ಕತೆ: ಹಲಸಿನ ಮರದ ಹಾಡು 


Team Udayavani, May 6, 2018, 6:00 AM IST

9.jpg

ನಾನು ನಿಮಗೊಂದು ಹಲಸಿನ ಮರದ ಕುರಿತಾದ ಕಥೆ ಹೇಳಬೇಕಾಗಿದೆ. ನಿಮಗೆ ಹೇಗನ್ನಿಸುತ್ತದೋ ನನಗೆ ಗೊತ್ತಿಲ್ಲ. ನನ್ನ ಪಾಲಿಗಂತೂ ಮರೆಯಲಾಗದ ಅನುಭವ ನೀಡಿದ ಕಥೆಯದು. ಅಂದರೆ ನೇರವಾಗಿ ಅನುಭವಿಸಿದ್ದಲ್ಲ. ಕೇಳಿದ್ದು. ನನ್ನ ಗೆಳತಿ ಶಂಕರಿ ಹೇಳಿದ್ದು. ಅದನ್ನು ಇದ್ದದಿದ್ದ ಹಾಗೆ ನಿಮಗೆ ದಾಟಿಸುವ ಕೆಲಸವಷ್ಟೇ ನನ್ನದು. ಆದರೆ, ಒಂದು ವಿಷಯ ಮಾತ್ರ ಸತ್ಯ. ಶಂಕರಿ ಸುಳ್ಳು ಹೇಳುವವಳಲ್ಲ. ಅಲ್ಲದೆ ಈ ವಿಷಯದಲ್ಲಿ ಸುಳ್ಳು ಹೇಳಿ ಅವಳಿಗೆ ಆಗಬೇಕಾದ್ದೇನೂ ಇಲ್ಲ. ನನಗಂತೂ ಅವಳು ಹೇಳಿದ ಕಥೆ ಅದ್ಭುತವೆನ್ನಿಸಿದೆ.

ಶಂಕರಿ ಇತ್ತೀಚೆಗೆ ಒಂದು ದಿನ ನಮ್ಮ ಮನೆಗೆ ಬಂದಿದ್ದಳು. ನಮ್ಮ ಮನೆಯ ಅಂಗಳದ ಬದಿ ವಿಶಾಲವಾಗಿ ಹಬ್ಬಿ ಧಾರಾಳವಾಗಿ ನೆರಳು ನೀಡುತ್ತಿದ್ದ  ಒಂದು ದೊಡ್ಡ ಹಲಸಿನ ಮರವನ್ನು  ಕಡಿದು ಮಾರಬೇಕೆಂದು ಅಪ್ಪ ಆಲೋಚಿಸಿದ್ದ ಸಮಯವದು. ಅದರ ಎಲೆಗಳು ಯಾವಾಗಲೂ ಅಂಗಳದಲ್ಲಿ ಬಿದ್ದು ಕಸ ಗುಡಿಸುವುದು ಕಷ್ಟವಾಗುತ್ತಿತ್ತೆಂದೂ, ಅದರ ನೆರಳಿನಿಂದಾಗಿ ಬಿಸಿಲಿಲ್ಲದೆ ಅಡಕೆ ಒಣಗಿಸಲಾಗುತ್ತಿಲ್ಲವೆಂದೂ ಅಪ್ಪಸದಾ ಗೊಣಗುತ್ತಿದ್ದರು. ಅಲ್ಲದೆ, ಅದು ಈಗೀಗ ಒಂದೇ ಒಂದು ಕಾಯಿ ಬಿಡುತ್ತಲೂ ಇರಲಿಲ್ಲ. ನಮ್ಮ ಮನೆಗೆ ಆಗಾಗ ಏನಾದರೂ “ಕಚ್ಚೋಡ’ಕ್ಕಾಗಿ ಭೇಟಿ ಕೊಡುತ್ತಿದ್ದ ಈಚು ಬ್ಯಾರಿ ಹೇಳಿದ ಉಪಾಯವಾಗಿತ್ತದು. “ಮಾರಿದರೆ ಧಾರಾಳ ದುಡ್ಡು ಕೊಡುವೆ, ನಿಮ್ಮ ತೊಂದರೆಯೂ ತಪ್ಪುತ್ತದಲ್ಲ’ ಎಂದಾಗ ಅಪ್ಪನಿಗೆ ಆಗಬಹುದೆನ್ನಿಸಿತ್ತು. ಹಾಗೆ ಒಂದು ವಾರದೊಳಗೆ ಈಚು ಬ್ಯಾರಿ ತನ್ನ ಕೆಲಸದವರೊಂದಿಗೆ ಬಂದು ಮರ ಕಡಿಯುವುದೆಂದು ನಿಶ್ಚಯವಾಗಿತ್ತು.ಹಾಗೆ, ಆ ದಿನವಷ್ಟೇ ಅದರ ಎರಡು ದೊಡ್ಡ ದೊಡ್ಡ ಕೊಂಬೆಗಳನ್ನು ಕಡಿದು ಸಾಗಿಸಿ ಬಿಟ್ಟೂ ಆಗಿತ್ತು.

