ಹೃದಯವಂತ ರಾಜಕಾರಣಿ 

Team Udayavani, Feb 3, 2019, 12:30 AM IST

ಇತ್ತೀಚೆಗೆ ನಮ್ಮನ್ನಗಲಿದ ಸಮಾಜವಾದಿ ರಾಜಕಾರಣಿ ಜಾರ್ಜ್‌ ಫೆರ್ನಾಂಡೀಸ್‌ರನ್ನು ನೆನೆಯದಿರುವುದಾದರೂ ಹೇಗೆ?  ಘನತೆ ಮೆರೆದರೂ ಸರಳತೆ ಮರೆಯದವರು !  

ಕೆಲವು ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಅಮ್ಮೆಂಬಳದಲ್ಲಿ ಗಾಂಧಿವಾದಿ, ಸಮಾಜವಾದಿ ಅಮ್ಮೆಂಬಳ ಬಾಳಪ್ಪ ಅವರಿಗೆ ಸಂಮಾನ ಸಮಾರಂಭ ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಜಾರ್ಜ್‌ ಫೆರ್ನಾಂಡೀಸ್‌ ಬಂದಿದ್ದರು. ನಾನು ಹೋಗಿದ್ದೆ. ಆಗ ಅಮ್ಮೆಂಬಳ ಬಾಳಪ್ಪರಿಗೆ ಕೊಂಚ ಮರೆವಿನ ಸಮಸ್ಯೆ ಆರಂಭವಾಗಿತ್ತು. ಈ ಹಿಂದೆ ನಾವು ಮೂವರೂ ಒಟ್ಟಿಗೆ ಓಡಾಡಿದವರಾದರೂ ಅದನ್ನು ಬಾಳಪ್ಪ ಮರೆತಿದ್ದರು. “ಜಾರ್ಜ್‌, ಇಂಬೆನ ಗುರ್ತ ಉಂಡ, ಆನಂದೆ ಪಂಡ್‌ª’ (ಜಾರ್ಜ್‌, ಇವನ ಪರಿಚಯವಿದೆಯೆ? ಇವನು ಆನಂದ) ಎಂದರು ಜಾರ್ಜ್‌ ಫೆರ್ನಾಂಡೀಸ್‌ರೊಂದಿಗೆ. ಜಾರ್ಜ್‌ ನಗುತ್ತ, “ದಾನೆ ಗೊತ್ತುಪ್ಪಂದೆ! ಯಾನ್‌ಲಾ ಆಯೆಲ ಕ್ಲಾಸ್‌ಮೇಟ್‌ಯೆ!’ (ಗೊತ್ತಿಲ್ಲದೆ ಏನು! ನಾನೂ ಇವನೂ ಒಂದೇ ತರಗತಿ ಯಲ್ಲಿದ್ದೆವು) ಎಂದರು. ಬಾಳಪ್ಪರು ನಮಗಿಂತ ಹಿರಿಯರು. ನಾನೂ ಜಾರ್ಜ್‌ ತುಳುವಿನಲ್ಲಿ, ಏಕವಚನದಲ್ಲಿ ಮಾತನಾಡುವ ಸಲುಗೆಯನ್ನು ಹೊಂದಿದ್ದೆವು.

