ಇರಾನ್‌ ದೇಶದ ಕತೆ: ಒಂಟೆ ಮತ್ತು ನರಿ

Team Udayavani, May 19, 2019, 6:00 AM IST

ಒಂದು ಮೋಸಗಾರ ನರಿ ಆಹಾರ ಹುಡುಕುತ್ತ ಹೊರಟಿತ್ತು. ಒಂದೆಡೆ ಒಬ್ಬ ತೋಟಗಾರ ಹಲವಾರು ಬಗೆಯ ತರಕಾರಿಗಳು, ಹಣ್ಣುಗಳ ಗಿಡಗಳನ್ನು ಬೆಳೆಸಿದ್ದ. ಫ‌ಲಭಾರದಿಂದ ಬಾಗುತ್ತಿರುವ ಗಿಡಗಳನ್ನು ಕಂಡು ನರಿಯ ನಾಲಿಗೆಯಲ್ಲಿ ನೀರೂರಿತು. ಹಸಿವು ಕೆರಳಿತು. ತೋಟದ ಸುತ್ತಲೂ ಇರುವ ಗೋಡೆಯಲ್ಲಿ ಮೂತಿಯಿಂದ ರಂಧ್ರವೊಂದನ್ನು ಕೊರೆದು ಒಳಗೆ ನುಸುಳಿತು. ಅಲ್ಲಿ ಬೆಳೆದುದನ್ನು ಹೊಟ್ಟೆ ತುಂಬ ತಿಂದಿತು. ತೋಟಗಾರ ಮರಿ ಕೋಳಿಗಳನ್ನೂ ಅಲ್ಲಿ ಸಾಕಿಕೊಂಡಿದ್ದ. ನರಿ ಒಂದೆರಡು ಕೋಳಿಮರಿಗಳನ್ನು ಕಬಳಿಸಿತು. ಆಮೇಲೆ ಗಿಡಗಳೊಂದಿಗೆ, “”ತುಂಬ ಒಳ್ಳೆಯ ಭೋಜನ ನೀಡಿದ್ದೀರಿ, ಧನ್ಯವಾದಗಳು. ನಾಳೆ ಮತ್ತೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ” ಎಂದು ಹೇಳಿ ತಾನೇ ಕೊರೆದ ರಂಧ್ರದ ಮೂಲಕ ಹೊರಗೆ ಬಂದು ಕಾಡು ಸೇರಿತು.

ತೋಟಗಾರ ಬಂದು ನೋಡಿದಾಗ ತೋಟದ ಗೋಡೆಯಲ್ಲಿ ಕೊರೆದ ರಂಧ್ರ ಕಾಣಿಸಿತು. ಒಳಗೆ ನರಿಯ ಹೆಜ್ಜೆಗಳನ್ನು ಗಮನಿಸಿದ. ಗಿಡಗಳಿಂದ ತರಕಾರಿ, ಹಣ್ಣು ಮಾಯವಾಗಿತ್ತು. ಕೋಳಿಮರಿಗಳ ಗರಿಗಳೂ ಕಂಡುಬಂದವು. “”ಕಳ್ಳನರಿಯೊಂದು ಬಂದಿರುವುದು ಖಚಿತವಾಗಿದೆ. ನಾಳೆಯೂ ಅದು ಬರದೆ ಇರುವುದಿಲ್ಲ. ಆಗ ಅದಕ್ಕೆ ಬುದ್ಧಿ ಕಲಿಸಬೇಕು” ಎಂದು ಯೋಚಿಸಿದ. ಮರುದಿನ ಮರೆಯಲ್ಲಿ ಕಾದು ಕುಳಿತ. ನರಿ ಮತ್ತೆ ಬಂದು ಒಳಗೆ ನುಸುಳಿತು. ಅವನು ಅದು ಕೊರೆದ ರಂಧ್ರವನ್ನು ಮುಚ್ಚಿದ. ಒಂದು ಬಡಿಗೆಯೊಂದಿಗೆ ತೋಟದ ಒಳಗೆ ಹೋದ. ಪಾರಾಗಲು ದಾರಿ ಇಲ್ಲದೆ ನರಿ ಅವನ ಕೈಗೆ ಸಿಕ್ಕಿಬಿದ್ದಿತು. ಅದಕ್ಕೆ ಚೆನ್ನಾಗಿ ಹೊಡೆದ. ಜಾಣ ನರಿ ಕಣ್ಣು ಮುಚ್ಚಿತು. ಉಸಿರು ಬಿಗಿ ಹಿಡಿಯಿತು. ಸತ್ತಿರುವ ಹಾಗೆ ನಿಶ್ಚಲವಾಗಿ ಬಿದ್ದುಕೊಂಡಿತು. ತೋಟಗಾರನು ಅದು ಸತ್ತಿದೆಯೆಂದು ಭಾವಿಸಿ ಹೊರಗೆ ಎಸೆದ. ನರಿ ಬದುಕಿದೆಯಾ ಬಡ ಜೀವವೇ ಎಂದು ಕಾಡಿನತ್ತ ಓಡಿ ಹೋಯಿತು.