“ಅರೆ ! ಈ ಹಲಸಿನ ಮರಕ್ಕೆ ಏನಾಯಿತು ?’ ಶಂಕರಿ ಮನೆಯ ಮೆಟ್ಟಲೇರುವುದಕ್ಕೆ ಮೊದಲೇ ಆಶ್ಚರ್ಯದಿಂದ ಕೇಳಿದಳು.
“ಓ, ಅದನ್ನು ಕಡಿಸುವ ತಯಾರಿ ನಡೀತಾ ಇದೆ. ಅದರಿಂದ ಉಪದ್ರವವೇ ಹೊರತು ಯಾವ ಪ್ರಯೋಜನವೂ ಇಲ್ಲ ಅಂತ. ಅಲ್ಲದೆ ಅದು ಕಾಯಿ ಬಿಡ್ತಾನೂ ಇಲ್ಲ. ಎಂಟು-ಹತ್ತು ವರ್ಷಗಳಿಂದ ಒಂದು ಕಾಯೀನೂ ಬಿಟ್ಟಿಲ್ಲ ಅದು. ಅಂಗಳದ ತುಂಬಾ ಕಸ ತುಂಬಿಸೋದು ಬಿಟ್ಟರೆ ಅದರಿಂದ ಏನೂ ಉಪಯೋಗ ಇಲ್ಲಾಂತ…’ ಅಲ್ಲೇ ಮಡಲು ಹೆಣೆಯುತ್ತ ಕುಳಿತಿದ್ದ ಅಪ್ಪ ಹೇಳಿದರು.

ಶಂಕರಿ ಯಾವುದೋ ಆಲೋಚನೆಯಲ್ಲಿ ಮುಳುಗಿದವ‌ಳಂತೆ ಎಲ್ಲೋ ನೋಡುತ್ತ ಅಲ್ಲೇಜಗುಲಿಯ ಮೇಲೆ ಕುಳಿತಳು.
“ಛೆ ! ತಪ್ಪು ಮಾಡಿದಿರಿ. ಇನ್ನೂ ಸ್ವಲ್ಪ ಕಾಲ ಕಾಯಬಹುದಿತ್ತು!’  “ಏನು ಕಾಯುವುದು? ನಾನದನ್ನು ದೂರದ ಉಚ್ಚಿಲದ ನರ್ಸರಿಯಿಂದ ತಂದು ನೆಟ್ಟದ್ದು. ಒಳ್ಳೆ ಸಿಹಿಯಾದ ಹಣ್ಣು ಬಿಡತ್ತೆ ಅಂತ ಹೇಳಿದರು. ಹಾಗೆ ತಂದು ನೆಟ್ಟೆ. ಐದಾರು ವರ್ಷಗಳಾದರೂ ಕಾಯಿಯಾಗದೆ ಇ¨ªಾಗ ಮನೆಗೆ ಬಂದವರೆಲ್ಲ ಗೇಲಿ ಮಾಡತೊಡಗಿದರು. ಏನೇನೋ ಹೇಳತೊಡಗಿದರು. ಏನೇನೋ ಸಲಹೆಗಳನ್ನೂ  ಕೊಟ್ಟರು. ಎಲ್ಲವನ್ನೂ ಪ್ರಯೋಗಿಸಿ ನೋಡಿಯೂ ಆಯಿತು. ಏನೂ ಉಪಯೋಗವಿಲ್ಲ. ಕೊನೆಗೆ ಈಗ ಕಡಿಸುವುದು ಅಂತ ನಿಶ್ಚಯಿಸಿಬಿಟ್ಟಿದ್ದೇನೆ’

ಹಲಸಿನಮರದ ಆಲೋಚನೆಯಲ್ಲಿ ಮುಳುಗಿ ಬಿಟ್ಟ ಶಂಕರಿಯನ್ನು ಹೊಡೆದೆಬ್ಬಿಸಿ ಪಡಸಾಲೆಗೆ ಕರೆದೊಯ್ದು ಕುರ್ಚಿಯಲ್ಲಿ ಕುಳಿತುಕೊಳ್ಳಿಸಿದೆ. ನಾನೂ ಅವಳ‌ ಮುಂದೆ ಕುಳಿತೆ. ನಾನು ಬೇರೆ ಏನೇನೋ ಹರಟುತ್ತಿದ್ದರೂ ಶಂಕರಿ ಮಾತ್ರ ಅನ್ಯಮನಸ್ಕಳಾಗಿದ್ದಳು. ಶಂಕರಿ ಮೊದಲಿಂದಲೂ ಹಾಗೆ. ಮಂಗಳೂರಿನ ಜಯಭಾರತಿ ಕಾಲೇಜಿನಲ್ಲಿ ಇಬ್ಬರೂ ಒಟ್ಟಿಗೆ ಬಿ.ಎಸ್ಸಿ. ಓದಿ¨ªೆವು ನಾವು. ಹಾಸ್ಟೆಲಿನಲ್ಲಿ ರೂಮ್‌ಮೇಟ್ಸ್‌ ಕೂಡ. ಅವಳಿಗೆ ಮರಗಿಡಗಳೆಂದರೆ ಪ್ರಾಣ. ಸಸ್ಯಶಾಸ್ತ್ರ ತರಗತಿಯಲ್ಲಿ ಉಪನ್ಯಾಸಕರ ಹತ್ತಿರ ಅವಳು ಕೇಳುವ ಪ್ರಶ್ನೆಗಳಿಗೆ ಮಿತಿ ಇರುತ್ತಿ¤ರಲಿಲ್ಲ. ಹಾಸ್ಟೆಲ್‌ ಹಿಂದಿನ ತೋಟದಲ್ಲಿ ಒತ್ತೂತ್ತಾಗಿ ಯಾವ ಯಾವುದೋ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸಿ ಹಸಿರು ಕ್ರಾಂತಿ ಮಾಡಿದವಳು ಶಂಕರಿಯೇ. ಹಾಸ್ಟೆಲಿನ ಮಕ್ಕಳೆಲ್ಲ ಸೇರಿ ಅವಳಿಗೆ “ಸಸ್ಯಶ್ಯಾಮಲಾ’ ಎಂದು ಅಡ್ಡ ಹೆಸರಿಟ್ಟಿದ್ದರು.  

