‌ ಇನ್ನುಳಿದ ಸಾಮಾನ್ಯ ಜನರೊಡನೆ, ಯಾತ್ರಿಗಳು, ಭಿಕ್ಷು ಗ ಳು, ಅಪ್ಪಟ ಅಪರಿಚಿತರೊಡನೆ ತನ್ನೆಲ್ಲ ಚಕ್ರವರ್ತಿಯ ಬಿರುದು ಬಾವಳಿ ಅಹಂಕಾರಗಳನ್ನು ಕೆಳಗಿರಿಸಿ ಕುಳಿತು ಊಟ ಮಾಡಿದರು. ಇಲ್ಲಿ ಜಾತಿ-ಭೇದಗಳಿಲ್ಲ, ಮೇಲು-ಕೀಳುಗಳಿಲ್ಲ. ಸ್ವಯಂಸೇವಕರು ಪ್ರೀತಿಯಿಂದ ಮಾಡಿ ಬಡಿಸಿದ ಲಂಗರ್‌ನ ಆ ಸರಳ ಊಟವನ್ನು ತಿಂದ ಅಕºರ್‌ ಮನಸ್ಸು ಸಂತಸ ಮತ್ತು ತೃಪ್ತಿಯಿಂದ ತುಂಬಿ ಬಂದಿತ್ತು. ಹೊರಡುವಾಗ ಅಕºರ್‌ ಹೇಳಿದರು, “ಗುರುನಾನಕರ ಧರ್ಮ ನನಗೆ ಅತ್ಯಂತ ಪ್ರಿಯವಾಗಿದೆ. ಅವರ ಬೋಧನೆಗಳನ್ನು ಗೌರವಿಸುತ್ತೇನೆ. ಈ ಲಂಗರ್‌ ಸದಾ ಕಾಲಕ್ಕೂ ನಡೆಯುವಂತೆ, 22 ಹಳ್ಳಿಗಳನ್ನು ನೀಡುತ್ತೇನೆ’.

ಗುರು ಅಮರ್‌ ದಾಸ್‌ ಅಕ್ಬರನ ಕೊಡುಗೆಯನ್ನು ಗೌರವದಿಂದ ನಿರಾಕರಿಸುತ್ತ¤ ಹೇಳಿದರು, “ಪ್ರಿಯ ಅಕºರ್‌, ನಿಮ್ಮ ಕೊಡುಗೆಯನ್ನು ನಾನು ಸ್ವೀಕರಿಸಲಾರೆ. ಗುರು ಎಲ್ಲರೂ ಶ್ರಮ ಪಟ್ಟು ದುಡಿಯಬೇಕೆಂದು ಬಯಸುತ್ತಾರೆ. ತಮ್ಮ ಪ್ರಾಮಾಣಿಕ ದುಡಿಮೆಯ ಒಂದು ಭಾಗವನ್ನು ಲಂಗರ್‌ಗೆ ನೀಡಿ ಇತರರೊಡನೆ ಹಂಚಿಕೊಳ್ಳಬೇಕೆಂದು ಬಯಸುತ್ತಾರೆ. ಈ ಲಂಗರ್‌ ಜನರಿಂದ, ಅವರು ನೀಡುವ ದಾನದಿಂದ ನಡೆಯಬೇಕು. ರಾಜಾಶ್ರಯದಲ್ಲಿ ರಾಜನ ಕೊಡುಗೆಯಿಂದಲ್ಲ. ಗುರುವಿನ ಲಂಗರ್‌ನಲ್ಲಿ ಎಲ್ಲರೂ ಸಮಾನರು, ಎಲ್ಲರೂ ಇಲ್ಲಿಯ ಕೆಲಸವನ್ನು ಹಂಚಿಕೊಳ್ಳುತ್ತಾರೆ, ಸೇವೆ ಸಲ್ಲಿಸುತ್ತಾರೆ, ಲಂಗರ್‌ಗೆ ಅಗತ್ಯದ ಪರಿಕರಗಳನ್ನು ನೀಡುತ್ತಾರೆ. ಎಲ್ಲರೂ ಜೊತೆಯಲ್ಲಿ ಕುಳಿತುಕೊಳ್ಳುತ್ತಾರೆ. ಪ್ರೀತಿಯಿಂದ ಬಡಿಸಿದ ಸರಳವಾದ ಊಟವನ್ನು ತಿನ್ನುತ್ತಾರೆ’. ಅಕºರನ ವಿಶಾಲ ಮನಸ್ಸಿಗೆ ಗುರುವಿನ ಮಾತುಗಳು ತುಂಬ ಹಿಡಿಸಿದವು.

