Udayavni Special

ಕಾಲಾಘೋಡ ಉತ್ಸವ

Team Udayavani, Feb 16, 2020, 5:26 AM IST

rav-6

ಮುಂಬಯಿಯ ಕಾಲಾಘೋಡ ಉತ್ಸವವು ಈಗಷ್ಟೇ ಮುಗಿಯಿತು. ಪ್ರತಿ ಫೆಬ್ರವರಿ ಎರಡನೆಯ ವಾರದಲ್ಲಿ ಜರಗುವ ಈ ಕಲಾ ಉತ್ಸವವು ಕಳೆದ ಇಪ್ಪತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಎಂಟು ದಿನಗಳ ಹಬ್ಬದ ಈ ಸಲದ ಮೂಲತತ್ವ “ದಾರ’. ಅಂದರೆ, ವಸ್ತ್ರದ ನೇಯ್ಗೆಯ ನೂಲಿನಿಂದ ಹಿಡಿದು, ಸಂಬಂಧಗಳ ಬೆಸುಗೆಯ ಹಗ್ಗ, ಭೂತ-ಭವಿಷ್ಯಗಳ ಜೋಡಣೆಯ ತಂತು, ನಗರ ಬದುಕಿನೊಂದಿಗೆ ವೈಯುಕ್ತಿಕ ನೆನಪುಗಳ ಹೆಣಿಗೆ, ಅನೇಕತೆಯ ಸಂಸ್ಕೃತಿಯೊಳಗಿನ ಕೊಂಡಿಗಳು, ಹೀಗೆ ದಾರವನ್ನು ಉಪಯೋಗಿಸಿ ಸಂಯೋಜಿಸಿದ ಸುಮಾರು ಮೂವತ್ತಕ್ಕೂ ಮಿಕ್ಕಿ ಹೊರಾಂಗಣ ಕಲಾರಚನೆಗಳು ರಸ್ತೆಯುದ್ದಕ್ಕೂ ನಿಂತಿದ್ದವು.

ಮುಂಬಯಿಯಲ್ಲಿ ಉತ್ಸವಗಳಿಗೆ ಕೊರತೆಯಿಲ್ಲ. ಮನೆಯ ಹತ್ತಿರ ಮೌಂಟ್‌ ಮೇರಿಯ ಉತ್ಸವ, ಸ್ವಲ್ಪವೇ ದೂರದ ಮಾಹಿಮ್‌ನಲ್ಲಿ ನಡೆಯುವ ಜುಲೂಸ್‌, ನಗರದ ಮೂಲೆಮೂಲೆಗಳಲ್ಲೂ ಹನ್ನೊಂದು ದಿವಸಗಳ ತನಕ ಅವ್ಯಾಹತವಾಗಿ ನಡೆಯುವ ಅತ್ಯಂತ ವೈಭವದ ಗಣಪತಿ ಹಬ್ಬ. ಜಾತ್ರೆಗಳಿಗೆ ಜಾಗವಿಲ್ಲದ ಮುಂಬಯಿಯಲ್ಲಿ, ರಸ್ತೆಗಳಲ್ಲೇ ಭರ್ಜರಿಯಾದ ಈ ಉತ್ಸವಗಳು ಜರಗುತ್ತವೆ. ಮುಂಬಯಿಯ ದಕ್ಷ ಪೊಲೀಸ್‌ ಪಡೆಯ ಕಟ್ಟುನಿಟ್ಟಿನ ವ್ಯವಸ್ಥೆಯಲ್ಲವಾದರೆ ದಿನಗಟ್ಟಲೆ ನಡೆಯುವ ಈ ಉತ್ಸವಗಳಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುವುದರಲ್ಲಿ ಸಂಶಯವಿರಲ್ಲ. ಹಾಗೆ ತೊಂದರೆ ಇಲ್ಲವೇ ಇಲ್ಲ ಎನ್ನುವ ಹಾಗೂ ಇಲ್ಲ. ಆದರೆ, ಮುಂಬಯಿಗರಿಗೆ, “ಜನರು ಖುಷಿಪಡುತ್ತಾರಲ್ಲ, ಒಂದು ವಾರ ಸಹಿಸಿದರಾಯ್ತು’ ಎಂಬ ಸುಧಾರಿಸಿಕೊಂಡು ಹೋಗುವ ಮನೋಭಾವ.