ಶಂಕರಿಯ ಹಸಿರು ಹುಚ್ಚಿಗೆ ಸಂಬಂಧಿಸಿದ ಇನ್ನೊಂದು ಕಥೆಯಿದೆ. ಹಾಸ್ಟೆಲಿನ ಹಿಂಬದಿ ಮೂಲೆಯಲ್ಲಿ ದೊಡ್ಡದೊಂದು ದಡ್ಡಾಲ ಮರವಿತ್ತು. ಹಾಸ್ಟೆಲಿಗೆ ಹೊಸದಾಗಿ ಎರಡು ಮಂಚಗಳನ್ನು ಮಾಡಿಸುವ ಅಗತ್ಯ ಬಂತು. ಮೇಲ್ವಿಚಾರಕರು ಅದೇ ದಡ್ಡಾಲ ಮರವನ್ನು ಕಡಿಸುವ ಆಲೋಚನೆಯಲ್ಲಿದ್ದರು. ಅದು ಅಷ್ಟೇನೂ ಒಳ್ಳೆಯ ಜಾತಿಯ ಮರವಲ್ಲ. “ಬೇಕಾದರೆ ಬೇರೆ  ಮರಗಳನ್ನು ನೆಟ್ಟರಾಯಿತು’ ಎಂಬುದು ಮೇಲ್ವಿಚಾರಕರ ಯೋಜನೆ. ಈ ವಿಷಯ ಶಂಕರಿಗೆ ಗೊತ್ತಿರಲಿಲ್ಲ. ಒಂದು ದಿನ ಕೆಲಸದಾಳುಗಳು ಬಂದು ಮರ ಕಡಿಯಲುದ್ಯುಕ್ತರಾದರು. ರೂಮಿನಲ್ಲಿ ಕುಳಿತು ರೆಕಾರ್ಡು ಬರೆಯುವುದರಲ್ಲಿ ಮಗ್ನಳಾಗಿದ್ದ ಶಂಕರಿಗೆ ಯಾರೋ ಸುದ್ದಿ ಮುಟ್ಟಿಸಿದರು. ತಕ್ಷಣ ಹುರಿಗೊಳಿಸಿದ ಬಿಲ್ಲಿನಂತೆ ಅಲ್ಲಿಂದೆದ್ದು ಒಂದೇ ಓಟಕ್ಕೆ ಹೊರಗೋಡಿದ ಶಂಕರಿ ಮರದ ಬಳಿ ತಲುಪಿದಳು: “ಇದು ಸಾಧ್ಯವಿಲ್ಲ. ನಾನು ಬಿಡಲಾರೆ’ ಎಂದು ಗರ್ಜಿಸಿದಳು. ಕೆಲಸದವರು ಅವಳನ್ನು ಗಣ್ಯ ಮಾಡಲಿಲ್ಲ  “ಎಲ್ಲಿಯ ಹುಚ್ಚಿ ಇವಳು!’ ಎಂದು ತಮ್ಮÇÉೇ ನಕ್ಕು ತಮ್ಮ ಕೆಲಸಕ್ಕೆ ಕೊಡಲಿ ಹಿಡಿದು ಹೊರಟರು. ಬೊಬ್ಬೆ ಕೇಳಿ ಒಳಗೆ ಕುಳಿತಿದ್ದ ವಾರ್ಡನ್‌ ಹೊರಗೆ ಬಂದರು. “”ಏಯ್‌, ಸಾಕು ನಿಲ್ಲಿಸೇ! ನಿನ್ನ ಮಾತೆಲ್ಲ ನಡೆಯೋದಿಲ್ಲ. ಸುಮ್ಮನೆ ರೂಮಿಗೆ ಹೋಗ್ತಿàಯೋ ಇಲ್ಲವೋ?” ಅವರೆಂದರು. “”ಮೇಡಂ, ನೀವು ನನಗೆ ಏನು ಬೇಕಾದರೂ ಶಿಕ್ಷೆ ಕೊಡಿ. ಮರ ಕಡಿಯುವುದಕ್ಕೆ ಮಾತ್ರ ನಾನು ಬಿಡೋದಿಲ್ಲ. ಮಂಚ ಮಾಡಿಸಲಿಕ್ಕೆ ನೀವು ಬೇರೆ ಏನಾದರೂ ಏರ್ಪಾಡು ಮಾಡಿಕೊಳ್ಳಿ. ನನಗದೆಲ್ಲ ಗೊತ್ತಿಲ್ಲ. ಇನ್ನೂ ಹಸಿರಾಗಿರೋ ಈ ಎಳೆಯ ಮರವನ್ನು ಬೀಳಿಸೋ ಹಾಗಿಲ್ಲ” ಶಂಕರಿ ಸಿಟ್ಟಾಗಿ ಬಿರಬಿರನೆ ಹೋಗಿ ಆ ಮರವನ್ನಪ್ಪಿಕೊಂಡು ನಿಂತಳು. ಎಷ್ಟು ಕೇಳಿಕೊಂಡರೂ ಹಿಡಿದ ಪಟ್ಟು ಬಿಡಲಿಲ್ಲ. ಅಷ್ಟರಲ್ಲಿ ಹಾಸ್ಟೆಲಿನ ಎಲ್ಲ ಹುಡುಗಿಯರು ಅಲ್ಲಿ ಜಮಾಯಿಸಿದ್ದರು. ಶಂಕರಿಯನ್ನು ಬೆಂಬಲಿಸಲು ನಾವೂ ಎಂಟು- ಹತ್ತು ಮಂದಿ ನಿಂತೆವು. ಕೊನೆಗೆ ಹಾಸ್ಟೆಲಿನ ಮೇಲ್ವಿಚಾರಕರೇ ಸೋಲಬೇಕಾಯಿತು. ಒಂದೇ ದಿನದಲ್ಲಿ ಶಂಕರಿ ಹಿರೋಯಿನ್‌ ಆಗಿಬಿಟ್ಟಿದ್ದಳು.

