ಪೋರ್ಚುಗೀಸ್‌ ಕತೆ; ಕತ್ತೆಯಾದ ಸೇವಕಿ

Team Udayavani, Sep 8, 2019, 5:30 AM IST

ಒಂದು ರಾಜ್ಯದ ರಾಜಕುಮಾರಿಗೆ ಹೂಗಿಡಗಳೆಂದರೆ ಪಂಚಪ್ರಾಣ. ಬೇರೆ ಬೇರೆ ದೇಶಗಳಿಂದ ತರಿಸಿದ ಬಹು ಬಗೆಯ ಗಿಡಗಳನ್ನು ತನ್ನ ಉದ್ಯಾನದಲ್ಲಿ ನೆಟ್ಟು ಬೆಳೆಸಿದ್ದಳು. ಅದರಲ್ಲಿ ಅರಳಿ ಘಮಘಮಮಿಸುವ ಹೂಗಳನ್ನು ನೋಡಲೆಂದು ಸೇವಕಿಯರೊಂದಿಗೆ ದಿನವೂ ಸಂಜೆ ಹೋಗುತ್ತಿದ್ದಳು. ಒಂದು ದಿನ ತನ್ನ ಉದ್ಯಾನದಲ್ಲಿ ಕುಳಿತಿರುವಾಗ ಅವಳು ಒಂದು ವಿಶೇಷವನ್ನು ನೋಡಿದಳು. ಹಿಂದೆ ಎಂದೂ ಕಂಡಿರದಷ್ಟು ದೊಡ್ಡ ಗಾತ್ರದ ಮೊಲವೊಂದು ಉದ್ಯಾನದೊಳಗೆ ಬಂದು ಹುಲ್ಲು ಮೇಯುತ್ತ ಇತ್ತು. ಅದನ್ನು ನೋಡಿ ಆಶ್ಚರ್ಯಪಡುತ್ತ ರಾಜಕುಮಾರಿಯು ಮೊಲದ ಕಾಲುಗಳಲ್ಲಿ ಧರಿಸಿದ ಕಾಲಿcàಲಗಳನ್ನು ಗಮನಿಸಿದಳು. ಒಬ್ಬಳು ಸೇವಕಿಯನ್ನು ಬಳಿಗೆ ಕರೆದು, “”ಆ ಮೊಲದ ಕಾಲುಗಳನ್ನು ನೋಡಿದೆಯಾ? ಮನುಷ್ಯರ ಹಾಗೆಯೇ ಚೀಲ ಧರಿಸಿಕೊಂಡಿದೆ. ಅದರಲ್ಲಿ ಏನೋ ರಹಸ್ಯ ಅಡಗಿದಂತಿದೆ. ಹೇಗಾದರೂ ಮಾಡಿ ಮೊಲವನ್ನು ಹಿಡಿದು ನನ್ನ ಬಳಿಗೆ ತಂದುಕೊಡು” ಎಂದು ಹೇಳಿದಳು.

ಸೇವಕಿ ಸದ್ದಾಗದ ಹಾಗೆ ಮೊಲದ ಹಿಂದಿನಿಂದ ಹೋಗಿ ಒಂದು ಹಗ್ಗವನ್ನು ಒಡ್ಡಿ ಅದನ್ನು ಹಿಡಿದಳು. ಮೊಲ ಸಿಕ್ಕಿತೆಂದು ರಾಜಕುಮಾರಿ ಸಂತೋಷದಿಂದ ಕುಣಿಯುತ್ತಿರುವಾಗ ಅದು ಸಲೀಸಾಗಿ ಹಗ್ಗದಿಂದ ತಪ್ಪಿಸಿಕೊಂಡು ಪಲಾಯನ ಮಾಡಿತು. ಇದನ್ನು ಕಂಡು ಅವಳಿಗೆ ಬೇಸರವಾದರೂ ನಾಳೆಯೂ ಮೊಲ ಬಾರದೆ ಉಳಿಯುವುದಿಲ್ಲ, ಆಗ ಅದನ್ನು ಹಿಡಿಯಬಹುದು ಎಂದು ಯೋಚಿಸಿ ಹಾಗೆಯೇ ಮಾಡಲು ಸೇವಕಿಗೆ ಹೇಳಿದಳು. ಸೇವಕಿ ಉದ್ಯಾನವನಕ್ಕೆ ಹೋಗಿಬಂದು, “”ಈ ದಿನವೂ ಮೊಲವನ್ನು ಹಿಡಿದೆ. ಬಟ್ಟೆಯಿಂದ ಬಿಗಿಯಾಗಿ ಕಟ್ಟಿ ಹಾಕಿದ್ದೆ. ಆದರೆ ಚಾಣಾಕ್ಷ ಮೊಲ ನಾನು ಬಂಧಿಸಿದ ಬಟ್ಟೆಯನ್ನು ಹರಿದುಕೊಂಡು ಪರಾರಿಯಾಯಿತು” ಎಂದು ನಿರಾಶೆಯಿಂದ ಹೇಳಿದಳು.