ಈ ಉತ್ಸವಗಳ ಮಧ್ಯ, ಜಾತಿ-ಮತಗಳಿಗೆ ಸಂಬಂಧಿಸಿರದ, ಎಲ್ಲ ರೀತಿಯ ಅಭಿರುಚಿಗಳಿರುವ ಸಾರ್ವಜನಿಕರಿಗೆ ಸಲ್ಲುವ ಹಲವು ನಗರೋತ್ಸವಗಳೂ ಜರಗುತ್ತಿದ್ದು, ಅವುಗಳಲ್ಲಿ ಅಖೀಲ ಮುಂಬಯಿಯ ಮಟ್ಟದ್ದು ಎನ್ನಬಹುದಾದ ಉತ್ಸವವೆಂದರೆ ಕಾಲಾಘೋಡ ಕಲಾ ಉತ್ಸವ. ಏನುಂಟು-ಏನಿಲ್ಲವೆನ್ನುವ ಹಾಗಿನ ಈ ಉತ್ಸವದಲ್ಲಿ ಬಳೆ, ಸರ, ಉಡುಪುಗಳಿಂದ ಕುಶಲಕೈಗಾರಿಕೆಯ ವಸ್ತುಗಳವರೆಗಿನ ಕಲಾತ್ಮಕ ಸರಕುಗಳ ಸಂತೆ, ಬಗೆಬಗೆಯ ತಿಂಡಿತಿನಸು ಪಾನೀಯಗಳ ಸ್ಟಾಲುಗಳು, ವಿವಿಧೆಡೆ ಏಕಕಾಲದಲ್ಲಿ ಜರಗುವ ಚಿತ್ರಕಲೆ, ನಾಟ್ಯ, ನಾಟಕ, ಸಂಗೀತ, ಸಿನೆಮಾ, ಪುಸ್ತಕ ಪ್ರದರ್ಶನ, ಸಾಹಿತ್ಯಿಕ ಸಂವಾದಗಳು. ಇನ್ನು, ಯಾರು ಯಾವುದರಲ್ಲೂ ಭಾಗವಹಿಸಬಹುದಾದ ಉಚಿತ ಪ್ರವೇಶವಿರುವ, ಈ ಕಾರ್ಯಕ್ರಮಗಳಿಗೆ ಉತ್ಸಾಹದಿಂದ ಮುತ್ತಿಗೆ ಬೀಳುವ ಮುಂಬಯಿಯ ಕಲಾರಸಿಕರು. ರಂಗುರಂಗಾಗಿರುವ ಈ ಉತ್ಸವಕ್ಕೆ ಕಾಲಾಘೋಡದ ಅರ್ಧ ಚಂದ್ರಾಕೃತಿಯ ವಿಶಾಲ ಪರಿಸರವು ಬಹಳ ಸಮರ್ಪಕವಾದ ಜಾಗ. ಈ ಜಾಗದ ಹೆಸರಿನ ಕತೆಯೂ ಸ್ವಾರಸ್ಯಕರ.

