ವ್ರತಗೆಡದ ಬಿಲ್ಲೋಜ ಜಿ.ಎಸ್‌. ಶಿವರುದ್ರಪ್ಪ

Team Udayavani, Jan 13, 2019, 12:30 AM IST

ಕನ್ನಡದ ಸ್ಕಾಲರ್‌ ಪೊಯಟ್‌ ಎಂದು ಖ್ಯಾತರಾದ ರಾಷ್ಟ್ರಕವಿ ಡಾ. ಜಿ. ಎಸ್‌. ಶಿವರುದ್ರಪ್ಪನವರೊಂದಿಗೆ ನನ್ನ ಒಡನಾಟ ದಶಕಗಳ ಕಾಲದ್ದು. ಒಮ್ಮೆ ನಾವಿಬ್ಬರೂ ದೇವರಸೀಮೆ ಕೇರಳದ ತಿರುವನಂತಪುರಕ್ಕೆ ಬಹುಭಾಷಾ ಸಾಹಿತ್ಯ ಸಮ್ಮೇಳನ ಒಂದರಲ್ಲಿ ಭಾಗಿಯಾಗಲು ಹೋಗಿದ್ದೆವು. ಕಾರ್ಯಕ್ರಮ ಸರ್ಕಾರದ ಪೋಷಣೆಯಲ್ಲಿ ನಡೆದದ್ದು. ಆ ಸಮ್ಮೇಳನದಲ್ಲಿ ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಎಚ್‌. ಎಸ್‌. ಶಿವಪ್ರಕಾಶ್‌, ಪ್ರತಿಭಾನಂದಕುಮಾರ್‌, ಅಗ್ರಹಾರ ಕೃಷ್ಣಮೂರ್ತಿ ಮೊದಲಾದ ಅನೇಕ ಸಾಹಿತ್ಯ ಮಿತ್ರರು ಪಾಲ್ಗೊಂಡಿದ್ದರು. ಆಗ ನಾವೆಲ್ಲ ಒಟ್ಟಿಗೇ ಕಳೆದ ಕಾಲ ಬಹು ಚೇತೋಹಾರಿಯಾದುದು. ಅದನ್ನು ದಶಕಗಳ ನಂತರವೂ ನನಗೆ ಮರೆಯಲಿಕ್ಕಾಗಿಲ್ಲ. ಜಿಎಸ್‌ಎಸ್‌ ಸಮ್ಮೇಳನದ ಉದ್ಘಾಟಕರಾಗಿದ್ದರು. ತಮ್ಮ ಇಂಗ್ಲಿಷ್‌ ಭಾಷಣಕ್ಕೆ ಸಾಕಷ್ಟು ಜೋರಾಗಿಯೇ ಅವರು ಪೂರ್ವಭಾವಿ ಸಿದ್ಧತೆ ನಡೆಸಿದ್ದರು. ನಾನು ಕವಿಗೋಷ್ಠಿಯಲ್ಲಿ ಕವಿತೆ ಓದಬೇಕಾಗಿತ್ತು. ಹಾಗಾಗಿ, ಆರಾಮಾಗಿ ನಿರಾಳವಾಗಿ ಆ ಪ್ರವಾಸದಲ್ಲಿ ಜಿಎಸ್‌ಎಸ್‌ ಅವರ ಸಹವರ್ತಿಯಾಗಿದ್ದೆ. 

ನಾನು ಮತ್ತು ಜಿಎಸ್‌ಎಸ್‌ ಒಂದೇ ಕೋಣೆಯಲ್ಲಿ ವಸತಿ ಹೂಡಿದ್ದೆವು. ಪರಸ್ಥಳಕ್ಕೆ ಹೋದಾಗ ಜಿಎಸ್‌ಎಸ್‌ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದರು. ಮೊದಲನೆಯದು, ತಮಗೆ ಗೊತ್ತಾಗಿರುವ ಕೋಣೆಯಲ್ಲಿ ಕಮೋಡಿದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು! ಎರಡನೆಯದು, ಕೋಣೆಗೆ ಹೋದ ಕೂಡಲೇ ತಾವು ಊರಿಂದ ತಮ್ಮೊಂದಿಗೆ ತಂದಿದ್ದ ಬಿಳಿಯ ಬೆಡ್‌ಶೀಟ್‌ ಒಂದನ್ನು ತಮ್ಮ ಹಾಸಿಗೆಯ ಮೇಲೆ ಹಾಸುವುದು. ಮೂರನೆಯದು, ಬಾತ್‌ರೂಮಿನಲ್ಲಿ ಖಾಲಿ ಬಕೆಟ್ಟಿನಲ್ಲಿ ಭರ್ತಿ ನೀರು ತುಂಬಿ ಇಡುವುದು. ಈ ಮೂರು ವಿಷಯಗಳನ್ನು ಅವರು ಯಾವತ್ತೂ ಮರೆಯುತ್ತಿರಲಿಲ್ಲ.

