ಇಂಗದ ಹಸಿವಿನ  ಹಂಬಲದೊಳಗೆ

Team Udayavani, Feb 3, 2019, 12:30 AM IST

ಸುಮಾರು ಹದಿನಾಲ್ಕು ವರ್ಷಗಳಿಂದ ನಾನು ಈ ಮನೆಯ ಉಪ್ಪುಣ್ಣುತ್ತಿದ್ದೇನೆ. ಮೊದಮೊದಲು ಬಂದಾಗ ಅನ್ನವನ್ನೇ ಕಾಣದವರ ಮುಂದೆ ಹುಗ್ಗಿ ಪರಮಾನ್ನಗಳನ್ನಿಟ್ಟರೆ ಹೇಗೆ ಆಗಬೇಕೋ ಆ ನಮೂನಿ ಅನಿಸುತ್ತಿತ್ತು ನನಗೆ. ಬೀದಿಯಲ್ಲಿ ಸಿಕ್ಕುದನ್ನೇ ಸಿಹಿಯೆಂದು ಬಗೆದು ಮುಕ್ಕುತ್ತಿದ್ದವನಿಗೆ ಕರೆದು ಹೋಳಿಗೆ ಹರಿದು ಹಾಕಿದರೆ ಹೇಗಾಗಬೇಡ! ಒಡೆಯನ ಮಗು ಶಾಲೆಗೆ ಹೋಗಿ ಬಂದು ಮಾಡುತ್ತಿತ್ತು. ಅದರ ಜೊತೆಗೆ ನಾನೂ ಹೋಗುವೆ, ಬರುವೆ. ಬರುಬರುತ್ತ ಮಗು ಅಮ್ಮನಷ್ಟೇ ನನ್ನನ್ನೂ ಹಚ್ಚಿಕೊಂಡಿತು. ಒಟ್ಟಿಗೆ ನನಗಾಗಿ ಹೊರಗೆ ಹಾಸಿದ್ದ ತೊಟ್ಟಿನ ಸುಪ್ಪತ್ತಿಗೆಯ ಮೇಲೆ ಮಗು ಮಲಗುತ್ತಿರಲಿಲ್ಲವೆಂಬುದನ್ನು ಬಿಟ್ಟರೆ, ನನ್ನನ್ನು ಹೆತ್ತಮಗನ ಹಾಗೇ ನೋಡಿಕೊಂಡಿದ್ದಾರೆ ಈ ಮನೆಯ ಜನ ಎಂದು ಹೇಳುವುದನ್ನ ಮರೆತರೆ, ಅದು ಅನ್ಯಾಯ. ಒಡೆಯನ ತಂದೆ ದೊಡ್ಡೊಡೆಯರಿಗೆ ಎಷ್ಟು ವಯಸ್ಸೆಂಬುದೆಲ್ಲ ನನ್ನ ಅಂದಾಜಿಗೆ ನಿಲುಕುವುದಲ್ಲ. ಮನುಷ್ಯ ಮಾತ್ರ ಏನೋ ವಿದ್ಯೆಯನ್ನು ಕಲಿತಿದ್ದಾನೆ. ಮನೆಗೆ ಮಂದಿ ಬಿಟ್ಟುಬಿಟ್ಟು ಬರುತ್ತಾರೆ. ಅವರಿಗೆಲ್ಲ ನನ್ನನ್ನು ಸದಾಕಾಲ ಅತ್ಯಂತ ಅಕ್ಕರೆಯಿಂದ ಪರಿಚಯಿಸುತ್ತಾನೆ ಎಂಬುದಂತೂ ಹೌದು. ಮೈದಡವುವಾಗ ಗೊತ್ತಾಗಿಬಿಡುತ್ತದೆ ನನಗೆ. ಇದೇನು ಶುನಕನಿಗಿಷ್ಟು ಸ್ಪಷ್ಟ ಭಾಷೆಯೇ ಎಂದು ಹಳಿದುಕೊಂಡು ನಗಬೇಡಿ. ನಾನು ಯಾರೆಲ್ಲರ ಮನೆಯ ಅನ್ನ ತಿಂದಿರುವೆನೋ ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಫೇಮಸ್ಸಾಗಿರುವ ಜನ. ಅಂಥವರ ಸಹವಾಸದಲ್ಲಿ ಇದ್ದುಕೊಂಡು, ನಾನೂ ತಕ್ಕಮಟ್ಟಿಗೆ ನನ್ನದೇ ಭಾಷೆಯಲ್ಲಿ ಕಂಯ್‌ಕುಂಯ್‌ ಎಂತಲಾದರೂ ಸರಿ, ಸೊಗಸಾಗಿ ಮಾತಾಡುವುದನ್ನು ರೂಢಿಸಿಕೊಂಡಿದ್ದೇನೆ. 

