ಕನ್ನಡ ಸಾಹಿತ್ಯದ ಆಮದು-ರಫ್ತುಗಳು

Team Udayavani, Feb 10, 2019, 12:30 AM IST

2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297. ಇದರಲ್ಲಿ ಕನ್ನಡವನ್ನು ತಮ್ಮ ಮಾತೃಭಾಷೆಯೆಂದು ಅಂಗೀಕರಿಸಿಕೊಂಡವರು ಸಂಖ್ಯೆ 4,37, 06, 512. ಅಂದರೆ ಕರ್ನಾಟಕದಲ್ಲಿ ಸುಮಾರು ಒಂದು ಕೋಟಿಯ 73 ಲಕ್ಷ ಜನರು ಕನ್ನಡೇತರರು ಇದ್ದಾರೆ. ಕರ್ನಾಟಕದಲ್ಲಿ ಇದ್ದುಕೊಂಡೇ ಹಿಂದಿಯನ್ನು ತಮ್ಮ ಮಾತೃಭಾಷೆಯೆಂದು ಹೇಳಿಕೊಂಡವರ ಸಂಖ್ಯೆಯು 65 ಲಕ್ಷಕ್ಕೂ ಹೆಚ್ಚು. ಇಲ್ಲಿಯೇ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಕನ್ನಡ ಭಾಷೆಯನ್ನು ಆಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇ. 3.75 ಮಾತ್ರ ಏರಿಕೆ ಆಗಿದೆ. ಇದು ದೇಶದಲ್ಲಿಯೇ ಅತ್ಯಂತ ಕಡಿಮೆ. ಈ ಅವಧಿಯಲ್ಲಿ ಹಿಂದಿಯಲ್ಲಿ ಸರಾಸರಿ ಶೇ. 42 ಏರಿಕೆ ಆಗಿದ್ದರೆ, ತಮಿಳಿನಲ್ಲಿ ಶೇ. 6 ಮತ್ತು ತೆಲುಗಿನಲ್ಲಿ ಶೇ. 9 ಇದೆ. ಅಂದರೆ ಕರ್ನಾಟಕದ ಒಳಗೆ ಬರುತ್ತಿರುವವರ ಸಂಖ್ಯೆ ತುಂಬ ದೊಡ್ಡದು. 

ಆದರೆ, ಕರ್ನಾಟಕದಿಂದ ಹೊರಗೆ ಹೋಗುತ್ತಿರುವವರ ಸಂಖ್ಯೆ ತುಂಬಾ ಕಡಿಮೆ. ಕನ್ನಡಿಗರು ಊರು ಬಿಟ್ಟು ಹೊರಗೆ ಹೋಗುವುದೇ ಇಲ್ಲ ಎಂದು ತೋರುತ್ತದೆ. ಚೆನ್ನೈ, ಕೊಲ್ಕತಾ, ಮುಂಬೈ ಮತ್ತು ದೆಹಲಿ ನಗರಗಳನ್ನು ಪರಿಶೀಲಿಸಿದರೆ, ಅಲ್ಲಿ ಬೇರೆ ಭಾಷೆಯ ಜನರ ಸಂಖ್ಯೆಯೊಡನೆ ಕನ್ನಡಿಗರನ್ನು ಹೋಲಿಸುವಂತೆಯೇ ಇಲ್ಲ. ಉದಾಹರಣೆಗೆ 2011ರ ಜನಗಣತಿ ಪ್ರಕಾರ ದೆಹಲಿಯಲ್ಲಿ ಸುಮಾರು ಒಂದು ಲಕ್ಷದ 20 ಸಾವಿರ ತೆಲುಗರಿದ್ದರೆ, 90 ಸಾವಿರ ತಮಿಳರು ವಾಸಿಸುತ್ತಿದ್ದಾರೆ. ಮಲೆಯಾಳಿಗಳ ಸಂಖ್ಯೆ ಸುಮಾರು 85 ಸಾವಿರವಾದರೆ, ಕನ್ನಡಿಗರ ಸಂಖ್ಯೆ ಕೇವಲ 10 ಸಾವಿರ. ಇದೆಲ್ಲದರ ಅರ್ಥ ಇಷ್ಟೆ- ಕರ್ನಾಟಕ ಆಮದು ಮಾಡಿಕೊಂಡದ್ದು ಹೆಚ್ಚು, ರಫ್ತು ಮಾಡಿದ್ದು ಕಡಿಮೆಯೇ. 

ಇದನ್ನು ಚಾರಿತ್ರಿಕವಾಗಿ ನೋಡೋಣ. ಆರಂಭ ಕಾಲದಿಂದಲೂ ಕರ್ನಾಟಕವು ಹೊರಗಿನ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಲೇ ಬಂದಿದೆ. ಅದು ತನ್ನ ಜನರನ್ನು ಹೊರಗಡೆಗೆ ಕಳಿಸಿದ್ದು ಬಹಳ ಕಡಿಮೆ. ಚಂದ್ರಗುಪ್ತ ಮೌರ್ಯನ ಆಡಳಿತ ಕಾಲದಲ್ಲಿ ಉತ್ತರ ಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಬರಗಾಲ ಬಂದಾಗ, ಅವರು ಬಂದು ನೆಲೆ ನಿಂತದ್ದು ಈಗಣ ಶ್ರವಣಬೆಳಗೊಳದಲ್ಲಿ. ಜೈನರು ಮುಂದೆ ಕರ್ನಾಟಕವನ್ನು ಜೈನಧರ್ಮದ ಆಡುಂಬೊಲಂ ಮಾಡಿಕೊಂಡರು. ಬೌದ್ಧ ಧರ್ಮದ ಕತೆಯಾದರೂ ಅಷ್ಟೇ. ಸನ್ನತಿ, ಬ್ರಹ್ಮಗಿರಿ, ಕದರಿ- ಕೊಪ್ಪಳ, ಮಸ್ಕಿ ಮೊದಲಾದ ಪ್ರದೇಶಗಳೆಲ್ಲ ಬೌದ್ಧ ಧರ್ಮದ ಕೇಂದ್ರಗಳು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕರ್ನಾಟಕದ ಮಣ್ಣಿಗೇ ಬಂದರು. ಮುಸ್ಲಿಮರಿಗೆ ಬಿಜಾಪುರ ಆಸರೆ ನೀಡಿದರೆ ಮಂಗಳೂರು ಕ್ರಿಶ್ಚಿಯನ್‌ ಮಿಷನರಿಗಳನ್ನು ಸ್ವಾಗತಿಸಿತು. ಹೀಗೆ ಕರ್ನಾಟಕವು ತನ್ನ ಚರಿತ್ರೆಯುದ್ದಕ್ಕೂ ಹಲವು ಬಗೆಯ ಧರ್ಮಗಳನ್ನೂ, ಜನಾಂಗಗಳನ್ನೂ, ಸಮುದಾಯಗಳನ್ನೂ ತನ್ನತ್ತ ಆಕರ್ಷಿಸುತ್ತಲೇ ಬಂದಿದೆ. 