ಕುಂಟುತ್ತ ನರಿ ಮುಂದೆ ಹೋಗುವಾಗ ಗವಿಯ ಬಾಗಿಲಲ್ಲಿ ಕುಳಿತಿರುವ ಸಿಂಹ ಕಾಣಿಸಿತು. ನೋಡಿದರೆ ಸಿಂಹ ತುಂಬ ಹಸಿದಿರುವಂತೆ ತೋರುತ್ತದೆ, ತನ್ನ ಮೇಲೆ ಎರಗಿದರೆ ಜೋರಾಗಿ ಓಡಲೂ ಶಕ್ತಿಯಿಲ್ಲ ಎಂದು ಯೋಚಿಸಿ ನರಿ ಉಪಾಯ ಹುಡುಕಿತು. ನಗುನಗುತ್ತ, “”ಮಹಾರಾಜರು ಚೆನ್ನಾಗಿದ್ದೀರಾ, ಭೋಜನವಾಯಿತೆ?” ಎಂದು ಕೇಳಿತು.

ಸಿಂಹವು ಮುಖ ಗಂಟಿಕ್ಕಿ, “”ವ್ಯಂಗ್ಯ ಮಾತನಾಡಿ ನನ್ನನ್ನು ಕೆರಳಿಸಬೇಡ. ಭೋಜನ ಹಾಗಿರಲಿ, ಚಿಕ್ಕ ಉಪಾಹಾರವೂ ಇಲ್ಲದೆ ದಿನ ಎಷ್ಟಾಯಿತೆಂದು ಬಲ್ಲೆಯಾ? ಒಂದು ಕಾಡುಕೋಣದೊಂದಿಗೆ ಹೋರಾಡಲು ಹೋಗಿ ಮೈತುಂಬ ಗಾಯವಾಯಿತು. ಓಡಾಡಲು ಆಗುವುದಿಲ್ಲ, ಕಾಲುನೋವು, ಸೊಂಟನೋವು. ಯಾವುದಾದರೂ ಪ್ರಾಣಿ ಬಳಿಗೆ ಬಂದು ತಿನ್ನು ಎಂದು ಕೊರಳೊಡ್ಡುವುದಿಲ್ಲ. ಇಲ್ಲಿಯೇ ಕುಳಿತರೆ ಭೋಜನ ಮಾಡುವುದಾದರೂ ಹೇಗೆ?” ಎಂದು ಅಸಮಾಧಾನದಿಂದ ಪ್ರಶ್ನಿಸಿತು.

“”ಮಹಾರಾಜರೇ, ಬೇಸಗೆ ಕಾಲವಲ್ಲವೆ, ಹೆಂಡತಿ, ಮಕ್ಕಳೊಂದಿಗೆ ರಜಾಕಾಲದ ಪ್ರವಾಸಕ್ಕೆ ಹೋಗಿದ್ದೆ. ನಿಮ್ಮ ಹೋರಾಟದ ವಿಚಾರ ತಿಳಿಯದೆ ಹೋಯಿತು. ನಾನಿರುವಾಗ ನೀವೇಕೆ ಚಿಂತಿಸಬೇಕು? ಬೇಟೆಯೊಂದು ತಾನಾಗಿ ನಿಮ್ಮ ಬಳಿಗೆ ಬಂದರೆ ಕೊಲ್ಲಲಾಗದಷ್ಟು ನಿಮ್ಮ ಉಗುರುಗಳು, ಹಲ್ಲುಗಳು ಮೊಂಡಾಗಿಲ್ಲ ತಾನೆ?” ನರಿ ಆಶೆ ತೋರಿಸಿತು. ಈ ಮಾತು ಕೇಳಿ ಸಿಂಹ ಅಚ್ಚರಿಗೊಂಡಿತು. “”ತಾನಾಗಿ ನನ್ನ ಬಳಿಗೆ ಬೇಟೆ ಬರುವುದೆ? ಬುದ್ಧಿ ನೆಟ್ಟಗಿರುವ ಯಾರೂ ಬರಲಿಕ್ಕಿಲ್ಲ. ಅಂತಹ ಬೇಟೆ ಎಲ್ಲಿದೆ? ಹಾಗೊಮ್ಮೆ ಬಂದರೆ ನೆಲಕ್ಕೆ ಕೆಡಹುವಷ್ಟು ಶಕ್ತಿ ನನಗಿನ್ನೂ ಇದೆ” ಎಂದಿತು ಸಂತೋಷದಿಂದ.