ಮನೆಯವರು ಒಮ್ಮೊಮ್ಮೆ ನನಗೆ ಕಾಯಿಲೆಯಾದಾಗ ಬರುಹೋಗುವವರಿಗೆ ಕೊಡುವ ಹಾಗೆಯೇ ಮದ್ದು ಕೊಟ್ಟು, ಮು¨ªೆ ಹಾಕಿ, ಎದ್ದು ಓಡಾಡುವ ಹಾಗೆ ಮಾಡಿಬಿಡುತ್ತಿದ್ದರು. ಅವಕಾಶವಿದ್ದಿದ್ದರೆ, ಹೆಣ್ಣುಹುಡುಕಿ ಮದುವೆಯನ್ನೂ ಮಾಡಿಬಿಡುತ್ತಿದ್ದರೇನೋ, ಆಗಲಿಲ್ಲ ಅದೊಂದು ಎಂಬ ಕೊರಗು ನನಗಿದೆ. ನನಗಾದರೂ ಯಾರು ಹೆಣ್ಣುಶುನಕವನ್ನು ಗಂಟುಹಾಕಿ ಗೋಳಾಡಬೇಕಿತ್ತು. ದುಡಿಮೆಯೇ, ದಮ್ಮಡಿಯೇ? ಆದರೂ ನಾನು ಸಂತೋಷವಾಗಿದ್ದೇನೆ ಇವರೆಲ್ಲರ ಸಹವಾಸದಲ್ಲಿ. ನಮ್ಮ ಮನೆಯನ್ನು ಹಾದುಹೋಗುವ ಹೆಣ್ಣುಶುನಕಗಳು ನನ್ನ ಗಂಭೀರತೆಯನ್ನು ವಿಪರೀತ ಮೆಚ್ಚಿರುವವಾದರೂ, ಇಂದು ಕಟ್ಟಿಕೊಂಡು, ನಾಳೆಯೇ ಬಿಟ್ಟುಹೋಗುವ ಹುಂಬ ಮನುಷ್ಯರ ನೆರಳು ಬಡಿಬಡಿದು ನನಗಂತೂ ಒಟ್ಟು ಬಾಳುವ ಕೆಲಸದಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ. ಇದ್ದೇನು ಮಾಡುವುದೆಂಬ ವೈರಾಗ್ಯವೂ ಒಂದಷ್ಟು ಅಂಟಿಕೊಂಡು ಆ ಪಡಿಪಾಡಲು ಯಾಕೆ ಕೇಳುತ್ತೀರಿ?

ಆದರೆ, ನಮ್ಮ ಮುದುಕ ಡಾಕ್ಟರು ಇದ್ದಾರಲ್ಲ, ಅಸಹನೆಯೇ ಮತ್ತೂಂದು ಅವತಾರ ಎಂಬಂತಹ ಹೆಂಡತಿಯನ್ನು ಕಟ್ಟಿಕೊಂಡು ಗೋಳಾಡುತ್ತಾರೆಂದರೆ ಅಷ್ಟಿಷ್ಟಲ್ಲ. ಮುದುಕಮ್ಮ ಒಮ್ಮೆ ಮಾತ್ರವೂ ಈ ಮನುಷ್ಯನನ್ನು ಗಂಭೀರವಾಗಿ ಪರಿಗಣಿಸಿದ್ದನ್ನು, ಕಕ್ಕುಲಾತಿಯಿಂದ ಮಾತಾಡಿಸಿದ್ದನ್ನು, ಈ ಮನೆಗೆ ಬಂದಾಗಿನಿಂದಲೂ ನಾನು ಕಂಡದ್ದಿಲ್ಲ. ಬರುವ ಮುಂಚಿನ ಕತೆ ಹೇಗೋ ಕಾಣೆ, ಮಗ-ಸೊಸೆ ಕೂಡ ತಾತ್ಸಾರವಾಗಿಯೇ ಕಾಣುತ್ತಾರೆ. ನನಗಂತೂ ಮನುಷ್ಯ ಏನು ಗಳಿಸಿದರೇನು ಬಂತು. ತೊಟ್ಟಿನ ಮೇಲೆ ಹಾಕಿದ್ದನ್ನು ತಿಂದು ಮಲಗುವ ನನಗೂ, ನನ್ನಂತಹ ಲಕ್ಷಾಂತರ ಜೀವಿಗಳಿಗೆ ಶುನಕಾಶ್ರಮವನ್ನು ಕಟ್ಟಿಸಿ, ಕೊಡುಗೈ ದಾನಿ ಎಂದು ಕರೆಸಿಕೊಳ್ಳಬಹುದಾದಷ್ಟು ಗಳಿಸಿ ಒಟ್ಟಿರುವ ಡಾಕ್ಟರಿಗೂ ವ್ಯತ್ಯಾಸವೇ ಇಲ್ಲವಲ್ಲ ಅನಿಸಿ, ಖನ್ನತೆ ಹೆಚ್ಚಾಗಿ ಬಿಡುವುದೂ ಇತ್ತು. ಆದರೆ ನನ್ನ ನಂಬುಗೆಯೆ ಅಲ್ಲಾಡಿ ಹೋಗಿಬಿಟ್ಟಿತು ಒಂದುದಿವಸ !