ಇಂದಿಗೂ ಗುರುದ್ವಾರಗಳಲ್ಲಿ ಗುರುವಿನ ಲಂಗರ್‌ಗಳು ಜನರ ಕೊಡುಗೆಯಿಂದ, ಜನರ ಸೇವೆಯಿಂದ ನಡೆದು ಬಂದಿವೆ. ಲಂಗರ್‌ಗೆ ನಾವು ಪ್ರವೇಶಿಸುತ್ತಿದ್ದಂತೆ, ಸೇವೆ ಸಲ್ಲಿಸಲು ನಿಂತ ಅದೆಷ್ಟೋ ಜನ, ನಮ್ಮ ಕೈಗೆ ತಟ್ಟೆಯನ್ನು ಲೋಟವನ್ನು ಕೊಟ್ಟರು.

ಒಳಗೆ ಊಟದ ತಾಣಕ್ಕೆ ಬಂದೆವು. ಸಾಲು ಸಾಲು ಕುಳಿತ ನೂರಾರು ಜನ. ಅವರ ಬಗಲಿಗೆ ನಾವೂ ಕುಳಿತೆವು. ಎಲ್ಲವೂ ಸ್ವತ್ಛ. ಅಷ್ಟು ಜನ ತಿಂದು ಹೋಗುತ್ತಿದ್ದ ಈ ತಾಣದಲ್ಲಿ ನೆಲದ ಮೇಲೆ ಒಂದು ಅಗುಳೂ ಬಿದ್ದಿರಲಿಲ್ಲ. ಮಧ್ಯೆ ಮಧ್ಯೆ ಸ್ವಯಂಸೇವಕರು ಒರೆಸಲು ಸಿದ್ಧವಾಗಿ ನಿಂತಿದ್ದರು.

ಬುಟ್ಟಿಯಲ್ಲಿ ರೊಟ್ಟಿ ಹಿಡಿದು ತಂದು ತಟ್ಟೆಗೆ ಹಾಕಿದರು. ಎಲ್ಲ ಗುರುದ್ವಾರಗಳಂತೆ, ಇಲ್ಲಿಯೂ ಒಂದು ಬೇಳೆಯ ಸಾರು, ಒಂದು ಪಲ್ಯ, ಉಪ್ಪಿನ ಕಾಯಿ. ಜೊತೆಗೆ ಕಿಚಡಿಯನ್ನೂ ಬಡಿಸಿದರು. ಮತ್ತೆ ಮತ್ತೆ ಬಂದು ಕೇಳಿದರು, “ರೋಟಿ ಬೇಕೆ, ಕಿಚಡಿ ಇನ್ನಷ್ಟು ಹಾಕಲೆ?’ ಬೆರಗಾದೆ ಅಕ್ಷಯವಾದ ಗುರುವಿನ ಲಂಗರ್‌ ಸವಿದು.

ಉಂಡ ತಟ್ಟೆಯನ್ನು ಹಿಡಿದು ಹೊರಗೆ ಬರುತ್ತಿದ್ದಂತೆ, ತಟ್ಟನೆ ಅಲ್ಲಿ ನಿಂತ ಮತ್ತಷ್ಟು ಜನ ನಮ್ಮ ಕೈಯಿಂದ ತಟ್ಟೆ ತೆಗೆದುಕೊಂಡರು. ಅದೋ ಕಾದ ಹತ್ತಾರು ಕೈಗಳು ಆತುರದಿಂದ ಅವನ್ನು ಸೋಪಿನ ನೀರಿನಲ್ಲಿ ಅದ್ದಿ ಸ್ವತ್ಛವಾಗಿ ತೊಳೆದರು. ಮತ್ತಷ್ಟು ಜನ ತೊಳೆದ ತಟ್ಟೆಗಳನ್ನು ಒರೆಸಿ ಜೋಡಿಸುತ್ತಿದ್ದರು. ನಮ್ಮ ಅರಿವೇ ಇಲ್ಲದೆ, ಸೇವೆಯ ಅವಕಾಶ ಅಯಸ್ಕಾಂತದಂತೆ ನಮ್ಮನ್ನು ಸೆಳೆದಿತ್ತು. ಮರು ಕ್ಷಣ ನಾವಲ್ಲಿ ಹೋಗಿ ನಿಂತಿದ್ದೆವು. ನಮ್ಮ ಕೈಗಳು ತಟ್ಟೆ ತೊಳೆದವು. ಲಂಗರ್‌ ಮುಗಿದ ಸಮಯ, ಹೊರಬಂದೆವು. ಮತ್ತೆ ರಾತ್ರಿಯ ಲಂಗರ್‌ಗೆ ಅದೆಷ್ಟೋ ಜನ ಅಲ್ಲಿ ಕುಳಿತು ತರಕಾರಿ ಸ್ವತ್ಛ ಮಾಡುತ್ತಿದ್ದರು, ಬೆಳ್ಳುಳ್ಳಿ ಬಿಡಿಸುತ್ತಿದ್ದರು. ಅವರ ನಡುವೆ ನಾವೂ ಹೋಗಿ ಕುಳಿತೆವು. ಸೇವೆಯ ಆನಂದ ಹೃದಯ ತುಂಬಿತ್ತು.

ನಿಷ್ಕಲ್ಮಶ ಮನಸ್ಸಿನ ಸೇವೆಯಲ್ಲಿ, ಯಾವುದೇ ಪ್ರತಿಫ‌ಲ, ಲಾಭ, ಲೋಭವಿಲ್ಲದ ಸೇವೆಯಲ್ಲಿ, ಇಲ್ಲಿ ಗುರುವಿನ ದ್ವಾರದಲ್ಲಿ ನಮ್ಮ ಗರ್ವ, ಅಹಂಕಾರಗಳು ಸದ್ದಿಲ್ಲದೆ ಕರಗಿ ಹೋಗಿದ್ದವು.

ನೇಮಿ ಚಂದ್ರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ಪ್ರಸಿದ್ಧ ಕತೆಗಾರ ಕೆ. ಸದಾಶಿವರು "ನಲ್ಲಿಯಲ್ಲಿ ನೀರು ಬಂದಿತು' ಎಂಬ ಕತೆ ಬರೆದಿದ್ದರು. "ಹಳ್ಳಿ ಮಾರ್ಗದಲ್ಲಿ ಬಸ್ಸು ಬಂದಿತು' ಎಂಬ ಶೀರ್ಷಿಕೆಯಲ್ಲೇನಾದರೂ...

  • ಯಾಂತ್ರಿಕ ಜೀವನ', "ಕಾಂಕ್ರೀಟ್‌ ಕಾಡು' ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ-...

  • Trying to use words, and every attempt Is a wholly new start, and a different kind of failure ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ?...

  • ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು...

  • ಎಂಎ ಓದುತ್ತಿರುವಾಗ ಸಾಹಿತಿ ಅರುಣ್‌ ಕೊಲಾಟ್ಕರ್‌ ಅವರ ಕವಿತೆಗಳನ್ನು ಓದಿದ್ದೆ. ಜೆಜುರಿ ಅನ್ನುವ ಕವಿತಾಸಂಕಲನ ಬಹಳ ಪ್ರಸಿದ್ಧ. ಮಾರ್ಮಿಕವಾಗಿ ಬರೆಯುವ, ಮರಾಠಿ...

ಹೊಸ ಸೇರ್ಪಡೆ