ದ್ವೀಪವಾಸಿಗಳೂ ಮೂಷಿಕ ಸಾಮ್ರಾಜ್ಯಶಾಹಿಗಳೂ

ಲಕ್ಷದ್ವೀಪ ಡೈರಿ

Team Udayavani, Oct 20, 2019, 4:43 AM IST

c-7

ಪಿಂಗಾಣಿ ಬಟ್ಟಲಿನ ರಹಸ್ಯವನ್ನು ಹುಡುಕುತ್ತ ನಾನು ಈ ದ್ವೀಪ ತಲುಪುವುದಕ್ಕಿಂತ ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಅಂದರೆ ಕನ್ನಡ ನಾಡಿನ ಸೂಫಿಸಂತರೊಬ್ಬರು ಹಾಯಿ ಹಡಗನ್ನೇರಿ ಈ ದ್ವೀಪ ತಲುಪಿ ಸುಮಾರು ಮುನ್ನೂರು ವರ್ಷಗಳ ನಂತರ ಇನ್ನೂ ನಿಖರವಾಗಿ ಹೇಳುವುದಾದರೆ ಸಾವಿರದ ಒಂಬೈನೂರ ಎಪ್ಪತ್ತನಾಲ್ಕನೆಯ ಇಸವಿಯಲ್ಲಿ ಕೊಡಗಿನ ತರುಣ ಮೂಷಿಕ ವಿಜ್ಞಾನಿಯೊಬ್ಬರು ಇಲಿ ಪಾಷಾಣದ ರಹಸ್ಯವನ್ನು ಹುಡುಕಿಕೊಂಡು ಇದೇ ಲಕ್ಷದ್ವೀಪಕ್ಕೆ ಬಂದಿದ್ದರು. ಈಗ ಅವರಿಗೆ ಎಂಬತ್ತು ವರ್ಷ ದಾಟಿದೆ. ಕೊಡಗಿನಲ್ಲಿರುವ ಅವರ ಕಾಫೀ ತೋಟದಲ್ಲಿ ಒಬ್ಬರೇ ಬದುಕುತ್ತಿ¨ªಾರೆ. ಜೊತೆಗೆ ಅವರ ತೋಟದ ಕೂಲಿಕಾರರ ಬಡಮಕ್ಕಳು. ಈ ಮಕ್ಕಳು ಅವರ ಪುಟ್ಟ ಬಂಗಲೆಯ ತುಂಬೆಲ್ಲ ಸಣ್ಣಿಲಿ ಚಿಕ್ಕಿಲಿ ಸುಂಡಿಲಿಗಳಂತೆ ಸಣ್ಣಗೆ ಚಿವುಗುಟ್ಟುತ್ತ ಓಡಾಡುತ್ತಿರುತ್ತಾರೆ. ಈ ಮಕ್ಕಳು ಹೀಗೆ ಓಡಾಡದಿದ್ದರೆ ಅವರಿಗೆ ನಿಲ್ಲೇ ಬರುವುದಿಲ್ಲವಂತೆ. ಹಾಗಾಗಿ, ಈ ಮಕ್ಕಳನ್ನು ಮನೆಯೊಳಕ್ಕೆ ಬಿಟ್ಟುಕೊಂಡಿದ್ದಾರೆ. ಇವರು ಒಂದು ತರಹದ ಯುರೋಪಿಯನ್‌ ಹವ್ಯಾಸಗಳ ಮನುಷ್ಯ. ಚುರುಕಾದ ನಗೆ ಚಟಾಕಿಗಳೆಂದರೆ ಇವರಿಗೆ ಬಹಳ ಇಷ್ಟ. ಜೊತೆಗೆ ಸಂಜೆಯ ಹೊತ್ತಿಗೆ ಬಹಳ ಒಳ್ಳೆಯ ಸ್ಕಾಚ್‌ ವಿಸ್ಕಿಯನ್ನು ಸ್ವಲ್ಪವೇ ತೆಗೆದುಕೊಂಡು ಪ್ರಪಂಚದ ಆಗುಹೋಗುಗಳ ಕುರಿತು ಹಾಸ್ಯ ಚಟಾಕಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೆ ಹಂಚಿಕೊಳ್ಳುವಾಗ ಲಘುವಾದ ನಗುವೊಂದು ಅವರ ಮೆದುಳೊಳಗಿಂದ ಹೊರಟು ಸದ್ದಿಲ್ಲದೆ ಉರುಳುತ್ತ ಅವರ ಬಾಯಿಂದ ಹೊರಬಂದು ಸಣ್ಣಗಿನ ಗುಡುಗಿನಂತೆ ಅಲ್ಲೆಲ್ಲ ವ್ಯಾಪಿಸುತ್ತದೆ. ಹತ್ತು ವರ್ಷಗಳ ಹಿಂದೆ ಕೊಡಗಿನಲ್ಲಿರುವಾಗ ಅವರ ತೆಳುಮೊನಚು ಹಾಸ್ಯವನ್ನೂ ಗುಡುಗಿನಂತಹ ನಗುವನ್ನೂ ಆಸ್ವಾದಿಸುವ ಭಾಗ್ಯ ನನ್ನದಾಗಿತ್ತು. ಜೊತೆಗೆ, ಒಮ್ಮೊಮ್ಮೆ ಸ್ಕಾಚ್‌ ವಿಸ್ಕಿಯನ್ನೂ. ಭಾರತದ ಬಲುದೊಡ್ಡ ಮೂಷಿಕ ವಿ ಜ್ಞಾನಿಯಾಗಿದ್ದ ಇವರು ಹೀಗೆ ಕೊಡಗಿನ ಕಾಫಿ ತೋಟದ ಪುಟ್ಟ ಬಂಗಲೆಯಲ್ಲಿ ತುಂಟ ಇಲಿಗಳಂಥ ಬಡಮಕ್ಕಳ ಜೊತೆ ಲಘುವಾಗಿ ಬದುಕುತ್ತಿರುವುದು ನನಗಂತೂ ಖುಷಿಯ ವಿಷಯವಾಗಿತ್ತು. ಆದರೆ, ಅವರು ನಾಲಕ್ಕು ದಶಕಗಳ ಹಿಂದೆ ಇಲಿ ಪಾಷಾಣದ ರಹಸ್ಯ ಹುಡುಕುತ್ತ ಈಗ ನಾನು ಹೊಕ್ಕಿರುವ ಲಕ್ಷದ್ವೀಪದೊಳಕ್ಕೆ ಹೊಕ್ಕು ಬಂದಿದ್ದರು ಎನ್ನುವ ವಿಷಯ ನನಗೆ ಗೊತ್ತಿರಲಿಲ್ಲ.

ಇದು ಸುಮಾರು ನಲವತ್ತೈದು ವರ್ಷಗಳ ಹಿಂದಿನ ಕಥೆ. ಆಗ ಇವರು ಮುಂಬೈನಲ್ಲಿನ ಖ್ಯಾತ ಕೀಟ ನಿಯಂತ್ರಣ ಕಂಪೆನಿಯೊಂದರಲ್ಲಿ ತರುಣ ಮೂಷಿಕ ತಜ್ಞರಾಗಿದ್ದರು. ಅವರ ಕಂಪೆನಿಯ ಪಾಷಾಣಕ್ಕೆ ಇಲಿಗಳು ನಿಧಾನಕ್ಕೆ ಹೊಂದಿಕೊಂಡು ಅವುಗಳ ವಂಶವಾಹಿನಿಯಲ್ಲಿ ಪಾಷಾಣ ನಿರೋಧ ಶಕ್ತಿಯೂ ಬೆಳೆದು ಯಾವ ಪ್ರಮಾಣದ ಪಾಷಾಣಕ್ಕೂ ಕ್ಯಾರೇ ಅನ್ನದ ಮೂಷಿಕ ತಳಿಯೊಂದು ತಮ್ಮ ವಂಶವನ್ನು ವರ್ಧಿಸಿಕೊಳ್ಳುತ್ತಿತ್ತು. ಆಗ ಆ ತಳಿಯನ್ನೂ ನಿರ್ವಂಶ ಮಾಡಬಲ್ಲ ಹೊಸ ಬಗೆಯ ಪಾಷಾಣವನ್ನು ಕಂಪೆನಿ ಆವಿಷ್ಕರಿಸಬೇಕಿತ್ತು. ಈ ಗುರುತರ ಹೊಣೆ ಆಗ ತರುಣರಾಗಿದ್ದ ಈ ತರುಣ ಮೂಷಿಕ ವಿಜ್ಞಾನಿಯ ಹೊಣೆಯಾಗಿತ್ತು. ಆದರೆ, ಆಗ ಅವರು ಇನ್ನೂ ಅಂತಹ ಹೇಳಿಕೊಳ್ಳುವ ವಿಜ್ಞಾನಿಯಾಗಿ ಹೊರಹೊಮ್ಮಿರಲಿಲ್ಲ. ಆದರೆ, ನಾನು ಈಗ ಬದುಕುತ್ತಿರುವ ಲಕ್ಷದ್ವೀಪದ ಸಹವಾಸದಿಂದಾಗಿ ಅವರು ಪಾಷಾಣ ನಿರೋಧ ಶಕ್ತಿಯನ್ನು ಬೆಳೆಸಿಕೊಂಡು ಅನೂಹ್ಯವೇಗದಲ್ಲಿ ತನ್ನ ಸಂತಾನವನ್ನು ಬೆಳೆಸಿಕೊಳ್ಳುತ್ತಿದ್ದ ಮೂಷಕ ಸಂತಾನವೊಂದನ್ನು ಹತ್ತಿರದಿಂದ ಕಾಣುವಂತಾಯಿತು. ಆ ಇಲಿ ಸಂತಾನದ ಮೇಲೆ ಹೆಚ್ಚಿನ ಶೋಧನೆಯನ್ನು ನಡೆಸಿ ಅದನ್ನು ನಿರ್ವಂಶ ಮಾಡಬಲ್ಲ ಹೊಸಬಗೆಯ ಪಾಷಾಣವನ್ನು ಕಂಡು ಹಿಡಿದು ಒಳ್ಳೆಯ ಹೆಸರನ್ನೂ ಪಡೆದುಕೊಂಡರು. ಇದೇ ಸಾಧನೆಯಿಂದ ಅವರು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಸಲಹಗಾರರೂ ಆದರು. “ಇದಕ್ಕೆಲ್ಲ ಕಾರಣ ಈಗ ನೀನು ತಲೆಮರೆಸಿಕೊಂಡು ಓಡಾಡುತ್ತಿರುವ ಲಕ್ಷದ್ವೀಪ’ ಎಂದು ಅವರು ಮೊನ್ನೆ ಹಾಸ್ಯಚಟಾಕಿಯೊಂದನ್ನು ಹಾರಿಸಿ ಗುಡುಗುಡು ನಗುತ್ತ ಹೇಳಿದ್ದರು, ಎಂಬತ್ತು ದಾಟಿದ್ದರೂ ಹಾಗೇ ಇರುವ ಕಂಚಿನ ಕಂಠದ ಗುಡುಗುಡು ಮತ್ತು ತುಂಟನಗು! ಅವರ ಪ್ರಕಾರ ಅರಬೀಕಡಲಿನ ಈ ಅಪಾರ ಜಲರಾಶಿಯ ನಡುವೆ ಹರಡಿಕೊಂಡಿರುವ ಈ ದ್ವೀಪ ಕನ್ನಿಕೆಯರ ಸೆರಗಮರೆಯಲ್ಲಿ ನಾನು ತಲೆತಪ್ಪಿಸಿಕೊಂಡು ಓಡಾಡಿಕೊಂಡಿರುವುದು ಮೂಡಲ ಸೀಮೆಯ ಮೋಹಿನಿಯೊಬ್ಬಳ ಪ್ರೇಮಪ್ರಹಾರಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯಂತೆ ! “ಹೇ, ಹಾಗೇನೂ ಇಲ್ಲ. ನಾ ಇಲ್ಲಿ ಬಂದಿರುವುದು ಪಿಂಗಾಣಿ ಬಟ್ಟಲೊಂದರ ಮೂಲ ಹುಡುಕಿಕೊಂಡು’ ಎಂದರೆ ಅವರು ಗಹಗಹಿಸಿ ನಗುತ್ತಾರೆ. “ಪಿಂಗಾಣಿ ಬಟ್ಟಲೂ ಅಲ್ಲ , ಮಣ್ಣಾಂಗಟ್ಟಿಯೂ ಇಲ್ಲ. ನಿನ್ನ ಪ್ರಣಯದ ಕಥೆಗಳು ನನಗೆ ಗೊತ್ತಿಲ್ಲವಾ’ ಎಂದು ಮತ್ತೆ ಜೋಕು ಹಾರಿಸುತ್ತಾರೆ. ನನಗೆ ಸಂಕಟವೂ ನಗುವೂ ಬರುತ್ತದೆ.