ತಿರುವನಂತಪುರದಲ್ಲಿ ನಾವು ಉಳಿದಿದ್ದು ಪಂಚತಾರಾ ಹೊಟೇಲೊಂದರಲ್ಲಿ. ಕಣುRಕ್ಕುವ ಭವ್ಯತೆ ಹೊಟೇಲಿನದು. ಈ ಅತಿಭವ್ಯತೆ, ಅದರೊಂದಿಗೆ ಇರುವ ಕೃತ್ರಿಮತೆ ಸಾದಾಸೀದಾ ಕವಿಗಳೂ, ಮೂಲಮುಗ್ಧರೂ ಆದ ಜಿಎಸೆಸ್‌ ಅವರಿಗೆ ಎಷ್ಟು ಮಾತ್ರಕ್ಕೂ ಪ್ರಿಯವಾದುದಲ್ಲ. ಇರೋದು ಇಬ್ಬರು. “ನಮಗ್ಯಾಕೆ ಇಷ್ಟು ದೊಡ್ಡ ಕೋಣೆ ಹೇಳಿ! ಕೋಣೆಯೇ ಇದು? ಮನೆ!’ ಎಂದು ಮೊದಲು ವಟಗುಟ್ಟಿದರು. ರಾತ್ರಿ ಅತಿಥಿಗಳಿಗೆಲ್ಲ ಸರ್ಕಾರದ ಔತಣವಿತ್ತು. ಔತಣ ಮುಗಿಸಿಕೊಂಡು ನಾವು ನಮ್ಮ ಕೋಣೆಗೆ ಬಂದಾಗ ರಾತ್ರಿ ಹತ್ತುಗಂಟೆ. ಜಿಎಸ್‌ಎಸ್‌ ತಮ್ಮ ಜುಬ್ಬ ಪೈಜಾಮದ ದಿರಿಸು ಕಳಚಿ ಒಂದು ಅಡ್ಡ ಪಂಚೆ ಸುತ್ತಿಕೊಂಡರು. ಲುಂಗಿಯನ್ನು ಬುಕೊ³àಸ್ಟ್‌ ಎಂದು ಅವರು ಹಾಸ್ಯ ಮಾಡುತ್ತಿದ್ದರು. “ಓಪನ್‌ ಅಟ್‌ ಬೋತ್‌ದ ಎಂಡ್ಸ್‌ !’ ಮೇಲಂಗಿಯ ಮೇಲೆ ಸ್ವೆಟ್ಟರು. ತಲೆಗೆ ಮಂಕಿಕ್ಯಾಪು. ರಾತ್ರಿ ತೆಗೆದುಕೊಳ್ಳಬೇಕಾದ ಔಷಧ-ಮಾತ್ರೆ ಇತ್ಯಾದಿ ತೆಗೆದುಕೊಂಡಾಯಿತು. ಹೊಟ್ಟೆಹಗುರಾಗಿಡಲು ತಮ್ಮೊಂದಿಗೆ ತಂದಿದ್ದ ಆಯುರ್ವೇದೀಪುಡಿಯನ್ನು ನೀರಲ್ಲಿ ಬೆರೆಸಿ ಕುಡಿದಿದ್ದಾಯಿತು. ಹಲ್ಸೆಟ್ಟು ಕಳಚಿ ತಾವು ತಂದಿದ್ದ ನೀರಿನ ಡಬ್ಬಿಯಲ್ಲಿ ಮುಳುಗಿಸಿಟ್ಟಿದ್ದಾಯಿತು.  “ಆಹಾ! ಕೇರಳ ಎಂಥ ಸುಂದರ ಸೀಮೆ ನೋಡಿ’ ಎಂದು ಮತ್ತೆ ಮತ್ತೆ ಉದ್ಗಾರ ತೆಗೆಯುತ್ತ ಹಾಸುಗೆಯ ಮೇಲೆ ಹಗುರಾಗಿ ಉರುಳಿಕೊಂಡರು. ಕಾಡು-ಕಣಿವೆ, ಸೂರ್ಯೋದಯ-ಸೂರ್ಯಾಸ್ತ ಈ ಮೊದಲಾದ ಪ್ರಾಕೃತಿಕ ಸಂಗತಿಗಳೆಂದರೆ ಒಂದು ಬಗೆಯ ತನ್ಮಯತೆ ಅವರಿಗೆ. ಸಂಜೆ ವಾಕಿಂಗ್‌ ಹೋದಾಗ ಇದ್ದಕ್ಕಿದ್ದಂತೆ ಥಟ್ಟನೆ ಶಿಲಾಪುತ್ಥಳಿಯಂತೆ ನಿಂತು, ಮಾತಾಡುತ್ತಿದ್ದ ನನ್ನನ್ನು ತಮ್ಮ ಉಷ್ಕಾರದಿಂದ ಸುಮ್ಮನಾಗಿಸಿ, “ಸೂರ್ಯಾಸ್ತಮವಾಗುತ್ತಿದೆ. ನೋಡಿ’ ಎನ್ನುತ್ತ ಪ್ರಕೃತಿಯ ಈ ನಿತ್ಯೋತ್ಸವದಲ್ಲಿ ತನ್ಮಯಗೊಳ್ಳುತ್ತಿದ್ದರು. ಈ ವಿಷಯದಲ್ಲಿ ಅವರು ಕುವೆಂಪು ಅವರ ಶಿಷ್ಯರೇ ಸರಿ.

