ಹುಡುಗಿಯಾದ ಕಪ್ಪೆ 

ಮ್ಯಾನ್ಮಾರ್‌ ದೇಶದ ಕತೆ

Team Udayavani, Oct 6, 2019, 5:45 AM IST

ಒಂದು ಹಳ್ಳಿಯಲ್ಲಿ ಬಡ ರೈತನೊಬ್ಬ ಹೆಂಡತಿಯೊಂದಿಗೆ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದ. ಅವನಿಗೆ ನೆಮ್ಮದಿಯ ಜೀವನ ಸಾಗಿಸಲು ಬೇಕಾದಷ್ಟು ಬೆಳೆ ಬರುತ್ತಿತ್ತು. ಆದರೆ, ಮಕ್ಕಳಿಲ್ಲವೆಂಬ ಕೊರತೆ ಕಾಡುತ್ತಿತ್ತು. ಕರುಳ ಕುಡಿಯನ್ನು ಪಡೆಯಲು ಅದೆಷ್ಟೋ ಹರಕೆಗಳನ್ನು ಹೊತ್ತ.

ಔಷಧೋಪಚಾರಗಳನ್ನು ಮಾಡಿದ. ಆದರೂ ಫ‌ಲ ಕಾಣಲಿಲ್ಲ. ಒಂದು ದಿನ ಅವನ ಹೆಂಡತಿ ಹಳ್ಳದ ಬದಿಯಲ್ಲಿ ಮರದಲ್ಲಿದ್ದ ಹಲಸಿನ ಹಣ್ಣು ತರಲು ಹೋಗಿದ್ದಳು. ಆ ವೇಳೆ ಬಾಯಾರಿಕೆ ನೀಗಲು ಹಳ್ಳದ ನೀರನ್ನು ಬೊಗಸೆಯಲ್ಲಿ ಎತ್ತಿ ಕುಡಿದಳು. ಆಗ ನೀರಿನ ಜೊತೆಗೆ ಒಂದು ಕಪ್ಪೆಮರಿಯನ್ನು ನುಂಗಿಬಿಟ್ಟಳು. ಪ್ರಮಾದವಾಯಿತೆಂದು ತಿಳಿದು ಅದನ್ನು ಹೊಟ್ಟೆಯಿಂದ ಹೊರಗೆ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಘಟನೆ ನಡೆದ ಬಳಿಕ ಅವಳು ಗರ್ಭಿಣಿಯಾದಳು. ತಾಯಿಯಾಗುವ ತನ್ನ ಬಯಕೆ ಈಡೇರುತ್ತಿರುವುದಕ್ಕೆ ಅವಳಿಗೆ ಸಂತೋಷವಾಯಿತು. ಆದರೆ ನವಮಾಸಗಳು ತುಂಬಿದಾಗ ಅವಳು ಒಂದು ಹೆಣ್ಣುಕಪ್ಪೆಗೆ ಜನ್ಮ ನೀಡಿದಳು.