ಪ್ರತಿಸಲವೂ ಬರುವ ಹಾಗೆ ಆ ಹುಡುಗಿ ಅವತ್ತೂ ಬಂದಳು. ಒಮ್ಮೊಮ್ಮೆ ಹಿರಿಯ ಯಜಮಾನಿಯ ಹಾಗೆ ಕಂಡರೆ, ಮತ್ತೂಮ್ಮೆ ಶಾಲೆಗೆ ಹೋಗುವ ಹುಡುಗಿಯಷ್ಟು ಸಣ್ಣವಳಾಗಿ ಕಾಣುತ್ತಾಳೆ, ಆಕೆ ಬರುವುದು, ಡಾಕ್ಟರೊಡನೆ ಔಷಧಿಯನ್ನೂ ಕೇಳಿ ಪಡೆದುಕೊಂಡು ಹೋಗಲು. ಸಂಗೀತ ಕಲಿತಿ¨ªಾಳೇನೋ, ಡಾಕ್ಟರು ಕೆಲವೊಂದು ಸಲ, ಬಹಳ ಹೊತ್ತಿನವರೆಗೆ ಕೂರಿಸಿಕೊಂಡು “ಹಾಡು ಹಾಡು’ ಅನ್ನುತ್ತಿರುತ್ತಾರೆ. ಬಂದಷ್ಟನ್ನು ತನ್ಮಯಳಾಗಿ ಹಾಡುತ್ತಾಳಾದ್ದರಿಂದ ನನಗೂ ಆಕೆ ಏನೇ ಹಾಡಿದರೂ ಕೇಳಲು ಚೆಂದವೆನಿಸುತ್ತದೆ. ಡಾಕ್ಟರಿಗಂತೂ ಭಲೇ ಹಿಗ್ಗು ಆ ಹುಡುಗಿ ಬಂದಳೆಂದರೆ. ನನಗೆ ನಾಲ್ಕಾರು ಬನ್ನುಗಳು ಹೆಚ್ಚುವರಿಯಾಗಿ ಸಿಕ್ಕುತ್ತವೆ. ಕೆಲವೊಮ್ಮೆ ಆಕೆಯ ಎರಡು ಪುಟ್ಟಪುಟ್ಟ ಹೆಣ್ಣುಮಕ್ಕಳೂ ಆಕೆಯ ಜೊತೆಗೆ ಬಂದು ನನ್ನ ಮುಂದೆಯೇ ಕುಳಿತು ಕಿವಿ ಎಳೆದೆಳೆದು ಹಾಡುತ್ತವೆ, ಆಡುತ್ತವೆ. ಆಗೆಲ್ಲ ನನಗೆ ನನ್ನದೂ ಒಂದು ಫ್ಯಾಮಿಲಿ, ಹೆಂಡತಿ, ಮಕ್ಕಳು ಇದ್ದಿದ್ದರೆ ಎಂದೆಲ್ಲ ಕಲ್ಪನೆಗಳು ಮೂಡಿ ರೋಮಾಂಚನವಾಗುತ್ತದೆ. ಸಿಗದುದಕ್ಕೆ ಆಸೆಪಟ್ಟು ಉಪಯೋಗವಿಲ್ಲ ಎಂಬುದು ಅರ್ಥವಾಗಿದೆ ನನಗೂ. ಅಂತೂ ಆಕೆಯಷ್ಟೇ ಮುದ್ದು ಮುದ್ದು ಆಕೆಯ ಮಕ್ಕಳೂ. 

