ಜಾನಪದದ ಮಾಯಜೋಗದ ಲೋಕದೊಳಗೆ


Team Udayavani, Dec 9, 2018, 6:00 AM IST

007bb-aa.jpg

1973ರಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ “ಜಾನಪದ’ವನ್ನು ಪಾಠಮಾಡಲು ತೊಡಗಿದಾಗ, ಅದಕ್ಕೆ ಸಂಬಂಧಿಸಿದ ವ್ಯಾಖ್ಯೆಗಳು, ಇತಿಹಾಸ, ಸಿದ್ಧಾಂತ ಮತ್ತು ಅಧ್ಯಯನ ವಿಧಾನಗಳನ್ನು ಕುರಿತ ಇಂಗ್ಲಿಷ್‌ ಪುಸ್ತಕಗಳನ್ನು ಓದುತ್ತಾ ಹೋದಾಗ, ಅದೊಂದು ಜ್ಞಾನಶಿಸ್ತು ಆಗಿ ರೂಪುಗೊಂಡ ಲೋಕಕ್ಕೆ ಪ್ರವೇಶಮಾಡಿದೆ. ಜಾನಪದ ಅಧ್ಯಯನದ ತವರು ಎಂದು ಹೆಸರು ಪಡೆದಿದ್ದ “ಫಿನ್ಲಂಡ್‌’ ಎನ್ನುವ ದೇಶವೊಂದು ಇದೆ ಎಂದು ಗೊತ್ತಾದದ್ದು ಆಗಲೇ. ನಾನು ಸೂಚಿಸಿದ ಜಾನಪದ ಸಂಬಂಧಿಯಾದ ಎಲ್ಲ ಇಂಗ್ಲಿಷ್‌ ಪುಸ್ತಕಗಳನ್ನು ನಮ್ಮ ಮಂಗಳಗಂಗೋತ್ರಿಯ ಗ್ರಂಥಾಲಯಕ್ಕೆ ತರಿಸಿಕೊಟ್ಟ ಆಗಿನ ಲೈಬ್ರೇರಿಯನ್‌ನವರ ನೆರವು ನನ್ನ ಶೈಕ್ಷಣಿಕ ಬೆಳವಣಿಗೆಗೆ ಸಹಾಯವಾಯಿತು. ಕೊಣಾಜೆಯ ಹಳ್ಳಿಯಲ್ಲಿ ಕುಳಿತುಕೊಂಡು ವಿಶ್ವದ ಜ್ಞಾನವೃಕ್ಷಗಳ ಹಣ್ಣುಗಳಿಗೆ ಕೈಚಾಚಲು ನನಗೆ ಸಾಧ್ಯವಾದದ್ದು ಪುಸ್ತಕಗಳ ಮೂಲಕ. ಕನ್ನಡದಲ್ಲಿ ಸಂಸ್ಕೃತಿಯ ಜ್ಞಾನಶಾಖೆಗಳಿಗೆ ಸಂಬಂಧಿಸಿದ ಪುಸ್ತಕಗಳೇ ಇಲ್ಲದ ಕಾಲದಲ್ಲಿ ಮಾನವವಿಜ್ಞಾನ ಮತ್ತು ಜಾನಪದವಿಜ್ಞಾನ ವಿಷಯಗಳ ಇಂಗ್ಲಿಷ್‌ ಪುಸ್ತಕಗಳ ಓದಿನ ಹವ್ಯಾಸ ಆರಂಭವಾದದ್ದು ಮುಂದೆ ಸಾಹಿತ್ಯಕ್ಕೆ ಪೂರಕವಾದ ಅನ್ಯಶಿಸ್ತುಗಳ ಇಂಗ್ಲಿಷ್‌ ಪುಸ್ತಕಗಳ ಓದಿನ ಅಭ್ಯಾಸಕ್ಕೆ ಅವಕಾಶ ಕಲ್ಪಿಸಿತು. ಅದು ನನ್ನ ತಿಳುವಳಿಕೆಗೆ ಹೊಸ ಆಯಾಮಗಳನ್ನು ಕಲ್ಪಿಸಿತು. 

