ಮನಸ್ಸುಗಳು ದ್ವೀಪಗಳು: ಮಾತುಗಳು ಮುರಿದ ಸೇತುಗಳು

Team Udayavani, Mar 26, 2017, 3:50 AM IST

ಲಿಂಗ ಭೇದ-ವರ್ಗಭೇದಗಳಂತಹ ಸಾಮಾಜಿಕ ಅನಿಷ್ಟಗಳ ಕುರಿತಂತೆ ವ್ಯಾಪಕವಾಗಿ ಎಚ್ಚರ ಮೂಡಿದೆ; ಆರೋಗ್ಯ, ಸುರಕ್ಷತೆ, ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶಗಳಿಂದ ಸಾಮಾಜಿಕವಾಗಿ ಪ್ರಗತಿ ಸಾಧ್ಯವಾಗಿದೆ; ವಿಶ್ವದ ಬಹುತೇಕ ಎಲ್ಲೆಡೆ ಜನರ ಜೀವನಮಟ್ಟ ಸಾಕಷ್ಟು ಸುಧಾರಿಸಿದೆ; ಮನುಷ್ಯ ಈ ಭೂಮಿಯ ಮೇಲೆ ಹಿಂದೆಂದಿಗಿಂತಲೂ ಸುರಕ್ಷಿತನಾಗಿ ನೆಮ್ಮದಿಯಾಗಿ ಜೀವಿಸುತ್ತಿದ್ದಾನೆ- ಇವೆಲ್ಲ ಸದ್ಯದ ಗ್ರಹಿಕೆಗಳು. ಬಹುತೇಕ ಮಟ್ಟಿಗೆ ಇದು ನಿಜವಾದರೂ ಮಧ್ಯ ಪ್ರಾಚ್ಯದ ಅನೇಕ ದೇಶಗಳಲ್ಲೂ ವಿಶ್ವದ ಕೆಲವೆಡೆಗಳಲ್ಲೂ ಅಲ್ಲಲ್ಲಿಯ ರಾಜಕೀಯ ಪರಿಸ್ಥಿತಿಗಳೇ ಮುಖ್ಯ ಕಾರಣವಾಗಿ ಅಲ್ಲಿಯ ಜನರ ಬದುಕು ಹಿಂದೆ ಇದ್ದಿದ್ದಕ್ಕಿಂತಲೂ ಹೆಚ್ಚು ಕಷ್ಟದಲ್ಲಿ ಸಿಲುಕಿರುವುದು ಕೂಡ ಅಷ್ಟೇ ನಿಜ. ಮೊನ್ನೆ ಮೊನ್ನೆಯಷ್ಟೇ ಎಂಟು ವರ್ಷಗಳ ಕಾಲದ ತಮ್ಮ ಅಧ್ಯಕ್ಷಾವಧಿ ಮುಗಿಸಿ ನಿರ್ಗಮಿಸುವ ಸಮಯದಲ್ಲಿ ಬರಾಕ್‌ ಒಬಾಮಾ ಅವರ ಭಾಷಣದಲ್ಲಿಯೂ ಅವರು ಪ್ರಸ್ತಾಪಿಸಿದ್ದು ಈ ವಿಷಯವನ್ನೇ. “”ಅಮೆರಿಕ ಹಿಂದೆಂದಿಗಿಂತಲೂ ಈಗ ಹೆಚ್ಚು ಸುರಕ್ಷಿತವಾಗಿಯೂ ಸುಭಿಕ್ಷವಾಗಿಯೂ ಇರುವಂಥ ಕಾಲದಲ್ಲಿ ನಾವಿದ್ದೇವೆ, ನೂರಾರು ಸಂಕಷ್ಟಗಳಲ್ಲಿ ಹಾದುಬಂದ ಪ್ರಜಾಪ್ರಭುತ್ವ, ಅದರ ದಾರಿಯಲ್ಲಿ ನಿರಂತರವಾಗಿ ಎರಗಿ ಬರುತ್ತಲೇ ಇರುವ ಸವಾಲುಗಳನ್ನು ಎದುರಿಸಲು ಇಂದು ಹಿಂದೆಂದಿಗಿಂತಲೂ ಹೆಚ್ಚು ಶಕ್ತವಾಗಿದೆ ಮತ್ತು ಪ್ರಬುದ್ಧವಾಗಿದೆ” ಎಂಬರ್ಥದ ಅವರ ಮಾತುಗಳು ಬಹುತೇಕ ನಿಜವೇ. ಆದರೆ ಡೊನಾಲ್ಡ… ಟ್ರಂಪ್‌ ಅವರು ಅಧ್ಯಕ್ಷತೆ ವಹಿಸಿಕೊಂಡ ಕೆಲವೇ ತಿಂಗಳುಗಳ ಅವಧಿಯಲ್ಲಿ ಇಲ್ಲಿರುವ ಅಲ್ಪಸಂಖ್ಯಾತರ ಮತ್ತು ಇಲ್ಲಿ ಬಂದು ಆಶ್ರಯ ಪಡೆಯಬೇಕೆಂದಿದ್ದ ನಿರಾಶ್ರಿತರ ಜೀವನದಲ್ಲಿ ಸಾಕಷ್ಟು ವಿಪ್ಲವಗಳಾಗಿವೆ. ಅದರ ಜೊತೆ ಜೊತೆಗೇ ಎಂದಿನ ಹಾಗೆ ಸಾಮಾಜಿಕ ತಾಣಗಳಲ್ಲಾಗುವ ಅತಿರಂಜಿತ, ಅತಿ ರೋಚಕ ಬೇಜವಾಬ್ದಾರಿಯಾದ ಮಾತುಕತೆಗಳೇ ಮುಖ್ಯವಾಗಿ ಹಿಂದೆಂದೂ ಇಲ್ಲಿ ಈ ಪ್ರಮಾಣದಲ್ಲಿ ಇಂತಹದ್ದೇನೂ ನಡೆದೇ ಇರಲಿಲ್ಲವೇನೋ ಎಂಬಂತೆ ಆಗಿರುವ ಅಹಿತಕರ ಘಟನೆಗಳೆಲ್ಲವನ್ನೂ ಭೂತಕನ್ನಡಿಯಲ್ಲೇ ನೋಡಿ ಅದನ್ನು ದೊಡ್ಡದಾಗಿಯೂ ಮಾಡಲಾಗುತ್ತಿದೆ. ನಡೆದಿರುವ ಈ ಘಟನೆಗಳಿಗೆ ನಾವೆಲ್ಲರೂ ಸಾಕ್ಷಿ ಹೇಗೋ ಹಾಗೇ  ಜವಾಬ್ದಾರರೂ ಹೌದು ಎಂದುಕೊಳ್ಳುತ್ತ ಈ ಸ್ವಂತ ಮತ್ತು ಅನ್ಯ ಎಂಬ ಮನುಷ್ಯನ ಜೀವಿತಕ್ಕೆ ಅತ್ಯಗತ್ಯವಾದ ಭಾವವೊಂದು ಅಳತೆ ಮೀರಿದಾಗ ಸೃಷ್ಟಿಸಬಹುದಾದ ಆತಂಕಗಳನ್ನು ಗಮನಿಸಬೇಕಿದೆ. 

