ಭಾಷೆಯ ಮೂಲಕ ಆಕಾಶಕ್ಕೆ ಏಣಿ

Team Udayavani, Nov 17, 2019, 5:55 AM IST

Trying to use words, and every attempt Is a wholly new start, and a different kind of failure
ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ? ಒಮ್ಮೆ ಎಲಿಯಟ್‌ಗೆ ಇನ್ನು ಬರೆಯುವುದೇ ಅಸಾಧ್ಯ ಎನಿಸಿತ್ತು, ಆಗ ಒಬ್ಬ ಮನೋವಿಶ್ಲೇಷಕ ಎಲಿಯಟ್‌ನ ಮಿತ್ರನಿಗೆ ಹೇಳಿದ್ದು: ಅವ ತನ್ನನ್ನು ಏನಂತ ತಿಳಕೊಂಡಿದ್ದಾನೆ, ದೇವರಂತಲೇ?

ಅದನ್ನು ಕೇಳಿಯೇ ಎಲಿಯಟ್‌ ಬಂಜರು ಭೂಮಿ ಮುಂದುವರಿಸಿದ್ದು. ಆದರೂ ಅದನ್ನು ಈಗಿನ ರೂಪಕ್ಕೆ ತರಲು “ಕವಿಗಳ ಕವಿ’ ಎಝಾ ಪೌಂಡ್‌ ಬೇಕಾಯಿತು.  ನಾವು ಯಾರೂ ದೇವರಲ್ಲ, ಪರಿಪೂರ್ಣತೆಯ ಹಂಬಲವಿರುತ್ತದೆ, ಆದರೆ, ಅದರ ಕಲ್ಪನೆ ಇರುವುದಿಲ್ಲ- ಮನುಷ್ಯನಿಗೆ ಅದು ಅಸಾಧ್ಯ. ಭಾಷೆ ಬಳಸಿದಾಗಲೇ ಅದು ಐಹಿಕವಾಗುತ್ತದೆ. ಆ ಮೂಲಕವೇ ನಾವು ಆಕಾಶಕ್ಕೆ ಏಣಿ ಕಟ್ಟಬೇಕು.

ನಾನಾದರೆ ಒಂದು ಎಬಾಂಡನ್‌ನಲ್ಲೇ ಬರೆಯುತ್ತ ಬಂದವನು- ಬರೆಯುತ್ತಲೂ ಬಿಡುತ್ತಲೂ. ನಾವು ಅತಿ ಫಿಲಸಾಫಿಕಲ್‌ ಆಗಿ (“ವೈರಾಗ್ಯ’ ಎಂಬ ಅರ್ಥದಲ್ಲಿ) ಜೀವಿಸುವುದು ಅಸಾಧ್ಯವಾಗುತ್ತದೆ. ಅತಿ ಫಿಲಸಾಫಿಕಲ್‌ ಆಗಿದ್ದರೆ ಮತ್ತೆ ಕತೆಯಾಗಲಿ, ಯಾಕೆ ಜೀವನವಾಗಲಿ ಇರುವುದಿಲ್ಲ. ಮೌನ ಮಾತ್ರ ಉಳಿಯುತ್ತದೆ. ಬದುಕಿನ ಆಸಕ್ತಿ ಕಳೆದುಕೊಂಡರೆ ಕಲೆಗೆ, ಸಾಹಿತ್ಯಕ್ಕೆ ನೆಲೆಯಿಲ್ಲ. ಋಷಿ-ಮುನಿಗಳಿಗೆ ಕೂಡ ಊಟದಲ್ಲಿ, ಬೇಟದಲ್ಲಿ, ಪ್ರಶಂಸೆಯಲ್ಲಿ ಆಸಕ್ತಿಯಿತ್ತು. ನಾವಾದರೆ ಕೇವಲ ಹುಲುಮಾನವರು.
.

