ಪರಿಸರ ದಿನವೂ ಕುಶಾಲನಗರದ ಸಂತೆಯೂ

Team Udayavani, Jun 9, 2019, 6:00 AM IST

ಸಾಂದರ್ಭಿಕ ಚಿತ್ರ

ಅಮ್ಮ ಇವತ್ತು ಬೆಂಡೆಕಾಯಿ ಪಲ್ಯ ಎಷ್ಟು ರುಚಿಯಾಗಿದೆ ಯಾಕೆ?” ಎಂದು ಕೇಳಿದ.
“”ನಮ್ಮ ತೋಟದ್ದು ಕಣೋ. ಏನೂ ತರಕಾರಿ ಮನೆಯಲ್ಲಿ ಇಲ್ಲ ಅಂತ ಇದ್ದ ಬಂಡೆಕಾಯಿಯನ್ನು ಕಿತ್ತು ಪಲ್ಯ ಮಾಡಿದೆ, ಬೆಂಡೆಕಾಯಿ ತಾಜಾ ಆಗಿತ್ತಲ್ಲ ಅದಕ್ಕೆ ಅಷ್ಟು ರುಚಿ.”
“”ಅಮ್ಮ, ನಾವು ತುಂಬಾ ಬೆಂಡೆಕಾಯಿ ಗಿಡ ಹಾಕೋಣ” ಅಂದ ಮಗ.

ನಾವು ಕೊಡಗಿನ ಕುಶಾಲನಗರದಲ್ಲಿ ಇದ್ದಾಗ ಮನೆ ಹಿಂದೆ ಸ್ನಾನದ ನೀರಿಗೆ ಬಾಳೆಗಿಡ, ಸೊಪ್ಪು , ಪಪ್ಪಾಯಿ ಗಿಡ ಬೆಳೆದಿದ್ದೆವು. ಸೊಪ್ಪಿನ ಪಲ್ಯ ಎಷ್ಟು ರುಚಿ ಇರುತ್ತಿತ್ತು! ಅಮ್ಮ ಇವತ್ತು ಪಲ್ಯ ತುಂಬಾ ಚೆನ್ನಾಗಿದೆ ಎಂದು ಕೈ ನೆಕ್ಕಿದರೆ, ಅಮ್ಮ ಹೇಳುತ್ತಿದ್ದಳು, “”ಇದು ಇದು ಧರ್ಮರಾಯನ ತೋಟದ್ದು , ಹಾಲಕ್ಕಿ ಬೆಳೆಸಿದ್ದು” ಅಂತ ಹೇಳುತ್ತಿದ್ದಳು. “ಪಪ್ಪಾಯಿ’ ಅಂತ ಮುಖ ಸಿಂಡರಿಸುತ್ತಿದ್ದ ನಾವು ನಮ್ಮನೆ ಪಪ್ಪಾಯಿ ಹಣ್ಣನ್ನು ತಿಂದು ಊಟ ಬಿಡುತ್ತಿದ್ದೆವು. ಆ ಪಪ್ಪಾಯಿ ಹಣ್ಣಿಗೆ ಅಂತಹ‌ ಚಂದದ ಪರಿಮಳ ಇರುತ್ತಿತ್ತು.

ಅದು ಯಾವಾಗಲೂ ಅಷ್ಟೇ, ನಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿ, ಹಣ್ಣಿನ ರುಚಿ ಬೇರೆನೇ. ಅದರೊಂದಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ನಾವು ಬೆಳೆದದ್ದು ತಿನ್ನುವ ಸುಖವೇ ಬೇರೆ. ಅರ್ಜೆಂಟಿಗೆ ತರಕಾರಿ ಇಲ್ಲದಾಗ ಮಾಡುವ ಕರಿಬೇವಿನ, ದೊಡ್ಡಿಪತ್ರೆ ಎಲೆಯ ಚಟ್ನಿ, ಹಾಗಲಕಾಯಿ ಗೊಜ್ಜು, ಪಡವಲಕಾಯಿ, ಅವರೇಕಾಯಿ ಪಲ್ಯದ ರುಚಿ ಬಣ್ಣಿಸಲು ಅಸಾಧ್ಯ. ಮನೆಯಲ್ಲಿ ಬಳಸುವ ನಿರುಪಯುಕ್ತ ನೀರಿನ ಸದ್ಬಳಕೆ ಕೂಡ ಚೆನ್ನಾಗಿ ಆಗುತ್ತದೆ.