ನಾನು “ತುಳು ಜನಪದ ಸಾಹಿತ್ಯ’ ಎಂಬ ವಿಷಯವನ್ನು ಕುರಿತು ಪಿಎಚ್‌.ಡಿ. ಪದವಿಗಾಗಿ ಸಂಶೋಧನೆ ನಡೆಸಲು ಸೂಚಿಸಿದವರು ಮೈಸೂರು ವಿವಿ ಕನ್ನಡ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ ಡಾ. ಹಾ. ಮಾ. ನಾಯಕರು. ಈ ವಿಷಯಕ್ಕೆ ಅವರೇ ನನಗೆ ಮಾರ್ಗದರ್ಶಕರಾಗಬೇಕೆಂದು ಕೇಳಿಕೊಂಡಾಗ ಮೊದಲು ಅವರು ಒಪ್ಪಿಕೊಳ್ಳಲಿಲ್ಲ. “ನನಗೆ ತುಳು ಗೊತ್ತಿಲ್ಲ’ ಎಂದರು. ಆದರೆ, ಅವರು ಅಮೆರಿಕದ ಇಂಡಿಯಾನ ಮತ್ತು ಪೆನ್ಸಿಲ್ವೇನಿಯಾ ವಿವಿಗಳಲ್ಲಿ ಭಾಷಾವಿಜ್ಞಾನ ಮತ್ತು ಜಾನಪದ ವಿಜ್ಞಾನಗಳಲ್ಲಿ ತರಬೇತಿ ಪಡೆದವರು, ಜಾನಪದ ಅಧ್ಯಯನದ ಆಧುನಿಕ ತಿಳುವಳಿಕೆಯನ್ನು ಹೊಂದಿದ್ದವರು. ನನ್ನ ಒತ್ತಾಸೆಗೆ ಒಪ್ಪಿಕೊಂಡು ಹಾ. ಮಾ. ನಾ. ಪಿಎಚ್‌.ಡಿ. ಸಂಶೋಧನೆಗೆ ಮಾರ್ಗದರ್ಶಕರಾದರು. ಮೈಸೂರು ವಿವಿಯಲ್ಲಿ 1974ರಲ್ಲಿ ನೋಂದಣಿ ಮಾಡಿಕೊಂಡೆ. ನನ್ನದು ತುಳು ಜಾನಪದದ ಮೊತ್ತಮೊದಲನೆಯ ಪಿಎಚ್‌.ಡಿ. ಆದಕಾರಣ, ವಿಷಯದ ವ್ಯಾಪ್ತಿ ಹೆಚ್ಚಾಗಿದ್ದರೂ ಇರಲಿ ಎಂದರು ಹಾ. ಮಾ. ನಾ. ನಾನು ಓದಬೇಕಾದ ಅನೇಕ ಇಂಗ್ಲಿಷ್‌ ಪುಸ್ತಕಗಳ ವಿವರಗಳನ್ನು ಅವರೇ ಕೊಟ್ಟರು. ಅವರ ಸೂಚನೆಯಂತೆ ಅಸ್ಸಾಮಿನ ಗೌಹಾತಿ ವಿವಿಯಿಂದ ನಾನು ತರಿಸಿದ ಪುಸ್ತಕ Ballads and Tales of Assam: Praphulladatta Goswami. ( University of Gauhati,1970). ಪಿ.ಡಿ. ಗೋಸ್ವಾಮಿ ಅವರ ಈ ಡಾಕ್ಟರೇಟ್‌ ಪ್ರಬಂಧ ನನ್ನ ಅಧ್ಯಯನಕ್ಕೆ ಬಹಳ ಉಪಯುಕ್ತ ಆಯಿತು. 

ನನ್ನ ತುಳು ಗಾದೆಗಳು ಮತ್ತು ತುಳು ಒಗಟುಗಳು ಸಂಕಲನಗಳು 1971ರಲ್ಲಿ ಪ್ರಕಟವಾಗಿದ್ದ ಕಾರಣ, ಅವುಗಳ ಸಂಗ್ರಹದ ಶ್ರಮ ಉಳಿಯಿತು. ತುಳು ಜನಪದ ಕತೆ/ಅಜ್ಜಿಕತೆಗಳು ಮತ್ತು ಪಾಡªನಗಳು ಸಂಗ್ರಹ ಆಗಬೇಕಾಗಿತ್ತು. ಆಮೇಲೆ ಅಧ್ಯಯನ ಮಾಡಬೇಕಾಗಿತ್ತು. ಇವುಗಳ ಸಂಗ್ರಹಕ್ಕೆ ಬಹಳ ಸಮಯ ಬೇಕಾಯಿತು. ಆ ಕಾಲಕ್ಕೆ ಸಿಗುತ್ತಿದ್ದ ಒಂದು ಸಣ್ಣ ಟೇಪ್‌ ರೆಕಾರ್ಡರ್‌ ಕೊಂಡುಕೊಂಡು ಕ್ಯಾಸೆಟ್‌ಗಳಲ್ಲಿ ಕತೆಗಳನ್ನು ಮತ್ತು ಪಾಡªನಗಳನ್ನು ಸಂಗ್ರಹಿಸಿ ಧ್ವನಿಮುದ್ರಣ ಮಾಡಿಕೊಳ್ಳತೊಡಗಿದೆ. ನನಗೆ ಕ್ಷೇತ್ರಕಾರ್ಯದ ತರಬೇತಿಯಾಗಲೀ ಮಾರ್ಗದರ್ಶನವಾಗಲೀ ಯಾವುದೂ ಇರಲಿಲ್ಲ; ನನ್ನದೇ ದಾರಿಗಳನ್ನು ಹುಡುಕುತ್ತಾ ಹೋದೆ. ಧ್ವನಿಮುದ್ರಣ ಮಾಡಿದ ಪಠ್ಯಗಳನ್ನು ಲಿಪ್ಯಂತರ ಮಾಡಿ ಬರೆದುಕೊಳ್ಳಲು ಪ್ರಯಾಸದಿಂದ ಕಲಿಯುತ್ತ ಹೋದೆ. ಆ ಕಾಲದ ಟೇಪ್‌ರೆಕಾರ್ಡರ್‌ನಲ್ಲಿ “ಹಿಂದಕ್ಕೆ’ ಹೋಗುವ ಬಟನ್‌ನ್ನು ಒತ್ತಿ, ನಿಲ್ಲಿಸಿ, ಸ್ವಲ್ಪ ಆಲಿಸಿ, ಕೈಬರಹದಲ್ಲಿ ಬರೆದುಕೊಂಡು, ಮತ್ತೆ “ಮುಂದಕ್ಕೆ’ ಬಟನ್‌ನ್ನು ಒತ್ತಿ, ಆಲಿಸಿ, ಮತ್ತೆ “ಹಿಂದಕ್ಕೆ’ ಹೋಗಿ, ಸ್ವಲ್ಪ ಕೇಳಿ, ಕೈಯಲ್ಲಿ ಬರೆದುಕೊಳ್ಳಲು ಸಾಕಷ್ಟು ಶ್ರಮ ಸಮಯ ಮತ್ತು ಸಹನೆ ಬೇಕಾಗಿತ್ತು. ಕೊಣಾಜೆಯ ಕಠಿಣ ಪರಿಸರವು ಎಲ್ಲ ಬಗೆಯ ಕಷ್ಟಗಳನ್ನು ಸಹಿಸಿಕೊಳ್ಳುವ ಪಾಠಗಳನ್ನು ಕಲಿಸಿತು. ಆ್ಯಂತ್ರಪಾಲಜಿಯ ಓದು ಮತ್ತು ಜಾನಪದದ ಕ್ಷೇತ್ರಕಾರ್ಯ- ನನಗೆ ಹೇಳಿಕೊಟ್ಟ ಪಾಠವೆಂದರೆ ಸಾಮೂಹಿಕತೆಯ ಸಂಬಂಧವನ್ನು ಇಟ್ಟುಕೊಂಡು ಕೂಡ, ನಮ್ಮ ಬದುಕಿನ ಹೊರೆಯನ್ನು ಹೊತ್ತುಕೊಳ್ಳಲು ಯಾವುದೇ ಬಗೆಯ ಅವಲಂಬನೆಯನ್ನು ನೆಚ್ಚಿಕೊಂಡು ಇರಬೇಕಾಗಿಲ್ಲ ಎನ್ನುವುದು. ಸಂತೃಪ್ತಿಯ ದೃಷ್ಟಿಯಿಂದ ನಾನು ಪರಿಕಲ್ಪಿಸುವ “ಜಾನಪದ ವೈಚಾರಿಕತೆ’ ಅನ್ನುವುದು ನನಗೆ ಈ ನಿಲುವಿನಿಂದ ಅಂತರ್ಗತವಾಗಿದೆ. 

ತುಳು ಅಜ್ಜಿಕತೆಗಳನ್ನು ನಾನು ಮೊದಲು ಸಂಗ್ರಹಿಸಿದ್ದು ನನ್ನ ಅಮ್ಮ ಯಮುನಾ ಅವರಿಂದ. ಅವರು ಹೇಳಿದ ಒರೊ ಜಪ್ಪೋ ಜಂಬುನೇರಳ್ಳೋ ಕತೆಯು ಅಣ್ಣ-ತಂಗಿ ವಿವಾಹನಿಷಿದ್ಧತೆಯ ಆಶಯ ಉಳ್ಳದ್ದು ಮತ್ತು ಮುಗುಡು-ಬಾಳೆಮೀನುಗಳನ್ನು ಒಟ್ಟಿಗೆ ಅಡುಗೆಮಾಡಬಾರದು ಎಂಬ ನಂಬಿಕೆಯ ಸುತ್ತ ಕಟ್ಟಿದ ಕಥನ. ಜನಪದ ಕತೆಗಳ ಕುರಿತು ಸ್ಟಿತ್‌ ಥಾಮ್ಸನ್‌ರ Folktale ಮಹಣ್ತೀದ ಗ್ರಂಥದಿಂದ ತೊಡಗಿ ಅನೇಕ ಮನೋವೈಜ್ಞಾನಿಕ, ಸಮಾಜಶಾಸ್ತ್ರೀಯ ಅಧ್ಯಯನಗಳು ನಡೆದಿವೆ. ನನಗೆ ಕತೆಗಳನ್ನು ಹೇಳಿದ ಕೆಲವರ ಹೆಸರುಗಳು ನೆನಪಿನಲ್ಲಿವೆ: ಪುಣಚದ ತನಿಯಾರು, ಕೊಣಾಜೆ ಗ್ರಾಮದ ಸೀತು, ಅಕ್ಕಮ್ಮ, ಮದನು, ಬೆಲ್ಮ ಕಲ್ಲಹಿತ್ತಿಲಿನ ಮುಂಡ್ಯಪ್ಪು. ಭತ್ತದ ಗದ್ದೆಗಳಲ್ಲಿ ನೇಜಿ ನೆಡುವಾಗ ಹೆಂಗುಸ‌‌ರು ಹೇಳುವ ಕಬಿತಗಳನ್ನು ನಾನು ಸಂಗ್ರಹಮಾಡಿದ್ದು ನಮ್ಮ ಊರಿನ ಪುಣಚದ ಮಲ್ಲಿಪ್ಪಾಡಿಯ ನಮ್ಮ ಸುತ್ತುಮುತ್ತಲಿನ ಹೆಂಗಸರಿಂದ. ಅವರೆಲ್ಲ ನಮ್ಮ ಗದ್ದೆಗಳಲ್ಲಿ ಹಾಡುವುದನ್ನು ಕೇಳಿಕೊಂಡು ಸಂಗ್ರಹಿಸಿದೆ. ಅದೇ ರೀತಿ ಪಾಡªನಗಳನ್ನು ಕೂಡ. ಭೂತಗಳ ಹುಟ್ಟು ಮತ್ತು ಪ್ರಸರಣಕ್ಕೆ ಸಂಬಂಧಪಟ್ಟ ಪಾಡªನಗಳನ್ನು ಕೋಲ-ನೇಮಗಳ ಆಚರಣೆಯ ಸಂದರ್ಭದ ಹೊರಗೆ ದಾಖಲಾತಿ ಮಾಡಿಕೊಂಡೆ. ಹಿರಿಯರಾದ ಅಮೃತ ಸೋಮೇಶ್ವರ ಅವರು ಹಸ್ತಪ್ರತಿಯಲ್ಲಿ ಇದ್ದ ತಮ್ಮ ಸಂಗ್ರಹದ ಪಾಡªನಗಳನ್ನು ನನ್ನ ಬಳಕೆಗೆ ಕೊಟ್ಟು ಉಪಕಾರ ಮಾಡಿದರು. ಜನಪದ ಮಹಾಕಾವ್ಯಗಳ ಬಗ್ಗೆ ಆರಂಭದ ಅಧ್ಯಯನ ಮಾತ್ರ ಮಾಡಿದ್ದ ಆ ಕಾಲದಲ್ಲಿ ಪಾಡªನಗಳನ್ನು ಬಹುಶಿಸ್ತೀಯ  ನೆಲೆಯಲ್ಲಿ ನೋಡಲು ಪ್ರಯತ್ನಿಸಿದೆ. ಮೌಖೀಕ ಇತಿಹಾಸವನ್ನು ಆಗ ಹೆಚ್ಚು ಓದದೆಯೇ ಪಾಡªನಗಳ ಮೂಲಕ ತುಳುನಾಡಿನ ಮೌಖೀಕ ಇತಿಹಾಸವನ್ನು ಕಟ್ಟಲು ತೊಡಗಿದೆ. ನನ್ನ ಮಾರ್ಗದರ್ಶಕ ಹಾ. ಮಾ. ನಾಯಕರು ಆ ಭಾಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ಧಾಂತಗಳ ಶಸ್ತ್ರಚಿಕಿತ್ಸೆಯ ಸಲಕರಣೆಗಳನ್ನು ಪಕ್ಕದಲ್ಲಿ ಇಟ್ಟುಕೊಂಡು, ಅವುಗಳನ್ನು ಬಳಸದೆ, ನನ್ನದೇ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ, ಯಶಸ್ವಿ ಆಗಲು ಸಾಧ್ಯ ಎನ್ನುವುದನ್ನು ಕಲಿತುಕೊಂಡೆ. 1980ರ ವೇಳೆಗೆ ನನ್ನ ಥೀಸಿಸ್‌ನ ಕೆಲಸ ಮುಗಿಸಿದೆ. ನನ್ನ ತುಳು ಜನಪದ ಸಾಹಿತ್ಯಕ್ಕೆ 1981ರಲ್ಲಿ ಮೈಸೂರು ವಿವಿಯ ಡಾಕ್ಟರೇಟ್‌ ಪದವಿ ದೊರಕಿತು. ಆ ವೇಳೆಗಾಗಲೇ 12 ವರ್ಷಗಳ ಇತಿಹಾಸದ ಮಂಗಳೂರು ಸ್ನಾತಕೋತ್ತರ ಕೇಂದ್ರವು ಮಂಗಳೂರು ವಿಶ್ವವಿದ್ಯಾನಿಲಯವಾಗಿ ರೂಪಾಂತರಗೊಂಡಿತ್ತು (10 ಸೆಪ್ಟೆಂಬರ್‌ 1980). 