ಸಾಹಿತ್ಯ ಕುರಿತು ಲೋಕಾಭಿರಾಮವಾಗಿ ಮಾತಾಡುತ್ತ ಸ್ವಲ್ಪ ಸಮಯ ಕಳೆಯಿತು. “”ಮೂರ್ತಿಯವರೇ, ಸ್ವಲ್ಪ$ಚ‌ಳಿ ಅನ್ನಿಸುತ್ತಿದೆ ಅಲ್ಲವಾ?” ಎಂದು ಮೆಲ್ಲಗೆ ಹೇಳಿದರು. “”ಏಸಿ ಆನ್‌ ಇದೆ ಸರ್‌!” ಎಂದೆ. “”ಅದನ್ನು ಕಡಿಮೆ ಮಾಡಿ ಮತ್ತೆ!” “”ಆಯಿತು” ಎಂದು ನಾನು ಏಸೀ ಕಂಟ್ರೋಲ್‌ ಸ್ವಿಚ್ಚಿಗಾಗಿ ಹುಡುಕಾಡಿದೆ. ಎಲ್ಲೂ ಕಾಣಲಿಲ್ಲ. “”ಸಿಗಲಿಲ್ಲವಾ? ಇರಿ. ನಾನು ಬರುತ್ತೇನೆ” ಎಂದು ಅವರೂ ಸ್ವಿಚ್‌ ಶೋಧನೆಯಲ್ಲಿ ತೊಡಗಿದರು. ಕಂಟ್ರೋಲ್‌ ಸ್ವಿಚ್‌ ಎಲ್ಲೂ ಕಾಣಲಿಲ್ಲ. “”ಇದೊಳ್ಳೇ ಫ‌ಜೀತಿಯಾಯಿತಲ್ಲ” ಎನ್ನುತ್ತ¤ ರಿಸೆಪ್ಷನ್‌ಗೆ ಫೋನ್‌ ಮಾಡಿ ಸಹಾಯಕನನ್ನು ಕಳಿಸಲು ತಿಳಿಸಿದರು. ಸಹಾಯಕ ಬಂದ. ನಮ್ಮ ಭಾಷೆ ಅವನಿಗೆ ತಿಳಿಯದು. ಅವನ ಭಾಷೆ ನಮಗೆ ತಿಳಿಯದು. ಈಗ ಆದಿಮಾನವ ಭಾಷೆಯಾದ ಕೈಸನ್ನೆ ಬಾಯ್ಸನ್ನೆಗೆ ನಾವು ಮೊರೆಹೋಗಬೇಕಾಯಿತು. “”ಚ‌ಳಿ ಹೆಚ್ಚಾಗುತ್ತಿದೆ. ಏಸೀ ಕಡಿಮೆ ಮಾಡಬೇಕು. ನೋಡು, ಮೈಯೆಲ್ಲ ನಡುಗುತ್ತಿದೆ! ಏಸೀ ಕಡಿಮೆ ಮಾಡುವುದಕ್ಕೆ ಸಹಾಯ ಮಾಡು” ಎಂಬುದನ್ನು ಜಿಎಸ್‌ಎಸ್‌ ಆ ಹುಡುಗನಿಗೆ ಆಂಗಿಕದ ಮೂಲಕ ಸೂಚಿಸಲು ಪಡಬಾರದ ಪಾಡು ಪಡುತ್ತಿದ್ದರು. ಸಂಜ್ಞಾಭಾಷೆಯಲ್ಲಿ ನಾನು ಪರಿಣತನಲ್ಲ. ಹಾಗಾಗಿ ಅಭಿನಯದ ಮೂಲಕ ಹುಡುಗನಿಗೆ ಸಮಸ್ಯೆಯನ್ನು ವಿವರಿಸುವ ಮೂಕಪಾತ್ರಾಭಿನಯವನ್ನು ನಮ್ಮ ಹಿರಿಯ ಕವಿಗಳು ತಾವೇ ವಹಿಸಿಕೊಂಡಿದ್ದರು. ಅವರ ಮೂಕಾಭಿನಯದ ವೀಡಿಯೋ ಮಾಡಬೇಕೆಂದು ನನ್ನ ಚಪಲ. ರೇಗಿಗೀಗಿಯಾರು ಎಂದು ನನ್ನ ಆಸೆಯನ್ನು ಅದುಮಿಟ್ಟುಕೊಂಡೆ. ನಾವು ಕಂಟ್ರೋಲ್‌ ಸ್ವಿಚ್ಚಿಗಾಗಿ ಕೋಣೆಯ ಮೂಲೆ-ಮುಡುಕುಗಳನ್ನೆಲ್ಲ, ಕೆಲವೊಮ್ಮೆ ಚತುಷ್ಪಾದಿಗಳಾಗಿ ಹುಡುಕಾಡಿ ಸೋತದ್ದನ್ನು ಆ ಅಮಾಯಕ ಹುಡುಗನಿಗೆ ಕವಿಗಳು ಮಾತೇ ಆಡದೆ ಅಂಗಚೇಷ್ಟೆಯ ಮೂಲಕವೇ ಬಣ್ಣಿಸುತ್ತ ಇದ್ದ ರೀತಿಯನ್ನು ನೋಡಿ ಸಂತೋಷಪಡಲು ಎರಡು ಕಣ್ಣು ಸಾಲದಾಯಿತು. ಇವೆಲ್ಲದರ ಪರಿಣಾಮ ಆ ಕೇರಳಕಿಶೋರ ಎಣ್ಣೆಬಸಿಯುವ ತನ್ನ ತಲೆಯನ್ನು ಜೋರಾಗಿ ಕೊಡವಿ ಮತ್ತೂಬ್ಬನನ್ನು ನಮ್ಮ ಸಹಾಯಕ್ಕೆ ಕಳಿಸುವುದಾಗಿ ಹೇಳಿ ಅಭಯದ ಪೆಚ್ಚುನಗೆ ನಕ್ಕು ನಮ್ಮಿಂದ ಪಾರಾದದ್ದು.  ಸಹಾಯಕ ಬರಲಿಲ್ಲ. ರಿಸೆಪ್ಷನ್‌ನಿಂದ ದೂರವಾಣಿ ಬಂತು. ದೂರುವಾಣಿ ನಮ್ಮದು. ದೂರವಾಣಿ ಅವರದ್ದು. ಕೊನೆಗೆ ತಿಳಿದದ್ದು ಏಸೀ ಸೆಂಟ್ರಲ್‌ ಸಿಸ್ಟಮ್‌ ಎನ್ನುವುದು. ಅಷ್ಟೊತ್ತಿಗಾಗಲೇ ಹನ್ನೊಂದು ಗಂಟೆ. ನಾವು “ಶಿವಶಿವಾ’ ಎನ್ನುತ್ತ¤ ಇದ್ದಬದ್ದ ರಗ್ಗುಗಳನ್ನೆಲ್ಲ ಕವಚಿಕೊಂಡು ನಿದ್ದೆಯ ಪಾತಳಿಗೆ ನಿಧಾನಕ್ಕೆ ಜಾರಿದ್ದಾಯಿತು. 

