ಭೈರಪ್ಪ ನಕ್ಕರು!

Team Udayavani, Oct 6, 2019, 5:35 AM IST

ಎಸ್‌.ಎಲ್‌. ಭೈರಪ್ಪನವರ ಮುಖ ಯಾವಾಗಲೂ ಗಂಭೀರ ! ಸದಾ ತನ್ನೊಳಗೆ ತಾನು ಎಂಬಂತಿ ರುವ ಅವರು ನಕ್ಕದ್ದನ್ನು ನೋಡಿದವರು ಕಡಿಮೆಯೇ. ಅಪರೂಪಕ್ಕೆ ಒಂದು ಸಲ ನಕ್ಕರು. ಅದನ್ನು ಮೈಸೂರಿನ ಹಿರಿಯ ಸಂಶೋಧಕರಾದ ಡಾ. ನಾಗರಾಜ ಶರ್ಮರು ಸೆರೆ ಹಿಡಿದು ಬಿಟ್ಟರು. ಈ ಸಲ ದಸರೆಯಲ್ಲಿ ಆ ಪಟವೂ ಪ್ರದರ್ಶನಗೊಳ್ಳುತ್ತಿದೆ. ಭೈರಪ್ಪನವರ ಆ ನಗುವನ್ನು ಮೂಡಿಸಿ, ಹಾಗೇ ಸೆರೆ ಹಿಡಿದ “ಚಿತ್ರಕತೆ’ ಇಲ್ಲಿದೆ ನೋಡಿ.

ಗೇಟ್‌ “ಕಿರ್‌’ ಅಂದಿತು. ನೋಡಿದರೆ, ಬಿಳೀಷರಟು, ಜೇಬಲ್ಲಿ ಪೆನ್ನು, ವಯಸ್ಸಾಯ್ತು ಅಂತ ಸಾರಲು ನಿಂತಿದ್ದ ತಲೆಯ ಬಿಳಿ ಮುಂಗೂದಲ ಎಸ್‌. ಎಲ್‌. ಭೈರಪ್ಪನವರು ಹೆಂಡತಿ ಸರಸ್ವತಿಯೊಂದಿಗೆ ಬಾಗಿಲು ತೆಗೆಯುತ್ತಿದ್ದಾರೆ.
“ಶಿಲ್ಪ ಸ್ಟುಡಿಯೋ ಇದೇನಾ’ ಅಂದರು ; ಮಂದ್ರದಲ್ಲಿ. ಒಳಗೆ ಕಂಪ್ಯೂಟರ್‌ ಮುಂದೆ ಕುಳಿತಿದ್ದ ನಾಗರಾಜ ಶರ್ಮರ ಕಿವಿ ನೆಟ್ಟಗಾಗಿ, ಇದು ಎಲ್ಲೋ ಕೇಳಿದ ದನಿಯಲ್ಲವೇ ಅಂತ ಓಡಿ ಬಂದರು. ನೋಡಿದರೆ ಅವರೇ, ಜಲಪಾತದ ಕತೃì ಭೈರಪ್ಪ.

“ಕಾಚೇರಿಕ ವ್ಯವಹಾರಕ್ಕಾಗಿ ದಂಪತಿ ಫೋಟೋ ಬೇಕಿತು’¤ ಅಂದರು.
“ಅರೇ, ಅದಕ್ಕೇನಂತೆ ಬನ್ನಿ ಸಾರ್‌. ಕೂತ್ಕೊಳ್ಳಿà. ತೆಗಿತೀನಿ’ ಅಂತ ಸ್ಟುಡಿಯೋ ಒಳಗೆ ಸಡಗರದಿಂದ ಕೂಡ್ರಿಸಿದರು ಶರ್ಮ.

ಉಭಯ ಕುಶಲೋಪರಿ ಸಾಂಪ್ರತಾ ಎಲ್ಲ ಆಯಿತು. ಪಕ್ಕದಲ್ಲೇ ಇದ್ದ ತಮ್ಮ ಮನೆ ಯಿಂದ ಕಾಫಿಯೂ ಬಂತು.

