ಕಳೆದು ಹೋದ ಸೆಪ್ಟೆಂಬರ್‌ 5ರ ನೆಪದಲ್ಲಿ ಕಲಿಸಿದವರ ನೆನಪು

Team Udayavani, Sep 8, 2019, 5:30 AM IST

ವಾರ್ತೆ ಮುಗಿದು ಆಕಾಶವಾಣಿಯ ಚಿತ್ರಗೀತೆಗಳು ಶುರುವಾಗುತ್ತಿದ್ದಂತೆ ತಡವಾಯಿತು ಎಂದು ಅಡ್ಡಸೆರಗು ಹಾಕಿಕೊಂಡು ಭರಭರನೆ ಶಾಲೆಗೆ ಹೊರಟುಬಿಡುತ್ತಿದ್ದರು ಅಮ್ಮ. ನಾನು ಹಾಸಿಗೆ ಬಿಟ್ಟು ಓಣಿಗೆ ಓಡಿ ಬರುತ್ತಿದ್ದಂತೆ ಅದಾಗಲೇ ತಿರುವಿನಲ್ಲಿರುತ್ತಿದ್ದರು. ನನ್ನ ಕೂಗಿಗೆ ತಿರುಗಿ ನೋಡಿದರೆಲ್ಲಿ ಕ್ಷಣಗಳು ಜಾರಿಬಿಡುತ್ತವೆಯೋ ಎಂದು ಬೆನ್ನ ಹಿಂದೆ ಕೈಬೀಸಿ ನಡೆದುಬಿಡುತ್ತಿದ್ದರು. ನಡುಮನೆಯಲ್ಲಿ ಬಣ್ಣ-ಕ್ಯಾನ್ವಾಸಿನ ಮುಂದೆ ಕುಳಿತಿರುತ್ತಿದ್ದ ಅಪ್ಪಾಜಿಯ ತೊಡೆಮೇಲೆ ತಲೆ ಇಟ್ಟು ಇನ್ನೂ ಸ್ವಲ್ಪ ಹೊತ್ತು ಬೆಚ್ಚಗೆ ಮಲಗಬೇಕೆನ್ನಿಸುತ್ತಿತ್ತು. ಆದರೆ, ಗಡಿಯಾರ ನೋಡಿದವರೇ ಅವರು ನನ್ನನ್ನು ಬಚ್ಚಲುಮನೆಗೆ ಓಡಿಸಿಕೊಂಡು ಹೋಗಿಬಿಡುತ್ತಿದ್ದರು. ಅಷ್ಟೇ ವೇಗದಲ್ಲಿ ಮನೆಗೆ ಬಂದ ದೊಡ್ಡ ಕ್ಲಾಸಿನ ಒಂದಿಬ್ಬರು ಹುಡುಗಿಯರು ಅಕ್ಕರೆಯಿಂದ ಶಾಲೆಗೆ ಕರೆದೊಯ್ದುಬಿಡುತ್ತಿದ್ದರು. ಅಮ್ಮನ ಶಾಲೆ ಎಂಟರಿಂದ ಹನ್ನೊಂದು-ಎರಡರಿಂದ ಐದು. ಅಪ್ಪಾಜಿ ಶಾಲೆ ಹನ್ನೊಂದರಿಂದ ಐದು. ಹಾಗಾಗಿ ನಾವು ಮೂವರು ಮಕ್ಕಳೂ ಕೂಸಿದ್ದಾ
ಗಿನಿಂದಲೇ ಶಾಲೆಗಂಟಿಕೊಂಡವರು.

