ಮಹಾನುಭಾವರ ಪಿಂಗಾಣಿ ಬಟ್ಟಲನ್ನು ಹುಡುಕಿಕೊಂಡು !

Team Udayavani, Sep 15, 2019, 5:25 AM IST

ಹೊಸ ಅಂಕಣ…
ಪ್ರತಿದಿನ ಬೆಳಗ್ಗೆ ಏಳರ ಹೊತ್ತಿಗೆ 70 ಜನ ಕೂರಬಹುದಾದ ಎಟಿಆರ್‌ ವಿಮಾನವೊಂದು ಬೆಂಗಳೂರಿನಿಂದ ಕೊಚ್ಚಿನ್‌ ಮಾರ್ಗವಾಗಿ ಲಕ್ಷದ್ವೀಪ ಸಮೂಹದ ಅಗತ್ತಿ ಎಂಬ ಪುಟ್ಟ ದ್ವೀಪಕ್ಕೆ ತೆರಳುತ್ತದೆ. ಎಷ್ಟು ಪುಟ್ಟದು ಅಂದರೆ ಇಲ್ಲಿನ ಜನಸಂಖ್ಯೆ ಸುಮಾರು ಏಳು ಸಾವಿರದ ಐನೂರು. ಅರಬ್ಬಿ ಕಡಲಿನ ನಡುವಲ್ಲಿರುವ ಈ ದ್ವೀಪವನ್ನು ನುಂಗಲು ಹೊರಟಿರುವ ಹೆಬ್ಟಾವಿನಂತೆ ಇಲ್ಲಿನ ವಿಮಾನ ನಿಲ್ದಾಣ ಉದ್ದಕ್ಕೆ ಮಲಗಿರುತ್ತದೆ. ಸುತ್ತಲೂ ಸ್ಫಟಿಕ ನೀಲದಂತೆ ಆವರಿಸಿರುವ ಪ್ರಶಾಂತ ಲಗೂನ್‌. ಅದನ್ನು ಅಬ್ಬರಿಸುವ ಕಡಲಿನಿಂದ ಸದಾಕಾಲ ಕಾಪಾಡುವ ಹವಳ ಗುಡ್ಡಗಳ ಗೋಡೆ. ನಡುವಲ್ಲಿ ಅಮಾಯಕನಂತೆ ನಿಂತಿರುವ ಈ ದ್ವೀಪ. ಪ್ರತಿದಿನ ಬೆಳಗ್ಗೆ ಹತ್ತು ಗಂಟೆಗೆ ಈ ದ್ವೀಪವನ್ನು ತಲುಪುವ ಈ ಪುಟ್ಟ ವಿಮಾನ ಇನ್ನೊಂದು ಗಂಟೆಯಲ್ಲಿ ಒಂದಿಷ್ಟು ಜನರನ್ನು ಹತ್ತಿಸಿಕೊಂಡು ವಾಪಸು ಕೊಚ್ಚಿ ಮಾರ್ಗವಾಗಿ ಬೆಂಗಳೂರಿಗೆ ಹೊರಡುತ್ತದೆ. ತನಗೂ ಈ ದ್ವೀಪಕ್ಕೂ ಏನೂ ಸಂಬಂಧವಿಲ್ಲದಂತೆ ದಿನಾ ಹೋಗಿಬರುವ ವಿಮಾನ. ಕಿಟಕಿಯಿಂದ ತಲೆಯಾನಿಸಿ ನೋಡಿದರೆ ಕೆಳಗಡೆ ಸುಮ್ಮನೆ ಮಲಗಿರುವ ಅರಬ್ಬಿ ಕಡಲು, ಹಾಯಿ ಹಡಗುಗಳಂತೆ ತೇಲುತ್ತಿರುವ ಬಿಳಿಯ ಮೋಡಗಳು, ಕಡಲಿನ ಮೇಲೆ ಚುಕ್ಕಿಗಳಂತೆ ಆಗೀಗ ಗೋಚರಿಸುವ ಸರಕಿನ ಹಡಗುಗಳು, ಮೀನುಗಾರರ ದೋಣಿಗಳು, ನಡುವಲ್ಲಿ ಕಾಣುವ ಒಂದೆರಡು ದ್ವೀಪಗಳು, ಕಾಲ ಸವೆದರೂ ಮುಗಿಯದ ಅಗಾಧ ಸಾಗರ, ಈ ಬದುಕು ನಿಜವೋ ಅಲ್ಲವೋ ಎಂದು ಅನಿಸುವ ಒಂದು ತರಹದ ಅಗೋಚರ ನಿಶ್ಯಬ್ದ ಮೆದುಳನ್ನು ತುಂಬಿಕೊಂಡಿರುತ್ತದೆ.

