ತೆಂಗುತೋಪಿನ ಅಡಿಯ ಮನುಷ್ಯ ವ್ಯಾಪಾರಗಳು

ಲಕ್ಷದ್ವೀಪ ಡೈರಿ

Team Udayavani, Sep 29, 2019, 5:15 AM IST

ಇನ್ನೇನು, ಬೆಳಕಾಗುವ ಮೊದಲೇ ಪಡುವಣದ ಲಗೂನಿನಲ್ಲಿ ಸಣ್ಣಗೆ ತುಯ್ದಾಡುತ್ತ ನಿಂತಿರುವ ಮೀನುದೋಣಿಗಳ ನಡುವಿಂದ ಹುಣ್ಣಿಮೆಯ ಚಂದ್ರ ಮೆಲ್ಲಗೆ ಮುಳುಗಬೇಕು. ಅದಾಗಿ ಇನ್ನು ಸ್ವಲ್ಪ ಹೊತ್ತಲ್ಲೇ ಮೂಡಣದಲ್ಲಿ ದುಸುಗುಡುತ್ತ ಮಲಗಿರುವ ಅರಬಿ ಕಡಲಿನ ಕ್ಷಿತಿಜದಲ್ಲಿ ಸೂರ್ಯ ಮೂಡಬೇಕು. ಲೆಕ್ಕಾಚಾರದಂತೆ ಎಲ್ಲವೂ ನಡೆದರೆ ಒಂದು ಜಾವದ ಅಂತರದಲ್ಲೇ ಒಂದು ಕೂಗಳತೆಯ ದೂರದಲ್ಲೇ ಈ ಪಾಮರನ ಕ್ಯಾಮ ರಾಕ್ಕೆ ಚಂದ್ರಾಸ್ತವೂ, ಸೂರ್ಯೋದಯವೂ ಒಂದರ ನಂತರ ಇನ್ನೊಂದರಂತೆ ಸಿಲುಕಬೇಕು. ಇನ್ನು ಸ್ವಲ್ಪ ಹೊತ್ತು ಚಂದ್ರನೂ ಇಲ್ಲದ, ಸೂರ್ಯನೂ ಉದಿಸದ ಆ ಸ್ನಿಗ್ಧ ಹೊತ್ತಲ್ಲಿ, ಇದು ಯಾವ ಬೆಳಕು ಎಂದು ಹೇಳಲೂ ಆಗದ ಆ ಅಪೂರ್ವ ಶೋಭೆಯಲ್ಲಿ ಕಡಲೂ, ದೋಣಿಗಳೂ, ಗಾಳಿಯೂ ಎಲ್ಲವೂ ಸೇರಿಕೊಂಡು ಒಂದು ಪುರಾತನ ದುಃಖವನ್ನು ಒಳಗಿಟ್ಟುಕೊಂಡು ಕ್ಯಾಮರಾ ಹೊತ್ತುಕೊಂಡು ಓಡಾಡುತ್ತಿರುವ ನನ್ನ ಎದೆಯಲ್ಲಿ ಮರುಕವೋ, ಆನಂದವೋ ಏನೆಂದು ಗೊತ್ತಾಗದ ಏನೋ ಒಂದು ಉಮ್ಮಳಿಸಬೇಕು. ಹಾಗೇ ಆ ಶೋಭೆಯಲ್ಲಿ ಒಂದು ಕೂಗಳತೆಯಷ್ಟು ದೂರ ಮೂಡಣಕ್ಕೆ ನಡೆದು ಏಳುತ್ತಿರುವ ಸೂರ್ಯನಿಗಿಂತಲೂ ಮೊದಲೇ ಕಡಲಂಚಲ್ಲಿ ನಡೆದು ಬರುತ್ತಿರುವ ಮನುಷ್ಯರೂ, ಹಾರುತ್ತಿರುವ ಹಕ್ಕಿಗಳೂ ಕ್ಯಾಮರಾ ಕಣ್ಣಿಗೆ ಗೋಚರಿಸಲು ತೊಡಗಿ ಮನಸ್ಸು ಮನುಷ್ಯ ವ್ಯಾಪಾರಗಳ ಕಡೆಗೆ ಜಾರಬೇಕು. ಆಮೇಲೆ ಅಲ್ಲೇ ಇರುವ ಪುರಾತನ ಮುಯ್ಯದ್ದೀನ್‌ ಮಸೀದಿಯ ಬಳಿಯ ತಟ್ಟಿ ಹೊಟೇಲಿನಲ್ಲಿ ಒಂದು ಖಾಲಿ ಟೀ ಕುಡಿದು, ಏಕಾಂಗಿ ಕುಡುಕನಂತೆ ಯಾರೂ ಇಲ್ಲದ ಮನೆಗೆ ಮತ್ತನಾಗಿ ಮರಳಬೇಕು.

