ಅನುವಾದಕ್ಕೆ ಸಂಬಂಧಿಸಿ ಪ್ರಾಧಿಕಾರವು ರಚನಾತ್ಮಕ ಕೆಲಸ ಮಾಡಲಿದೆ

ಪುಸ್ತಕ ಪ್ರಕಟಣೆ ಮತ್ತು ವಿಚಾರಗೋಷ್ಠಿಗಳ ಜೊತೆಗೆ 

Team Udayavani, Nov 10, 2019, 5:00 AM IST

– ಅಜಕ್ಕಳ ಗಿರೀಶ ಭಟ್‌,
ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕುವೆಂಪು ಭಾಷಾ ಭಾರತಿಯನ್ನು ಸ್ಥಾಪಿಸಿದುದರ ಹಿಂದಿನ ಆಶಯವೇನು?
-ಯಾವುದೇ ಸಂಸ್ಕೃತಿ ನಿರಂತರವಾಗಿ ವಿಕಾಸ ಹೊಂದಬೇಕಾದರೆ ಸಾಹಿತ್ಯ ಮತ್ತು ಜ್ಞಾನ ವಿಸ್ತಾರಗೊಳ್ಳುವುದು ಅಗತ್ಯ. ಇದಕ್ಕಾಗಿ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ಅನಿವಾರ್ಯ. ಕನ್ನಡದಲ್ಲಿ ಅನುವಾದಕ್ಕೆ ದೀರ್ಘ‌ ಚರಿತ್ರೆಯಿದೆ. ಪ್ರಾಚೀನ ಕವಿಗಳಾದ ಪಂಪ, ರನ್ನ ಮೊದಲಾದವರ ಕಾವ್ಯಗಳು ಕೂಡ ತುಸು ರೂಪಾಂತರದೊಂದಿಗೆ ಮಾಡಿದ ಭಾಷಾಂತರಗಳೇ ಆಗಿವೆ. ಆಧುನಿಕ ಕಾಲದಲ್ಲಿ ಅನುವಾದದ ಮಹತ್ವವನ್ನು ಮನಗಂಡು 2005ರಲ್ಲಿ ಕರ್ನಾಟಕ ಸರಕಾರ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿತು. ದೇಶದಲ್ಲಿಯೇ ಈ ಬಗೆಯ ಮೊದಲ ಸಂಸ್ಥೆ ಇದಾಗಿತ್ತು. ಮುಂದೆ 2009ರಲ್ಲಿ ಕುವೆಂಪು ಭಾಷಾ ಭಾರತಿ ಅಸ್ತಿತ್ವಕ್ಕೆ ಬಂದಾಗ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಅದರಲ್ಲಿ ವಿಲೀನಗೊಳಿಸಲಾಯಿತು.

ಈ ಪ್ರಾಧಿಕಾರ ಮಾಡಬೇಕಾದ ಕಾರ್ಯಗಳ ಸ್ವರೂಪ ಏನು?
-ಇದರ ಕಾರ್ಯವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಕನ್ನಡದಿಂದ ಇತರ ಭಾಷೆಗಳಿಗೆ ಮತ್ತು ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿಸುವುದು, ಅನುವಾದಕ್ಕೆ ಸಂಬಂಧಿಸಿ ಗೋಷ್ಠಿ, ಕಮ್ಮಟ ಇತ್ಯಾದಿ ನಡೆಸುವುದು, ಅನುವಾದ ಕ್ಷೇತ್ರದಲ್ಲಿ ದುಡಿದ ವಿದ್ವಾಂಸರನ್ನು ಗುರುತಿಸಿ ಗೌರವಿಸುವುದು ಇತ್ಯಾದಿ.

