ಸೈಕಲ್ಲು ಗಾಲಿಗಳಂತೆ ಚಲಿಸುತ್ತಿರುವ ನಿರಾಯಾಸ ಬದುಕು

ಲಕ್ಷದ್ವೀಪ ಡೈರಿ

Team Udayavani, Oct 27, 2019, 5:07 AM IST

z-7

ಮಧ್ಯಪೂರ್ವ ಅರಬಿ ಕಡಲಿನ ನಿರ್ವಾತದಿಂದುಂಟಾದ ಸುಯಿಲುಗಾಳಿಯೊಂದು ಒಬ್ಬಳು ಪ್ರಕ್ಷುಬ್ಧ ಸುಂದರಿಯಂತೆ ಸುಳಿಯುತ್ತ ನಾನಿರುವ ಈ ದ್ವೀಪದ ಮೇಲೆ ಹಾದುಹೋಗುತ್ತಿತ್ತು. ಸುಮಾರು ಎರಡು ಸಾವಿರ ಮೈಲುಗಳುದ್ದ ನೀಲ ಸಾಗರದ ಮೇಲೆ ಅಡೆತಡೆಯಿಲ್ಲದ ಸಂಚರಿಸಿದ ಸುಯಿಲು ಸುಂದರಿಯ ಕಿರುನಗೆಯಂಥ ಗಾಳಿಯಲೆಗಳು ಈ ಪುಟ್ಟ ದ್ವೀಪಕ್ಕೆ ಚಾದರದಂತೆ ಹೊದ್ದಿರುವ ತೆಂಗು ತೋಪುಗಳನ್ನು ಕೊಂಚ ಜೋರಾಗಿಯೇ ಅಲ್ಲಾಡಿಸುತ್ತಿದ್ದವು. “ಇರುವ ಒಂದಿಷ್ಟು ಹಿಡಿಭೂಮಿಯ ಮೇಲೆ ನಿನ್ನ ಲೀಲಾ ವಿಲಾಸಗಳನ್ನು ತೋರಿಸುತ್ತಿರುವ ಸುಂದರಿಯೇ, ಇರುವ ಈ ಅಲ್ಪಜೀವಿತದ ಅವಧಿಯಲ್ಲೇ ನಿನ್ನ ಎಲ್ಲಾ ವೈಯಾರವನ್ನು ನೋಡಿಯೇ ತೀರುವೆನು’ ಎಂದು ಕಡಲನ್ನು ಬಳಸಿಕೊಂಡೇ ಸಾಗುವ ಸಿಮೆಂಟು ರೋಡಿನ ಮೇಲೆ ಮೂಗ ತುದಿಯಲ್ಲಿ ಒಂದು ತುಂಟನಗುವನ್ನು ಇರಿಸಿಕೊಂಡು ಸೈಕಲ್ಲು ಓಡಿಸುತ್ತಿದ್ದೆ. ಇದಲ್ಲವೇ ಬದುಕು, ಇದಲ್ಲವೇ ಸ್ವಾತಂತ್ರ್ಯ- ಎಂದು ಗಾಳಿಮಳೆ ಎಳೆಬಿಸಿಲ ನಡುವೆ ಓಡುತ್ತಿರುವ ಸೈಕಲ್ಲಿನ ಗಾಲಿಗಳು.