ಆದರೆ, ಪೂರ್ಣಚಂದ್ರ ಯಾಕೋ ಮುಳುಗಲು ಹಿಂಜರಿಯುತ್ತಿದ್ದ. ಸೂರ್ಯ ಯಾಕೋ ಬೇಗನೇ ಏಳುತ್ತಿದ್ದ. ಕಕ್ಕಾಬಿಕ್ಕಿಯಾದ ನೀಲ ಕಡಲು ಹುಣ್ಣಿಮೆಯ ಹಾಲ ಬೆಳಕನ್ನೂ, ಸೂರ್ಯನ ನಸುಗೆಂಪನ್ನೂ ಏಕಕಾಲಕ್ಕೆ ಅನುಭವಿಸುತ್ತ ಜೊತೆಗೆ ಇರುಳು ಕಳೆದ ಪ್ರೇಮಿಯನ್ನು ಹೋಗೆಂದು ಅಂಗಲಾಚುತ್ತಿರುವ ಗರತಿಯಂತೆ ಚಂದ್ರನನ್ನು ಹೋಗೆಂದು ಬೇಡಿಕೊಳ್ಳುತ್ತಿತ್ತು. ಹೋಗಲೂ ಆಗದ ಇರಲೂ ಆಗದ ಚಂದ್ರ ಯಾಕೋ ಆಕಾಶದ ನಸುಗೆಂಪಲ್ಲಿ ಮಂಕಾಗುತ್ತಿದ್ದ. ಆತ ಮುಳುಗಿದ್ದೂ ಗೊತ್ತಾಗದಂತೆ ಅದಾಗಲೇ ಮೂಡಣದಲ್ಲಿ ಸೂರ್ಯ ಮಹಾ ಗಂಡನೊಬ್ಬನಂತೆ ಎದ್ದು ಬರುತ್ತಿದ್ದ.

ಈ ದ್ವೀಪದಲ್ಲಿ ರಸ್ತೆಗಳೂ ಜನರೂ ಚಂದ್ರನೂ ಸೂರ್ಯನೂ ನನ್ನನ್ನು ವಿನಾಕಾರಣ ಯಾಮಾರಿಸುತ್ತಿರುವರು ಎಂದು ನಗು ಬಂತು. ಎಡವೂ ಬಲವೂ ಸರಿಯಾಗಿ ಗೊತ್ತಿಲ್ಲದ ನಾನು ದಾರಿ ಕೇಳಿದರೆ ಈ ದ್ವೀಪದವರು “ಮೊದಲು ಪೂರ್ವಕ್ಕೆ ತಿರುಗಿ, ಮುಂದೆ ಸ್ವಲ್ಪ ದೂರ ಉತ್ತರಕ್ಕೆ ನಡೆದು, ಆಮೇಲೆ ಪಶ್ಚಿಮಕ್ಕೆ ತಿರುಗು’ ಎಂದು ದಾರಿ ತೋರಿಸುತ್ತಿದ್ದರು. ದಾರಿ ಕೇಳಿಕೊಂಡು ಹೊರಟವನು ಮತ್ತೆ ವಿರುದ್ಧ ದಿಕ್ಕಿನಿಂದಾಗಿ ಅಲ್ಲೇ ಬಂದು ತಲುಪಿದರೆ ಅವನು ದಾರಿ ತಪ್ಪಿದ್ದಾನೆ ಅಂತ ಅರ್ಥ. ಹಾಗಾಗಿ, ದ್ವೀಪದ ಒಂದಿಷ್ಟು ಒಳ್ಳೆಯ ಜನರು ನನ್ನನ್ನು ಅರ್ಥ ಮಾಡಿಕೊಂಡು ಅವರ ಸ್ಕೂಟರಿನ ಹಿಂದೆಯೋ ಸೈಕಲ್ಲಿನ ಹಿಂದೆಯೋ ಸೈಕಲ್ಲಿನಲ್ಲಿ ಹಿಂಬಾಲಿಸಲು ಹೇಳುತ್ತಿದ್ದರು. ನಾನು ಹೋಗಬೇಕಾದ ಜಾಗ ಬಂದಾಗ, “ನೋಡು