ಬೆಳಗ್ಗೆ ನಾನು ಏಳುವ ವೇಳೆಗೆ ಜಿಎಸ್‌ಎಸ್‌ ಎದ್ದು ಸ್ನಾನಾದಿಗಳನ್ನೂ ತೀರಿಸಿ ತಮ್ಮ ಭಾಷಣದ ಟಿಪ್ಪಣಿಗಳನ್ನು ನೋಡುತ್ತ ಕುಳಿತ್ತಿದ್ದರು. ಟಿಪ್ಪಣಿ ಮಾಡಿಕೊಳ್ಳದೆ ಅವರು ಯಾವತ್ತೂ ಮಾತಾಡುತ್ತಿರಲಿಲ್ಲ. ನೀಟಾಗಿ ಜೋಡಿಸಿದ ಟಿಪ್ಪಣಿಯ ಹಾಳೆಗಳು. ಅದಕ್ಕೊಂದು ಟ್ಯಾಗ್ಬಂಧ. ಈ ಶಿಸ್ತು ಅವರ ಶಿಷ್ಯನಾಗಿದ್ದೂ ನಾನು ಕಲಿಯಲಿಲ್ಲ. ನಾನು ಎದ್ದುದನ್ನು ಗಮನಿಸಿ ಜಿಎಸ್‌ಎಸ್‌, “”ರಾತ್ರಿ ನಿದ್ದೆ ಬಂತಾ? ಏಳಿ…ಸ್ನಾನ ಮಾಡಿ… ಪ್ರಾತಃಕಾಲದ ವಾಕ್‌ ಮುಗಿಸಿಕೊಂಡು ಬರೋಣ. ಕೇರಳದ ಪ್ರಕೃತಿ ಸೌಂದರ್ಯ ಅಸದೃಶವಾದದ್ದು. ತಡಮಾಡಿದರೆ ಸೂರ್ಯೋದಯ ಮಿಸ್ಸಾಗತ್ತೆ”ಎಂದರು! ಬೆಚ್ಚಗೆ ಹಾಸಿಗೆಯಲ್ಲಿ ನಿದ್ದೆಮಾಡುವುದು ಬಿಟ್ಟು ಇವರಿಗೆ ಇದೊಳ್ಳೆ ಸೂರ್ಯೋದಯ ಚಿಂತೆಯಾಯಿತಲ್ಲ ಎಂದು ನಾನು ಮನಸ್ಸಲ್ಲೇ ಗೊಣಗಿಕೊಂಡು ಪ್ರಾತಃವಿಧಿಗಳ ನಿರ್ವಹಣೆಗೆ ಬಾತ್‌ರೂಮ್‌ ಹೊಕ್ಕೆ.