ಬದುಕಿನಲ್ಲಿ ಇವೆಲ್ಲ ಇದ್ದದ್ದೇ ಬಿಡಿ. ಈಗ ನಾವು ಲಕ್ಷದ್ವೀಪ ಮತ್ತು ಇಲಿ ಪಾಷಾಣದ ಕುರಿತು ಮಾತನಾಡುವಾ. ಮೇಲೆ ಹೇಳಿದ ಮೂಷಿಕ ವಿಜ್ಞಾನಿಗಳು ಮುಂಬೈಯ ಇಲಿ ಪಾಷಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ತಮ್ಮ ಸಂಸ್ಥೆಯ ಕಲ್ಲಿಕೋಟೆಯಲ್ಲಿರುವ ವಿಷದ ಉಗ್ರಾಣದಿಂದ ಮೂಟೆಗಟ್ಟಲೆ ಇಲಿಪಾಷಾಣ ಲಕ್ಷದ್ವೀಪಕ್ಕೆ ರವಾನೆಯಾಗುತ್ತಿರುವ ಅಂಕಿಸಂಖ್ಯೆಗಳು ಗೊತ್ತಾಗುತ್ತದೆ. ಇಡೀ ದೇಶದ ಒಟ್ಟು ಮಾರಾಟದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಷಾಣ ಮಂಜಿಹಡಗುಗಳ ಮೂಲಕ ಕೇರಳದ ಕಲ್ಲಿಕೋಟೆಯ ಬೇಪೂರು ಬಂದರಿನಿಂದ ಈ ದ್ವೀಪಗಳಿಗೆ ರವಾನೆಯಾಗುತ್ತಿದೆ. ಎಷ್ಟು ಪೂರೈಸಿದರೂ ಸಾಕಾಗದ ದ್ವೀಪವಾಸಿಗಳ ಪಾಷಾಣದ ಬೇಡಿಕೆ. ಇದರಲ್ಲೇನೋ ಮರ್ಮವಿರಬೇಕೆಂದು ಅವರು ಇದುವರೆಗೂ ಹೆಸರೇ ಕೇಳಿರದ ಈ ರಹಸ್ಯ ದ್ವೀಪಗಳಿಗೆ ತಲುಪಲು ತಯಾರಾಗುತ್ತಾರೆ. ಹೊರಟು ಕಲ್ಲಿಕೋಟೆಯ ಬಂದರು ತಲುಪಿದರೆ ಅವರಿಗೆ ಅಲ್ಲಿಂದ ದ್ವೀಪಗಳನ್ನು ತಲುಪುವ ಅನುಮತಿ ಸಿಗುವುದಿಲ್ಲ. ಕಾಡಿದರೂ ಬೇಡಿದರೂ ಸಿಗದ ಸರಕಾರೀ ಅನುಮತಿ! ಕೊನೆಗೆ ಅವರೊಂದು ಉಪಾಯ ಮಾಡುತ್ತಾರೆ. ಯಾವ ಪಾಷಾಣಕ್ಕೂ ಮರುಳಾಗದ ಇಲಿಗಳನ್ನು ನಿರ್ನಾಮ ಮಾಡುವ ಮೂಷಿಕ ಬೇಟೆಯ ವಿದ್ಯೆ ತಮ್ಮಲ್ಲಿದೆಯೆಂದೂ ತನಗೊಂದು ಅವಕಾಶ ಕೊಟ್ಟರೆ ದ್ವೀಪವಾಸಿಗಳ ಇಲಿ ಕೋಟಲೆಯನ್ನು ಶಾಶ್ವತವಾಗಿ ಪರಿಹರಿಸುವೆನೆಂದು ದ್ವೀಪಾಡಳಿತದ ಕೃಷಿ ಇಲಾಖೆಯ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆಯುತ್ತಾರೆ. ತಿಂಗಳಾನುಗಟ್ಟಲೆ ಕಾದ ಮೇಲೆ ಅನುಮತಿಯೂ ಸಿಗುತ್ತದೆ. ಅವರು ಬೇಪೂರು ಬಂದರಿನಿಂದ ಪ್ರಯಾಣಿಕರ ಪುಟ್ಟ ಹಡಗೊಂದನ್ನು ಹತ್ತಿ ದ್ವೀಪವೊಂದರಲ್ಲಿ ಇಳಿದು ಅಲ್ಲಿಂದ ಇನ್ನೊಂದು ದೋಣಿ ಹತ್ತಿ ಸುಮಾರು ನಲವತ್ತೈದು ವರ್ಷಗಳ ಹಿಂದೆ ನಾನಿರುವ ಈ ದ್ವೀಪವನ್ನು ತಲುಪುತ್ತಾರೆ. ಕಡಲ ನಡುವಿನ ಈ ದ್ವೀಪಗಳ ಕುರಿತಾದ ರಮ್ಯಕಥೆಗಳನ್ನು ತಲೆಯೊಳಗೆ ತುಂಬಿಕೊಂಡು ಇಲ್ಲಿ ವಾಸಿಸುತ್ತಿರಬಹುದಾದ ಅಪೂರ್ವ ಸುಂದರಿಯರನ್ನೂ ಸದೃಢ ಗಂಡಸರನ್ನೂ ಊಹಿಸಿಕೊಂಡು ದೋಣಿಯಿಳಿದು ಬಂದ ಅವರಿಗೆ ಇಲ್ಲಿನ ಬಡಕಲು ಹೆಂಗಸರನ್ನೂ ಜೋಲುಮುಖದ ಗಂಡಸರನ್ನೂ ಕಂಡು ಅಪಾರ ನಿರಾಶೆಯಾಗುತ್ತದೆ.