ಒಮ್ಮೆ ಡಾಕ್ಟರ ಮನೆಯಲ್ಲಿ ಎಲ್ಲರೂ ಪ್ರವಾಸ ಹೋಗಿ, ಮದ್ದು ತೆಗೆದುಕೊಂಡು ಹೋಗಲು ಬರುವ ಜನರಿರುತ್ತಾರಲ್ಲ ಎಂದು ಈತನೊಬ್ಬನೇ ಮನೆಯಲ್ಲೆ ಉಳಿದುಕೊಂಡಿದ್ದರು. ಆಕೆಯ ಮಗುವಿಗೆ ಜ್ವರವಿತ್ತೋ, ಆಕೆಗೇ ಹುಷಾರು ತಪ್ಪಿತ್ತೋ? ಅಂತೂ ಅವತ್ತು ಆಕೆ ಕೂಸನೆತ್ತಿಕೊಂಡು ಓಡೋಡುತ್ತ ಬಂದಳು. ಮನೆಯಲ್ಲಿ ಯಾರೂ ಇಲ್ಲದಿರುವಾಗ ನಡುಮನೆಯತನಕವೂ ನಡೆದಾಡಿಕೊಂಡಿರಲು ನನಗೆ ಅವಕಾಶವಿರುವುದರಿಂದ ಅವತ್ತು ಟಿವಿಯಲ್ಲಿ ಬರುವ ಚಿತ್ರಗಳನ್ನು ನೋಡಿಕೊಂಡು ಆನಂದವಾಗಿ ಇ¨ªಾಗಲೇ ಆಕೆ ಬಂದದ್ದು. ಗಾಬರಿಯಾಗಿದ್ದಳು. ಮಗುವಿನ ಮುಖ ಕೆಂಪಗಾಗಿ ಹೋಗಿತ್ತು. ಮಂಕಾಗಿ ಆಕೆಯೂ ಕಳೆಗುಂದಿದ್ದಳು. ಡಾಕ್ಟರು ಕೂರಿಸಿ, ತಾಳ್ಮೆಯಿಂದ ಮಗುವನ್ನು ಪರೀಕ್ಷೆ ಮಾಡಿದರು. ನನ್ನ ಕಡೆಗೆ ಅದರ ಗಮನ ಸೆಳೆದು, ಚುಚ್ಚಿದರೂ ನೋವಾಗಬಾರದು ಹಾಗೆ ಮ್ಯಾನೇಜು ಮಾಡಿ ಚುಚ್ಚಿ ಮಲಗಿಸಿದರೆ, ಮಗು ಕೊಂಚವೇ ಗೆಲುವಾದಂತೆ ಕಾಣಿಸಿತು. ತುಸು ಸಮಾಧಾನ ಮೂಡಿದಂತೆ ಕಂಡ ಆಕೆಯೂ ಕುಳಿತು ಒಂದಷ್ಟು ಮಾತಾಡಿದಳು. ಹಾಗಿರುವಾಗ ನೋಡನೋಡುತ್ತಿದ್ದಂತೆಯೇ, ಡಾಕ್ಟರು ಮುಂಬಾಗಿಲನ್ನು ಮುಂದು ಮಾಡಿ ಬಂದು ಆಕೆಯನ್ನು ತಬ್ಬಿಹಿಡಿದುಕೊಂಡು ಬಿಟ್ಟರು. ಮಗುವಿಗೆ ಹುಷಾರಿಲ್ಲದ್ದಕ್ಕೆ ಸಮಾಧಾನಿಸಲು ಸಂತೈಸಲು ಅಪ್ಪಿಕೊಂಡರೇನೋ ಎಂದು ಭಾವಿಸಿದ್ದಳೆಂದು ಕಾಣುತ್ತದೆ. ಸುಮ್ಮನಿದ್ದಳು. ಆದರೆ, ನನಗೆ ಗೊತ್ತಾಗಿ ಹೋಗಿತ್ತು. ಡಾಕ್ಟರಿಗೆ ಮೈಕಾವೇರಿದೆ ಎಂದು. ನನಗೆ ಚಡಪಡಿಕೆ ಅನಿಸಿದರೂ ಸುಮ್ಮನೆ ಕೂರದೇ ಗತಿಯಿರಲಿಲ್ಲ. ಕುಂಯ್‌ಗಾಟ್ಟಿ ಇದು ಸರಿಯಲ್ಲವೆಂದು ಹೇಳಲು ಪ್ರಯತ್ನಿಸಿದರೂ ನನಗೆ ಹಾಗೆ ಮಾಡಲು ಸಾಧ್ಯವಾಗಲೇ ಇಲ್ಲ. ಆದರೆ, ಹಿಡಿತ ಬಿಗಿಯಾದಂತೆ ಆಕೆಗೆ ವಾಸ್ತವ ಅರ್ಥವಾಯಿತೇನೋ, ಗಕ್ಕನೆ ಸಾವರಿಸಿಕೊಂಡು ಹಿಂದೆ ಸರಿದುಬಿಟ್ಟಳು. ಸಣ್ಣಗೆ ನಡುಗುತ್ತಿದ್ದವಳಿಗೆ, “ತಪ್ಪೇನೂ ಇಲ್ಲಮ್ಮ, ನಿನ್ನ ಸಹಕಾರ ಬೇಕು’ ಎಂದ ಡಾಕ್ಟರ ಮಾತುಗಳನ್ನು ಅರಗಿಸಿಕೊಳ್ಳಲು ನನಗೇ ಆಗಲಿಲ್ಲ, ಇನ್ನು ಗಾಬರಿಯಾಗಿದ್ದ ಆಕೆಯ ಪಾಡೇನು? ಈಗ ಆಕೆಯ ಮೈನಡುಕ ನಿಚ್ಚಳವಾಗಿತ್ತು. ಹಿಂದೆ ಸರಿದು, ನಿ¨ªೆ ಹೋಗಿದ್ದ ಮಗುವನ್ನು ನಡುಗುವ ಕೈಗಳಿಂದಲೇ ಎತ್ತಿಕೊಂಡು ಏನೊಂದನ್ನೂ ಮಾತಾಡದೇ ಹೊರಟುಹೋಗಿಬಿಟ್ಟಳು. ನಡೆದದ್ದು ನನಗೆ ಎಲ್ಲವೂ ಅರ್ಥವಾಗಿತ್ತು. ಅದು ಡಾಕ್ಟರಿಗೂ ತಿಳಿಯಿತೇನೋ? ಆಕೆ ತಮಗೆ ಸ್ಪಂದಿಸದ ಕೋಪವನ್ನು, “ನಡೀಅತ್ಲಾಗೆ ನಾಯಿಸುಳೇಮಗಂದೆ ತಂದು’ ಎಂದು ಜೋರಾಗಿ ಕೂಗಿಕೊಂಡು, ನನ್ನನ್ನು ಝಾಡಿಸಿ ಒದ್ದ ರಭಸಕ್ಕೆ ನಾನು ಮುಂದಲ ಗೇಟಿಗೆ ಹೋಗಿಬಿ¨ªೆ. ಪಕ್ಕೆಗೆ ಗೇಟು ಬಡಿದು ವಿಪರೀತ 

