ಕತೆ: ಸಂಬಂಧ

Team Udayavani, Jan 19, 2020, 5:53 AM IST

“ಹಾಯ್‌ ಹೌ ಆರ್‌ ಯೂ?’ ಅವನಿಂದ ಬಂದಿದ್ದ ಮೆಸೇಜ್‌ ಇವಳ ಮೊಬೈಲ್‌ನಲ್ಲಿ ಅರ್ಧಗಂಟೆಯಿಂದ ತಣ್ಣಗೆ ಕುಳಿತಿತ್ತು. ಹರ್ಷಿಣಿ ಯಾವುದೋ ನಂಬರ್‌ ಸರ್ಚ್‌ ಮಾಡಲಿಕ್ಕೆ ಮೊಬೈಲ್‌ ತೆಗೆದಾಗ ಪರದೆ ಮೇಲೆ ಕುಳಿತಿದ್ದ ಅವನ ಮೆಸೇಜ್‌ ನೋಡಿ, ಅವನ ವಾಟ್ಸಾಪಿಗೆ, “ಓ ಹಾಯ…! ಐಯ್‌ ಆ್ಯಮ್‌ ಫೈನ್‌… ಥ್ಯಾಂಕ್ಸ್‌’ ಎಂದು ಮರು ಸಂದೇಶ ಕಳಿಸಿದ್ಲು. “ವೈ ಸೋ ಲೇಟ್‌ ರಿಪ್ಲೇ?’ ಸೆಕೆಂಡೂ ತಡಮಾಡದೆ ಅವನಿಂದ ಮೆಸೇಜು ಬಂತು. ಇವಳು ತಕ್ಷಣಕ್ಕೆ ಅವನ ಮರು ಸಂದೇಶವನ್ನು ನಿರೀಕ್ಷಿಸಿರಲಿಲ್ಲ. ಹಾಗಾಗಿ, ಸ್ವಲ್ಪ ಕಸಿವಿಸಿಪಟ್ಟಳು. “ಸ್ಸಾರಿ, ಐಯ್‌ ವಾಸ್‌ ಬ್ಯುಸಿ ವಿತ್‌ ಸಮ್‌ ಅದರ್‌ ವರ್ಕ್‌. ಅದ್ಸರಿ, ಏನು ಸಮಾಚಾರ? ಹೀಗೆ ದಿಢೀರನೆ?’ ಮತ್ತೂಂದು ಸಂದೇಶದಲ್ಲಿ ಕೇಳಿದಳು.

“ಒಂದು ಸಪ್ರೈìಸ್‌ ನ್ಯೂಸ್‌ ಇದೆ’ ಅವನೆಂದ. “ಏನು?’ ಇವಳ ಪ್ರಶ್ನೆ. “ಶಿ ಹ್ಯಾಸ್‌ ಕನ್ಸಿàವ್‌x. ಆ್ಯಂಡ್‌ ಐ ಆ್ಯಮ್‌ ಗೋಯಿಂಗ್‌ ಟು ಬಿ ಯ ಫಾದರ್‌’. ಅವನ ಮೆಸೇಜ್‌ ನೋಡುತ್ತಲೇ ಇವಳು ಇತ್ತಲಿಂದ ಸಂಭ್ರಮದಲ್ಲಿ . “ಓ ರಿಯಲಿ? ಹೌ ಈಸ್‌ ಸುಮನಾ ನೌ. ಇಬ್ರೂ ಎಲ್ಲಿದ್ದೀರಿ… ಸುಮನಾಗೆ ಫೋನ್‌ ಕೊಡು’ ಎಂದು ಕಳಕಳಿಯಿಂದ ಕೇಳಿದಳು.

ಇವಳ ಪ್ರಶ್ನೆಗೆ ಉತ್ತರಿಸದೆ, “ಹೇ… ಏನ್ಮಾಡ್ತಿದ್ದೀಯ ಈಗ?’ ಎಂದು ಮತ್ತೂಂದು ಪ್ರಶ್ನೆ ಟೈಪಿಸಿ ಕಳಿಸಿದ. ಈ ಸಮಯದಲ್ಲಿ ಮೆಸೇಜಿಗಿಂತಲೂ ಕರೆ ಮಾಡಿ ಮಾತನಾಡುವುದೇ ಉತ್ತಮವೆಂದುಕೊಂಡು ಈಕೆ, ಫೋನ್‌ ಮಾಡಿ, “ಕಾಲೇಜಲ್ಲಿದ್ದೀನಿ. ಆರಾಮಿದ್ದೀನಿ. ಅದ್ಸರಿ, ಹೇಗಿ¨ªಾಳೆ ಸುಮನಾ?’ ಎಂದು ಕೇಳಿದಳು. “ನೀನು ಬಿಡಮ್ಮಾ ಈಗ ತುಂಬಾ ಬ್ಯುಸಿ ಆಗಿದ್ದೀಯಾ, ಮಾತಾಡೋಕು ಸರಿಯಾಗಿ ಸಿಗೋದಿಲ್ಲ. ಅಲ್ಲಿಗೆ ಮುಂದಿನ ವಾರ ಬರ್ತಿದ್ದೀನಿ ವೈಫ್ ಬಿಡೋಕೆ. ಶಲ್‌ ವಿ ಮೀಟ್‌ ದೇರ್‌? ಐ ನೀಡ್‌ ಟು ಟಾಕ್‌ ವಿತ್‌ ಯು’ ಇವಳ ಪ್ರಶ್ನೆಗೆ ಉತ್ತರಿಸದೇ ಹೇಳಿದನು.

“ಹೇ ಹಾಗೇನಿಲ್ಲ. ಮಾಮೂಲಿಯಂತೆ ಕೆಲಸ ನಡೀತಿದೆ. ಅದ್ಸರಿ, ಈಗ ನೀನು ಎಲ್ಲಿದ್ದೀಯ? ಆರ್‌ ಯು ಇನ್‌ ಹಾಸ್ಪಿಟಲ್‌ ನೌ? ಸುಮನಾ ಈಸ್‌ ದೇರ್‌ ವಿತ್‌ ಯು? ಜೊತೆಗೆ ಯಾರಿದ್ದಾರೆ ಅಂತ ಹೇಳಲೇ ಇಲ್ವಲ್ಲಾ. ಆಲ್‌ ಓಕೆ?’ ಎಂದು ಮತ್ತೆ ಅದೇ ಪ್ರಶ್ನೆ ಕೇಳಿದಳು.