3 ರಿಂದ 5ನೆಯ ತರಗತಿಯವರೆಗೆ ನಾವಿಬ್ಬರೂ ಜೊತೆಯಾಗಿ ಓದಿದ್ದು-ಮಂಗಳೂರಿನ ಬಿಜೈಯಲ್ಲಿರುವ ಗವರ್ನ್ಮೆಂಟ್‌ ಶಾಲೆಯಲ್ಲಿ. 1930ರ ಆಸುಪಾಸಿನ ದಿನಗಳವು. ನಾನು ಶಾಲೆಗೆ ಹೋಗುವ ದಾರಿ ಯಲ್ಲಿಯೇ ಜಾರ್ಜ್‌ ಫೆರ್ನಾಂಡೀಸ್‌ರ ಮನೆ. ನನಗೊಬ್ಬ ಕೇಶವ ಅಂತ ಗೆಳೆಯನಿದ್ದ. ನಾವಿಬ್ಬರೂ ಜಾರ್ಜ್‌ ಮನೆ ಮುಂದೆ ಬಂದರೆ, ಅವರೂ ಜೊತೆಯಾಗುತ್ತಿದ್ದರು.ಅವರ ಮಾವನ ಮಗ ಆಲ್ಬರ್ಟ್‌ ಕೂಡ ಸೇರಿಕೊಳ್ಳುತ್ತಿದ್ದ. ನಾನು ಮತ್ತು ಜಾರ್ಜ್‌ ಬೆಂಚ್‌ಮೇಟ್ಸ್‌. ಮುಂದಿನ ದಿನಗಳಲ್ಲಿ ಸೈದ್ಧಾಂತಿಕವಾಗಿಯೂ ನಮ್ಮಿಬ್ಬರದ್ದು ಸಹಪಂಕ್ತಿಯೇ. 

ಜಾರ್ಜ್‌ ಫೆರ್ನಾಂಡೀಸ್‌ ಕುಟುಂಬವೇ ನನಗೆ ಪರಿಚಿತ. ಮಂಗಳೂರಿನ ಬಿಜೈ ನಿವಾಸಿಗಳಾಗಿದ್ದ ಜಾನ್‌ ಫೆರ್ನಾಂಡೀಸ್‌ ಮತ್ತು ಎಲಿಸಾ ದಂಪತಿಯ ಮೊದಲ ಮಗ ಜಾರ್ಜ್‌. ಅವರಿಗೆ ಐದು ಮಂದಿ ತಮ್ಮಂದಿರು. ಜಾನ್‌ರ ಕುಟುಂಬ ತುಂಬ ಪರಿಶ್ರಮದ ಮತ್ತು ನಿಯತ್ತಿನ ಜೀವನ ನಡೆಸುತ್ತಿತ್ತು. ಆಗಿನ ಹೆಚ್ಚಿನ ಕ್ರೈಸ್ತ ಮಂದಿಯ ಜೀವನೋಪಯೋಗಿಯಾದ್ದದ್ದು ತರಕಾರಿ ಬೆಳೆಯುವುದು. ಅವರು ಕೂಡ ತಮ್ಮ ಮನೆಯ ಆವರಣದಲ್ಲಿ ತರಕಾರಿ ಬೆಳೆಸುತ್ತಿದ್ದರು. ಆ ಕಾಲದಲ್ಲಿ ಮಂಗಳೂರು ಮಲ್ಲಿಗೆಯ ಕಂಪನ್ನು ಜಗತ್ತಿಡೀ ಪಸರಿಸುವಂತೆ ಮಾಡಿದವರು ರೋಮನ್‌ ಕ್ಯಾಥೋಲಿಕರು. ಜಾನ್‌ರ ಕುಟುಂಬ ಮಂಗಳೂರು ಮಲ್ಲಿಗೆಯನ್ನು ಬೆಳೆಸಿ ಮಾರಾಟ ಮಾಡಿ ಜೀವನೋಪಾಯದ ಹಾದಿ ಕಂಡುಕೊಂಡಿತ್ತು. ಪರಿಸರದಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಆ ಕುಟುಂಬ ತುರ್ತು ಪರಿಸ್ಥಿತಿಯ ವಿರುದ್ಧ ದನಿಯೆತ್ತಿತ್ತು. ಆಗ ಜಾರ್ಜ್‌ ಬಂಧನವಾಗಿತ್ತು. ಅವರ ತಾಯಿ ಎಲಿಸಾ ಮಗ ಅವಿತಿರುವ ಸುಳಿವನ್ನು ನೀಡದೆ ಪೊಲೀಸರಿಂದ ಘಾಸಿ ಪಟ್ಟವರು. ಜಾರ್ಜ್‌ ಮತ್ತು ಅವರ ಸಹೋದರರ ನಡುವೆ ಯಾವತ್ತೂ ವಿರಸವಿರಲಿಲ್ಲ. ಇತ್ತೀಚೆಗೆ ಜಾರ್ಜ್‌ ಫೆರ್ನಾಂಡೀಸ್‌ ಅವರಿಗೆ ಮರೆವಿನ ಕಾಯಿಲೆ ಬಾಧಿಸಿ ಅವರ ಆಸ್ತಿ-ಪಾಸ್ತಿಯ ಹಕ್ಕು ಬಾಧ್ಯತೆಯ ಕುರಿತು ವಿವಾದವಾದಾಗ ಜಾರ್ಜ್‌ ಅವರ ಸಹೋದರರು ಜೊತೆಯಾಗಿ ಅಣ್ಣನ ಪರ ನಿಂತಿರುವುದನ್ನು ಇಲ್ಲಿ ಸ್ಮರಿಸಬೇಕು.