ಹುಟ್ಟುತ್ತಲೇ ಹಲವು ಹಣೆಪಟ್ಟಿಗಳನ್ನು ಧರಿಸುತ್ತಲೇ ಹುಟ್ಟುವುದು ನಮ್ಮೆಲ್ಲರಿಗೂ ಅನಿವಾರ್ಯ. ಲಿಂಗ, ವರ್ಗ, ಕುಟುಂಬ ಇತ್ಯಾದಿ ಇತ್ಯಾದಿಗಳ ಗುರುತಿನಲ್ಲೇ ತನ್ನನ್ನು ಉಳಿದವರು ಗುರುತಿಸುವುದರಿಂದಲೇ ಮಗುವೊಂದು “ಅದು ತನ್ನ ಗುರುತು’ ಎಂದು ತಾನೂ ಪರಿಭಾವಿಸುತ್ತದೆ. ಆದರೆ, ಈ ಅರಿವು ಮೂಡುವ  ಮುಂಚೆಯೂ ಜೀವವೊಂದಕ್ಕೆ ತನ್ನದೇ ದೇಹ, ಮನಸ್ಸು ಮತ್ತು ಸನ್ನಿವೇಶಗಳು ಒದಗಿಸುವ ಸಂವೇದನೆಗಳ ಮೂಲಕ ಸ್ವಂತ ಮತ್ತು ಅನ್ಯ ಎಂಬ ಎರಡು ನೆಲೆಗಳ ಪರಿಚಯ ಒದಗಿರುತ್ತದೆ. ತನಗೆ ಹಸಿವಾದಾಗ ಉಣಬೇಕು, ನೋವಾದಾಗ ಅಳಬೇಕು ಎಂಬುದನ್ನು ಮಗು ತನ್ನದೇ ಅನುಭವದಿಂದ ಕಲಿಯುವುದು ತನ್ನ ಬೆಳವಣಿಗೆಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅನ್ಯದ ಕುರಿತು ಕುತೂಹಲವನ್ನು, ಆಸ್ಥೆಯನ್ನೂ ಬೆಳೆಸಿಕೊಳ್ಳುವುದು. ತನ್ನದೇ ಪರಿಸರದ ತನ್ನ ಪರಿವಾರದ ಸದಸ್ಯರನ್ನು ತಾನಲ್ಲದ ಬೇರೊಬ್ಬರು ಎಂದು ಗುರುತಿಸುವಂತೆಯೇ ಕನ್ನಡಿಯಲ್ಲಿ ಕಾಣುವುದು ತಾನಲ್ಲದ ಆದರೆ ತನ್ನದೇ ಆದ ಪ್ರತಿಬಿಂಬ ಎನ್ನುವುದನ್ನೂ ಮಗು ಕಲಿಯುತ್ತದೆ. ಈ ಸ್ವಂತ ಮತ್ತು ಅನ್ಯ ಎಂಬ ಎರಡು ನೆಲೆಗಳಲ್ಲಿ ಸೌಹಾರ್ದವಿದ್ದಷ್ಟೂ ಅದು ಅನುದಿನದ ತನ್ನ ಪಾಲಿನ ಬದುಕನ್ನು ಸುಗಮಗೊಳಿಸುವುದನ್ನೂ ಈ ಎರಡರ ನಡುವಿನ ಘರ್ಷಣೆ ಸಂಕಟಗಳಿಗೆ ಕಾರಣವಾಗುವುದನ್ನೂ ಸಹ ಅರಿಯತೊಡಗುತ್ತದೆ. ವ್ಯಕ್ತಿಮಟ್ಟದ ಈ ಇದೇ ಅವಸ್ಥೆಯೇ ತನ್ನ ಕುಟುಂಬ, ತಾನಿರುವ ಸ್ಥಳ, ಊರು, ದೇಶ ಮತ್ತು ವಿದೇಶಗಳ ನೆಲೆಯಲ್ಲೂ ಮುಂದುವರಿಯುವುದು ಸಹಜ. ನಾವಿರುವ ಪರಿಸರದಲ್ಲಿ ಈ ಅನ್ಯದ ವೈವಿಧ್ಯಗಳು ಹೆಚ್ಚಾದಂತೆಯೇ ಅದರ ಕುರಿತು  ಕುತೂಹಲ ಮತ್ತು ಸೌಹಾರ್ದ ಎರಡೂ ಬೆಳೆಯಬೇಕಾದ್ದು ತೀರಾ ಅತ್ಯವಶ್ಯಕ. ತನ್ನತನದ ಅರಿವೇ ಅನ್ಯದ ಬಗೆಗಿನ ಸೌಹಾರ್ದಕ್ಕೂ ಹಾದಿ ಮಾಡಿಕೊಡುವುದು ಕೂಡ ಹೌದು. ಆದರೆ, ಈ ಉದಾರತೆಯ ನಿಲುವಿನಲ್ಲೇ ನಾವು ಮರೆಯದೆ ಇರಬೇಕಾದ ಇನ್ನೊಂದು ಮನುಷ್ಯ ಸಹಜ ಗುಣವಿದೆ. ಅದು, ತನಗೆ ಪರಿಚಿತವೆಂದು ಅನ್ನಿಸುವ ಪರಿಸರದಲ್ಲಿ ಹೆಚ್ಚು ಸುರಕ್ಷತೆಯನ್ನು ಅನುಭವಿಸುವುದು ಮತ್ತು ಅದು ಸುರಕ್ಷಿತವಲ್ಲದಿರುವ ಸಂದರ್ಭಗಳಲ್ಲೂ ಅದು ಹಾಗಿದೆ ಎಂದೇ ನಂಬುತ್ತ ಸುರಕ್ಷತೆಯ ಭಾವವನ್ನು ಅನುಭವಿಸಲು ಹೆಣಗಾಡುವುದು.