ಕರ್ನಾಟಕದ ಈ ಗುಣಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯವೂ ವರ್ತಿಸಿಕೊಂಡು ಬಂದಿದೆ. ಆರಂಭದಿಂದಲೂ ಅದು ಬೇರೆ ಭಾಷೆಗಳಿಂದ ತನಗೆ ಬೇಕಾದ್ದನ್ನು ಮುಕ್ತವಾಗಿ ತೆಗೆದುಕೊಂಡು ಬೆಳೆದಿದೆ. ಶ್ರೀವಿಜಯ, ಶಿವಕೋಟ್ಯಾಚಾರ್ಯ, ಪಂಪ, ರನ್ನ, ನಾಗಚಂದ್ರ, ದುರ್ಗಸಿಂಹ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ- ಮೊದಲಾದವರು ತಮಗೆ ಬೇಕಾದ್ದನ್ನು ನಿಸ್ಸಂಕೋಚವಾಗಿ ಬೇಕಾದಲ್ಲಿಂದ ಆಮದು ಮಾಡಿಕೊಂಡು, ಕನ್ನಡವನ್ನು ಬೆಳೆಸಿದರು. 19-20ನೇ ಶತಮಾನದಲ್ಲಿ ಶೇಕ್ಸ್‌ಪಿಯರ್‌, ಕಾಳಿದಾಸ, ಶೂದ್ರಕ, ಬಂಕಿಂಚಂದ್ರ ಮೊದಲಾದವರೊಡನೆ ಇಂಗ್ಲಿಷಿನ ರೋಮ್ಯಾಂಟಿಕ್‌ ಕವಿಗಳೂ, ರಷ್ಯಾದ ಕ್ರಾಂತಿಕಾರೀ ಸಾಹಿತ್ಯವೂ ಕನ್ನಡಕ್ಕೆ ಬಂದಿದೆ. ಈಗಲೂ ಜಗತ್ತಿನಾದ್ಯಂತದಿಂದ ಕನ್ನಡಕ್ಕೆ ಹೇರಳವಾಗಿ ಸಾಹಿತ್ಯ ಕೃತಿಗಳು ಅನುವಾದವಾಗಿ ಬರುತ್ತಿವೆ. ಭಾರತದ ಬೇರಾವ ಭಾಷೆಗಳಿಗೂ ಈ ಮಟ್ಟಿನಲ್ಲಿ ಅನುವಾದಗಳು ಬರುತ್ತಿಲ್ಲ. 

ಈ ವೇಗದಲ್ಲಿ ಕನ್ನಡದ ಕೃತಿಗಳು ಬೇರೆ ಭಾಷೆಗೆ ಅನುವಾದಗೊಳ್ಳುತ್ತಿವೆಯೆ? ಖಂಡಿತ ಇಲ್ಲ. ಸಾಹಿತ್ಯ ಬಿಡಿ, ಜನರಾದರೂ ಅಷ್ಟೆ. ಕರ್ನಾಟಕದ ಒಳಗೆ ಜನ ಬಂದಷ್ಟು  ಹೊರಗೆ ಹೋಗುತ್ತಿಲ್ಲ. 11ನೆಯ ಶತಮಾನದ ಅರಸ ಆರನೆಯ ವಿಕ್ರಮಾದಿತ್ಯನು ತಕ್ಕಮಟ್ಟಿಗೆ ತನ್ನ ರಾಜ್ಯವನ್ನು ಉತ್ತರದ ಕಡೆ ವಿಸ್ತರಿಸಿಕೊಂಡಿದ್ದ. ಆತನ ಕಾಲದಲ್ಲಿ ಸುಮಾರು 600 ಕುಟುಂಬಗಳು ಉತ್ತರ ಭಾರತದಲ್ಲಿ ನೆಲೆಸಿದವು ಎಂದು ಹೇಳಲಾಗುತ್ತಿದೆ. ಆದರೆ, ಅವು ಏನಾದುವೋ ತಿಳಿಯದು.  ಸ್ವಾತಂತ್ರೊéàತ್ತರ ಕಾಲಘಟ್ಟದಲ್ಲಿ ಕರ್ನಾಟಕದಿಂದ ಹೊರಗಡೆಗೆ ವಲಸೆಹೋದ ಹೆಚ್ಚಿನ ಕನ್ನಡಿಗರು ಆರ್ಥಿಕ ಕಾರಣಗಳಿಗಾಗಿ ಬೇರೆ ಊರು ಸೇರಿದ್ದಾರೆ. ಕರ್ನಾಟಕದ ಮುಖ್ಯ ಬ್ಯಾಂಕುಗಳಾದ ಸಿಂಡಿಕೇಟ್‌, ಕಾರ್ಪೊರೇಶನ್‌, ಕೆನರಾ, ಮತ್ತು ವಿಜಯಾ ಬ್ಯಾಂಕುಗಳು ದೇಶದಾದ್ಯಂತ ತಮ್ಮ ಶಾಖೆಗಳನ್ನು ತೆರೆದಾಗ ಅನೇಕ ಜನ ಕನ್ನಡಿಗರು ಬೇರೆ ಬೇರೆ ಕಡೆ ಹೋಗುವಂತಾಯಿತು. ಈ ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ಆನಂತರ ಹೀಗೆ ಬರುವ ಕನ್ನಡಿಗರ ಸಂಖ್ಯೆಯೂ ಕಡಿಮೆಯಾಯಿತು. ಈಗ ಕರ್ನಾಟಕ ಬ್ಯಾಂಕ್‌ನ ಶಾಖೆಗಳಲ್ಲಿ ಮಾತ್ರ ಒಂದಷ್ಟು ಕನ್ನಡಿಗರಿದ್ದಾರೆ. ಇದು ಬಿಟ್ಟರೆ ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಕೆಲವೇ ಕೆಲವು ಕನ್ನಡಿಗರು ದೇಶದಾದ್ಯಂತ ಕಾಣಸಿಗುತ್ತಾರೆ. ಆದರೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಇವರೆಲ್ಲರ ತೊಡಗಿಸಿಕೊಳ್ಳುವಿಕೆಗೆ ಅನೇಕ ಮಿತಿಗಳಿವೆ. 