ಈವರೆಗೆ ಪ್ರಾಧಿಕಾರದಿಂದ ಯಾವೆಲ್ಲ ಕೆಲಸಗಳಾಗಿವೆ?
-2005ರಿಂದ ತೊಡಗಿ ಆರಂಭದ ಎರಡು ಅವಧಿಗಳಲ್ಲಿ ಅಧ್ಯಕ್ಷರಾಗಿದ್ದ ಡಾ. ಪ್ರಧಾನ ಗುರುದತ್‌ ಅವರ ಕಾಲದಿಂದಲೇ ಸಾಕಷ್ಟು ಮಹತ್ವದ ಪ್ರಕಟಣೆಗಳು ಬಂದಿವೆ. ಅನುವಾದ ತರಬೇತಿ ಕಾರ್ಯಕ್ರಮಗಳೂ ನಡೆದಿವೆ. ಮುಂದೆ ಡಾ. ಕೆ. ವಿ. ನಾರಾಯಣ ಹಾಗೂ ಡಾ. ಕೆ. ಮರುಳಸಿದ್ಧಪ್ಪ ಅವರ ಅಧ್ಯಕ್ಷತೆಯ ಅವಧಿಯಲ್ಲೂ ಹಲವು ಮುಖ್ಯ ಪ್ರಕಟಣೆಗಳು ಬಂದಿವೆ. ಗೋಷ್ಠಿ, ಕಮ್ಮಟ ಇತ್ಯಾದಿ ನಡೆದಿವೆ. ಕನ್ನಡದ ಮಹತ್ವದ ಕವಿಗಳ ವಾಚಿಕೆಗಳಿಗೂ ಹಿಂದಿನ ಅವಧಿಗಳಲ್ಲಿ ಚಾಲನೆ ನೀಡಿದ್ದಾರೆ. ವಿಲ್‌ ಡ್ಯುರಾಂಟನ ನಾಗರಿಕತೆಯ ಕಥೆ, ಅಂಬೇಡ್ಕರ್‌ ಸಂಪುಟಗಳು, ಕಥಾಸರಿತ್ಸಾಗರ, ದೀನದಯಾಳ್‌ ಉಪಾಧ್ಯಾಯರ ಸಂಪುಟಗಳು, ಸಂವಿಧಾನ ರಚನಾ ಸಭೆಯ ಚರ್ಚೆಗಳ ಸಂಪುಟಗಳು ಇವೆಲ್ಲ ಮುಖ್ಯ ಯೋಜನೆಗಳು.

ಮುಂದಿನ ಕೆಲಸಗಳ ಬಗ್ಗೆ ಯಾವೆಲ್ಲ ಆಲೋಚನೆಗಳಿವೆ?
-ಪ್ರಾಧಿಕಾರವು ಕೇವಲ ಪುಸ್ತಕ ಪ್ರಕಟಣೆ ಮತ್ತು ವಿಚಾರಗೋಷ್ಠಿಗಳಿಗೆ ಸೀಮಿತಗೊಳ್ಳದೆ, ಅದರ ಧ್ಯೇಯೋದ್ದೇಶಗಳ ಚೌಕಟ್ಟಿನಲ್ಲಿಯೇ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. ಮುಖ್ಯವಾಗಿ ಅನುವಾದಕ್ಕೆ ಸಂಬಂಧಿಸಿ ಒಂದು ವಾರದಷ್ಟು ಕಿರು ಅವಧಿಯ ಮತ್ತು ಎರಡು-ಮೂರು ತಿಂಗಳುಗಳಷ್ಟು ದೀರ್ಘ‌ ಅವಧಿಯ ಕೋರ್ಸುಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸುವ ಬಗ್ಗೆ ಚಿಂತನೆಯಿದೆ. ವಾಣಿಜ್ಯ ಜಗತ್ತಿನಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುವಾದಕ್ಕೆ ಇಂದು ತುಂಬ ಪ್ರಾಮುಖ್ಯವಿದೆ. ಹೀಗೆ ನಿರ್ದಿಷ್ಟ ಕ್ಷೇತ್ರಕ್ಕಾಗಿ ಯೇ ತರಬೇತಿಯನ್ನು ನೀಡಬಹುದು. ಅನುವಾದಕ್ಕೆ ಸಂಬಂಧಿಸಿದ ಒಂದು ದ್ವೆ çಮಾಸಿಕ ಅಥವಾ ಬುಲೆಟಿನ್‌ ತರುವ ಯೋಚನೆಯಿದೆ. ಕನ್ನಡದ ಒಳಭಾಷೆಗಳಾದ ತುಳು, ಕೊಂಕಣಿ, ಕೊಡವ ಇತ್ಯಾದಿ ಭಾಷೆಗಳ ಮುಖ್ಯ ಕೃತಿಗಳನ್ನು ಆಯಾ ಭಾಷಾ ಅಕಾಡೆಮಿಗಳ ಸಹಯೋಗದೊಂದಿಗೆ ಕನ್ನಡಕ್ಕೆ ತರುವ ಯೋಚನೆಯಿದೆ. ಮಕ್ಕಳ ಸಾಹಿತ್ಯ ಮತ್ತು ಸಮಾಜವಿಜ್ಞಾನ ಮುಂತಾದ ಕ್ಷೇತ್ರಗಳ ಕಡೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಡಿ.ವಿ.ಜಿ.ಯವರು ರಾಜ್ಯವ್ಯವಸ್ಥೆ, ಸರಕಾರ ಮುಂತಾದ ವಿಚಾರಗಳ ಬಗ್ಗೆ ಬರೆದ ಬಹಳಷ್ಟು ಇಂಗ್ಲಿಷ್‌ ಲೇಖನಗಳು ಇಂದಿಗೂ ಪ್ರಸ್ತುತವಾಗಿದ್ದು ಅವು ಕನ್ನಡಕ್ಕೆ ಬರಬೇಕಾಗಿದೆ. ಅದೇ ರೀತಿ ಅವರ ಕೆಲವು ಕನ್ನಡ ಬರಹಗಳು ಇತರ ಭಾಷೆಗಳಿಗೆ ಹೋಗಬೇಕು. ಸೇಡಿಯಾಪು ಅವರ ಗ್ರಂಥಗಳ ವಿದ್ವತ್ತನ್ನು ಹೊರಜಗತ್ತಿಗೆ ತಲುಪಿಸಬೇಕಾಗಿದೆ. ಹಾಗೆಯೇ ಕನ್ನಡದ ಈಚಿನ ಮುಖ್ಯ ಕಥೆ, ಕಾದಂಬರಿ ಇತ್ಯಾದಿ ರಚನೆಗಳನ್ನೂ ಕನ್ನಡೇತರರಿಗೆ ಕೊಡಬೇಕು. ಅನುವಾದಿತ ಕೃತಿಗಳ ಗ್ರಂಥಾಲಯದ ಜೊತೆಗೆ ಅನುವಾದಿತ ಲೇಖನ ಮತ್ತು ಕೃತಿಗಳ ಒಂದು ಸಮಗ್ರ ಮಾಹಿತಿಕೋಶ ಪ್ರಾಧಿಕಾರದಲ್ಲಿ ಲಭ್ಯವಾಗಬೇಕು ಎಂಬ ಆಸೆಯಿದೆ. ಯುವ ಮನಸ್ಸುಗಳಿಗೆ ಅನುವಾದದ ರುಚಿ ಹತ್ತಿಸಬೇಕೆಂಬುದು ನಮ್ಮ ತಂಡದ ಆಶಯ.