ರೈತನ ಹೆಂಡತಿ ಕಪ್ಪೆಗೆ ತಾಯಿಯಾಗಿರುವುದಕ್ಕೆ ದುಃಖೀಸಲಿಲ್ಲ. ಗಂಡನನ್ನು ಕರೆದು ಅದನ್ನು ಅವನ ಕೈಯಲ್ಲಿಟ್ಟಳು. “”ಇನ್ನು ಸ್ವಲ್ಪ ಹೊತ್ತಿನಲ್ಲಿ ನನ್ನ ಜೀವ ಹಾರಿಹೋಗುತ್ತದೆ. ನನಗೆ ಜನಿಸಿದ ಇದನ್ನು ಕಪ್ಪೆ ಎಂದು ತಿರಸ್ಕರಿಸದೆ ಮನುಷ್ಯ ಮಗುವೆಂದೇ ತಿಳಿದು ಪ್ರೀತಿಯಿಂದ ಪೋಷಿಸಿ. ಮುಂದೆ ಇದರಿಂದಾಗಿ ನಿಮಗೆ ಅನುಕೂಲವೇ ಆಗಬಹುದು” ಎಂದು ಹೇಳಿದಳು. ಹಾಗೆಯೇ ನಡೆಯುವುದಾಗಿ ರೈತ ಮಾತು ಕೊಟ್ಟ ಮೇಲೆ ಅವಳು ತೀರಿಕೊಂಡಳು. ರೈತನು ಅಸಡ್ಡೆ ಮಾಡದೆ ಕಪ್ಪೆಯನ್ನು ಮಗಳಂತೆಯೇ ಪ್ರೀತಿಯಿಂದ ನೋಡಿಕೊಂಡ. ಅದರ ಪೋಷಣೆಗಾಗಿ ಚಿಮಾನೆ ಎಂಬ ಹೆಂಗಸನ್ನು ಮರುಮದುವೆ ಮಾಡಿಕೊಂಡ. ಅವಳು ಕೂಡ ಆರಂಭದಲ್ಲಿ ಕಪ್ಪೆಯ ಮೇಲೆ ಮಮತೆಯಿರಿಸಿಕೊಂಡಿದ್ದಳು. ಆದರೆ ಅವಳಿಗೆ ಅವಳಿ ಹೆಣ್ಣುಮಕ್ಕಳಾದವು. ಬಳಿಕ ಕಪ್ಪೆಯನ್ನು ಪ್ರೀತಿಸುವ ಬದಲು ತಿರಸ್ಕರಿಸಲಾರಂಭಿಸಿದಳು.

ಹೊಟ್ಟೆಗೂ ಸರಿಯಾಗಿ ಕೊಡದೆ ಏನಾದರೂ ನೆವ ಹೇಳಿ ಶಿಕ್ಷೆಯನ್ನೂ ಕೊಡುತ್ತಿದ್ದಳು. ಚಿಮಾನೆಯ ಹೆಣ್ಣುಮಕ್ಕಳು ಬೆಳೆದು ದೊಡ್ಡವರಾದರು.
ಆ ದೇಶದ ರಾಜನಿಗೆ ನಾಲ್ವರು ಕುಮಾರರಿದ್ದರು. ಅವರಲ್ಲಿ ಕಿರಿಯವನಿಗೆ ಮದುವೆಯಾಗಿರಲಿಲ್ಲ. ಅವನು, ಅರಮನೆಯ ಉದ್ಯಾನದ ಕೊಳಕ್ಕೆ ಬಂದು ಯಾವ ಹುಡುಗಿ ಬಹು ಸುಂದರವಾಗಿ ಕೂದಲು ತೊಳೆದುಕೊಳ್ಳುತ್ತಾಳ್ಳೋ ಅವಳನ್ನು ತಾನು ವಿವಾಹವಾಗುವುದಾಗಿ ಡಂಗುರ ಹೊಡೆಸಿದ. ಇದನ್ನು ಕೇಳಿ ಚಿಮಾನೆಯ ಹೆಣ್ಣುಮಕ್ಕಳು ಅರಮನೆಗೆ ಹೊರಟರು. ಆಗ ಕಪ್ಪೆ ಕೂಡ, “”ನಾನೂ ಕೂಡ ನಿಮ್ಮೊಂದಿಗೆ ಅರಮನೆಗೆ ಬರುತ್ತೇನೆ. ಕರೆದುಕೊಂಡು ಹೋಗಿ” ಎಂದು ಹೇಳಿತು. ಅವರಿಬ್ಬರೂ ಜೋರಾಗಿ ನಕ್ಕರು. “”ಛೀ, ಥೂ, ಅಸಹ್ಯವಾದ ಕಪ್ಪೆಯೇ, ನಾವು ಹೋಗುತ್ತಿರುವುದು ಸ್ಪರ್ಧೆಯಲ್ಲಿ ಗೆದ್ದು ರಾಜಕುಮಾರ ನನ್ನು ಮದುವೆಯಾಗಲು. ನಿನ್ನನ್ನು ಯಾರು ಮದುವೆಯಾಗುತ್ತಾರೆ? ಹೋಗು ಹೋಗು” ಎಂದು ಮೂದಲಿಸಿದರು. ಆದರೆ ಕಪ್ಪೆ ಅವರ ಮಾತು ಕೇಳಲಿಲ್ಲ. ಅವರೊಂದಿಗೆ ಅರಮನೆಯ ಕಡೆಗೆ ಹೋಯಿತು. ಅನೇಕ ಮಂದಿ ಹುಡುಗಿಯರು ಬಂದಿದ್ದರು. ಎಲ್ಲರೂ ಕೊಳದಲ್ಲಿಳಿದು ಸ್ನಾನ ಮಾಡುತ್ತ ಇದ್ದರು.