“”ಛೆ‌! ನೀವು ಅದನ್ನು ಕಡಿಸುವ ನಿರ್ಧಾರ ಮಾಡಬಾರದಿತ್ತು, ಬರೇ ಕೊಂಬೆಗಳನ್ನು ಕಡಿದರೆ ಸಾಕಲ್ಲ?”
“”ಅರೆ! ನೀನು ಯಾಕೆ ಅದರ ಬಗ್ಗೆ ಇಷ್ಟೊಂದು ಚಿಂತೆ ಮಾಡುತ್ತಿ? ಇನ್ನೂ ಅದರ ಸುದ್ದಿಯೇ ಮಾತನಾಡುತ್ತಿದ್ದೀಯಲ್ಲ?”
“”ಅದಕ್ಕೆ ಕಾರಣವಿದೆ ಶಾರಿ. ಇತ್ತೀಚೆಗೆ ನನಗಾದ ಒಂದು ಅನುಭವದಿಂದ ಹೇಳುತ್ತಿದ್ದೇನೆ. ಅದೊಂದು ವಿಚಿತ್ರ ಅನುಭವ.ಹೇಳುತ್ತೇನೆ ಕೇಳು.”
ಶಂಕರಿ ಹೇಳತೊಡಗಿದಳು:

ಫಾರೆಸ್ಟ್‌ ಡಿಪಾರ್ಟ್‌ಮೆಂಟಿನಲ್ಲಿ ನನ್ನ ತಂದೆಯ ಸ್ನೇಹಿತರಾದ ಗೋಪಾಲ್‌ ಅಂಕಲ್‌ ಕೆಲಸ ಮಾಡ್ತಾ ಇರುವುದು ನಿನಗೆ ಗೊತ್ತಲ್ಲ? ಕಳೆದ ವರ್ಷ ಅವರಿಗೆ ರಿಟೈರ್‌ ಆಯ್ತು. ಬೇಕಾದಷ್ಟು ಹಣ ಮಾಡಿದ್ದ ಅವರು ರಿಟಾçರ್‌ ಆದ ಮೇಲೆ ಅದ್ಯಾಕೋ ನಗರದಲ್ಲೇ ನೆಲೆಸಲು ಅವರಿಗೆ ಮನಸ್ಸು ಬರಲಿಲ್ಲ. ಹಾಗೆ ಹಳ್ಳಿಯಲ್ಲಿ ಒಂದು ಒಳ್ಳೆಯ ಎಸ್ಟೇಟು-ಬಂಗಲೆಗಳನ್ನು ಕೊಂಡುಕೊಂಡರು. ಅಲ್ಲಿಗೆ ತಮ್ಮ ವಾಸವನ್ನು ಬದಲಾಯಿಸಿಕೊಂಡರು.

ಕೆಲವು ದಿನಗಳ ಹಿಂದೆ ನಾನು ಅಪ್ಪನ ಜತೆಗೆ ಗೋಪಾಲ ಅಂಕಲ್‌ ಅವರ‌ ಎಸ್ಟೇಟಿಗೆ ಹೋಗಿ¨ªೆ.  ಬೇಸಿಗೆಯ ರಜಾಕಾಲ ಆಗಿದ್ದರಿಂದ ನನ್ನ ಇಬ್ಬರು ತಮ್ಮಂದಿರು-ನಿಖೀಲ್‌ ಮತ್ತು ನಿರೂಪ್‌ ಕೂಡ ನನ್ನ ಜತೆಗೆ ಬಂದಿದ್ದರು. ಪಟ್ಟಣದಲ್ಲಿ ಹುಟ್ಟಿ ಬೆಳೆದ ನಮಗೆ ಹಳ್ಳಿಯ ವಾಸ ಒಂದು ಅಪೂರ್ವ ಅನುಭವ ನೀಡಿತು. ಎಲ್ಲಿ ನೋಡಿದರಲ್ಲಿ ಎತ್ತರಕ್ಕೆ ಬೃಹದಾಕಾರವಾಗಿ ಬೆಳೆದುನಿಂತ ಯಾವ ಯಾವುದೋ ಮರಗಳು. ತೋಟದ ಅಂಚಿಗೆ ಎತ್ತರದ ಇಳಿಜಾರು ಗುಡ್ಡಗಳು. ಅಲ್ಲಿಗೆ ಸುತ್ತಿಕೊಂಡು ಹೋಗುವ ಸುಂದರವಾದ ಟಾರು ಹಾಕಿದ ರಸ್ತೆಗಳು. ಬದಿಯಲ್ಲಿ ಆಳದಲ್ಲಿ ಹಬ್ಬಿಕೊಂಡ ಕಣಿವೆಗಳು. ಮೇಲೆ ನೋಡಿದರೆ ಹಿಂಜಿದ ಅರಳೆಯಂತೆ ಕಾಣುವ ಮೋಡದ ರಾಶಿ !

ಎಸ್ಟೇಟಿನ ಬಂಗಲೆಯ ಮುಂದೆ ದೊಡ್ಡದೊಂದು ಹಲಸಿನ ಮರವಿತ್ತು. ತುಂಬ ಕಾಯಿ ಮಿಡಿಯುವ ಮರವಾಗಿರಬೇಕು. ಮಾಲೆ ಮಾಲೆಯಾಗಿ ನೇತಾಡುತ್ತಿರುವ ಹಲಸಿನ ಕಾಯಿಗಳನ್ನು ನಾನು ಗಮನಿಸ ಲಿಲ್ಲ.  ಆದರೆ, ನಿಖೀಲ್‌-ನಿರೂಪ್‌ ಇಬ್ಬರೂ ಕಾರು ನಿಲ್ಲಿಸಿದ ತಕ್ಷಣ ಮರದ ಬಳಿಗೆ ಓಡಿದರು. ಗೋಪಾಲ್‌ ಅಂಕಲ್‌ ಮಕ್ಕಳನ್ನು ಕರೆದು ಹೇಳಿದರು :

