ಪ್ಯಾರೀ ಪ್ಯಾರೀ ಪ್ಯಾರಿಸ್‌!

Team Udayavani, May 26, 2019, 6:00 AM IST

ಅಂತರಾಷ್ಟ್ರೀಯ ಮಹಿಳಾ ದಿನದಂದೇ ಜಾಗತಿಕ ಮಹಿಳಾ ಮನೋವೈದ್ಯಕೀಯ ಕಾಂಗ್ರೆಸ್‌ನ ಸಮಾವೇಶಕ್ಕಾಗಿ ಪ್ಯಾರಿಸ್‌ಗೆ ಬಂದಿಳಿದಿದ್ದೆ. ಯೂರೋಪಿಗೆ ಹಲವು ಸಲ ಬಂದಿದ್ದರೂ, ಯಾಕೋ ಪ್ಯಾರಿಸ್‌ ನೋಡುವ ಅವಕಾಶ ಸಿಕ್ಕಿರಲೇ ಇಲ್ಲ. ಚಿಕ್ಕವರಿದ್ದಾಗ an evening in paris ನೋಡಿದ್ದೆವಷ್ಟೆ! ಫ್ರೆಂಚ್ ಕಿಸ್‌-ಫ್ರೆಂಚ್ ಪ್ಲೇಟ್; ಫ್ರೆಂಚ್ ನಾಟ್ ಹೀಗೆ ಹಲವು ಫ್ರೆಂಚ್ ಸಂಗತಿಗಳ ಬಗ್ಗೆ ಕೇಳಿದ್ದೆವು. ‘ಬಾನ್‌ ವಾಯೇಜ್‌’ ಎಂದು ವಿಮಾನ ಹತ್ತುವವರಿಗೆ ಹೇಳುವುದು ಅಭ್ಯಾಸವಾಗಿತ್ತು. ಇವಿಷ್ಟೇ ನಮಗೆ ‘ಫ್ರೆಂಚ್’ ಬಗ್ಗೆ ಗೊತ್ತಿದ್ದದ್ದು. ಡ ವಿಂಚಿ ಕೋಡ್‌ ಎಂಬ ಪ್ರಸಿದ್ಧ ಕಾದಂಬರಿಯಲ್ಲಿ ಪ್ಯಾರಿಸ್‌ನ ಲೂವ್ರ್ ಮ್ಯೂಸಿಯಂ ಪರಿಚಿತವಾಗಿತ್ತು.

ಎತಿಹಾಡ್‌ ಮೂಲಕ ಒಟ್ಟು 12 ಗಂಟೆ ಪಯಣಿಸಿ ಪ್ಯಾರಿಸ್‌ನ ‘ಚಾಲ್ಸ್ರ್ ಡಿ ಗೆಲಿ’ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮಧ್ಯಾಹ್ನ 2 ಗಂಟೆ. ಹೊರಗೆ ಚಳಿ ಚಳಿ. ಫ್ರೆಂಚರು ಇಂಗ್ಲಿಷ್‌ ಕಲಿಯದಿದ್ದರೂ ಸ್ನೇಹಪರರೇ ಎಂಬುದು ವಿಮಾನ ನಿಲ್ದಾಣದಲ್ಲಿ ಫೋನ್‌ಕಾರ್ಡ್‌ ಖರೀದಿಸುವಾಗಲೇ ತಿಳಿದು ಹೋಯಿತು. ಇಂಗ್ಲಿಷ್‌ ಒಂದಕ್ಷರ ಬರದೆಯೂ ನಗುಮುಖದ ಫ್ರೆಂಚ್ ಹುಡುಗಿ ಕೈಸನ್ನೆ-ಸನ್ನೆಗಳಲ್ಲಿಯೇ ವ್ಯವಹಾರ ಮುಗಿಸಿ ಫೋನಿಗೆ ಜೀವ ತುಂಬಿದಳು.