“”ಹಾಗಿದ್ದರೆ ಇಂದು ಸಂಜೆ ಬೇಟೆಗೆ ತಯಾರಾಗಿ. ಇಲ್ಲೇ ಸಮೀಪದ ಊರಿನಲ್ಲಿ ಒಂದು ಹಿಟ್ಟಿನ ಗಿರಣಿಯಿದೆ. ಅದರೊಳಗೆ ಒಂದು ಬಡಪಾಯಿ ಒಂಟೆಯಿದೆ. ಯಂತ್ರದ ಚಕ್ರವನ್ನು ಬೆಳಗ್ಗಿನಿಂದ ಸಂಜೆಯ ವರೆಗೂ ಎಳೆದು ಹಿಟ್ಟು ಮಾಡಲು ಶ್ರಮಿಸುತ್ತದೆ. ನನ್ನ ಜಾಣ್ಮೆಗೆ ಹೋಲಿಸಿದರೆ ಅದಕ್ಕೆ ಬುದ್ಧಿ ಖಂಡಿತ ಇಲ್ಲ. ಅದನ್ನು ಮರುಳು ಮಾಡಿ ನಿಮ್ಮ ಸ ನಿಹಕ್ಕೆ ಕರೆತರುತ್ತೇನೆ. ಕೊಲ್ಲುವ ಕೆಲಸ ನಿಮ್ಮದು. ನೀವು ತಿಂದು ಮಿಕ್ಕುಳಿದರೆ ನನಗೂ ಒಂದು ಪಾಲು ಕೊಡಬೇಕು. ನನ್ನ ಕರಾಮತ್ತು ಹೇಗಿದೆ ನೋಡಿ” ಎಂದು ನಗುತ್ತ ನರಿ ಹೇಳಿತು.

ನರಿ ಒಂಟೆಯ ಬಳಿಗೆ ಬಂದಿತು. “”ದಿನವಿಡೀ ಯಂತ್ರ ತಿರುಗಿಸಿ ಮೈಯೆಲ್ಲ ನೋವು” ಎನ್ನುತ್ತ ಮಲಗಿಕೊಂಡಿದ್ದ ಅದನ್ನು ಮಾತನಾಡಿಸಿತು. “”ನಿನ್ನದೂ ಒಂದು ಬದುಕೇ? ವಾರಕ್ಕೊಂದು ರಜೆಯಿಲ್ಲ. ನೆಂಟರ ಮನೆಗೆ ಹೋಗಲಿಕ್ಕಿಲ್ಲ. ದುಡಿದು ದುಡಿದು ಏಳಲಾಗದ ಸ್ಥಿತಿಗೆ ಬಂದರೆ ನಿನ್ನ ಯಜಮಾನ ಕಟುಕನಿಗೆ ಕೊಟ್ಟು ಕತ್ತರಿಸಲು ಹೇಳುತ್ತಾನೆ ವಿನಃ ಔಷಧಿ ಮಾಡಿಸಲು ಹೋಗುವುದಿಲ್ಲ. ಬೆಳಗಾಗುವ ಮೊದಲು ಎದ್ದು ಯಂತ್ರದ ಚಕ್ರ ತಿರುಗಿಸಿ ಧಾನ್ಯದ ಹಿಟ್ಟು ಉದುರಿಸಲು ಸಿದ್ಧನಾಗುತ್ತೀ. ಅರೆ ಘಳಿಗೆಯ ವಿಶ್ರಾಂತಿಯಿಲ್ಲ. ಹೊಟ್ಟೆ ತುಂಬ ಆಹಾರವಿಲ್ಲ. ವಿಶಾಲವಾದ ಜೀವನವನ್ನು ಗುಲಾಮಗಿರಿಯಲ್ಲಿ ಕಳೆಯಲು ನಾಚಿಕೆಯಾಗುವುದಿಲ್ಲವೆ?” ಎಂದು ಹಂಗಿಸಿತು.

