ನಾಮಪುರಾಣ

Team Udayavani, Sep 8, 2019, 5:30 AM IST

ಹೆಸರಿನಲ್ಲೇನಿದೆ?’ ಅಂದಿದ್ದನಂತೆ ಶೇಕ್ಸ್‌ಪಿಯರ್‌.
ಶೇಕ್ಸ್‌ಪಿಯರ್‌ ಹಾಗೇಕೆ ಅಂದಿದ್ದನೋ! ಆದರೆ ವ್ಯಕ್ತಿಯದ್ದಾಗಲಿ, ಶಹರಗಳದ್ದಾಗಲಿ ಹೆಸರೆಂಬುದು ಒಂದು ಐಡೆಂಟಿಟಿಯಾಗುವಷ್ಟು ಬೆಳೆದುಬಂದಿರುವುದು ಸುಳ್ಳಲ್ಲ. “ವ್ಯಕ್ತಿಯೊಬ್ಬನು ವೈಯಕ್ತಿಕವಾಗಿ ಕೇಳಲು ಬಹಳ ಇಷ್ಟಪಡುವ ಶಬ್ದವೆಂದರೆ ಅದು ತನ್ನ ಹೆಸರು’ ಎನ್ನುತ್ತಾರೆ ಮನೋವಿಜ್ಞಾನಿಗಳು. ನೆಪೋಲಿಯನ್‌ನಿಂದ ಹಿಡಿದು ಕೆನಡಿಯವರಂಥ ದಿಗ್ಗಜರಿಗೂ ಇಂಥ ಸೂಕ್ಷ್ಮಸತ್ಯಗಳ ಅರಿವಿತ್ತು ಮತ್ತು ಅವರ ಯಶಸ್ಸಿನ ಹಿಂದಿನ ಹಲವು ಕಾರಣಗಳಲ್ಲಿ ಇದೂ ಎಂದು ಎನ್ನುವ ಅಭಿಪ್ರಾಯಗಳಿವೆ. ಮುಖಪುಟದ ಮುಖ್ಯಸುದ್ದಿಗೆ ನೀಡಲಾಗುವ ತಲೆಬರಹದ ಮಹತ್ವವು ಪತ್ರಿಕೋದ್ಯಮದಲ್ಲಿರುವವರಿಗೆ ಮಾತ್ರ ಗೊತ್ತು. ಹೀಗಾಗಿ ಇಲ್ಲಿ ತಮಾಷೆ, ಕೊಂಕು, ಗಾಂಭೀರ್ಯಾದಿ ಭಾವಗಳೆಲ್ಲವನ್ನೂ ಬುದ್ಧಿವಂತಿಕೆಯಿಂದ ಬೆರೆಸಿ ಶೀರ್ಷಿಕೆಯ ಪಾಕವನ್ನು ಸಿದ್ಧಪಡಿಸಲಾಗುತ್ತದೆ. ಹೀಗೆ ನಿಜನಾಮಗಳಿದ್ದರೂ ಅಡ್ಡನಾಮಗಳು ಆಪ್ತವೆನಿಸುವಂತೆ ನಾಮಧೇಯಗಳು ಮೇಲ್ನೋಟಕ್ಕೆ ಗುರುತಿಗಷ್ಟೇ ಬಳಸಲಾಗುವ ಹಣೆಪಟ್ಟಿಯಂತೆ ಕಂಡರೂ ಅವುಗಳ ಹಿಂದಿರುವ ಜಗತ್ತು ಬಲುದೊಡ್ಡದು.

ನಮ್ಮ ರಾಷ್ಟ್ರರಾಜಧಾನಿಯಾಗಿರುವ ದೆಹಲಿಯು ಮಹಾಕವಿ ಮಿರ್ಜಾ ಗಾಲಿಬನಿಗೆ ದಿಲ್ಲಿಯಾಗಿತ್ತು. ಹಿಂದೂಸ್ತಾನದ ಹೃದಯವೆಂಬಂತಹ ಅರ್ಥದಲ್ಲಿ ಕಾವ್ಯಮಯವಾಗಿ ಹೆಚ್ಚು ಬಳಸಲಾದ ಹೆಸರಿದು. ಬ್ರಿಟಿಷರ ಕಾಲದಲ್ಲಿ ಶಹರವು ಡೆಲ್ಲಿ ಅಥವಾ ಡೆಲಿ ಎಂಬ ಹೆಸರಿನಿಂದಲೇ ಹೆಚ್ಚು ಕರೆಯಲ್ಪಡುತ್ತ ಜನಪ್ರಿಯವಾಯಿತು. ದೆಹಲಿ ಎಂಬ ಹೆಸರಿನ ಹಿಂದಿರುವುದು ದೆಹಲೀಝ್ ಎಂಬ ಪದ. ದೆಹಲೀಝ್ ಎಂಬ ಹಿಂದುಸ್ತಾನಿಯ ಈ ಕಾವ್ಯಮಯ ಪದಕ್ಕೆ ಹೊಸ್ತಿಲು ಎಂಬ ಸುಂದರ ಅರ್ಥವಿದೆ. ಇಂಡೋ-ಗ್ಯಾಂಗೆಟಿಕ್‌ ಬಯಲುಪ್ರದೇಶಕ್ಕಿರುವ ಹೊಸ್ತಿಲಿನಂತೆ ದಿಲ್ಲಿಯನ್ನು ಕರೆದ ಪರಿಯಿದು.