ಆಗಸ್ಟ್ ತಿಂಗಳ ಒಂದು ಮಳೆಗಾಲದ ಬೆಳಗು ವಿಮಾನ ಕೊಚ್ಚಿನ್‌ ತಲುಪಿದಾಗ ಅಲ್ಲಿಂದ ಮುಂದಕ್ಕೆ ಅಗತ್ತಿಯ ತನಕ ಹೋಗುವವನು ನಾನು ಒಬ್ಬನೇ ಇದ್ದೆ. ಸುರಿಯುವ ಮಳೆ, ಅಸಾಧ್ಯ ಗಾಳಿಯಲ್ಲಿ ಅಲ್ಲಿಂದ ಮುಂದಕ್ಕೆ ಹೋಗುವುದೋ ಇಲ್ಲವೋ ಎಂಬ ಸಂದೇಹದಲ್ಲಿ ಕೊಚ್ಚಿಯಿಂದ ಯಾವ ಪ್ರಯಾಣಿಕರನ್ನೂ ಹತ್ತಿಸಿಕೊಳ್ಳದೆ ವಿಮಾನವೂ ಸುಮ್ಮನೇ ಮಳೆಯಲ್ಲಿ ನಿಂತಿತ್ತು. ಎಷ್ಟು ಕಾಲದಿಂದ ಕನಸು ಕಾಣುತ್ತಿರುವ ಲಕ್ಷದೀಪವನ್ನು ಇವತ್ತಾದರೂ ತಲುಪುತ್ತೇನೆನ್ನುವ ತವಕದಲ್ಲಿದ್ದ ನಾನು ಪೆಚ್ಚಾಗಿದ್ದೆ. ಎಷ್ಟು ಬೇಡವೆಂದರೂ ಕೇಳದೆ ಸುರಿಯುತ್ತಿರುವ ಮಳೆಯಲ್ಲೇ ನಾನು ಹೊರಟಿದ್ದೆ. ಒಂದು ಊರಿಗೆ ಆ ಊರಿನ ಅತ್ಯಂತ ಕಷ್ಟಕಾಲದಲ್ಲೇ ಹೋಗಿ ಸೇರಬೇಕಂತೆ, ಆಮೇಲೆ ದಿನ ಕಳೆಯುತ್ತ ಒಂದೊಂದು ದಿನವೂ ಸುಖವಾಗುತ್ತ ಹೋಗುತ್ತದೆಯಂತೆ. ಬಾಲ್ಯಕಾಲದಲ್ಲಿ ಮಹಾನುಭಾವರೊಬ್ಬರು ಹೇಳಿದ್ದರು. ಅಂದ ಹಾಗೆ, ಈ ಮಹಾನುಭಾವರ ಅಜ್ಜನ ಅಜ್ಜ ಲಕ್ಷದ್ವೀಪದ ಮಾಯಾವಿ ಮಂತ್ರಗಾರರೊಬ್ಬರ ಮನೆತನದಿಂದ ಬಂದವರಂತೆ. ನಾವು ಕೊಡಗಿನ ಕಾಫಿ ತೋಟದ ಬಾಲ್ಯಕಾಲದಲ್ಲಿ ಈ ಮಹಾನುಭಾವರು ಹೇಳುತ್ತಿದ್ದ ಕಥೆಗಳನ್ನು ಕಣ್ಣರಳಿಸಿ ಕೇಳುತ್ತಿದ್ದೆವು. ಈ ಮಹಾನುಭಾವರು ನಮಗೆ ಅರಬ್ಬಿ ಭಾಷೆಯಲ್ಲಿದ್ದ ಕುರಾನ್‌ ಅನ್ನು