ಯಾಕೆ ಕನ್ನಡಿಗರು ಹೊರಗಡೆಗೆ ಹೋಗುತ್ತಿಲ್ಲ? 
ಇವತ್ತು ದೆಹಲಿ ವಿವಿಯಲ್ಲಿದ್ದ ಕನ್ನಡ ಹುದ್ದೆಗಳು ಮುಚ್ಚಿದ ಹಾಗೆ ತೋರುತ್ತದೆ. ಬನಾರಸ್‌, ಅಹಮದಾ ಬಾದ್‌ಗಳಲ್ಲಿದ್ದ ಕನ್ನಡ ಕೇಂದ್ರಗಳು ಮುಚ್ಚಿ ಹೋದುವು. ಮದರಾಸು ಕೊಲ್ಕತಾಗಳಲ್ಲಿರುವ ರಾಷ್ಟ್ರೀಯ ಗ್ರಂಥಾಲಯ ಗಳಲ್ಲಿ ಇದ್ದ ಕನ್ನಡಿಗರು ನಿವೃತ್ತಗೊಂಡ ಮೇಲೆ ಅಲ್ಲಿ ಈಗ ಯಾವ ಕನ್ನಡಿಗರೂ ಇಲ್ಲ. ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿ ಶುಶ್ರೂಷೆ ಮಾಡುತ್ತಿರುವ ದಾದಿಯರೆಲ್ಲ ಕೇರಳದವರು. ಅವರ ಸಂಖ್ಯೆ ಸುಮಾರು ಎಂಟು ಸಾವಿರಕ್ಕೂ ಅಧಿಕ. ಇದರಲ್ಲಿ ಹೆಚ್ಚಿನವರೆಲ್ಲ ಕರ್ನಾಟಕದಲ್ಲಿ ಕಲಿತವರು. ಕರ್ನಾಟಕದಲ್ಲಿ ಅಷ್ಟೊಂದು ಸಂಖ್ಯೆಯ ನರ್ಸಿಂಗ್‌ ಶಾಲೆಗಳಿವೆ, ಆದರೆ ಅಲ್ಲಿ ಕನ್ನಡಿಗರು ಕಲಿಯುತ್ತಿಲ್ಲವೆ? ಕೇರಳದ ಬಾಲೆಯರು ಕರ್ನಾಟಕದಲ್ಲಿ ಕಲಿತು ದೇಶದಾದ್ಯಂತ ಸೇವೆ ಮಾಡಬಲ್ಲವರಾದರೆ ಕನ್ನಡದ ಹುಡುಗಿಯರಿಗೆ ಅದು ಯಾಕೆ ಸಾಧ್ಯವಾಗುತ್ತಿಲ್ಲ? ಕನ್ನಡಿಗರು ರಾಜ್ಯ ಬಿಟ್ಟು ಹೊರಗೆ ಹೋಗಲು ಹೆದರುತ್ತಿದ್ದಾರೆಯೇ? 