ಚುಮುಚುಮು ಬೆಳಗು. ಇಬ್ಬರೂ ಸ್ವೆಟ್ಟರ್‌-ಟೋಪಿ ಇತ್ಯಾದಿ ಧರಿಸಿ ವಾಕಿಂಗ್‌ ಹೊರಟೆವು. ಪೈಜಾಮದ ತುದಿ ಮಾಸಬಾರದು ಎಂದು ಜಿ.ಎಸ್‌.ಎಸ್‌. ಚಪ್ಪಲಿಗೆ ತಾಗದಂತೆ ತಮ್ಮ ಬೆಳ್ಳನೆಯ ಪೈಜಾಮವನ್ನು ಸ್ವಲ್ಪ$ಮೇಲಕ್ಕೆ ಎತ್ತಿ ಕಟ್ಟುತ್ತಿದ್ದರು. ಮತ್ತೆ ಚೊಕ್ಕವಾಗಿ ಪಾಲಿಷ್‌ ಮಾಡಿದ ಮಿರಿಮಿರಿ ಕಪ್ಪಿನ ಪಾದರಕ್ಷೆಗಳು. ಎತ್ತಂಗಡಿ ಮೂಲಕ ನಾವು ಕೆಳಗೆ ಬಂದು ಹಸಿರು ಮರಗಳ ಕೆಳಗೆ ಅದೆಷ್ಟೋ ಉದ್ದ ನಡೆದದ್ದಾಯಿತು. “”ಎಲ್ಲಿ ಸರ್‌, ನಿಮ್ಮ ಸೂರ್ಯ? ಕಾಣುತ್ತಲೇ ಇಲ್ಲ” ಎಂದೆ. “”ಚ‌ಳಿಗೆ ಏಳ್ಳೋದು ಸ್ವಲ್ಪ$ಲೇಟಾಗಿರಬಹುದು” ಎಂದರು.

ಬಿಳಿಗೂದಲ ಜಾಂಬವಂತರಂತೆ ಮೈತುಂಬ ಶಾಲು ಸುತ್ತಿಕೊಂಡು ನಾವು ಬೆಳಗಿನ ವಾಕ್‌ ಮುಗಿಸಿ ದಾರಿಯಲ್ಲಿ ಸೂರ್ಯೋದಯವನ್ನೂ ನೋಡಿ ಪುಳಕಿತರಾಗಿ ವಸತಿಗೆ ಹಿಂದಿರುಗಿದ್ದಾಯಿತು. ಬಿಸಿಬಿಸಿ ಕಾಫಿ ತರಿಸಿ ಕುಡಿದು ಮತ್ತೆ ಅದೂಇದೂ ಮಾತು. ಯಾವು ಯಾವುದೋ ಪ್ರಕರಣಗಳ ನೆನಪು. ಮಧ್ಯೆ ಇದ್ದಕ್ಕಿದ್ದಂತೆ ಜಿಎಸ್‌ಎಸ್‌ ಮಾತು ನಿಲ್ಲಿಸಿ ಹೊಸದಾಗಿ ಒಮ್ಮೆಗೇ ಜ್ಞಾನೋದಯವಾದಂತೆ “”ನನಗೆ ಯಾಕೋ ಹೊಟ್ಟೆ ಹಪಹಪ ಅನ್ನುತ್ತಿದ್ದೇರಿ. ನಿಮಗೆ ಹಸಿವಾಗುತ್ತಿಲ್ಲವಾ?” ಎಂದರು. 

