ಮತ್ತೆ ಮತ್ತೆ ಕಂಸಾವತಾರ


Team Udayavani, Apr 23, 2017, 3:45 AM IST

kamsavatara.jpg

ಇತ್ತೀಚೆಗೆ ದಂತಚೋರ ವೀರಪ್ಪನ್‌ ಕುರಿತ ಒಂದು ಕುತೂಹಲಕಾರಿ ಪುಸ್ತಕವನ್ನು ಓದಿದೆ. ಅವನ ಹತ್ಯೆಯಲ್ಲಿ ಮಹತ್ವದ ಪಾತ್ರ ವಹಿಸಿದ ಕೆ. ವಿಜಯ ಕುಮಾರ್‌ ಎನ್ನುವವರು ವೀರಪ್ಪನ್‌: ಚೇಸಿಂಗ್‌ ದಿ ಬ್ರಿಗಾಂಡ್‌ ಎನ್ನುವ ಇಂಗ್ಲಿಷ್‌ ಪುಸ್ತಕವನ್ನು ಬರೆದಿ¨ªಾರೆ. ವೀರಪ್ಪನ್‌ ಜೊತೆ ಒಡನಾಡಿದ ಹಲವಾರು ಜನರನ್ನು ಸಂದರ್ಶಿಸಿ, ಆ ಮೂಲಕ ವೀರಪ್ಪನ್‌ನ ವ್ಯಕ್ತಿಚಿತ್ರಣವನ್ನು ಕಟ್ಟಿಕೊಟ್ಟಿ¨ªಾರೆ. ಅದರಲ್ಲಿನ ಒಂದು ವಿವರ ಅತ್ಯಂತ ಕ್ರೂರವಾಗಿದ್ದು, ನನ್ನ ಮನಸ್ಸನ್ನು ಬಹುವಾಗಿ ಕಾಡುತ್ತಿದೆ.

1993ರ ಸುಮಾರಿನಲ್ಲಿ ವೀರಪ್ಪನ್‌ ಸಹಚರರ ಗುಂಪು ಬಹಳ ದೊಡ್ಡದಿತ್ತು. ನೂರಕ್ಕೂ ಹೆಚ್ಚು ಜನ ಅವನೊಡನೆ ಕಾಡಿನಲ್ಲಿ ವಾಸಿಸುತ್ತಿದ್ದರು. ಸಾಕಷ್ಟು ಜನ ತಮ್ಮ ಸಂಸಾರದ ಜೊತೆಯಲ್ಲಿ ಇರುತ್ತಿದ್ದರಾದ್ದರಿಂದ ಹಲವಾರು ಮಹಿಳೆಯರು ಮತ್ತು ಮಕ್ಕಳು ಅವರ ಗುಂಪಿನಲ್ಲಿದ್ದರು. ಅವರೆಲ್ಲರ ಜೊತೆಯಲ್ಲಿಯೇ ಅವನು ಕಾಡಿನಲ್ಲಿ ಅವಿತುಕೊಳ್ಳುತ್ತಿದ್ದ. ತನ್ನ ತಂಗುದಾಣದ ವಿಷಯ ಪೊಲೀಸರಿಗೆ ಗೊತ್ತಾಯ್ತು ಎಂದು ಸಂಶಯ ಬಂದರೆ ಸಾಕು, ಮತ್ತೂಂದು ಸ್ಥಳಕ್ಕೆ ಗುಂಪನ್ನು ಹೊರಡಿಸುತ್ತಿದ್ದ. ಅದೊಂದು ರೀತಿಯಲ್ಲಿ ಚಿಕ್ಕ ಹಳ್ಳಿಯೇ ಗುಳೇ ಹೋಗುವಂಥ ಸಂಗತಿಯಾಗಿರುತ್ತಿತ್ತು.