ಕಪ್ಪೆಯೂ ಕೊಳದ ನೀರಿಗೆ ಇಳಿದು “ವಟರ್‌ ವಟರ್‌’ ಎಂದು ಕೂಗಿತು. ಆಗ ಎಲ್ಲಿಂದಲೋ ಹಲವು ಮಂದಿ ದಾಸಿಯರು ಪ್ರತ್ಯಕ್ಷವಾಗಿ ಕಪ್ಪೆಗೆ ಸ್ನಾನ ಮಾಡಲು ಬೇಕಾದ ಸಾಮಗ್ರಿಗಳನ್ನು ತಂದುಕೊಟ್ಟರು. ಕಪ್ಪೆ ಸ್ನಾನ ಮುಗಿಸಿ ಹೊಸ ಬಟ್ಟೆಗಳನ್ನು ಧರಿಸಿ ಎಲ್ಲ ಹುಡುಗಿಯರ ಸಾಲಿನಲ್ಲಿ ತಾನೂ ಕುಳಿತುಕೊಂಡಿತು. ರಾಜಕುಮಾರ ಎಲ್ಲರನ್ನೂ ನೋಡುತ್ತ ಬಂದ. ಕಡೆಗೆ ದೈವಜ್ಞರನ್ನು ಕರೆದ. “”ಇಲ್ಲಿರುವ ಹುಡುಗಿಯರು ಒಬ್ಬರಿಗಿಂತ ಒಬ್ಬರು ಹೆಚ್ಚು ಸುಂದರವಾಗಿದ್ದಾರೆ. ಯಾರನ್ನು ಆರಿಸುವುದೆಂದೇ ತಿಳಿಯುವುದಿಲ್ಲ” ಎಂದು ಹೇಳಿದ. ದೈವಜ್ಞರು, “”ಅದಕ್ಕೊಂದು ಉಪಾಯವಿದೆ. ಒಂದು ಮಲ್ಲಿಗೆ ಹೂವಿನ ಹಾರವನ್ನು ಎತ್ತಿ ಹಾರಿಸಿಬಿಡು. ಆ ಹಾರ ಹೋಗಿ ಯಾರ ಕುತ್ತಿಗೆಗೆ ಬೀಳುವುದೋ ಅವರನ್ನೇ ಪತ್ನಿಯಾಗಿ ಸ್ವೀಕರಿಸು” ಎಂದು ಹೇಳಿದರು. ರಾಜಕುಮಾರ ಹಾರವನ್ನು ಎಸೆದ. ಅದು ನೇರವಾಗಿ ಹೋಗಿ ಕಪ್ಪೆಯ ಕೊರಳಿಗೆ ಬಿದ್ದಿತು.

ರಾಜಕುಮಾರ ಹೇಳಿದ ಮಾತಿಗೆ ತಪ್ಪಲಿಲ್ಲ. ವಿಧಿ ತನಗೆ ಕಪ್ಪೆಯನ್ನು ಮದುವೆಯಾಗುವ ನಿಯಮ ಮಾಡಿರುವಾಗ ಅದನ್ನು ಮೀರಬಾರದು ಎಂದುಕೊಳ್ಳುತ್ತ ಕಪ್ಪೆಯನ್ನು ಮದುವೆ ಮಾಡಿಕೊಂಡ. ಕೆಲವು ದಿನಗಳು ಕಳೆದವು. ರಾಜನು ತನ್ನ ಕುಮಾರರನ್ನು ಬಳಿಗೆ ಕರೆದ. “”ನನಗೆ ವಯಸ್ಸಾಯಿತು. ರಾಜ್ಯದ ಅಧಿಕಾರವನ್ನು ನಿಮ್ಮಲ್ಲಿ ಯಾರಾದರೂ ಒಬ್ಬರಿಗೆ ಒಪ್ಪಿಸಿ ವಿಶ್ರಾಂತಿ ಪಡೆಯುವ ಇಚ್ಛೆಯಾಗಿದೆ. ಆದರೆ, ನಾನು ಹೇಳುವ ಮೂರು ಕೆಲಸಗಳನ್ನು ಯಾರು ಮಾಡುತ್ತೀರೋ ಅವರಿಗೆ ಮಾತ್ರ ಪಟ್ಟಾಭಿಷೇಕವಾಗುತ್ತದೆ” ಎಂದು ಹೇಳಿದ.