“ಅನ್ಯ’ ಎಂಬ ಅಸಹನೆ 
ಕಳೆದ ಹದಿನೇಳು ವರ್ಷಗಳಿಂದ ಅಮೆರಿಕವಾಸಿಯಾಗಿರುವ ನನಗೆ ಈವರೆಗೂ ಒಮ್ಮೆಯಾದರೂ ಭಾರತೀಯ ಮೂಲದವಳು ಎಂಬ ಕಾರಣದಿಂದ ಅಹಿತಕರ ಎನ್ನುವ ಒಂದೇ ಒಂದು ಅನುಭವವೂ ಆಗಿಲ್ಲ ಎಂದು ನಾನು ಹೇಳುವಾಗಲೂ ಇದಕ್ಕೆ ವ್ಯತಿರಿಕ್ತವಾದ ಅನುಭವ ಇಲ್ಲಿರುವ ಕೆಲವು ಅನಿವಾಸಿಗಳಿಗೆ ಇದೇ ಅವಧಿಯಲ್ಲಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಆದರೆ ಈಗ ಏಕಾಏಕಿ ಟ್ರಂಪ್‌ ಅವರು ಅಧ್ಯಕ್ಷರಾದ ನಂತರದಲ್ಲಿ, ಈ ದೇಶದಲ್ಲಿ ಅಲ್ಲಲ್ಲಿ ನಡೆದಿರುವ ಅನಿವಾಸಿ ಭಾರತೀಯ ಮೂಲದ ವ್ಯಕ್ತಿಗಳ ಮೇಲಾದ ಹಲ್ಲೆಗಳೂ ಮತ್ತು ಒಂದು ಹತ್ಯೆಯೂ ಭಾರತೀಯ ಮೂಲದ ಜನರಲ್ಲಿ ಆತಂಕ ಹುಟ್ಟಿಸಿದೆ ಎಂಬ ಸುದ್ದಿ ಹಿಂದೆಂದಿಗಿಂತಲೂ ಪ್ರಾಮುಖ್ಯ ಪಡೆದಿರುವುದಕ್ಕೆ ಮಾತ್ರ ಎದ್ದು ಕಾಣುವ ಕಾರಣವೊಂದು ಇದೆ. ವಲಸಿಗರ ದೇಶವೇ ಆಗಿ ಅಸ್ತಿತ್ವಕ್ಕೆ ಬಂದು ವಿಶ್ವದ ಹಲವೆಡೆಯಿಂದ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಕಾರಣಗಳಲ್ಲಿ ಹರಿದುಬಂದ ಜನರಿಗೆ ಇದು ತಮ್ಮ ಮನೆ ಅನ್ನಿಸುವಂತೆ ಮಾಡಿದ್ದ ಈ ನೆಲದಲ್ಲಿ “ಅನ್ಯ’ ಎಂಬ ಹಣೆಪಟ್ಟಿಯ ಕುರಿತು ಅಸಹನೆ ತುಂಬಿರುವ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ¨ªಾರೆ. ಅಧ್ಯಕ್ಷರ ಈ ವಲಸೆ ವಿರೋಧಿ ನಿಲುವಿನ ಸಮರ್ಥನೆಯ ಜೊತೆ ಜೊತೆಗೇ ಇಲ್ಲಿರುವ ಮಧ್ಯಮ, ಬಡ ಮಧ್ಯಮ ಮತ್ತು ಇನ್ನೂ ಕೆಳವರ್ಗದ ಸ್ಥಳೀಯ ಜನರ ಬದುಕಿನಲ್ಲಾಗಿರುವ ವಿಪ್ಲವಗಳು ಕೂಡ ವಲಸಿಗರನ್ನು ಕುರಿತಂತೆ ಆ ವರ್ಗದ ಹಲವರ ಅಸಹನೆಗೆ ಕಾರಣವಾಗಿದೆ.

