ಕನ್ನಡ ನಾಡುನುಡಿಯ ಪ್ರಶ್ನೆ

Team Udayavani, Sep 22, 2019, 5:45 AM IST

ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ, ಕಲಾವಿದರು ಕೆಲವರಿದ್ದರು. ಈಗ ಈ ಮಹನೀಯರು ಇಲ್ಲ. ಇವರ ಜಾಗ ತುಂಬುವ ಸಾಹಿತಿ, ಕಲಾವಿದರು ಕಂಡುಬರುತ್ತಿಲ್ಲ.

ಹಿಂದಿ ಭಾಷೆಯನ್ನು ಭಾರತದ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಲು ತುಂಬ ಪ್ರಯತ್ನ ನಡೆದಿರುವುದು ಕಾಣುತ್ತದೆ. ಉತ್ತರ ಭಾರತದ ರಾಜ್ಯಗಳಿಗೆ ಹಿಂದಿ ಹೇರಿಕೆಯನ್ನು ಮಾಡಿದರೆ ಆ ರಾಜ್ಯಗಳು ಸಹಿಸಿಕೊಳ್ಳಬಹುದು. ಆದರೆ, ಇದು ಸರಿಯಾದ ಕ್ರಮವಲ್ಲ. ಜನ ಭಾಷೆಯನ್ನು ಹತ್ತಿಕ್ಕಿ ಇನ್ನೊಂದು ಭಾಷೆಯನ್ನು ಹೇರಬಹುದು. ಅಧಿಕಾರ ಇದ್ದರೆ ಏನನ್ನಾದರೂ ಮಾಡಬಹುದು. ಆದರೆ, ಬಹುತ್ವವನ್ನು ನಾಶ ಮಾಡಿದಂತಾಗುತ್ತದೆ. ತಾಯಿ ಭಾಷೆ ಎಂದರೆ ಮನುಷ್ಯನ ಮನಸ್ಸು ಮತ್ತು ದೇಹದ ಭಾಗವಾಗಿರುವಂತಹದ್ದು. ಸಹಜವಾಗಿ ಉಡುವ ಬಟ್ಟೆಯನ್ನು ಬದಲಾಯಿಸಿ ಬೇರೊಂದು ಧರಿಸಲೂ ಕಷ್ಟವೇ. ದತ್ತವಾದ ಭಾಷೆಯ ಬದಲಿಗೆ ಬೇರೊಂದು ನುಡಿಯನ್ನು ಕಲಿಯುವುದು, ವ್ಯವಹರಿಸುವುದು ಯಾರಿಗೂ ಕಷ್ಟವೇ. ಅನಿವಾರ್ಯ ಸಂದರ್ಭದಲ್ಲಿ ಕಲಿಯಬಹುದು. ವ್ಯವಹರಿಸಬಹುದು. ಆದರೆ ಸಹಜತೆ ಇರುವುದಿಲ್ಲ.

ಇನ್ನು ಹಿಂದಿ ಭಾಷೆಯನ್ನು ದಕ್ಷಿಣ ಭಾರತದಲ್ಲಿರುವ ದ್ರಾವಿಡ ಭಾಷಾ ರಾಜ್ಯಗಳಿಗೆ ಹೇರುವುದನ್ನು ಇಲ್ಲಿಯ ಜನ ಒಪ್ಪಲಾರರು. ಈಗಾಗಲೇ ತೆಲುಗು, ಕನ್ನಡ, ತಮಿಳು, ಮಲೆಯಾಳ ಭಾಷೆಯನ್ನಾಡುವ ರಾಜ್ಯಗಳೂ, ಜನರೂ ಹಿಂದಿ ಹೇರಿಕೆಯನ್ನು ನಿರಾಕರಿಸಿವೆ. ಹೋರಾಟಕ್ಕೂ ಸಿದ್ಧವಾಗಿವೆ. ಈ ರಾಜ್ಯಗಳ ಪ್ರಾದೇಶಿಕ ಬಾಷಿಕರು ಹಿಂದಿ ಭಾಷೆಯ ಹೇರಿಕೆಯನ್ನು ಉಗ್ರವಾಗಿ ಖಂಡಿಸುತ್ತಾರೆ. ಕರ್ನಾಟಕ ರಾಜ್ಯವು ಸ್ವಾತಂತ್ರ್ಯಪೂರ್ವದಲ್ಲಿ 22 ಭಾಗಗಳಲ್ಲಿ ಹಂಚಿಹೋಗಿತ್ತು.