“”ಆಗುತ್ತಿದೆ ಸರ್‌, ನೆನ್ನೆ ಸಾಂಬಾರ್‌ ರುಚಿ ಯಾಕೋ ನನಗೆ ಹಿಡಿಸಲಿಲ್ಲ… ಊಟ ಸ್ವಲ್ಪ$ಕಮ್ಮಿಯೇ ಆಯಿತು”
“”ತಿಂಡಿ ಏನಿದೆ ನೋಡಿ ಮತ್ತೆ”
ನಾನು ಮೆನೂ ನೋಡಿದೆ. “”ಸರ್‌! ದೋಸೆ ಸಿಗುತ್ತೆ. ಆರ್ಡರ್‌ ಮಾಡಲಾ?” 
“”ಮಾಡಿ ಮಾಡಿ ಕೇರಳದಲ್ಲಿ ದೋಸೆ ತುಂಬ ಚೆನ್ನಾಗಿರತ್ತೆ. ಹೋದ ಬಾರಿ ನಾನು ಕಣವಿ ಬಂದಾಗ ದೋಸೆಯನ್ನೇ ತಗೊಂಡಿದ್ದೆವು”
“”ನಾನು ರೆಸ್ಟೋರೆಂಟಿಗೆ ಫೋನ್‌ ಹಚ್ಚಬೇಕು”. 
“”ಬೆಲೆ ಸ್ವಲ್ಪ$ ನೋಡಿರಪ್ಪಾ” ಎಂದರು ಜಿಎಸ್ಸೆಸ್‌.
ದೋಸೆಯ ಮುಂದೆ ನೂರೈವತ್ತು ರೂಪಾಯಿ ಎಂದು ನಮೂದಾಗಿತ್ತು.

“”ಸರ್‌, ಒಂದು ದೋಸೆಗೆ ನೂರೈವತ್ತು”
ಜಿಎಸ್‌ಎಸ್‌ ಹಾರಿಬಿದ್ದರು! “”ಏನು ಏನು, ಒಂದು ದೋಸೆಗೆ ನೂರೈವತ್ತಾ? ನಮ್ಮ ವಿದ್ಯಾರ್ಥಿಭವನದಲ್ಲಿ ಇದರ ಅರ್ಧ ಬೆಲೆಯೂ ಇಲ್ಲವಲ್ಲರೀ. ಅನ್ಯಾಯ. ಪರಮ ಅನ್ಯಾಯ” ಎಂದು ಬುಸುಗುಟ್ಟಿದರು.
 “”ಸರ್‌ ಸರ್ಕಾರದ ಆತಿಥ್ಯ. ಎರಡು ದೋಸೆ ಖಂಡಿತ ಆಳುವ ಸರ್ಕಾರಕ್ಕೆ ಭಾರವಾಗುವುದಿಲ್ಲ”
“”ಆದರೂ ನೂರೈವತ್ತು ರೂಪಾಯಿ ಕೊಟ್ಟು ದೋಸೆ ತಿನ್ನುವುದು ಅಂದರೆ ಹೇಗಪ್ಪಾ? ನೀವು ದೋಸೆ ತಗೊಳ್ಳಿ. ನನಗೆ ಇಡ್ಲಿ ಸಾಕು”
ಇದು ನಮ್ಮ ಜಿಎಸ್‌ಎಸ್‌. ಹಣ ಯಾರದ್ದೇ ಇರಲಿ. ದುಂದು ವೆಚ್ಚ ಸಲ್ಲದು ಎನ್ನುವುದು ಅವರ ತಣ್ತೀ . 
 ಗುರುಗಳಿಗೆ ಇಡ್ಲಿ ತಿನ್ನಿಸಿ ನಾನು ದೋಸೆ ಹೇಗೆ ತಿನ್ನೋದು?
“”ಎರಡು ಪ್ಲೇಟ್‌ ಇಡ್ಲಿ-ವಡೆ, ಎರಡು ಕಾಫಿ” ಎಂದು ಆರ್ಡರ್‌ ಮಾಡಿ ತಿಂಡಿಯ ನಿರೀಕ್ಷೆಯಲ್ಲಿ ಇಬ್ಬರೂ ಮಾತಿಲ್ಲದೆ ಕುಳಿತೆವು. “ಅನ್ನದೇವರಿಗಿಂತ ಇನ್ನು ದೇವರು ಇಲ್ಲ’ ಎಂದು ಬೇಂದ್ರೆಯವರು ಅಪ್ಪಣೆ ಕೊಡಿಸಿಲ್ಲವೆ? ಇಡ್ಲಿಯನ್ನು ನೆನೆಯುತ್ತ ನನ್ನ ಬಾಯಂತೂ ಮೆಲ್ಲಗೆ ರಸಲಿಪ್ತವಾಗುತ್ತಿತ್ತು. ಜಿಎಸ್‌ಎಸ್‌ ಅರೆಗಣ್ಣು ಮಾಡಿಕೊಂಡು ಏನೋ ಲೋಕಾತೀತವಾದುದನ್ನು ಧ್ಯಾನಿಸುತ್ತ ತುಟಿಬಿಗಿದು ಕುಳಿತಿದ್ದರು.
ಪಾಪ, ಮೇಷ್ಟ್ರಿಗೆ ದೋಸೆ ಇಷ್ಟ. ಅವರೂ ಬರೀ ಇಡ್ಲಿ ತಿನ್ನುವಂತಾಯಿತಲ್ಲ ಎಂದು ನನ್ನ ಯೋಚನೆ.
ಹೆಚ್ಚು ಎಣ್ಣೆ ಪದಾರ್ಥ ತಿನ್ನಬಾರದೆಂದು ವೈದ್ಯರು ಅವರಿಗೆ ಹೇಳಿದ್ದರು. ಹೋಟೆಲ್‌-ಗೀಟೆಲ್‌ನಲ್ಲಿಯಂತೂ ತಿನ್ನಲೇ ಬಾರದು ಎಂಬುದು ಅವರ ಪತ್ನಿ ರುದ್ರಾಣಿಯವರ ತಣ್ತೀ. ಜಿಎಸ್‌ಎಸ್‌ಗೆ ಯಾವಾಗಲಾದರೂ ದೋಸೆ ತಿನ್ನಬೇಕೆಂಬ ಆಸೆ ಉಂಟಾದರೆ ಬೆಳಗಾಬೆಳಿಗ್ಗೆ ಅವರಿಂದ ಫೋನ್‌ ಬರುತ್ತ¤ ಇತ್ತು. ಫೋನಲ್ಲಿ ಅವರು ಎರಡು ಅಥವಾ ಮೂರು ವಾಕ್ಯಗಳಿಗಿಂತ ಹೆಚ್ಚು ಯಾವತ್ತೂ ಮಾತಾಡುತ್ತಿರಲಿಲ್ಲ. “ಮೂರ್ತಿಯವರೇ, ಗಾಂಧಿಬಜಾರಲ್ಲಿ ಸ್ವಲ್ಪ ಕೆಲಸವಿದೆ. ಬರುತ್ತೀರಾ? ಹೋಗಿ ಬರೋಣ?’
“”ಪುಸ್ತಕದ ಅಂಗಡಿಗಾ ಸರ್‌?” 
“”ಹಾಂ… ಬೇಗ ಬನ್ನಿ!”
ಫೋನ್‌ ಕಟ್‌! ಫೋನ್‌ನಲ್ಲಿ ಹೆಚ್ಚು ಮಾತಾಡುವುದು ರಾಷ್ಟ್ರೀಯ ಅಪರಾಧ ಎಂಬುದು ನಮ್ಮ ಮೇಷ್ಟ್ರ ನಂಬಿಕೆಯಾಗಿತ್ತು.