ಇನ್ನಿವಳು ಬಿಡೋದಿಲ್ಲ, ಅನ್ನುವುದು ಕನ್ಫರ್ಮ್ ಆಗಿ ಅವನು, “ಎಸ್‌. ಆಲ್‌ ಡೂಯಿಂಗ್‌ ಗುಡ್‌. ಶಿ ಇಸ್‌ ಎಟ್‌ ಹೋಮ್‌. ನಾನು ಹೀಗೇ ಹೊರಗೆ ಬಂದಿದ್ದೆ. ನಿನ್ನ ಜೊತೆ ಮಾತನಾಡಬೇಕನ್ನಿಸ್ತು. ಐ ನೋ ಯು ವಿಲ್‌ ಬಿ ಬ್ಯುಸಿ. ಅದಕ್ಕೇ ಮೆಸೇಜ್‌ ಕಳಿಸಿ ಸುಮ್ಮನಾಗಿದ್ದೆ. ಮತ್ತೆ ಇನ್ನೇನು ಸಮಾಚಾರ?’ ಎಂದ. “ಮತ್ತೇನಿಲ್ಲ, ನೀನೇ ಎಲ್ಲಾ ಹೇಳಬೇಕು. ಟ್ರೀಟ್‌ ಯಾವಾಗ ಕೊಡಿಸ್ತೀಯ?’ ಎಂದು ಕೇಳಿದಳು.

“ಓ ಕಮಾನ್‌ ಯಾರ್‌, ಬರೀ ಟ್ರೀಟ್‌ ಏಕೆ, ಇನ್ನೊಂದು ವೀಕಲ್ಲಿ ಸೆಲಬ್ರೇಟ್‌ ಮಾಡುವ. ಗ್ರ್ಯಾಂಡಾಗಿ ಸೆಲಬ್ರೇಟ್‌ ಮಾಡೋಣ. ನಾನೇ ಅಲ್ಲಿಗೆ ಬರ್ತಿದ್ದೀನಿ. ಶಿ ಇಸ್‌ ಮೂವಿಂಗ್‌ ಟು ಹರ್‌ ಮದರ್ಸ್‌ ಹೌಸ್‌. ಮೂರ್ನಾಲ್ಕು ತಿಂಗಳು ಬೆಡ್‌ ರೆಸ್ಟ್‌ ಹೇಳಿದ್ದಾರೆ. ಹೇಗಿದ್ರೂ ನಾನೇ ಬಿಡೋಕೆ ಬರ್ತಿದ್ದೀನಿ’ ಎಂದ.

“ಓಕೆ. ದಟ್‌ ಸೌಂಡ್ಸ್‌ ಗುಡ್‌. ನಮ್ಮ ಮನೇಗೂ ಕರೆದುಕೊಂಡು ಬಾರಪ್ಪಾ. ಅಮ್ಮಾನೂ ನೋಡಬೇಕಂತಿದ್ರು’ ಎಂದು ಹೇಳಿದೆ. “ಮತ್ತೆ ಕಾಲ್‌ ಮಾಡುತ್ತೇನೆ. ಈಗ ಸ್ವಲ್ಪ ಬ್ಯುಸಿ. ಸುಮನಾನ ಕೇಳಿದೇಂತ ಹೇಳು. ಇಲ್ಲಿಗೆ ಬಂದ ಮೇಲೆ ಸಿಗೋಣ. ಟೇಕ್‌ ಕೇರ್‌, ಬೈ’ ಎಂದು ಹೇಳಿ ಕರೆ ಕಟ್‌ ಮಾಡಿ ನಿಟ್ಟುಸಿರುಬಿಟ್ಟಳು.

ಹರ್ಷಿಣಿಯೊಡನೆ ಆ ಕಡೆಯಿಂದ ಮಾತನಾಡಿದ್ದು ಪನ್ನಗ. ಆತ ಆಕೆಯ ಅತ್ತೆಯ ಮಗ. ಎಲ್ಲವೂ ಸರಿಯಾಗಿ ನಡೆದಿದ್ದರೆ ಇಷ್ಟರಲ್ಲಿ ಇವರಿಬ್ಬರೂ ಮದುವೆಯಾಗಿ, ಸಂಭ್ರಮಿಸುತ್ತಿದ್ದರೇನೋ.

ಆದರೆ, ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವಂತೆ, ಜಾತಕ ದೋಷವೇ ಮುಂದಾಗಿ ಅವರಿಬ್ಬರ ಮನೆಯಲ್ಲೂ ಹಿರಿಯರ ನಡುವೆ ಭಿನ್ನಾಭಿಪ್ರಾಯ ಬೆಳೆದು ಮದುವೆಗೆ ದೊಡ್ಡ ತಡೆಗೋಡೆ ಎದ್ದಿತು.

ಹೀಗೆ ಮದುವೆ ಮುರಿದುಬಿದ್ದ ಬೇಸರದಲ್ಲಿದ್ದ ಪನ್ನಗನಿಗೆ ಹರ್ಷಿಣಿಯನ್ನು ಮರೆಯುವುದು ಸುಲಭವಾಗಿರಲಿಲ್ಲ. ಆದರೆ, ಹೃದಯ ಬೇನೆಯಿಂದ ನರಳುತ್ತಿದ್ದ ತಂದೆಯು “ಬೇಗ ಮದುವೆಯಾಗು’ ಎಂದು ಇಡುತ್ತಿದ್ದ ಬೇಡಿಕೆಗೆ ಮೊದಲು ಸರಿಯಾಗಿ ಸ್ಪಂದಿಸಲಾಗಲಿಲ್ಲ. ಆದರೂ ಸಂಬಂಧಿಕಳೇ ಆಗಿದ್ದ ಹರ್ಷಿಣಿಯ ಜೊತೆಗಿನ ಒಡನಾಟವನ್ನು ಸುಲಭವಾಗಿ ಮರೆಯಲಾಗದೆಂದು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಯಾವಾಗ ಮನೆಯವರು ಹುಡುಕಿದ್ದ ದಂತದ ಪುತ್ಥಳಿ ಹಾಗಿರುವ ಸುಮನಾಳನ್ನು ನೋಡಿದನೋ, ಆಮೇಲೆ ಅವನೇ ಅಪ್ಪನ ಅನಾರೋಗ್ಯದ ಸಲುವಾಗಿ ತಾನು ಮದುವೆಗೆ ಒಪ್ಪಿರುವೆ ಎಂದು ಎಲ್ಲರಿಗೂ ಸ್ಪಷ್ಟಪಡಿಸುತ್ತ ಬಂದನು. ಹರ್ಷಿಣಿಗೆ ಮುಖ ತೋರಿಸಲಾಗದೇ ಇದ್ದರೂ, ತಾನು ಇಷ್ಟು ಬೇಗ ಮದುವೆಯಾಗುವುದಕ್ಕೆ ಅಪ್ಪನ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡುತ್ತಿರುವುದು ಹಾಗೂ ಅಮ್ಮನ ತೀವ್ರ ಒತ್ತಡವೇ ಕಾರಣವೆಂದು ಪರಿಪರಿಯಾಗಿ ಹೇಳುತ್ತಾ ತನ್ನ ಅಸಹಾಯಕತೆ ನಿವೇದಿಸಿಕೊಂಡನು. ಆದರೆ, ಮಾತಿನ ನಡುವೆ ಸುಮನಾಳ ಬಗ್ಗೆ ಅಪ್ಪಿತಪ್ಪಿಯೂ ಹೇಳಲಿಲ್ಲ.

ಪನ್ನಗ ಇಷ್ಟು ಬೇಗ ಬೇರೆ ಮದುವೆಗೆ ಒಪ್ಪಿಕೊಂಡದ್ದು ಕಂಡು ಹರ್ಷಿಣಿಗೆ ಆಶ್ಚರ್ಯವಾಯ್ತು. ಆದರೂ, ಆತನ ತಂದೆಯ ಅನಾರೋಗ್ಯದ ಬಗ್ಗೆ ಮೊದಲಿನಿಂದ ತಿಳಿದದ್ದು, ಜೊತೆಗೆ ತನ್ನ ಮುಂದೆ ಪನ್ನಗ ವಿನಮ್ರವಾಗಿ ಮದುವೆಗೆ ಒಪ್ಪಿಕೊಳ್ಳುತ್ತಿರುವುದಕ್ಕೆ ಕಾರಣವನ್ನು ಬೇಸರದಿಂದ ವಿವರಿಸಿದ್ದು , ವಿವೇಕಿಯಾಗಿದ್ದ ಹರ್ಷಿಣಿಯ ಮನಸ್ಸು ಕರಗಿಸಿತು. ತಾನು ಒಲವಿನಿಂದ ಕಂಡ ಹುಡುಗನ ಬದುಕು ಹಸನಾಗಲಿ ಎಂದು ಒಳ್ಳೆಯ ಮನಸ್ಸಿನಿಂದ ಅವನ ಮದುವೆಗೆ ಶುಭಾಶಯ ತಿಳಿಸಿದಳು.

ಪನ್ನಗ ಈಗಲೇ ಮದುವೆಯಾದರೆ ಆಗಲಿ, ಆದರೆ ತನಗೆ ಈಗಲೇ ಬೇಡ. ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನೆಯಲ್ಲಿ ಕೇಳಿಕೊಂಡಳು. ಪನ್ನಗನ ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ, ತಮ್ಮಿಬ್ಬರ ಒಲವಿನ ಒಡನಾಟ ನೆನೆದು ಹರ್ಷಿಣಿ ದಿನೇದಿನೇ ಖನ್ನಳಾಗುತ್ತ ಬಂದಿಳು. ಆದರೂ, ಮನೆಯವರ ಮುಂದೆ ತಾನು ಗಟ್ಟಿಯಾಗಿರುವುದಾಗಿ ತೋರಿಸಿಕೊಳ್ಳುತ್ತಿದ್ದಳು.

ಓದಿಕೊಂಡು, ವಿವೇಕ ಬೆಳೆಸಿಕೊಂಡಿದ್ದ ಹರ್ಷಿಣಿ ತಾವಿಬ್ಬರು ಹುಟ್ಟಿನಿಂದ ಬಂಧುಗಳೇ ಆಗಿರುವುದರಿಂದ ತಮ್ಮಿಬ್ಬರ ಹರೆಯಕಾಲದ ಪ್ರೇಮ ಬಾಲ್ಯದಲ್ಲಿದ್ದ ಸ್ನೇಹದಂತೆ ಮುಂದುವರೆಯಲಿ, ರಕ್ತ ಸಂಬಂಧದಲ್ಲಿ ಮುನಿಸು ಸರಿಯಲ್ಲವೆಂದು ಪನ್ನಗನ ಮದುವೆಗೆ ಬರಲು ಒಪ್ಪದ ತನ್ನ ತಾಯ್ತಂದೆಯರನ್ನು ಬಲವಂತ ಮಾಡಿ ಒಪ್ಪಿಸಿ ಕರೆದುಕೊಂಡು ಹೋದಳು. ಹಾಗೆ ಮದುವೆಗೆ ಹೋದದ್ದೇ ಅವಳ ಬದುಕಿನ ಮುಂದಿನ ತಿರುವಿಗೆ ಮೂಲವಾಯ್ತು.