ವೀರಪ್ಪನ್‌ ಯಾವತ್ತೂ ಹೆಣ್ಣು ಮತ್ತು “ಎಣ್ಣೆ’ಯ ಸಹವಾಸದಿಂದ ದೂರವಿದ್ದವನು. ಅವೆರಡರಿಂದಾಗಿ ತಾನು ಬಹುಬೇಗನೆ ವಿನಾಶ ಹೊಂದುತ್ತೇನೆಂದು ಬಲವಾಗಿ ನಂಬಿದ್ದ. ಆದರೆ ತನ್ನ ಹೆಂಡತಿಯಾಗಿ ಒಬ್ಬಳು ಇರಬೇಕು ಎನ್ನುವ ಅಪೇಕ್ಷೆಯಲ್ಲಿ ಮುತ್ತುಲಕ್ಷ್ಮೀಯನ್ನು ಮದುವೆಯಾಗಿ, ಆಕೆಯನ್ನು ತನ್ನ ಜೊತೆಯಲ್ಲಿಯೇ ಕಾಡಿನಲ್ಲಿ ಉಳಿಸಿಕೊಂಡಿದ್ದ. ಆಗಲೇ ಅವನಿಗೆ ಮೂರನೆಯ ಮಗಳೊಬ್ಬಳು ಹುಟ್ಟಿದ್ದಳು. ಈ ಚಿಕ್ಕ ಮಗು ರಾತ್ರಿಯ ಹೊತ್ತು ವಿಪರೀತ ಅಳುತ್ತಿತ್ತು. ಆ ಅಳುವಿಗೆ ಅವನ ಇಡೀ ತಂಡ ಹೆದರಿಕೆಯಿಂದ ನಡುಗಲಾರಂಭಿಸಿತು.

ಅರಣ್ಯದ ರಾತ್ರಿಯ ನೀರವದಲ್ಲಿ ಒಂದು ಚಿಕ್ಕ ಸದ್ದೂ ಬಹು ದೂರದ ತನಕ ಕೇಳಿಸುತ್ತದೆ. ಮಗುವಿನ ಅಳುವಿನ ಶಬ್ದತೀವ್ರತೆ ಅತ್ಯಂತ ಹೆಚ್ಚು. ಗುಡುಗಿನ ಸದ್ದಿನ ಶಕ್ತಿ 120 ಡೆಸಿಬೆಲ್‌ಗ‌ಳಾದರೆ, ಮಗುವಿನದು 110 ಡೆಸಿಬೆಲ್‌. ಆಗಾಗಲೇ ಸೆಕ್ಯೂರಿಟಿ ಫೋರ್ಸ್‌ನವರು ವೀರಪ್ಪನ್‌ ತಂಡವನ್ನು ಹುಡುಕುವ ಕಾರ್ಯ ತೀವ್ರಗೊಂಡಿತ್ತು. ಆಗಲೇ ಮೂರು ದಿಕ್ಕಿನಿಂದಲೂ ಆತನ ಪಾಳಯವನ್ನು ಆಕ್ರಮಿಸಿ, ಹಗಲು ರಾತ್ರಿಯೆನ್ನದೆ ಅವನಿಗಾಗಿ ಹುಡುಕುತ್ತಿದ್ದರು. ಉಳಿದ ಒಂದೇ ದಿಕ್ಕಿನಲ್ಲಿ ವೀರಪ್ಪನ್‌ ತಪ್ಪಿಸಿಕೊಳ್ಳಬೇಕಿತ್ತು. ಅಂತಹ ಸಂದರ್ಭದಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ಅಳುವ ಅವನ ಪುಟ್ಟ ಮಗು ದೊಡ್ಡ ಹೊರೆಯಾಗಿ ಕುಳಿತಿತ್ತು. ತಂಡದ ಸದಸ್ಯರೆಲ್ಲರೂ ತಮ್ಮ ಅಸಮಾಧಾನವನ್ನು ಕಣ್ಣನೋಟದ ಮೂಲಕ, ಹಾವಭಾವದ ಮೂಲಕ ವ್ಯಕ್ತಪಡಿಸಲು ಶುರು ಮಾಡಿದ್ದರು.