ಎಷ್ಟೋ ಸಲ ನಾನು ಶಾಲೆಗೆ ಬರುವ ಹೊತ್ತಿಗೆ ಪ್ರಾರ್ಥನೆ ಮುಗಿದುಬಿಟ್ಟಿರುತ್ತಿತ್ತು. ಆಗ ನಿಧಾನಕ್ಕೆ ಒಂದೊಂದೇ ಕ್ಲಾಸಿನ ಬಾಗಿಲಿಗೆ ಮರೆಯಾಗಿ ನಿಂತು, ಒಳಗೆ ಹೊಸ ಪಾಠವೇನಾದರೂ ನಡೆಯುತ್ತಿದೆಯಾ? ಎಂದು ಕಿವಿಗೊಡುತ್ತಿದ್ದೆ. ಇಷ್ಟವಾದರೆ ಮುಗಿಯಿತು, ನಾನು ಆ ತರಗತಿಯವಳೇ ಎನ್ನುವಂತೆ ಆರಾಮಾಗಿ ಕುಳಿತುಬಿಡುತ್ತಿದ್ದೆ
. ಹಾಗಾಗಿ, ಒಂದೇ ನೋಟುಬುಕ್ಕಿನಲ್ಲಿ ಒಂದರಿಂದ ನಾಲ್ಕನೇ ಕ್ಲಾಸಿನತನಕವೂ ನೋಟ್ಸ್‌ ಇರುತ್ತಿದ್ದವು. ಆದರೂ ನನ್ನ ಗೆಳತಿಯರ ಬಳಿ ಇರುತ್ತಿದ್ದ, ಕ್ಷಣಕ್ಷಣಕ್ಕೂ ಅಳಿಸಿ ಬರೆಯಬಹುದಾದ ಸ್ಲೇಟೆಂಬ ಆ ಪುಟ್ಟ ಕಪ್ಪು ಮಾಯಕದ ಬಗ್ಗೆಯೇ ಹೆಚ್ಚು ಸೆಳೆತವಿರುತ್ತಿತ್ತು. ಆಗ ಹೊಸತು ಎನ್ನಿಸಿಕೊಂಡಿದ್ದ ಬಣ್ಣದ ಪ್ಲಾಸ್ಟಿಕ್‌ ಚೌಕಟ್ಟುಳ್ಳ, ಹಗೂರವಾದ, ಬೀಸಿ ಒಗೆದರೂ ಮಣಿಸಿದರೂ ಮುರಿಯದ ಮತ್ತು ಬಲು ಬೇಗ ಎದೆಯುಬ್ಬಿಸಿಕೊಂಡು ನಿಲ್ಲುತ್ತಿದ್ದ ತಗಡು-ರಟ್ಟಿನ ಸ್ಲೇಟುಗಳು ಯಾಕೋ ಹಿಡಿಸುತ್ತಿರಲೇ ಇಲ್ಲ. ಆದರೆ, ಕಟ್ಟಿಗೆಯ ಚೌಕಟ್ಟಿನ, ವಜನುಳ್ಳ, ತಂಪುಳ್ಳ, ನುಣಪುಳ್ಳ ಎಚ್ಚರತಪ್ಪಿ ಕೈಬಿಟ್ಟಾಗಲೂ ಚೂರುಗಳನ್ನು ನೆಲಕ್ಕಂಟಿಸಿಕೊಂಡೇ ಇರುತ್ತಿದ್ದ ಕಲ್ಲಿನ ಸ್ಲೇಟುಗಳು ಹೆಚ್ಚು ಆಪ್ತವೆನ್ನಿಸುತ್ತಿದ್ದವು. ನೋಟುಬುಕ್ಕಿನಂತೆ ನನ್ನ ಸ್ವಂತದ ಲಿಸ್ಟಿಗೆ ಕಲ್ಲಿನ ಸ್ಲೇಟು ಸೇರಿಬಿಟ್ಟಿದ್ದರೆ ಹೀಗಿಲ್ಲಿ ಅದು ತೇವ ಕಾಯ್ದುಕೊಳ್ಳುತ್ತಿರಲಿಲ್ಲವೇನೋ.