ಕಲಿಸಲು ಬರುತ್ತಿದ್ದರು. ಅವರಿಗೆ ಆಗಲೇ ಬಹಳ ವಯಸ್ಸಾಗಿತ್ತು. ಆದರೂ ಅವರು ಕಣ್ಣುಗಳನ್ನು ಚೂಪು ಮಾಡಿಕೊಂಡು ನಮ್ಮನ್ನು ದುರುಗುಟ್ಟಿ ನೋಡಿದರೆ ನಾವು ಹೆದರಿಕೊಳ್ಳಬೇಕಿತ್ತು. ಏಕೆಂದರೆ, ಲಕ್ಷದ್ವೀಪದ ಮಾಯಾವಿ ಮಂತ್ರವಾದಿಯೊಬ್ಬರ ಮೊಮ್ಮಗನ ಮೊಮ್ಮಗನ ಮಗ ಅವರು. ನಾವು ಕುರಾನು ಕಲಿಯದೆ ಗಲಾಟೆ ಮಾಡಿದರೆ ಅವರು ತಮ್ಮ ಎಡಗೈ ಹಸ್ತವನ್ನು ಅಗಲ ಮಾಡಿ, ಬಲಗೈಯಿಂದ ನಮ್ಮನ್ನು ಹತ್ತಿರಕ್ಕೆ ಎಳೆದು ಹಿಡಿದುಕೊಂಡು, ನಮ್ಮನ್ನು ಸುರುಟಿ ಮುದ್ದೆ ಮಾಡಿ ಪುಡಿ ಮಾಡಿದಂತೆ ನಟಿಸಿ, ಆ ಪುಡಿಯನ್ನು ತಮ್ಮ ಬಲಗೈ ಹಸ್ತಕ್ಕೆ ಸುರಿದುಕೊಂಡು ನಸ್ಯದಂತೆ ಮೂಗಿಗೆ ಏರಿಸಿದಂತೆ ನಟಿಸಿ, ಆಕಾಶ ಹಾರಿ ಹೋಗುವಂತೆ ನಿಜವಾಗಿಯೂ ಸೀನುತ್ತಿದ್ದರು. ನಮಗೆ ನಿಜವಾಗಿಯೂ ನಾವು ಅವರ ಮೂಗಿನೊಳಗಿನ ನಶ್ಯವಾಗಿ ಹೋಗಿದ್ದೇವೆಯೋ ಏನೋ ಎಂಬ ಹೆದರಿಕೆಯಾಗುತ್ತಿತ್ತು. ಅವರು ನಮಗೆ ಒಲೆಯಿಂದ ಬೀಡಿ ಹೊತ್ತಿಸಿಕೊಂಡು ಬರಲು ಹೇಳಿ, ನಾವು ಬೀಡಿ ಹೊತ್ತಿಸಿಕೊಂಡು ಬರುವಷ್ಟರಲ್ಲಿ ತಾವೇ ಒಂದು ಬೀಡಿ ಹೊತ್ತಿಸಿ ಅರ್ಧ ಮುಗಿಸಿ ಇದು ಪಡೆದವನ ಬೆಂಕಿಯಲ್ಲಿ ಹೊತ್ತಿಸಿದ ಬೀಡಿ, “ಈಗ ನೀವು ಒಲೆಯಲ್ಲಿ ಹೊತ್ತಿಸಿದ ಬೀಡಿಯನ್ನು ಕೊಡಿ ಮಕ್ಕಳೇ’ ಎಂದು ಅದನ್ನೂ ಸೇದಿ ಬಿಡುತ್ತಿದ್ದರು.