ಮದುವೆ ಮಂಟಪದಲ್ಲಿ ಪನ್ನಗನ ಪಕ್ಕ ಬೆಳ್ಳಗೆ ಹೊಳೆಯುತ್ತ ಮೇನಕೆಯ ಹಾಗೆ ನಿಂತಿದ್ದ ಸುಮನಾಳನ್ನು ಕಂಡ ಮೇಲೆ ಅವನು ತನ್ನನ್ನು ಮರೆತು ಮದುವೆಗೆ ಇಷ್ಟು ಬೇಗ ಒಪ್ಪಿದ್ದೇಕೆ ಎಂಬ ಸತ್ಯ ಅರಿವಾಯ್ತು. ತಮ್ಮಿಬ್ಬರ ಒಲವು ಯಾರಲ್ಲಿ ಎಷ್ಟು ಗಟ್ಟಿಯಾಗಿತ್ತೆಂಬುದು ತಿಳಿಯಿತು. ತಾನು ಸುಮನಾಳಷ್ಟು ಅಂದಗಾತಿ ಅಲ್ಲದಿದ್ದರೂ ತೆಗೆದು ಹಾಕುವಂತಿಲ್ಲ. ಜೊತೆಗೆ ಅವಳಿಗಿಂತಲೂ ವಿದ್ಯಾವಂತೆ, ಬುದ್ಧಿವಂತೆ. ಆದರೆ, ಸಣ್ಣ ಜಾತಕದ ಕಾರಣವನ್ನೇ ಮುಂದೆ ಮಾಡಿಕೊಂಡು, ತಂದೆಯ ಅನಾರೋಗ್ಯದ ನೆಪವೊಡ್ಡಿ, ಬೇರೆ ಮದುವೆಗೆ ಇಷ್ಟು ಬೇಗ ಪನ್ನಗ ಮತ್ತವನ ಮನೆಯವರು ಒಪ್ಪಿಕೊಂಡಿರುವುದಕ್ಕೆ ಕಾರಣ ಏನೆಂದು ಆಕೆಗೆ ಸ್ಪಷ್ಟವಾಯಿತು. ಪನ್ನಗನಿಗಾಗಿ ಅತ್ತೆ ಮನೆಯವರಿಂದ ಮೈಸೂರಿನಲ್ಲಿ ನಿವೇಶನ, ಕಾರು, ಲೆಕ್ಕಕ್ಕಿಲ್ಲದಂತೆ ಚಿನ್ನ ಬೆಳ್ಳಿ ಉಡುಗೊರೆಗಳ ಪಟ್ಟಿಯನ್ನು ಮತ್ತೂಬ್ಬ ಸೋದರತ್ತೆ ಇವರಿಗೆ ಪಿಸುಮಾತಿನಲ್ಲಿ ವಿವರಿಸಿದ್ದರು.

ಮದುವೆ ಮಂಟಪದಲ್ಲಿ ಪನ್ನಗನ ತಾಯ್ತಂದೆಯರೂ ಮದುವೆಗೆ ತಾವು ಬಂದಿರುವುದಕ್ಕೆ ಇರುಸುಮುರಿಸು ಮಾಡಿಕೊಂಡದ್ದು ಅವರ ನಿರಾಸಕ್ತ ಉಪಚಾರದಿಂದಲೇ ಇವರಿಗೆ ತಿಳಿದುಹೋಯ್ತು. ಹಸ್ತ ತೋರಿಸಿ ಅವಲಕ್ಷಣ ಎನಿಸಿಕೊಂಡವರ ಪರಿಸ್ಥಿತಿ ಇವರದಾಯ್ತು. ಆ ಜಾಗಕ್ಕೆ ತಾವೇ ಅನಗತ್ಯರೂ ಅಪರಿಚಿತರೂ ಎನಿಸಿ ಹೆಚ್ಚುಹೊತ್ತು ಇರಲು ಸಾಧ್ಯವಾಗಲಿಲ್ಲ. ಹೆಂಡತಿಯಾಗಲು ಪಕ್ಕ ನಿಂತಿರುವ ಹುಡುಗಿಗೆ, ತನ್ನನ್ನು ಸೋದರತ್ತೆಯ ಮಗಳೆಂದು ಪರಿಚಯಿಸಿಕೊಡಲೂ ಸಂಕೋಚ ಪಟ್ಟುಕೊಂಡ ಪನ್ನಗನ ವಿಚಿತ್ರ ನಡೆಯಿಂದ ಹರ್ಷಿಣಿಗೆ ಬಹಳ ಅವಮಾನವೂ ದುಃಖವೂ ಆಯಿತು. ಆಕೆಯ ಮನೋಭೂಮಿಕೆಯಲ್ಲಿ ಇದುವರೆವಿಗೂ ಪನ್ನಗನಿಗಾಗಿ ಉಳಿದಿದ್ದ ಸ್ನೇಹ-ಒಲವಿನ ಮನಸ್ಥಿತಿ ಸಂಪೂರ್ಣ ಬದಲಾಯಿತು.

ಹರ್ಷಿಣಿ ದುಃಖೀಸುತ್ತಾ ಕುಳಿತುಕೊಳ್ಳುವ ಅಧೈರ್ಯದ ಹೆಣ್ಣುಮಗಳಲ್ಲ. ಹಾಗೆಂದು ಪನ್ನಗನನ್ನು ದ್ವೇಷಿಸಲೂ ಇಲ್ಲ. ಇಡೀ ಒಂದೆರಡು ವಾರ ಅಳುತ್ತಳುತ್ತಲೇ ಆತ್ಮನಿವೇದನೆ, ಸ್ವವಿಮರ್ಶೆ ಮಾಡಿಕೊಂಡಳು. ತನ್ನ ಮುಂದಿನ ಬದುಕಿನ ಪ್ರಶ್ನೆಪತ್ರಿಕೆಯನ್ನು ತಾನೇ ತಯಾರಿಸಿಕೊಂಡು ಉತ್ತರಕ್ಕಾಗಿ ಪರೀಕ್ಷೆ ಎದುರಿಸುವ ಗಟ್ಟಿ ನಿರ್ಧಾರಕ್ಕೆ ಬಂದಳು. ಪನ್ನಗನೊಡನೆ ಪ್ರೇಮ, ಮದುವೆ ಎಂದು ಕನಸಿನ ಲೋಕದಲ್ಲಿ ಮುಳುಗಿ¨ªಾಗ ಮೊಟಕುಗೊಂಡಿದ್ದ ಅವಳ ಬದುಕಿನ ಹೊಸ ಅಧ್ಯಾಯ ಪುನಃ ಮುಂದುವರೆಯಲು ಆರಂಭವಾಯಿತು.

ಎಂ. ಎ. ಎಕನಾಮಿಕ್ಸ್‌ ಓದಿಕೊಂಡಿದ್ದ ಹರ್ಷಿಣಿಗೆ ಪನ್ನಗನೊಡನೆ ಭವಿಷ್ಯ ಕಟ್ಟಿಕೊಳ್ಳುವ ಭರವಸೆ ಇದ್ದುದರಿಂದ ತನ್ನ ಮುಂದಿನ ಬದುಕಿನ ಬಗ್ಗೆ ಹೆಚ್ಚೇನೂ ಯೋಚಿಸಲು ಆಗಿರಲಿಲ್ಲ. ಮುಂದೆ ಓದಬೇಕೋ ಬೇಡವೋ? ಕೆಲಸಕ್ಕೆ ಸೇರಬೇಕೋ ಬೇಡವೋ? ಎಂಬುದರ ಕುರಿತು ಪನ್ನಗನಿಗೂ ನಿರಾಸಕ್ತಿಯಿದ್ದುದರಿಂದ ಅವನಿಗಿರದ ಇಂಟರೆಸ್ಟ್‌ ತನಗೇಕೆಂದು ಈಕೆಯೂ ನಿರ್ಲಕ್ಷ್ಯ ಮಾಡಿದ್ದಳು. ಆದರೆ, ಇದೀಗ ಯಾರಿಂದ ತನ್ನ ಬದುಕು ಹಸನಾಗುವುದೆಂದು ಭಾವಿಸಿದ್ದಳ್ಳೋ, ಆ ವ್ಯಕ್ತಿ ತನ್ನ ಬದುಕನ್ನು ಮಾತ್ರ ಸರಿಮಾಡಿಕೊಂಡದ್ದು ಕಂಡು ದಿಗ್ಭ್ರಾಂತಳಾದಳು. ಅವನಿಲ್ಲದೆಯೂ ತನ್ನ ಭವಿಷ್ಯವನ್ನು ತಾನೇ ಕಟ್ಟಿಕೊಳ್ಳಲು ನಿಶ್ಚಯಿಸಿಕೊಂಡಳು. ಬೇರೆ ಬೇರೆ ಸಾಧ್ಯತೆಗಳನ್ನು ಕುರಿತು ಯೋಚಿಸಿದಳು. ಕೊನೆಗೆ ಎಂ.ಎ. ಗೆ ಪೂರಕವಾಗಿರುವ ವರ್ಷಕ್ಕೆರಡು ಬಾರಿ ಯು.ಜಿ.ಸಿ. ನಡೆಸುವ ಎನ್‌.ಇ.ಟಿ. ಪರೀಕ್ಷೆಗೆ ತೀವ್ರ ತಯಾರಿ ನಡೆಸಿದಳು.

ಹರ್ಷಿಣಿಯ ಅಚಲ ನಿಷ್ಠೆಗೆ, ತೀವ್ರ ತಯಾರಿಗೆ ಮೊದಲ ಯತ್ನದಲ್ಲಿಯೇ ದೊರೆತ ಫ‌ಲಿತಾಂಶ ಧನಾತ್ಮಕವಾಗಿತ್ತು. ಆಕೆಗೆ ರಿಸರ್ಚ್‌ ಸ್ಕಾಲರ್‌ಶಿಪ್‌ ಕೂಡ ದೊರೆತು, “ಭಾರತದ ಆರ್ಥಿಕತೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪಾತ್ರ’ ಎನ್ನುವ ವಿಷಯದಲ್ಲಿ ಪಿಎಚ್‌.ಡಿ ಪದವಿಗೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ತನ್ನ ಹೆಸರನ್ನು ನೋಂದಾಯಿಸಿ ಸಂಶೋಧನೆಯತ್ತ ಗಮನ ಕೇಂದ್ರೀಕರಿಸಿದಳು. ಹೀಗೆ ಯಾವುದೋ ಆವೇಶದ ಭರದಲ್ಲಿ ಎಲ್ಲಿಯೂ ನಿಲುಗಡೆ ತೆಗೆದುಕೊಳ್ಳದೆ ಒಂದೇಸಮನೆ ಕೆಲಸ ಮಾಡಿ ಯಶಸ್ಸು ಗಳಿಸಿ, ನಿಟ್ಟುಸಿರಿಟ್ಟು ದಣಿವಾರಿಕೊಳ್ಳುತ್ತಿದ್ದಳು.

ಆದರೆ, ಇಷ್ಟಕ್ಕೇ ಮುಗಿಯದೆ, ಪನ್ನಗ ಇವಳ ಬದುಕಿನಲ್ಲಿ ಮತ್ತೂಮ್ಮೆ ಧುತ್ತೆಂದು ಎದುರಾದ. ಅದೂ ಹ್ಯಾಪುಮೋರೆ ಹಾಕಿಕೊಂಡು. ಗೊಂಬೆಯಂತಹ ಹೆಣ್ಣನ್ನು ಮದುವೆಯಾಗಿಯೂ ಹೀಗೆ ಬಂದನಲ್ಲ ಎಂದು ಹರ್ಷಿಣಿ ಅಚ್ಚರಿಪಟ್ಟಳು. ಅವನೇ ಹೇಳಿಕೊಂಡಂತೆ, ಮನೆಯಲ್ಲಿ ಪರಿಸ್ಥಿತಿ ಹದಗೆಡುತ್ತಿತ್ತು. ಅಪ್ಪನ ಸ್ಥಿತಿ ಮತ್ತೂ ಗಂಭೀರವಾಗಿತ್ತು. ರಂಭೆಯಂಥಾ ಹೆಂಡತಿ ಗೊಂಬೆಯ ಹಾಗೆ ಅಲಂಕರಿಸಿಕೊಳ್ಳುತ್ತಿದ್ದದ್ದು ಬಿಟ್ಟರೆ ಮನೆವಾರ್ತೆಯಲ್ಲಿ ನಿರಾಸಕ್ತಳಿದ್ದಳು. ತನ್ನ ಅತ್ತೆಮಾವನಿಗೆ, ಕಡೆಗೆ ಗಂಡನಿಗೂ ಏದುರುತ್ತರ ಕೊಡುವುದು, ಪದೇಪದೇ ತೌರೂರ ಹಾದಿಹಿಡಿದು ಇಲ್ಲಿನ ಪರಿಸ್ಥಿತಿ ಮರೆಯುವುದು ಮಾಡುತ್ತಿದ್ದಳಂತೆ. ಸಂಸಾರವನ್ನು ಇಷ್ಟು ನಿರ್ಲಕ್ಷ್ಯ ಮಾಡುವ ಹೆಣ್ಣಿಗೆ ಮದುವೆ ಏಕೆ ಬೇಕಿತ್ತು? ಎಂದು ಗೋಳಾಡಿಕೊಂಡಿದ್ದ.

ಹರ್ಷಿಣಿ, ಪನ್ನಗನನ್ನೇ ನಿಟ್ಟಿಸಿ ನೋಡಿದಳು. ಆತ ಸೊರಗಿದ್ದ, ಗಡ್ಡ ಬಿಟ್ಟಿದ್ದ, ಮನದ ಚಿಂತೆ ಅವನನ್ನು ಸುಡುತ್ತಿದ್ದುದು ಹೊರಗಿನವರಿಗೆ ಕಾಣುವಂತಿದ್ದ. ಅವನಿಗೆ ರಿಲ್ಯಾಕ್ಸ್‌ ಬೇಕಿತ್ತು. “”ಮನಸ್ಸಿನ ಶಾಂತಿ ಹುಡುಕುತ್ತಿದ್ದೀನಿ ಹರ್ಷಿಣಿ, ನಿನ್ನ ಜೊತೆ ಪ್ರೇಮದಲ್ಲಿರುವಾಗ ನಾನು ಬಹಳ ಆನಂದದಿಂದಿ¨ªೆ. ಈಗ ನನ್ನ ಮದುವೆಯೇ ನನ್ನ ಕೊರಳಿಗೆ ಉರುಳಾಗಿದೆ. ನಿನಗೆ ಮೋಸ ಮಾಡಿಬಿಟ್ಟೆ ಎಂದು ಅಪರಾಧಿ ಭಾವ ಕಾಡುತ್ತಿದೆ. ಮನೇಲಿ ಸಹ ಅಪ್ಪಅಮ್ಮ ನಿನ್ನನ್ನು ನೆನೆಸಿಕೊಂಡು, “ಪಾಪದ ಹುಡುಗಿಗೆ ಮೋಸ ಮಾಡಿದುÌ, ಅದಕ್ಕೇ ನಮಗೆ ಇಂಥಾ ಶಿಕ್ಷೆ’ ಅಂದ್ಕೊಂಡು ಗೋಳಾಡ್ತಿರುತ್ತಾರೆ. ಒಮ್ಮೆ ಮನೆಗೆ ಬಾ ಹರ್ಷಿಣಿ, ಅವರಿಗೆ ಸಮಾಧಾನ ಆದ್ರೂ ಆಗಬಹುದು” ಎಂದು ಬಹಳ ಕಳಕಳಿಯಿಟ್ಟು ಕರೆದಿದ್ದ.

ತನ್ನ ಜೀವನದ ಹಳೆಯ ಕಹಿ ನೆನಪುಗಳನ್ನು ಹೊಸ ಬದುಕು ಗಳಿಸಿಕೊಳ್ಳುವ ಭರದಲ್ಲಿ ಹರ್ಷಿಣಿ ಮರೆತುಬಿಟ್ಟಿದ್ದಳು. ಒಮ್ಮೆ ಪನ್ನಗನ ಮನೆಗೂ ಹೋಗಿ ಸುಮನಾಳ ಅನ್ಯಮನಸ್ಕತೆ, ಅತ್ತೆ ಮಾವನವರ ಪಿರಿಪಿರಿಯನ್ನು ಕಂಡುಬಂದಳು. ತನ್ನ ಒಲವಿನ ಹುಡುಗನ ಬಾಳಲ್ಲಿ ಹೀಗಾಗಬಾರದಿತ್ತೆಂದು ತಾನೂ ಸಹ ನೊಂದುಕೊಂಡಳು.

ಒಮ್ಮೆ ಬಿಡುವಿನಲ್ಲಿ ಪನ್ನಗನನ್ನು ಕಂಡು, “ಸುಮನಾಳ ಜೊತೆ ನಾನೊಮ್ಮೆ ಮಾತನಾಡಿ ನೋಡಲಾ’ ಎಂದು ಕೇಳಿ ಹರಸಾಹಸಪಟ್ಟು ಆತನನ್ನು ಒಪ್ಪಿಸಿದಳು. “ಹೀಗೆ ಮನಸ್ತಾಪದೊಂದಿಗೆ ಜೀವನ ಮುಂದುವರೆಸೋದು ಸರಿಯಲ್ಲ ಪನ್ನಗ, ಆಕೆ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡಿಕೊಳ್ಳೋಣ. ನಾನು ಗಮನಿಸಿದಂತೆ, ಮದುವೆಯಾಗುವಾಗ ಸಂಭ್ರಮದಿಂದಿದ್ದ ಆಕೆ ವಿನಾಕಾರಣ ಹೀಗಾಡೋಕೆ ಸಾಧ್ಯವಿಲ್ಲ’ ಎಂದು ಮನವರಿಕೆ ಮಾಡಿಸಿದಳು.

