ಪುಟ್ಟ ಪುಟ ಪುಟ್ಟಿ ಪುಟ

Team Udayavani, Jan 28, 2018, 2:09 PM IST

ಕಾಡಿನ ಸಮೀಪದ ಒಂದು ಹಳ್ಳಿ. ಬಡ ಮಹಿಳೆಯೊಬ್ಬಳಿಗೆ ಸೂಸಾನ್‌ ಎಂಬ ಪುಟ್ಟ ಮಗಳಿದ್ದಳು. ಮಹಿಳೆ ಮತ್ತೆ ಗರ್ಭಿಣಿಯಾಗಿದ್ದಾಗ ಅವಳ ಗಂಡನನ್ನು ಆನೆಯೊಂದು ತುಳಿದು ಕೊಂದಿತು. ಮಹಿಳೆ ಗಂಡುಮಗುವಿಗೆ ಜನ್ಮ ನೀಡಿ ತೀರಿಕೊಂಡಳು. ಸಾಯುವ ಮೊದಲು ಸೂಸಾನಳನ್ನು ಕರೆದು, “”ಮಕ್ಕಳನ್ನು ಬೆಳೆಸಿ ಜೀವನದ ದಾರಿ ಕಂಡುಕೊಳ್ಳುವಂತೆ ಮಾಡುವ ಅದೃಷ್ಟ ನನಗಿಲ್ಲ. ಆದರೆ ನೀನು ಕಷ್ಟಪಟ್ಟು ನಿನ್ನ ತಮ್ಮನನ್ನು ಸಲಹಬೇಕು. ಎಲ್ಲ ಜೀವಿಗಳ ಮೇಲೂ ಕರುಣೆ ತೋರಿಸು. ಇದು ನಿನ್ನ ಜೀವನದಲ್ಲಿ ಯಾವ ಕಷ್ಟ ಬಂದರೂ ಪಾರಾಗಲು ಸಹಾಯ ಮಾಡುತ್ತದೆ” ಎಂದು ಹರಸಿ ಕಣ್ಣು ಮುಚ್ಚಿದಳು. ಸೂಸಾನ್‌ ಚಿಕ್ಕವಳಾದರೂ ಕಾಡಿನಿಂದ ಒಣ ಕಟ್ಟಿಗೆ ಆರಿಸಿ ಹೊರುತ್ತಿದ್ದಳು. ಪೇಟೆಯಲ್ಲಿ ಮಾರಾಟ ಮಾಡಿ ಸಿಕ್ಕಿದ ಹಣದಲ್ಲಿ ಆಹಾರ ವಸ್ತುಗಳನ್ನು ತರುತ್ತಿದ್ದಳು. ಮನೆಯ ಪಕ್ಕದ ಎಲ್ಲ ಪ್ರಾಣಿಪಕ್ಷಿಗಳಿಗೂ ಆಹಾರದಲ್ಲಿ ಪಾಲು ನೀಡಿ ಬಳಿಕ ತಾನು ಉಣ್ಣುತ್ತಿದ್ದಳು.

 ಸೂಸಾನಳು ತಮ್ಮನನ್ನು ಜೊತೆಗೆ ಕರೆದುಕೊಂಡು ಕಟ್ಟಿಗೆ ತರಲು ಕಾಡಿಗೆ ಹೋಗುತ್ತಿದ್ದಳು. ಒಂದು ದಿನ ಅವಳು ಕಾಡಿನಲ್ಲಿರುವಾಗ ಒಂದು ಮದ್ದಾನೆ ಬಂದಿತು. ಅವಳ ತಮ್ಮನನ್ನು ಸೊಂಡಿಲಿನಲ್ಲಿ ಎತ್ತಿಕೊಂಡು ಹೊರಟಿತು. ಸೂಸಾನ್‌ ಆನೆಯ ಹಿಂದೆಯೇ ಓಡಿಬಂದಳು. “”ಅಯ್ಯೋ, ನನ್ನ ತಮ್ಮನಿಗೆ ಏನೂ ತೊಂದರೆ ಮಾಡಬೇಡ. ಅವನೆಂದರೆ ನನಗೆ ಪ್ರಾಣಕ್ಕಿಂತಲೂ ಹೆಚ್ಚು. ದಯವಿಟ್ಟು ಅವನನ್ನು ಬಿಟ್ಟುಬಿಡು” ಎಂದು ಕೈ ಜೋಡಿಸಿ ಬೇಡಿಕೊಂಡಳು.