ಅದಕ್ಕಿಂತಲೂ ಗಹನವಾಗಿದ್ದ ವಿಷಯವೆಂದರೆ, ತುಂಟರಾಗಿದ್ದ ನಮ್ಮನ್ನು ಅವರು ಸೈತಾನರೆಂದೂ, ಇಬಿಲೀಸ್‌ಗಳೆಂದೂ ಜರೆದು, ನಮ್ಮ ಕೈ ಹಿಡಿದೆಳೆದು ನಿಲ್ಲಿಸಿಕೊಂಡು ತಲೆಯ ಮೇಲೆ ಮೊಟಕಿ ಕುಬ್ಜರನ್ನಾಗಿ ಮಾಡಿದಂತೆ ನಟಿಸಿ, ಕುಬ್ಜರಾಗಿ ಹೋದಂತೆ ನಟಿಸಬೇಕಿದ್ದ ನಮ್ಮನ್ನು ಗೋಲಿ ಸೋಡಾ ಬಾಟಲಿಯೊಳಗೆ ತುರುಕಿದಂತೆ ಹಾವಭಾವ ಮಾಡಿಕೊಂಡು ಬಾಟಲಿಯೊಳಗೆ ಬಂಧಿಸುತ್ತಿದ್ದ ರೀತಿ ನಾವು ಗೋಲಿ ಸೋಡಾ ಬಾಟಲಿಯೊಳಗೆ ಬಂಧಿಗಳಾದಂತೆ ನಿಜವಾಗಿಯೂ ಚಡಪಡಿಸಿಕೊಂಡು ನಿಂತಿದ್ದರೆ ಅವರು ಇನ್ನೊಂದು ಬೀಡಿ ಹಚ್ಚಿಕೊಂಡು ಬಾಯಿಯಿಂದಲೂ, ಮೂಗಿನಿಂದಲೂ ಕಣ್ಣಿನಿಂದಲೂ ಕಿವಿಯಿಂದಲೂ ಹೊಗೆ ಬಿಟ್ಟುಕೊಂಡು ಹೊಗೆಯೊಳಗಿಂದಲೇ ಮಾಯಾವಿಯಂತೆ ನಗುತ್ತಿದ್ದರು. ಆಮೇಲೆ ಅವರು ಕಥೆ ಹೇಳುತ್ತಿದ್ದರು. ತೆಂಗಿನ ನಾರಿನ ಕಂತೆಗಳನ್ನು ಏರಿಸಿಕೊಂಡು ಲಕ್ಷದ್ವೀಪದಿಂದ ಕೇರಳದ ಕಣ್ಣಾನೂರಿಗೆ ಹಾಯಿ ಹಡಗಿನಲ್ಲಿ ಬರುತ್ತಿದ್ದ ಇವರ ಅಜ್ಜನ ಅಜ್ಜ ದಾರಿಯಲ್ಲಿ ಕಾಟ ಕೊಡುತ್ತಿದ್ದ ಕಡಲಿನ ದುಷ್ಟ ಯಕ್ಷ-ಯಕ್ಷಿಯರನ್ನು ಮಂತ್ರದ ಸಹಾಯದಿಂದ ಕುಬjರನ್ನಾಗಿ ಮಾಡಿ ಬಾಟಲಿಯೊಳಗೆ ತುರುಕಿಸಿ ಬಿರಡೆ ಜಡಿದು ಅರಬ್ಬಿ ಕಡಲಿಗೆ ಬಿಸಾಕುತ್ತಿದ್ದರಂತೆ. ಹಾಗೆ ಬಿಸಾಕಿದ ಬಾಟಲುಗಳು ಈಗಲೂ ಅರಬೀ ಕಡಲಿನಲ್ಲಿ ತೇಲುತ್ತಿರುತ್ತದಂತೆ. ಹಾಗೆ ತೇಲುತ್ತಿರುವ ಬಾಟಲುಗಳ ಬಿರಡೆಯನ್ನು ಈಗ ಯಾರಾದರೂ ಗೊತ್ತಿಲ್ಲದೆ ತೆರೆದರೆ ಬಿರುಗಾಳಿಯೂ, ಭೂಕಂಪವೂ, ಜಲಪ್ರಳಯವೂ ಸಂಭವಿಸುತ್ತವೆಯಂತೆ. ಹಾಗಾಗಿ, ಮುಚ್ಚಿ ರುವ ಬಾಟಲುಗಳ ಬಿರಡೆಯನ್ನು ತೆಗೆದಂತೆ ನಟಿಸಿ ನಮ್ಮನ್ನು ಬಂಧನದಿಂದ ಬಿಡಿಸಿ “ಆಟವಾಡಲು ಹೋಗಿ ಮಕ್ಕಳೇ, ನೀವು ಹೋದಲ್ಲೆಲ್ಲ ಬಿರುಗಾಳಿಯೂ ಭೂಕಂಪವೂ ಜಲಪ್ರಳಯವೂ ಸಂಭವಿಸಲಿ, ಈ ಹಾಳಾದ ಲೋಕ ಯಾಕೆ ಉಳಿಯಬೇಕು’ ಎಂದು ಎದ್ದು ತಾವೂ ಒಂದು ನಿಶ್ಯಕ್ತ ಸಂತನಂತೆ ಗಾಳಿಯಲ್ಲಿ ತೇಲಿ ಹೋಗುತ್ತಿದ್ದರು. ನಮ್ಮ ಬಾಲ್ಯದ ಕಾಫಿ ತೋಟದಲ್ಲಿ ಇವರನ್ನು ಎಲ್ಲರೂ ಅರೆಬೆರೆತ ತಮಾಷೆಯಿಂದಲೂ, ಗೌರವ-ಹೆದರಿಕೆಗಳಿಂದಲೂ ನೋಡುತ್ತಿದ್ದರು. ಏಕೆಂದರೆ, ಇವರಿಗೆ ತೋಟದ ಹೆಂಗಸರ ಹೆರಿಗೆ ನೋವನ್ನು ಕಡಿಮೆಗೊಳಿಸುವ ದಿವ್ಯ ಶಕ್ತಿಯೊಂದಿತ್ತು, ಇವರ ಜೋಳಿಗೆಯೊಳಗೆ ಒಂದು ಬೆಳ್ಳಗಿನ ಪಿಂಗಾಣಿ ತಟ್ಟೆಯೊಂದಿತ್ತು, ಈ ತಟ್ಟೆಯಲ್ಲಿ ಇವರು ಒಲೆಯ ಮೇಲಿಟ್ಟ ಮಣ್ಣಿನ ಮಡಿಕೆಯ ಮೇಲ್ಮೆ„ಯಲ್ಲಿ ಉಂಟಾಗುವ ಮಸಿಯನ್ನು ಬಳಸಿ ಖುರಾನಿನ ವಾಕ್ಯಗಳನ್ನು ಬರೆಯುತ್ತಿದ್ದರು ಮತ್ತು ತಮ್ಮ ಜೋಳಿಗೆಯ ಒಳಗಿಂದ ತೆಗೆದ ಬಾಟಲಿಯ ನೀರಿನಿಂದ ಆ ತಟ್ಟೆಯನ್ನು ತೊಳೆದು, ತೊಳೆದ ಈ ನೀರನ್ನು ಗರ್ಭಿಣಿಯರಿಗೆ ಕುಡಿಸಿದರೆ ಅವರ ಹೆರಿಗೆಯ ನೋವು ಕಡಿಮೆಯಾಗುತ್ತಿತ್ತು. ಆ ಬೆಳ್ಳಗಿನ ಪಿಂಗಾಣಿಯ ಬಟ್ಟಲು ತಮ್ಮ ಅಜ್ಜನ ಅಜ್ಜನಿಗೆ ಸೇರಿದ್ದೆಂದೂ ಅದು ಪ್ರಳಯದವರೆಗೂ ತಮ್ಮ ಜೊತೆಗೆ ಇರುವುದೆಂದೂ ಅವರು ನಂಬಿದ್ದರು. ನಾವೂ ನಂಬಿದ್ದೆವು. ಆದರೆ, ಒಂದು ದಿನ ಅವರೂ ತೀರಿ ಹೋದರು. ಆ ಪಿಂಗಾಣಿಯ ಬಟ್ಟಲೂ ಆಮೇಲೆ ಕಾಣಸಿಗಲಿಲ್ಲ.