ಮುಂಗಾರು ಕಳೆದು ಮುಂಜಾನೆಯ ಹೊತ್ತು ಹುಲ್ಲುಗರಿಗಳ ಸಣ್ಣಗೆ ಇಬ್ಬನಿಯೂ ಬೀಳಲುತೊಡಗಿತ್ತು. “ಇನ್ನೇನು, ನಿನ್ನ ದ್ವೀಪಗಳ ಸಂಚಾರ ಶುರು ಮಾಡಬಹುದು’ ಎಂಬಂತೆ ಹೊಳೆಯುತ್ತಿರುವ ಇಬ್ಬನಿಯ ಹನಿಗಳು. ಜಡಿಮಳೆಗೆ ಜರ್ಝರಿತವಾಗಿದ್ದ ಕಡಲ ತೀರದ ಹಸಿರು ಹುಲ್ಲಿನ ಮೇಲೆ ಬಗೆಬಗೆಯ ಬಣ್ಣದ ಕಾಡು ಹೂವುಗಳು. ಒಂದೊಂದು ಹೂವಿಗೂ ಒಂದೊಂದು ಹೆಸರುಗಳು. ಒಂದೊಂದು ಅನೂಹ್ಯ ಸೌಂದರ್ಯ ಇಂತಹ ಹೊತ್ತಲ್ಲೇ ಲಗೂನಿನ ನೀರಮೇಲೆ ಒಂದು ಬಗೆಯ ಜೆಲ್ಲಿ ಮೀನುಗಳು ತೇಲುತ್ತ ಬರುತ್ತವೆ. ಅನ್ಯಗ್ರಹಗಳಿಂದ ಹಾರಿಬಂದ ಕ್ಷುದ್ರಜೀವಿಗಳಂತೆ ಕಾಣಿಸುವ ಈ ಮೀನುಗಳು ಮೈಸವರಿದರೆ ಬೊಕ್ಕೆಗಳು ಏಳುತ್ತವೆ. ಅತಿಯಾದ ಜ್ವರವೂ ಬಳಲಿಕೆಯೂ ಬರಬಹುದು. ಕೆಲವೊಮ್ಮೆ ಬಳಲಿಕೆ ಅತಿಯಾದರೆ ಸಾವೂ ಸಂಭವಿಸಬಹುದು. ಜೆಲ್ಲಿ ಮೀನುಗಳಿಗೆ ಮನುಷ್ಯರನ್ನು ಸಾಯಿಸಬೇಕೆಂಬ ಇರಾದೆಯೇನೂ ಇರುವುದಿಲ್ಲ. ಅವುಗಳ ಯಾನಕ್ಕೆ ಅಡ್ಡಬಂದ ಮಾನವ ದೇಹಗಳ ಮೇಲೆ ತಮ್ಮ ನೀಳವಾದ ಕೊಂಡಿಗಳಿಂದ ಸುಮ್ಮನೆ ಸವರುತ್ತವೆ ಅಷ್ಟೆ. ಆದರೆ, ನಾವು ಅವುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ನಮ್ಮೊಡನೆ ಈಜಲು ಬರುತ್ತಿದ್ದ ಸಾಗರ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದರು. ಕಡಲ ತಡಿಯಲ್ಲಿ ಕುಳ್ಳಗೆ ಬೆಳೆಯುವ ತೆಂಗಿನ ಮಡಲುಗಳ ಮೇಲೆ ಒಂದು ಬಗೆಯ ಬಿಳಿಯ ಹಾವಸೆ ಬೆಳೆಯುತ್ತದೆ. ಈ ಹಾವಸೆಯನ್ನು ಕೆರೆದು ತೆಗೆದು ಜೆಲ್ಲಿಮೀನುಗಳು ಸವರಿದ ಜಾಗಕ್ಕೆ ಹಚ್ಚಿಕೊಂಡರೆ ನೋವಿನ ಉರಿಯೂ ಕಮ್ಮಿಯಾಗಬಹುದು ಎಂದು ಅವರು ನಾಟಿ ಔಷಧಿಯನ್ನೂ ಹೇಳಿದ್ದರು.