ನಾನು ಇಂಗ್ಲಿಷ್‌ನಲ್ಲಿ ಪ್ರಬಂಧ ಮಂಡಿಸಿದ ಮೊದಲ ರಾಷ್ಟ್ರೀಯ ಜಾನಪದ ವಿಚಾರಸಂಕಿರಣ ಫೋಕ್‌ಲೋರ್‌ ಫೆಲೋಸ್‌ ಆಫ್ ಇಂಡಿಯ ಸಂಸ್ಥೆಯು ಮೈಸೂರಿನಲ್ಲಿ 1980 ಮಾರ್ಚ್‌ 1-3ರಲ್ಲಿ ಸಂಯೋಜಿಸಿದ್ದು. An Analysis of Panjurly Paddana in Tulu Culture   ಪ್ರಬಂಧವು ನನ್ನ ಪಿಎಚ್‌.ಡಿ. ಪ್ರಬಂಧದ ಶೋಧದ ಒಂದು ಭಾಗ. ಸರಳ ಇಂಗ್ಲಿಷ್‌ನಲ್ಲಿ ಬರೆದ ಆ ಪ್ರಬಂಧ ಅನೇಕ ವಿದ್ವಾಂಸರ ಗಮನ ಸೆಳೆಯಿತು. ಜರ್ಮನಿಯ ಹೈದ್ರೂನ್‌ ಬ್ರೂಕ್ನರ್‌ ಅನ್ನುವವರು ನನ್ನ ಬಳಿಗೆ ಬಂದು ಪರಿಚಯಮಾಡಿಕೊಂಡು ತುಳುಜಾನಪದದ ಬಗ್ಗೆ ಕುತೂಹಲದಿಂದ ಕೇಳಿದರು. ಮುಂದೆ ಜರ್ಮನಿಯ ಜೊತೆಗೆ ನನಗೆ ಸಂಬಂಧ ಸ್ಥಾಪನೆ ಆದದ್ದು ಇವರ ಮೂಲಕವೇ.

ಅಕಾಡೆಮಿ ಆಫ್ ಜನರಲ್‌ ಎಜುಕೇಷನ್‌ ಮಣಿಪಾಲದ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಭಾಗವಾಗಿ ಸ್ಥಾಪನೆ ಆದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್‌ಆರ್‌ಸಿ) ಸಂಸ್ಥೆಗಳು ಕು. ಶಿ. ಹರಿದಾಸ ಭಟ್ಟರ ನಿರ್ದೇಶಕತ್ವದಲ್ಲಿ ತುಳು ಮತ್ತು ಜಾನಪದಕ್ಕೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಡುವ ಕೆಲಸಗಳನ್ನು ಮಾಡಿದವು. ಈ ಸಂಸ್ಥೆಗಳ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಕಾರಣ ನನಗೆ ಜಾನಪದದಲ್ಲಿ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳು ಪ್ರಾಪ್ತವಾದುವು. ಫಿನ್ಲಂಡ್‌ನ‌ ರಾಷ್ಟೀಯ ಮಹಾಕಾವ್ಯ ಕಲೆವಾಲ ಪ್ರಕಟಣೆಯ 150ನೆಯ ವರ್ಷದ ಉತ್ಸವವನ್ನು ಉಡುಪಿಯ ಆರ್‌ಆರ್‌ಸಿಯಲ್ಲಿ 1985 ಅಕ್ಟೊಬರ 12ರಂದು ನಡೆಸಿದಾಗ ಅದರಲ್ಲಿ ಫಿನ್ಲಂಡಿನ ತುರ್ಕು ವಿವಿಯ ಜಾನಪದ ಪ್ರಾಧ್ಯಾಪಕರಾದ ಲೌರಿ ಹಾಂಕೊ ಭಾಗವಹಿಸಿದ್ದು ಒಂದು ಐತಿಹಾಸಿಕ ಘಟನೆ. ಆಗ ನಡೆಸಿದ Folk Epics of Tulunad and Finland  ಸೆಮಿನಾರ್‌ನಲ್ಲಿ ನಾನು Paaddanas as Folk Epics ಎನ್ನುವ ಪ್ರಬಂಧ ಮಂಡಿಸಿದೆ. ಹಾಂಕೊ ಅವರು ಪಾಡªನಗಳ ಬಗ್ಗೆ ನನ್ನ ಜೊತೆಗೆ ಸಮಾಲೋಚನೆ ನಡೆಸಿದರು. ಜಗತ್ತಿನ ಹಿರಿಯ ಜಾನಪದ ವಿದ್ವಾಂಸ ಲೌರಿ ಹಾಂಕೊ ಅವರ ಪರಿಚಯವಾದದ್ದು ನನ್ನ ಜಾನಪದ ಬದುಕಿನ ಅಪೂರ್ವ ಸನ್ನಿವೇಶ. 