ನಾನು ಮೂವತ್ತು ವರ್ಷದ ಹಿಂದಿನ ಕುಶಾಲನಗರದ ಸಂತೆ ವಿಷಯ ಹೇಳುತ್ತಿದ್ದೇನೆ. ಅಲ್ಲಿ ಬುಧವಾರ ಸಂತೆ. ಏನು ಸಂತೆ, ಅದು ಒಂದು ಎಕರೆ ಜಾಗದಲ್ಲಿ ! ಎಷ್ಟು ವಿವಿಧ ತಾಜಾ ಸೊಪ್ಪು! ದಂಟಿನ ಸೊಪ್ಪು , ಮೆಂತೆ ಸೊಪ್ಪು, ಸಬ್ಸಿಗೆ ಸೊಪ್ಪು, ಸೌತೆಕಾಯಿಯಲ್ಲಿ ವೆರೈಟಿ, ಮರಗೆಣಸಿನಲ್ಲಿ ಬೇರೆ ಬೇರೆ ಆಕಾರ, ಕೆಂಪು-ಬಿಳಿ ಗೆಣಸು, ಬದನೆಕಾಯಿಯಲ್ಲಿ ನೀಲಿ, ಬಿಳಿ, ಉದ್ದನೆಯದು, ಗುಂಡದು, ಅವರೆಕಾಯಿ, ಬೀನ್ಸ್‌ನಲ್ಲಿ ವೈವಿಧ್ಯ ಬೇಕಾ? ಬಣ್ಣಬಣ್ಣದ ಕಾಳು. ವಿವಿಧ ಬಾಳೆಹಣ್ಣು , ಕಿತ್ತಲೆ ಹಣ್ಣು , ಹಲಸಿನ ಹಣ್ಣು, ಮಾವಿನ ಹಣ್ಣು , ಅದೇನು ಸಂತೆ. ತರಕಾರಿ ಆರಿಸಲು ಒಳ್ಳೆಯ ಅನುಭವ ಬೇಕು. ನಾನು ಮತ್ತು ನನ್ನ ತಂಗಿ ಅಷ್ಟು ಇಷ್ಟಪಟ್ಟು ಅಮ್ಮನ ಸೆರಗು ಹಿಡಿದುಕೊಂಡು ಸಂತೆಗೆ ಹೋಗುತ್ತಿದ್ದೆವು.

ಮದುವೆಯಾಗಿ ರಾಯಚೂರಿನ ಮಾನ್ವಿಗೆ ಬಂದ ಮೇಲೆ ಅದೇ ಸಂತೆಗೆ ಹೋಗುವ ಚಟ ಆರಂಭವಾಯಿತು. ಮಾನ್ವಿಯಲ್ಲಿ ಬುಧವಾರ ಸಂತೆ ಇರುತ್ತದೆ. ಇಲ್ಲಿನ ಸಂತೆ ನೋಡಿ ಹೌಹಾರಿದೆ. ಸಂತೆ ಒಂದೇ ಲೈನ್‌! ಅದೇ ಬದನೆಕಾಯಿ, ಮೆಣಸಿನಕಾಯಿ, ಚೌಳೆಕಾಯಿ ಮತ್ತು ಪುಂಡೆಪಲ್ಯ. ತಲೆ ಕೆಟ್ಟು ಹೋಗುತ್ತಿತ್ತು. ಇಲ್ಲಿಯ ಜನಗಳು ಇದನ್ನೇ ತಿನ್ನುವುದರಿಂದ ಅವರಿಗೆ ಇಷ್ಟೇ ಸಾಕು. ಇತ್ತೀಚೆಗೆ ಮಾನ್ವಿಯ ಸಂತೆ ಹಿಗ್ಗಿಕೊಂಡಿದೆ. ವಿವಿಧ ಸೊಪ್ಪು-ಹಣ್ಣು ದೊರೆಯುತ್ತದೆ. ಆದರೂ ಕುಶಾಲನಗರದ ಸಂತೆಯ ಚೆಂದ ಬೇರೆನೇ!