ನೇರವಾಗಿ ಬ್ರಿಟಿಷರ ಅಧೀನದಲ್ಲಿ ಕೆಲವು ಭಾಗಗಳಿದ್ದವು. ಅನೇಕ ಸಂಸ್ಥಾನಗಳು ಬ್ರಿಟಿಷರ ಅಧೀನದಲ್ಲಿದ್ದರೂ ಗಡಿಯ ಸಂಸ್ಥಾನಗಳಲ್ಲಿ ದ್ವಿಭಾಷೆಗಳು ಚಾಲ್ತಿಯಲ್ಲಿದ್ದರೂ ಕನ್ನಡ ನುಡಿಗರು ಜಾಗೃತವಾಗಿದ್ದರು. ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ನಿಜಾಮ್‌ ಆಡಳಿತವಿದ್ದ ಕಾರಣ ಉರ್ದು ಭಾಷೆಯ ಪ್ರಾಬಲ್ಯವಿತ್ತು. ಹೈದರಾಬಾದ್‌ ಸಂಸ್ಥಾನವು, ಅಲ್ಲಿನ ನಿಜಾಮ್‌ ಆಡಳಿತವು, ಉರ್ದು ಭಾಷೆಯನ್ನೇ “ದೇಶಭಾಷೆ’ ಎಂದು ಘೋಷಿಸಿತ್ತು. ಆಡಳಿತ ಭಾಷೆಯಾಗಿ, ಶಿಕ್ಷಣದ ಭಾಷೆಯಾಗಿ ಉರ್ದುವನ್ನು ಬಲಪಡಿಸಲು ರಾಜಕೀಯ ಇಚ್ಛಾಶಕ್ತಿಯನ್ನುಳ್ಳ ವ್ಯವಸ್ಥೆಯೇ ನಿರ್ಮಾಣವಾಗಿತ್ತು. ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದರು. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಜನರು ಬಗ್ಗುವರು. ಉರ್ದುವನ್ನು ಕಲಿತು ಚಾಕರಿ ಮಾಡಲು ಸಿದ್ಧರಾಗುತ್ತಿದ್ದರು. ಆದರೆ, ದೇಶಭಾಷೆ ದತ್ತವಾಗಿರುತ್ತದೆ. ಅಂತಹವರ ಸೃಜನಶೀಲತೆಯನ್ನು ನಾಶಮಾಡಿದಂತಾಗುತ್ತದೆ. ಆಳುವ ಸರಕಾರವು ತನ್ನ ಉಪಯೋಗವನ್ನು ಮಾತ್ರ ಧ್ಯಾನಿಸಬಾರದು. ಜನಭಾಷೆಯ ಮಹತ್ವವನ್ನು ತಿಳಿದು ಅದಲ್ಲಿ ಕಲಿಯಲು, ವ್ಯವಹರಿಸಲು ಅನುವು ಮಾಡಿಕೊಡಬೇಕು.