ಕಾಲಾಘೋಡ ಇತಿಹಾಸ
ಈಗ ಒಂದೂವರೆ ಶತಮಾನದ ಕೆಳಗೆ ಬ್ರಿಟಿಷ್‌ ದೊರೆ ಏಳನೆಯ ಎಡ್ವರ್ಡನ (ಆಗ ಪ್ರಿನ್ಸ್‌ ಆಫ್ ವೇಲ್ಸ್‌) ಭಾರತ ಭೇಟಿಯ ಸಮಯ ಕುದುರೆಸವಾರಿ ಮಾಡುತ್ತಿರುವ ಆತನ ಕಂಚಿನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದ್ದರು. ಅರಸನಿಗಿಂತ ಕುದುರೆಗೇ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿತೇನೋ ಎನ್ನುವಂತೆ, ಸುತ್ತುಮುತ್ತಿನ ಅಷ್ಟೂ ವಿಸ್ತೀರ್ಣವನ್ನು ಜನ ಕಾಲಾಘೋಡ ಎಂದು ಕರೆಯತೊಡಗಿದ್ದರು. ಸ್ವಾತಂತ್ರ್ಯಾನಂತರ ಆ ಪ್ರತಿಮೆಯನ್ನು ಕಿತ್ತುಹಾಕಿದ್ದರೂ ಸ್ಥಳದ ಹೆಸರು ಹಾಗೆಯೇ ಉಳಿದಿತ್ತು. ಇದಾಗಿ ಐವತ್ತು ವರ್ಷಗಳ ನಂತರ ಇತ್ತೀಚೆಗೆ ಅದೇ ಮಾದರಿಯ ಸವಾರನಿಲ್ಲದ ಕುದುರೆಯನ್ನು ಹೊಸದಾಗಿ ನಿರ್ಮಿಸಿ ಮೊದಲಿನ ಸ್ಥಳದಲ್ಲೇ ಇಡಲಾಯಿತು. ಈ ನಡುವೆ ಈ ಕಪ್ಪುಕುದುರೆಯ ಬಗ್ಗೆ ಅನೇಕ ಕುತೂಹಲಕಾರಿ ಐತಿಹ್ಯಗಳೂ, ಜಾನಪದ ಕತೆಗಳೂ ಹುಟ್ಟಿಕೊಂಡಿರುವುದು ಬೇರೆ ವಿಷಯ. ಕಾಲಾಘೋಡದ ಸುತ್ತುಮುತ್ತ ಮುಂಬಯಿಯ ಸಾಂಸ್ಕೃತಿಕ ಸಂಪತ್ತಿನ ರಾಶಿಯೇ ಹರಡಿ ಕೊಂಡಿದೆ-ಬದಿಯಲ್ಲೇ ಭಾರತೀಯ ಚಿತ್ರಕಲೆಯ ಸಂಕೇತದಂತಿರುವ ಜಹಾಂಗೀರ್‌ ಆರ್ಟ್‌ ಗ್ಯಾಲರಿ, ಅಲ್ಲೇ ಹೊರಗೆ ಹೊಸ ಕಲಾವಿದರ ಆರ್ಟ್‌ ಪ್ಲಾಝಾ, ಅತ್ತ ಭಾರತದ ಇತಿಹಾಸ, ಕಲೆಗಳನ್ನು ಪ್ರತಿನಿಧಿಸುವ ವಸ್ತುಸಂಗ್ರಹಾಲಯ, ರಸ್ತೆಯಾಚೆ ಆಧುನಿಕ ಚಿತ್ರಕಲೆಯನ್ನು ಪ್ರದರ್ಶಿಸುವ ಮೋಡರ್ನ್ ಆರ್ಟ್‌ ಗ್ಯಾಲರಿ, ಕಣ್ಣು ಹಾಯಿಸಿದಲ್ಲೆಲ್ಲ ಚಿತ್ರಕಲಾ ಮಾರಾಟಗಾರರ ಆರ್ಟ್‌ ಸ್ಟುಡಿಯೋಗಳು, ಅನತಿ ದೂರದಲ್ಲಿ ಪ್ರತಿಷ್ಠಿತ ನ್ಯಾಷನಲ್‌ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್. ಉಳಿದ ದಿನಗಳಲ್ಲಿ ವಾಹನದ ದಟ್ಟಣೆ ಇರುವ ದುಬಾಶ್‌ ಮಾರ್ಗದ ಸುತ್ತಮುತ್ತ ಎಂಟು ದಿನಗಳ ಮಟ್ಟಿಗೆ ವಾಹನಗಳ ಕರಕರಿಯಿಲ್ಲ. ಬದಲು, ರಸ್ತೆ ತುಂಬ ತುಂಬಿತುಳುಕುವ ಜನದಟ್ಟಣೆ.