ನಿವೃತ್ತರಾಗಿದ್ದರೂ ಇನ್ನೂ ಕಟ್ಟುಮಸ್ತಾಗಿಯೂ ಸುಂದರವಾಗಿಯೂ ಇರುವ ಇವರು ಕವಿಯೂ ಹೌದು. ಪ್ರತಿದಿನ ಬೆಳಗ್ಗೆ ಈಜಲು ಲಗೂನಿನ ನೀರಿಗೆ ಇಳಿಯುತ್ತಾರೆ. ಗಂಟೆಗಟ್ಟಲೆ ಈಜುತ್ತಾರೆ. ಎಲ್ಲವನ್ನೂ ಎಲ್ಲರನ್ನೂ ನಿಸೂರಾಗಿ ನೋಡುತ್ತಾ ಲಗುಬಗೆಯಿಂದ ಬದುಕುತ್ತಾರೆ. ಮನಸ್ಸು ಮಾಡಿದ್ದರೆ ಲೋಕದಲ್ಲೇಲ್ಲ ಹೆಸರು ಮಾಡಿಕೊಂಡು ಓಡಾಡಬಹುದಾಗಿದ್ದ ಸಾಗರಶಾಸ್ತ್ರಜ್ಞ. ಆದರೆ, ತನ್ನ ಸುಂದರ ದ್ವೀಪವನ್ನೂ, ಈ ನೀಲಲಗೂನಿನ ಈಜುವ ಸುಖವನ್ನೂ ಬಿಟ್ಟಿರಲಾರದೆ ಇಲ್ಲೇ ತಣ್ಣಗೆ ಬದುಕುತ್ತಿರುತ್ತಾರೆ. “”ನೀನು ಹೊರಗಿನಿಂದ ಬಂದಿರುವ ಮನುಷ್ಯ. ಬಲು ವೇಗದ ಬದುಕನ್ನು ಕಂಡವನು. ಆದರೆ, ಇಲ್ಲಿ ನಿನಗೆ ಅನ್ನಿಸಿದ್ದನ್ನೆಲ್ಲ ಹೇಳಲು ಹೋಗಬೇಡ. ಸುಮ್ಮನೆ ನೋಡುತ್ತ ಅನುಭವಿಸು. ಇಲ್ಲಿ ಯಾವ ಕಾಲದಲ್ಲಿ ಯಾವ ತೆಂಗಿನ ಮರದಿಂದ ನಿನ್ನ ತಲೆಯ ಮೇಲೆ ತೆಂಗಿನಕಾಯಿಯೊಂದು ಬೀಳುವುದು ಎಂದು ಹೇಳಲಾಗುವುದಿಲ್ಲ. ಹುಷಾರಾಗಿರು” ಎಂದು ಈಜುವಾಗ ಕಿವಿಯಲ್ಲಿ ಅಂದು ಮುಂದಕ್ಕೆ ಹೋಗುತ್ತಾರೆ. ತಿರುಗಿ ನೋಡಿದರೆ ಅಷ್ಟು ದೂರದಲ್ಲಿ ಈಜುತ್ತ ಮರೆಯಾಗುತ್ತಾರೆ. ಆಮೇಲೆ ನೋಡಿದರೆ ಯಾವುದೋ ಟೀ ಅಂಗಡಿಯಲ್ಲೋ ಪ್ರಯಾಣಿಕರ ಹಡಗಿನಲ್ಲೋ ಕಾಣಸಿಗುತ್ತಾರೆ. ಒಂದೊಂದು ಸಲ ವಿಮಾನ ನಿಲ್ದಾಣದಲ್ಲೂ . ಕಳೆದ ಸಲ ವಿಮಾನದಲ್ಲಿ ಸಿಕ್ಕಾಗ ಅವರು ಲಕ್ನೋಗೆ ಹೊರಟಿದ್ದರು. ಲಕ್ನೋದಲ್ಲಿ ಹಿರಿಯ ನಾಗರಿಕರ ಈಜುವ ಸ್ಪರ್ಧೆ ನಡೆಯಲಿತ್ತಂತೆ. “ಈಜುವ ಸ್ಪರ್ಧೆಯ ಬಹುಮಾನದ ಒಂದು ಮೆಡಲ್ಲು ಹಿಡಿದುಕೊಂಡು ಬಂದು ನಿನ್ನನ್ನು ಕಾಣುತ್ತೇನೆ’ ಎಂದು ಮಂದಹಾಸ ಬೀರಿದ್ದರು. ಅವರು ಅಲ್ಲಿ ಈಜುತ್ತಿರುವ ಹೊತ್ತಲ್ಲಿ ಇಲ್ಲಿ ಬೀಸುತ್ತಿರುವ ನಿರ್ವಾತ ಸುಂದರಿಯ ಸುಯಿಲುಗಾಳಿ. ಇರುಚಲು ಹನಿ ಬಿಸಿಲು ಮಳೆಯಲ್ಲಿ ಕಡಲ ತೀರದ ಸುತ್ತು ದಾರಿಯಲ್ಲಿ ಸುತ್ತು ಹಾಕಬೇಕೆಂದು ಹೊರಟವನ ತಲೆಯೊಳಗೆ ಬಿಟ್ಟು ಬಂದಿರುವ ಊರಿನ ನೆನಪುಗಳು. ಅರೆಚಂದ್ರದಂಥ ಅಲ್ಪವಿರಾಮದ ಚಿಹ್ನೆ ಇಟ್ಟು ನಿಲ್ಲಿಸಿರುವ ಕೆಲವು ಸಂಬಂಧಗಳು. ಊರಿಂದ ಉಮ್ಮ ಫೋನಲ್ಲಿ ನಾನಾ ಕುತೂಹಲದ ಪ್ರಶ್ನೆಗಳನ್ನು ಕೇಳಿದ್ದಳು. “”ನೀನು ಅಲ್ಲಿಯೇ ದ್ವೀಪದ ಹೆಂಗಸೊಬ್ಬಳನ್ನು ನಿಖಾ ಮಾಡಿಕೊಂಡು ಬದುಕುತ್ತಿರುವೆಯಂತೆ ಹೌದಾ?” ಎಂದು ಮಾನವ ಸಂಬಂಧಗಳ ಕುರಿತ ತನಿಖಾಧಿಕಾರಿಯಂತೆ ಪ್ರಶ್ನೆಗಳನ್ನು ಕೇಳಿ ನನ್ನಿಂದ ತಿರುಗಿಸಿ ಬೈಯಿಸಿಕೊಳ್ಳುತ್ತಿದ್ದಳು. “”ನೀನಿರುವ ದ್ವೀಪದಲ್ಲಿ ಗರ್ಭಿಣಿ ಹೆಂಗಸರಿಗೆ ಪ್ರಸವದ ನೋವು ಇರುವುದಿಲ್ಲವಂತೆ, ಹೌದಾ?” ಎಂದೂ ಕೇಳಿದ್ದಳು. ನಮ್ಮ ಬಾಲ್ಯಕಾಲದ ಮಹಾನುಭಾವರ ಕುರಿತು ಆಕೆ ಕೀಟಲೆ ಮಾಡುತ್ತಿದ್ದಳು.

ಎಂಟು ಮಕ್ಕಳನ್ನು ಸಾಲುಸಾಲಾಗಿ ಹೆತ್ತ ನನ್ನ ಉಮ್ಮನಿಗೆ ಈ ಪ್ರಸವದ ನೋವು ಎಂಬುದು ಸ್ತ್ರೀಸಮಾಜವನ್ನು ಕಾಡುವ ಅತಿ ದೊಡ್ಡ ಕೋಟಲೆಯಾಗಿತ್ತು. ಒಂದೊಂದು ಹೆರುವಾಗಲೂ ಒಂದು ಬೃಹತ್‌ ಪರ್ವತವನ್ನು