ನಾನು ಎಸ್‌ಎಸ್‌ಎಲ್‌ಸಿಯ ಬಳಿಕ ಓದಲಿಲ್ಲ. ನನ್ನನ್ನು ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಾಂಗ್ರೆಸ್‌ನ ಸೋಶಿಯಲಿಸ್ಟ್‌ ಘಟಕದ ಕಾರ್ಯಕರ್ತನಾಗಿ ಹುಬ್ಬಳ್ಳಿಗೆ ಕಳುಹಿಸಿದರು. ಆಗ ಸೋಶಿಯಲಿಸ್ಟ್‌  ಪಾರ್ಟಿಯ ಸಂಘಟನೆಗೆ ಇಡೀ ಕರ್ನಾಟಕದ ಕೇಂದ್ರ ಹುಬ್ಬಳ್ಳಿ. ಅಲ್ಲಿ ನಾನು ಕೋಣಿ ಸದಾಶಿವ ಕಾರಂತರ ಜೊತೆಗಿದ್ದೆ. ಕೋಣಿ ಸದಾಶಿವ ಕಾರಂತರದ್ದು ಹಿರಿಯ ಸಮಾಜವಾದಿ. ಸಮಾಜವಾದದ ಕುರಿತು ಇಂಗ್ಲಿಶ್‌ನಲ್ಲಿ ಒಂದು ವಿದ್ವತೂ³ರ್ಣವಾದ ಕೃತಿ ಬರೆದಿದ್ದಾರೆ. ಪ್ರಾಸಂಗಿಕವಾಗಿ ಹೇಳಿದೆ. ಅದು ಹಾಗಿರಲಿ.

ಜಾರ್ಜ್‌ ಫೆರ್ನಾಂಡೀಸ್‌ ಕೂಡ ಓದಿದ್ದು ಹತ್ತನೆಯ ತರಗತಿಯವರೆಗೇ ಇರಬೇಕು. ಬಳಿಕ ತಂದೆಯವರ ಅಪೇಕ್ಷೆಯಂತೆ ಪಾದ್ರಿಯಾಗಿ ಧಾರ್ಮಿಕ ಸೇವೆ ಮಾಡುವುದಕ್ಕಾಗಿ ಬೆಂಗಳೂರಿನ ಸೆಮಿನರಿಯೊಂದಕ್ಕೆ ಸೇರಿಕೊಂಡರು. ಆದರೆ, ಧಾರ್ಮಿಕ ಮುಖಂಡನಾಗುವುದು ಅವರ ಜಾಯಮಾನಕ್ಕೆ ಒಗ್ಗುವಂಥಾದ್ದಲ್ಲ. ಅವರು ಬೆಂಗಳೂರು ತೊರೆದು ಮಂಗಳೂರಿಗೆ ಮರಳಿದರು. ಮಗ ಧರ್ಮದ್ರೋಹ ಬಗೆದನೆಂದು ತಂದೆ ಅವರನ್ನು ಮನೆಯೊಳಕ್ಕೆ ಪ್ರವೇಶಗೊಡಲಿಲ್ಲ. ಆಮೇಲೆ, ನೆಹರೂ ಮೈದಾನದ ಬಳಿ ನಿರ್ಗತಿಕನಂತೆ ಮಲಗಿದ್ದ ಅವರನ್ನು ಕರೆದೊಯ್ದದ್ದು ಅಮ್ಮೆಂಬಳ ಬಾಳಪ್ಪನವರು. ಸ್ವಾತಂತ್ರ್ಯ ಹೋರಾಟದಲ್ಲಿ ಭೂಗತರಾಗಿದ್ದಾಗ ಅಮ್ಮೆಂಬಳ ಬಾಳಪ್ಪ ಮಂಗಳೂರು ಬಿಜೈಯಲ್ಲಿದ್ದ ನಮ್ಮ ಮನೆಗೆ ಬರುತ್ತಿದ್ದರು. ಆಗ ಅವರಿಗೆ ಜಾರ್ಜ್‌ ಫೆರ್ನಾಂಡೀಸ್‌ರ ತಂದೆಯ ಸ್ನೇಹವಾಗಿ, ಬಾಲಕ ಜಾರ್ಜ್‌ನ್ನು ಆಗಲೇ ಕಂಡಿದ್ದರು.