ನೋವಾದರೂ, ಸಹಿಸಿಕೊಂಡೆ. ಅದಕ್ಕಿಂತ ಹೆಚ್ಚಾಗಿ, ಒಳ್ಳೆಯವರೆಂದು ನಾನು ಭಾವಿಸಿದ್ದ, ಮುದುಕರು, ಮಾಗಿದ ಮನಸ್ಸಿನವರು ಎಂದು ತಿಳಿದಿದ್ದ ಮನುಷ್ಯ ತೆವಲಿಗೆ ಬಲಿಯಾಗಿ, ಆ ಹೆಣ್ಣುಮಗುವಿನ ಮನಸ್ಸನ್ನೇ ಘಾಸಿ ಮಾಡಿದರಲ್ಲ ಎಂಬುದು ನನ್ನನ್ನು ವಿಪರೀತ ಬಾಧಿಸಿಬಿಟ್ಟಿತು.  ನನಗೆ ಆ ಘಟನೆಯ ನಂತರ ಒಂದರೆಘಳಿಗೆಯೂ ಅಲ್ಲಿ ನಿಲ್ಲಲು ಆಗಲಿಲ್ಲ. ಪಕ್ಕೆಯ ನೋವನ್ನು ಸಹಿಸಿಕೊಂಡೇ, ಒಂದುಸಿರಿಗೆ ಓಡಿದೆ. ಅಲ್ಲಿ, ಅಂತೂ ದೂರದಲ್ಲಿ ಆಕೆ ಓಡುನಡಿಗೆಯಲ್ಲಿ ಹೋಗುತ್ತಿದ್ದಳು. ಆಕೆಯ ಪಕ್ಕದಲ್ಲಿಯೇ ಹೋಗಿ ವಾಲುತ್ತ ವಾಲುತ್ತ ನಡೆಯತೊಡಗಿದೆ. ದಳದಳನೆ ಕಣ್ಣೀರು ಹಾಕುತ್ತಿದ್ದ ಆಕೆ ನನ್ನನ್ನು ಗಮನಿಸಿದಳು. ಆದರೆ, ನಿಲ್ಲಲಿಲ್ಲ. ಆತ ಮಾಡಿದ್ದು ತಪ್ಪು, ಅದನ್ನು ನಾನೊಪ್ಪುವುದಿಲ್ಲ, ನಿನ್ನ ಸ್ಥಿತಿ ನನಗೆ ಅರ್ಥವಾಗುತ್ತದೆ ಎನ್ನುವಂತೆ ಕಾಲುಕಾಲಲ್ಲಿ ತೊಡರಾಡಿಕೊಂಡೇ ಆಕೆಗೆ ಅರ್ಥಮಾಡಿಸಿಕೊಡಲು ಪ್ರಯತ್ನಿಸಿದೆ. ಆಕೆಗೆ ಏನು ತಿಳಿಯಿತೋ, ಅಷ್ಟರಲ್ಲಿ ಎದ್ದಿದ್ದ ಮಗು ತನ್ನಮ್ಮನ ಹಿಂಬಾಲತ್ತಿಕೊಂಡು ಬರುತ್ತಿದ್ದ ನನ್ನನ್ನು ನೋಡಿ, ಜ್ವರದಲ್ಲಿಯೂ ಕೇಕೆ ಹಾಕಿ ನಗತೊಡಗಿತು. ತಂದೆಯಂತೆ ಭಾವಿಸಿದ್ದಳೇನೋ, ದುಷ್ಟ ಹಾಗೆ ವರ್ತಿಸಿದ್ದನ್ನು ಆಕೆಗೆ ಜೀರ್ಣಿಸಿಕೊಳ್ಳಲು ಆಗಿರಲಿಲ್ಲ. ಈಗ ಮಗುವಿನ ಮುಖದಲ್ಲಿ ಗೆಲುವು ನೋಡಿ, ನಿಂತಳು. ಕಣ್ಣು ಕೆಂಪಗಾಗಿ ಹೋಗಿದ್ದವು. ಅಷ್ಟರಲ್ಲಿ ಅವರ ಮನೆ ಬಂದಿತ್ತು. ಗೇಟಿನೊಳಕ್ಕೆ ನನ್ನನ್ನು ಕರೆದುಕೊಂಡಳು. ನನಗೆ ಪಕ್ಕೆಯ ನೋವು ಹೆಚ್ಚಾಗುತ್ತಲೇ ಇತ್ತು. ಒಟ್ಟಿನಲ್ಲಿ ಹಿಂದಿನದೇನೆಲ್ಲ ನೆನಪಾಗಿ ನನಗೂ ಕೂಗಾಡಿಕೊಂಡು ಅಳುವಂತಾಯಿತು. ನಾನು ಅತ್ತರೆ ಆಚೀಚಿನವರು ಏನೆಂದು ಭಾವಿಸಿಯಾರು ಎಂದುಕೊಂಡು ನರಳುತ್ತ ಬಾಗಿಲ ಬಳಿಯೇ ಒರಗಿಕೊಂಡೆ. 