ಹತ್ತಿ-ಇಳಿದ ನೋವು. ಒಂದು ಪರ್ವತವನ್ನು ಇಳಿದು ಇನ್ನೇನು ನಿಸೂರಾಯಿತು ಎನ್ನುವಾಗಲೇ ಇನ್ನೊಂದು ಹೆರಿಗೆಯ ನೋವು. ಈಕೆಯ ನಾಲ್ಕು ಹೆರಿಗೆಗಳ ಹೊತ್ತಲ್ಲಿ ಪಿಂಗಾಣಿ ಬಟ್ಟಲಿನಲ್ಲಿ ಖುರಾನಿನ ಅಲ್‌ ಬಕ… ಸೂರಾದ ಆಯತಲ್‌ ಖುರ್ಷಿಯ ಆಯತ್ತಿನ ವಚನಾಕ್ಷರಗಳನ್ನು ನೀಲಶಾಯಿಯಲ್ಲಿ ಬರೆದು ಆ ಬಟ್ಟಲನ್ನು ತೊಳೆದ ನೀಲಿ ಮಸಿಯ ನೀರನ್ನು ಕುಡಿಸಿ ಪ್ರಸವದ ನೋವನ್ನು ಕಡಿಮೆ ಮಾಡಲು ನಮ್ಮ ಮಹಾನುಭಾವರು ಮನೆಯೆದುರು ಹಾಜರಾಗುತ್ತಿದ್ದರು. ಈಕೆಯ ಹೆರಿಗೆಗಳು ಹತ್ತಿರವಾಗುತ್ತಿದ್ದಂತೆ ತಮ್ಮ ಜೋಳಿಗೆಯಲ್ಲಿ ಪಿಂಗಾಣಿಬಟ್ಟಲನ್ನು ಅಡಗಿಸಿಕೊಂಡು ಅಲ್ಲಿ ಸುಳಿಯುತ್ತಿದ್ದ ಅವರು, “ಪ್ರಸವನೋವು ಶುರುವಾಯಿತೇ, ಸುರುವಾಯಿತೇ’ ಎಂದು ಹೊರಗಿನಿಂದಲೇ ವಿಚಾರಿಸುತ್ತ ಆಕೆಗೆ ಸಾಕಷ್ಟು ಕಿರಿಕಿರಿಯನ್ನೂ ಉಂಟು ಮಾಡುತ್ತಿದ್ದರು. ಕಿರಿಕಿರಿ ತಾಳಲಾರದೆ ಆಕೆ, “ಹೌದು ಬಂದಿದೆ’ ಎಂದು ಬಟ್ಟಲಿನ ನೀರು ಕುಡಿದು ಮುಗಿಸಿ ಅವರಿಗೆ ಖಾಲಿ ಟೀಯನ್ನು ಕೊಟ್ಟು ಕಳುಹಿಸುತ್ತಿದ್ದಳು. ಆಕೆ ಇನ್ನೂ ಹೆತ್ತಿಲ್ಲ ಎಂದು ಅರಿವಾದ ಅವರು ಮತ್ತೆ ಹಾಜರಾಗುತ್ತಿದ್ದರು. ಇವರ ಕಾಟ ತಡೆಯಲಾರದೇ ನಿನ್ನನ್ನು ಏಳನೆಯ ತಿಂಗಳಿಗೇ ಹೆತ್ತುಬಿಟ್ಟೆ ಎಂದು ಆಕೆ ಎಂದಿದ್ದಳು. ಅದಕ್ಕೇ ನೀನು ನಿಂತಲ್ಲಿ ನಿಲ್ಲಲಾಗದೇ ಅಂಡಿನೊಳಗೆ ನೊಣ ಹೊಕ್ಕವನಂತೆ ಓಡಾಡುತ್ತಿರುವುದು ಎಂದು ಆಕೆ ಆಗಾಗ ಬೈಯುತ್ತಿದ್ದಳು.