“ಮಕ್ಕಳೇ, ಬೇಕಾದಷ್ಟು ಬೆಳೆದ ಕಾಯಿಗಳಿವೆ. ಇವತ್ತೇ ಕೊಯ್ದು ಹಣ್ಣಿಗಿಡುವ. ನಾಳೆ ನಾಡಿದ್ದರಲ್ಲಿ ಹಣ್ಣಾದೀತು. ತುಂಬಾ ಸಿಹಿಯಾದ ಹಣ್ಣು. ನೀವು ತುಂಬಾ ಇಷ್ಟಪಡ್ತೀರಾ!’ ಗೋಪಾಲ್‌ ಅಂಕಲ್‌ನ‌ ಎಸ್ಟೇಟಿನ ಮೊದಲಿನ ಓನರ್‌ ಅಂಥೋನಿ ಅಂದು ಮಧ್ಯಾಹ್ನ ನಮ್ಮೊಂದಿಗೆ ಊಟಕ್ಕೆ ಬಂದಿದ್ದರು. ವಯಸ್ಸು ಅರವತ್ತಾರೂ ಇನ್ನೂ ಯುವಕನಂತೆ ಆರೋಗ್ಯದಿಂದ ಕಳೆಕಳೆಯಾಗಿದ್ದರು. ಗೋಪಾಲ್‌ ಅಂಕಲ್‌ ನಮಗೆ ಅವರ ಪರಿಚಯ ಮಾಡಿಸಿದರು. ಅಂಥೋನಿ ಅವರ‌ ನಾಲ್ಕು ಮಕ್ಕಳಲ್ಲಿ ಮೂವರು ವಿದೇಶದಲ್ಲಿದ್ದರು. ಅವರಲ್ಲಿ ಇಬ್ಬರು ವಿದೇಶಿ ಹುಡುಗಿಯರನ್ನೇ ಮದುವೆಯಾಗಿದ್ದರು. ಚಿಕ್ಕವ ಜಾನ್‌ ಮಾತ್ರ ಮುಂಬಯಿಯಲ್ಲಿದ್ದ. ಅವನಿಗೆ ಅಲ್ಲಿ ಸ್ವಂತ ಕಂಪೆನಿಯಿದೆ. ಫ್ಲ್ಯಾಟು-ಬಂಗಲೆಗಳಿವೆ. ಅವರ್ಯಾರೂ ಇನ್ನು ಊರಿಗೆ ಬಂದು ನೆಲೆಸುವ ಸಾಧ್ಯತೆಯಿಲ್ಲ. ಆದ್ದರಿಂದ ಇಲ್ಲಿರುವ ಆಸ್ತಿಯನ್ನೆಲ್ಲ ಮಾರಿ ಮುಂಬಯಿಗೆ ಹೋಗಿ ಕಿರಿಯ ಮಗನೊಂದಿಗೆ ಇರುವುದು ಎಂಬ ಆಲೋಚನೆ ಅಂಥೋನಿಯವರದು. ಇನ್ನು ಒಂದು ತೋಟ ಮಾತ್ರ ಮಾರಾಟವಾಗಲು ಬಾಕಿ ಇರುವುದರಿಂದ  ಅವರು ಇನ್ನೂ ಹೋಗಿರಲಿಲ್ಲ.

ಚಿಕ್ಕಂದಿನಲ್ಲಿ ಅಲ್ಪಸ್ವಲ್ಪ ಇಂಗ್ಲಿಶ್‌ ಕಲಿತಿದ್ದರಿಂದ ಅಂಥೋನಿ ಗೋಪಾಲ ಅಂಕಲ್‌ ಎಸ್ಟೇಟಿನ ರೈಟರ್‌ ಆಗಿ ಕೆಲಸ ಮಾಡುತ್ತಿದ್ದರು. ಗೋಪಾಲ್‌ ಅಂಕಲ್‌ನ ಹೆಂಡತಿ ಬಹಳ ಹಿಂದೆಯೇ ತೀರಿಕೊಂಡಿದ್ದರು.  ಒಬ್ಬನೇ ಒಬ್ಬ ಮಗ ಇಂಗ್ಲೆಂಡಿನಲ್ಲಿದ್ದ. ಹೀಗೆ ಒಂಟಿಯಾಗಿದ್ದ ಗೋಪಾಲ್‌ ಅಂಕಲ್‌ ಅಂಥೋನಿಯವರ ಕುಟುಂಬದೊಂದಿಗೆ ಬಹಳ ಆತ್ಮೀಯವಾಗಿದ್ದರು. ಅವರ ತೋಟವನ್ನು ಅಂಥೋನಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. 

ಚಿಕ್ಕಂದಿನಲ್ಲಿ ಅಲ್ಪಸ್ವಲ್ಪ ಇಂಗ್ಲಿಶ್‌ ಕಲಿತಿದ್ದರಿಂದ ಅಂಥೋನಿ ಗೋಪಾಲ ಅಂಕಲ್‌ ಎಸ್ಟೇಟಿನ ರೈಟರ್‌ ಆಗಿ ಕೆಲಸ ಮಾಡುತ್ತಿದ್ದರು. ಗೋಪಾಲ್‌ ಅಂಕಲ್‌ನ ಹೆಂಡತಿ ಬಹಳ ಹಿಂದೆಯೇ ತೀರಿಕೊಂಡಿದ್ದರು. ಒಬ್ಬನೇ ಒಬ್ಬ ಮಗ ಇಂಗ್ಲೆಂಡಿನಲ್ಲಿದ್ದ. ಹೀಗೆ ಒಂಟಿಯಾಗಿದ್ದ ಗೋಪಾಲ್‌ ಅಂಕಲ್‌ ಅಂಥೋನಿಯವರ ಕುಟುಂಬದೊಂದಿಗೆ ಬಹಳ ಆತ್ಮೀಯವಾಗಿದ್ದರು. ಅವರ ತೋಟವನ್ನು ಅಂಥೋನಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. 