ಹೊರಗೆ ಬಂದು ನೋಡಿದೆವು. ಕಷ್ಟವಾದರೂ ರೈಲಿನಲ್ಲೇ ಪಯಣಿಸಿ ನಾವು ಉಳಿಯಬೇಕಾದ ತಾತ್ಕಾಲಿಕ ಪ್ಯಾರಿಸ್‌ ಮನೆ, ಸರ್ವಿಸ್‌ ಅಪಾರ್ಟ್‌ಮೆಂಟ್ ತಲುಪೋಣ ಎಂದುಕೊಂಡೆವು. ಪ್ಯಾರಿಸ್‌ನಲ್ಲಿ ಇರುವ ರೈಲು ಸಂಚಾರ ವ್ಯವಸ್ಥೆ ಪ್ರವಾಸಿಗರಿಗೆ ಬಲು ಅನುಕೂಲಕರ. ಅಪಾರ ದುಡ್ಡು ಉಳಿಸುತ್ತದೆ. ಪೈಸಾ ಉಳಿಸುವುದಷ್ಟೇ ಅಲ್ಲ, ನಗರವನ್ನು ನಿಜವಾಗಿ ಸವಿಯಲು, ವಿವಿಧ ಅನುಭವಗಳನ್ನು ಪಡೆಯಲು ಸಾಧ್ಯವಾಗಿಸುತ್ತದೆ. ವಿಮಾನ ನಿಲ್ದಾಣದಿಂದ ಪ್ಯಾರಿಸ್‌ನಗರ ಸುಮಾರು 40 ಕಿ.ಮೀ. ದೂರ. ಟ್ಯಾಕ್ಸಿಗಾದರೆ ನೀವು 60 ಯೂರೋ ಅಂದರೆ ಸುಮಾರು 5 ಸಾವಿರ ರೂ. ತೆತ್ತಬೇಕು. ನೀವು ರೈಲಿನಲ್ಲಿ ಪಯಣಿಸಬೇಕಾದರೆ ಇದು ಒಬ್ಬರಿಗೆ 10 ಯೂರೋಗೆ ಇಳಿಯುತ್ತದೆ. ಆದರೆ ಲಗ್ಗೇಜು ಹೊರುವ, ಸ್ವಲ್ಪ ಕಷ್ಟಪಡುವ ತಾಳ್ಮೆ ನಿಮಗಿರಬೇಕು. ನಾವಿದ್ದದ್ದು ಇಬ್ಬರೇ ಆದ್ದರಿಂದ, ಮಧ್ಯಾಹ್ನವೂ ಆದ್ದರಿಂದ, ರೈಲಿನಲ್ಲೇ ಪಯಣಿಸಿದೆವು.

ಕಳ್ಳರಿದ್ದಾರೆ ಜಾಗ್ರತೆ !
ಸೆಂಟ್ ಮಾರ್ಟಿನ್‌ ಎಂಬ ಜಾಗದಲ್ಲಿದ್ದ ಸರ್ವೀಸ್‌ ಅಪಾರ್ಟ್‌ಮೆಂಟೇ ನಮ್ಮ ಹತ್ತು ದಿನಗಳ ಪ್ಯಾರಿಸ್‌ ಮನೆ. ಎಲ್ಲ ವ್ಯವಸ್ಥೆಗಳ ಜೊತೆಗೆ ಫ್ರೆಂಚ್ ವೈನ್‌ ಮತ್ತು ಫ್ರೆಂಚ್ ಪುಸ್ತಕಗಳು! ತಲುಪಿದ ತತ್‌ಕ್ಷಣ ಮೊದಲು ನಾವು ಮಾಡಿದ ಕೆಲಸ ಚಳಿ ತಡೆಯಲು ಬೆಚ್ಚಗಿನ ಬಟ್ಟೆ ಧರಿಸಿ, ಹತ್ತಿರದ ಮೆಟ್ರೋ ಸ್ಟೇಷನ್ನಿಗೆ ಓಡಿ ವಾರದ ಪಾಸ್‌ ಖರೀದಿಸಿದ್ದು. ‘ನ್ಯಾವಿಗೋ’ ಎಂದು ಕರೆಯುವ ಈ ವಾರದ ಪಾಸ್‌ಗೆ ಫೋಟೋ ಲಗತ್ತಿಸಿ ನಮ್ಮ ಹೆಸರು ಬರೆದು, ‘ಸೀಲ್’ ಹಾಕಿಸಬೇಕು. ಸೋಮವಾರದಿಂದ ಮುಂದಿನ ಭಾನುವಾರದವರೆಗೆ ನೀವು ಪ್ಯಾರಿಸ್‌ನ ಐದೂ ಜೋನ್‌ಗಳಲ್ಲಿ ಬಸ್ಸು-ರೈಲು-ಟ್ರ್ಯಾಮ್‌ ಯಾವುದರಲ್ಲೂ ಪಯಣಿಸಬಹುದು. ಒಂದು ಟಿಕೆಟ್ಟಿನ ಬೆಲೆ 20 ಯೂರೋ. ಕಾರ್ಡು ಕಳೆದರೆ 50 ಯೂರೋ ದಂಡ ಕಟ್ಟಿ ಮತ್ತೆ ಪಡೆಯಬಹುದು. ಕಾರ್ಡು ಕಳೆದರೆ ಇನ್ನೊಂದು ಹೊಸ ಕಾರ್ಡನ್ನೇ ಖರೀದಿಸಿದರೆ ಒಳ್ಳೆಯದು! ರೈಲುಗಳಲ್ಲಿ-ಜನಜಂಗುಳಿ ಇರುವಲ್ಲಿ ಮೊಬೈಲ್-ಪರ್ಸ್‌ ಕಳ್ಳರು ಇಲ್ಲಿ ಸಾಮಾನ್ಯ. ಕಳ್ಳರು ಯಾರೂ ಆಗಿರಬಹುದು. ಪುಸ್ತಕ ಹಿಡಿದು ಸ್ಟೈಲಾಗಿ ಓದುತ್ತಿರುವ ಹುಡುಗಿಯೂ ಆಗಿರಬಹುದು. ಎಚ್ಚರವಾಗಿರುವುದೇ ಪರಿಹಾರ.