ವೀರಪ್ಪನ್‌ ಗುಂಪಿನಲ್ಲಿ ಚಿನ್ನಪುಲೈ ಎನ್ನುವ ಸೂಲಗಿತ್ತಿಯಿದ್ದಳು. ಅರಣ್ಯದಂತಹ ದುರ್ಗಮ ಪರಿಸರದಲ್ಲಿಯೂ ಸುಸೂತ್ರ ಹಡವಣಿಗೆ ಮಾಡಿಸುವ ಗಟ್ಟಿಗಿತ್ತಿ ಆಕೆಯಾಗಿದ್ದಳು. ತಂಡದಲ್ಲಿರುವ ಹೆಂಗಸರ ಹೆರಿಗೆ ಮತ್ತು ಬಾಣಂತನವನ್ನು ಆಕೆ ನೋಡಿಕೊಳ್ಳುತ್ತಿದ್ದಳು. “”ಮಗುವಿನ ಅಳುವನ್ನು ನಿಲ್ಲಿಸಲು ಏನು ಮಾಡಬೇಕು?” ಎಂದು ವೀರಪ್ಪನ್‌ ಆಕೆಯನ್ನು ಕೇಳಿದ. ಅವನ ಮಾತಿನ ಉದ್ದೇಶವನ್ನು ಅರಿತ ಚಿನ್ನಪುಲೈ ಉತ್ತರಿಸಲು ಅಂಜಿದಳು. ಆದರೂ ವೀರಪ್ಪನ್‌ನನ್ನು ಎದುರಿಸಿ ಆ ಗುಂಪಿನಲ್ಲಿ ಬದುಕುವುದು ಕಷ್ಟ. ಆ ಕಾರಣದಿಂದ ಆಕೆ, “”ಎಕ್ಕೆ ಹೂವಿನ ಹಾಲು ಕುಡಿಸಬೇಕು ಧಣಿ” ಎಂದು ದುಃಖದಿಂದ ಹೇಳಿದಳು. “”ಹಾಗಿದ್ರೆ ಕುಡಿಸಿಬಿಡು. ಯಾಕೆ ತಡ ಮಾಡ್ತಿ?” ಎಂದು ವೀರಪ್ಪನ್‌ ಆಜ್ಞೆಯಿತ್ತ. ಅಳುತ್ತಿರುವ ಮುತ್ತುಲಕ್ಷ್ಮೀಯ ಕೈಯಿಂದ ಮಗುವನ್ನು ಕಸಿದುಕೊಂಡ ಚಿನ್ನಪುಲೈ, ಅದಕ್ಕೆ ಎಕ್ಕೆಹೂವಿನ ಹಾಲನ್ನು ಕುಡಿಸಿದಳು.