ಆಕಾಶದುದ್ದಕ್ಕೆ ತಮ್ಮ ಗರಿಗಳನ್ನು ಹಬ್ಬಿಸಿಕೊಂಡು ನಿಂತಿರುವ ಕಲ್ಪವೃಕ್ಷ ಸಮೂಹ. ಒಂದೊಂದು ಮರದ ಅಡಿಯಲ್ಲೂ ಮೂಷಿಕಗಳು ಕೊರೆದು ಬಿಸಾಡಿದ ತೆಂಗಿನ ಎಳೆಯ ಕಂದುಗಾಯಿಗಳು. ಮರದ ಒಂದೊಂದು ಗೊನೆಗಳ ನಡುವೆಯೂ ವಂಶಪಾರಂಪರ್ಯವಾಗಿ ಸಂತಾನೋತ್ಪತ್ತಿ ಮಾಡಿಕೊಂಡು ಸಾಮ್ರಾಜ್ಯ ಸ್ಥಾಪಿಸಿಕೊಂಡಿರುವ ಹಲವು ಬಗೆಯ ಮೂಷಿಕ ವಂಶಗಳು. ದ್ವೀಪವಾಸಿಗಳ ಅನೂಹ್ಯ ಸಂಕಟಕ್ಕೂ, ಹಸಿವಿಗೂ ಕಾರಣವಾಗಿರುವ ಮೂಷಿಕಗಳು ಯಾವುದೇ ಅಪರಾಧೀ ಪ್ರಜ್ಞೆಯಿಲ್ಲದೆ ಜನರ ಕಾಲನಡುವೆಯೇ ಚಿವುಗುಟ್ಟುತ್ತ ಓಡಾಡುತ್ತಿವೆ. ತೆಂಗಿನ ಬುಡದಲ್ಲಿ ಮುಂಬೈಯ ತಮ್ಮ ಸಂಸ್ಥೆಯಲ್ಲಿ ತಯಾರಿಸಿದ ಪಾಷಾಣದ ಖಾಲಿ ಖಾಲಿ ಪ್ಯಾಕೆಟ್ಟುಗಳು ನಿರುಪಯೋಗಿ ಆಟಂ ಬಾಂಬುಗಳ ಕವಚಗಳಂತೆ ಹಲ್ಲುಗಿಂಜಿಕೊಂಡು ಬಿದ್ದಿವೆ. ದ್ವೀಪದ ಜನರು ಪಾಷಾಣದ ನಿರರ್ಥಕತೆಯನ್ನು ಮನಗಂಡರೂ ಬೇರೇನೂ ದಾರಿ ಗೊತ್ತಿಲ್ಲದೆ ಮತ್ತೆ ಮತ್ತೆ ಅದೇ ಪ್ರಯೋಗವನ್ನು ಮಾಡುತ್ತಿದ್ದಾರೆ. ಅಕ್ಕಿ, ತೆಂಗಿನಕಾಯಿ, ಬೆಲ್ಲ ಅರೆದು, ರೊಟ್ಟಿ ತಟ್ಟಿ “ಇಲಿ ಅಪ್ಪಂ’ ಎಂಬ ಹೊಸ ಭಕ್ಷ್ಯವನ್ನು ತಯಾರಿಸಿ, ಅದರಲ್ಲಿ ಜೇನಿನಂತೆ ಪಾಷಾಣವನ್ನು ಬೆರೆಸಿ ಮೂಷಿಕ ಪರಮಾತ್ಮನಿಗೆ ಅರ್ಪಿಸುತ್ತಿದ್ದಾರೆ. ಅದನ್ನು ಪ್ರಸಾದವೆಂಬಂತೆ ಸ್ವೀಕರಿಸಿದ ಆ ಇಲಿ ದೇವತೆಗಳು ಮತ್ತಷ್ಟು ದಷ್ಟಪುಷ್ಟವಾಗಿ ಬೆಳೆದು ತಮ್ಮ ಹಾವಳಿಯನ್ನು ಮುಂದುವರಿಸಿವೆ. ಈ ದ್ವೀಪದಲ್ಲಿ ಆ ಕಾಲದಲ್ಲಿ ಜನರಿಗೆ ಅನ್ನದ ಮಾರ್ಗವನ್ನು ತೋರಿಸುತ್ತಿದ್ದುದು ತೆಂಗಿನ ಮರಗಳು ಮಾತ್ರ. ಅದರಿಂದ ಎಣ್ಣೆ ತಯಾರಿಸಿ ಮಾರಬೇಕು. ಅದರಿಂದ ಬಸಿದ ನೀರಾದಿಂದಲೇ ಸಕ್ಕರೆಯನ್ನು ತಯಾರಿಸಿ ಮಾರಬೇಕು. ಅದರಿಂದಲೇ ನಾರಿನ ಹಗ್ಗ ತಯಾರಿಸಿ ಮಂಜಿಹಡಗುಗಳಲ್ಲಿ ಕೇರಳದ, ಮಂಗಳೂರಿನ ಬಂದರುಗಳಿಗೆ ಸಾಗಿಸಿ ಅಲ್ಲಿಂದ ಅಕ್ಕಿ, ಮಾಂಸ, ತರಕಾರಿ, ಸೋಪು, ಬಟ್ಟೆ ಇತ್ಯಾದಿಗಳನ್ನು ತರಬೇಕು. ಈ ಮೂಷಿಕ ಸಮೂಹ ಎಳೆಯ ತೆಂಗಿನ ಕಂದುಗಾಯಿಗಳಿಗೆ ಕನ್ನ ಕೊರೆದು ಇವರ ಬದುಕನ್ನೇ ಬರ್ಬಾದು ಮಾಡುತ್ತಿತ್ತು. ಯಾವ ಹಾಲಾಹಲ ಇಲಿಪಾಷಾಣಗಳಿಗೂ ಜಗ್ಗದ ಮೂಷಿಕ ಸಮೂಹಕ್ಕೆ ಸಡ್ಡು ಹೊಡೆಯಲು ದ್ವೀಪದ ಜನರು ಇದೀಗ ಹೊಸದೊಂದು ವಾರಾಂತ್ಯದ ಜನಾಂದೋಲನವನ್ನು ಹುಟ್ಟು ಹಾಕಿದ್ದಾರೆ. ಅದೇನೆಂದರೆ, ತೆಂಗಿನ ಮರವನ್ನು ಚುರುಕಾಗಿ ಹತ್ತಬಲ್ಲವನೊಬ್ಬ ಸರಸರ ಮೇಲೆ ಹತ್ತಿ, ತೆಂಗಿನ ತಲೆ ತಲುಪಿ ಅಲ್ಲಿಂದಲೇ ಮರವನ್ನು ಜೋರಾಗಿ ಕುಲುಕಬೇಕು. ಹಾಗೆ ಕುಲುಕಿದಾಗ‌ ಆದ ಅಲುಗಾಟಕ್ಕೆ ತತ್ತರಿಸುವ ಇಲಿ ಸಾಮ್ರಾಜ್ಯಶಾಹಿಗಳು ತಮ್ಮ ಐಷಾರಾಮೀ ಗೂಡುಗಳಿಂದ ತತ್ತರಿಸಿ ಕೆಳಕ್ಕೆ ಉದುರಿ ನೆಲದಲ್ಲೆಲ್ಲ ದಿಕ್ಕಾಪಾಲಾಗಿ ಓಡಾಡಬೇಕು. ಆಗ ಕೆಳಗೆ ನಿಂತಿರುವ ಜನಸಮೂಹ ಅವುಗಳನ್ನು ಅಟ್ಟಿ ಹೊಡೆದು ಓಡಿಸುತ್ತ ಬಡಿದು ಕೊಲ್ಲಬೇಕು. ಸಂಜೆಯ ಹೊತ್ತಿಗೆ ದ್ವೀಪದ ಕಲ್ಪವೃಕ್ಷ ತೋಪುಗಳ ಕೆಳಗೆ ಸಾವಿರಾರು ಮೂಷಿಕ ಮೃತದೇಹಗಳ ರಾಶಿಗಳನ್ನು ಕಂಡ ದ್ವೀಪವಾಸಿಗಳು ವಿಜಯೋತ್ಸವವನ್ನು ಆಚರಿಸಬೇಕು. ಈ ಮೂಷಿಕ ಬೇಟೆಗೆ “ಎಲಿ ನಾಯಾಟು’ ಎಂದು ಕರೆಯುತ್ತಿದ್ದರಂತೆ. ಆದರೆ, ಅವರ ಅರಿವಿಗೆ ಬಾರದೆ ಮರದಲ್ಲೇ ಉಳಿದುಕೊಂಡ ಕೆಲವು ಇಲಿಗಳು ಮತ್ತೆ ಸಂತಾನೋತ್ಪತ್ತಿ ನಡೆಸಿ ಮರಿಗಳನ್ನು ಹಾಕಿ ತಾವೂ ವಿಜಯದ ಕೇಕೆ ಹಾಕುತ್ತಿದ್ದರಂತೆ.