ನರಿ ಹೇಳುವ ಮಾತುಗಳನ್ನು ಒಂಟೆ ಕೇಳಿಸಿಕೊಂಡಿತು. “”ನನಗೂ ದುಡಿಮೆಯ ಬದುಕು ಬೇಸರ ತಂದಿದೆ. ಆದರೆ ಇದನ್ನು ಬಿಟ್ಟರೆ ಬದುಕಲು ಬೇರೆ ದಾರಿ ಏನಿದೆ? ಹಾಗಾಗಿ ಕಷ್ಟವನ್ನೇ ಸುಖವೆಂದು ಭಾವಿಸುತ್ತ ಕಾಲ ಕಳೆಯುತ್ತಿದ್ದೇನೆ” ಎಂದಿತು ಒಂಟೆ ದುಃಖದಿಂದ.

“”ಬೆಪ್ಪುತಕ್ಕಡಿ, ಅಳಬೇಡ. ವಿಸ್ತಾರವಾದ ಭೂಮಿಯಲ್ಲಿ ನಿನಗೆ ಬದುಕಲು ಅವಕಾಶವಿಲ್ಲವೆಂದರೆ ಏನು ಹೇಳಬೇಕು? ನನ್ನೊಂದಿಗೆ ಬಾ. ಸಮೀಪದಲ್ಲಿ ದೊಡ್ಡ ಹುಲ್ಲುಗಾವಲು ಇದೆ. ಹಸುರಾದ ಹುಲ್ಲು. ಜೀವಮಾನವಿಡೀ ತಿಂದರೂ ಮುಗಿಯುವುದಿಲ್ಲ. ಅದರ ಪಕ್ಕದಲ್ಲಿ ಸ್ಫಟಿಕದಂತಹ ನೀರು ತುಂಬಿದ ಜಲಾಶಯವಿದೆ. ಅಲ್ಲಿ ಎಷ್ಟು ಹೆಣ್ಣು ಒಂಟೆಗಳು ಸ್ವಚ್ಛಂದವಾಗಿ ಮೇದುಕೊಂಡು ಆರಾಮವಾಗಿವೆ ಬಲ್ಲೆಯಾ? ಅಲ್ಲಿಗೆ ಹೋದರೆ ಸಾಕು, ಅವು ಎಲ್ಲಿಯಾದರೂ ಗಂಡು ಒಂಟೆ ಇದ್ದರೆ ಕರೆದು ತಾ. ನಮಗೆ ಮದುವೆಯಾಗುವ ಆಶೆಯಿದೆ ಎಂದು ನನ್ನಲ್ಲಿ ಹೇಳುತ್ತವೆ. ನಿನಗೆ ಸುಖವಾಗಿ ಕಾಲ ಕಳೆಯುವ ಬಯಕೆಯಿದ್ದರೆ ನನ್ನ ಜೊತೆಗೆ ಅಲ್ಲಿಗೆ ಬರಬಹುದು. ಆ ಒಂಟೆಗಳ ಸಂಗಡ ಮನೆ ಅಳಿಯನಂತೆ ಜೀವನ ಮಾಡಬಹುದು” ಎಂದು ನರಿ ಸುಳ್ಳು ಕತೆಗೆ ಉಪ್ಪು, ಖಾರ ಬೆರೆಸಿ ಹೇಳಿತು.

ನರಿಯ ಮಾತುಗಳನ್ನು ಒಂಟೆ ನಂಬಿತು. “”ಒಳ್ಳೆಯ ಸುದ್ದಿಯನ್ನೇ ಹೇಳಿದೆ. ಈ ಜೀವನದಿಂದ ನನಗೂ ವಿಮೋಚನೆ ಬೇಕಾಗಿದೆ. ನೀನು ನನ್ನನ್ನು ಅಲ್ಲಿಗೆ ಕರೆದು ಕೊಂಡು ಹೋಗಿ ಉಪಕಾರ ಮಾಡಿದರೆ ಬದುಕಿರುವವ ರೆಗೂ ನಿನ್ನನ್ನು ಮರೆಯುವುದಿಲ್ಲ” ಎಂದು ಒಂಟೆ ಕೈಜೋಡಿ ಸಿತು. “”ಹಾಗಿದ್ದರೆ ತಡವೇಕೆ, ಈಗಲೇ ನನ್ನೊಂದಿಗೆ ಹೊರಟು ಬಿಡು. ಅಲ್ಲಿ ತನಕ ನಡೆಯಲು ನನ್ನ ಕಾಲುಗಳಲ್ಲಿ ಬಲವಿಲ್ಲ. ನಿನ್ನ ಬೆನ್ನಿನ ಮೇಲೆ ನನ್ನನ್ನು ಕೂಡಿಸಿಕೋ. ನಾನು ದಾರಿ ಹೇಳುತ್ತೇನೆ, ನೀನು ಮುಂದೆ ಹೋಗು” ಎಂದಿತು ನರಿ.