ಒಂದು ದಿನ ನಾನು ಅಪರೂಪಕ್ಕೆ ನನ್ನದೇ ತರಗತಿ (ಒಂದನೆಯ ತರಗತಿ) ಯಲ್ಲಿ ಕುಳಿತುಕೊಂಡಿದ್ದೆ ಎನ್ನುವುದಕ್ಕಿಂತ ಕಪ್ಪು ಹಲಗೆ ಮೇಲೆ ಸಾವಿತ್ರಿ ಟೀಚರ್‌ ಬರೆದ ಬಳ್ಳಿಗಳು ಹಿಡಿದು ಕೂರಿಸಿದ್ದವು ಎನ್ನಬಹುದು. ಮೊದಲು ಅವರು “ಕ’ ಬಳ್ಳಿ ಬರೆದಾಗ ನನಗದು ಒಂದರ ಪಕ್ಕ ಒಂದು ಜಿಲೇಬಿ ಜೋಡಿಸಿಟ್ಟಂತೆ ಕಂಡು ಇದ್ಯಾವುದೋ ಕಠಿಣ ಪಾಠ ಎಂದು ಕಳವಳ ಉಂಟುಮಾಡಿತ್ತು. ಅಷ್ಟೇ ಅಲ್ಲ , ಕ್ಲಾಸಿಗೆ ಕ್ಲಾಸೇ ಪಟಪಟನೆ ಬಳ್ಳಿ ಬರೆದು ಹತ್ತು ಸಲ ಕೋರಸ್‌ನಲ್ಲಿ ಹುಮ್ಮಸ್ಸಿನಿಂದ ಪಠಿಸಿ, ನಂತರ ಒಬ್ಬೊಬ್ಬರೇ ಎದ್ದು ಆತ್ಮವಿಶ್ವಾಸದಿಂದ ಓದಿದಾಗಲಂತೂ ಕುಸಿದೇಬಿಟ್ಟಿದ್ದೆ. ಏಕೆಂದರೆ, ಏನು ಮಾಡಿದರೂ ಅಲ್ಲಿದ್ದ ಎರಡು ತಾಸು ನನಗೆ ಬಳ್ಳಿ ಬರೆಯಲು, ಅವರ ಕಂಠ ಅನುಕರಿಸಲು ಕೈಯೂ ತಿರುಗಿರಲಿಲ್ಲ, ಧ್ವನಿಯೂ ಹೊರಡಿರಲಿಲ್ಲ. ಅವರಿಗೆಲ್ಲ ಅಷ್ಟೊಂದು ಸಲೀಸಾಗಿರುವ ಬಳ್ಳಿ ನನಗೆ ಹೇಗೆ ತೊಡಕಾಯಿತು ಎಂದು ಕಿಟಕಿಯಾಚೆ ಚಾಚಿದ್ದ ಕುಂಬಳ, ಅವರೆ ಬಳ್ಳಿಯನ್ನೇ ನೋಡುತ್ತ ಕುಳಿತುಬಿಟ್ಟಿದ್ದೆ.

ನಂತರ ಮನೆಗೆ ಬಂದು ಕೋಪದಿಂದ ಅಪ್ಪ-ಅಮ್ಮನಿಗೆ, “ನೀವು ನನಗ್ಯಾಕೆ ಬಳ್ಳಿ ಕಲಿಸಲಿಲ್ಲ?’ ಎಂದಾಗ, “ನೀನು ನೇರವಾಗಿ ಶಬ್ದ, ವಾಕ್ಯ ಬರೆಯಲು ಕಲಿತೆಯಲ್ಲ , ಹಾಗಾಗಿ…’ ಎಂದಿದ್ದರು ಶಾಂತವಾಗಿ. ಮನಸ್ಸು ಸೆಳೆದ ತರಗತಿಯತ್ತ ಓಡಾಡಿಕೊಂಡಿರುತ್ತಿದ್ದದ್ದು ಅಭ್ಯಾಸವಾಗಿದ್ದರಿಂದ, ಅಪ್ಪ-ಅಮ್ಮನೂ ಹೆಚ್ಚಿನ ಪಾಠ ಹೇಳಿಕೊಡುತ್ತಿದ್ದರಿಂದ ಮತ್ತು ಇನ್ನೂ ಒಬ್ಬರು ಮನೆಪಾಠಕ್ಕೆಂದು ಬರುತ್ತಿದ್ದುದರಿಂದ ಶಾಲೆಯಲ್ಲಿ ಆಗಾಗ ಇಂಥ ಮಿಸ್ಸಿಂಗ್‌ ಲಿಂಕ್‌ಗಳು ನಡೆದು ಸಣ್ಣ ಕಣವೂ ನನ್ನೊಳಗೆ ಬೆಟ್ಟವಾಗಿಬಿಡುತ್ತಿತ್ತು. ಕ್ರಮೇಣ ಅಪ್ಪಾಜಿ ಭಯಕ್ಕೆ ಇಂಥವನ್ನೆಲ್ಲ ಪ್ರಶ್ನಿಸುವುದನ್ನೂ ಬಿಟ್ಟೆ ಎನ್ನುವುದಕ್ಕಿಂತ ಆ ಪ್ರಶ್ನೆ, ಗೊಂದಲಗಳ ಜಾಗವನ್ನೆಲ್ಲ ಸಂಗೀತ ಕಲಿಕೆ, ಇತರೆ ಓದು ಆವರಿಸಿಕೊಂಡು ಬೇರೊಂದು ಲೋಕವನ್ನು ಸೃಷ್ಟಿಸುತ್ತ ಹೋದವು.