ನಿರೀಕ್ಷಿಸಿದಂತೆಯೇ ಆ ಮಗು ಅಳುವುದನ್ನು ಶಾಶ್ವತವಾಗಿ ನಿಲ್ಲಿಸಿತು. ಆ ಮಗುವನ್ನು ಅಲ್ಲಿಯೇ ಮಣ್ಣು ಮಾಡಿ ಇಡೀ ಗುಂಪು ನೆಮ್ಮದಿಯಿಂದ ಮುಂದಕ್ಕೆ ಪ್ರಯಾಣ ಬೆಳೆಸಿತು. ಮುಂದೆ ಆ ಮಗುವಿನ ಕಳೇಬರ ಪೊಲೀಸರಿಗೆ ಸಿಕ್ಕಿತ್ತು.
ತನ್ನ ಸುರಕ್ಷಣೆಯ ದೆಸೆಯಿಂದ ತನ್ನದೇ ಕರುಳ ಕುಡಿಯನ್ನು ನಿರ್ನಾಮ ಮಾಡಿಬಿಟ್ಟ ವೀರಪ್ಪನ್‌ನ ಕ್ರೌರ್ಯ ಹಲವಾರು ದಿನಗಳ ಕಾಲ ನನ್ನನ್ನು ಕಾಡಿತು. ಬಹುಶಃ ಇನ್ನೊಂದು ಜೀವದ ನೋವಿಗೆ ಮರುಗುವುದನ್ನು ಪ್ರಯತ್ನಪೂರ್ವಕವಾಗಿ ನಿಲ್ಲಿಸಿದಾಗಲೇ ವೀರಪ್ಪನ್‌ ತರಹದ ಕ್ರೂರತ್ವ ಸಾಧ್ಯವಾಗುತ್ತದೆ ಎನ್ನಿಸುತ್ತದೆ. ಸಹಾನುಭೂತಿಯನ್ನು ಕಳಚಿಕೊಂಡಾಗಲೇ ರಾಕ್ಷಸತ್ವ ನಮ್ಮನ್ನು ಆವರಿಸಲು ತೊಡಗುತ್ತದೆ. ಮನುಷ್ಯನ ಯಾವ ದುರಾಸೆಗಳು ಇಂತಹ ಕ್ರೌರ್ಯವನ್ನು ಅವನಿಂದ ಮಾಡಿಸುತ್ತವೆ? ಮೂಲಭೂತವಾಗಿ ಮನುಷ್ಯನ ಎದೆಯಲ್ಲಿ ಇರುವ ಒಳಿತನ್ನು ಹತ್ತಿಕ್ಕಿ ಕೆಡುಕು ವಿಜೃಂಭಿಸಲು ಏನು ಕಾರಣ? ಯಾವುದಕ್ಕೂ ಕರಾರುವಾಕ್ಕಾದ ವಿವರಣೆಗಳು ದಕ್ಕುವುದಿಲ್ಲ. ಮನುಷ್ಯನ ಗುಣ-ಸ್ವಭಾವಗಳು ಅತ್ಯಂತ ಸಂಕೀರ್ಣವಾದವುಗಳು.

ಇದೇ ಆಲೋಚನೆಯಲ್ಲಿರುವಾಗಲೇ ಚಿಕವೀರ ರಾಜೇಂದ್ರ ನೆನಪಾಗಿ ಬಿಟ್ಟ. ಮಾಸ್ತಿಯ ಮಹಾಕಾದಂಬರಿಯ ಈ ದುಷ್ಟ ನಾಯಕ ಮಾಡಿದ್ದೂ ಅದೇ ಅಲ್ಲವೆ? ಕಾದಂಬರಿಯ ವಿವರಗಳು ಕಣ್ಣ ಮುಂದೆ ಮೂಡಲಾರಂಭಿಸಿದವು. ಕೆಡುಕಿನ ಕಠೊರತೆಯನ್ನು ಯಾವತ್ತೂ ಹ್ರಸ್ವಗೊಳಿಸದ ವಸ್ತುನಿಷ್ಠ ಕತೆಗಾರ ಮಾಸ್ತಿಯವರು, ಇಂತಹ ಕ್ರೌರ್ಯದ ವಿವರಗಳನ್ನು ಜೀವಂತವಾಗಿಯೇ ಅವರ ಕಾದಂಬರಿಯಲ್ಲಿ ಕಟ್ಟಿ ಕೊಡುತ್ತಾರೆ. ಪಾತ್ರಗಳ ಕ್ರೌರ್ಯಕ್ಕೆ ಅಳುಕದ ಮಾಸ್ತಿಗೆ, ಅವುಗಳನ್ನು ದಿಟ್ಟತನದಲ್ಲಿ ಎದುರಿಸುವ ಶಕ್ತಿಯಿತ್ತು. ಬೆಳದಿಂಗಳ ಚೆಲುವನ್ನು ಕಣ್ತುಂಬಿಸಿಕೊಳ್ಳುವಂತೆ, ಉರಿಮಧ್ಯಾಹ್ನದ ಸೂರ್ಯನನ್ನೂ ನೆಟ್ಟ ನೋಟದಲ್ಲಿ ನೋಡುವ ಸಾತ್ವಿಕಶಕ್ತಿಯನ್ನವರು ಗಳಿಸಿಕೊಂಡಿದ್ದರು.

ಕೊಡಗಿನ ರಾಜನಾದ ಚಿಕವೀರ ರಾಜೇಂದ್ರನಿಗೆ ದೇವಮ್ಮಾಜಿ ಎನ್ನುವ ಸ್ವಂತ ತಂಗಿಯಿದ್ದಳು. ಈಕೆಯ ಗಂಡ ಆಗಲೇ ಅರಸೊತ್ತಿಗೆಯ ಮೇಲೆ ಕಣ್ಣು ಹಾಕಿದ್ದ. ಚಿಕವೀರ ನಂತರ ಉಢಾಳನೇ ರಾಜನಾಗಬಹುದಾದರೆ, ನಾನ್ಯಾಕೆ ಆಗಬಾರದು ಎನ್ನುವುದು ಅವನ ವಾದ. ಚಿಕವೀರನಿಂದ ಸಿಂಹಾಸನ ಕಸಿದುಕೊಳ್ಳುವ ಸಲುವಾಗಿ ಬ್ರಿಟಿಷರ ಸಹಾಯಕ್ಕೆ ಅಂಗಲಾಚುತ್ತಿದ್ದ. ಈ ಸಂದರ್ಭದಲ್ಲಿ ಅವರಿಬ್ಬರ ಅದೃಷ್ಟಕ್ಕೆ ಸರಿಯಾಗಿ ದೇವಮ್ಮಾಜಿ ಒಂದು ಗಂಡುವಿಗೆ ಜನ್ಮ ನೀಡಿದಳು. ತನ್ನ ಗಂಡು ಮಗುವಿಗಾದರೂ ಕೊಡಗಿನ ಅರಸತ್ವ ದಕ್ಕೀತೆಂಬುದು ದಂಪತಿಯ ನಿರೀಕ್ಷೆ. ಚಿಕವೀರನಿಗೆ ಕೇವಲ ಗೌರಮ್ಮ ಎನ್ನುವ ಹೆಣ್ಣು ಮಗುವಿದೆಯೆ ಹೊರತು, ತನ್ನ ತರುವಾಯ ಸಿಂಹಾಸನವನ್ನು ಅಲಂಕರಿಸುವ ಪುರುಷ ಸಂತಾನವಿಲ್ಲ. ಆದರೂ ತನ್ನ ಮಗಳೇ ತನ್ನ ನಂತರ ಕೊಡಗು ದೇಶವನ್ನು ಆಳಬೇಕು ಎನ್ನುವುದು ಚಿಕವೀರನ ಆಕಾಂಕ್ಷೆ. ಈ ಹಿಂದೆ ಚಿಕವೀರನು ತನ್ನ ತಂಗಿ ಮತ್ತು ಭಾವರನ್ನು ಜೈಲಿನಲ್ಲಿ ಹಿಡಿಸಿ ಹಾಕಿದ್ದನಾದರೂ, ಈಗ ಅವನೇ ಅವರನ್ನು ಬಿಡುಗಡೆ ಮಾಡಿ¨ªಾನೆ. ಇಷ್ಟರಲ್ಲಿ ಒಂದು ನೀಲಿಸುದ್ದಿ ಊರಿನಲ್ಲಿ ಹರಡುತ್ತಿದೆ. ದೀಕ್ಷಿತನೆಂಬ ಜ್ಯೋತಿಷ ಪಂಡಿತನು ಹೇಳಿದ್ದು ಎನ್ನುವ ಗಾಳಿವಾರ್ತೆಯದು. ದೇವಮ್ಮಾಜಿಗೆ ಹುಟ್ಟುವ ಮಗುವಿನಿಂದಲೇ ಚಿಕವೀರನ ಕೊಲೆಯಾಗುತ್ತದೆ ಎಂದು ಎಲ್ಲರೂ ಮಾತನಾಡುವುದು ಚಿಕವೀರನ ಕಿವಿಗೂ ಬಿದ್ದಿದೆ. ತನ್ನ ಸ್ಥಾನ ಕಳೆದುಕೊಳ್ಳುವ ಚಿಂತೆಯಲ್ಲಿ ಚಿಕವೀರ ತಳಮಳಿಸುತ್ತಿ¨ªಾನೆ.