ಉತ್ಸವಗಳಿಲ್ಲದೆಯೂ ವಾಹನಗಳಿಗೆ ಕಡಿವಾಣ ಹಾಕುವ ಮುಕ್ತ ರಸ್ತೆಯ ಕಲ್ಪನೆಯೂ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ರಸ್ತೆಯನ್ನು ಕೆಲವು ಗಂಟೆಗಳ ಮಟ್ಟಿಗೋ, ಇಡೀ ದಿನಕ್ಕೋ ವಾಹನರಹಿತವಾಗಿ ಇರಿಸುವುದನ್ನು ಪ್ಯಾರಿಸಿನಲ್ಲಿ ಪ್ಯಾರಿಸ್‌ ರೆಸೈರ್‌ ಎನ್ನುತ್ತಾರಂತೆ. ಈಗ ನಾಲ್ಕು ವರ್ಷಗಳಿಂದ ಮುಂಬಯಿಯಲ್ಲೂ ಹೀಗೆ ರಸ್ತೆಗಳನ್ನು ಉಸಿರಾಡಲು ಬಿಡುವ ಕ್ರಮ ಸುರುವಾಗಿದೆ. ಬೀದಿಬದಿಯ ವ್ಯಾಪಾರಿಗಳಿಂದಲೂ, ದುಬಾರಿ ಬೆಲೆಯ ಅಂಗಡಿಗಳಿಂದಲೂ ತುಂಬಿರುವ, ಗಿರಾಕಿಗಳ ಸ್ವರ್ಗವೆಂದೇ ಪರಿಗಣಿಸಲ್ಪಡುವ ಮೂರು ಕಿ.ಮೀ. ನಷ್ಟು ಉದ್ದದ ಬಾಂದ್ರದ ಲಿಂಕಿಂಗ್‌ ರಸ್ತೆಯು ಪ್ರತಿ ರವಿವಾರದಂದು ಈಕ್ವಲ್‌ ಸ್ಟ್ರೀಟ್‌ ಅಂದರೆ, ಎಲ್ಲರೂ ಸಮನಾಗಿ ಹಂಚಿಕೊಂಡು ಅಡ್ಡಾಡುವ ಸ್ಥಳವಾಗಿ ಪರಿವರ್ತಿತವಾಗುತ್ತಿದೆ. ಕ್ರಿಕೆಟ್‌, ಫ‌ುಟ್ಬಾಲ್‌, ಬ್ಯಾಡ್‌ಮಿಂಟನ್‌, ಸೈಕಲ್‌ ಸವಾರಿ, ಸ್ಕೇಟಿಂಗ್‌, ನೃತ್ಯ, ಗಾಯನ, ಚಿತ್ರಕಲೆ- ಎಂದು ಮಕ್ಕಳೂ ದೊಡ್ಡವರೂ ರಸ್ತೆತುಂಬ ಓಡಾಡಿಕೊಂಡಿರುವುದನ್ನು ನೋಡುವುದೇ ಒಂದು ಗಮ್ಮತ್ತು.

ಎರಡು ವರ್ಷಗಳಿಗೊಮ್ಮೆ ನವೆಂಬರ್‌ ತಿಂಗಳಲ್ಲಿ ನಡೆಯುವ ಸೆಲೆಬ್ರೇಟ್‌ ಬಾಂದ್ರಾವೂ ಕಾಲಾಘೋಡದ ಉತ್ಸವಕ್ಕೇನೂ ಬಿಟ್ಟುಕೊಡುವುದಿಲ್ಲ. ಬಾಂದ್ರದುದ್ದಕ್ಕೂ ವಾರಕಾಲ ರಸ್ತೆಗಳಲ್ಲಿ, ಕಡಲತಡಿಯಲ್ಲಿ, ಬ್ಯಾಂಡ್‌ ಸ್ಟಾಂಡಿನಲ್ಲಿ, ಪಾರ್ಕುಗಳಲ್ಲಿ, ಮೌಂಟ್‌ ಮೇರಿಯ ಗುಡ್ಡದ ಮೆಟ್ಟಿಲುಗಳ ಮೇಲೆ- ಎಲ್ಲೆಂದರಲ್ಲಿ ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಜಾನಪದಗಳ ಬೆಡಗು. ಸೂರ್ಯೋದಯದ ಹೊತ್ತಿಗೆ ಸೀಲಿಂಕಿನ ಹೂತೋಟದಲ್ಲಿ ಅಹೀರ್‌ ಭೈರವಿಯ ಆಲಾಪನೆ ಕೇಳಿದರೆ, ಕತ್ತಲಾಗುವಾಗ ಕಡಲತಡಿಯ ದಿಬ್ಬದಲ್ಲಿ ಕೋಳಿ ಜನಾಂಗದ ಉತ್ಸಾಹಭರಿತ ಸಮೂಹ ನೃತ್ಯದ ಸೊಗಸು.