ಎಲ್ಲ ರಾಜಕುಮಾರರೂ, “”ನೀವು ಮಾಡಬೇಕಾದ ಕೆಲಸವನ್ನು ಹೇಳಿ, ನಾವು ಮಾಡುತ್ತೇವೆ” ಎಂದರು. ರಾಜನು, “”ಏಳು ದಿನಗಳೊಳಗಾಗಿ ಬಂಗಾರದ ಜಿಂಕೆಯನ್ನು ಹುಡುಕಿ ತರಬೇಕು” ಎಂದು ಮೊದಲನೆಯ ಕೆಲಸವನ್ನು ಹೇಳಿದ. ಮೂವರು ರಾಜಕುಮಾರರು ಕುದುರೆಯೇರಿಕೊಂಡು ಅಂತಹ ಜಿಂಕೆ ಎಲ್ಲಿದೆಯೆಂದು ಹುಡುಕುತ್ತ ಬೇರೆ ಬೇರೆ ಕಾಡುಗಳತ್ತ ಸಾಗಿದರು. ಕಿರಿಯ ರಾಜಕುಮಾರ ತನ್ನ ಹೆಂಡತಿಯಾಗಿರುವ ಕಪ್ಪೆಯ ಬಳಿಗೆ ಬಂದು ಈ ವಿಷಯವನ್ನು ಹೇಳಿದ. ಕಪ್ಪೆಯು, “”ಏಳು ದಿನಗಳಿವೆ ತಾನೆ? ಸುಮ್ಮನೆ ಊಟ ಮಾಡಿ ನಿಶ್ಚಿಂತೆಯಿಂದ ನಿದ್ರೆ ಮಾಡಿ. ಏಳನೆಯ ದಿನ ಬೆಳಗ್ಗೆ ನಮ್ಮ ಅಶ್ವಶಾಲೆಯ ಬಳಿಗೆ ಹೋಗಿನೋಡಿ” ಎಂದಿತು.

ಏಳನೆಯ ದಿನ ರಾಜಕುಮಾರ ಅಶ್ವಶಾಲೆಯ ಬಳಿಗೆ ಹೋಗಿ ನೋಡಿದಾಗ ತನ್ನ ಕಣ್ಣುಗಳನ್ನೇ ನಂಬದ ಹಾಗಾಯಿತು. ನಿಜವಾಗಿಯೂ ಬಂಗಾರದ ಜಿಂಕೆ ಅಲ್ಲಿ ನಿಂತಿತ್ತು. ಅದನ್ನು ತಂದು ರಾಜನಿಗೆ ತೋರಿಸಿದ. ಉಳಿದ ಮಕ್ಕಳು ಕಾಡುಗಳಲ್ಲಿ ಅಲೆದು ಬರಿಗೈಯಲ್ಲಿ ಮರಳಿದ್ದರು. ಕಿರಿಯ ಮಗ ತನ್ನ ಮಾತನ್ನು ನಡೆಸಿಕೊಟ್ಟ ಎಂದು ರಾಜನಿಗೂ ಸಂತಸವಾಯಿತು. “”ಒಂದು ಕೆಲಸದಲ್ಲಿ ಸೋತೆವೆಂದು ಕಂಗೆಡ ಬೇಡಿ. ಎರಡನೆಯದಾಗಿ ಎಂದಿಗೂ ಹಾಳಾಗದ ಅಕ್ಕಿ ಮತ್ತು ಜೀವವಿರುವ ಮಾಂಸ ಏಳು ದಿನಗಳೊಳಗೆ ಹುಡುಕಿ ತನ್ನಿ” ಎಂದು ಹೇಳಿದ.