ಒಂದು ನಡುರಾತ್ರಿಯಲ್ಲಿ ಏಕಪ್ರಕಾರವಾಗಿ ಚಿಕವೀರ ಮದ್ಯಪಾನ ಮಾಡುತ್ತಾನೆ. ಆ ಹೊತ್ತಿನಲ್ಲಿ ಇಡೀ ಅರಮನೆಯು ನಿ¨ªೆಯಲ್ಲಿ ಜಾರಿ ಹೋಗಿದೆ. ಇವನೊಬ್ಬ ಮಾತ್ರ ಚಿಂತೆಯ ಮಡುವಿನಲ್ಲಿ ಮುಳುಗಿ¨ªಾನೆ. ಸರ್ವದಿಕ್ಕಿನಿಂದಲೂ ತನ್ನ ರಾಜತ್ವವನ್ನು ಕಸಿದುಕೊಳ್ಳುವುದಕ್ಕೆ ಸನ್ನದ್ಧತೆಗಳು ನಡೆಯುತ್ತಿವೆ ಎಂದು ಮನಸ್ಸು ವ್ಯಾಕುಲಗೊಂಡಿದೆ. ಮದ್ಯದ ನಶೆ ಏರಿದಂತೆÇÉಾ ಹೆದರಿಕೆಯೂ ಶುರುವಾಗುತ್ತದೆ. ತಂಗಿಯ ಮಗು ಇರಬಾರದು ಎಂದು ನಿಶ್ಚಯಿಸುತ್ತಾನೆ. ಗೋಡೆಗೆ ನೇತು ಹಾಕಿದ್ದ ಅರ್ಧ ಚಂದ್ರಾಕಾರದ ಸುರಗಿಯೊಂದನ್ನು ತೆಗೆದುಕೊಂಡು ಬಾಣಂತಿ ಕೋಣೆಗೆ ಹೋಗುತ್ತಾನೆ. ಹಸುಗೂಸು ತೊಟ್ಟಿಲಲ್ಲಿ ಮುಂದಿನ ಕ್ಷಣದ ಅರಿವಿಲ್ಲದಂತೆ  ನೆಮ್ಮದಿಯಿಂದ ನಿ¨ªೆಮಾಡುತ್ತಿದೆ. ಅಲ್ಲಿಯೇ ಹತ್ತಿರದಲ್ಲಿ ಸೇವಕಿಯೊಬ್ಬಳು ಗಾಢವಾದ ನಿದ್ರೆಗೆ ಜಾರಿ¨ªಾಳೆ. ಮಗುವಿನ ತಾಯಿ ದೇವಮ್ಮಾಜಿ ಹಿಂದಿನ ಕೋಣೆಯಲ್ಲಿ ಮಲಗಿಕೊಂಡಿ¨ªಾಳೆ. ಚಿಕವೀರ ಯಾವುದೇ ಅಳುಕಿಲ್ಲದೆ ಆ ಸುರಗಿಯನ್ನು ಎಳೆಮಗುವಿನ ಹೃದಯಕ್ಕೆ ಗಟ್ಟಿಯಾಗಿ ಚುಚ್ಚುತ್ತಾನೆ. ನಿ¨ªೆಯಲ್ಲಿ ಹೊರಳಿದಂತೆ ಮಗು ಕತ್ತು ತಿರುಗಿಸಿ ಸತ್ತು ಹೋಗುತ್ತದೆ. ತನ್ನ ತಂಗಿಯ ಮಗನನ್ನು ಕೈಯಾರೆ ಕೊಂದು ಬಿಡುವ ಚಿಕವೀರ ರಾಜೇಂದ್ರ, ಯಾವುದೇ ಪಾಪಪ್ರಜ್ಞೆಯಿಲ್ಲದಂತೆ ಮತ್ತೆ ತನ್ನ ಕೋಣೆಗೆ ಹೋಗಿ ಕುಡಿಯುತ್ತ¤ ಕುಳಿತುಕೊಳ್ಳುತ್ತಾನೆ. ಕಾದಂಬರಿಯ ಈ ಪ್ರಸಂಗ ಯಾವುದೇ ಬಗೆಯ ಓದುಗನನ್ನಾದರೂ ಅÇÉಾಡಿಸಿಬಿಡುವಷ್ಟು ಕ್ರೂರವಾಗಿದೆ.