ಈ ನಾಗರಾಜ ಶರ್ಮರಿಗೆ ಭೈರಪ್ಪನವರೊಂದಿಗೆ ಮಧುರವಾದ ಸಲುಗೆ ಇತ್ತು. ಅದಕ್ಕೆ ಕಾರಣ ಈ ಒಂದು ಘಟನೆ. ಒಂದು ಸಲ ಇದ್ದಕ್ಕಿದ್ದಂತೆ ಟಿ. ಕೆ. ಲೇಔಟ್‌ನ ಶರ್ಮರ ಮನೆಯ ಗೇಟನ್ನು ಇದೇ ರೀತಿ ತೆರೆದು ಬಂದೇ ಬಿಟ್ಟರು ಭೈರಪ್ಪ. ಕಾಲಲ್ಲಿ ಕ್ಯಾನ್‌ವಾಸ್‌ ಶೂ ಬೇರೆ ಇತ್ತು. ಬಹುಶಃ ವಾಕಿಂಗ್‌ ಹೋಗಿದ್ದರು ಅನಿಸುತ್ತದೆ. ಬಂದವರೇ, “ನಾರಾಯಣರಾವ್‌ ಎಲ್ಲಿ?’ ಅಂತ ಕೇಳಿದರು. ಎದುರಿಗೆ ಶರ್ಮರನ್ನು ನೋಡಿ, “ಓ ಸಂಶೋಧಕರು, ಎಲ್ಲಿ ಅವರು?’ ಅಂತ ಆಶ್ಚರ್ಯಚಕಿತರಾಗಿ ಕೇಳಿದರು. ವಾಸ್ತವವಾಗಿ ಭೈರಪ್ಪನವರು ಹುಡುಕಿಕೊಂಡು ಬಂದಿದ್ದ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ನಾರಾಯಣರಾವ್‌ ಶರ್ಮರ ಗೆಳೆಯರೂ ಕೂಡ. ಭೈರಪ್ಪನವರು ದೆಹಲಿಯಲ್ಲಿದ್ದಾಗ ಗಳಸ್ಯ ಕಂಠಸ್ಯ ಸ್ನೇಹ. ಒಂಟಿಕೊಪ್ಪಲಿನ ಆ ಮನೆಯಲ್ಲಿ ಮೊದಲು ನಾರಾಯಣರೇ ಇದ್ದದ್ದು. ಅವರ ಬಿಟ್ಟ ಮೇಲೆ ಶರ್ಮರು ಬಂದು ಸೇರಿಕೊಂಡರು. ಆದರೆ, ಬೈರಪ್ಪನವರು ನಾರಾಯಣರಾವ್‌ ಇನ್ನೂ ಅದೇಮನೆಯಲ್ಲಿ ಇದ್ದಾರೆ ಅಂದುಕೊಂಡೋ ಏನೋ ಆವತ್ತು ಮನೆಯ ಒಳಗೆ ಬಂದು ಕೂತರು. ಅವರನ್ನು ನೋಡಿದ ಕೂಡಲೇ ಶರ್ಮರ ಮನಸ್ಸು ಕುಣಿದಾಡಿತು- ಒಳ್ಳೇ ಫೋಟೋ ತೆಗೆಯಬಹುದಲ್ಲಾ ? ಅಂತ.

“ಸ್ವಲ್ಪ ಕಾಫಿ ತಗೊಳ್ಳಿ’ ಅಂತ ಕೊಟ್ಟರು. ಸರ್‌ಪರ್‌ ಅಂತ ಕುಡಿಯುತ್ತಿದ್ದಾಗಲೇ ಉಭಯ ಕುಶಲೋಪರಿ ಕೇಳಿ, ಮೆಲ್ಲಗೆ ಒಳಗೆ ಕರೆದುಕೊಂಡು ಹೋಗಿ, ಭೈರಪ್ಪವನರ ಒಂದಷ್ಟು ನಾನಾ ಭಂಗಿಯ ಭಾವಚಿತ್ರವನ್ನು ಸೆರೆಹಿಡಿದು ಕಳುಹಿಸಿದ್ದರು.