ಆನೆ ತಾತ್ಸಾರದಿಂದ ನಕ್ಕಿತು. “”ಹೋಗು, ಅಷ್ಟು ಹೇಳಿದ ಕೂಡಲೇ ನಾನು ಬಿಡುವುದಿಲ್ಲ. ನನಗೆ ಒಂದು ಆಶೆಯಿದೆ.
ನನಗಿಂತಲೂ ದೊಡ್ಡವನೊಂದಿಗೆ ಯುದ್ಧ ಮಾಡಿ ಗೆಲ್ಲಲು ನಾನು ಬಯಸುತ್ತೇನೆ. ನಿನ್ನ ಅಪ್ಪನಲ್ಲಿಯೂ ಇದೇ ಮಾತು
ಹೇಳಿದ್ದೆ. ಆದರೆ ಅವನಿಗೆ ನನ್ನನ್ನು ಸೋಲಿಸುವಂತಹ ದೊಡ್ಡವನನ್ನು ಕರೆತರಲು ಸಾಧ್ಯವಾಗದೆ ನನ್ನ ಕೈಯಲ್ಲಿ
ಸತ್ತುಹೋದ. ಈಗ ನಿನಗೂ ಅದೇ ಮಾತನ್ನು ಹೇಳುತ್ತೇನೆ. ನನ್ನೆದುರಲ್ಲಿ ನಿಂತು ಹೋರಾಡಬಲ್ಲವನನ್ನು ಕರೆದು ತಾ.
ಹಾಗಿದ್ದರೆ ಮಾತ್ರ ನಿನ್ನ ತಮ್ಮನಿಗೆ ಬಿಡುಗಡೆ. ನಾಳೆ ಸಂಜೆಯೊಳಗೆ ನನ್ನ ಬಯಕೆ ನೆರವೇರಬೇಕು. ತಪ್ಪಿದರೆ ನಿನಗೆ ಈ ಹುಡುಗ ಸಿಗುವುದಿಲ್ಲ” ಎಂದು ಹೇಳಿ ಹುಡುಗನನ್ನು ಎತ್ತಿಕೊಂಡು ಹೋಗಿಯೇಬಿಟ್ಟಿತು.  ಸೂಸಾನ್‌ ತಮ್ಮನಿಗಾಗಿ ಗೊಳ್ಳೋ ಎಂದು ಅತ್ತಳು. ಆನೆಯೊಂದಿಗೆ ಹೋರಾಡುವ ದೊಡ್ಡವರನ್ನು ಹುಡುಕಿಕೊಂಡು ಹೊರಟಳು. ಎದುರಿಗೆ
ಒಂದು ನಾಯಿಮರಿ ಬರುತ್ತ ಇತ್ತು. ದಿನವೂ ತನ್ನ ಊಟದಲ್ಲಿ ಅವಳು ಅದಕ್ಕೆ ಒಂದು ಪಾಲನ್ನು ಕೊಡುತ್ತಿದ್ದಳು. “”ಏನಕ್ಕ, ತುಂಬ ದುಃಖದಲ್ಲಿ ರುವ ಹಾಗೆ ಕಾಣುತ್ತಿದೆ. ಏನಾಯಿತು?” ಎಂದು ನಾಯಿಬಾಲ ಬೀಸುತ್ತ ಕೇಳಿತು. ಸೂಸಾನ್‌ ಆನೆ ತನ್ನ ತಮ್ಮನನ್ನು ಹೊತ್ತುಕೊಂಡು ಹೋದ ಸಂಗತಿ ಹೇಳಿದಳು. “”ನಾಯಣ್ಣಾ, ನೀನು ಎಲ್ಲರಿಗಿಂತ ದೊಡ್ಡವನಲ್ಲವೆ? ಆನೆಯೊಂದಿಗೆ ಯುದ್ಧ ಮಾಡಿ ನನ್ನ ತಮ್ಮನನ್ನು ಬಿಡಿಸಿಕೊಂಡು ಬರಲು ಸಾಧ್ಯವೆ?” ಎಂದು ಕೇಳಿದಳು.