ಆಕೆಗೆ ಯಾಕೋ ಈ ಮಹಾನುಭಾವರ ಮೇಲೆ ಸಿಟ್ಟು. “ಹಿಂದಿಲ್ಲ ಮುಂದಿಲ್ಲ ಎಲ್ಲಿಂದ ಬಂದರು ಎಂಬುದೂ ಗೊತ್ತಿಲ್ಲ. ಇವರು ಹೇಳಿಕೊಡುತ್ತಿರುವ ಅರಬಿಯ ವಾಕ್ಯಗಳು ಇವರಿಗೇ ಸರಿಯಾಗಿ ಗೊತ್ತಿದೆಯೋ ಎಂಬುದೂ ನನಗೆ ಗೊತ್ತಿಲ್ಲ’ ಎಂದು ಆಕೆ ಹಿಂದಿನಿಂದ ಆಡಿಕೊಳ್ಳುತ್ತಿದ್ದಳು. ಆಕೆಯ ಈ ಸಾತ್ವಿಕ ಸಿಟ್ಟಿಗೂ ಒಂದು ಕಾರಣವಿತ್ತು. ಮಹಾನುಭಾವರು, ಮಕ್ಕಳಾದ ನಮಗೆ ಮನೆಯೊಳಗೆ ಬಚ್ಚಲಲ್ಲಿ ಮೂತ್ರ ಮಾಡಲು ಬಿಡುತ್ತಿರಲಿಲ್ಲ. ರಾತ್ರಿ ಹೊತ್ತಲ್ಲೂ ಮೂತ್ರಶಂಕೆಯಾದರೆ ನಾವು ಸ್ವಲ್ಪ ದೂರವಿರುವ ಒಂಟಿ ತೆಂಗಿನಮರದ ಬಳಿ ತೆರಳಿ ಬುಡಕ್ಕೆ ಮೂತ್ರ ಹೊಯ್ದು ಶುದ್ಧಿಮಾಡಿಕೊಂಡು ಬರಬೇಕಿತ್ತು. “ಬೆಳಗಿನ ಚಳಿಯಲ್ಲಿ ನೀರಿಂದ ತೊಳೆದುಕೊಳ್ಳಲು ತ್ರಾಸವಾಗುವುದಾದರೆ ನೀರು ಬಳಸುವುದು ಬೇಡ, ಇಟ್ಟಿಗೆ ಚೂರಿನಿಂದ ಮುಟ್ಟಿಸಿಕೊಂಡು ತುದಿಯಲ್ಲಿ ಉಳಿದ ಮೂತ್ರದ ಹನಿಯನ್ನು ಹೀರಿಸಿಕೊಂಡು ಬಂದರೂ ಸಾಕು’ ಎಂದು ಅವರು ತಾಕೀತು ಮಾಡಿದ್ದರು. ಕೊಡಗಿನಲ್ಲಿ ಕಡಲು ಇಲ್ಲದುದರಿಂದ ತೆಂಗಿನಮರಕ್ಕೆ ಉಪ್ಪಿನ ಲವಣದ ಆವಶ್ಯಕತೆ ಇರುವುದರಿಂದ ಮಕ್ಕಳು ಅಲ್ಲಿ ಮೂತ್ರ ಮಾಡಿದರೂ ಸಾಕು ಎಂದು ಆದೇಶಿಸಿದ್ದರಿಂದ ನಾವೆಲ್ಲ ಸಾಲುಸಾಲಾಗಿ ಮೂತ್ರ ಹೊಯ್ದು ಆ ಒಂಟಿ ಕಲ್ಪವೃಕ್ಷದ ಬುಡದಲ್ಲಿ ಒಂದು ಅಸಹನೀಯ ಗಂಧವೂ ಚೂರು ಇಟ್ಟಿಗೆಗಳ ರಾಶಿಯೂ ಸೇರಿಕೊಂಡು ಅಲ್ಲಿ ಓಡಾಡುವಾಗ ಉಮ್ಮನಿಗೆ ಕಷ್ಟವಾಗುತ್ತಿತ್ತು. ಅದಕ್ಕಾಗಿ ನಮಗೂ, ಮಹಾನುಭಾವರಿಗೂ ಸೇರಿಸಿಯೇ ಬೈಯುತ್ತಿದ್ದಳು. ಮಹಾನುಭಾವರು ತಮ್ಮ ಪೂರ್ವಜರ ನಾಡಾದ ಲಕ್ಷದ್ವೀಪದ ನೀರಾ ಸಕ್ಕರೆಯ ಕುರಿತೂ ಹೇಳುತ್ತಿದ್ದರು. ಅದಕ್ಕಾಗಿ ತೆಂಗಿನಮರವನ್ನು ಏರುವ ಕಲೆ ಗೊತ್ತಿದ್ದ ತೋಟದ ತಮಿಳು