ನಾಲ್ಕೂವರೆ ದಶಕಗಳ ಹಿಂದೆ ಇಂತಹದ್ದೇ ಒಂದು ಹಗಲು ಆಗ ತರುಣರಾಗಿದ್ದ ಈ ಮೂಷಿಕ ವಿಜ್ಞಾನಿಗೆ ಪಾಷಾಣ ರಹಸ್ಯವನ್ನು ಅರಿಯಲು ದೋಣಿ ಇಳಿದು ತಲುಪಿದಾಗ ಇಲ್ಲಿನ ದ್ವೀಪವಾಸಿಗಳು ಇಂತಹದೊಂದು “ಎಲಿನಾಯಾಟು’ ಬೇಟೆಯನ್ನು ಮುಗಿಸಿ ಹೈರಾಣಾಗಿ ಕುಳಿತ್ತಿದ್ದರಂತೆ. ಕೆಲವು ಕಾಲ ಇಂತಹದೇ ಹಲವು ಸಮುದ್ರ ಪ್ರಯಾಣಗಳ ನಡುವೆ ಹಲವು ವಿಷಮಿಶ್ರಣಗಳ ಪ್ರಯೋಗದ ನಂತರ ನಮ್ಮ ತರುಣ ವಿಜ್ಞಾನಿಗೆ ಫ್ರಾನ್ಸಿನಿಂದ ತರಿಸಿದ ವಿಶೇಷ ಪಾಷಾಣವೊಂದನ್ನು ರಹಸ್ಯ ಪ್ರಮಾಣದಲ್ಲಿ ಬಳಸಿ ಹೊಸತಾದ ಇಲಿ ವಿಷವೊಂದನ್ನು ಈ ದ್ವೀಪವಾಸಿಗಳಿಗೆ ಅರ್ಪಿಸಿದರಂತೆ.

“ಈಗ ನಿಮ್ಮ ದ್ವೀಪದ ಇಲಿಗಳು ಹೇಗಿವೆ?’ ಎಂದು ನಲವತ್ತೈದು ವರ್ಷಗಳ ನಂತರ ಅವರು ನನ್ನನ್ನು ವಿಚಾರಿಸುತ್ತಿದ್ದರು. “ಅದಾಗಲೇ ಚೂಪುಮುಖದ ಹಲವು ಚುರುಕು ಇಲಿಗಳು ತೆಂಗಿನ ಮರವನ್ನು ಏರುವುದನ್ನೂ ಇಳಿಯುವುದನ್ನೂ ಕಂಡಿದ್ದ ನಾನು ಅವುಗಳೂ ಸುಖವಾಗಿವೆ. ಜನರೂ ಸುಖವಾಗಿದ್ದಾರೆ. ಈಗ ಸರಕಾರವು ಇವರಿಗೆ ಹಲವು ಬಗೆಯ ಸೌಕರ್ಯಗಳನ್ನೂ, ಸರಕಾರೀ ಉದ್ಯೋಗಗಳನ್ನೂ ನೀಡಿರುವುದರಿಂದ ಅವರು ತೆಂಗಿನಮರಗಳ ಹಂಗನ್ನು ಬಿಟ್ಟಿರುವರು. ತೆಂಗು ಹತ್ತುವವವರೂ ತಮ್ಮ ಆ ಉದ್ಯೋಗವನ್ನು ತೊರೆದು ಮೀನು ಹಿಡಿಯಲು ತೊಡಗಿರುವರು. ನಾರಿನ ಉದ್ಯಮವೂ ಇಲ್ಲ, ನೀರಾ ಇಳಿಸುವ ಸುಖವೂ ಇಲ್ಲ. ಹಾಗಾಗಿ, ಮೂಷಿಕ ಸಾಮ್ರಾಜ್ಯಶಾಹಿಗಳು ಕಲ್ಪವೃಕ್ಷಗಳ ತುದಿಯ ಲೀಲಾ ವಿನೋದಗಳಲ್ಲಿ ಮುಳುಗಿ ಒಂದು ರೀತಿಯ ವಿಸ್ಮತಿಯಲ್ಲಿ ಕಳೆದುಹೋಗಿವೆ’ ಎಂದು ನಾನು ಉತ್ತರಿಸಿದೆ. ಅವರು ಗುಡುಗುಡು ನಕ್ಕರು. “ಅಲ್ಲಾ ಮಾರಾಯ, ಅಲ್ಲಿ ಸ್ಕಾಚೂ ಇಲ್ಲ, ಮೂಡಲ ಸೀಮೆಯ ಮೋಹಿನಿಯರೂ ಇಲ್ಲ. ಏನೂ ಇಲ್ಲದೆ ಸುಮ್ಮನಿರುವ ಆಸಾಮಿಯೂ ನೀನಲ್ಲ. ನಿನ್ನ ಈ ದ್ವೀಪವಾಸದ ಹಿಂದೆ ಇರುವುದು ಕೇವಲ ಪಿಂಗಾಣಿ ಬಟ್ಟಲಿನ ರಹಸ್ಯ ಛೇದನವೂ ಇರಲಿಕ್ಕಿಲ್ಲ. ಹೇಳು, ನಿನ್ನ ಅಲ್ಲಿನ ಏಕಾಂತ ವಾಸದ ರಹಸ್ಯವೇನು?’ ಎಂದು ಗಹಗಹಿಸುತ್ತಿದ್ದರು.