“”ನಾನು ಈ ತೋಟಗಳನ್ನು ನನ್ನ  ಮಕ್ಕಳಂತೆ ಪ್ರೀತಿಸಿದ್ದೇನೆ. ಈಗ ಅವುಗಳನ್ನು ಮಾರಬೇಕಾಗಿ ಬಂದಿದೆ. ಏನು ಮಾಡುವುದು? ಮಕ್ಕಳಿಂದ ದೂರವಿದ್ದು ಒಬ್ಬನೇ ಇಲ್ಲಿ ಹೇಗಿರಲಿ?” ಅಂಥೋನಿ ಹೇಳಿದರು. ನಮಗೂ ಹೌದೆನ್ನಿಸಿತು.
ನಾವು ಊಟಕ್ಕೆ ಕುಳಿತೆವು. ಮೇಜಿನ ಮೇಲೆ ಒಂದು ತಟ್ಟೆಯ ತುಂಬಾ ಹಲಸಿನ ಹಣ್ಣಿನ ತೊಳೆಗಳಿದ್ದವು. “”ಎಲ್ಲರೂ ಬೇಕಾದಷ್ಟು ತಿನ್ನಿ. ಈ ತಟ್ಟೆ ಖಾಲಿ ಮಾಡಿದರೆ ಇನ್ನಷ್ಟು ತಂದು ಹಾಕಬಹುದು” ಗೋಪಾಲ್‌ ಅಂಕಲ್‌ ಮಕ್ಕಳನ್ನುದ್ದೇಶಿಸಿ ಹೇಳಿದರು. ಅವರು ಅಷ್ಟು ಹೇಳಿ ಮುಗಿಸಲಿಕ್ಕಿಲ್ಲ, ತಕ್ಷಣ ನಿರೂಪ್‌ ತಟ್ಟೆಗೆ ಕೈ ಹಾಕಿಯಾಗಿತ್ತು : “”ತಡೀರಿ. ಇದು ಸಿಹಿಯೋ ಸಪ್ಪೆಯೋ ಅಂತ ನಾನೇ ಮೊದಲು ನೋಡ್ತೀನಿ” ಅವನು ಹೇಳಿದಾಗ ಎಲ್ಲರೂ ಗೊಳ್ಳೆಂದು ನಕ್ಕರು.

“”ಅದು ಸಿಹಿಯೇ. ಅದರಲ್ಲಿ ಸಂದೇಹವೇ ಬೇಡ. ಜೇನಿನಂಥ ಸಿಹಿ” ಅಂಥೋನಿ ಹೇಳಿದರು. “”ಇದನ್ನು ಕಂಡಾಗಲೆಲ್ಲ ನನಗೆ ನನ್ನ ಚಿಕ್ಕ ಮಗ ಜಾನ್‌ನ‌ ನೆನಪಾಗುತ್ತದೆ. ಅವನ ಹಠದಿಂದಾಗಿ ನಾನು ಈ ಮರವನ್ನು ಕಡಿದು ಹಾಕದೇ ಉಳಿಸಿದ್ದು. ಬರೇ ಕೊಂಬೆ-ರೆಂಬೆಗಳನ್ನು ಮಾತ್ರ ಕಡಿಸುವುದೆಂದು ಆಲೋಚಿಸಿದ್ದು. ಎರಡು-ಮೂರು ಕೊಂಬೆಗಳನ್ನು ಕಡಿಸಿಯೂ ಆಯ್ತು. ಅದು ಗೊತ್ತಾಗುತ್ತಲೇ ಕಡಿಯಕೂಡದೆಂದು ಗಲಾಟೆ ಮಾಡುತ್ತ ಅವನು ಹಲಸಿನ ಮರದ ಅಡಿ ಬಂದು ನಿಂತ” “”ಇಷ್ಟು ಒಳ್ಳೆಯ ಹಣ್ಣು ಕೊಡುವ ಮರವನ್ನು ಕಡಿಸುವ ಆಲೋಚನೆ ಮಾಡಿದ್ದು ಯಾಕೆ?” ನಾನು ಕೇಳಿದೆ.

“”ಈ ತೋಟ-ಬಂಗಲೆಗಳೆಲ್ಲ ನನ್ನ ಕೈಗೆ ಬರುವುದಕ್ಕೆ ಮೊದಲು ಪರಂಗಿ ಸಾಹೇಬರ¨ªಾಗಿತ್ತು. ನಾನು ಇದರ ಉಸ್ತುವಾರಿ ನೋಡಿಕೊಳ್ಳುತ್ತಿ¨ªೆ ಅಷ್ಟೆ. ಅವರ ಅಣ್ಣನಿಗೆ ಬೆಂಗಳೂರಿನಲ್ಲಿ ತೋಟಗಳಿದ್ದವು. ಒಮ್ಮೆ ಅವರು ತಮ್ಮನಿಗೆ ಈ ಸಸಿಯನ್ನು ಕೊಟ್ಟು ಕಳಿಸಿದರಂತೆ. ಸಾಹೇಬರು ಈ ಎಸ್ಟೇಟನ್ನು ಬಿಟ್ಟು ಹೋಗುವ ಹಿಂದಿನ ವರ್ಷ ಈ ಮರದ ತುಂಬಾ ಕಾಯಿ ಬಿಟ್ಟಿತ್ತಂತೆ. ನನ್ನ ಚಿಕ್ಕ ಮಗನಿಗೆ ಆಗ ಐದೋ ಆರೋ ವರ್ಷ ಪ್ರಾಯ. ಅವನ ಆಸೆ ಕಂಡು ಸಾಹೇಬರು ಅವನಿಗೆ‌ ಅಂತ ಆಗಾಗ ಹಣ್ಣು ಕೊಟ್ಟು ಕಳಿಸುತ್ತಿದ್ದರು. ಹಣ್ಣು ಮುಗಿಯುವುದಕ್ಕೆ ಮೊದಲು ಶಾಲೆ ಶುರುವಾದ್ದರಿಂದ ಅವನು ಮೈಸೂರಿಗೆ ಹೋದ. ಹೋಗುವ ಹಿಂದಿನ ದಿನ ಅವನು ಆ ಮರದಡಿಯಿಂದ ಅಲುಗಾಡಿರಲಿಲ್ಲ. ಅದನ್ನು ಗಮನಿಸಿದ ಸಾಹೇಬರು ಪ್ರತಿವಾರವೂ ಅವನಿಗೆ ಹಣ್ಣು ಕೊಟ್ಟು ಕಳಿಸತೊಡಗಿದರು.