 ನಾಯಿ, “”ನನ್ನಂಥ ಸಮರ್ಥನಿಗೆ ಆನೆ ಯಾವ ಲೆಕ್ಕ? ತೋಳು ತಟ್ಟಿ ನಾನು ಯುದ್ಧಕ್ಕೆ ಇಳಿಯುವ ಅಗತ್ಯವೇ ಇಲ್ಲ. ಏರು ಶ್ರುತಿಯಲ್ಲಿ ಬೊಗಳಿದರೆ ಸಾಕು, ಆನೆ ಹಾಗಿರಲಿ, ಸಿಂಹ ಕೂಡ ನಿಲ್ಲಲಿಕ್ಕಿಲ್ಲ, ಬಾಲ ಮಡಚಿ ಓಡುತ್ತದೆ. ಆದರೆ ಈಗ ಏನಾಗಿದೆಯೆಂದರೆ ನನಗೆ ವಿಪರೀತ ಶೀತವಾಗಿ ಗಂಟಲು ಕಟ್ಟಿಕೊಂಡಿದೆ. ನೀನು ಬೇರೆ ಯಾರಲ್ಲಿಯಾದರೂ
ಸಹಾಯ ಕೇಳು ಆಗದೆ?” ಎಂದು ಜಾಗ ಖಾಲಿ ಮಾಡಿತು. ಸೂಸಾನ್‌ ಮುಂದೆ ಬಂದಳು.

ದಾರಿಯಲ್ಲಿ ಒಂದು ದೊಡ್ಡ ಬಂಡೆ ಇತ್ತು. ಬೇಸಿಗೆಯ ರಣರಣ ಬಿಸಿಲಿಗೆ ಅದಕ್ಕೆ ತುಂಬ ಬಾಯಾರಿಕೆಯಾಗುತ್ತಿತ್ತು. ದಿನವೂ ಸೂಸಾನ್‌ ಒಂದು ಚೊಂಬು ನೀರು ತಂದು ಬಂಡೆಯ ಬುಡಕ್ಕೆ ಹೊಯಿದು ಅದರ ದಾಹ ತಣಿಸುತ್ತಿದ್ದಳು.
ಬಂಡೆ ಅವಳ ಕಂದಿದ ಮುಖ ಕಂಡು, “”ಏನಾಗಿದೆ ನಿನಗೆ? ಮುಖ ಯಾಕೆ ಬಾಡಿದೆ?” ಎಂದು ಕೇಳಿತು. ಆನೆ ತನ್ನ ತಮ್ಮನನ್ನು ಕೊಂಡುಹೋದ ಸಂಗತಿ ಹೇಳಿದ ಸೂಸಾನ್‌, “”ನೀನು ಗಟ್ಟಿಯಾದ ಮೈಯಿರುವವನು. ಆನೆಯೊಂದಿಗೆ ಹೋರಾಡಿ ನನ್ನ ತಮ್ಮನನ್ನು ಪಾರು ಮಾಡು” ಎಂದು ಕೇಳಿಕೊಂಡಳು. ಬಂಡೆ ನಿಟ್ಟುಸಿರುಬಿಟ್ಟಿತು. “”ನೀನು
ಹೇಳುವುದು ಸರಿ. ಆನೆಯನ್ನು ಸೋಲಿಸುವ ದೇಹಬಲವೂ ನನಗಿದೆ. ಆದರೆ ನಡೆದಾಡಿಕೊಂಡು ಅದರ ಬಳಿಗೆ ಹೋಗಲು ನನಗೆ ಕಾಲುಗಳಿಲ್ಲ. ಆನೆ ಇಲ್ಲಿಗೆ ಬಂದು ಯುದ್ಧ ಮಾಡುವುದಿದ್ದರೆ ನಾನು ಹೋರಾಟಕ್ಕೆ ಹಿಂಜರಿಯುವುದಿಲ್ಲ” ಎಂದು ಹೇಳಿತು.