ಸುಮನಾ ಜೊತೆ ಮಾತನಾಡುತ್ತಾ ಹೋದಂತೆ ಹರ್ಷಿಣಿಗೆ ಅವಳಿಗಾಗಿರುವ ಸಮಸ್ಯೆ ತಿಳಿಯಿತು. ಸುಮನಾ ಮಾನಸಿಕವಾಗಿ ಬಳಲುತ್ತಿದ್ದಳು. ಅದೂ ಪನ್ನಗನ ಹಾಸಿಗೆಯ ಬಯಕೆಗಳನ್ನು ಪೂರೈಸಲಾಗದ ಸಂಕಟವು ಅವಳನ್ನು ತೀವ್ರವಾಗಿ ಬಾಧಿಸುತ್ತಿತ್ತು. ಪನ್ನಗನೂ ಸಹ ಆಕೆಗೆ ಒಲವನ್ನು ನೀಡದೇ ಬರಿಯ ದೇಹಸಿರಿಯ ಆರಾಧಕನಾಗಿದ್ದ. ಆಕೆ ಪ್ರೀತಿಯಿಂದ ತೆರೆದುಕೊಳ್ಳುವ ಮೊದಲೇ ಒರಟಾಗಿ ವರ್ತಿಸಿದ್ದು ಅವಳನ್ನು ಘಾಸಿಗೊಳಿಸಿತ್ತು. ಇವಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹೋದದ್ದು ಸುಮನಾಳ ಮನಸ್ಸು ಮತ್ತೂ ಮುದುಡುವಂತೆ ಮಾಡಿತು. ಜೊತೆಗೆ ಅತ್ತೆ ಮಾವ ಕೂಡ ಒಬ್ಬಳೇ ಸೊಸೆಯಿಂದ ಆದಷ್ಟು ಬೇಗ ಮೊಮ್ಮಗು ಪಡೆಯಬೇಕೆಂದು ಪದೇಪದೇ ಬಯಸುತ್ತಿದ್ದುದು ಸುಮನಾಳಿಗೆ ರೇಜಿಗೆ ಹುಟ್ಟಿಸುತ್ತಿತ್ತು. ಇದೆಲ್ಲಾ ಕಿರಿಕಿರಿಗಳು ಆಕೆ ಪದೇಪದೇ ತವರೂರಲ್ಲಿ ನೆಮ್ಮದಿ ಅರಸಿ ಹೋಗುವಂತೆ ಮಾಡುತ್ತಿದ್ದವು.

ಇಷ್ಟೆಲ್ಲಾ ಸೂಕ್ಷ್ಮ ತಿಳಿದ ಬಳಿಕ ಹರ್ಷಿಣಿಗೆ ಸುಮ್ಮನೆ ಇರಲು ಸಾಧ್ಯವಾಗಲಿಲ್ಲ. ತಾನೇನು ಪನ್ನಗನನ್ನು ಹೊಸದಾಗಿ ನೋಡುತ್ತಿಲ್ಲವಾದ್ದರಿಂದ ಅವರಿಬ್ಬರ ಸಮಸ್ಯೆ ಕುರಿತು ಮಾತನಾಡಲು ಮುಂದೆ ಬಂದಳು. ಪನ್ನಗನಿಗೆ ಸುಮನಾಳ ಮಾನಸಿಕ ತೊಳಲಾಟದ ಬಗ್ಗೆ ಹೇಳಿದಳು. “ಒಲವಿಲ್ಲದ ಸಂಸಾರದಲ್ಲಿ ಸಾರವಿರೋಲ್ಲ ಪನ್ನಗ. ಆಕೆಯ ಅಂದ ಆರಾಧಿಸುವ ನೀನು ಅವಳ ಆಂತರ್ಯ ಅರಿತುಕೋ. ಅನುನಯಿಸಿ ಒಪ್ಪಿಸಿಕೊಳ್ಳುವ ಪ್ರೀತಿಯು ಇಬ್ಬರ ವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ದುಡುಕಬೇಡ. ಅವಳೂ ನಿನ್ನನ್ನು ಪ್ರೀತಿಸುತ್ತಾಳೆ. ಹೆಣ್ಣೊಂದು ಹೂವಿನಂತೆ. ಆ ಎಳೆಮೊಗ್ಗು ಹೂವಾಗಿ ಸಂಪೂರ್ಣ ಅರಳಿಕೊಳ್ಳುವವರೆಗೆ ಕಾಯಬೇಕು’ ಎಂದು ತನಗೆ ಅನುಭವಕ್ಕೂ ಬಂದಿರದ ದಾಂಪತ್ಯದ ವಿಚಾರವನ್ನು ತನಗೆ ತಿಳಿದಂತೆ ವಿವರಿಸಿದಳು. ಹಾಗೆಯೇ ಸುಮನಾಳನ್ನೂ ತಾನು ವಿಶ್ವಾಸಕ್ಕೆ ತೆಗೆದುಕೊಂಡು ಅವಳಿಗೂ ಬೇರೆ ರೀತಿಯಲ್ಲೇ ಕೌನ್ಸೆಲಿಂಗ್‌ ಮಾಡಿದ್ದಳು. ಹೀಗೆ ಹಲವಾರು ಬಾರಿ ಸತತವಾಗಿ ಮನನ ಮಾಡಿಸಿದ ಮೇಲೆ ಅವರಿಬ್ಬರ ಜೀವನ ಒಂದು ದಾರಿಹಿಡಿಯಿತು.

ಇದರ ನಡುವಲ್ಲೇ ಪನ್ನಗನಿಗೆ ಹೈದರಾಬಾದಿನ ಕಂಪೆನಿಗೆ ವರ್ಗವಾಗಿ ಸುಮನಾಳೊಡನೆ ಅಲ್ಲಿಗೆ ಹೋಗಿ ವರ್ಷವಾಗುತ್ತ ಬಂದಿತ್ತು. ಈ ಮೊದಲು ಅಲ್ಲಿಂದಲೇ ಪನ್ನಗ ಹರ್ಷಿಣಿಗೆ ಕರೆ ಮಾಡಿದ್ದು, ಈಗ ಸುಮನಾ ಗರ್ಭಧರಿಸಿರುವುದನ್ನು ಕೇಳಿ, ಬೆಂಗಳೂರಿನಲ್ಲಿದ್ದ ಹರ್ಷಿಣಿ ಸಂತೋಷಪಟ್ಟಳು.