ಒಂಟೆ ನರಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡಿತು. ಅದು ಹೇಳಿದ ದಾರಿಯಲ್ಲಿ ನಡೆಯುತ್ತ ಕಾಡಿಗೆ ಬಂದಿತು. ಆದರೆ ಹುಲ್ಲುಗಾವಲು ಎಲ್ಲಿಯೂ ಕಾಣಿಸಲಿಲ್ಲ. ಒಂಟೆಗೆ ಅನುಮಾನ ಬಂದಿತು. “”ನರಿಯಣ್ಣ, ಎಷ್ಟು ನಡೆದರೂ ಕಾಣಿಸುವುದು ಕಾಡು ಮಾತ್ರ. ಎಲ್ಲಿಯೂ ಹುಲ್ಲಿನ ಸುಳಿವಿಲ್ಲ. ದಾರಿ ತಪ್ಪಿಲ್ಲವಷ್ಟೆ?” ಎಂದು ಕೇಳಿತು. “”ದಾರಿ ಹೇಗೆ ತಪ್ಪುತ್ತದೆ? ಅವಸರಿಸಬೇಡ. ಸ್ವಲ್ಪ ಮುಂದೆ ಹೋದರೆ ಹುಲ್ಲುಗಾವಲು ಇದೆ” ಎಂದು ನರಿ ನಂಬುವಂತೆ ಹೇಳಲು ಪ್ರಯತ್ನಿಸಿತು. ಆಗ ಒಂಟೆಗೆ ಸಮೀಪದಲ್ಲೇ ಮರೆಯಲ್ಲಿ ಕುಳಿತಿರುವ ಸಿಂಹ ಗೋಚರಿಸಿತು. ತನ್ನನ್ನೇ ದುರುಗುಟ್ಟಿ ನೋಡುತ್ತಿರುವ ಅದು ಇನ್ನು ಕೊಂಚ ಮುಂದೆ ಹೋದರೆ ಸಾಕು, ತನ್ನ ಮೇಲೆರಗುತ್ತದೆ ಎಂಬುದು ಖಚಿತವಾಯಿತು. ನರಿಯ ಮೋಸದ ಮಾತಿನ ಒಳಗುಟ್ಟು ಅದಕ್ಕೆ ಅರ್ಥವಾಯಿತು.

ಕೂಡಲೇ ಒಂಟೆ, “”ನರಿಯಣ್ಣ, ಒಂದು ಎಡ ವಟ್ಟಾಯಿತಲ್ಲ. ನನ್ನ ತಂದೆ ನನಗೆ ನೀತಿಪಾಠದ ಒಂದು ಪುಸ್ತಕ ಕೊಟ್ಟಿದ್ದರು. ಅದನ್ನು ಬಿಟ್ಟು ಎಲ್ಲಿಗೂ ಹೋಗಬಾರದು, ದಿನವೂ ಮಲಗುವಾಗ ಈ ಪುಸ್ತಕವನ್ನು ದಿಂಬಿನ ಹಾಗೆ ತಲೆಯ ಕೆಳಗಿಟ್ಟುಕೊಳ್ಳಬೇಕು ಎಂದು ಹೇಳಿದ್ದರು. ನಾವೊಮ್ಮೆ ಮರಳಿ ಗಿರಣಿಗೆ ಹೋಗಿ ಪುಸ್ತಕದೊಂದಿಗೆ ಹಿಂತಿರುಗಿ ಬಂದರಾಯಿತು” ಎಂದು ಹೇಳಿ ನರಿಯ ಸಮ್ಮತಿಗೂ ಕಾಯದೆ ಬಂದ ದಾರಿಗೆ ಮುಖ ಮಾಡಿ ಹೊರಟಿತು.