ನನ್ನನ್ನು ಜೀವನ ಚರಿತ್ರೆ ಬರೆಯುವಂತೆ ಕೆಲವರು ಕೇಳಿದ್ದಾರೆ. ಆದರೆ, ಇದು ನನ್ನಿಂದ ಆಗದ ವಿಚಾರ. ನನ್ನ ಬಾಲ್ಯ ಕಾಲದ ಕುರಿತು ಕೆಲವೊಮ್ಮೆ ಲೇಖನಗಳನ್ನು, ಟಿಪ್ಪಣಿಗಳನ್ನು ಬರೆದದ್ದಿದೆ. ಉಳಿದಂತೆ ನನ್ನ ಕತೆಗಳು, ಕತೆಗಳೇ ನನ್ನ ಜೀವನ ಚರಿತ್ರೆ. ನಾನೊಬ್ಬ ಸಾಮಾನ್ಯ ಮನುಷ್ಯ, ಬರೆಯುವ ಸಾಹಿತ್ಯವೂ ಅಂಥವರ ಬಗ್ಗೆಯೇ. ಅನೇಕ ಬಾವಿಗಳ ನೀರು ಕುಡಿದಿದ್ದೇನೆ. ಅನೇಕ ಸಾಹಿತ್ಯ ಕೃತಿಗಳನ್ನು ಓದಿದ್ದೇನೆ, ಪ್ರಭಾವಿತನಾಗಿದ್ದೇನೆ. ನನ್ನ ಬರಹದಲ್ಲಿ ಅನೇಕರ ಬರಹಗಳಿವೆ. ಈ ಕುರಿತು ನನಗೆ ಸಂಕೋಚವಿಲ್ಲ. ನಮ್ಮ ಮೇಲಿನ ಪ್ರಭಾವ ನೇರ ಜೀವನದಿಂದ ಆಗಬಹುದು, ಪುಸ್ತಕಗಳಿಂದ, ಕಲೆಗಳಿಂದ ಆಗಬಹುದು. ಚಿತ್ರ ನೋಡಿ ಕತೆ ಬರೆದವರಿದ್ದಾರೆ, ಕತೆ ಓದಿ ಚಿತ್ರ ಬರೆದವರಿದ್ದಾರೆ. ಅನೇಕ ಎನ್ನುವುದು ನನಗೆ ಪ್ರಿಯವಾದ ಪದ. ಆಹಾ ಹೀಗೆ ಹೇಳುತ್ತ ಹೋದರೆ ಇದಕ್ಕೆ ಮಿತಿಯಿದೆಯೇ!

ನನ್ನ ತಲೆಯಲ್ಲಿ ಅನೇಕ ಸಂಗತಿಗಳು ಜುಮುಗುಟ್ಟುತ್ತ ಇರುತ್ತವೆ- ಮನುಷ್ಯರಿರೋದೇ ಹಾಗೆ. ನಾನೆಲ್ಲೋ ಕಲಿಸಿದ ಹುಡುಗಿಯೊಬ್ಬಳಷ್ಟೇ ನಿಜ, ವಾರ್‌ ಏಂಡ್‌ ಪೀಸ್‌ನ ನತಾಶಾ. ಈ ಇಳಿವಯಸ್ಸಿನಲ್ಲಿ ನನಗೆ ಯೋಚಿಸುವುದಕ್ಕೆ ಎಷ್ಟೊಂದು ಸಂಗತಿಗಳಿವೆ. ಈಜಿಪ್ತಿನ ಕ್ಲಿಯೋಪಾತ್ರ ಮತ್ತು ಅವಳಿಗಿಂತ ಸಾವಿರ ವರ್ಷ ಮೊದಲಿನ ಫೇರೋ ನೆಫ‌ರ್ತಿತಿ (Nefertiti) ನನ್ನ ಮನಸ್ಸಿನಲ್ಲಿ ಒಟ್ಟಿಗೇ ಇರುತ್ತಾರೆ, ನಾನೆಂದೂ ಈಜಿಪ್ತಿಗೆ ಹೋಗದೇ ಇದ್ದರೂ. ಅಲೆಕ್ಸಾಂಡ್ರಿಯಾದ ಗ್ರೀಕ್‌ ಕವಿ ಕಾನ್‌ಸ್ಟಾಂಟೈನ್‌ ಕವಾಫಿ (Constantine P. Cavafy) ಕವಾಫಿಯ ಕೆಲವು ಕತೆಗಳನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಶೇಕ್ಸ್‌ಪಿಯರನ ಆ್ಯಂಟನಿ ಏಂಡ್‌ ಕ್ಲಿಯೋಪಾತ್ರ ಕೂಡ. ಮನಸ್ಸು ಹೇಗೆ ನಿಂತಲ್ಲಿ ನಿಲ್ಲುವುದಿಲ್ಲ, ಗಿರಕಿ ಹೊಡೆಯುತ್ತಲೇ ಇರುತ್ತದೆ, ಒಂದೆಡೆಯಿಂದ ಇನ್ನೊಂದೆಡೆಗೆ, ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಲಂ ಸುತ್ತಲೇ ಇರುತ್ತದೆ ಎನ್ನುವುದಕ್ಕೆ ಇದನ್ನು ಹೇಳುತ್ತಿದ್ದೇನೆ ಅಷ್ಟೆ. ಇನ್ನು ಮನಸ್ಸನ್ನು ತೆರೆದಿಟ್ಟರೆ ಅದು ಪಡುವ ವಿಸ್ಮಯಗಳಿಗೆ ಏನೆನ್ನೋಣ! ದೈವೋತ್ತರ ಜಗತ್ತಿನಲ್ಲಿ ಇಂದಿನ ಲೇಖಕ ಇದ್ದಾನೆ, ಆದರೆ, ಅಂಥ ಜಗತ್ತಿನ ವಿಸ್ಮಯಗಳೇನೂ ಕಡಿಮೆಯಾಗಿಲ್ಲ.