ನಮ್ಮ ಕರ್ನಾಟಕ ರಾಜ್ಯವನ್ನೇ ತೆಗೆದುಕೊಳ್ಳಿ. ಮೂವ್ವತ್ತಕ್ಕೂ ಹೆಚ್ಚು ಜಿಲ್ಲೆಗಳನ್ನು ಕರ್ನಾಟಕ ರಾಜ್ಯ ಹೊಂದಿದೆ. ಕರ್ನಾಟಕದ ಉತ್ತರ, ಕರ್ನಾಟಕದ ದಕ್ಷಿಣ ಭಾಗಗಳು ಮೇಲುನೋಟಕ್ಕೆ ಭಿನ್ನವಾಗಿವೆ ಎಂದು ಅನ್ನಿಸುತ್ತದೆ. ಸಮಸ್ಯೆಗಳು, ಜನರ ಮನೋಭಾವಗಳೂ ಭಿನ್ನವಾಗಿವೆ. ನೀರಿನ ಗುಣ, ಮಣ್ಣಿನ ಗುಣ, ಆಹಾರದ ಬೆಳೆಗಳ ಗುಣ ಎಲ್ಲ ಬೇರೆ ಬೇರೆಯಾಗಿದೆ. ಊಟ, ಉಡುಗೆ, ನುಡಿ, ಆಚರಣೆಗಳೂ ಭಿನ್ನವಾಗಿರುವುದು ನಮಗೆಲ್ಲ ಗೊತ್ತಿದೆ. ಇದು ಹೆಮ್ಮೆಯ ವಿಷಯ. ಬಹುತ್ವದ ಗುಣವಿದು.

ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಹೇರುವುದರಿಂದ ಬಹುತ್ವ ನಾಶವಾಗುತ್ತದೆ. ಕರ್ನಾಟಕದ ಉತ್ತರ ಭಾಗದ ಎಲ್ಲ ಜಿಲ್ಲೆಗಳ ಆಡುನುಡಿ ಬೇರೆ ಬೇರೆಯಾಗಿದೆ. ಹಿಂದಿಯನ್ನು ಉತ್ತರ ಕರ್ನಾಟಕದ ಉರ್ದು ಭಾಷೆ ಚಾಲ್ತಿಯಲ್ಲಿರುವ ಜನರು ಸಹಿಸಿಯಾರು. ಕರ್ನಾಟಕದ ದಕ್ಷಿಣ ಭಾಗದ ಜನರಿಗೆ ಹಿಂದಿ ಭಾಷೆ ಗೊತ್ತಿಲ್ಲ. ಹಿಂದಿ ಸಿನೆಮಾಗಳನ್ನು ನೋಡಬಹುದು. ಆದರೆ, ಪ್ರಾದೇಶಿಕತೆಯನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಬೀದರ್‌, ಕಲಬುರಗಿ, ಯಾದಗಿರಿ, ವಿಜಾಪುರ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ ಜಿಲ್ಲೆಗಳ ಆಡುನುಡಿಯಲ್ಲಿ ದಟ್ಟ ವ್ಯತ್ಯಾಸಗಳಿವೆ. ಆಡಳಿತ ಭಾಷೆಯಾಗಿ ಏಕರೂಪಿ ಕನ್ನಡ ಚಾಲ್ತಿಯಲ್ಲಿದ್ದರೂ ಯಾರೂ ಅದನ್ನೇ ಉಸಿರಾಡುತ್ತಿಲ್ಲ. ಉಸಿರಾಡುವುದು ಸ್ಥಳೀಯ ಕನ್ನಡ ಪ್ರಭೇದಗಳನ್ನೇ.