ಆಳೊಬ್ಬನಿಂದ ಆ ತೆಂಗಿನ ಗೊನೆಗೆ ಮಣ್ಣಿನ ಮಡಕೆಯೊಂದನ್ನು ಕಟ್ಟಿಸಿದ್ದರು. ಗೊನೆಗೆ ಮಾಡಿದ ಸಣ್ಣಗಿನ ಗಾಯದಿಂದ ತೊಟ್ಟು ತೊಟ್ಟಾಗಿ ನೀರಾ ಇಳಿದು ಮಡಕೆ ತುಂಬಿದ ಮೇಲೆ ಆ ನೀರಾವನ್ನು ಹದವಾಗಿ ಗಂಟೆಗಟ್ಟಲೆ ಕುದಿಸಿದರೆ ಅದು ಸಕ್ಕರೆಯಾಗುವುದೆಂದೂ ಆ ಸಕ್ಕರೆ ಸ್ವರ್ಗವಾದ ಜನ್ನತುಲ್‌ ಫಿದೌìಸಿನಲ್ಲಿ ಸಿಗುವ ಸಕ್ಕರೆಯಷ್ಟೇ ಸಿಹಿಯೆಂದು ಹಾಡಿ ಹೊಗಳಿದ್ದರು. ಆದರೆ, ತೆಂಗು ಹತ್ತಲು ಗೊತ್ತಿದ್ದ ಆ ತಮಿಳು ಆಳಿಗೆ ತೆಂಗಿನ ಗೊನೆಗೆ ಹೇಗೆ ಗಾಯಮಾಡಬೇಕೆಂದು ಗೊತ್ತಿರಲಿಲ್ಲ. ಆದರೆ ಅದನ್ನು ಆತ ಒಪ್ಪಿಕೊಳ್ಳದೆ ಎಲ್ಲೆಲ್ಲೋ ಅಡ್ಡಾದಿಡ್ಡಿಯಾಗಿ ಕುಯಿದು ಗಾಯಮಾಡಿ ನೀರಾ ಮಣ್ಣಿನ ಮಡಕೆಯೊಳಗೆ ಇಳಿಯದೆ ಇರುಳೆಲ್ಲ ತೊಟ್ಟುತೊಟ್ಟಾಗಿ ಬುಡಕ್ಕೆ ಬೀಳುತ್ತಿತ್ತು. ಮಕ್ಕಳು ಮಾಡಿದ ಮೂತ್ರಕ್ಕೆ ಸೇರಿಕೊಂಡು ಅದೂ ಇನ್ನಷ್ಟು ಕೆಟ್ಟ ಗಂಧವನ್ನು ಅಲ್ಲಿ ಸೃಷ್ಟಿಸುತ್ತಿತ್ತು. ಸತತ ಹೆರಿಗೆ ನೋವುಗಳಿಂದಲೂ ಮಕ್ಕಳ ಮೂತ್ರವಾಸನೆಯಿಂದಲೂ ಜರ್ಜರಿತಳಾಗುತ್ತಿದ್ದ ಉಮ್ಮ ಆ ಕಾಲದಲ್ಲಿ ಸದಾಕಾಲ ತಲೆಯ ಒಂದು ಬದಿಯ ಶೂಲೆಯಿಂದ ನರಳುತ್ತಿದ್ದಳು.

ಆದರೆ, ಮಕ್ಕಳು ಬೆಳೆದು ಅವರ ಕಾಟದಿಂದಲೂ ತಲೆಶೂಲೆಗಳಿಂದಲೂ ಮುಕ್ತಳಾಗಿದ್ದ ಆಕೆ ಈಗ ತಾನೂ ಸ್ವಲ್ಪ ಸಹಜ ತುಂಟತನವನ್ನು ಬೆಳೆಸಿಕೊಂಡು ದ್ವೀಪದಲ್ಲಿ ಒಂಟಿಯಾಗಿ ಬದುಕುತ್ತಿರುವ ನನ್ನ ಕುರಿತು ಕೆಲವು ಗುಮಾನಿಗಳನ್ನು ಪರಿಹರಿಸಿಕೊಳ್ಳುತ್ತಿದ್ದಳು. “”ಏಳನೆಯ ತಿಂಗಳಿಗೆ ಹುಟ್ಟಿದ ನೀನು ಏನೆಲ್ಲಾ ಮಾಡುತ್ತೀಯಾ ಎಂದು ಹೇಳಲಾಗುವುದಿಲ್ಲ. ಇರುವ ಕಟ್ಟಿಕೊಂಡವಳನ್ನೂ, ಮಕ್ಕಳನ್ನೂ ಬಿಟ್ಟು ನೀನು ಅಲ್ಲೊಂದು ಸಂಸಾರ ಮಾಡಿಕೊಂಡಿಲ್ಲ ತಾನೇ” ಎಂದೂ ಕೇಳುತ್ತಿದ್ದಳು.