ಕಳೆದ ಶತಮಾನದಲ್ಲಿ ಕರ್ನಾಟಕದ ಕೆಲವು ದಿಗ್ಗಜರು ರಾಷ್ಟ್ರವ್ಯಾಪೀ ಹೆಸರು ಮಾಡಿದ್ದರು. ಶಿವರಾಮ ಕಾರಂತ, ಗಿರೀಶ್‌ ಕಾರ್ನಾಡ್‌, ಯು. ಆರ್‌. ಅನಂತಮೂರ್ತಿ, ಬಿ. ವಿ. ಕಾರಂತ, ಪ್ರಸನ್ನ, ಕೆರೆಮನೆ ಶಂಭು ಹೆಗಡೆ, ಕೆ. ವಿ. ಸುಬ್ಬಣ್ಣ, ಎಸ್‌. ಎಲ್‌.  ಭೈರಪ್ಪ, ಗಿರೀಶ್‌ ಕಾಸರವಳ್ಳಿ, ಬಿ. ಜಯಶ್ರೀ ಮೊದಲಾದವರು ದೇಶಕ್ಕೆ ಗೊತ್ತು. ಇದಕ್ಕೆ ಮುಖ್ಯ ಕಾರಣ ಅವರೆಲ್ಲ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದು. ಭೈರಪ್ಪನವರ ಕೃತಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದವಾಗಿರುವುದರಿಂದ ಅವರೂ ಜನಪ್ರಿಯರೇ. ಉಳಿದಂತೆ ಕನ್ನಡ, ಕರ್ನಾಟಕ ಭಾರತಕ್ಕಾಗಲಿ ವಿಶ್ವಕ್ಕಾಗಲಿ ಸರಿಯಾಗಿ ತಿಳಿದೇ ಇಲ್ಲ. 

ಕನ್ನಡಿಗರು ಹೇಗೆ ಹೆಚ್ಚು ಹೊರಗೆ ಹೋಗಿಲ್ಲವೋ ಹಾಗೆಯೇ ಕನ್ನಡ ಸಾಹಿತ್ಯವೂ ಹೊರಗಡೆಗೆ ಹೆಚ್ಚು ಹೋಗಿಲ್ಲ. ಕನ್ನಡದ ಆಂತರಿಕ ಸತ್ವವನ್ನು ಭಾರತದ ವಿವಿಧ ಭಾಷೆಗಳಿಗೆ ಮತ್ತು ಇಂಗ್ಲಿಷಿಗೆ ಸಮರ್ಥವಾಗಿ ಪರಿಚಯಿಸುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆದೇ ಇಲ್ಲ. ನಮ್ಮ ಶಿವಕೋಟಿ, ಪಂಪ, ಚಾವುಂಡರಾಯ, ನಾಗಚಂದ್ರ, ನಯಸೇನ, ಕೇಶೀರಾಜ, ಚಾಮರಸ, ರತ್ನಾಕರವರ್ಣಿ, ಜನ್ನ, ಹರಿಹರ, ಕುಮಾರವ್ಯಾಸ, ಕುವೆಂಪು, ಮಾಸ್ತಿ, ಬೇಂದ್ರೆ, ಶಂಭಾ ಜೋಷಿ, ಶಿವರಾಮ ಕಾರಂತ, ಮಾಸ್ತಿ, ಕೆ. ಎಸ್‌. ನರಸಿಂಹಸ್ವಾಮಿ, ನಿರಂಜನ, ಗೋಪಾಲಕೃಷ್ಣ ಅಡಿಗ, ಲಂಕೇಶ್‌, ತೇಜಸ್ವಿ, ಶೇಣಿ ಗೋಪಾಲಕೃಷ್ಣ ಭಟ್‌- ಮೊದಲಾದವರ ಬಗ್ಗೆ ಕರ್ನಾಟಕದ ಹೊರಗಿನ ಜನಕ್ಕೆ ಏನೇನೂ ತಿಳಿದಿಲ್ಲ. ನೀವು ಗೂಗಲ್‌ಗೆ ಹೋಗಿ ಪಂಪ ಎಂದು ಕೇಳಿದರೆ ಕೇವಲ ಎರಡು ಉಲ್ಲೇಖಗಳು ಸಿಗುತ್ತವೆ. ಆದರೆ, ತಿರುಕ್ಕುರುಳ್‌ ಎಂದು ಕೇಳಿದರೆ ಎರಡು ಲಕ್ಷಕ್ಕೂ ಹೆಚ್ಚು ಉಲ್ಲೇಖಗಳು ಪ್ರತ್ಯಕ್ಷವಾಗುತ್ತವೆ. ಹಾಗೆಯೇ ಕುವೆಂಪು ಎಂದು ಕೇಳಿದರೆ ನಾಲ್ಕೈದು, ಪ್ರೇಮಚಂದ್‌ ಎಂದು ಕೇಳಿದರೆ ಐದಾರು ಲಕ್ಷ ಉಲ್ಲೇಖಗಳು ಕಣ್ಣೆದುರು ಬರುತ್ತವೆ. 