ಮುಂದೆ ನಮ್ಮೂರಲ್ಲಿ ಕಾಲೇಜಿದ್ದರೂ ಸಂಗೀತ ಮತ್ತು ಇನ್ನೂ ಒಳ್ಳೆಯ ಶಿಕ್ಷಣಕ್ಕಾಗಿ ಐದನೆಯ ತರಗತಿಗೆ ಧಾರವಾಡಕ್ಕೆ ಸೇರಿಸಿಬಿಟ್ಟರು. ಆಗೆಲ್ಲ ದೊಡ್ಡವಾಡದಿಂದ ಧಾರವಾಡಕ್ಕೆ ದಿನವೂ ಬಸ್ಸಿನಲ್ಲಿ ಓಡಾಡುತ್ತ, ನಗರದ ನಡೆವಳಿಕೆಗಳಿಗೆ ಒಗ್ಗಿಕೊಳ್ಳಲಾಗದೆ ಮೌನದಲ್ಲೇ ಒದ್ದಾಡಹತ್ತಿದೆ. ಶಾಲೆಯಲ್ಲಿ ಕೆಲವೊಮ್ಮೆ ಅಳು ಬಂದುಬಿಡುತ್ತಿತ್ತು.

ಆಗೆಲ್ಲ ನಾನಿದ್ದ ಜಾಗಕ್ಕೇ ಬಂದು ನನ್ನನ್ನು ಎತ್ತಿಕೊಂಡು ಥೇಟ್‌ ಅಮ್ಮನಂತೆ ರಮಿಸಿ ಕಪ್ಪು ಹಲಗೆಯ ಬಳಿ ನಿಲ್ಲಿಸಿ ಹಾಡಿಸಿ ಹಗೂರಗೊಳಿಸುತ್ತಿದ್ದರು ನಮ್ಮ ಇಂಗ್ಲಿಷ್‌-ವಿಜ್ಞಾನದ ಶ್ರೀಧರ ಕಡಕೋಳ ಸರ್‌, ಮುಂದೊಂದು ದಿನ ಹಾರ್ಮೋನಿಯಂ ನುಡಿಸುತ್ತೇನೆನ್ನುವುದೂ ಗೊತ್ತಾಗಿ, ಪ್ರತೀದಿನದ ಪ್ರಾರ್ಥನೆಗೆ ಹಾರ್ಮೋನಿಯಂ ನುಡಿಸುವ ಜವಾಬ್ದಾರಿಯನ್ನೂ ವಹಿಸಿಬಿಟ್ಟರು. ಅದಾಗಲೇ ತಿಂಗಳಿಗೆ ಏನಿಲ್ಲವೆಂದರೂ ನಾಲ್ಕೈದು ಸಂಗೀತ ಕಛೇರಿಗಳನ್ನು ಕೊಡುವುದು ಮಾಮೂಲಾಗಿತ್ತು, ಜೊತೆಗೆ ಪತ್ರಿಕೆಗಳಲ್ಲಿ ಅದು ಪ್ರಕಟವಾಗುವುದೂ.