ನಾನು ಈ ಎಸ್ಟೇಟು ಮತ್ತು ಬಂಗಲೆಯನ್ನು ಅವರ ಕೈಯಿಂದ ಕೊಂಡುಕೊಳ್ಳುವಾಗ ಈ ಮರದ ಆಕರ್ಷಣೆ ಕೂಡಾ ಬಹಳ ಮುಖ್ಯವಾಗಿತ್ತು. ನನ್ನ ಮಗನಿಗೂ ಅದರಲ್ಲೇ ಹೆಚ್ಚು ಆಸಕ್ತಿ. ಆದರೆ ಹೇಳುವುದೇನು? ನಾವು ಕೊಂಡುಕೊಂಡ ನಂತರ ಅದರಲ್ಲಿ ಒಂದು ಮಿಡಿಯೂ ಬಿಡಲಿಲ್ಲ” ಅಂಥೋನಿಯವರು ಕಥೆ ಮುಂದುವರೆಸಿದರು. “”ನಾಲ್ಕೈದು ವರ್ಷಗಳು ಕಳೆಯುವಷ್ಟರಲ್ಲಿ ಹಲಸಿನ ಮರ ಬಹಳ ದೊಡ್ಡದಾಗಿ ಬೆಳೆಯಿತು. ಅದರ ಕೊಂಬೆಗಳು ಅಂಗಳವನ್ನೇ ಮುಚ್ಚಿದವು. ಒಮ್ಮೆ ಒಂದು ರೆಂಬೆ ಮುರಿದು ಬಿದ್ದು ಮನೆಯ ಹಂಚುಗಳೂ ಒಡೆದು ಹೋದವು.  ಹಾಗೆ ಆರೇಳು ವರ್ಷಗಳು ಉರುಳಿ ಹೋದವು. ಇನ್ನು ಮೇಲೆ ಇದರಲ್ಲಿ ಕಾಯಿಯಾಗಲಾರದು ಎಂಬ ತೀರ್ಮಾನಕ್ಕೆ ನಾವೆಲ್ಲ ಬಂದೆವು. ಪರಂಗಿ ಸಾಹೇಬರು ಬಿಟ್ಟುಹೋಗಿದ್ದಕ್ಕೆ ಬೇಸರವಾಗಿ ಹಲಸಿನ ಮರ ಮುಷ್ಕರ ಹೂಡಿರಬೇಕು ಎಂದು ಕೆಲಸದಾಳುಗಳೆಲ್ಲ ತಮಾಷೆ ಮಾಡಿದರು. ಒಬ್ಬರಿಗಿಂತ ಹೆಚ್ಚು ಯಜಮಾನರಿಗೆ ವಿಧೇಯನಾಗಿರುವುದು ಅದಕ್ಕೆ ಬೇಡವಾಗಿರಬಹುದು ಎಂದರು. ಯಾಕೋ ನನಗೆ ಇದರಿಂದ ತುಂಬ ಅವಮಾನವೆನ್ನಿಸತೊಡಗಿತು. ಕೂಡಲೇ ಅದನ್ನು ಕಡಿಸುವುದೆಂದು ನಿಶ್ಚಯಿಸಿದೆ. ಹಾಗೆ ಮರ ಕಡಿಯುವವರನ್ನು ಬರಹೇಳಿ ಎಲ್ಲ ಏರ್ಪಾಟು ಮಾಡಿಯಾಯಿತು. ಆದರೆ, ಎರಡು-ಮೂರು ದಿನಗಳಲ್ಲಿ ಆ ಮರದಲ್ಲಿ ಅದ್ಭುತ ಬದಲಾವಣೆಗಳು ಕಂಡುಬಂದಿವೆಯೆಂದು ನನ್ನ ಚಿಕ್ಕ ಮಗ ಜಾನ್‌ ಹೇಳಿದ. ಅದರ ಎಲೆಗಳು ಸಿಕ್ಕಾಪಟ್ಟೆ ಉದುರಿ ಬೀಳುತ್ತಿದ್ದವೆಂದೂ,  ಜೋರಾಗಿ ಗಾಳಿ ಬೀಸಿದಾಗ ಅದರ ಕೊಂಬೆಗಳ ನಡುವಿನಿಂದ “ಊಂ ಊಂ’ ದುಃಖ ಸೂಚಕವಾದ ಸಂಗೀತ ಕೇಳಿಸುತ್ತಿದೆಯೆಂದೂ ಹೇಳಿದ. ಅದನ್ನು ತೋರಿಸಲು ಅವನು ನಮ್ಮನ್ನೆಲ್ಲ ಆಗಾಗ ಮರದ ಬಳಿಗೆ ಕರೆದುಕೊಂಡು ಹೋದ. ಅವನು ಮಾನಸಿಕ ಅಸ್ವಸ್ಥನಾಗಿ ಬಿಟ್ಟಿರುವನೇನೋ ಎಂದು ಅನ್ನಿಸಿ  ನಮಗೆಲ್ಲ ಭಯವಾಗಿತ್ತು.