 ಹೀಗೆ ಸೂಸಾನ್‌ ದೊಡ್ಡವರೆಂದು ಕಂಡುಬಂದ ಎಲ್ಲರ ಬಳಿಗೂ ಹೋದಳು. ಆನೆಯೊಂದಿಗೆ ಯುದ್ಧ ಮಾಡಿ ತಮ್ಮನನ್ನು ರಕ್ಷಿಸಬೇಕೆಂದು ಕೈ ಮುಗಿದು ಕೇಳಿಕೊಂಡಳು. ಆದರೆ ಅವಳ ನೆರವಿಗೆ ಒಬ್ಬರೂ ಬರಲಿಲ್ಲ. ನಿರಾಶಳಾಗಿ ಕುಳಿತಿರುವ ಅವಳ ಬಳಿಗೆ ಒಂದು ಜೇನ್ನೊಣ ಬಂದಿತು. “”ಯಾಕೆ ಸೂಸಾನ್‌, ಅಳುತ್ತ ಕುಳಿತಿರುವೆ?”
ಎಂದು ಕೇಳಿತು. “”ನಿನ್ನಲ್ಲಿ ಹೇಳಿದರೆ ಪ್ರಯೋಜನವಾದರೂ ಏನಿದೆ? ನೀನು ದೊಡ್ಡವನಾಗಿರುತ್ತಿದ್ದರೆ ನಿನ್ನಿಂದ ಉಪಕಾರ ಸಿಗುತ್ತಿತ್ತು. ಸಣ್ಣವ, ನಿನ್ನಿಂದೇನಾದೀತು?” ಎಂದು ಸೂಸಾನ್‌ ನಿರುತ್ಸಾಹದಿಂದ ಹೇಳಿದಳು. ಆಗ ಜೇನ್ನೊಣವು, “”ನೀನು ನನ್ನ ಜೀವದ ಗೆಳತಿ. ಎಷ್ಟೊಂದು ಹೂಗಳ ಗಿಡಗಳನ್ನು ನೆಟ್ಟು, ಸಾಕಿ ನನಗೆ ಜೇನು ತಯಾರಿಸಲು ಉಪಕಾರ ಮಾಡಿರುವ ನಿನ್ನನ್ನು ನಾನು ಮರೆಯುವುದುಂಟೆ? ಏನು ತೊಂದರೆಯಾಗಿದೆ ಹೇಳು” ಎಂದು ಒತ್ತಾಯಿಸಿ ಕೇಳಿತು.