ಹೀಗಿರುವಾಗಲೇ ಐದು ಮುಗಿದು ಆರನೇ ತರಗತಿಯೂ ಬಂದಿತು. ನಮ್ಮ ಗಣಿತದ ಶಿಕ್ಷಕಿಯೊಬ್ಬರು ನನ್ನನ್ನು ವಿಶೇಷವಾಗಿ ಗಮನಿಸಿಕೊಳ್ಳತೊಡಗಿದರು. ಸಣ್ಣ ತಪ್ಪು ಹುಡುಕಿ ಆಗಾಗ ವಿನಾಕಾರಣ ಅವಮಾನಿಸುವುದು ಮತ್ತು ವಾರಕ್ಕೆರಡು ಸಲವಾದರೂ ನನ್ನ ಮುಂಗೈಗೆ ಕಟ್ಟಿಗೆಯ ಫ‌ೂಟುಪಟ್ಟಿಯ ಅಂಚಿನಿಂದ ಬಲವಾಗಿ ಏಟು ಕೊಡುವುದು. ಇಷ್ಟೇ ಅಲ್ಲ ಆಗಾಗ ಸಂಜೆ ಏಳರ ತನಕ ಶಾಲೆಯಲ್ಲೇ ಕೂರಿಸಿ ಮಾಡಿದ ಲೆಕ್ಕವನ್ನೇ ಮಾಡಿಸಲು ಮಾನಿಟರ್‌ಗೆ ಹೇಳುವುದು ಮಾಮೂಲಾಯಿತು. ಆಗೆಲ್ಲಾ ಊರಿನ ಬಸ್ಸು ಹತ್ತಿ ಮನೆಗೆ ಬರುವಾಗ ರಾತ್ರಿ ಒಂಬತ್ತಾಗಿಬಿಡುತ್ತಿತ್ತು. ಏನಾದರೇನು ಮಳೆಗಾಲ-ಚಳಿಗಾಲ ನಮಗಾಗಿ ನಿಂತಾವೆಯೇ? ತಡವಾದಾಗೆಲ್ಲ ಕೆಲವೊಮ್ಮೆ ಸಂಗೀತಾಭ್ಯಾಸ ತಪ್ಪಿಬಿಡುತ್ತಿತ್ತು. ಅದು ಒಳಗೊಳಗೇ ನನ್ನನ್ನು ಕೊರೆಯುತ್ತಿದ್ದರೂ ಆರೂ ವಿಷಯಗಳ ಹೋಮ್‌ವರ್ಕ್‌ ಮಾಡಲೇಬೇಕಿತ್ತು. ಕೊನೆಯಲ್ಲಿ ಲೆಕ್ಕ ಬಿಡಿಸುತ್ತ ಕಣ್ಣುಕ್ಕುತ್ತಿದ್ದಾಗ, “ನನಗೆ ನೀರು ಕುಡಿದಂತಿರುವ ಗಣಿತ ನಿನಗ್ಯಾಕೆ ಹೀಗೆ?’ ಹನ್ನೆರಡಕ್ಕೆ ಸಮೀಪಿಸುತ್ತಿದ್ದ ಸಣ್ಣ ಮುಳ್ಳನ್ನು ನೋಡುತ್ತ ಕೇಳುತ್ತಿದ್ದ ಅಮ್ಮನಿಗೆ ಆಗ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ಆ ಮೊದಲು ನನ್ನೊಳಗೂ ನೀರಿನಂತೆ ಹರಿಯುತ್ತಿದ್ದ ಗಣಿತ ನಿಧಾನ ಬತ್ತುತ್ತ ಹೋಯಿತು.