ಈ ಸಮಸ್ಯೆಯಿಂದ ನಾವು ಹೊರಗೆ ಬರಬೇಕಾದರೆ ಸಮರೋಪಾದಿಯಲ್ಲಿ ಅನುವಾದ ಕಾರ್ಯವನ್ನು ಕೈಗೆತ್ತಿಕೊಳ್ಳುವುದೊಂದೇ ಹಾದಿ. ಅನುವಾದಕರಿಗೆ ಅತ್ಯುತ್ತಮ ಸಂಭಾವನೆ ನೀಡಿ, ದೇಶ-ವಿದೇಶಗಳ ಪ್ರಖ್ಯಾತ ಪ್ರಕಾಶರ ಮೂಲಕ  ನಮ್ಮ ಅನುವಾದಗಳು ಪ್ರಕಟಗೊಂಡು ಓದುಗರನ್ನು ತಲುಪಬೇಕು. ಈ ಹಂತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಎಚ್ಚರ ನಮಗೆ ಬೇಕು. ವೆಬ್‌ಸೈಟ್‌ಗಳಲ್ಲಿ ಕನ್ನಡ ಪಠ್ಯಗಳ ಅನುವಾದಗಳು ಉಚಿತವಾಗಿ ದೊರೆಯಬೇಕು. 

ಈ ತಿಳುವಳಿಕೆಯಲ್ಲಿ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಈಗಾಗಲೇ ಕನ್ನಡ ಅಭಿಜಾತ ಪರಂಪರೆಗೆ ಸೇರಿದ ಕವಿರಾಜಮಾರ್ಗ, ವಡ್ಡಾರಾಧನೆ, ಗದಾಯುದ್ಧ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಿದೆ ಮತ್ತು ದೆಹಲಿಯ ಅಂತಾರಾಷ್ಟ್ರೀಯ ಪ್ರಕಾಶಕರ ಮೂಲಕ ಅವುಗಳನ್ನು ದೇಶ-ವಿದೇಶಗಳ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ತಲುಪಿಸಿದೆ. ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಹಳಗನ್ನಡದ ಆಯ್ದ ಭಾಗಗಳ ಇಂಗ್ಲಿಷ್‌ ಅನುವಾದ (ಅನುವಾದಕರು: ಸಿ. ಎನ್‌. ರಾಮಚಂದ್ರನ್‌ ಮತ್ತು ಬಿ. ಎ. ವಿವೇಕ ರೈ) ಕೂಡ ವಿಚಾರಸಂಕಿರಣಗಳಲ್ಲಿ ಉಲ್ಲೇಖೀತವಾಗುತ್ತಿದೆ. ವನಮಾಲಾ ವಿಶ್ವನಾಥ್‌ ಅನುವಾದಿಸಿದ ಹರಿಶ್ಚಂದ್ರ ಕಾವ್ಯವು ಕನ್ನಡದ ಘನತೆಯನ್ನು ಹೆಚ್ಚಿಸಿದೆ. ಕನ್ನಡ ಪೀಠ ಪ್ರಕಟಿಸಿದ 60 ತುಳು ಕತೆಗಳ ಅನುವಾದವು ಈಗ ಇಂಗ್ಲಿಷಿನಿಂದ ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಗಳಿಗೆ ಹೋಗುತ್ತಿದೆ.  ಈ ಅನುವಾದಗಳನ್ನು ಅತ್ಯುತ್ತಮ ಅನುವಾದಗಳೆಂದು ಬೇಕಾದರೆ ಕರೆಯದಿರೋಣ, ಆದರೆ ಅವು ಅತ್ಯುತ್ತಮ ಆರಂಭಗಳು. ಮುಂದಿನ ದಿನಗಳಲ್ಲಿ ಅತ್ಯುತ್ತಮ ಅನುವಾದಗಳು ಬರಲು ಇವು ಪ್ರೇರಣೆಯಾಗಲಿ. 