 ಸೂಸಾನ್‌ ತನ್ನ ದುಃಖ ಹೇಳಿಕೊಂಡಳು. “”ನಿನ್ನಿಂದ ಏನಾದರೂ ಮಾಡಲು ಆಗುತ್ತದಾ?” ಕೇಳಿದಳು. ಜೇನ್ನೊಣ ನಕ್ಕಿತು. “”ನೋಡು, ಅಲ್ಲಿ ನನ್ನ ಅಷ್ಟು ದೊಡ್ಡ ಗೂಡಿದೆ. ಆನೆಯನ್ನು ಅಲ್ಲಿಗೆ ಕಳುಹಿಸು. ಆಮೇಲೆ ಏನಾಗುತ್ತದೋ ನೋಡು” ಎಂದಿತು. ಸೂಸಾನ್‌ ಆನೆಯ ಬಳಿಗೆ ಹೋದಳು. “”ನಿನ್ನೊಂದಿಗೆ ಹೋರಾಡಲು ದೊಡ್ಡವರು
ಸಿದ್ಧರಾಗಿದ್ದಾರೆ. ಅದೋ ಅಲ್ಲಿದ್ದಾರೆ ನೋಡು” ಎಂದು ಜೇನಿನ ಗೂಡನ್ನು ತೋರಿಸಿದಳು. ಆನೆ ಗೂಡಿನತ್ತ ನೋಡಿತು.
ಎತ್ತರದ ಮರದ ಕೊಂಬೆಯಿಂದ ನೆಲದ ತನಕ ಜೇನ್ನೊಣಗಳೆಲ್ಲವೂ ಒತ್ತೂತ್ತಾಗಿ ಕುಳಿತಿದ್ದವು. ಕಪ್ಪಗಿನ ಪರ್ವತದ ಹಾಗೆ ಆನೆಗೆ ಕಾಣಿಸಿತು. ಅದು ರೋಷದಿಂದ ಘೀಳಿಟ್ಟಿತು. ಸೊಂಡಿಲಿನಲ್ಲಿದ್ದ ಹುಡುಗನನ್ನು ಕೆಳಗಿಳಿಸಿತು. ರಭಸದಿಂದ ಹೋಗಿ ಜೇನಿನ ಗೂಡಿಗೆ ಸೊಂಡಿಲು ಹಾಕಿ ಎಳೆಯಿತು.

 ಮರುಕ್ಷಣವೇ ಸಾವಿರಾರು ಜೇನ್ನೊಣಗಳು “ಝೊಂಯ್‌’ ಎನ್ನುತ್ತ ಎದ್ದುಬಂದು ಆನೆಯ ಸೊಂಡಿಲು, ಕಣ್ಣು, ಮೂಗು ಒಂದನ್ನೂ ಬಿಡದೆ ಕಡಿದುಬಿಟ್ಟವು. ಆನೆಯ ಮೈ ಊದಿ ನಡೆಯಲಾಗದ ಹಾಗೆ ಆಯಿತು. ನೋವಿನಿಂದ ಅದು ದಿಕ್ಕು ಸಿಕ್ಕತ್ತ ಓಡಿಹೋಯಿತು. ನೊಣಗಳು ಬಲುದೂರದವರೆಗೂ ಅದನ್ನು ಬೆನ್ನಟ್ಟಿದವು. ಪ್ರಾಣಾಪಾಯದಿಂದ
ಪಾರಾಗಲು ಆನೆ ಒಂದು ದೊಡ್ಡ ನದಿಯ ನೀರಿನಲ್ಲಿ ಮುಳುಗಿ ಕುಳಿತಿತು. ಮತ್ತೆಂದೂ ಆ ಕಡೆಗೆ ಬರಲಿಲ್ಲ. ಯಾರಿಗೂ ಸವಾಲು ಹಾಕಲಿಲ್ಲ. ಸೂಸಾನ್‌ ಕೃತಜ್ಞತೆಯಿಂದ ಪುಟ್ಟ ಜೇನ್ನೊಣವನ್ನು ಅಪ್ಪಿ ಕೊಂಡಳು. “”ನಾವು ದೊಡ್ಡವರು ಎಂದು ದೇಹದ ಗಾತ್ರ ನೋಡಿ ಅವರಿಗೆ ಗೌರವ ತೋರಿಸುತ್ತೇವೆ. ಆದರೆ ನಮಗೆ ನೆರವಿಗೆ ಬರುವವರು ಸಣ್ಣವರು ಮಾತ್ರ” ಎಂದು ಅದನ್ನು ಹೊಗಳಿ ತಮ್ಮನನ್ನು ಕರೆದುಕೊಂಡು ಮನೆಯ ದಾರಿ ಹಿಡಿದಳು.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