ಹೀಗಾಗಿ, ಭೈರಪ್ಪನವರಿಗೆ ನಾಗರಾಜ ಶರ್ಮ ಅಂದರೆ ತುಸು ಹೆಚ್ಚು ಸಲುಗೆಯೇ ಹಬ್ಬಿತ್ತು¤. ಅದೇ ಸಲುಗೆಯಲ್ಲಿ ಭೈರಪ್ಪನವರು ಶರ್ಮರ ಫೋಟೋಸ್ಟುಡಿಯೋಗೆ ಬಂದದ್ದು.

“ಸಾರ್‌, ನೀವು ಇಲ್ಲಿ ಕುಳಿತುಕೊಳ್ಳಿ’ ಅಂದರು ಶರ್ಮ. ಪಕ್ಕದಲ್ಲಿ ಅವರ ಹೆಂಡತಿಯನ್ನೂ ಕೂರಿಸಿ ಎದುರುಗಡೆಯಿಂದ ಲೈಟು ಬಿಟ್ಟರು. ಭೈರಪ್ಪನ ವರು ನ್ಯಾಚುರಲ್ಲಾಗೇ ಇದ್ದರು. ಪೌಡರ್‌, ಸ್ನೋ ಸೋಕಿಸದ ಮುಖ. ತಲೆಗೂದಲನ್ನು ಇರಲಿ ಅಂಥ ಹಿಂದಕ್ಕೆ ತೀಡಿದ್ದು ಬಿಟ್ಟರೆ ಬೇರೇನು ಹೆಚ್ಚುವರಿ ಡ್ರಸ್‌ ಮಾಡಿಕೊಂಡಿರಲಿಲ್ಲ. ಮೀಸೆ ಇಲ್ಲದ ಮುಖದ ಮೇಲೆ ಬೆಳಕು ಹಾಯಿಸಿದಾಗ ಈ ಎಲ್ಲವೂ ಡಿಟೇಲಾಗಿ ಕಾಣುತ್ತ ಹೋಯಿತು. ನಗು ಮಿಂಚಾಗಿ ಬರಬಹುದು ಎಂಬ ನಿರೀಕ್ಷೆ ಇತ್ತಾದರೂ ಮೂಡಲಿಲ್ಲ. ಎಷ್ಟೇ ಪ್ರಖರ ಬೆಳಕು ಬಿದ್ದರೂ ಭೈರಪ್ಪನವರೇನು ನಗಲಿಲ್ಲ. ಎಲ್ಲ ಅರಿತ ಶರ್ಮರ ಕ್ಯಾಮರ ಕ್ಲಿಕ್‌ಕ್ಲಿಕ್‌ ಅಂದಿತು.

ಇವರ ನಗುತ್ತಿರುವ ಫೋಟೋ ತೆಗೆದರೆ ಹೇಗೆ?
ಶರ್ಮರಿಗೆ ಈ ಐಡಿಯಾ ಹೊಳೆದದ್ದೇ ಪೆನÒನ್‌ಫೋಟೋ ಸೆಷನ್‌ ಮುಗಿಸಿ, ಇದ್ದ ಸಲುಗೆಯನ್ನು ಮತ್ತೂಮ್ಮೆ ಬಳಸಿಕೊಂಡು- “ಸಾರ್‌, ಔಟ್‌ ಡೋರ್‌ನಲ್ಲಿ ನಿಮ್ಮ ಫೋಟೋ ತೆಗೆದರೆ ಬಹಳ ಚೆನ್ನಾಗಿ ಬರುತ್ತೆ’ ಅಂತ ಹೇಳಿದಾಗ, ಅವರ ಹಣೆಯ ಮೇಲೆ ಅಡ್ಡಡ್ಡ ಓಡಾಡುತ್ತಿದ್ದ ಗೆರೆಗಳು ಒಂದು ಸಲ ಲಂಬವಾಗಿ ಮತ್ತೆ “ಸರಿ ತೆಗೀರಿ’ ಅನ್ನೋ ರೀತಿ ಸ್ವಸ್ಥಾನಕ್ಕೆ ಮರಳಿದಾಗ- ಮಾತು ಶುರುಮಾಡಿದರು- “ನನ್ನ ಫೋಟೋ ಏಕೆ ತೆಗಿತೀರಿ? ನಾನು ಫೋಟೋದಲ್ಲಿ ಚೆನ್ನಾಗಿ ಕಾಣೋಲ್ಲ’ ಮಧ್ಯಮ ಶ್ರುತಿಯಲ್ಲಿ ಅಪಸ್ವರ ಹಾಡಿದರು. ಆದರೆ, ಶರ್ಮರು ಬಿಡಲಿಲ್ಲ. ಬಂದ ದಾರಿಯಲ್ಲೇ ಮತ್ತೆ ವಾಪಸ್‌ ಕರೆದುಕೊಂಡು ಹೋಗಿ, ಹೊರಗಡೆ ಗೇಟು ತೆರೆದು ಪಕ್ಕದಲ್ಲಿ ನಿಲ್ಲಿಸಿದರೆ ಸೂರ್ಯ ಸರಿಯಾಗಿ ಭೈರಪ್ಪವನರನ್ನು ನೋಡಲೆಂದೇ ಬಂದವನಂತೆ ಅವರ ಮುಖದ ಮೇಲೆ ಬೀಳುತ್ತಿದ್ದ.