ಮೂರು ಮಂದಿ ರಾಜಕುಮಾರರು ರಾಜನ ಕೋರಿಕೆ ನೆರವೇರಿಸಲು ಕುದುರೆಯನ್ನೇರಿಕೊಂಡು ಹೋದರು. ಕಿರಿಯ ರಾಜಕುಮಾರ ಕಪ್ಪೆಯ ಬಳಿಗೆ ಹೋಗಿ ಈ ವಿಷಯವನ್ನು ಹೇಳಿದ. ಅದು, “”ಏಳು ದಿನಗಳಲ್ಲಿ ತಂದರಾಯಿತಲ್ಲವೆ? ಊಟ ಮಾಡಿ ನೆಮ್ಮದಿಯಿಂದ ಮಲಗಿ ಕೊಳ್ಳಿ” ಎಂದು ಹೇಳಿತು. ಏಳನೆಯ ದಿನ ಬೆಳಕು ಹರಿದಾಗ ರಾಜಕುಮಾರ ಒಂದು ಅಚ್ಚರಿಯನ್ನು ನೋಡಿದ. ಅವನ ಮಂಚದ ಬಳಿ ಬುಟ್ಟಿ ತುಂಬ ಎಂದಿಗೂ ಹಾಳಾಗದ ಅಕ್ಕಿ ಇತ್ತು. ಇನ್ನೊಂದು ಬುಟ್ಟಿಯಲ್ಲಿ ಜೀವಂತ ಮಾಂಸ ಇತ್ತು.

ರಾಜಕುಮಾರ ಮಾಂಸ ಮತ್ತು ಅಕ್ಕಿಯನ್ನು ತಂದೆಯ ಬಳಿಗೆ ತೆಗೆದುಕೊಂಡು ಹೋದ. ಅವನ ಅಣ್ಣಂದಿರು ಏನೂ ಸಿಗದೆ ಮರಳಿದ್ದರು. ರಾಜನಿಗೆ ಸಂತೋಷವಾಯಿತು. “”ನನ್ನ ಕಡೆಯ ಬಯಕೆಯೊಂದಿದೆ. ಜಗತ್ತಿನಲ್ಲೇ ಅಪ್ರತಿಮ ಸುಂದರಿಯೆಂದು ನಿಮಗೆ ತೋರಿದ ಹುಡುಗಿಯನ್ನು ಏಳು ದಿನಗಳಲ್ಲಿ ನನ್ನ ಮುಂದೆ ಕರೆತನ್ನಿ. ಇದರಲ್ಲಿ ಗೆದ್ದವರಿಗೆ ಸಿಂಹಾಸನ ದೊರಕುತ್ತದೆ” ಎಂದು ಹೇಳಿದ. ಮೂವರು ರಾಜಕುಮಾರರು ಮತ್ತೆ ದೇಶದೇಶಗಳಲ್ಲಿ ಅಂಥವಳನ್ನು ಹುಡುಕುತ್ತ ಸಾಗಿದರು. ಕಿರಿಯ ರಾಜಕುಮಾರ ಹೆಂಡತಿಯ ಬಳಿಗೆ ಬಂದ. ಇದನ್ನು ಹೇಳಿದ.

“”ಏಳು ದಿನಗಳಿವೆ ತಾನೆ? ಸುಮ್ಮನೆ ಚಿಂತಿಸಬೇಡಿ. ಊಟ ಮಾಡಿ ಮಲಗಿಕೊಳ್ಳಿ” ಎಂದಿತು ಕಪ್ಪೆ. ಏಳು ದಿನಗಳು ಕಳೆದವು. ಯಾವ ಸುಂದರಿಯೂ ಬರಲಿಲ್ಲ. ಆದರೆ ರಾಜಕುಮಾರ, “”ನನಗೆ ಎರಡು ಸಲ ಸಹಾಯ ಮಾಡಿದ ನಿನಗಿಂತ ಸುಂದರಿಯರು ಎಲ್ಲಿಯೂ ಕಾಣಿಸಲು ಸಾಧ್ಯ ವಿಲ್ಲ. ಅಪ್ಪನ ಬಳಿಗೆ ನಿನ್ನನ್ನೇ ಕರೆದುಕೊಂಡು ಹೋಗುತ್ತೇನೆ” ಎಂದು ಕಪ್ಪೆಗೆ ಹೇಳಿದ.