(ತಮ್ಮ ಸಾಹಿತ್ಯದ ಕುರಿತು ಇತ್ತೀಚೆಗೆ ಶಿರಸಿಯಲ್ಲಿ ಆಯೋ ಜನೆಗೊಂಡ ವಿಚಾರಗೋಷ್ಠಿಗೆ ಕೆ. ವಿ. ತಿರುಮಲೇಶ್‌ ಅವರು ಬರೆದ ಪ್ರತಿಕ್ರಿಯೆಯ ಆಯ್ದ ಭಾಗ)

ಕೆ. ವಿ. ತಿರುಮಲೇಶ್‌


ಈ ವಿಭಾಗದಿಂದ ಇನ್ನಷ್ಟು

  • ಈಗ ಎಲ್ಲೆಲ್ಲೂ ಈರುಳ್ಳಿಯದ್ದೇ ಸುದ್ದಿ. ವಾಟ್ಸಾಪ್‌ಗ್ಳಲ್ಲಿ ಈರುಳ್ಳಿ ಜೋಕ್‌ಗಳು ಹರಿದುಬರುತ್ತಿವೆ. ಈರುಳ್ಳಿಯ ಬೆಲೆ ಏರಿಕೆಯು ಗ್ರಾಹಕರನ್ನು ಕಂಗಾಲು ಮಾಡಿದೆ....

  • ಶಿವರಾಮ ಕಾರಂತರ ಜ್ಞಾನಪೀಠ ಪುರಸ್ಕೃತ ಕೃತಿ ಮೂಕಜ್ಜಿಯ ಕನಸುಗಳು ಕಾದಂಬರಿ ಪ್ರಕಟವಾಗಿ ಅರ್ಧಶತಮಾನವಾಯಿತು. "ಮೂಕಜ್ಜಿ'ಯನ್ನು ಶಿವರಾಮ ಕಾರಂತರ ಮಗಳು ಇಲ್ಲಿ...

  • ಇರುವ ಒಂದೇ ಜನ್ಮದಲ್ಲಿ ಹಲವು ಅವತಾರಗಳನ್ನು ತಳೆದು, ದಿನದ ಹಲವು ಪ್ರಹರಗಳಲ್ಲಿ ಅವೆಲ್ಲವನ್ನೂ ಒಂದು ತರಹದ ದಿವ್ಯ ಅನಾಸಕ್ತಿಯಿಂದ ಒಂದೊಂದಾಗಿ ಬದುಕುತ್ತ ಜೀವ...

  • ಆಚೀಚೆ ಕಣ್ಣು ಹಾಯಿಸಿದರೆ ಅದಮ್ಯ ಚೈತನ್ಯದ ಈ ಮುಂಬಯಿ ಮಹಾನಗರದಲ್ಲಿ ತರತರದ ಜೀವನಶೈಲಿಗಳ ಜನರನ್ನು ಕಾಣಬಹುದು. ಬದುಕಿಗೊಂದು ಆವರಣವನ್ನು ಕಲ್ಪಿಸಿ, ನಮ್ಮನ್ನು...

  • ಇತ್ತೀಚೆಗೆ ನಾನು ಬರೆಯುತ್ತಿರುವುದು ನಂಗೇ ಅರ್ಥ ಆಗ್ತಾ ಇಲ್ಲ. ಎಲ್ಲವೂ ವ್ಯರ್ಥ ಅನ್ನಿಸ್ತಾ ಇದೆ. ಇದೆಲ್ಲ ನಿಲ್ಲಿಸ್ಬೇಕು ಅಂತ ಇದ್ದೀನಿ. ನೀವೇನ್ಹೆಳ್ತೀರೀ?''...

ಹೊಸ ಸೇರ್ಪಡೆ