ಮುಂಗಾರು ಮಳೆಯ ನಂತರದ ಕೊಡಗಿನ ಎಳೆ ಬಿಸಿಲು. ಮುಖಕ್ಕೆ ರಾಚುವ ಸ್ನಿಗ್ಧ ಹಸಿರು, ಒಳಗಡೆಯಿಂದ ಕೇಳಿಸುವ ಆಳು ಮಕ್ಕಳ ಕೇಕೆ, ಸಣ್ಣಗೆ ಅವರ ಮೆದುಳನ್ನೂ ನಗೆಯನ್ನೂ ಆವರಿಸುತ್ತಿರುವ ಸ್ಕಾಚಿನ ಹಿತವಾದ ಅಮಲು. ಇಲ್ಲಿ ಒಂಟಿಯಾಗಿರುವ ನಾನು ಅವರಿಗೆ ಏನೆಂದು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ.

ಇದೀಗ ಇಲ್ಲಿ ಪಡುವಣದಲ್ಲಿ ಇದೇ ಮೊದಲ ಸಲವೇನೋ ಎಂಬಂತೆ ಲಗೂನಿನ ಹೊನ್ನಿನ ಬಣ್ಣದ ನೀರೊಳಕ್ಕೆ ಇಳಿಯುತ್ತಿರುವ ಲಕ್ಷ ಶತಕೋಟಿ ತಾರಾವರ್ಷಗಳಷ್ಟು ವಯಸ್ಸಾದ ಸೂರ್ಯನೆಂಬ ರೇತಸ್ಸು ತುಂಬಿದ ಗಂಡಸು. ಈ ಎಲ್ಲ ಅಂಡ ಬ್ರಹ್ಮಾಂಡ ವಿಶ್ವ ವ್ಯಾಪಾರಗಳ ನಡುವೆ ಏನೆಂದು ಅರಿವಾಗದೆ ಸೈಕಲ್ಲು ಓಡಿಸುತ್ತಿರುವ ನಾನು. ಯಾಕೋ ಕಣ್ಣು ತುಂಬುತ್ತಿತ್ತು. ಮೂಷಿಕ ವಿಜ್ಞಾನಿಗಳಿಗೆ ಏನೆಂದು ಉತ್ತರಿಸಲಿ ಗೊತ್ತಾಗಲಿಲ್ಲ. “ಗುರುಗಳೇ, ನಾನು ಈ ದ್ವೀಪದಲ್ಲಿ ಅಜ್ಞಾತವಾಸಿಯಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಹಲವು ನನಗೂ ಗೊತ್ತಿಲ್ಲ. ಇರಿ, ಮನೆಯಿಂದ ಉಮ್ಮನ ಫೋನು ಬರುತ್ತಿದೆ’ ಎಂದು ಹೇಳಿ ಊರಿಂದ ಉಮ್ಮನ ಕರೆಗಾಗಿ ಕಾಯತೊಡಗಿದೆ.

ನಾನು ಕನ್ನಡದಲ್ಲಿ ಬರೆಯುತ್ತಿರುವ ಖುರಾನು ಕಲಿಸುವ ಮಹಾನುಭಾವರ ಕಥಾಪ್ರಸಂಗಗಳನ್ನು ಯಾರಿಂದಲೋ ಓದಿಸಿ ಕೇಳಿಸಿಕೊಂಡಿದ್ದ ಉಮ್ಮಾ ಅದರಲ್ಲಿ ಬರುವ ಕೆಲವು ಸಂಗತಿಗಳ ನಿಖರತೆಯ ಕುರಿತು ನನ್ನಲ್ಲಿ ಮಾತನಾಡಬೇಕು ಎಂದು ಹಲವು ದಿನಗಳಿಂದ ಕಾಯುತ್ತಿದ್ದಳು. ಈ ನಡುವೆ ಸಂಚರಿಸಿದ ಹಡಗಿನಲ್ಲಿ ನನ್ನ ಮೊಬೈಲನ್ನೂ ಕಳೆದುಕೊಂಡಿದ್ದೆ. ಯಾರಿಗೂ ಗೊತ್ತಿಲ್ಲದ ನನ್ನ ಈ ನೂತನ ದೂರವಾಣಿ ಸಂಖ್ಯೆಯನ್ನು ಅವಳು ಹೇಗೆ ಪತ್ತೆ ಹಚ್ಚಿದಳು ಎಂಬುದನ್ನು ಕೇಳುವ ಕುತೂಹಲ ನನಗೂ ಇತ್ತು.

ಅಬ್ದುಲ್‌ ರಶೀದ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.