ದಾರಿಯಲ್ಲಿ ನರಿ, “”ಇಷ್ಟೊಂದು ಭಕ್ತಿಯಿಂದ ಆ ಪುಸ್ತಕವನ್ನು ತರಲು ಹೊರಟಿದ್ದೀಯಲ್ಲ. ಅದರಲ್ಲಿ ನಿನ್ನ ತಂದೆ ಏನೇನು ನೀತಿವಾಕ್ಯ ಬರೆದಿದ್ದಾರೆ?” ಎಂದು ಕೇಳಿತು.

“”ಹೆಚ್ಚೇನೂ ನಾನು ಓದಿಲ್ಲ. ಆದರೆ ಅದರಲ್ಲಿ ಬರೆದ ಮೂರು ವಾಕ್ಯಗಳು ನೆನಪಿವೆ. ಪ್ರಾಮಾಣಿಕವಾಗಿ ದುಡಿ ಯುವುದರಲ್ಲಿ ಅನುಮಾನವಿಲ್ಲ ಎಂಬುದು ಮೊದಲ ವಾಕ್ಯ. ಸಂತೋಷವೇ ನಿಮ್ಮ ಬಳಿ ಇರುವ ಸಂಪತ್ತು ಎನ್ನುವ ಮಾತು ಎರಡನೆಯದು. ಹಾಗೆಯೇ ಮೋಸಗಾರರ ಮಾತನ್ನು ನಂಬಬೇಡ ಎನ್ನುವುದು ಕೊನೆಯ ಮಾತು. ಈಗ ನೀನು ನನ್ನ ಬೆನ್ನ ಮೇಲಿಂದ ಜಿಗಿದು ಕಾಡಿಗೆ ಹೋಗುತ್ತೀಯೋ, ಅಲ್ಲ, ಗಿರಣಿಯ ನಾಯಿಗಳನ್ನು ಕೂಗಿ ಕರೆಯಲೋ?” ಎಂದು ಕೇಳಿತು ಒಂಟೆ. ತನ್ನ ತಂತ್ರ ಬಯಲಾಯಿತೆಂದು ಅರ್ಥ ಮಾಡಿಕೊಂಡ ನರಿ ಪೆಚ್ಚು ಮೋರೆ ಹಾಕಿಕೊಂಡು ಕಾಡಿನತ್ತ ಸಾಗಿತು.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ಪ್ರಸಿದ್ಧ ಕತೆಗಾರ ಕೆ. ಸದಾಶಿವರು "ನಲ್ಲಿಯಲ್ಲಿ ನೀರು ಬಂದಿತು' ಎಂಬ ಕತೆ ಬರೆದಿದ್ದರು. "ಹಳ್ಳಿ ಮಾರ್ಗದಲ್ಲಿ ಬಸ್ಸು ಬಂದಿತು' ಎಂಬ ಶೀರ್ಷಿಕೆಯಲ್ಲೇನಾದರೂ...

  • ಯಾಂತ್ರಿಕ ಜೀವನ', "ಕಾಂಕ್ರೀಟ್‌ ಕಾಡು' ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ-...

  • Trying to use words, and every attempt Is a wholly new start, and a different kind of failure ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್‌. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ?...

  • ರಬ್ಬಿಲ್‌ ಅವ್ವಲ್‌ ತಿಂಗಳ ಹದಿನಾಲ್ಕನೇ ತಿಯದಿ ಪೂರ್ಣ ಚಂದ್ರನ ಇರುಳು ಪ್ರಯಾಣಿಕರ ಸಣ್ಣ ಹಡಗೊಂದರಲ್ಲಿ ದ್ವೀಪಕ್ಕೆ ವಾಪಸು ಹೊರಟಿದ್ದೆ. ಎಲ್ಲಿಂದ ಎಂದು ದಯವಿಟ್ಟು...

  • ಎಂಎ ಓದುತ್ತಿರುವಾಗ ಸಾಹಿತಿ ಅರುಣ್‌ ಕೊಲಾಟ್ಕರ್‌ ಅವರ ಕವಿತೆಗಳನ್ನು ಓದಿದ್ದೆ. ಜೆಜುರಿ ಅನ್ನುವ ಕವಿತಾಸಂಕಲನ ಬಹಳ ಪ್ರಸಿದ್ಧ. ಮಾರ್ಮಿಕವಾಗಿ ಬರೆಯುವ, ಮರಾಠಿ...

ಹೊಸ ಸೇರ್ಪಡೆ