ಈ ನೆಲದಲ್ಲಿ ನೆಲೆಸಿ ಅಮೆರಿಕನ್ನರಾಗಿರುವ  ಎಲ್ಲರೂ ಒಂದಲ್ಲ ಒಮ್ಮೆ ಬೇರೆಲ್ಲಿಂದಲೋ ಬಂದು ನೆಲೆಸಿದ ವಲಸಿಗರೇ ಆಗಿದ್ದರೂ ಹಾಗೆ ಬೇರೆ ಬೇರೆ ಕಾಲದಲ್ಲೂ ಸಂದರ್ಭಗಳಲ್ಲೂ ಬಂದವರು ಹಾಗೆ ಬಂದದ್ದಕ್ಕೆ ಇದ್ದ, ಇರುವ ಕಾರಣಗಳೂ ಕೂಡ ಬೇರೆಯೇ. ಆದರೆ, ಹಾಗೆ ವಲಸಿಗರಾಗಿ ಇಲ್ಲಿಗೆ ಬಂದ ಬಹುತೇಕ ಎಲ್ಲರೂ ಒಂದಲ್ಲ ಒಂದು ಕಾಲಘಟ್ಟದಲ್ಲಿ, ಸಂದರ್ಭಗಳಲ್ಲಿ ಸಂಕಷ್ಟಗಳನ್ನು ಎದುರಿಸಿದ್ದಾರೆ. ಭಾರತೀಯ ಸಮುದಾಯಕ್ಕೂ ಚಾರಿತ್ರಿಕವಾಗಿ ನೋಡಿದರೆ ಈ ಮುಂಚೆಯೂ ಹಲವಾರು ಸಂದರ್ಭಗಳಲ್ಲಿ ಸಂಕಟಗಳು ಎದುರಾಗಿದೆ ಮತ್ತು ಮುಂದೆಯೂ ಈ ಸವಾಲುಗಳು ಎಲ್ಲಾ ಸಮುದಾಯಕ್ಕೂ ಮುಂದುವರಿಯುವ ಸಂಭವವೂ ಇದೆ. ಆದರೆ, ಇಲ್ಲಿಯ ತನಕವೂ ವಲಸಿಗರ ಪರವಾಗಿಯೇ ಇದ್ದ  ಅಮೆರಿಕ ಸರ್ಕಾರ ಮತ್ತು ಸಾಮಾನ್ಯ ಜನರ ಧನಾತ್ಮಕ ಮನೋಭಾವದಿಂದಾಗಿಯೇ ವಿಶ್ವದ ಎಲ್ಲೆಡೆಯಿಂದ ಬಂದವರೂ ತಮ್ಮ  ಭಾಷೆ, ಭಾವ, ಸಂಸ್ಕೃತಿಯ ವಿಷಯವಾಗಿ ಎಷ್ಟೋ ಬಾರಿ ತಾವು ಬಿಟ್ಟು ಬಂದ ನೆಲದಲ್ಲಿದ್ದಿದ್ದಕ್ಕಿಂತಲೂ ಇಲ್ಲಿ ಹೆಚ್ಚಾಗಿಯೇ ಅಂಟಿಕೊಂಡು ಆಚರಿಸಲು ಅಂಥ ಯಾವ ಅಡ್ಡಿ-ಆತಂಕಗಳೂ ಇರಲಿಲ್ಲ ಎನ್ನುವುದನ್ನು ನಾವು ಗಮನಿಸಲೇಬೇಕಾಗಿದೆ. 