ಈ ಎರಡೂ ಘಟನೆಗಳು ಒಂದೇ ಎಂಬುದು ಬಹುಬೇಗ ನನಗೆ ಅರ್ಥವಾಗಿ ಹೋಯ್ತು. ಕಾಡಿನ ನಟ್ಟ ನಡುವೆ ಇದ್ದ ನಮ್ಮ ಕಾಲದ ವೀರಪ್ಪನ್‌ ಕ್ರೌರ್ಯಕ್ಕೂ, ನಾಡಿನ ನಟ್ಟ ನಡುವೆ ಎರಡು ನೂರು ವರ್ಷಗಳ ಹಿಂದೆ ಮೆರೆಯುತ್ತಿದ್ದ ಚಿಕವೀರನ ಕ್ರೌರ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಕರುಳ ಕುಡಿಯನ್ನೂ ಪಾಪಪ್ರಜ್ಞೆಯಿಲ್ಲದೆ ಚಿವುಟುತ್ತಾರೆ. ದೇಶ-ಕಾಲ ಬದಲಾದರೂ ಮನುಷ್ಯನ ಸ್ವಾರ್ಥವು ನಂಬಲಾರದಂತಹ ಕ್ರೌರ್ಯವನ್ನು ಅವನಿಂದ ಮಾಡಿಸುತ್ತಲೇ ಇರುತ್ತದೆ. ಇವರ ಈ ಕ್ರೌರ್ಯಕ್ಕೆ ಅವರೆಷ್ಟರ ಮಟ್ಟಿಗೆ ಕಾರಣ, ಅವರ ಸುತ್ತಲಿನ ಸಮಾಜವೆಷ್ಟು ಕಾರಣ? ಅದೇ ಕಾಲಮಾನದ ಇತರರು ಅಂತಹ ಕ್ರೌರ್ಯವನ್ನು ಮಾಡುವುದು ಕಾಣುವುದಿಲ್ಲವಲ್ಲ? ಇವರು ಮಾತ್ರ ಏಕೆ ಹೀಗೆ?

ಮತ್ತೆರಡು ದಿನ ವೀರಪ್ಪನ್‌ ಮತ್ತು ಚಿಕವೀರ ಇಬ್ಬರೂ ನನ್ನ ಮನಸ್ಸನ್ನು ಆಕ್ರಮಿಸಿಕೊಂಡು ಬಿಟ್ಟರು. ವೀರಪ್ಪನ್‌ನ ಹುರಿಮೀಸೆಗೂ, ಚಿಕವೀರ ರಾಜನ ತೆಳು ಮೀಸೆಗೂ ಕ್ರೌರ್ಯದ ತೀವ್ರತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂತಹವರು ಮತ್ತೆ ಮತ್ತೆ ಭೂಮಿಯ ಮೇಲೆ ಹುಟ್ಟುತ್ತಲೇ ಇರುತ್ತಾರೆಯೆ?