ಮಾರನೇ ದಿನ ಬೆಳಗ್ಗೆ ಹಲಸಿನ ಮರದ ಕೊಂಬೆಗಳನ್ನು ಕಡಿಯುವ ಕೆಲಸ ಆರಂಭವಾಯಿತು. ಕೊಂಬೆಗಳು ಮುರಿದು ಬೀಳುವ ಸದ್ದು ಕಿವಿಗೆ ಬೀಳುತ್ತಲೇ  ಜಾನ್‌ ದುಡು ದುಡು ಓಡಿ ಬಂದು ಮರದ ಕೆಳಗಡೆ ಬಂದು ನಿಂತ. ಕೊನೆಗೆ ವಿಧಿಯಿಲ್ಲದೆ ನಾವು ಆ ಕೆಲಸವನ್ನು ಅಲ್ಲೇ ಕೈಬಿಡಬೇಕಾಯಿತು. ಆಶ್ಚರ್ಯವೆಂದೇ ಹೇಳಬೇಕು, ಮುಂದಿನ ಸೀಸನ್‌ ಬಂದಾಗ ಹಲಸಿನ ಮರದ ತುಂಬ ಮಿಡಿಗಳು ಬಿಟ್ಟಿದ್ದವು. ಕಾಯಿಗಳ ಭಾರದಿಂದ ಕೊಂಬೆಗಳು ಬಗ್ಗತೊಡಗಿದವು. ನಾವೆಲ್ಲರೂ ಸಂಭ್ರಮದಿಂದ ಓಲಾಡಿದೆವು. ಊರಿನಲ್ಲಿ ಎಲ್ಲರಿಗೂ ಹಲಸಿನ ಹಣ್ಣಿನ ಸುಗ್ಗಿ ! ಆನಂತರ ಈ ಮರದಲ್ಲಿ ಹಣ್ಣಾಗದ ವರ್ಷವೇ ಇಲ್ಲ. ಈಗ ಸುಮಾರು ಹತ್ತು-ಹದಿನೈದು ವರ್ಷಗಳಾಗಿರಬಹುದು” ಅಂಥೋಣಿ ಕಥೆ ಹೇಳಿ ಮುಗಿಸಿದ್ದರು. 

ಈ ಕಥೆಯನ್ನು ನನಗೆ ಹೇಳಿ ಮುಗಿಸುತ್ತಲೇ ಶಂಕರಿಯ ಕಂಠ ಗದ್ಗದವಾಗಿತ್ತು. 
“”ಮರಗಳಿಗೆ ಮನುಷ್ಯರ ಭಾಷೆ ಅರ್ಥವಾಗುತ್ತದೆಯೆ? ಅವುಗಳಿಗೆ ಭಾವನೆಗಳಿವೆಯೆ? ನಮ್ಮ ಮಾತುಗಳಿಗೆ, ನಮ್ಮ ಭಾವನೆಗಳಿಗೆ ಅವು ಪ್ರತಿಕ್ರಿಯೆ ತೋರಿಸುತ್ತವೆಯೆ? ಅಲ್ಲದಿದ್ದರೆ ಇದು ಹೇಗೆ ಸಾಧ್ಯ? ಯಾಕೋ ನಂಬುವುದೇ ಕಷ್ಟವಾಗುತ್ತಿದೆ” ನಾನು ಹೇಳಿದೆ.
“”ಹಲಸಿನ ಮರ ಕಡಿಯುವುದನ್ನು ನಿಲ್ಲಿಸಿದ್ದು ಮತ್ತು ಅದರಲ್ಲಿ ಕಾಯಿಗಳಾದದ್ದರ ನಡುವೆ ಸಂಬಂಧವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಅದು ಕಾಕತಾಳೀಯವಾಗಿರಲೂಬಹುದು. ಅಥವಾ ಕೊಂಬೆಗಳನ್ನು ಮುರಿದದ್ದರಿಂದ ಬದಲಾವಣೆ ಕಂಡಿರಲೂ ಸಾಕು. ಇಂಥ ವೈಜ್ಞಾನಿಕ ಕಾರಣಗಳನ್ನೇನೋ ಕೊಡಬಹುದು. ಆದರೆ, ನನ್ನ ಯೋಚನೆಗಳೇ ಬೇರೆ. ಮರಗಳನ್ನು  ಲಾಭದ ದೃಷ್ಟಿಯಿಂದ ಮಾತ್ರ ನೋಡದೆ ಅವುಗಳ ಮೇಲೆ ಮಾನವೀಯ ಕಳಕಳಿ ತೋರಿಸುವುದು ಮನುಷ್ಯರಾಗಿ ನಮ್ಮ ಕರ್ತವ್ಯ ಅಂತ ಮಾತ್ರ ನಾನು ಹೇಳಬಲ್ಲೇ” ಶಂಕರಿ ಹೇಳಿದಳು.

ನನ್ನ ಮನಸ್ಸೂ ವೈಜ್ಞಾನಿಕ ಕಾರಣಗಳಾಚೆ ಚಿಂತಿಸತೊಡಗಿತ್ತು.
    (ಕಚ್ಚೋಡ = ವ್ಯಾಪಾರ)

ಪಾರ್ವತಿ ಜಿ. ಐತಾಳ್‌

ಟಾಪ್ ನ್ಯೂಸ್

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

r-ashok

ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

11-sadsaa

ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ

ಕೊಟ್ಟಿಗೆಹಾರ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರ ಪತ್ತೆ, ಪ್ರಕರಣ ದಾಖಲು

ಲಕ್ಷಾಂತರ ಮೌಲ್ಯದ ಮರ ಪತ್ತೆ : ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದಾಗ ಪ್ರಕರಣ ಬೆಳಕಿಗೆ

1-fdfd

ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಜಾನುವಾರುಗಳಿಗೆ ಕಾಡಿಸುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

r-ashok

ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.