ಇದೇ ನೀ ಹುಡುಕುತ್ತಿದ್ದ ಜಾಗ’ ಎಂದು ನಕ್ಕು ಹೋಗುತ್ತಿದ್ದರು. ಒಂದೇ ತರಹದ ದಾರಿಗಳೂ, ತೆಂಗಿನ ಮರಗಳೂ, ಅಂಗಡಿ ಮುಂಗಟ್ಟುಗಳೂ, ಸರಕಾರೀ ವಸತಿಗೃಹಗಳೂ ಇರುವ ಊರಿನಲ್ಲಿ ದಾರಿ ತಪ್ಪುವುದು ಬಹಳ ಕಷ್ಟದ ಕೆಲಸವೇನಲ್ಲ. ಅದೂ ಅಲ್ಲದೆ, ಹೊಸತಾಗಿ ಈ ದ್ವೀಪಕ್ಕೆ ಬಂದಿಳಿದಿರುವ ನಾನು ಈ ದಾರಿ ತಪ್ಪುವಿಕೆಯನ್ನೇ ಒಂದು ಹವ್ಯಾಸವನ್ನಾಗಿ ಮಾಡಿಕೊಂಡು ದಾರಿ ಕೇಳುವ ನೆಪದಲ್ಲಿ ಜನರನ್ನು ಮಾತನಾಡಿಸಲು ತೊಡಗಿದ್ದೆ. ಇದು ಬಿಟ್ಟರೆ ನನಗೆ ಇಲ್ಲಿ ಮಾಡಲು ಬೇರೇನೂ ಗಹನವಾದ ಕೆಲಸಗಳಿಲ್ಲ. ಸಾಂಸ್ಕೃತಿಕ- ಸಾಹಿತ್ಯಿಕ ಜವಾಬ್ದಾರಿಗಳೂ ಇಲ್ಲ. ಸಂಸಾರ ಇಲ್ಲ, ಪ್ರೇಮಿಗಳಿಲ್ಲ, ಪೆಟ್ರೋಲು, ಪೇಪರು, ಬಾರು, ಹೆಲ್ಮೆಟ್ಟು ಏನೂ ಇಲ್ಲ. ನಾಲ್ಕು ದಿಕ್ಕಿಗೂ ದೊಡ್ಡ ಕಡಲು, ತಲೆಯ ಮೇಲೆ ತೆಂಗಿನ ಮರಗಳು, ಮಾತನಾಡಲು ಒಂದಿಷ್ಟು ಜನಗಳು.

“ನನ್ನ ಮುತ್ತಜ್ಜನ ಅಜ್ಜನ ದ್ವೀಪದಲ್ಲಿ ಜನರು ಮೂರು ಕಾರಣಗಳಿಂದಾಗಿ ಮರಣಕ್ಕೀಡಾಗುತ್ತಾರೆ’- ಎಂದು ನನ್ನ ಬಾಲ್ಯದ ಖುರಾನು ಕಲಿಸುವ ಮಹಾನುಭಾವರು ಹೇಳಿದ್ದರು. ಒಂದನೆಯದು- ವಯಸ್ಸಿನ ಕಾರಣದಿಂದಾಗಿ. ಎರಡನೆಯದು- ತಲೆಯ ಮೇಲೆ ತೆಂಗಿನ ಮರದಿಂದ ಒಣಗಿದ ತೆಂಗಿನಕಾಯಿಗಳು ಬಿದ್ದು. ಮೂರನೆಯದು- ನೆಲದ ಮೇಲೆ ಬಿದ್ದುಕೊಂಡಿರುವ ತೆಂಗಿನಕಾಯಿಯ ಮೇಲೆ ಕತ್ತಲ ಹೊತ್ತಲ್ಲಿ ಕಾಣದೆ ಎಡವಿಬಿದ್ದು ಹೆದರಿ ಹೃದಯಾಘಾತವಾದ ಕಾರಣದಿಂದಾಗಿ ಎಂದು ಅವರು ಒಂದು ಗಹನವಾದ ರಹಸ್ಯವನ್ನು ಅರುಹಿದ್ದರು. ಅವರಿಗೆ ತೆಂಗಿನ ಮರಗಳ ಮೇಲೂ ತೆಂಗಿನಕಾಯಿಗಳ ಮೇಲೂ ಬಲವಾದ ಅಪನಂಬಿಕೆಯಿತ್ತು. ಹಾಗಾಗಿ, ನಮ್ಮ ಕಾಫಿ ತೋಟದಲ್ಲಿದ್ದ ಒಂದೇ ಒಂದು ತೆಂಗಿನ ಮರದ ಕೆಳಗಡೆಯಿಂದ ನಡೆದು ಹೋಗುವುದನ್ನು ತಪ್ಪಿಸುವ ಸಲುವಾಗಿ ನೂರು ಹೆಜ್ಜೆ ದೂರವಾದರೂ ಸರಿ ಎಂದು ತಮ್ಮ ಬೆಳ್ಳಗಿನ ಮುಂಡಿನ ಚುಂಗನ್ನು ಜಾಗೃತೆಯಿಂದಲೇ ಕೈಯಲ್ಲಿ ಎತ್ತಿ ಹಿಡಿದುಕೊಂಡು ಬಳಸು ದಾರಿಯಲ್ಲಿ ನಡೆಯುತ್ತಿದ್ದರು. ತಲೆಯ ಮೇಲೆ ತೆಂಗಿನಕಾಯಿ ಬೀಳಬಾರದು ಮತ್ತು ಬಿದ್ದ ತೆಂಗಿನಕಾಯಿಯ ಮೇಲೆ ಕಾಲಿಟ್ಟು ಕಾಣದೆ ಎಡವಬಾರದು ಎಂಬ ಕಾರಣದಿಂದಾಗಿ.

ಮೊನ್ನೆ ಸೋಮವಾರ ಅಸ್ತಮಿಸಿದ ಮಂಗಳವಾರದ ಇರುಳು ಅರೆಬರೆ ಚಂದ್ರನ ಬೆಳಕಿನಲ್ಲಿ ಹೀಗೇ ದಾರಿ ಹುಡುಕಿಕೊಂಡು ಇಲ್ಲಿನ ಪುರಾತನ ಹುಜ್ರಾ ಮಸೀದಿಯ ಅಂಗಳದ ಬಿಳಿಯ ಮರಳಿನ ಪ್ರಾಂಗಣದಲ್ಲಿ ಮಂಡಿಯೂರಿ ಕುಳಿತುಕೊಂಡಿದ್ದೆ. “ಹೀಗೆ ಮಂಡಿಯೂರಿ ಕುಳಿತು ಮೌನವಾಗಿ ಧ್ಯಾನಿಸುತ್ತ ಕುಳಿತರೆ ನಿನ್ನ ಕಳೆದ ಬದುಕಿನ ಸಂಕಟಗಳೆಲ್ಲವೂ ಅಲ್ಲಿ ಮಣ್ಣಲ್ಲಿ ಮಣ್ಣಾಗಿ ಮುನ್ನೂರು ವರ್ಷಗಳಿಂದ ಮಲಗಿರುವ ಸೂಫಿ ಸಂತನಿಗೆ ಕೇಳಿಸುವುದು. ಅವರು ನಿನ್ನ ಕಳೆದ ವ್ಯಸನಗಳನ್ನೆಲ್ಲ ಮಗುವೊಂದರ ಕಣ್ಣೀರನ್ನು ಒರೆಸುವಂತೆ ಒರೆಸಿಹಾಕಿ ಹೊಸ ದಿರಿಸಿನಂತಹ ಬದುಕನ್ನು ನೀಡುವರು’ ಎಂದು ಅಲ್ಲಿ ಕೂರಿಸಿದ್ದರು. ಕೂರಿಸಿದವರು ಆ ಸೂಫಿ ಸಂತನ ಎಂಟನೆಯ ತಲೆಮಾರಿನ ವಾರಸುದಾರರು. ಹಾಗೆ ಎಲ್ಲಿಂದಲೋ ಬಂದ ಪರದೇಶಿಗಳಿಗೆ ಅಲ್ಲಿ ಹಾಗೆಲ್ಲ ಪ್ರವೇಶವಿಲ್ಲ. “ಆತ್ಮದಲ್ಲಿ ಕೊಳೆಯಿರುವವರು ಅಲ್ಲಿ ಹಾಗೆಲ್ಲ ಬಂದು ಕೂತರೆ ಸೂಫಿ ಸಂತನು ಅವರನ್ನು ತರಗೆಲೆಯಂತೆ ದೂರಕ್ಕೆ ಹಾರಿಸುವರು’ ಎಂದೂ ಬಲ್ಲವರು ಹೆದರಿಸಿದ್ದರು. ಅಂತಹ ಹೇಳಿಕೊಳ್ಳುವ ಕೊಳೆಯೇನೂ ಇಲ್ಲವೆಂಬ ಹುಸಿ ಆತ್ಮವಿಶ್ವಾಸದಿಂದ ನಾನು ಅಲ್ಲಿ ಧ್ಯಾನಸ್ಥ ಬಕದಂತೆ ಮಂಡಿಯೂರಿ ಕುಳಿತಿದ್ದೆ. ಆ ಸಂತನು ಮುನ್ನೂರೈವತ್ತು ವರ್ಷಗಳ ಹಿಂದೆ ಹಾಯಿ ಹಡಗನ್ನೇರಿ ಪರದೇಶಿಯಂತೆ ಬಂದಿಳಿದಿರುವುದು ಕನ್ನಡನಾಡಿನ ಕರಾವಳಿಯ ಊರೊಂದರಿಂದ. ಅವರು ಅರಬೀಸ್ಥಾನದ ಮಹಾನ್‌ ಆದ ಸೂಫಿ ಸಂತ ಅಬ್ದುಲ್‌ ಕಾದಿರಿ ಜೀಲಾನಿಯವರ ಹದಿನಾಲ್ಕನೆಯ ತಲೆಮಾರಿಗೆ ಸೇರಿದವರು. ಈ ಲಕ್ಷದ್ವೀಪವನ್ನು ಮಳೆಯಿಂದಲೂ, ಪ್ರವಾಹ ಚಂಡಮಾರುತಗಳಿಂದಲೂ ತಮ್ಮ ಕಾರುಣ್ಯದಿಂದ ಕಾಪಾಡುತ್ತಿರುವವರು ಅವರು ಎಂಬ ಉಪಕಾರ ಸ್ಮರಣೆಯಲ್ಲಿ ಈ ದ್ವೀಪವಾಸಿಗಳಾದ ಗಂಡಸರು ಪ್ರತಿ ಗುರುವಾರ ಅಸ್ತಮಿಸಿದ ಶುಕ್ರವಾರ ಇರುಳು ಮತ್ತು ಸೋಮವಾರ ಅಸ್ತಮಿಸಿದ ಮಂಗಳವಾರ ಇರುಳು ಮೈಯಲ್ಲಿ ಒಂದು ತುಂಡುಬಟ್ಟೆ ಧರಿಸಿ, ಕೈಯಲ್ಲಿ ಒಂದು ಚರ್ಮವಾದ್ಯವನ್ನು ನುಡಿಸುತ್ತ ಆ ಸಂತನ ಹಾಡನ್ನು ವೃತ್ತಾಕಾರದಲ್ಲಿ ಕೂತು ಹಾಡುವರು. ಎಂತಹ ವ್ಯಸನಪೂರಿತನ ಎದೆಯನ್ನೂ ಭಕ್ತಿಯ ಅಲುಗಿನಂತೆ ಹೊಕ್ಕುಬಿಡುವ ಸಂತನ ಹಾಡು. ಕಡಲ ಅಲೆಯಂತೆ ಬೀಸುವ ಗಾಳಿಯಂತೆ ಕೇಳಿಸುವ ದುಡಿಯ ಸದ್ದಿನೊಡನೆ ಕೇಳಿಸುವ ಆರ್ತವಾದ ದಿಕರಿನ ಹಾಡನ್ನು ಕೇಳುತ್ತ ನಾನು ಒಳಗೊಳಗೆ ಇನ್ನೇನನ್ನೋ ಹುಡುಕುತ್ತಿದ್ದೆ.