ಅದಿರಲಿ, ಸುಲಭಕ್ಕೆ ಅನ್ಯ ಎಂದು ಬಿಡಬಹುದಾದ ಅಮೆರಿಕದ ವಿಷಯ ಬಿಟ್ಟು ಭಾರತವನ್ನು ಅಥವಾ ವಿಶ್ವದ ಯಾವುದೇ ದೇಶವನ್ನು ಒಮ್ಮೆ ಗಮನಿಸಿ. ಭಾರತದಲ್ಲೇ ಇರುವ ಎಷ್ಟು ಭಾರತೀಯರು ಕೇವಲ ತಮ್ಮ ನೆಲದಲ್ಲಿ ತಾವಿರುವ ಕಾರಣವೊಂದರಿಂದಲೇ ಸುರಕ್ಷಿತರಾಗಿ, ಘನತೆಯಿಂದ, ನೆಮ್ಮದಿಯಿಂದ ಬದುಕುತ್ತಿದ್ದಾರೆಯೆ ಎಂಬುದನ್ನು ಒಮ್ಮೆ ಪರಾಮರ್ಶಿಸಿ. ಬಹುಶಃ ಈ ಅನ್ಯ ಮತ್ತು ಸ್ವಂತ ಎಂಬ ನೆಲೆಗಳ ಕುರಿತು ಮತ್ತು ಆದಷ್ಟೂ ಅದನ್ನು ಅದು ಇರುವ ಹಾಗೆಯೇ ಅರಿಯುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಕುರಿತೂ ನಾವು ವಸ್ತುನಿಷ್ಠವಾಗಿ ಯೋಚಿಸಬಹುದೇನೋ. ತನ್ನಂತೆ ಪರರ ಬಗೆವ ಒಂದೇ ಒಂದು ಆದರ್ಶವನ್ನು ಮನುಷ್ಯ ತನ್ನದಾಗಿಸಿಕೊಳ್ಳಲು ಪ್ರಯತ್ನಿಸಿದಲ್ಲಿ ಈ ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಸಿಗಬಹುದು. ಆದರೆ ಸದ್ಯದ ಸಂದರ್ಭದಲ್ಲಿ ಅಮೆರಿಕದಲ್ಲಿ ಅಷ್ಟೇ ಅಲ್ಲ, ಭಾರತದ ಒಳಗೂ ಹಣೆಪಟ್ಟಿಗಳ ಭರಾಟೆಯೇ ಹೆಚ್ಚಾಗಿ, ಎಲ್ಲವನ್ನೂ ಒಡೆದು ನೋಡುವ ಪ್ರವೃತ್ತಿಯೇ ವಿಜೃಂಭಿಸುತ್ತಿದೆ. ವಾಟ್ಸಾಪ್‌ ಗುಂಪುಗಳಲ್ಲಿ ಅದರಲ್ಲೂ ಭಾರತದ ಒಳಗೇ ಇರುವ ಭಾರತೀಯರೇ ಹೆಚ್ಚಾಗಿ  ಮಾಡಿಕೊಂಡಿರುವ ವಾಟ್ಸಾಪ್‌ ಗುಂಪುಗಳಲ್ಲೂ ಫೇಸ್‌ಬುಕ್‌ನಂಥ ಸಾಮಾಜಿಕ ತಾಣಗಳಲ್ಲೂ ನಾನು ಸದ್ಯಕ್ಕೆ ಗಮನಿಸಿರುವಂತೆ ಜಾತಿ, ಧರ್ಮ, ನಂಬಿಕೆ, ರಾಜಕೀಯ ಸಿದ್ಧಾಂತಗಳ ಆಧಾರದ ಮೇಲೆ ನಡೆಯುವ ಕೊನೆ ಮೊದಲಿಲ್ಲದ ಚರ್ಚೆಗಳು ದಾರಿ ತಪ್ಪುತ್ತಿರುವುದೂ ಇಂಥಾ ಗುಂಪುಗಳಲ್ಲೇ. ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ ತಳಬುಡವಿಲ್ಲದ ಮೇಸೇಜುಗಳು ರವಾನೆಯಾಗುತ್ತಿರುವುದೂ ತಮಾಷೆಯ ಹೆಸರಿನಲ್ಲಿ ವರ್ಗ, ಲಿಂಗ, ಜಾತಿಗಳ ಅವಹೇಳನಗಳಾಗುವುದೂ ಯಾವ ವಿಷಯವನ್ನೂ ಸರಿಯಾಗಿ ಕೇಳಿಸಿಕೊಳ್ಳುವ ವ್ಯವಧಾನವನ್ನೂ ತೋರಿಸದೆ ಥಟ್ಟನೆ ಮಾತನಾಡಿ ಪ್ರತಿಭಟಿಸುವ ಅಹಂಕಾರ ಕೇಂದ್ರಿತ ವರ್ತನೆಯೂ ಇಂತಹ ಭಾರತೀಯ ಗುಂಪುಗಳಲ್ಲೇ ಹೆಚ್ಚು. ಬಾಯಿಬಡುಕತನವೇ ನಮ್ಮ ಹುಟ್ಟುಗುಣ ಎಂಬಂತೆ ವರ್ತಿಸುವ, ಪರಾಮರ್ಶಿಸಿ ವಿವೇಚಿಸುವ ವ್ಯವಧಾನವನ್ನೇ ಕಳೆದುಕೊಂಡ ಮತ್ತು ಅನ್ಯವೆಂಬುದಕ್ಕೂ ತಾನೆಂಬುದಕ್ಕೆ ಇರುವಷ್ಟೇ ಘನತೆ ಇದೆ ಎಂಬುದನ್ನು ಒಪ್ಪಿಕೊಳ್ಳದ ಬೇಜವಾಬ್ದಾರಿ ಮನೋಭಾವವು ಭಾರತೀಯರದ್ದಾಗಿದ್ದರೂ ವಿದೇಶೀಯರದ್ದಾಗಿದ್ದರೂ ಅದು ತಂದೊಡ್ಡುವ  ಸಂಕಷ್ಟಗಳು ಅದನ್ನನುಭವಿಸಬೇಕಾಗಿ ಬರುವ ಎಲ್ಲರದ್ದೂ ಕೂಡ.  