ಪ್ರೊ. ಲೌರಿ ಹಾಂಕೊ ಅವರು ತುಳು ಪಾಡªನಗಳ ಬಗ್ಗೆ ತಾಳಿದ ಆಸಕ್ತಿಯ ಪರಿಣಾಮವಾಗಿ ಫಿನ್ನಿಷ್‌-ಇಂಡಿಯನ್‌ ಫೋಕ್‌ಲೋರ್‌ ಟ್ರೇನಿಂಗ್‌ ಕೋರ್ಸ್‌ 1989 ಫೆಬ್ರವರಿ 12ರಿಂದ 24ರವರೆಗೆ ಉಡುಪಿ-ಧರ್ಮಸ್ಥಳಗಳಲ್ಲಿ ನಡೆಯಿತು. ಹಾಂಕೊ ಅವರು ಫಿನ್ಲಂಡ್‌ನಿಂದ ಪ್ರೊ. ಅಸ್ಕೊ ಪರ್ಪೋಲ, ಲೌರಿ ಹಾರ್ವೆಲತ್ತಿ, ಮರ್ತಿ ಯುನನಹೋ, ಮರಿಯ ರಾಯಮಕಿ, ವಿಡಿಯೊ ಕೆಮರಾಮೆನ್‌ ಸಕಾರಿ ರಿಮೆನೆನ್‌ ಮತ್ತು ನಾರ್ವೆಯಿಂದ ಪ್ರೊ. ಬೆಂತೆ ಅಲ್ವೆರ್‌, ಆರಿಲ್‌ ಸ್ಟ್ರೋಮ್‌ವಾಗ್‌ ಅವರನ್ನು ಕರೆದುಕೊಂಡು ಬಂದರು. ಮಂಗಳೂರು ವಿವಿಯಿಂದ ನಾನು ಮತ್ತು ಚಿನ್ನಪ್ಪಗೌಡ, ಉಡುಪಿಯಿಂದ ಪ್ರೊ. ಕುಶಿ ಹರಿದಾಸ ಭಟ್‌,  ಯು. ಪಿ. ಉಪಾಧ್ಯಾಯ, ಸುಶೀಲಾ ಉಪಾಧ್ಯಾಯ, ಎಸ್‌. ಎ. ಕೃಷ್ಣಯ್ಯ, ರಾಮದಾಸ್‌ ಮತ್ತು ಹರ್ಷವರ್ಧನ ಭಟ್‌ ಮತ್ತು ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ಇದ್ದೆವು. ಈ ಕೋರ್ಸ್‌ನಲ್ಲಿ ತರಬೇತಿ ಪಡೆಯುವವರು 12 ಮಂದಿ ಜಾನಪದ ಸಂಶೋಧಕರು ಇದ್ದರು.

ಕ್ಷೇತ್ರಕಾರ್ಯದ ಮೂರು ತಂಡಗಳು: ತುರ್ಕು ತಂಡ- ಲೌರಿ ಹಾಂಕೊ ಮತ್ತು ತುರ್ಕು ವಿವಿ ತಜ್ಞರು. ನಮ್ಮ ಕಡೆಯಿಂದ ಅಮೃತ ಸೋಮೇಶ್ವರ, ಚಿನ್ನಪ್ಪ ಗೌಡ, ಎಸ್‌. ಎ. ಕೃಷ್ಣಯ್ಯ. ಹೆಲ್ಸಿಂಕಿ ತಂಡ: ಅಸ್ಕೊ ಪರ್ಪೋಲಾ ಮತ್ತು ಹೆಲ್ಸಿಂಕಿ ವಿವಿ ತಜ್ಞರು. ನಮ್ಮ ಕಡೆಯಿಂದ ಯುಪಿ ಉಪಾಧ್ಯಾಯ ಮತ್ತು ಸುಶೀಲಾ ಉಪಾಧ್ಯಾಯ. ಬೆರ್ಗೆನ್‌ ತಂಡ: ಬೆಂತೆ ಅಲ್ವೆರ್‌ ಮತ್ತು ಆರಿಲ್‌ ಸ್ಟ್ರೋಮ್‌ವಾಗ್‌. ನಮ್ಮ ಕಡೆಯಿಂದ ನಾನು ಮತ್ತು ಲೀಲಾ ಭಟ್‌, ಕೆ. ರಾಮದಾಸ್‌, ನಮ್ಮ ವಿಡಿಯೋಗ್ರಾಫ‌ರ್‌. ಮೊದಲ ಎರಡು ದಿನ ಉಡುಪಿಯಲ್ಲಿ ಪ್ರಾಥಮಿಕ ಸಮಾಲೋಚನೆ, ಕ್ಷೇತ್ರಕಾರ್ಯದ ಯೋಜನೆ ಬಗ್ಗೆ ಮಾಹಿತಿ ಪಡೆದು ಫೆಬ್ರವರಿ 14ರಿಂದ 24ರವರೆಗೆ ಧರ್ಮಸ್ಥಳ ಪರಿಸರದಲ್ಲಿ ಮತ್ತು ಹೊರಗಡೆ ಕ್ಷೇತ್ರಕಾರ್ಯ ನಡೆಸಿದೆವು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಇಡೀ ಶಿಬಿರದ ಎಲ್ಲರ ವಸತಿ ಊಟದ ವ್ಯವಸ್ಥೆ ಮಾತ್ರವಲ್ಲದೆ, ಕ್ಷೇತ್ರಕಾರ್ಯಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಸಂಪರ್ಕವ್ಯಕ್ತಿಗಳನ್ನು ಒದಗಿಸಿದರು. ಅವರೇ ಆಸಕ್ತಿಯಿಂದ ಪ್ರತಿದಿನ ಎಲ್ಲರನ್ನು ಭೇಟಿಯಾಗಿ ಶಿಬಿರಾರ್ಥಿಗಳ ಅನುಭವಗಳನ್ನು ಕೇಳುತ್ತಿದ್ದರು. 

ಬೆರ್ಗೆನ್‌ ತಂಡದಲ್ಲಿ ಬೆಂತೆ ಅಲ್ವೆರ್‌ ಮತ್ತು ನಾನು ಶಿಬಿರಾರ್ಥಿಗಳ ಜೊತೆಗೆ ನಾವೂ ಕ್ಷೇತ್ರಕಾರ್ಯ ಮಾಡುತ್ತ ಹೊಸಸಂಗತಿಗಳನ್ನು ಕಲಿತೆವು. ಕೆಮರಾ, ವಿಡಿಯೋ ಕೆಮರಾ, ಟೇಪ್‌ ರೆಕಾರ್ಡರ್‌, ಮಾಹಿತಿ ದಾಖಲಾತಿಯ ಕೋಲ್‌ಕಾರ್ಡ್‌- ಇವನ್ನು ಒಟ್ಟಿಗೆ ಬಳಸುವ ಬಹುಮಾಧ್ಯಮ ದಾಖಲೀಕರಣದ ವಿದ್ಯೆಯನ್ನು ನಾನು ಕಲಿತದ್ದು ಈ ಶಿಬಿರದಲ್ಲಿ. ನಮ್ಮ ಬೆರ್ಗೆನ್‌ ತಂಡ ಮಾಡಿದ ದಾಖಲಾತಿಗಳು: ಪುದುವೆಟ್ಟು ಮೇರರ ಪಿಲಿಪಂಜಿ ಕುಣಿತ, ಮುಚ್ಚಾರಿನಲ್ಲಿ ಚಾಪೆ ಹೆಣೆಯುವ ಮತ್ತು ಕಳ್ಳು ತೆಗೆಯುವ ಕಲೆಗಾರಿಕೆ, ಅಳದಂಗಡಿಯಲ್ಲಿ ಪಾಡªನಗಳ ಸಂಗ್ರಹ, ಬಾಂಜಾರಮಲೆಯಲ್ಲಿ ಮಲೆಕುಡಿಯರ ಕಸುಬುಗಳು, ಬೆಳಾಲಿನಲ್ಲಿ ಜಾತ್ರೆ, ಕೊಕ್ರಾಡಿಯಲ್ಲಿ ಕೃಷಿಮೇಳ. ಫೆಬ್ರವರಿ 20 ಮತ್ತು 21ರಂದು ಅನಂತಾಡಿ ಉಳ್ಳಾಲ್ತಿ ಮೆಚ್ಚಿಯನ್ನು ಪೂರ್ಣವಾಗಿ ನೋಡಿ ದಾಖಲಾತಿ ಮಾಡಿದೆವು. ಮಧ್ಯರಾತ್ರಿ ಕಳೆದು ನಾನು ಕಲಾವಿದರ ಸಂದರ್ಶನ ಮುಗಿಸಿದಾಗ,  ಬೆಂತೆ ಅಲ್ವೆರ್‌, “ಪ್ರೊ. ರೈ, ಆರ್‌ ಯು ಟಯರ್ಡ್‌?’ ಎಂದು ತಾಯಿಯ ವಾತ್ಸಲ್ಯದ ಧ್ವನಿಯಲ್ಲಿ ನನ್ನಲ್ಲಿ ಕೇಳಿದ್ದು ಈಗಲೂ ನೆನಪಾಗುತ್ತದೆ. ಮುಂಜಾನೆ ವೇಳೆಗೆ ಉಳ್ಳಾಲ್ತಿ ದೈವದ ಕಲಾವಿದ ಬಾಬು ಪರವ ಆವೇಶ ಇಳಿದ ಬಳಿಕ ಸ್ಮತಿ ತಪ್ಪಿದಾಗ ಅವರ ತಾಯಿ ಅವರನ್ನು ಎತ್ತಿಕೊಂಡು ಶುಶ್ರೂಷೆ ಮಾಡಿದ ದೃಶ್ಯವನ್ನು ನೆನೆದುಕೊಂಡಾಗ ಆ ತಾಯಿಯೇ ಜೀವಂತ ಉಳ್ಳಾಲ್ತಿಯಾಗಿ ನನ್ನ ಕಣ್ಣ ಮುಂದೆ ಬರುತ್ತಾರೆ.

ಲೌರಿ ಹಾಂಕೊ ನೇತೃತ್ವದ ತುರ್ಕು ತಂಡವು ಮಾಚಾರು ಗೋಪಾಲ ನಾಯ್ಕರ ಸಿರಿ ದರ್ಶನವನ್ನು ರಾತ್ರಿ ಇಡೀ ದಾಖಲಾತಿ ಮಾಡಿಕೊಂಡಿತು. ಜನಪದ ಕಾವ್ಯಗಳ ವಿದ್ವಾಂಸ ಲೌರಿ ಹಾಂಕೊ ಅವರಿಗೆ ಗೋಪಾಲ ನಾಯ್ಕರ ಸಿರಿ ಸಂದಿಯ ಹಾಡುವಿಕೆ ಮತ್ತು ದರ್ಶನ ವಿಶೇಷ ಆಸಕ್ತಿಯನ್ನು ಉಂಟುಮಾಡಿತು. ಹಾಂಕೊ ಮತ್ತು ಗೋಪಾಲ ನಾಯ್ಕರ ಆಕಸ್ಮಿಕ ಭೇಟಿ ಸಿರಿ ಕಾವ್ಯದ ದಾಖಲೀಕರಣದ ಅಪೂರ್ವ ಯೋಜನೆಗೆ ನಾಂದಿ ಹಾಡಿತು.