ನನ್ನ ಕಣ್ಣುಗಳು ಹುಡುಕುತ್ತಿದ್ದುದು ಅಲ್ಲಿ ಒಳಗಡೆ ಮಲಗಿಕೊಂಡಿರುವ ಪುರಾತನ ಪಿಂಗಾಣಿಯ ಬಟ್ಟಲನ್ನು. ಆ ಸಂತನ ಮಕ್ಕಳ ಮಕ್ಕಳು, ಮರಿಮಕ್ಕಳ ಮರಿಮಕ್ಕಳು, ದಾಯಾದಿಗಳು, ಶಿಷ್ಯಂದಿರು, ಮುರೀದರು ಅವರ ಮರಿಮಕ್ಕಳು ಆ ಪುರಾತನ ಬಟ್ಟಲಿನ ಮರಿ ಬಟ್ಟಲುಗಳನ್ನು ಹಿಡಿದುಕೊಂಡು ದೇಶದಲ್ಲೆಲ್ಲ ಮಾಂತ್ರಿಕರಂತೆ ಈಗಲೂ ಓಡಾಡುತ್ತಿರುವರು. ಹಾಗೆ ಓಡಾಡುತ್ತಿದ್ದವರೊಬ್ಬರು ಮಹಾನುಭಾವರಾಗಿ ನಮ್ಮ ಬಾಲ್ಯದ ಕಾಫಿ ತೋಟವನ್ನೂ ಹೊಕ್ಕಿದ್ದರು. ಅವರ ಬಟ್ಟಲಿನ ಮೂಲವನ್ನು ಇದೀಗ ಹುಡುಕಿಕೊಂಡು ನಾನೂ ದೈವದ ಕರಾಮತ್ತಿನಂತೆ ಹಾಡಿನ ನಡುವೆ ಬಕಹಕ್ಕಿಯಂತೆ ಕುಳಿತು ಧ್ಯಾನಿಸುತ್ತಿದ್ದೆ. ಆಮೇಲೆ ಬಾಯಿಬಿಟ್ಟು ನಾನು ಬಂದಿರುವ ಕಾರಣವನ್ನು ಹೇಳಿಯೂ ಬಿಟ್ಟೆ.

“ನಿನಗೆ ಆತ್ಮಕ್ಕೆ ಸೂಫಿವರೇಣ್ಯರ ಬೆಳಕು ತಲುಪಿದರೆ ಆ ಬಟ್ಟಲೂ ನಿನಗೆ ಕಾಣಿಸಬಹುದು. ಆದರೆ, ನೀನು ಕಾಯಬೇಕು. ನಿನಗೆ ಇನ್ನೂ ಭಕ್ತಿ ಬರಬೇಕು. ನಿನ್ನ ಆತ್ಮದಲ್ಲಿ ಅದು ಇನ್ನೂ ಕಾಣಿಸುತ್ತಿಲ್ಲ’ ಎಂದು ಆ ವಾರಸುದಾರರು ನನ್ನ ಕೈಯ ಮೊಣಗಂಟಿಗೆ ಅತ್ತರು ಪೂಸಿ ಕಳಿಸಿದ್ದರು. ಹೊರಡುವ ಮೊದಲು ಒಂದು ಎಚ್ಚರಿಕೆಯೆಂಬಂತೆ ಆ ಸೂಫಿಯ ಕೋಪಕ್ಕೆ ತುತ್ತಾದ ಅನಗತ್ಯ ಕುತೂಹಲಿಯೊಬ್ಬನ ಅಂತ್ಯವನ್ನೂ ಹೇಳಿದರು. ಸಂತನೂ ಜಿನ್ನುಗಳೂ ಮತ್ತು ಹೆಂಡತಿಯನ್ನು ಹೆದರಿ ಅವರ ಕೋಪಕ್ಕೆ ಬಲಿಯಾದ ಆ ಮಸೀದಿಯ ರಾತ್ರಿ ಕಾವಲುಗಾರನೊಬ್ಬನ ಅಸಾಧಾರಣ ಕಥೆ ಅದು. ಈಗ ಒಂದು ಸಂಗೀತದ ಪರಿಮಳವಿರುವ ಆ ಅತ್ತರಿನ ಮಾಯಕದಲ್ಲಿ ಕುಳಿತು ಇದನ್ನು ಬರೆಯುತ್ತಿರುವೆ. ಆ ಕಥೆ ಮುಂದಿನ ವಾರ.

ಅಬ್ದುಲ್‌ ರಶೀದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