“”ಚಿಂತಿಸಬೇಡ, ನಾಳೆ ಮತ್ತೂಮ್ಮೆ ಪ್ರಯತ್ನ ಮಾಡು. ನಾನೊಂದು ಚಿನ್ನದ ಸರ ಕೊಡುತ್ತೇನೆ. ಅದರಲ್ಲಿ ಮೊಲದ ಕುತ್ತಿಗೆಯನ್ನು ಬಂಧಿಸಿ ಹಿಡಿದುಕೊಂಡು ಬಾ” ಎಂದು ಹೇಳಿ, ರಾಜಕುಮಾರಿ ಸರವನ್ನು ಕೊಟ್ಟಳು. ಮರುದಿನವೂ ಮೊಲವನ್ನು ತರಲು ಸೇವಕಿಗೆ ಸಾಧ್ಯವಾಗಲಿಲ್ಲ. ಈ ಪ್ರಯತ್ನದಲ್ಲಿ ವಿಫ‌ಲಳಾಗಿ ಅವಳು ರಾಜಕುಮಾರಿಯ ಬಳಿಗೆ ಬಂದಳು. “”ರಾಜಕುಮಾರಿ, ಮೊಲ ಶಕ್ತಿಶಾಲಿ ಮಾತ್ರವಲ್ಲ, ಬುದ್ಧಿವಂತನೂ ಹೌದು. ಈ ದಿನ ಚಿನ್ನದ ಸರವನ್ನು ಮೊಲದ ಕೊರಳಿಗೆ ಕಟ್ಟಿದೆ. ಆಗಲೂ ಅದು ನನ್ನ ಕೈಯಿಂದ ಸರದ ತುದಿಯನ್ನು ಸೆಳೆದುಕೊಂಡು ಹೊರಗೆ ಓಡಿಹೋಯಿತು” ಎಂದು ತಿಳಿಸಿದಳು.