ಸಮಾಜವಾದದ ಪರಿಚಯವಾದ ಬಳಿಕ ಜಾರ್ಜ್‌ರ ಬದುಕು ಮತ್ತೂಂದು ಮಗ್ಗುಲಿಗೆ ಹೊರಳಿಕೊಂಡಿತು. ಮುಂದೆ ಕಾರ್ಮಿಕ ಹೋರಾಟದ ಮುಂದಾಳ್ತನ ವಹಿಸಿದರು. ಅಮ್ಮೆಂಬಳ ಬಾಳಪ್ಪರ ಸೂಚನೆಯಂತೆ ಮುಂಬೈಗೆ ಹೋಗಿ ಅಲ್ಲಿಯೂ ಸಮಾಜಪರ ಕೆಲಸಗಳಲ್ಲಿ ಸಕ್ರಿಯರಾದರು. ಪತ್ರಿಕೆಯನ್ನೂ ನಡೆಸಿದರು. ಅವರ ಬದುಕಿನ ಹಾದಿ ಸುಖದ್ದೇನೂ ಆಗಿರಲಿಲ್ಲ. ಹಾಗಾಗಿಯೇ ಕೇಂದ್ರ ಸರಕಾರದ ಸಚಿವರಾಗಿರುವಾಗಲೂ ಸರಳ ಬದುಕನ್ನೇ ಬದುಕಲು ಅವರಿಗೆ ಸಾಧ್ಯವಾದದ್ದು! 

ಮಂತ್ರಿಯಾಗಿ ಅಧಿಕಾರದಲ್ಲಿರುವಾಗ ಜಾರ್ಜ್‌ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಅದರಲ್ಲಿ ಕೊಂಕಣ ರೈಲ್ವೇ ಯೋಜನೆಯೂ ಒಂದು. ಆದರೆ, ಸಮಾಜವಾದಿಯಾಗಿ ಬೆಳೆದಿದ್ದ ಜಾರ್ಜ್‌ ಫೆರ್ನಾಂಡಿಸ್‌ ತಾವು ಕಟ್ಟಿದ್ದ ಸಮತಾ ಪಕ್ಷವನ್ನು ಎನ್‌ಡಿಎಯ ಜೊತೆಗೆ ಸೇರಿಸಿದ್ದು ಒಂದು ವಿಡಂಬನೆಯಾಗಿದೆ. 1991ರಲ್ಲಿ ಅವರು ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ಕಾರವಾರದ ತೋಡೂರಿಗೆ ಸೀಬರ್ಡ್‌ ನೌಕಾನೆಲೆಯ ಎರಡನೆಯ ಹಂತದ ಕಾಮಗಾರಿಗೆ ಅಡಿಗಲ್ಲು ಹಾಕಲು ಬಂದಿದ್ದರು. ಅಲ್ಲಿ ಪತ್ರಕರ್ತನಾಗಿದ್ದ  ನಾನು ನೇರವಾಗಿ ಅವರ ಬಳಿಗೆ ಹೋದೆ. ನನ್ನನ್ನು ನೋಡಿದವರೇ, “ಓ ಆನಂದ, ಎಂಚ ಉಲ್ಲಯ?’ (ಹೋ ಆನಂದ, ಹೇಗಿದ್ದೀಯಾ?) ಎಂದು ಕೇಳಿದವರೇ ಮುಂದೆ ಕೇಳಿದ‌ ಪ್ರಶ್ನೆ , “ಬಾಳಪ್ಪೆರ್‌ ಎಂಚ ಉಲ್ಲೆರ್‌?’ (ಅಮ್ಮೆಂಬಳ ಬಾಳಪ್ಪರು ಹೇಗಿದ್ದಾರೆ?)