ನಾನು ಕಾರ್‌ ತಗೊಂಡು ಜಿಎಸ್‌ಎಸ್‌ ಮನೆಗೆ ಹೋಗುತ್ತಿದ್ದೆ.  
“”ನಾವು ಸ್ವಲ್ಪ ಗಾಂಧೀಬಜಾರಿಗೆ ಹೋಗಿಬರ್ತೀವಿ” ಎಂದು ಒಳಕ್ಕೆ ಕೇಳುವಂತೆ ಕೂಗಿ ಜಿಎಸ್‌ಎಸ್‌ ಕಾರು ಏರುತ್ತಿದ್ದರು. ಮಂದಗಮನದಲ್ಲಿ ನಮ್ಮ ಕಾರುಯಾನ ಪ್ರಾರಂಭವಾಗುತ್ತಿತ್ತು. “”ಆಹಾ! ಕಾರು ಓಡಿಸೋದರಲ್ಲಿ ನಿಮ್ಮನ್ನು ಬಿಟ್ಟರೆ ಇಲ್ಲ ಕಣ್ರೀ” ಎಂದು ಜಿಎಸೆಸ್‌ ತಾರೀಫ‌ು ಮಾಡುತ್ತಿದ್ದರು. (ನಿನ್ನ ಕಾರನ್ನು ಸೈಕಲ್‌ ಸವಾರರು ಓವರ್‌ ಟೇಕ್‌ ಮಾಡುತ್ತಾರೆ ಎನ್ನುವುದು ನನ್ನ ಸಹಯಾತ್ರಿ ಬಿ. ಆರ್‌. ಲಕ್ಷ್ಮಣರಾವ್‌ ಉವಾಚ!). ನಾನು ಅಂಕಿತ ಪುಸ್ತಕದಂಗಡಿಯ ಕಡೆ ಕಾರು ತಿರುಗಿಸಿದರೆ ಜಿಎಸೆಸ್‌, “”ಆ ಕಡೆ ಎಲ್ಲಿಗೆ ಹೋಗುತ್ತೀರಿ? ವಿದ್ಯಾರ್ಥಿ ಭವನಕ್ಕೆ ಹೋಗಿರಪ್ಪಾ!” ಎಂದು ರೇಗುತ್ತಿದ್ದರು. “”ಸರ್‌, ನೀವು ಪುಸ್ತಕದ ಅಂಗಡಿ ಎಂದು ಹೇಳಿದಿರಲ್ಲ ?”