ನಾನು ಹತ್ತು ವರ್ಷಗಳ ಕೆಳಗೆ ಒಂದು ಕಾದಂಬರಿ ಬರೆದೆ. ಅದರಲ್ಲಿ ಇವರೊಂದು ಕಥಾಪಾತ್ರವಾಗಿದ್ದರು. ಅದ್ಯಾಕೋ ಕನ್ನಡದ ಈ ಕಾದಂಬರಿ ಫ್ಲಾಪ್‌ ಆಯಿತು. ಈ ನೈರಾಶ್ಯದಲ್ಲಿ ಮುಳುಗಿದ್ದ ನನ್ನ ತಲೆಯ ಮೇಲೆ ಮೊಟಕಿದಂತೆ ನನ್ನ ಎಲ್ಲವೂ ಆಗಿದ್ದ ಆತ್ಮಗುರುವೊಬ್ಬಳು ಅಕಾಲಿಕವಾಗಿ ತೀರಿಹೋದಳು, ಅವಳಿಗೆ ಈ ಮಹಾನುಭಾವರ ಪಿಂಗಾಣಿ ತಟ್ಟೆಯ ಕಾದಂಬರಿಯಲ್ಲಿ ಬರೆಯದ ಕಥೆಗಳನ್ನೂ ಹಲವು ಸಲ ಹೇಳಿದ್ದೆ. ಆ ಪಿಂಗಾಣಿ ತಟ್ಟೆಯ ಮಹಾನುಭಾವರು ಇದ್ದಿದ್ದರೆ ನನ್ನನ್ನು ಬದುಕಿಸುತ್ತಿದ್ದರೋ ಏನೋ ಎಂದು ಆಕೆ ತನ್ನ ರೌರವ ನೋವಿನ ನಡುವೆಯೂ ಆಶೆಪಟ್ಟಿದ್ದಳು. “ದಯವಿಟ್ಟು ನನ್ನ ಬದುಕಿಸು’ ಎಂದು ಕಲ್ಲೂ ನೀರೂ ಕರಗುವಂತೆ ಕೇಳಿಕೊಂಡಿದ್ದಳು. ಬದುಕಿಸಲಾಗದ ನನ್ನನ್ನು “ಸೈತಾನನೇ’ ಎಂದು ಕರೆದು ತಾನು ತೀರಿಹೋಗಿದ್ದಳು.

ಒಂದೋ ನಾನೂ ಬದುಕಬಾರದು, ಇಲ್ಲದಿದ್ದರೆ ಅವಳನ್ನು ಉಳಿಸಬಹುದಾಗಿದ್ದ ಪಿಂಗಾಣಿ ಬಟ್ಟಲನ್ನು ಹುಡುಕುತ್ತ ಉಳಿದ ಬದುಕನ್ನು ಲಕ್ಷದ್ವೀಪದಲ್ಲಿ ಕಳೆಯಬೇಕು ಎಂದು ಹೊರಟವನ ವಿಮಾನವನ್ನು ಆಗಸ್ಟಿನ ಜಲಪ್ರಳಯವೂ, ಬಿರುಗಾಳಿಯೂ ಕೊಚ್ಚಿನ್‌ ವಿಮಾನ ನಿಲ್ದಾಣದಲ್ಲಿ ಹಿಡಿದು ಅಲುಗಾಡಿಸುತ್ತಿತ್ತು. ಯಾರೋ ಸೈತಾನನ ಬಾಟಲಿಯ ಬಿರಡೆಯನ್ನು ಗೊತ್ತಿಲ್ಲದೆ ತೆರೆದಿರಬೇಕು, ಇನ್ನು ಸ್ವಲ್ಪ ಹೊತ್ತಲ್ಲಿ ಎಲ್ಲವೂ ಶಾಂತವಾಗಲೆಂದು ಪ್ರಾರ್ಥಿಸಿ ಮಹಾನುಭಾವರೇ ಎಂದು ನಾನು ಕಾಯುತ್ತಿದ್ದೆ.

ಅಬ್ದುಲ್‌ ರಶೀದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