ಸಾಹಿತ್ಯ ರಚನೆಯಾಗುತ್ತಿರುವುದು ಕೂಡ ಸ್ಥಳೀಯ ಆಡುನುಡಿಯಲ್ಲಿಯೇ. ಹೈದರಾಬಾದ್‌ ಸಂಸ್ಥಾನವು ತನ್ನ ಅಧೀನದ ಪ್ರದೇಶಗಳಲ್ಲಿ ಉರ್ದುವನ್ನು ದೇಶಭಾಷೆ ಎಂದು ಚಾಲ್ತಿಗೆ ತಂದ ಪರಿಣಾಮವಾಗಿ ಹೈದರಾಬಾದ್‌ ಕರ್ನಾಟಕದಲ್ಲಿ ಆಧುನಿಕ ಕನ್ನಡ ಸಾಹಿತ್ಯವು ಕುಂಟುತ್ತ ಬೆಳೆಯಿತು. ಲಿಖೀತ ಭಾಷೆಯಾಗಿ ಕನ್ನಡವೇ ಇರಲಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದಲ್ಲಿ ಸಾಹಿತ್ಯ ರಚನೆಯಾದದ್ದು ಸ್ವಾತಂತ್ರಾéನಂತರದಲ್ಲಿ. ಇನ್ನೂ ಬಲಗೊಳ್ಳುವ ಹಂತದಲ್ಲಿದೆ. ಹೀಗಿರುವಾಗ, ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಮಾಡುವುದರಿಂದ ಸಾಹಿತ್ಯ, ಸಂಸ್ಕೃತಿ ಮೇಲೆ ಸವಾರಿ ಮಾಡಿದಂತಾಗುತ್ತದೆ. ಬಹುತ್ವ ನಾಶವಾಗುತ್ತದೆ. ಸಾಹಿತ್ಯ, ಕಲೆ ಚಿಗುರುವುದಿಲ್ಲ. ಕನ್ನಡ ಜನರು ಆಡುಮಾತಿನ ನುಡಿಯಲ್ಲಿ ವ್ಯವಹರಿಸುತ್ತಾರೆ. ಆಡಳಿತ ಭಾಷೆಯಾದ ಗ್ರಾಂಥಿಕ ನುಡಿಯಲ್ಲಿ ತಕ್ಕಮಟ್ಟಿಗೆ ಕನ್ನಡ ಕಲಿತವರಿಗೇ ತೊಂದರೆಯಾಗುತ್ತದೆ. ಇನ್ನು ಬ್ಯಾಂಕ್‌, ರೈಲ್ವೆ, ಅಂಚೆ ಕಚೇರಿ, ಕೋರ್ಟುಗಳಲ್ಲಿ ಜನರಿಗೆ ವ್ಯವಹಾರ ಮಾಡಲು ಕಷ್ಟಪಡುತ್ತಾರೆ. ಹೀಗಿರುವಾಗ, ಹಿಂದಿ ನುಡಿಯಲ್ಲಿ ಅರ್ಜಿಗಳು ಚಾಲ್ತಿಗೆ ಬಂದರೆ ಗತಿ ಏನಾಗಬಹುದು? ಈಗ ಶಿಕ್ಷಣದಲ್ಲಿ ಇಂಗ್ಲಿಶ್‌ ಭಾಷೆಯನ್ನು ಆರಂಭಿಕ ಹಂತದಲ್ಲಿ ತಂದಿರುವುದೇ ಮಹಾ ಅಪರಾಧವಾಗಿದೆ. ರಾಜ್ಯ ಭಾಷೆಗಳೇ ಅಂತಿಮವಾಗಬೇಕು. ಸ್ವಇಚ್ಛೆಯಿಂದ ಯಾವ ಭಾಷೆಯನ್ನಾದರೂ ಜನರು ಕಲಿಯಬಹುದು.

ಬಿಕ್ಕಟ್ಟುಗಳು ಬಂದಾಗ…
ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಗೋಕಾಕ್‌ ಚಳುವಳಿಯನ್ನೇ ನೆನೆ ನೆನೆದು ಸುಖೀಸುವ ವ್ಯಕ್ತಿಗಳು ಉಳಿದಿದ್ದಾರೆ. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ ಕಲಾವಿದರು ಕೆಲವರಿದ್ದರು. ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದರು. ಒಂದಷ್ಟು ಸಂಚಲನೆ ಕಾಣುತ್ತಿತ್ತು. ಈಗ ಈ ಮಹನೀಯರು ಇಲ್ಲ. ಇವರ ಜಾಗ ತುಂಬುವ ಸಾಹಿತಿ, ಕಲಾವಿದರು ಕಂಡುಬರುತ್ತಿಲ್ಲ. ಇರುವ ಕೆಲವರು ಸುರಕ್ಷಿತ ವಲಯದಲ್ಲಿದ್ದು ತಮ್ಮ ಹಿತ ನೋಡಿಕೊಳ್ಳುತ್ತಿದ್ದಾರೆ.