ನನಗೆ ಪಿಂಗಾಣಿ ಬಟ್ಟಲಿನ ಚಿಂತೆಯಾದರೆ ಒಬ್ಬೊಬ್ಬರಿಗೆ ಒಂದೊಂದು ಚಿಂತೆ ಎಂದು ನನಗೆ ನಗು ಬರುತ್ತಿತ್ತು ಅಥವಾ ಇವರು ಸಂದೇಹಿಸುತ್ತಿರುವುದೆಲ್ಲ ನಿಜವಿರಬಹುದು ಮತ್ತು ಅದು ನನಗೇ ಗೊತ್ತಿಲ್ಲದಿರಬಹುದು ಎಂದೂ ಅನಿಸುತ್ತಿತ್ತು. ಕಡಲ ಮೇಲಿನ ಒಂದು ಕಡೆಯ ಆಕಾಶದಲ್ಲಿ ಉಂಟಾದ ನಿರ್ವಾತವೊಂದು ಸಾವಿರಾರು ಮೈಲಿ ದೂರದ ಅದೇ ಕಡಲಿನ ನಡುವೆ ಇರುವ ದ್ವೀಪವೊಂದರಲ್ಲಿ ಇಷ್ಟೆಲ್ಲ ಸೌಂದರ್ಯವನ್ನೂ ಕೋಲಾಹಲಗಳನ್ನೂ ಸೃಷ್ಟಿಸಬಲ್ಲುದಾದರೆ, ಆ ನಿರ್ವಾತಕ್ಕಿಂತಲೂ ದೊಡ್ಡ ವಾತಾಯನವನ್ನು ಮೆದುಳೊಳಗೆ ಇಟ್ಟುಕೊಂಡು ಓಡಾಡುತ್ತಿರುವ ನಾನು ಇನ್ನು ಎಲ್ಲೆಲ್ಲ ಚಂಡಮಾರುತಗಳನ್ನೂ ಸುಂಟರಗಾಳಿಯಲ್ಲೂ ಸೃಷ್ಟಿಸಿರಬಹುದು ಎಂದೂ ಅನಿಸಿತು.

ಇದು ಯಾವುದರ ಅರಿವಿಲ್ಲದೆಯೇ ಸೈಕಲ್ಲಿನ ನಿರಾಯಾಸ ಗಾಲಿಗಳಂತೆ ಚಲಿಸುತ್ತಿರಬೇಕು ಎಂಬುದನ್ನು ಕಲಿಸುತ್ತಿರುವ ಈ ಹವಳದ್ವೀಪದ ಅನಾಯಾಸ ಬದುಕು. ಸಂಜೆ ಮಳೆ ನಿಂತರೆ ಕಡಲ ಇಳಿತದ ಹೊತ್ತಲ್ಲಿ ಅಕ್ಟೋಪಸ್‌ ಹಿಡಿಯಲು ಹೋಗುವವರ ಜೊತೆ ನಾನೂ ಹೋಗಬೇಕಿತ್ತು. ಅಕ್ಟೋಪಸ್ಸುಗಳ ಕುರಿತು ಯೋಚಿಸುತ್ತ ಮತ್ತೆ ಪೆಡಲು ತುಳಿಯತೊಡಗಿದೆ. ಮಳೆ ನಿಂತರೆ ಅಕ್ಟೋಪಸ್ಸುಗಳು ಸಿಕ್ಕರೆ ಆ ಕುರಿತು ಮುಂದೆ ಬರೆಯುವೆ.

ಅಬ್ದುಲ್‌ ರಶೀದ್‌

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.