ಈ ಘಟನೆ ನಡೆದ ಬಳಿಕ ಮೊಲವು ಉದ್ಯಾನದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ರಾಜಕುಮಾರಿಗೆ ಎಂಥ ವ್ಯಥೆಯಾಯಿತೆಂದರೆ ಅವಳು ನೆಲದ ಮೇಲೆ ಕುಸಿದಳು. ಮೊಲಕ್ಕಾಗಿ ಪರಿತಪಿಸುತ್ತ ಅನ್ನಾಹಾರಗಳನ್ನು ತ್ಯಜಿಸಿದಳು. ನಿದ್ರೆ ಮಾಡದೆ ಕೊರಗಿ ಕಡ್ಡಿಯಾದಳು. ಮೊಲವನ್ನು ಹುಡುಕಿಸಲು ರಾಜನೂ ತುಂಬ ಪ್ರಯತ್ನ ಮಾಡಿದ. ಆದರೂ ಫ‌ಲ ಸಿಗಲಿಲ್ಲ. ರಾಜವೈದ್ಯರು ಬಂದು ಅವಳಿಗೆ ಚೇತರಿಸಿಕೊಳ್ಳಲು ಬೇಕಾದ ಔಷಧೋಪಚಾರಗಳನ್ನು ಮಾಡಿದರು. ರಾಜನೊಂದಿಗೆ, “”ಇವಳು ತುಂಬ ಖನ್ನತೆಗೆ ಒಳಗಾಗಿದ್ದಾಳೆ. ಅದರಿಂದ ಪಾರಾಗಿ ಲವಲವಿಕೆಯಿಂದ ಇರಲು ಒಂದೇ ಉಪಾಯವಿದೆ. ಯಾರಾದರೂ ಮನ ರಂಜಿಸುವ ಕತೆಗಳನ್ನು ಅವಳಿಗೆ ಹೇಳಬೇಕು. ಕತೆಗಳು ಅವಳ ಮನವರಳಿಸಿದರೆ ರಾಜಕುಮಾರಿ ಮೊದಲಿನಂತಾಗುತ್ತಾಳೆ” ಎಂದು ಹೇಳಿದರು. ರಾಜನು ಸೇವಕರನ್ನು ಕರೆದ. “”ಒಳ್ಳೆಯ ಕತೆ ಹೇಳಿ ರಾಜಕುಮಾರಿಯ ಮನಸ್ಸನ್ನು ರಂಜಿಸುವವರಿಗೆ ಯೋಗ್ಯ ಬಹುಮಾನ ನೀಡುವುದಾಗಿ ಇಡೀ ರಾಜ್ಯದಲ್ಲಿ ಡಂಗುರ ಹೊಡೆಯಿರಿ” ಎಂದು ಆಜ್ಞಾಪಿಸಿದ.

ತುಂಬ ಮಂದಿ ಅರಮನೆಗೆ ಬಂದರು. ರಾಜಕುಮಾರಿಗೆ ಕತೆ ಹೇಳಿ ಬಹುಮಾನ ಪಡೆದು ಹೋದರು. ಆದರೆ ಏನೂ ಫ‌ಲ ಸಿಗಲಿಲ್ಲ. ರಾಜ್ಯದ ಒಂದು ಮೂಲೆಯಲ್ಲಿ ಒಬ್ಬ ಬಡ ಹೆಂಗಸಿದ್ದಳು. ಅವಳಿಗೆ ಮದುವೆಯ ವಯಸ್ಸಿಗೆ ಬಂದ ಒಬ್ಬಳೇ ಮಗಳಿದ್ದಳು. ಗಂಡ ತೀರಿಕೊಂಡಿದ್ದ. ಮಹಿಳೆಯೇ ಕೂಲಿನಾಲಿ ಮಾಡಿ ಸಂಸಾರ ಪೋಷಣೆ ಮಾಡುತ್ತಿದ್ದಳು. ವೃದ್ಧಾಪ್ಯದಿಂದ ಅವಳಿಗೆ ದುಡಿಯಲು ಕಷ್ಟವಾಗುತ್ತಿತ್ತು. ಆ ಸಮಯ ರಾಜನ ಸೇವಕರು ಡಂಗುರ ಬಾರಿಸುವುದನ್ನು ಅವಳು ಆಲಿಸಿದಳು. ಮಗಳೊಂದಿಗೆ, “”ನನಗೆ ತುಂಬ ಚೆನ್ನಾಗಿ ಕತೆ ಹೇಳುವುದು ಗೊತ್ತಿದೆ. ನಾನು ಹೋಗಿ ರಾಜಕುಮಾರಿಗೆ ಕತೆ ಹೇಳಿ ಬರುತ್ತೇನೆ. ಸಿಗುವ ಹಣದಿಂದ ನಿನಗೆ ಮದುವೆ ಮಾಡಿ, ನನ್ನ ಮುಂದಿನ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನೂ ಮಾಡಿಕೊಳ್ಳುತ್ತೇನೆ” ಎಂದು ಹೇಳಿದಳು. ಬುತ್ತಿ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಅರಮನೆಯತ್ತ ಹೊರಟಳು.