ಅಷ್ಟಾಗಿ ಈಗ ಪ್ರಭುತ್ವಗಳು ಬುದ್ಧಿವಂತರನ್ನೇ ಗೇಲಿ ಮಾಡುತ್ತಿವೆ. ಬರಹ, ಪ್ರತಿಕ್ರಿಯೆಗಳಿಗೆ ತಲೆಬಾಗಿಸುವ ರಾಜಕಾರಣಿಗಳೇ ಇಲ್ಲವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ, ಬೌದ್ಧಿಕತೆಯನ್ನೇ ಲೆಕ್ಕಿಸದ ಪ್ರಭುತ್ವಗಳು ಆಳ್ವಿಕೆಗೆ ಬಂದಿವೆ. ಇಂಥ ಕಾಲದಲ್ಲಿ ಚಳುವಳಿಗೆ ಕಾವು ಬರಬೇಕಿತ್ತು. ಬದಲಾಗಿ ಕಾವು ಮಾಯವಾಗಿದೆ. ಹಿಂದಿ ಹೇರಿಕೆಯಿಂದ ಈಗಾಗಲೇ ಪಾರ್ಲಿಮೆಂಟಿನಲ್ಲಿ ನಮ್ಮ ಸಂಸದರು ಏನೊಂದು ಮಾತಾಡದೆ, ಪ್ರಶ್ನೆ ಕೇಳದೆ ಬರೀ ಕುಂತು ಬಂದದ್ದಿದೆ. ಹೊರರಾಜ್ಯದ ರಾಜಕಾರಣಿಗಳು ನಮ್ಮ ಕರ್ನಾಟಕಕ್ಕೆ ಬಂದು, ವೇದಿಕೆ ಮೇಲೆ ಕೈಮುಗಿದು ನಿಂತು “ನಿಮಗೆ ನಮಸ್ಕಾರ’ ಎಂಬ ಕನ್ನಡದ ಒಂದೆರಡು ಪದಗಳನ್ನು ಅವರ ಬಾಯಿಯಿಂದ ಕೇಳಿದ್ದೇ ತಡ ಸಿಳ್ಳೆ, ಚಪ್ಪಾಳೆ ಹಾಕುವ ನಾವು, ನಂತರ ಅವರ ಹಿಂದಿ ಭಾಷೆಯ ಮಾತು ಕೇಳುತ್ತ ಕೂಡುತ್ತೇವೆ, ಕಿವಿ ಮುಚ್ಚಿಕೊಂಡು ಕೂಡುವ ಬದಲು ಈ ಸಹನೆ ಇರಲಿ. ಆದರೆ, ನಮ್ಮ ನಾಡಿನಲ್ಲಿ ನಾವು ಹಿಂದಿ ಭಾಷೆಗೆ ಮನ್ನಣೆ ನೀಡುವುದರಿಂದ ತಾಯಿನುಡಿಗೆ ಒದಗುವ ಅಪಮಾನ ಸಹಿಸಬಾರದು. ಇಂಗ್ಲಿಶ್‌ ಒಳಗೆ ಬಿಟ್ಟುಕೊಂಡ ಪರಿಣಾಮವನ್ನು ಉಂಡಿದ್ದೇವೆ. ಈಗಲಾದರೂ ನಾವು ಹಿಂದಿಯನ್ನು ವಿರೋಧಿಸಲು ಸಜ್ಜಾಗಬೇಕು. ಮಗುವಿನ ಕಲಿಕೆ ಕನ್ನಡ ದಲ್ಲಿ ಆರಂಭವಾಗಬೇಕು ಎಂಬ ಬಗ್ಗೆ ಹೋರಾಟ ಶುರುವಾಗಬೇಕು. ಹತ್ತನೆಯ ತರಗತಿವರೆಗೆ ಕಲಿಸುವ ಶಾಲೆಗಳು ಸರ್ಕಾರದ ಅಧೀನದಲ್ಲಿರಬೇಕು. ಲೇಖನಕ್ಕೆ, ಪ್ರತಿಕ್ರಿಯೆಗೆ ಪ್ರಭುತ್ವಗಳು ಮನ್ನಣೆ ನೀಡುವ ಕಾಲವಿದಲ್ಲ. ಚಳುವಳಿಯೊಂದೇ ದಾರಿ.

ಅಮರೇಶ ನುಗಡೋಣಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