“”ಎಣ್ಣೆ ಪದಾರ್ಥ ತಿನ್ನಬೇಡಿ ಅನ್ನುತ್ತಾರೆ ಮನೆಯವರು. ಸುಮ್ಮನೆ ಅವರಿಗೆ ಯಾಕೆ ಬೇಜಾರು ಅಲ್ಲವಾ”. ಜಿಎಸ್‌ಎಸ್‌ ಪಂಪನ ಕಾವ್ಯದ ವಿಶ್ಲೇಷಣೆಯ ಗಂಭೀರ ದಾಟಿಯಲ್ಲೇ ನುಡಿದರು. ಅವರು ಸಾಮಾನ್ಯವಾಗಿ ಸಣ್ಣಪುಟ್ಟದ್ದಕ್ಕೆಲ್ಲ ನಗುತ್ತಿರಲಿಲ್ಲ. ಸದಾ ರಾಜಗಾಂಭೀರ್ಯದ ಅಂಚಿನಲ್ಲೇ ಸುಳಿದಾಡುತ್ತಿದ್ದರು. ರುದ್ರಾಣಿ ಅವರಿಗೆ ತಮಾಷೆ ಮಾಡುತ್ತಿದ್ದರು. 

“”ಕ್ಯಾಮರಾದೋನು ಫೋಟೋ ತೆಗೆಯುತ್ತಿದ್ದಾನೆ. ಈಗಲಾದರೂ ಸ್ವಲ್ಪ ನಗಬಾರದೆ?”
ಕ್ಯಾಮರಕ್ಕೆ ಯಾವಾಗಲೂ ನಗದ ಇಬ್ಬರು ವ್ಯಕ್ತಿಗಳು ನನಗೆ ಆಪ್ತರು. ಒಬ್ಬರು ನನ್ನ ಮೇಷ್ಟ್ರು ಜಿಎಸ್ಸೆಸ್‌, ಇನ್ನೊಬ್ಬರು ಗೆಳೆಯ ಬಿಆರ್‌ಎಲ್‌!
ವಿದ್ಯಾರ್ಥಿಭವನದಲ್ಲಿ ದೋಸೆ ಮುಗಿಸಿದ್ದಾಯಿತು. ಜೊತೆಗೆ ಹಿರಿಯರಾದ ಜಿಎಸ್‌ಎಸ್‌ ಇದ್ದರಲ್ಲ. ಸಾಹಿತ್ಯಪ್ರಿಯರಾದ ಹೊಟೇಲಿನ ಯಜಮಾನರಿಂದ ನಮಗೆ ರಾಜೋಪಚಾರ!

ತಿಂಡಿ ಮುಗಿದ ಮೇಲೆ ಬಿಲ್ಲು ಬಂತು.  ನಾನು ತೆಗೆದುಕೊಳ್ಳುವ ಹುಸಿಯತ್ನ ಮಾಡಿದೆ.
“”ಹಿರಿಯರು ಇರುವಾಗ ಚಿಕ್ಕವರು ಬಿಲ್ಲೆತ್ತುವುದು ಶ್ರೇಯಸ್ಕರವಲ್ಲ ” ಎಂದು ಜಿಎಸೆಸ್‌ ರೇಗಿದರು. 
ಎಂದೂ ಅವರು ನಾನು ಹೊಟೇಲಲ್ಲಿ ಬಿಲ್ಲೆತ್ತುವುದಕ್ಕೆ ಬಿಡಲಿಲ್ಲ. ಕೊನೆಯವ‌ರೆಗೂ ತಮ್ಮ ಬಿಲ್ಲೋಜತ್ವವನ್ನು ಮುಕ್ಕಾಗದಂತೆ ಉಳಿಸಿಕೊಂಡರು! 

ಎಚ್ . ಎಸ್ . ವೆಂಕಟೇಶಮೂರ್ತಿ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ...

  • ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ "ಇಸಂ'...

  • ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ "ಕುಯ್ಯೋ',...

  • ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ...

  • ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು...

ಹೊಸ ಸೇರ್ಪಡೆ