ಆದರೆ, ಪನ್ನಗ ಹೈದರಾಬಾದಿನಿಂದ ಸುಮನಾಳನ್ನು ಅವಳ ತೌರುಮನೆಗೆ ಬಿಡಲು ಬಂದು ಹೋದಮೇಲೆ ಹರ್ಷಿಣಿಗೆ ಏನೋ ಅಸಹಜತೆ ಇದೆ ಎನಿಸಿತು. ಸದ್ಯ ಅವರಿಬ್ಬರ ಬದುಕಿನಲ್ಲಿ ಎಲ್ಲಾ ಸರಿಹೋಯ್ತು ಎಂದು ಸಮಾಧಾನಮಾಡಿಕೊಳ್ಳುವ ಹೊತ್ತಿನಲ್ಲಿ ಈಕೆಗೆ ವಿಚಿತ್ರ ಅನುಭವ ಆಗತೊಡಗಿತು. ಪನ್ನಗನ ವರ್ತನೆ ತನ್ನ ವಿಚಾರದಲ್ಲಿ ಬದಲಾಗಿರುವುದು ನಿಚ್ಚಳವಾಗಿ ಕಾಣಿಸಿತು. ಆತ ನಿರ್ಲಕ್ಷಿಸಿದ್ದರೂ ಖಂಡಿತ ಬೇಸರವಾಗುತ್ತಿರಲಿಲ್ಲ. ಆದರೆ, ಆತನ ನಡವಳಿಕೆ ತಂದಿಟ್ಟ ಮುಜುಗರ ಆಕೆಗೆ ಬೇರೆ ವಾಸನೆಯ ಸುಳಿವನ್ನು ಬಿಟ್ಟುಕೊಟ್ಟಿತು.

ಅವರಿಬ್ಬರ ದಾಂಪತ್ಯ ಜೀವನ ಸರಿಮಾಡಲು ಹರ್ಷಿಣಿ ತೆಗೆದುಕೊಂಡ ಕಾಳಜಿಯನ್ನು ಪನ್ನಗ ತಪ್ಪಾಗಿ ಗ್ರಹಿಸಿದ್ದನು. ಹಿಂದೊಮ್ಮೆ ಪ್ರೀತಿಸಿದ್ದ, ಈಗಲೂ ಮದುವೆಯಾಗದೇ ಮೂವತ್ತೈದು ದಾಟಿರುವ ಹರ್ಷಿಣಿ ತನ್ನೊಡನೆ ಯಾವುದೇ ಸಂಪರ್ಕಕ್ಕೆ ಸಮ್ಮತಿಸುತ್ತಾಳೆಂದು ತನಗೆ ತಾನೇ ನಿರ್ಧರಿಸಿಕೊಂಡಿದ್ದ. ಅವನ ನಿರ್ಧಾರ ರೆಸ್ಟೋರೆಂಟಿನ ಮೂಲೆ ಟೇಬಲಿನ ಬಳಿ ಕುಳಿತಿದ್ದಾಗ, ಪನ್ನಗನು ಮಾಡಿದ ಅನಾವಶ್ಯಕ ಸ್ಪರ್ಶಗಳಲ್ಲೇ ಹರ್ಷಿಣಿಗೆ ಸೂಕ್ಷ್ಮವಾಗಿ ತಿಳಿಯಿತು.

ಅವರಿಬ್ಬರನ್ನೂ ರೆಸ್ಟೋರೆಂಟಿನಿಂದ ಬೀಳ್ಕೊಟ್ಟು ಮನೆಗೆ ಬಂದ ಹರ್ಷಿಣಿ, ಬಾಂಬ್‌ ನಿಷ್ಕ್ರಿàಯ ದಳದ ತರಬೇತುಳ್ಳ ಶ್ವಾನದಂತೆ ತಕ್ಷಣ ಸುಮನಾಳ ಮೊಬೈಲ್‌ಗೆ ಒಂದು ಸಂದೇಶ ಟೈಪ್‌ ಮಾಡಿ ಕಳಿಸಿದಳು.

ಪ್ರಿಯ ಸುಮನಾ, ಬಹುಶಃ ದಾಂಪತ್ಯ ಎಂಬುದು ದಂಪತಿಗಳಿಬ್ಬರ ಅನುರಾಗ ಸೌಧ. ಅದು ಬಿರುಕುಬಿಡುವ ಮುನ್ನ ಒಲವಿನ ಸಂಪರ್ಕ ಎಂಬ ಕಾಂಕ್ರೀಟ್‌ ಹಾಕಿ ಭದ್ರ ಮಾಡುತ್ತಿರಬೇಕು. ಬೆಂಗಳೂರಿನ ನಿನ್ನ ತಾಯಿಮನೆಯ ವಿಶ್ರಾಂತಿಯನ್ನು ಹೈದರಬಾದಿನಲ್ಲೂ ಪಡೆಯಬಹುದು. ನೀನು ಜಾಣೆ. ಇಷ್ಟರಲ್ಲಿ ನನ್ನ ಮಾತಿನ ಅರ್ಥ ನಿನಗಾಗಿರುತ್ತದೆ ಎಂದು ಭಾವಿಸಿರುತ್ತೇನೆ. ಅರ್ಥವಾಗದಿದ್ದರೆ ಪನ್ನಗನಿಗೆ ಈ ಸಂದೇಶ ಫಾರ್ವರ್ಡ್‌ ಮಾಡು. ಆತ ತಿಳಿಸಿಕೊಡುತ್ತಾನೆ. ಆರೋಗ್ಯ ನೋಡಿಕೋ. ಬೈ.

– ನಿನ್ನ ಪ್ರೀತಿಯ ಹರ್ಷಿಣಿ.

ಹರ್ಷಿಣಿಯ ಸಂದೇಶ, ಪನ್ನಗನ ಮೊಬೈಲ್‌ಗೆ ಸುಮನಾಳ ನಂಬರಿನಿಂದ ಫಾರ್ವರ್ಡ್‌ ಆಗಿ ಬಂತು. “ಹರ್ಷಿಣಿಯ ಈ ಮೆಸೇಜ್‌ ನಂಗೆ ಅರ್ಥ ಆಗುತ್ತಿಲ್ಲರೀ… ಅದೇನೂಂತ ಸ್ವಲ್ಪ ನೋಡಿ ಹೇಳಿ’ ಎಂದಳು. ಈಗ ಪನ್ನಗನಿಗೂ ತಾನು ಹುಷಾರಾಗಬೇಕಾದ ವಾಸನೆಯ ಜಾಡುಹತ್ತಿತು.

ವಸುಂಧರಾ ಕೆ. ಎಂ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು...

  • ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ...

  • ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ...

  • ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ...

  • ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. "ಅದ್ವಿಕಾ' ಎಂದು ಉತ್ತರ ಬಂತು....

ಹೊಸ ಸೇರ್ಪಡೆ

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...