“ನನಗಿನ್ನು ಆ ಮನೆಯ ಋಣ ತೀರಿತು, ಇಲ್ಲಿಯೇ ತುತ್ತು ಅನ್ನ ಹಾಕಿದರೆ ತಿಂದುಕೊಂಡು ಇದ್ದೇನು, ನೀನು ಆ ದಿಕ್ಕಿಗೆ ತಲೆ ಕೂಡ ಹಾಕಬೇಡ, ಎಂದಾದರೊಂದು ದಿನ ಅವನು ಪಾರ್ಕಿನ ಕಡೆಗೆ ವಾಕು ಬಂದರೆ, ಅವನ ಕಾಲು ಕಚ್ಚಿ ಹುಚ್ಚು ಹಿಡಿದು ಸಾಯುವ ಹಾಗೆ ಮಾಡುತ್ತೇನೆ’ ಎಂದು ನಾನು ಆರ್ತನಾಗಿ ಹೇಳುತ್ತಿದ್ದರೂ ಆಕೆಗೆ ಅರ್ಥವಾಗುವ ಬಗೆ ಹೇಗೆ? 

ಆಕೆಯ ಮತ್ತೂಂದು ಮಗುವು ತಂದೆಯೊಡನೆ ಎಲ್ಲಿಯಾದರೂ ಹೋಗಿತ್ತೋ ಏನೋ, ಆಕೆ ನನಗೆ ಅನ್ನಹಾಲು ಬಟ್ಟಲಲ್ಲಿ ಹಾಕಿಟ್ಟು, ಮಗುವನ್ನೂ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಮೈದಡವಿ ಹೇಳತೊಡಗಿದಳು, “ನಿನಗೆ ನನ್ನ ಮಾತು ಎಷ್ಟು ಅರ್ಥವಾದೀತೋ ಗೊತ್ತಿಲ್ಲ. ವಿಶ್ವಾಸವೆಂದರೆ ಅಷ್ಟಿಷ್ಟಲ್ಲ ನನಗೆ ಅವರ ಮೇಲೆ. ಕಳೆದ ಹತ್ತು ವರ್ಷಗಳಿಂದ ಎಳ್ಳುಕಾಳು ಮತ್ತೂಂದು ವಿಚಾರ ಮಾಡದ ಹಾಗೆ, ನನ್ನ ಜೀವನದ ಎಲ್ಲ ಸಂಗತಿಗಳನ್ನು ಹಂಚಿಕೊಂಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿಯೇ ತಾಯ್ತಂದೆಯರಿಂದ ದೂರವಾದ ನನಗೆ ಆತನೇ ತಂದೆ ಎಂಬ ದೃಢಭಾವನೆಯಿತ್ತು. ಎಂತ‌ಹ ಕೆಟ್ಟ ಕನಸಿನಲ್ಲಿಯೂ ನನಗೆ ವಯಸ್ಸು, ಜ್ಞಾನ, ಹಿರಿತನದಲ್ಲಿ ಅಷ್ಟು ದೊಡ್ಡವರಾದ ಆ ವ್ಯಕ್ತಿ ಹಾಗೆ ಮಾಡುವರೆಂದು ಅನಿಸಿರಲಿಲ್ಲ. ಪುರುಷ ಲೋಕ ಗೊತ್ತಿಲ್ಲದ ಮಡ್ಡಿ, ಮಬ್ಬು, ಮುಗೆœ ನೀನು ಅಂತ ನನ್ನ ಗಂಡ ಅಂದಾಗಲೆಲ್ಲ, ಇಲ್ಲ, ನನಗೂ ಎಲ್ಲ ಅರ್ಥವಾಗುತ್ತದೆ. ಹಾಗೆಲ್ಲ ನನ್ನನ್ನು ಮಡ್ಡಿ ಅನ್ನಬೇಡಿ ಎಂದು ಗಂಡನನ್ನೇ ಬಯ್ದಾಡುತ್ತಿ¨ªೆ. ಇವತ್ತು ಆತ ಹೇಳಿ¨ªೆ ಸರಿಯಾಯಿತಲ್ಲ. ನಾನೇನು ಮಾಡಲಿ. ಒಂದು ಕ್ಷಣಕ್ಕೂ ಹಾಗೆ ಪರಪುರುಷನನ್ನು ಪ್ರಚೋದಿಸುವ ಹಾಗೆ ನಾನು ಇದ್ದವಳಲ್ಲ. ಅನಾರೋಗ್ಯವೆಂದು ಔಷಧಿಗೆ ಹೋದಾಗ, ಒಂದಷ್ಟು ಪುರುಸೊತ್ತು ಇದ್ದರೆ, ತನ್ಮಯಳಾಗಿ ಹಾಡಿ, ಮೆಚ್ಚುಗೆಯನ್ನು ಪಡೆದು, ಮರಳಿ ಬರುವುದಷ್ಟೇ ಗೊತ್ತು. ಹಾಗಾದರೆ, ಹಾಗೆ ನಾನು ಕಣ್ಮುಚ್ಚಿ ಹಾಡುವಾಗಲೆಲ್ಲ ಆತ ನನ್ನನ್ನು ಕಣ್ಣಲ್ಲಿಯೇ ಅದೆಷ್ಟು ಬಾರಿ ತಿಂದಿರಲಿಕ್ಕಿಲ್ಲ ಅಲ್ಲವೇ? ನಾನೆಂಥ ದಡ್ಡಿ’ ಎಂದು ಉಮ್ಮಳಿಸಿ ತಲೆ ಗಟ್ಟಿಸಿಕೊಂಡು ಅಳತೊಡಗಿದಳು. 