“ಸಾರ್‌, ಇಲ್ಲೇ ನಿಂತ್ಕೊಳಿ. ಕದಲಬೇಡಿ’ ಅಂದರು ಶರ್ಮರು. ಮಾತು ಇಷ್ಟಕ್ಕೇ ನಿಲ್ಲಲಿಲ್ಲ. “ಸಾರ್‌, ನೀವು ನಗುತ್ತಿರುವ ಫೋಟೋ ಎಲ್ಲೂ ಇಲ್ಲ ಅಂತಾರೆ. ಆ ಕೊರತೆ ನೀವೇ ನೀಗಿಸಬೇಕು’ ಅಂದರು.

“ಇಲ್ಲ, ಇಲ್ಲ, ಹಾಗೇನು ಇಲ್ಲ ಶರ್ಮಅವರೇ‌’ ಅಂದಾಗ ಅವರ ಮುಖದಲ್ಲಿ ಅಲೆಯಂತೆ ಎದ್ದ ಉಬ್ಬು ವಾಸಸ್ಥಾನಕ್ಕೆ ಬಂದು, ಕೆನ್ನೆಯ ಪ್ರದೇಶ ಸ್ವಲ್ಪ ಸಡಿಲವಾಗಿ, ಅದು ಬಾಯಿ, ಅದರ ಸುತ್ತಲಮುತ್ತಲ ಆಯಕಟ್ಟನ್ನು ದಾಟಿ ಹಣೆಯನ್ನೂ ವಿಸ್ತರಿಸಿದಾಗ… ನೀರಲ್ಲಿ ಕಲ್ಲು ಎಸೆದಾಗ ಹುಟ್ಟುವ ತರಂಗದಂತೆ ನಗು ಉಕ್ಕಿ, ಮುಖವನ್ನೆಲ್ಲಾ ಆವರಿಸಿ ಜಲಪಾತದಂತೆ ಧುಮುಕಿ, ಕೆಲವೇ ಸೆಕೆಂಡುಗಳಲ್ಲಿ “ಸಾಕಲ್ವಾ ‘ಅನ್ನೋ ರೀತಿ ಹಾಗೇ ಇಂಗಿಹೋಯಿತು.
ಇದೇ ಸಮಯಕ್ಕೆ ಕಾಯುತ್ತಿದ್ದ ಶರ್ಮರು ಯಾವ ಕ್ಷಣವನ್ನೂ ತಪ್ಪಿಸಿಕೊಳ್ಳದೇ ಕ್ಯಾಮರದಲ್ಲಿ ಹಿಡಿದಿಟ್ಟು ಕೊಂಡರು.