ಹೊಸ ಮಾದರಿಗಳತ್ತ ಚಲಿಸೋಣ !  
ಪುಸ್ತಕಗಳನ್ನು ಅನುವಾದಿಸಿ ಮಾರುಕಟ್ಟೆಗೆ ಬಿಡುಗಡೆಯಾಗುವುದಷ್ಟೇ ಕೆಲಸ ಆಗಬಾರದು. ಬಂಗಾಲಿಗಳು ಮತ್ತು ತಮಿಳರು ಈ ವಿಷಯದಲ್ಲಿ ವಿಕ್ರಮವನ್ನೇ ಸಾಧಿಸುತ್ತಿದ್ದಾರೆ. ಅವರು ಅನುವಾದಿತ ಕೃತಿಗಳ ಬಗ್ಗೆ ಅನುವಾದಗೊಂಡ ಭಾಷೆಯಲ್ಲಿ ಹಲವು ವಿಚಾರ ಸಂಕಿರಣ, ಉಪನ್ಯಾಸ, ಚರ್ಚೆಗಳನ್ನು ಏರ್ಪಡಿಸಿ ಕೃತಿಗಳು ಸರಿಯಾದವರಿಗೆ ಮುಟ್ಟುವಂತೆ ಮಾಡುತ್ತಾರೆ. 

ಅನುವಾದದ ವಿಷಯದಲ್ಲಿ ನಾವೀಗ ಹೊಸ ಹಾದಿಗಳನ್ನು ಹಿಡಿಯಬೇಕಾಗಿದೆ. ಕನ್ನಡದ ಪ್ರಾಚೀನ ಕೃತಿಗಳು ಕಾಲ ಮತ್ತು ದೇಶಗಳ ಚೌಕಟ್ಟುಗಳಲ್ಲಿ ಸ್ಥಗಿತವಾಗಿ ಉಳಿದಿಲ್ಲ. ಕುಮಾರವ್ಯಾಸನು ಕಾವ್ಯದ ಕೇಳುಗರ ಪಟ್ಟಿಯಲ್ಲಿ  ಜಂಗಮ ಜನಾದ‌ìನರನ್ನೂ ಸೇರಿಸಿದ್ದಾನೆ. ನಮ್ಮ ಕಾವ್ಯಗಳು ಜಂಗಮ ಜನಾದ‌ìನರನ್ನು ತಲುಪಿದ್ದು ಹೇಗೆ ಎಂದು ಕೇಳಿಕೊಂಡರೆ ನಮ್ಮಲ್ಲಿ ಜನಪ್ರಿಯವಾಗಿದ್ದ ಗಮಕ ಪರಂಪರೆಯ ಬಗ್ಗೆ ಒಂದು ತಿಳುವಳಿಕೆ ಮೂಡುತ್ತದೆ. ಹಾಡಲು ಅನುಕೂಲವಾಗುವಂತೆ ಮರುಸೃಷ್ಟಿಗೊಂಡ ಕನ್ನಡ ಕಾವ್ಯಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ಗಮಕವು ಪ್ರಧಾನ ಪಾತ್ರ ವಹಿಸಿದೆ. ಇದನ್ನು ಬಲ್ಲ ಎಲ್ಲ ಕವಿಗಳೂ ಕವಿ-ಗಮಕಿಗಳಿಗೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಮುಂದೆ ಹರಿಕಥಾ ಪರಂಪರೆಯು ಗಮಕ ಪರಂಪರೆಯನ್ನು ತನ್ನೊಡನೆ ಜೋಡಿಸಿಕೊಂಡು, ಕನ್ನಡ ಕಾವ್ಯಗಳನ್ನು ಮತ್ತಷ್ಟು ವಿಸ್ತರಿಸಿತು. ಈ ಹರಿದಾಸರುಗಳು ಕನ್ನಡ ಕಾವ್ಯಗಳನ್ನು ಮರುಸೃಷ್ಟಿಸಿ ಜನರಿಗೆ ತಲುಪಿಸಿದ ರೀತಿಯ ಕುರಿತು ನಾವು ಇನ್ನಷ್ಟೇ ಗಂಭೀರವಾದ ಅಧ್ಯಯನ ನಡೆಸಬೇಕಾಗಿದೆ. ಮುಂದೆ 17 ಮತ್ತು 18ನೆಯ ಶತಮಾನದಲ್ಲಿ ಕನ್ನಡ ಕಾವ್ಯಗಳನ್ನೇ ಆಧರಿಸಿ ಬರೆಯಲಾದ ನೂರಾರು ಸಂಖ್ಯೆಯ ಯಕ್ಷಗಾನ ಪ್ರಸಂಗಗಳು ಕಾಣಿಸಿಕೊಂಡುವು. ಈ ಯಕ್ಷಗಾನ ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು ಅವುಗಳನ್ನು ಅಲ್ಪಸ್ವಲ್ಪ$ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ ರಂಗಭೂಮಿಗೆ ಅಳವಡಿಸಿದರು. ಚೆಂಡೆ-ಮದ್ದಳೆ-ಭಾಗವತಿಕೆಗಳ ಜೊತೆಗೆ ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ಕಾವ್ಯಗಳು ರಂಗಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು. ಅವುಗಳನ್ನು ಲಕ್ಷಾಂತರ ಜನ ನೋಡುವಂತಾಯಿತು. 