ದಾರಿಯ ಮಧ್ಯೆ ಮಹಿಳೆ ಊಟ ಮಾಡಲು ಮರವೊಂದರ ನೆರಳಿನಲ್ಲಿ ಕುಳಿತಾಗ ಒಂದು ಆಶ್ಚರ್ಯದ ಸಂಗತಿಯನ್ನು ನೋಡಿದಳು. ಕಾಲುಗಳಿಗೆ ಚೀಲ ಧರಿಸಿದ್ದ ಒಂದು ಕತ್ತೆಯು ಭಾರವಾದ ಪೆಟ್ಟಿಗೆಗಳನ್ನು ಹೊತ್ತುಕೊಂಡು ಒಂದು ಗುಹೆಯ ಬಳಿಗೆ ಬಂದಿತು. ಅಲ್ಲಿ ಕಾಲುಗಳಲ್ಲಿ ತೊಟ್ಟಿದ್ದ ಚೀಲಗಳನ್ನು ಕಳಚಿತು. ಆಗ ಕತ್ತೆಯು ಒಬ್ಬ ಯುವತಿಯಾಗಿ ಬದಲಾಯಿತು. ಅವಳು ತಂದಿದ್ದ ಪೆಟ್ಟಿಗೆಗಳನ್ನು ಗುಹೆಯ ಒಳಗಿರಿಸಿ ಮತ್ತೆ ಚೀಲಗಳನ್ನು ಧರಿಸಿ ಕತ್ತೆಯಾದಳು. ಕತ್ತೆ ಅಲ್ಲಿಂದ ಹೊರಟುಹೋಯಿತು.

ಮಹಿಳೆಯು ಗುಹೆಯ ಒಳಗೆ ಹೋಗಿ ನೋಡಿದಾಗ ಕಾಲುಚೀಲಗಳನ್ನು ಧರಿಸಿದ್ದ ಒಂದು ಮೊಲವು ಗುಹೆಯ ಒಳಗೆ ಮಲಗಿ ನಿದ್ರೆ ಮಾಡುತ್ತ ಇತ್ತು. ಧನಕನಕಗಳು ತುಂಬಿದ್ದ ಹಲವಾರು ಪೆಟ್ಟಿಗೆಗಳು ಅಲ್ಲಿದ್ದವು. ಅವಳು ಹೊರಗೆ ಬಂದು ಅರಮನೆಯ ಕಡೆಗೆ ಹೋದಳು. ಕತೆ ಹೇಳಲು ಬಂದವಳೆಂದು ತಿಳಿದಾಗ ಸೇವಕರು ಅವಳನ್ನು ರಾಜಕುಮಾರಿಯ ಬಳಿಗೆ ಕರೆದುಕೊಂಡು ಹೋದರು. ರಾಜಕುಮಾರಿಯು, “”ಈವರೆಗೆ ಬಂದವರೆಲ್ಲರೂ ಕಿನ್ನರರ ಕಿಂಪುರುಷರ ಸುಳ್ಳು ಕತೆಗಳನ್ನೇ ಹೇಳಿದ್ದಾರೆ. ನನಗೆ ಸತ್ಯವಾಗಿರುವ ಕತೆಯಿದ್ದರೆ ಕೇಳಬೇಕೆನಿಸುತ್ತದೆ. ಅದನ್ನು ಹೇಳು” ಎಂದಳು.