ಇದೇ ಆಲೋಚನೆಯಲ್ಲಿ ನಾನು ತಲ್ಲಣಗೊಂಡಿರುವಾಗ ಬೇರೊಂದು ಸತ್ಯವೂ ಹೊಳೆದು ಬಿಟ್ಟಿತು. ವೀರಪ್ಪನ್‌ ಮತ್ತು ಚಿಕವೀರ  ಇಬ್ಬರೂ ಬೇರೆ ಯಾರೂ ಅಲ್ಲ. ಅದು ಕಂಸನ ಅವತಾರ! ಅವರ ಕ್ರೌರ್ಯವು ಬೇರೇನೂ ಅಲ್ಲ, ಅದು ಕಂಸತ್ವ! ತನ್ನ ಅಧಿಕಾರ, ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ ಕಂಸನು ತನ್ನ ಪ್ರೀತಿಯ ತಂಗಿಯ ಮಕ್ಕಳೆಲ್ಲರನ್ನೂ ಕೊಂದು ಬಿಟ್ಟನಲ್ಲವೆ? ಅವನ ಆ ಪುರಾತನ ಕ್ರೌರ್ಯ ಇಂದಿನ ವೀರಪ್ಪನ್‌ ಮತ್ತು ಚಿಕವೀರ ರಾಜೇಂದ್ರರ ಕ್ರೌರ್ಯಕ್ಕಿಂತಲೂ ಹೆಚ್ಚಿನದಾಗಿದೆ. ಮತ್ತೆ ಮತ್ತೆ ಕಂಸನು ಭುವಿಯಲ್ಲಿ ಬೇರೆ ಬೇರೆ ರೂಪದಲ್ಲಿ ಹುಟ್ಟುತ್ತಲೇ ಇರುತ್ತಾನೆ. ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾನೆ.

ಆದ್ದರಿಂದಲೇ ಇರಬೇಕು, ಹಿರಿಯರು ಇತಿಹಾಸಕ್ಕಿಂತಲೂ ಪುರಾಣ ಮುಖ್ಯ ಎಂದು ಹೇಳುವುದು. ಇತಿಹಾಸವೆಂದರೆ ದೇಶ-ಕಾಲಕ್ಕೆ ವ್ಯಕ್ತಿ ಮತ್ತು ಘಟನೆಗಳನ್ನು ಕಟ್ಟಿಹಾಕುವುದು. ಪುರಾಣಕ್ಕೆ ದೇಶ-ಕಾಲದ ಹಂಗಿಲ್ಲ. ಆ ಕಾರಣಕ್ಕಾಗಿಯೇ ಕಂಸತ್ವ ಎನ್ನುವುದನ್ನು ಮಾತ್ರ ಪುರಾಣದಲ್ಲಿ ಪ್ರತಿಪಾದಿಸಿ ಬಿಡುತ್ತಾರೆ. ಆ ಕಂಸ ಮತ್ತೆ ಮತ್ತೆ ಮನುಕುಲದಲ್ಲಿ ಜನಿಸುತ್ತಲೇ ಇರುತ್ತಾನೆ. ಅದು ಚಿಕವೀರ ಆಗಿರಬಹುದು, ವೀರಪ್ಪನ್‌ ಆಗಿರಬಹುದು ಅಥವಾ ಮುಂಬರುವ ದಿನಗಳಲ್ಲಿ ಮತ್ತೂಬ್ಬರಾಗಬಹುದು. ಕಾಲ ಬದಲಾಗಿ, ವ್ಯಕ್ತಿಗಳು ಬದಲಾದರೂ ಕತೆ ಮಾತ್ರ ಅದದೇ ಮರುಕಳಿಸುತ್ತಿರುತ್ತದೆ. ಆದರೆ ತಾರೀಕುಗಳ ಹಂಗಿನ ಇತಿಹಾಸದಲ್ಲಿ ಸಿಕ್ಕು ಬೀಳುವ ವೀರಪ್ಪನ್‌ ಮತ್ತು ಚಿಕವೀರ ನಿಧಾನಕ್ಕೆ ಜನಮಾನಸದಿಂದ ಮಾಸಿ ಹೋಗುತ್ತಾರೆ. ಆದರೆ ತಾರೀಕಿನ ಹಂಗಿಲ್ಲದ ಪುರಾಣದ ಕಂಸ ಮಾತ್ರ ಯಾವತ್ತೂ ಜನಮಾನಸದಲ್ಲಿ ಜೀವಂತ ವ್ಯಕ್ತಿಯಾಗಿ ಉಳಿದುಕೊಂಡು ಬಿಡುತ್ತಾನೆ.

– ವಸುಧೇಂದ್ರ

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.