ಇದಾದ ಮೇಲೆ, ಒಂದಷ್ಟು ದಿನಗಳ ನಂತರ ಪೆನÒನ್‌ ಫೋಟೋ ತೆಗೆದುಕೊಂಡು ಹೋಗಲು ಮತ್ತೆ ಭೈರಪ್ಪವನವರು ಶರ್ಮರ ಸ್ಟುಡಿಯೋಕ್ಕೆ ಬಂದರು. ಆ ಫೋಟೋ ಜೊತೆಗೆ ನಗುತ್ತಿದ್ದ ಈ ಫೋಟೋ ಕೂಡ ಇತ್ತು.
ಶರ್ಮರು, “ನೋಡಿ ಸಾರ್‌, ನೀವು ಎಷ್ಟು ಚೆನ್ನಾಗಿ ನಗ್ತಾ ಇದ್ದೀರಿ. ಹೀಗೆ ನಕ್ಕರೆ ಬಹಳ ಚೆನ್ನಾಗಿ ಕಾಣಿ¤àರ’ ಅಂದಾಗ.. “ಹೌದಲ್ಲಾ, ಶರ್ಮರೇ.. ಹಹಹಹಹ ಅಂತ’ ಆ ಫೋಟೋ ನಾಚುವಂತೆ ಮಗದಷ್ಟು ನಕ್ಕರು. ಶರ್ಮರ ಕೈಯಲ್ಲಿ ಆಗ ಕ್ಯಾಮರ ಇರಲಿಲ್ಲವಾದ್ದರಿಂದ ಕೈಕೈ ಹಿಸುಕಿ ಕೊಳ್ಳುವುದೊಂದೇ ಹಾದಿ.
.
ಗೆಳೆಯ ನಾರಾಯಣ್‌ರಾವ್‌ ಒಂದು ಸಾರಿ, “ಶರ್ಮ, ಬಾರಯ್ಯ, ಭೈರಪ್ಪನವರ ಮನೆಗೆ ಹೋಗಿ ಬರೋಣ’ ಅಂತ ಕರೆದರು. ಅಷ್ಟೊತ್ತಿಗೆ ಶರ್ಮರು, ಜಲಪಾತ ಕಾದಂಬರಿ ಓದಿಕೊಂಡು, ಅದರಲ್ಲಿ ಬರುತ್ತಿದ್ದ ಮೈಸೂರಿನ ವಿವರಣೆ, ಚಿತ್ರಕಲೆಯ ಹಿನ್ನೆಲೆಗೆ ಮಾರುಹೋಗಿದ್ದರು. ಹೀಗಾಗಿ, ಭೈರಪ್ಪ ಅನ್ನುವ ಸಾಹಿತ್ಯ ಪರ್ವತವನ್ನೇ ಸೆರೆ ಹಿಡಿಯುವ ತವಕ ಹೆಚ್ಚಿತ್ತು. ಹೀಗಾಗಿ, ಏಷಿಕಾ 635 ಕ್ಯಾಮರ ನೇತು ಹಾಕಿಕೊಂಡು, ಯಜ್ಡಿ ಬೈಕ್‌ನಲ್ಲಿ ಒಂಟಿಕೊಪ್ಪಲಿ 6ನೇ ಕ್ರಾಸ್‌ನಲ್ಲಿ ಇದ್ದ ಅವರ ಮನೆಗೆ ಹೋದರು. ಭೈರಪ್ಪನವರು ಅದೇನೋ ಓದುತ್ತಾ ಕುಳಿದ್ದವರು, ವಾಹನ ಸದ್ದಿಗೆ ಮುಂಬಾಗಿಲಿಗೆ ಸ್ವಾಗತಿಸುವಂತೆ ಬಂದರು.