ಟ್ರಂಪ್‌ ಬೆಂಬಲಿಸಿದ ಕೆಲವು ಭಾರತೀಯರು 
ಟ್ರಂಪ್‌ ಅವರನ್ನು ಬೆಂಬಲಿಸಿ ಗೆಲ್ಲಿಸಿದವರಲ್ಲಿ ಹಿಂದೂ ಮತಾಭಿಮಾನಿ ಭಾರತೀಯರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೆಂಬುದು ನಾವು ಗಮನಿಸಬೇಕಾದ ವಿಷಯ. ಹಾಗೆ, ಟ್ರಂಪ್‌ಗೆ ಬೆಂಬಲ ನೀಡಲು ಅವರಿಗಿದ್ದ ಬಹುದೊಡª ಕಾರಣವೆಂದರೆ, ಟ್ರಂಪ್‌ ಮುಸ್ಲಿಮರನ್ನೆಲ್ಲ ಸಾರಾಸಗಟಾಗಿ ಭಯೋತ್ಪಾದಕರೆಂದು ಕರೆಯುತ್ತಾ ಅಮೆರಿಕದ ಆಂತರಿಕ ಭದ್ರತೆಯ ದೃಷ್ಟಿಯಿಂದ ಮುಸ್ಲಿಂ ಸಮುದಾಯವನ್ನು ಸಂಶಯದಿಂದ ನೋಡಿದ್ದು. ನುಡಿದಂತೆಯೇ ನಡೆದ ಟ್ರಂಪ್‌, ತಾವು ಗದ್ದುಗೆಯೇರಿದ್ದೇ ಅಮೆರಿಕ ಮಾನ್ಯ ಮಾಡುತ್ತಿದ್ದ ಮಾನವ ಹಕ್ಕುಗಳ ಕಾಳಜಿಯನ್ನೂ ಗಾಳಿಗೆ ತೂರಿ ನಿರಾಶ್ರಿತರೂ ದುರ್ಬಲರು ಯಾರೇ ಆದರೂ ಕೂಡ ಮುಸ್ಲಿಮರಾದ ಕಾರಣಕ್ಕೆ ಅಮೆರಿಕ ಪ್ರವೇಶಿಸದಂತೆ ಸದ್ಯಕ್ಕೆ ಈ ಸಮುದಾಯವೇ ಪ್ರಬಲವಾಗಿರುವ ಆರು ದೇಶಗಳಿಗೆ ನಿರ್ಬಂಧ ಹಾಕಿದ್ದಾರೆ. ಈಗ ಅಮೆರಿಕದ ಒಳಗೇ ಹಿಂದೂ ಭಾರತೀಯನೊಬ್ಬ ಹತ್ಯೆಗೊಳಗಾಗಿದ್ದು, ಕೊಂದವನು ಅವನನ್ನು ಭಾರತೀಯನಾದ ಕಾರಣಕ್ಕೆ ಮುಸ್ಲಿಂ ಎಂದು ಭಾವಿಸಿ ಕೊಂದಿದ್ದಾಗಿ ಹೇಳಿದ್ದಾನೆ. 

ಈ ಸ್ವಂತ ಮತ್ತು ಅನ್ಯದ ನಡುವೆ ಸೌಹಾರ್ದವಿಲ್ಲದಿದ್ದಾಗ, ಭಯವೋ ದ್ವೇಷವೋ ಇಡೀ ಒಂದು ಸಮುದಾಯವನ್ನು ತಪ್ಪಿತಸ್ಥರ ಜಾಗದಲ್ಲಿ ನಿಲ್ಲಿಸಲೆತ್ನಿಸಿದಾಗ ಆಗಬಹುದಾದ ಅಧ್ವಾನಗಳೆಲ್ಲಾ ಆಗಲು ಮೊದಲಿಟ್ಟಿವೆ. ಟ್ರಂಪ್‌ ಬೆಂಬಲಿಗ ಅಮೆರಿಕನ್‌ ಹಿಂದೂ ಗುಂಪಿಗೆ ಇದರಿಂದ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿಬಿಡಬಹುದೆಂದು ನಾವೇನೂ ಅಂದುಕೊಳ್ಳಬೇಕಾಗಿಲ್ಲ. ಆದರೆ, ನಮ್ಮ ಅನುದಿನದ ಬೇಜವಾಬ್ದಾರಿ ಮಾತು, ಕೃತಿಗಳು ಮುಸ್ಲಿಂ, ಹಿಂದೂ, ಬಿಳಿಯರು, ಕರಿಯರು, ಹೆಂಗಸರು, ಗಂಡಸರು, ಮಕ್ಕಳು, ಬ್ರಾಹ್ಮಣರು, ದಲಿತರು- ಎಂದೆಲ್ಲ ಯಾವ ಭೇದವನ್ನೂ ಮಾಡದೆ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕಾಗಿದೆ. ಅನ್ಯದ ಕುರಿತ ಅನಾವಶ್ಯಕ ಭಯ, ಸಂಶಯಗಳನ್ನು ನಿವಾರಿಸಿಕೊಳ್ಳುತ್ತ ಒಂದು ಆರೋಗ್ಯಕರ ಸಂಭಾಷಣೆಯನ್ನು ಆರಂಭಿಸಬೇಕಿದೆ. ಹೇಳುವುದಷ್ಟೇ ಅಲ್ಲದೆ ಕೇಳಿಸಿಕೊಳ್ಳುವುದನ್ನೂ ಕೂಡ ಕಲಿಯಬೇಕಾಗಿದೆ.  