ಈ ಚಿಂತನಾಕ್ರಮವನ್ನು ಆಧರಿಸಿ ಜೆಎನ್‌ಯು ಕನ್ನಡ ಅಧ್ಯಯನ ಪೀಠವು ಫೆಬ್ರವರಿ 16ರಂದು ವಿಶಿಷ್ಟವಾದೊಂದು ಕಾರ್ಯಕ್ರಮವನ್ನು ಆಯೋಜಿಸಿದೆ. ಆದಿನ ರನ್ನನ ಗದಾಯುದ್ಧದ ಕೃತಿಯ ಇಂಗ್ಲಿಷ್‌ ಅನುವಾದ (ಅನುವಾದಕರು: ಪ್ರೊ. ಆರ್‌ವಿಎಸ್‌ ಸುಂದರಂ ಮತ್ತು ಅಮ್ಮೆಲ್‌ ಶೆರೋನ್‌) ಬಿಡುಗಡೆಗೊಳ್ಳಲಿದೆ.  ಆ ಸಂದರ್ಭದಲ್ಲಿ ಗದಾಯುದ್ಧದ ಗಮಕ ಮತ್ತು ಹರಿಕತೆಯ ಜೊತೆಗೆ ಇಡಗುಂಜಿ ಮೇಳದ ಕಲಾವಿದರು ಯಕ್ಷಗಾನ ಪ್ರಸಂಗವನ್ನೂ ಪ್ರಸ್ತುತಪಡಿಸಲಿದ್ದಾರೆ. ಹೀಗೆ ಒಂದು ಪಠ್ಯವು ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತ ಇವತ್ತಿನವರೆಗೆ ಬದುಕುಳಿದ ಬಗೆಯನ್ನು ಸಂಶೋಧಕರಿಗೆ ಪ್ರಸ್ತುತಗೊಳಿಸಲಾಗುವುದು. ಅಭಿಜಾತ ಕೃತಿಗಳನ್ನು ಅಧ್ಯಯನ ಮಾಡುವ ಸುಮಾರು 300 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ದೆಹಲಿಯ ಜವಾಹರಲಾಲ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠ ಪ್ರಕಟಿಸಿರುವ ರನ್ನ ಮಹಾಕವಿಯ ಗದಾಯುದ್ಧ ಕೃತಿಯ ಇಂಗ್ಲಿಷ್‌ ಅನುವಾದ ಫೆ. 16ರಂದು ಬಿಡುಗಡೆಯಾಗುತ್ತಿದೆ.

ಪುರುಷೋತ್ತಮ ಬಿಳಿಮಲೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