“ಬನ್ನಿ, ನಾರಾಯಣ್‌ರಾವ್‌’ ಅಂತ ಒಳಗೆ ಕರೆದುಕೊಂಡು ಹೋದರು, ಕಾಫಿ-ತಿಂಡಿ ಜೊತೆಗೆ ದೆಹಲಿಯಲ್ಲಿ ಇದ್ದಾಗಿನ ಹಳೆ ಕತೆಗಳೆಲ್ಲವೂ ಬಂದು ಹೋದವು. ಮಾತಿನ ಮಧ್ಯೆ, ಶರ್ಮರು, “ಸಾರ್‌, ನಿಮ್ಮ ಫ್ಯಾಮಿಲಿ ಫೋಟೋ ತೆಗೆಯಬಹುದಾ?’ ಅಂದಾಗ.. ಅದಕ್ಕೇನಂತೆ, ಅಂತ ಬನಿಯನ್‌ನಲ್ಲಿ ಇದ್ದವರು, ಗರಿ ಗರಿ ಷರಟು ತೊಟ್ಟು ಬಂದು ಬೆತ್ತದ ಚೇರಿನಲ್ಲಿ ಕೂತರು. ತೆಳು ಮೀಸೆಯ ಮುಖದಲ್ಲೇ ಗಂಭೀರವೇ ಎದ್ದು ಕಾಣುತ್ತಿತ್ತು. ಹೆಂಡತಿ ಸರಸ್ವತಿಯ‌ವರನ್ನೂ ಪಕ್ಕದಲ್ಲಿ ಕೂಡಿಸಿ ಸಿದ್ಧ ಮಾಡುವ ಹೊತ್ತಿಗೆ, ಹೊರಗಡೆ ಚಡ್ಡಿ ಹಾಕಿಕೊಂಡು ಅಲ್ಲೇ ಆಟವಾಡುತ್ತಿದ್ದ ಮಗ ಉದಯಕುಮಾರನನ್ನು -“ಲೇ, ಬಾರೋ ಇಲ್ಲಿ ‘ ಅಂದರು. ಕೆದರಿದ ತಲೆಗೂದಲನ್ನು ಕೈಯಲ್ಲೇ ಸಪಾಟು ಮಾಡಿ ಕೊಂಡು ಬಂದ ಮಗನನ್ನು ಇಬ್ಬರ ಮಧ್ಯೆ ನಿಲ್ಲಿಸಿ ಪೂರ್ಣ ಪ್ರಮಾಣದ ಭೈರಪ್ಪನವರ ಕೌಟುಂಬಿಕ ಚಿತ್ರವನ್ನು ಕ್ಲಿಕ್ಕಿಸಿದರು ಶರ್ಮ. ಆಮೇಲೆ, “ಸಾರ್‌, ನಿಮ್ಮ ಸೋಲೊ ಫೋಟೋ ಬೇಕಲ್ಲಾ?’ ಅಂದಾಗ,
ಶರ್ಮ ಅವರೇ, ನಾನು ಫೋಟೋದಲ್ಲಿ ಚೆನ್ನಾಗಿ ಬರೋಲ್ಲ. ಎಷ್ಟು ಕೆಟ್ಟದಾಗಿ ಸಾಧ್ಯವೋ ಅಷ್ಟು ಕೆಟ್ಟದಾಗಿ ಬರ್ತೀನಿ. ನೀವು, ಹೇಗೆ ತೆಗಿತೀರೋ ತೆಗಿರಿ, ನೋಡೋಣ’ ಅಂದರು.

ಶರ್ಮರು, “ಸಾರ್‌, ನಾನು ನಿಮ್ಮ ವ್ಯಕ್ತಿತ್ವಕ್ಕೆ ಕ್ಯಾಮರ ಇಡೋದು, ಯಾರು ನಿಮಗೆ ಹಾಗೆ ಹೇಳಿದ್ದು’ ಅಂತೆಲ್ಲ ಪುಸಲಾಯಿಸಿದರು. ಕೊನೆಗೆ, ಭೈರಪ್ಪನವರು ನಿರಾಸೆ ಮಾಡಬಾರದು ಅಂತ ರೂಮಿಗೆ ಕರೆದೊಯ್ದುರು. ಅಲ್ಲಿ ಟೇಬಲ್‌ ಇತ್ತು. ಅದರ ಮೇಲೆ ಹಳೇ ಕಾಲದ ರೇಡಿಯೋ. ಅದರಲ್ಲಿ ಹಿಂದೂಸ್ತಾನಿ ಆಲಾಪ. ಟೇಬಲ್‌ ಮೇಲೆ ಒಂದಷ್ಟು ಪುಸ್ತಕಗಳು ಹರಡಿದ್ದವು. ಅದರಲ್ಲಿ ಅರ್ಧ ಓದಿ, ಇಟ್ಟಿದ್ದ ಹಿಮಾಲಯ ಪುಸ್ತಕವನ್ನು ಕೈಗೆ ಕೊಟ್ಟು ಬೆತ್ತದ ಚೇರ್‌ನಲ್ಲಿ ಕುಳ್ಳಿÛರಿಸಿ, ಇನ್ನೊಂದಷ್ಟು ಫೋಟೋಗಳನ್ನು ತೆಗೆದರು.

– ಕಟ್ಟೆ ಗುರುರಾಜ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