ನನಗೆ ಅವನ ಮೇಲೆ ಸಿಟ್ಟು, ಆಕೆಯ ಮೇಲೆ ಕನಿಕರ ಒಮ್ಮೆಲೇ ಉಕ್ಕಿದವು. ತಲೆಯನ್ನು ಆಕೆಯ ಕಾಲಿಗೆ ಸವರಿ ಸವರಿ, “ಇಲ್ಲ, ಅಷ್ಟು ಅಳಬೇಡ. ನಾಲಾಯಕ್ಕು ನರಮನುಷ್ಯ ಆತ. ಅವನಿಗಾಗಿ ಕಣ್ಣೀರು ಹಾಕಬೇಡ. ಅಯೋಗ್ಯರಿಗೆ ಅಳಬಾರದು. ಮನೆಮಂದಿಯೆಲ್ಲ ಯಾಕೆ ಆತನನ್ನು ಸೇರುತ್ತಿರಲಿಲ್ಲ ನನಗೀಗ ಅರ್ಥವಾಗುತ್ತದೆ. ನಾನಿನ್ನು ನಿನ್ನೊಡನೆಯೇ ಇರುತ್ತೇನೆ. ಕಾಯುತ್ತೇನೆ’ ಎಂದು ಪರಿಪರಿಯಾಗಿ ಬೇಡಿಕೊಂಡೆ. ಮತ್ತೆಮತ್ತೆ ನನ್ನ ತಲೆಯನ್ನು ಸವರಿಯೇ ಸವರಿದಳು. ಮೂಕಪ್ರಾಣಿ ನಿನಗಾದರೂ ನನ್ನ ನೋವು ಅರ್ಥವಾಯಿತಲ್ಲ ಎಂದು ಸಮಾಧಾನದಿಂದ ಹೇಳಿ, ಕಣ್ಣೊರೆಸಿಕೊಂಡಳು. 

ನಾನು, ಹಾಕಿದ ಅನ್ನವನ್ನು ತಿಂದು ಜೀವಿಸುವ ಯಃಕಶ್ಚಿತ ನಾಯಿಯಷ್ಟೇ. ನನಗೆ ಅರ್ಥವಾದ ಆ ಹೆಣ್ಣುಜೀವದ ನೋವು ಆ ಮುಪ್ಪಾನುಮುಪ್ಪ ಮುದುಕನಿಗೆ ತಿಳಿಯದೇ ಹೋಯಿತಲ್ಲ ಎಂದು ಅನಿಸಿ, ಹಲ್ಲುಹಲ್ಲು ಕಡಿದೆ. ದೇಹದ ಹಸಿವು ಅಷ್ಟು ಕೆಟ್ಟದೇ? ಅನಿಸಿಬಿಟ್ಟಿತು. ಮನುಷ್ಯರ ನಡುವೆ ಇದ್ದುಕೊಂಡು ನನಗೆ ಹಲವಾರು ಸಲ ಇನ್ನೊಂದು ಜನುಮವೊಂದಿದ್ದರೆ, ಮನುಷ್ಯನಾಗಿ ಹುಟ್ಟಬೇಕು, ಅವರಂತಾಗಬೇಕು ಅನಿಸುತ್ತಿತ್ತು. ಈಗ, ಈ ಹೆಣ್ಣುಕೂಸಿನ ಕಳವಳವ ಕಣ್ಣಾರೆ ನೋಡಿದ ಮೇಲೆ, ನಾನು ನಾನಾಗಿರುವುದೇ ಸಾವಿರ ಪಾಲು ಉತ್ತಮ ಅನಿಸಿತು. ಇಂಗದ ಹಸಿವಿನ ಹಂಬಲದೊಳಗೆ, ನರನೂ ನಾಯನು ಮೀರುವನಲ್ಲ ಎಂದು ಮುಂದಲ ಬದುಕಿನಲ್ಲಿಯಾದರೂ ಒಂದು ಸಾಲು ಗೀಚಬೇಕು ಎಂದು ಕನಸುತ್ತ, ಆಕೆಯ ಪಾದದಡಿ ನೋವುಣ್ಣುತ್ತ ಮಲಗಿಬಿಟ್ಟೆ. ಆಕೆ ತಾಯಾಗಿದ್ದಳು!

ಛಾಯಾ ಭಗವತಿ


ಈ ವಿಭಾಗದಿಂದ ಇನ್ನಷ್ಟು

  • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

  • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

  • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

  • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

  • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