ಪ್ರಾಧಿಕಾರದ ಮುಂದಿರುವ ಮುಖ್ಯ ಸವಾಲುಗಳೇನು? ಅವನ್ನು ನಿಭಾಯಿಸುವ ಬಗ್ಗೆ ಹೇಳಿ.
-ಪ್ರಕಟಿತ ಪುಸ್ತಕಗಳನ್ನು ಓದುಗರಿಗೆ ತಲುಪಿಸುವುದು ಅಂದರೆ ಮಾರಾಟ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಕನ್ನಡದಿಂದ ಬೇರೆೆ ಭಾಷೆಗಳಿಗೆ ಅನುವಾದಿಸಿದಾಗ ಇದು ಇನ್ನಷ್ಟು ಕಷ್ಟ. ಹೀಗಾಗಿ ಕರ್ನಾಟಕ ಸರಕಾರದ ಮೂಲಕ ಇತರ ರಾಜ್ಯಗಳ ಸಂಸ್ಕೃತಿ ಇಲಾಖೆ ಅಥವಾ ಗ್ರಂಥಾಲಯ ಇಲಾಖೆಗಳನ್ನು ಸಂಪರ್ಕಿಸಿ ಆಯಾ ಭಾಷೆಯಲ್ಲಿ ತರುವ ಅನುವಾದಗಳನ್ನು ಆಯಾ ಓದುಗರಿಗೆ ತಲುಪಿಸುವ ಬಗ್ಗೆ ಯೋಚಿಸಬೇಕಾಗಿದೆ. ಅದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪುಸ್ತಕಗಳ ಪ್ರಚಾರ ಮಾಡಬೇಕು. ಹಾಗೆಯೇ ಹಕ್ಕುಸ್ವಾಮ್ಯದ ಸಮಸ್ಯೆ ಇಲ್ಲದಿರುವ ಕನ್ನಡ ಗ್ರಂಥಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿ ಮುದ್ರಣದ ಬದಲು ಡಿಜಿಟಲ್‌ ರೂಪದಲ್ಲಿ ಲಭ್ಯವಾಗುವಂತೆ ಮಾಡಬಹುದು.

