ನನ್ನ ಅಮ್ಮನ ಸೀರೆ

Team Udayavani, May 12, 2019, 6:00 AM IST

ನನ್ನ ಅಮ್ಮನ ಸೀರೆ
ಮರದ ಪೆಟ್ಟಿಗೆಯೊಳಗೆ
ಮಲ್ಲು ಬಿಳಿ ಸುತ್ತಲ್ಲಿ ಜಿರಲೆ ಗುಳಿಗೆ

ಮಡಿಕೆ ಮಡಿಕೆಯ ಶಿಸ್ತು
ಅಂಗೈಯ ಒತ್ತು
ತಲೆದಿಂಬಿನಡಿ ಇಡಿಯ ಇಸ್ತ್ರಿ ಪ್ರಪಂಚ
ಕರ್ಪೂರ ಪುಡಿಕೆ ಅಗರು ಲಾವಂಚ
ಅವಳದೇ ಪರಿಮಳ ನನ್ನ ಅಮ್ಮನ ಸೀರೆ
ಜೊತೆಗೆ ಕೈಬಳೆ ಸದ್ದು ಸೇರಿದಂತೆ
ಸೊಂಟ ಸಿಕ್ಕಿಸಿ ದುಡಿವ ಹುರುಪಿನಂತೆ

ದೊಡ್ಡ ಸೆರಗಿನ ತುಂಬ ಅಡ್ಡಡ್ಡ ರೇಖೆಗಳು
ದುಷ್ಟತನ ಹತ್ತಿರವೂ ಸುಳಿಯದಂತೆ
ನೆಟ್ಟ ಬದುಕಿನ ಕಟ್ಟೆ ಒಡೆಯದಂತೆ
ತಂಟೆ ಮಕ್ಕಳ ಎದುರು ಬೆತ್ತದಂತೆ

ನನ್ನ ಅಮ್ಮನ ಸೀರೆ
ನೆರಿಗೆ ಅಂಬಡೆ ಗಂಟು
ಖಾಲಿಯಾಗದ ಗೂಢ ಪದಾರ್ಥ ಕೋಶ
ಮಧುರ ಸೀರೆಯ ಹಸಿರು
ಹಳದಿ ಅಂಚಿನ ಹೂವು
ಅರಸಿ ಅಮ್ಮನ ಹಾಗೇ ಇದ್ದಿರಬಹುದು ಬಹುಶಃ

ನನ್ನ ಅಮ್ಮನ ಸೀರೆ
ಉಟ್ಟಷ್ಟೂ ಉಂಟು
ಎಷ್ಟುದ್ದ ಉದ್ದ ಉದ್ದ!
ಒಮ್ಮೆ ಅಳೆಯಲು ಹೋಗಿ
ಒಮ್ಮೆ ಉಡಲೂ ಹೋಗಿ
ನಾನಾದೆ‌ ಗಿಡ್ಡ ಗಿಡ್ಡ

ನನ್ನ ಅಮ್ಮನ ಸೀರೆ ಒಡಲೆಲ್ಲ ನಕ್ಷತ್ರ
ಮೋಡದಲ್ಲಿ ಬಿಸಿಲಿನಲಿ
ನೋಯದಂತಡಗಿ
ಮಾಯದಂತೆ ಕಾದು ಸ್ವಂತತನವ
ಕತ್ತಲಲ್ಲಿಯೇ ಹೊಳೆವ ಜೀವ

ನನ್ನ ಅಮ್ಮನ ಸೀರೆ
ವಾಯ್ಲು-ಮಗ್ಗದ ನೂಲು
ಪಟ್ಟೆ ಸೀರೆಗೆ ಪಟ್ಟ ಪುಟ್ಟ ಕನಸು
ನನಸಾಗುವಾಗ ಅಪ್ಪಯ್ಯನಿಲ್ಲ
ಉಟ್ಟರೂ ಈಗಿಲ್ಲ ಉಡುವ ಮನಸು
ಕಳೆದು ಹೋಯೆ¤ನ್ನುವಳು ಉಡುವ ವಯಸೂ

ನನ್ನ ಅಮ್ಮನ ಹಳೆಯ
ಉಡುಪಿ ನೇಯ್ಗೆಯ ಸೀರೆ
ನೋಡುತಿದೆ ನೋಡು ನೇಲೆಯ ಮೇಲೆ ಕುಳಿತು!
ಹಾಸಿಕೊಳ್ಳುವೆ ಅದನು
ಹೊದೆದು ಕೊಳ್ಳುವೆ ಅದನು
‘ಅಮ್ಮ!’ ಎನ್ನುವ ಸುಖದ
ನಿಟ್ಟುಸಿರ ಕರೆದು
ಸವೆದೂ ಸವೆಯದ ಆ
ಪದವ ನೆನೆದು
ಪದವ ನೆನೆದು

ವೈದೇಹಿ


ಈ ವಿಭಾಗದಿಂದ ಇನ್ನಷ್ಟು

  • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

  • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

  • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

  • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

  • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