ಮೊನ್ನೆ ಜೂನ್‌ 5ರಂದು ಪರಿಸರ ದಿನ ಆಚರಿಸಿದೆವು. ಕಾಡು ಬೆಳೆಸದಿದ್ದರೂ ಪರವಾಗಿಲ್ಲ , ನಾವು ತಿನ್ನುವ ಹಣ್ಣು , ತರಕಾರಿ, ಹೂವನ್ನು ಸಾಧ್ಯವಾದಷ್ಟು ನಾವೇ ಮನೆ ಸುತ್ತ ಬೆಳೆಸುವುದು ಅತೀ ಅವಶ್ಯ. ಮನೆಬಳಕೆ ಆದ ನಿರುಪಯುಕ್ತ ನೀರನ್ನು ಚರಂಡಿಗೆ ಬಿಡದೆ, ಸುತ್ತಲಿನ ಗಿಡಗಳಿಗೆ ಹರಿಸೋಣ. ಮನೆಯ ಸುತ್ತಲೂ ಪರಿಸರ ಜೀವಂತವಾಗಿಡುವುದು ಒಂದು ಬಗೆಯ ಜೀವನಪ್ರೀತಿಯೇ.

ಎಸ್‌. ಬಿ. ಅನುರಾಧಾ


ಈ ವಿಭಾಗದಿಂದ ಇನ್ನಷ್ಟು

  • ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ...

  • ಸಂಜೆ ಹೊತ್ತಿನಲ್ಲಿ ಆಕಾಶ ನೋಡುತ್ತ ನನಗೆ ನಾನೇ ಕಳೆದು ಹೋಗು ವುದು ನಾನು ಲಾಗಾಯ್ತಿನಿಂದ ರೂಢಿಸಿಕೊಂಡು ಬಂದಂಥ ಪದ್ಧತಿ. ಹಗಲಿಗೆ ಮಂಕು ಕವಿಯುವ ಆ ಹೊತ್ತಿನಲ್ಲಿ...

  • ನಿಜ ಜೀವನದಲ್ಲಿ ನನ್ನನ್ನು ಯಾಮಾರಿಸುವ ನಿನ್ನ ಚಟವನ್ನು ಯಥಾವತ್ತಾಗಿ ಬರಹದಲ್ಲೂ ಭಟ್ಟಿಇಳಿಸುತ್ತಿರುವೆಯಲ್ಲ ಕೆಟ್ಟ ಗಂಡಸೇ... ಅರಬೀ ಕಡಲಿನ ದೊಡ್ಡ ಮೊಸಳೆಯೊಂದು...

  • ಕನ್ನಡದ್ದೆಂದೇ ನಮಗನಿಸುವ ಎಷ್ಟೋ ಶಬ್ದಗಳು ಮೂಲತಃ ನಮ್ಮದಾಗಿರದೆ, ಪರದೇಶಗಳಿಂದ ಹೊರಟು ಸುತ್ತಿ ಬಳಸಿ ಬಂದು, ಪ್ರಾಯಶಃ ಉರ್ದುವಿನ ಮುಖಾಂತರ ಕನ್ನಡಕ್ಕೆ ಸೇರಿದವುಗಳು-...

  • ಹಿರಿಯ ಲೇಖಕಿ ವೈದೇಹಿಯವರ 75ರ ಸಂಭ್ರಮವನ್ನು ಗೌರವಗ್ರಂಥವನ್ನು ಸಮರ್ಪಿಸುವುದರ ಮೂಲಕ ಆಚರಿಸಲಾಗುತ್ತಿದೆ. ಇಂದು ಶಿವಮೊಗ್ಗದಲ್ಲಿ "ಇರುವಂತಿಗೆ' ಗೌರವಗ್ರಂಥ...

ಹೊಸ ಸೇರ್ಪಡೆ