ಧಾರ್ಮಿಕ ಉತ್ಸವಗಳಲ್ಲಿ ದೇವರ ಉತ್ಸವಮೂರ್ತಿಗೆ ಸಂದುವ ವೈಭವದಲ್ಲಿ ಜನರು ಪಾಲುಗೊಂಡರೆ, ಈ ನಗರೋತ್ಸವಗಳಲ್ಲಿ ನಗರದೊಂದಿಗೆ ಪ್ರಜೆಗಳಿಗಿರುವ ಗಾಢ ಸಂಬಂಧವೇ ಉತ್ಸವಮೂರ್ತಿ. ನಗರದ ಚೇತೋಹಾರಿ ಸಾಮೂಹಿಕ ಪ್ರಜ್ಞೆೆಯ ಒಂದಂಶವು ಈ ಸಾಂಸ್ಕೃತಿಕ, ಸಾಹಿತ್ಯಿಕ, ಕಲಾತ್ಮಕ ಅಭಿವ್ಯಕ್ತಿಗಳ ಸಂಭ್ರಮದಲ್ಲಿ ಪ್ರಕಟಗೊಳ್ಳುತ್ತದೆ. ಇಂತಹ ಕಲಾ ಉತ್ಸವಗಳು ಜನರನ್ನು ಹತ್ತಿರ ತರುತ್ತವೆ. ನಿತ್ಯಜೀವನದ ಸಾಮಾನ್ಯತೆಗೆ ವೈವಿಧ್ಯತೆಯ ರಂಗು ಹಚ್ಚಿ, ಜನರ ಅಭಿರುಚಿಗಳನ್ನು ಕೆರಳಿಸಿ, ಬಾಳಿನ ನಿರೀಕ್ಷೆಗಳಿಗೆ ಅವಕಾಶ ಕಲ್ಪಿಸಿ, ಬದುಕಿಗೆ ಹುಮ್ಮಸ್ಸು ತುಂಬಿಸುತ್ತವೆ.

ಇತ್ತೀಚೆಗೆ ಅಗಲಿದ ಆತ್ಮೀಯ ಗೆಳತಿ ತುಳಸಿ ವೇಣುಗೋಪಾಲ್‌ ಕೆಲವು ವರ್ಷಗಳ ಕೆಳಗೆ ಕಾಲಾಘೋಡದ ಕವಿಗೋಷ್ಠಿಯಲ್ಲಿ ಓದಿದ ಕವನವು ಮನಸ್ಸಿನಲ್ಲಿ ಇನ್ನೂ ಅನುರಣಿಸುತ್ತಿದೆ:

ಸರಳ ಲಂಬ ವಕ್ರ ರೇಖೆಗಳಲ್ಲಿ
ಬಚ್ಚಿಟ್ಟುಕೊಂಡ ಕುದುರೆ
ಬಣ್ಣಗಳಲ್ಲಿ ಜೀವ ಧರಿಸಿ ಸ್ವತ್ಛಂದ….
(ಮುಂದಿನ ಸಂಚಿಕೆಯಲ್ಲಿ ಅಂಕಣ ಮುಕ್ತಾಯ)

ಮಿತ್ರಾ ವೆಂಕಟ್ರಾಜ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