ಪ್ಯಾರಿಸ್‌ ಫ್ರಾನ್ಸ್‌ನ ರಾಜಧಾನಿ. ಜನಸಂಖ್ಯೆ ಸುಮಾರು 22 ಲಕ್ಷ ಅಷ್ಟೆ ! ನಮ್ಮ ಬೆಂಗಳೂರಿನ ಜನಸಂಖ್ಯೆಯ ಹತ್ತನೆಯ ಒಂದರಷ್ಟು! 17ನೇ ಶತಮಾನದಿಂದಲೂ ಪ್ಯಾರಿಸ್‌ ಯೂರೋಪಿನ ಒಂದು ಪ್ರಮುಖ ಕೇಂದ್ರ. ವ್ಯಾಪಾರ-ಫ್ಯಾಷನ್‌-ಕಲೆ-ವಿಜ್ಞಾನ ಎಲ್ಲದರಲ್ಲಿಯೂ. ಆರ್ಥಿಕವಾಗಿಯೂ ಸುಭದ್ರ ಸ್ಥಿತಿಯಲ್ಲಿದೆ. ಹಾಗಾಗಿಯೇ ಯೂರೋಪಿನ ಇತರ ದೇಶಗಳಲ್ಲಿ ಪ್ರವಾಸಿಗಳಿಗೆ ಎದುರಾಗುವ ಕೆಲವು ಕಷ್ಟಗಳು ಪ್ಯಾರಿಸ್‌ನಲ್ಲಿ ಅಷ್ಟಾಗಿ ಅನುಭವಕ್ಕೆ ಬರಲಾರವು. ಉದಾಹರಣೆಗೆ ಯೂರೋಪಿನ ಇತರೆಡೆಗಳಲ್ಲಿ ಶೌಚಾಲಯಕ್ಕೆ ತೆರಬೇಕಾದ ಶುಲ್ಕ ಪ್ಯಾರಿಸ್‌ನಲ್ಲಿ ಅಪರೂಪ. ರೈಲು ಶುಲ್ಕವೂ ಅಷ್ಟೆ ಬೇರೆಡೆಗಳಿಗೆ ಹೋಲಿಸಿದರೆ ಕಡಿಮೆಯೇ. ಹಣ್ಣು -ತರಕಾರಿಗಳ ಬೆಲೆಯೂ ಕೈಗೆಟಕುವಂತಿರುತ್ತದೆ.