ಮಹಿಳೆಯು, “”ಸತ್ಯ ಕತೆಯನ್ನೇ ಹೇಳುತ್ತೇನೆ. ಒಬ್ಬ ಮಹಿಳೆಯಿದ್ದಳು. ಅವಳಿಗೆ ಒಬ್ಬಳೇ ಮಗಳು. ದುಡಿಯಲು ಶಕ್ತಿಯಿಲ್ಲದ ಮಹಿಳೆ ರಾಜನ ಬಳಿಗೆ ಹೋಗಿ ಸಹಾಯ ಪಡೆಯುವ ಬಯಕೆಯಿಂದ ಮನೆಬಿಟ್ಟು ಹೊರಟಳು. ಆಗ ಕಾಲಿcàಲಗಳನ್ನು ಧರಿಸಿದ್ದ ಒಂದು ಕತ್ತೆಯನ್ನು ನೋಡಿದಳು. ಅದು ಬೆನ್ನಿನಲ್ಲಿ ಭಾರವಾದ ಪೆಟ್ಟಿಗೆಗಳನ್ನು ಹೊತ್ತು ತಂದಿತ್ತು. ಕಾಲಿcàಲಗಳನ್ನು ಕಳಚಿದಾಗ ಕತ್ತೆ ಓರ್ವ ಯುವತಿಯಾಗಿ ಬದಲಾಯಿತು. ಪೆಟ್ಟಿಗೆಗಳನ್ನು ಯುವತಿ ಗುಹೆಯ ಒಳಗಿಟ್ಟು ಮರಳಿ ಕತ್ತೆಯಾಗಿ ಹೊರಟುಹೋದಳು. ಮಹಿಳೆ ಕುತೂಹಲದಿಂದ ಗುಹೆಯ ಒಳಗೆ ಹೋಗಿ ನೋಡಿದರೆ ಇನ್ನೂ ಒಂದು ಅಚ್ಚರಿ ಕಂಡುಬಂತು. ಒಳಗೆ ಕಾಲಿcàಲಗಳನ್ನು ಧರಿಸಿದ್ದ ಒಂದು ದೊಡ್ಡ ಮೊಲವು ಮಲಗಿ ನಿದ್ರೆ ಮಾಡುತ್ತ ಇತ್ತು” ಎಂದು ಕತೆಯನ್ನು ಹೇಳುತ್ತ ಹೋದಳು.

ಅದುವರೆಗೆ ಕತೆಯನ್ನು ಕೇಳುತ್ತಿದ್ದ ರಾಜಕುಮಾರಿಯು, “”ಏನೆಂದೆ? ದೊಡ್ಡ ಮೊಲವನ್ನು ನೋಡಿದಳೆ? ಹಾಗಿದ್ದರೆ ಇದು ಸತ್ಯಕತೆಯೆಂಬುದರಲ್ಲಿ ಅನುಮಾನವಿಲ್ಲ. ಈ ಗುಹೆಯೆಲ್ಲಿದೆ, ಮೊಲವನ್ನು ನನಗೆ ನೋಡಬೇಕಾಗಿದೆ. ಅಲ್ಲಿಗೆ ಕರೆದುಕೊಂಡು ಹೋಗು” ಎಂದು ಹಟ ಹಿಡಿದಳು. ಮಹಿಳೆಯು, “”ಸರಿ, ಹೋಗೋಣ” ಎಂದು ರಾಜಕುಮಾರಿಯನ್ನು ಕರೆದುಕೊಂಡು ಗುಹೆಯ ಬಳಿಗೆ ಬಂದಳು. ಅವರಿಬ್ಬರೂ ಒಳಗೆ ಹೋದರು. ಅಲ್ಲಿ ಮಲಗಿದ್ದ ಮೊಲವನ್ನು ನೋಡಿ ರಾಜಕುಮಾರಿಯು ಅದು ಧರಿಸಿದ್ದ ಕಾಲಿcàಲವನ್ನು ಹಿಡಿದುಕೊಂಡು, “”ಅಂತೂ ನನ್ನ ಮೊಲ ಸಿಕ್ಕಿಯೇಬಿಟ್ಟಿತು” ಎಂದು ಕೂಗಿದಳು.

ಆದರೆ ಮರುಕ್ಷಣವೇ ಒಂದು ಆಶ್ಚರ್ಯದ ಸಂಗತಿ ನಡೆಯಿತು. ಮೊಲವು ಮಾಯವಾಗಿ ಒಬ್ಬ ಸುಂದರನಾದ ರಾಜಕುಮಾರನು ಕಾಣಿಸಿಕೊಂಡ. ರಾಜಕುಮಾರಿಯೊಂದಿಗೆ, “”ನಿನ್ನಿಂದಾಗಿ ನನಗೆ ಮರುಜನ್ಮ ಬಂದಿತು” ಎಂದು ಸಂತೋಷದಿಂದ ಹೇಳಿದ. ರಾಜಕುಮಾರಿಯು, “”ಯಾರು ನೀನು? ನಿನಗೆ ಈ ಜನ್ಮ ಯಾಕೆ ಬಂದಿತು?” ಎಂದು ಕೇಳಿದಳು.