ಹಣಕಾಸಿನ ಸವಾಲು? ಇಷ್ಟೆಲ್ಲ ಯೋಜನೆಗಳಿಗೆ ಸಾಕಷ್ಟು ಹಣಕಾಸಿನ ಅನುದಾನ ಅಗತ್ಯ ಇದೆಯಲ್ಲವೆ?
-ನಿಜ. ಅಗತ್ಯವಿದೆ. ಹಾಗೆಯೇ, ಇರುವ ಅನುದಾನವನ್ನು ದುಂದುವೆಚ್ಚವಾಗದಂತೆ ಬಳಸಿಕೊಳ್ಳುವುದು ಕೂಡ ಮುಖ್ಯ. ಕನ್ನಡ ಭಾಷೆ-ಸಾಹಿತ್ಯ- ಸಂಸ್ಕೃತಿಗೆ ಸಂಬಂಧಿಸಿ ಕೈಗೊಳ್ಳುವ ಯೋಜನೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಇಲಾಖಾ ಸಚಿವರಾದ ಸಿ. ಟಿ. ರವಿ ನೀಡಿದ್ದಾರೆ. ನಾನಂತೂ ಆಶಾವಾದದಿಂದ ಕೆಲಸಕ್ಕೆ ತೊಡಗುವವನು. ನಮ್ಮ ತಂಡದಲ್ಲಿ ಕನ್ನಡ ಸಾಹಿತ್ಯ, ಇಂಗ್ಲಿಷ್‌ ಸಾಹಿತ್ಯ, ಪತ್ರಿಕೋದ್ಯಮ, ವಿಜ್ಞಾನ, ಸಮಾಜವಿಜ್ಞಾನ, ಪುಸ್ತಕಪ್ರಕಟಣೆ, ಹೀಗೆ ವೈವಿಧ್ಯಮಯ ಹಿನ್ನೆಲೆಯುಳ್ಳ ಉತ್ಸಾಹಿ ಸದಸ್ಯ ರಿದ್ದಾರೆ. ಸಾಹಿತ್ಯ ಸಂಸ್ಕೃತಿಗಳಲ್ಲಿ ಆಸಕ್ತರಾದ ರಿಜಿಸ್ಟ್ರಾರ್‌ ಈಶ್ವರ್‌ ಮಿರ್ಜಿ ಇದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳೂ ಸಹೃದಯರೇ. ಹೀಗಾಗಿ ಸದಸ್ಯರು ಹಾಗೂ ಸರಕಾರದ ಸಹಕಾರದಿಂದ ಕನ್ನಡವನ್ನು ಹೊರಜಗತ್ತಿಗೆ ಒಯ್ಯುವುದು ಮತ್ತು ಹೊರಜಗತ್ತನ್ನು ಕನ್ನಡದೊಳಗೆ ತರುವುದು ಇವೆರಡೂ ಕೆಲಸಗಳನ್ನು ಮಾಡುವ ಉತ್ಸಾಹ ಮತ್ತು ಭರವಸೆಯಿದೆ.

ಕೆ. ಎನ್‌


ಈ ವಿಭಾಗದಿಂದ ಇನ್ನಷ್ಟು

  • ಪು. ತಿ. ನರಸಿಂಹಾಚಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಜಿ. ಎಸ್‌. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ...

  • ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ...

  • ದೀರ್ಘ‌ವಾದ ಸಮುದ್ರಯಾನವು ಬಹಳ ಮನೋಹರವಾದ ಅನುಭವವಾದರೂ ಹಲವರಿಗೆ ಅದು ತ್ರಾಸದಾಯಕವೂ ಹೌದು. ಹೊಟ್ಟೆ ತೊಳಸುವುದು, ವಾಂತಿ ಬಂದಂತೆನಿಸುವುದು, ತಲೆಯೊಳಗೆ ಎಲ್ಲವೂ...

  • ಮನೆಯ ಹಿಂದಿನ ಚಿಂಬೈ ರಸ್ತೆಯ ಬದಿಯಲ್ಲಿರುವ ಅಶ್ವತ್ಥ ಮರದ ಅಡಿಯಲ್ಲಿ ಸ್ಥಾಪಿತವಾಗಿದ್ದ ಹನುಮನ ಗುಡಿಯ ಇರವಿನ ಬಗ್ಗೆ ತಿಳಿದುಬಂದದ್ದು ನನಗೆ ಸಹಾಯಕಿಯಾಗಿ ಬರುತ್ತಿದ್ದ...

  • ಕಾರ್ಪೊರೇಟ್‌ ಪ್ರಪಂಚದಲ್ಲಿ ಬಿಜಿಯಾಗಿರುವ ಮಗ ಮೊನ್ನೆ ಕಾಲ್‌ ಮಾಡಿದ್ದ , ""ಈ ವೀಕ್‌ ಎಂಡ್‌ನ‌ಲ್ಲಿ ಬರ್ತಾ ಇದೀನಿ. ಹುರುಳಿಕಾಳಿನ ಬಸ್ಸಾರು ಮಾಡಿರಿ'' ಎಂದು. ಪಿಜ್ಜಾ...

ಹೊಸ ಸೇರ್ಪಡೆ