ಅಂದ ಹಾಗೆ ಆ ಫ‌ೂಟುಪಟ್ಟಿಯ ಮೇಲೆ ಒಂದು ಬದಿ ಅಂಕಿಗಳೂ ಸವೆದೇ ಹೋಗಿದ್ದವು. ವಿಷಯ ಇಷ್ಟೇ… ಗಣಿತದ ಟೀಚರಿಗೆ ನನಗಿಂತಲೂ ಹತ್ತು-ಹನ್ನೆರಡು ವರ್ಷ ದೊಡ್ಡ ಮಗಳಿದ್ದಳು ಮತ್ತು ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿದ್ದಳು. ರೇಡಿಯೋದಲ್ಲಿ ಅವಳ ಸಂಗೀತ ಕೇಳಿದ್ದು ಬಿಟ್ಟರೆ, ಪತ್ರಿಕೆಗಳಲ್ಲಿ ಅವಳ ಬಗ್ಗೆ ಓದಿದ್ದು ಬಿಟ್ಟರೆ ಮುಖತಃ ನನಗವಳ ಪರಿಚಯವೇ ಇರಲಿಲ್ಲ. ಮುಂದೊಂದು ದಿನ ಮಠವೊಂದರಲ್ಲಿ ಒಂದೇ ವೇದಿಕೆಯಲ್ಲಿ ಅವಳೂ ಹಾಡಿದಳು, ನಾನೂ ಹಾಡಿದೆ. ಅವಳ ಗಾಯನ ಕೇಳಿ ಬಹಳೇ ಖುಷಿಪಟ್ಟೆ. ನಂತರ ಒಟ್ಟಿಗೇ ಕುಳಿತು ಊಟ ಮಾಡುವಾಗ ಟೀಚರಿಗೆ ನಮಸ್ಕರಿಸಲು ನಾನದೆಷ್ಟೇ ಕಣ್ಣು ಕೊಡಲು ಪ್ರಯತ್ನಿಸಿದರೂ ಅವರು ಮುಖ ಕೊಡಲೇ ಇಲ್ಲ.

ಮುಂದೆ ನಾನು ಪತ್ರಿಕೋದ್ಯಮಕ್ಕಾಗಿ ಬೆಂಗಳೂರಿಗೆ ಬಂದೆ. ವಿಶೇಷ ಕಾಳಜಿ ವಹಿಸಿ, ಅವರ ಮಗಳನ್ನು ಟಿವಿಯಲ್ಲಿ ಸಂದರ್ಶಿಸಿದೆ, ಅವಕಾಶ ಸಿಕ್ಕಾಗೆಲ್ಲ ಅವಳ ವಿದ್ವತ್ತಿನ ಬಗ್ಗೆ ಪತ್ರಿಕೆಗಳಲ್ಲಿ ದಾಖಲಿಸಿದೆ; ಪ್ರತಿಭೆ ಗೌರವಿಸಿ ಮತ್ತು ನನ್ನೊಳಗಿನ ಸಂಗೀತದ ಪ್ರೀತಿಗೆ ಕರಗಿ ಅಪರೂಪಕ್ಕೆ ಎದುರಿಗೆ ಸಿಕ್ಕಾಗಲೋ ಫೋನಿನಲ್ಲೋ ಇಂದಿಗೂ ಆ ಗಣಿತ ಟೀಚರ್‌ ಮಗಳು ಗೌರವ, ಆತ್ಮೀಯತೆಯಿಂದ ಮಾತನಾಡಿಸುತ್ತಾರೆ, ಪಾಪ! ಅವರಿಗೆ ಫ‌ೂಟುಪಟ್ಟಿಯ ಕಥೆ ಗೊತ್ತೇ ಇಲ್ಲ. ಈ ಅಕ್ಷರಲೋಕದೊಂದಿಗೆ ನಂಟು ಬೆಳೆಸಿಕೊಳ್ಳಲು ಕಾರಣವಾದ ಆ ಫ‌ೂಟುಪಟ್ಟಿಗೆ, ಅದರೊಡತಿಗೆ ಹೀಗೆ ಇಲ್ಲಿಂದಲೇ ಮನಃಪೂರ್ವಕ ನಮಸ್ಕಾರ.

-ಶ್ರೀದೇವಿ ಕಳಸದ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ...

  • ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ,...

  • ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ,...

  • "ಕಾಗದ ಬಂದಿದೆ ಕಾಗದವು' ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ....

  • ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ...

ಹೊಸ ಸೇರ್ಪಡೆ