ಹಾಗೆ ಸಂಭಾಷಣೆಯು ನಡೆಯಬೇಕಾದ್ದು ಅಮೆರಿಕದ ಎರಡು ಬಹುದೊಡª ಪಕ್ಷಗಳಾದ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್‌ ಪಾರ್ಟಿಗಳ ನಡುವೆ ಕೂಡ. ಗಮನಿಸಿ ನೋಡಿದರೆ ಕೇವಲ ಕೆಲವೇ ದಶಕಗಳ ಅಂತರದಲ್ಲಿ ಈ ಪಕ್ಷಗಳ ಎಡ ಮತ್ತು ಬಲಪಂಥೀಯ ನಿಲುವುಗಳು 60ರ ದಶಕದ ಮುಂಚೆ ಇದ್ದಿದ್ದಕ್ಕಿಂತಲೂ ಜಿಗುಟಾಗಿ, ಆ ಮೊದಲಿಗೆ ಕಂಡುಬರುತ್ತಿದ್ದ ಲಿಬರಲ… ರಿಪಬ್ಲಿಕನ್‌ ಅಥವಾ ಕನ್ಸರ್ವೆಟೀವ್‌ ಡೆಮಾಕ್ರಟಿಕ್‌ ಎಂಬಂಥ‌ ಬೆರಕೆಗಳೇ ಇಲ್ಲದೆ ಡೆಮಾಕ್ರಟಿಕ್‌ ಪಕ್ಷದ ನಿಲುವುಗಳೆಲ್ಲಾ ಉದಾರವಾದಿಯಾದುದೆಂದೂ, ರಿಪಬ್ಲಿಕನ್‌ ಪಕ್ಷದವರಾದರೆ ಅವರು ಕೇವಲ ಮೂಲಭಾತವಾದಿಗಳ ಧಾಟಿಯಲ್ಲೇ ಯೋಚಿಸುವವರು ಎಂಬಂತಾಗಿದೆ. ಬಿಳಿ ಅಥವಾ ಕರಿ ಎಂಬ ಎರಡೇ ಬಣ್ಣಗಳಲ್ಲಿ ಲೋಕವನ್ನು ಕಾಣಲೆತ್ನಿಸುತ್ತ ಎಡ-ಬಲ ಪಂಥಗಳಲ್ಲಿ ಇಡೀ ಮನುಷ್ಯ ಲೋಕವೇ ಹೋಳಾಗಿಹೋಗುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿರುವಾಗಲೂ ಇವೆರಡರಲ್ಲಿ ನಡುವಿನದಕ್ಕೇ ಆತುಕೊಂಡಿರುವ, ಈ ಎರಡನ್ನೂ ಸಂಶಯದಿಂದ ನೋಡಬಲ್ಲ ಮತ್ತು ಆಸ್ಥೆಯಿಂದ ಆಲಿಸಬಲ್ಲವರ ಸಂಖ್ಯೆ ಸಾಕಷ್ಟು ದೊಡ್ಡದಾಗಿಯೇ ಇದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕಾಗಿದೆ. ಒಬ್ಬರನ್ನೊಬ್ಬರು ಆಲಿಸುವ ಅರಿಯಲೆತ್ನಿಸುವ ಸಂಯಮವೊಂದು ನಮ್ಮನ್ನೆಲ್ಲ ಪೊರೆಯಬೇಕಿದೆ. ಪರದ ಘನತೆಯನ್ನು ಪರಿಗಣಿಸದೆ ತನ್ನನ್ನು ತಾನು ಗೌರವಿಸುವುದು ಸಾಧ್ಯವಿಲ್ಲ ಎಂದು ನಮಗೆ ತಿಳಿಯಬೇಕಿದೆ.  

ಸ್ಥಳೀಯ ಅಮೆರಿಕನ್ನರ ಸಮಸ್ಯೆ
ಹಾಗೆ ನೋಡಿದರೆ ಕಳೆದ ನವೆಂಬರ್‌ನ ಚುನಾವಣಾ ಕಾಲದಲ್ಲಾಗಲಿ, ಚುನಾವಣೆಯಲ್ಲಾಗಲಿ ಯಾವ ಹಿಂಸಾಚಾರವೂ ನಡೆದಿಲ್ಲ. ಪಾಪ್ಯುಲಸ್‌ ರಾಜಕಾರಣದೊಂದಿಗೆ ಅವಜ್ಞೆಗೊಳಗಾದ ಸ್ಥಳೀಯ ಅಮೆರಿಕನ್ನರ ಸಮಸ್ಯೆಗಳೂ ಸೇರಿಯೇ ಪ್ರಜಾಪ್ರಭುತ್ವದ ಯಾವ ನಿಯಮವೂ ಮುಕ್ಕಾಗದೆಯೇ ಟ್ರಂಪ್‌ ಈಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಪ್ರಜಾಪ್ರಭುತ್ವದ ಸಾಕಷ್ಟು ಉತ್ತಮ ಮಾದರಿಯೊಂದು ಅಸ್ತಿತ್ವದಲ್ಲಿರುವ ಅಮೆರಿಕದ ಈ ಪ್ರಯೋಗವನ್ನು ಎಲ್ಲರೂ ಒಪ್ಪಿಕೊಂಡು ಗೌರವಿಸಿದ್ದಾಗಿದೆ. ಚುನಾವಣೆಯ ನಂತರ ನಡೆದ ಬೃಹತ್‌ ಪ್ರಮಾಣದ ಪ್ರತಿಭಟನಾ ರ್ಯಾಲಿಯಲ್ಲೂ ನನಗೆ ಕಂಡಿದ್ದು ಈ ಕ್ರಿಯಾಶೀಲ ಪ್ರಜಾಪ್ರಭುತ್ವದ ಮಹತ್ವದ ಅಂಶವೇ. ಪ್ರತಿಭಟನಾ ರ್ಯಾಲಿಯು ಬಹುತೇಕ ಎಲ್ಲೆಡೆಯೂ ಶಾಂತಿಯಿಂದಲೇ ನಡೆದಿದ್ದರೂ ಅಲ್ಲಲ್ಲಿ ಸಣ್ಣ ಪ್ರಮಾಣದ ಹಿಂಸಾಚಾರಗಳಾಗಿವೆ, ಆದರೆ ಯಾವುದೂ ದೊಡª ಪ್ರಮಾಣದ್ದಲ್ಲ ಮತ್ತು ಎಲ್ಲಿಯೂ ಸಾವು ಸಂಭವಿಸಿಲ್ಲ. ಇದೆಲ್ಲ ಮುಗಿದ ಬಳಿಕ ಈಗ ತಲೆಕೆಟ್ಟ ಹಿಂಸಾತ್ಮಕ ಮನಃಸ್ಥಿತಿಯ, ಅನ್ಯದ ಕುರಿತು ತಿಳುವಳಿಕೆ ಇಲ್ಲದ ಒಂದಿಷ್ಟು ಮಂದಿಯ ಮನೋಭಾವವನ್ನು ಅದು ಇಡೀ ಅಮೆರಿಕದ ನೀತಿ ಎಂಬಂತೆ ಬಿಂಬಿಸುವ ನಂಬಿಸುವ ಪ್ರಯತ್ನಗಳನ್ನು ನಾವು ವಿರೋಧಿಸಬೇಕಿದೆ. ಹಾಗೆ ಸಣ್ಣ ಮಾತನಾಡುವ ಮುಂಚೆ, ಆತಂಕದಲ್ಲಿ ಒದ್ದಾಡುತ್ತಿದೆ ಎಂದೇ ಬಿಂಬಿಸಲಾಗಿರುವ ಇಂಡಿಯನ್‌ ಅಮೆರಿಕನ್‌ ಸಮುದಾಯ ತಾನು ಬಿಳಿಯ, ಕರಿಯ, ಚಂಕಿ, ಮಂಕಿ, ಹಿಂದೂ ಮುಸ್ಲಿಂ ಎಂದೆಲ್ಲ ಹಣೆಪಟ್ಟಿಗಳನ್ನಿಟ್ಟು ಅಮೆರಿಕದ ಇತರ ಸಮುದಾಯವನ್ನು ನೋಡುವ ತನ್ನ ಮನೋಭಾವವನ್ನು ಮೊದಲು ಪ್ರಶ್ನಿಸಿಕೊಳ್ಳಬೇಕಿದೆ. ಹಾಗೆಯೇ ಕನ್ನಡಿಯಲ್ಲಿ ಬೇರೆ ಯಾರೋ ಎಂಬಂತೆಯೇ ಕಾಣುತ್ತಿರುವ ತನ್ನದೇ ಪ್ರತಿಬಿಂಬದ ಗುರುತು ಹಿಡಿಯಬೇಕಿದೆ.