ಸಿಮೆಂಟ್‌ ಬೆಂಚಿನಲ್ಲಿ ಅನಾಥನಂತೆ ಮಲಗಿದ್ದಾಗ ತನ್ನನ್ನು ಕರೆದೊಯ್ದ ಪುಣ್ಯಾತ್ಮನನ್ನು ಮರೆತಿರಲಿಲ್ಲ. ಅದು ಜಾರ್ಜ್‌ ಫೆರ್ನಾಂಡೀಸ್‌!

ಅಮ್ಮೆಂಬಳ ಆನಂದ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಿಮೂ ಎಂದೇ ಖ್ಯಾತರಾಗಿದ್ದ ಎಂ. ಚಿದಾನಂದ ಮೂರ್ತಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರ ಪ್ರಕಾರ ಸಂಶೋಧನೆ ಎಂದರೆ ಸತ್ಯಶೋಧನೆ! ತಮ್ಮ ನಿಲುವನ್ನು ಪ್ರಕಟಿಸುವಲ್ಲಿ...

  • ಹಕ್ಕಿ ಒಂದು ರೂಪಕ, ಕಾವ್ಯ-ಶಾಸ್ತ್ರಗಳೆರಡರಲ್ಲಿಯೂ. ಮಾಂಡುಕ್ಯ ಉಪನಿಷತ್ತಿನಲ್ಲಿ ಎರಡು ಹಕ್ಕಿಗಳ ಕತೆ ಬರುತ್ತದೆ. ಒಂದು ಹಣ್ಣನ್ನು ತಿನ್ನುವ ಹಕ್ಕಿ, ಇನ್ನೊಂದು...

  • "ಹಾಯ್‌ ಹೌ ಆರ್‌ ಯೂ?' ಅವನಿಂದ ಬಂದಿದ್ದ ಮೆಸೇಜ್‌ ಇವಳ ಮೊಬೈಲ್‌ನಲ್ಲಿ ಅರ್ಧಗಂಟೆಯಿಂದ ತಣ್ಣಗೆ ಕುಳಿತಿತ್ತು. ಹರ್ಷಿಣಿ ಯಾವುದೋ ನಂಬರ್‌ ಸರ್ಚ್‌ ಮಾಡಲಿಕ್ಕೆ...

  • ಆರ್‌. ಕೆ. ಶ್ರೀಕಂಠನ್‌ ಕರ್ನಾಟಕ ಸಂಗೀತದ ಮೇರು ವಿದ್ವಾಂಸರು. ಅವರು ಇದ್ದಿದ್ದರೆ ಈ ಹೊತ್ತಿಗೆ 100 ವರ್ಷ. ಹೀಗಾಗಿ, ಆರ್‌. ಕೆ. ಶ್ರೀಕಂಠನ್‌ ಟ್ರಸ್ಟ್‌ ಒಂದು ವಾರ...

  • ಚಿಕ್ಕಂದಿನಿಂದ ನನಗೆ ಬಂಗಾಲವೆಂದರೆ ಒಂದು ರೀತಿಯ ಹುಚ್ಚು ಒಲವು. ಅಲ್ಲಿಯ ಭಾಷೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಜನ- ಏನೇ ಬಂಗಾಲಿ ಇದ್ದರೂ ಅವೆಲ್ಲವೂ. ಮೂಲಕಾರಣ, ಶಾಲೆಯಲ್ಲಿದ್ದಾಗಲೇ,...

ಹೊಸ ಸೇರ್ಪಡೆ