“”ಒಳ್ಳೆಯದು. ನನಗೆ ಜರತಾರಿ ಉಡಿಸಿ, ಚಿನ್ನಾಭರಣಗಳನ್ನು ತೊಡಿಸಿ ಅಲಂಕಾರ ಮಾಡಿ. ರೇಷ್ಮೆಯ ವಸನದಲ್ಲಿ ಮುಚ್ಚಿ ನಿಮ್ಮ ತಂದೆಯ ಬಳಿಗೆ ಕರೆದುಕೊಂಡು ಹೋಗಿ. ನನಗೆ ನನ್ನ ಹೆಂಡತಿಗಿಂತ ಸುಂದರಿ ಈ ಜಗತ್ತಿನಲ್ಲಿ ಬೇರೊಬ್ಬರಿಲ್ಲ ಎಂದು ಹೇಳಿ. ನನ್ನನ್ನು ಮುಚ್ಚಿರುವ ವಸನವನ್ನು ತೆಗೆಯಲು ಅವರಿಗೆ ಹೇಳಿ” ಎಂದಿತು. ರಾಜಕುಮಾರ ಕಪ್ಪೆಯನ್ನು ಸಿಂಗರಿಸಿ ತಂದೆಯ ಬಳಿಗೆ ಕರೆತಂದ. ಅದು ಹೇಳಿದ ಮಾತಿನಂತೆ ಮುಚ್ಚಿದ ವಸನವನ್ನು ತೆಗೆಯಲು ಕೋರಿಕೊಂಡ.

ರಾಜನು ಕಪ್ಪೆಯ ಮಸುಕನ್ನು ತೆಗೆದ ಕೂಡಲೇ ಕಪ್ಪೆಯ ಚರ್ಮ ಹಳೆಯ ಅಂಗಿಯ ಹಾಗೆ ಕೆಳಗೆ ಜಾರಿತು. ಅಲ್ಲಿ ಪರಮ ಸುಂದರಿಯಾದ ಹುಡುಗಿಯೊಬ್ಬಳು ನಿಂತಿದ್ದಳು. ಅವಳು, “”ನಾನು ದೇವಲೋಕದ ಅಪ್ಸರೆ. ವಿಹಾರಕ್ಕಾಗಿ ಭೂಮಿಗೆ ಬಂದಾಗ ಒಂದು ಕೊಳದಲ್ಲಿ ಕಪ್ಪೆಗಳ ರಾಣಿಯನ್ನು ಕಂಡು ಅಸಹ್ಯಪಟ್ಟೆ. ಆಗ ಅದು ನನಗೆ ಕಪ್ಪೆಯಾಗುವಂತೆ ಶಪಿಸಿತು. ನಾನು ಶಾಪ ವಿಮೋಚನೆಗಾಗಿ ಬೇಡಿಕೊಂಡಾಗ ನನಗೆ ಮಾತನಾಡುವ ಸಾಮರ್ಥ್ಯವಲ್ಲದೆ ಮಂತ್ರಶಕ್ತಿಯನ್ನೂ ನೀಡಿತು. ಸುಂದರನಾದ ಯುವಕನೊಬ್ಬನಿಗೆ ಕುರೂಪಿ ಯಾದ ನೀನು ಜಗತ್ತಿನಲ್ಲಿಯೇ ಸುಂದರಿಯೆಂಬ ಭಾವನೆ ಮೂಡಿದಾಗ ಮತ್ತೆ ಮೊದಲಿನಂತಾಗುವೆ ಎಂದು ಹೇಳಿತು. ಈಗ ನನಗೆ ಕಪ್ಪೆ ಜನ್ಮ ನೀಗಿದೆ” ಎಂದು ನಡೆದ ವಿಷಯ ಹೇಳಿದಳು. ರಾಜನು ಕಿರಿಯ ಮಗನಿಗೆ ಪಟ್ಟಾಭಿಷೇಕ ಮಾಡಿದ. ರಾಜಕುಮಾರ ತನ್ನ ಹೆಂಡತಿಯೊಂದಿಗೆ ಸುಖವಾಗಿದ್ದ.

– ಪ. ರಾಮಕೃಷ್ಣ ಶಾಸ್ತ್ರೀ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