 ಮಾನವ ಜಾತಿ ತಾನೊಂದೇ ವಲಂ ಎನ್ನುವುದು ಒಂದು ದೊಡ್ಡ ಆದರ್ಶ. ವಿಶ್ವ ಮಾನವ ತತ್ವವೆಂದರೆ ವಿಶ್ವದ ಎಲ್ಲ  ಮಾನವರೂ ತಮ್ಮ ಎಲ್ಲಾ ವೈವಿಧ್ಯಗಳನ್ನೂ ಕಳೆದುಕೊಂಡು ರೋಬಾಟ್‌ಗಳಾಗುವುದಲ್ಲ, ನೂರಾರು ಹಣೆಪಟ್ಟಿಗಳ ಹಿಂದೆಯೂ ಎಲ್ಲರೊಳಗೂ ಇರುವ ಮನುಷ್ಯ ಸಹಜ ಘನತೆಯೊಂದರ ಗುರುತು ಹಿಡಿದು ಆದರಿಸುವುದು. ನಮ್ಮ ಮೂರ್ಖತನಗಳನ್ನು ಇನ್ನಷ್ಟು ಪೊರೆಯುತ್ತಿರುವ ರೋಚಕ ಸುದ್ದಿಗಳನ್ನೂ ವಾಟ್ಸಾಪ್‌ ಮೆಸೇಜ್‌ಗಳನ್ನೂ ಕಸದ ಬುಟ್ಟಿಗೆಸೆದು ಕ್ರಿಯಾಶೀಲರಾಗುತ್ತ ಘನತೆಯಿಂದ ಬದುಕುವುದು. ಅದನ್ನೀಗ ನಾವೆಲ್ಲರೂ ಒಟ್ಟಾಗಿಯೇ ಮಾಡಬೇಕಿದೆ.

ಮೀರಾ ಪಿ. ಆರ್‌., ನ್ಯೂಜೆರ್ಸಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಳೆ ನಿಂತ ಮೇಲೂ ಮರದಿಂದ ತೊಟ್ಟಿಕ್ಕುವ ಹನಿಗಳ ಹಾಗೆ ಬಿಸಿಲನಾಡಿನ ಸಮ್ಮೇಳನ ಮುಗಿದ ಮೇಲೂ ಸವಿಕ್ಷಣಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿವೆ. ಫೆಬ್ರವರಿ 5 ರಿಂದ...

  • ಸಿಂಗಾಪುರದಲ್ಲಿ ಪ್ರತಿವರ್ಷ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬರುವ ಚೀನೀಯರ ಹೊಸ ವರ್ಷದ ಯಾವ ಸಂಭ್ರಮಾಚರಣೆಗಳೂ ಹೊರಜಗತ್ತಿಗೆ ಕಾಣದೆ ಜನರೆಲ್ಲ...

  • ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ. ಒಮ್ಮೆ ಹೀಗಾಯಿತು....

  • ಇತ್ತೀಚೆ ನೋಬೆಲ್‌ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ಮಾತುಕತೆಯೊಂದರಲ್ಲಿ ತಾನು ಭಾರತದಲ್ಲೇ ಇದ್ದಿದ್ದರೆ ಈ ಪ್ರಶಸ್ತಿ ಸಿಗುತ್ತಿರಲಿಲ್ಲವೆಂಬ ಮಾತು...

  • ಮುಂಬಯಿಯ ಕಾಲಾಘೋಡ ಉತ್ಸವವು ಈಗಷ್ಟೇ ಮುಗಿಯಿತು. ಪ್ರತಿ ಫೆಬ್ರವರಿ ಎರಡನೆಯ ವಾರದಲ್ಲಿ ಜರಗುವ ಈ ಕಲಾ ಉತ್ಸವವು ಕಳೆದ ಇಪ್ಪತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ....

ಹೊಸ ಸೇರ್ಪಡೆ