ಲೌರಿ ಹಾಂಕೊ ಮತ್ತು ಅವರ ಪತ್ನಿ ಅನೆಲಿ ಹಾಂಕೊ 1990 ದಶಂಬರದಲ್ಲಿ ಮಂಗಳೂರಿಗೆ ಬಂದರು. ನಾನು ಮತ್ತು ಚಿನ್ನಪ್ಪ ಗೌಡ ಅವರ ಜೊತೆಗೆ ಸಭೆ ನಡೆಸಿದೆವು. ಗೋಪಾಲ ನಾಯ್ಕರ ಸಿರಿ ಸಂದಿಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡುವ ಯೋಜನೆಯ ಬಗ್ಗೆ ರೂಪುರೇಷೆ ಸಿದ್ಧವಾಯಿತು. ಉಜಿರೆಯಲ್ಲಿ ಚಿನ್ನಪ್ಪಗೌಡರ ಭಾವ ದೇವಪ್ಪ ಗೌಡ ಮಾಸ್ಟ್ರ ಮನೆಯ ಪಕ್ಕದ ತೋಟದಲ್ಲಿ ಗೋಪಾಲ ನಾಯ್ಕರು ಹಾಡುವ ಸಿರಿ ಸಂದಿಯನ್ನು ಆಡಿಯೋ ಮತ್ತು ವಿಡಿಯೋ ಮೂಲಕ ದಾಖಲಿಸುವುದು, ಹರ್ಷವರ್ಧನ್‌ ಭಟ್‌ ವಿಡಿಯೋ ಬಳಸುವುದು, ಅನೆಲಿ ಹಾಂಕೊ ಟೇಪ್‌ ರೆಕಾರ್ಡರ್‌ನಲ್ಲಿ ಧ್ವನಿಮುದ್ರಣ, ಚಿನ್ನಪ್ಪ ಗೌಡ ಟಿಪ್ಪಣಿ ಮಾಡುವುದು. ಲೌರಿ ಹಾಂಕೊ ಮತ್ತು ನಾನು ಗೋಪಾಲ ನಾಯ್ಕರ ಜೊತೆಗೆ ಸಂವಾದ- ಇದು ಸ್ಥೂಲವಾದ ಚೌಕಟ್ಟು. ನಮ್ಮ ಯೋಜನೆಯಂತೆ ಉಜಿರೆಯಲ್ಲಿ ದೇವಪ್ಪ ಗೌಡರ ತೋಟದಲ್ಲಿ ದಾಖಲಾತಿ ಆರಂಭವಾದದ್ದು 1990 ದಶಂಬರ 21ರಂದು ಬೆಳಗ್ಗೆ 7.39ಕ್ಕೆ. ಮುಕ್ತಾಯ ಆದದ್ದು ದಶಂಬರ 28 ಸಂಜೆ 5.09ಕ್ಕೆ. ಆರು ದಿನಗಳ ಹಾಡುವಿಕೆಯ ಬಹುಮಾಧ್ಯಮ ದಾಖಲಾತಿ ನಡೆಯಿತು. ಹಾಡುವಿಕೆಯ ಉಸಿರ್ದಾಣದ ಆಧಾರದಲ್ಲಿ ಇಡೀ ಸಿರಿ ಕಾವ್ಯದ ಒಟ್ಟು ಸಾಲುಗಳ ಸಂಖ್ಯೆ: 15,682. ಇದು ಸಿರಿ ಮಹಾಕಾವ್ಯದ ಮೊದಲ ಹಂತ. ಗೋಪಾಲ ನಾಯ್ಕರ ಜೊತೆಗೆ ಸಂವಾದ, ಆರಾಧನೆ ಆಚರಣೆಗಳ ದಾಖಲೀಕರಣ, ಹಾಡಿದ ಪಠ್ಯದ ರೋಮನ್‌ ಲಿಪಿಯಲ್ಲಿನ ಲಿಪ್ಯಂತರ, ಮತ್ತೆ ಅವುಗಳ ಮೂಲ ತುಳು ಸಾಲುಗಳ ಇಂಗ್ಲಿಷ್‌ ಅನುವಾದ. ಬಳಿಕ ಪರಿಷ್ಕರಣ, ಕೊನೆಗೆ ಮೂರು ಸಂಪುಟಗಳಲ್ಲಿ ಪ್ರಕಟಣೆ( FF Communications, Helsinki, 1998). 1999ರ ಮಾರ್ಚ್‌ ನಲ್ಲಿ ಉಡುಪಿಯಲ್ಲಿ ಸಿರಿ ಸಂಪುಟಗಳ ಬಿಡುಗಡೆಯ ಐತಿಹಾಸಿಕ ಸಮಾರಂಭ. ಸಿರಿ ಕಾವ್ಯದ ಪಠಿÂàಕರಣದ ಮಹಾಯಾನವೇ ಜಾನಪದ ಪ್ರಕ್ರಿಯೆಗೆ ಬೃಹತ್‌ ಅಣಿಯನ್ನು ಕಟ್ಟಿದ ಜಾಗತಿಕ ವಿದ್ಯಮಾನ.

ಫೋಟೋ : ಹರ್ಷವರ್ಧನ ಭಟ್‌ 
– ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.