ನಾನಂದುಕೊಂಡಿದ್ದಕ್ಕೆ ವಿರುದ್ಧವಾಗಿ ಫ್ರೆಂಚ್ಕಿಸ್‌ ‘ಕೊಟ್ಟುಕೊಳ್ಳುವ’ ಪ್ರೇಮಿಗಳು ಪ್ಯಾರಿಸ್‌ನಲ್ಲಿ ಅಪರೂಪ. ಒಂದೆರಡು ಜೋಡಿ ಕಂಡರೂ ಆ ಜೋಡಿಗಳು ‘ಚೀನೀ’ ಮುಖದವಾಗಿದ್ದವು! ಬಹಿರಂಗ ಪ್ರಣಯ ಕಾಣದಿದ್ದರೂ, ಪ್ಯಾರಿಸ್‌ ‘ಪ್ರೇಮಿಗಳ ನಗರ’ ಎಂದೂ ಹೆಸರಾಗಿದೆ.

ಹತ್ತು ದಿನಗಳ ಪ್ಯಾರಿಸ್‌ ಪ್ರವಾಸ ನನಗಂತೂ ಪ್ಯಾರಿಸ್‌ ನಗರದೊಂದಿಗೆ ಪ್ರೀತಿ ಮೂಡಿಸಿತ್ತು. ‘ಪ್ಯಾರೀ ಪ್ಯಾರೀ ಪ್ಯಾರಿಸ್‌’.

-ಕೆ. ಎಸ್‌. ಪವಿತ್ರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಿಮೂ ಎಂದೇ ಖ್ಯಾತರಾಗಿದ್ದ ಎಂ. ಚಿದಾನಂದ ಮೂರ್ತಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರ ಪ್ರಕಾರ ಸಂಶೋಧನೆ ಎಂದರೆ ಸತ್ಯಶೋಧನೆ! ತಮ್ಮ ನಿಲುವನ್ನು ಪ್ರಕಟಿಸುವಲ್ಲಿ...

  • ಹಕ್ಕಿ ಒಂದು ರೂಪಕ, ಕಾವ್ಯ-ಶಾಸ್ತ್ರಗಳೆರಡರಲ್ಲಿಯೂ. ಮಾಂಡುಕ್ಯ ಉಪನಿಷತ್ತಿನಲ್ಲಿ ಎರಡು ಹಕ್ಕಿಗಳ ಕತೆ ಬರುತ್ತದೆ. ಒಂದು ಹಣ್ಣನ್ನು ತಿನ್ನುವ ಹಕ್ಕಿ, ಇನ್ನೊಂದು...

  • "ಹಾಯ್‌ ಹೌ ಆರ್‌ ಯೂ?' ಅವನಿಂದ ಬಂದಿದ್ದ ಮೆಸೇಜ್‌ ಇವಳ ಮೊಬೈಲ್‌ನಲ್ಲಿ ಅರ್ಧಗಂಟೆಯಿಂದ ತಣ್ಣಗೆ ಕುಳಿತಿತ್ತು. ಹರ್ಷಿಣಿ ಯಾವುದೋ ನಂಬರ್‌ ಸರ್ಚ್‌ ಮಾಡಲಿಕ್ಕೆ...

  • ಆರ್‌. ಕೆ. ಶ್ರೀಕಂಠನ್‌ ಕರ್ನಾಟಕ ಸಂಗೀತದ ಮೇರು ವಿದ್ವಾಂಸರು. ಅವರು ಇದ್ದಿದ್ದರೆ ಈ ಹೊತ್ತಿಗೆ 100 ವರ್ಷ. ಹೀಗಾಗಿ, ಆರ್‌. ಕೆ. ಶ್ರೀಕಂಠನ್‌ ಟ್ರಸ್ಟ್‌ ಒಂದು ವಾರ...

  • ಚಿಕ್ಕಂದಿನಿಂದ ನನಗೆ ಬಂಗಾಲವೆಂದರೆ ಒಂದು ರೀತಿಯ ಹುಚ್ಚು ಒಲವು. ಅಲ್ಲಿಯ ಭಾಷೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಜನ- ಏನೇ ಬಂಗಾಲಿ ಇದ್ದರೂ ಅವೆಲ್ಲವೂ. ಮೂಲಕಾರಣ, ಶಾಲೆಯಲ್ಲಿದ್ದಾಗಲೇ,...

ಹೊಸ ಸೇರ್ಪಡೆ