“”ನಾನು ನೆರೆ ದೇಶದ ರಾಜಕುಮಾರ. ಮಂತ್ರವಾದಿನಿಯೊಬ್ಬಳು ನನಗೆ ಈ ಕಾಲಿcàಲಗಳನ್ನು ತೊಡಿಸಿ ಮೊಲವನ್ನಾಗಿ ಮಾಡಿದಳು. ನನ್ನ ಕೈಹಿಡಿಯುವ ರಾಜಕುಮಾರಿ ಮಾತ್ರ ಈ ಚೀಲಗಳನ್ನು ತೆಗೆದು ಮೊದಲಿನ ರೂಪ ನೀಡಬಲ್ಲಳು ಎಂದು ಹೇಳಿದ್ದಳು. ಹೀಗಾಗಿ ಅಂಥ‌ವಳಿಗಾಗಿ ದಾರಿ ಕಾಯುತ್ತ ಇದ್ದೆ. ನಿನ್ನ ಉದ್ಯಾನಕ್ಕೆ ಬಂದು ತಪ್ಪಿಸಿಕೊಂಡ ಮೊಲವೂ ನಾನೇ” ಎಂದನು ರಾಜಕುಮಾರ.

“”ಹಾಗಿದ್ದರೆ ಆ ಮಂತ್ರವಾದಿನಿ ಎಲ್ಲಿದ್ದಾಳೆ?” ಎಂದು ರಾಜಕುಮಾರಿ ಕೇಳಿದಳು. “”ಅವಳು ಒಬ್ಬ ಸೇವಕಿಯಾಗಿ ನಿನ್ನ ಅರಮನೆ ಸೇರಿಕೊಂಡಿದ್ದಾಳೆ. ಅಲ್ಲಿಂದ ಬಂಗಾರವಿರುವ ಪೆಟ್ಟಿಗೆಗಳನ್ನು ಅಪಹರಿಸಿ, ಕತ್ತೆಯಾಗಿ ಬೆನ್ನಿನ ಮೇಲೆ ಹೊತ್ತುಕೊಂಡು ಬರುತ್ತಾಳೆ. ಈ ಗುಹೆಯಲ್ಲಿಟ್ಟು ಹೋಗುತ್ತಾಳೆ. ಮಂತ್ರಶಕ್ತಿಯ ಕಾಲಿcàಲಗಳನ್ನು ಧರಿಸಿದಾಗ ಅವಳಿಗೆ ಕತ್ತೆಯಾಗಲು ಸಾಧ್ಯವಾಗುತ್ತದೆ, ಅದನ್ನು ಕಳಚಿದಾಗ ಮತ್ತೆ ಮೊದಲಿನಂತಾಗುತ್ತಾಳೆ” ಎಂದನು ರಾಜಕುಮಾರ.

ತನ್ನ ಆಪ್ತ ಸೇವಕಿಯೇ ದುಷ್ಟಳಾದ ಮಾಂತ್ರಿಕಳೆಂಬ ಸತ್ಯ ತಿಳಿದಾಗ ರಾಜಕುಮಾರಿಯು ರಾಜಭಟರನ್ನು ಕರೆದು ಅವಳನ್ನು ಹಿಡಿದು ಶಿಕ್ಷಿಸಲು ಹೇಳಿದಳು. ರಾಜಕುಮಾರ ಅವಳನ್ನು ವರಿಸಿದ. ಇದನ್ನು ನೋಡಿ ಕತೆಯ ರೂಪದಲ್ಲಿ ಹೇಳಿ ರಾಜಕುಮಾರನಿಗೆ ಮರುಜನ್ಮ ನೀಗಿದ ಮಹಿಳೆಯ ಬಡತನ ನೀಗುವಷ್ಟು ಸಂಪತ್ತನ್ನು ನೀಡಿ ರಾಜಕುಮಾರಿ ಕಳುಹಿಸಿಕೊಟ್ಟಳು.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ...

  • ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ,...

  • ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ,...

  • "ಕಾಗದ ಬಂದಿದೆ ಕಾಗದವು' ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ....

  • ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ...

ಹೊಸ ಸೇರ್ಪಡೆ