ಶಹರದ ಶತನಾಮಾವಳಿ
ಮಹಾಭಾರತದ ಇಂದ್ರಪ್ರಸ್ಥದಿಂದ ಹಿಡಿದು ಇಂದಿನವರೆಗೂ ಈ ಶಹರವು ಹಲವು ನಾಮಧೇಯಗಳನ್ನು ಪಡೆಯುತ್ತಲೇ ಬಂದಿದೆ. ಮೊಹಮ್ಮದ್‌ ತುಘಲಕ್‌ನ ಕಾಲದ ದಾಖಲೆಗಳಲ್ಲಿ ಶಹರಕ್ಕೆ ಧಿಲ್ಲಿಕಾ ಎಂಬ ಹೆಸರಿದ್ದರೆ ಮತ್ತು ಬಲ್ಬನ್ನನ ಕಾಲದಲ್ಲಿ ಇದು ಧಿಲ್ಲಿ ಆಗಿತ್ತು. ದಿಲ್ಲಿಯನ್ನು ದಿಲ್ಲೀಪುರ್‌ ಎಂದೂ ಕರೆಯಲಾಗುತ್ತಿತ್ತು ಎಂಬ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗುತ್ತವೆ. ಇನ್ನು ದಿಲ್ಲಿಯ ಹೆಸರಿನ ಬಗೆಗಿರುವ ಪುರಾಣ ಮತ್ತು ದಂತಕಥೆಗಳತ್ತ ಬಂದರೆ ತಮಾಷೆಯಾಗಿ ಕಾಣುವ ಮತ್ತೂಂದು ಪದವೆಂದರೆ ಢೀಲೀ. ಇಂದಿಗೂ ಹಿಂದಿಯಲ್ಲಿ ಢೀಲೀ ಎಂದರೆ “ಸಡಿಲ’ ಎಂಬ ಅರ್ಥವಿದೆ. ಶತಮಾನಗಳಿಂದ ತುಕ್ಕುಹಿಡಿಯದೆ ಅಚ್ಚರಿಯೆಂಬಂತಿರುವ ದಿಲ್ಲಿಯ ಐತಿಹಾಸಿಕ ಕಬ್ಬಿಣದ ಕಂಬದ ಕಥೆಯು ತೋಮರ್‌ ರಾಜವಂಶದ ಅನಂಗಪಾಲನೆಂಬ ಸಾಮ್ರಾಟನ ಹೆಸರಿನೊಂದಿಗೆ ಇಲ್ಲಿ ತಳುಕುಹಾಕಿಕೊಂಡಿದೆ. ಇದರ ಪ್ರಕಾರ ಸಡಿಲ ಅಡಿಪಾಯದ ಮೇಲೆ ನಿಂತಿರುವ ಈ ಕಂಬದ ಕಥೆಯೊಂದಿಗೆ ಅನಂಗಪಾಲನ ಸಾಮ್ರಾಜ್ಯ ವಿಸ್ತರಣೆಯ ಮಹಾತ್ವಾಕಾಂಕ್ಷೆಗಳೂ ಬೆರೆತು ಢೀಲೀ ಪದವು ಉಳಿದುಕೊಂಡಿತಂತೆ.

ಇತಿಹಾಸವನ್ನು ಕೊಂಚ ಪಕ್ಕಕ್ಕಿಟ್ಟು ಆಧುನಿಕ ಯುಗಕ್ಕೆ ಬಂದರೆ ದೆಹಲಿಯು ರಾಷ್ಟ್ರರಾಜಧಾನಿಯಾಗಿ ಶರವೇಗದಲ್ಲಿ ಬೆಳೆಯುತ್ತಲೇ ಸಾಗಿದ ತರುವಾಯ ಸಿಕ್ಕ ಹೊಸ ಹೆಸರು ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ (ಎನ್‌ಸಿಆರ್‌). ಆದರೆ, ಇಂದು ಎನ್‌ಸಿಆರ್‌ ಎಂಬುದು ಭೌಗೋಳಿಕವಾಗಿ ದಿಲ್ಲಿಗಷ್ಟೇ ಮೀಸಲಲ್ಲ. ಕೊಂಚ ಉತ್ತರಪ್ರದೇಶ ಮತ್ತು ಒಂದಷ್ಟು ಹರಿಯಾಣವೂ ಕೂಡ ಈ ಪುಟ್ಟ ವ್ಯಾಪ್ತಿಗೆ ಸೇರಿಕೊಂಡಿವೆ. ಎನ್‌ಸಿಆರ್‌ ತೆಕ್ಕೆಗೆ ಬರುವ ಉತ್ತರಪ್ರದೇಶದ ಪಾಲಿನ ನೋಯ್ಡಾ, ಗ್ರೇಟರ್‌ ನೋಯ್ಡಾಗಳು ಇಂದು ಶರವೇಗದಲ್ಲಿ ಬೆಳೆಯುತ್ತಿವೆ. ಹರಿಯಾಣಾದ ಗುರುಗ್ರಾಮವು ಈಗಾಗಲೇ “ಮಿಲೇನಿಯಮ್‌ ಸಿಟಿ’ ಎಂದೂ, “ಭಾರತದ ಶಾಂNç’ ಎಂದೂ ಬಹುಪರಾಕು ಹಾಕಿಸಿಕೊಳ್ಳುವಷ್ಟು ದೈತ್ಯವಾಗಿ ಬೆಳೆದಿದೆ. ಇಂದು ಎನ್‌ಸಿಆರ್‌ ಎಂದರೆ ನಗರೀಕರಣವು ತಲುಪಬಹುದಾದ ಅತ್ಯದ್ಭುತ ಮಟ್ಟಕ್ಕೊಂದು ನಿದರ್ಶನ. ಸಂಪತ್ತಿನ ವಿಚಾರಕ್ಕೆ ಬಂದರೆ ಇಲ್ಲಿಯ ಮಣ್ಣಿನಲ್ಲಿ ಮುಟ್ಟಿದ್ದೆಲ್ಲ ಚಿನ್ನ.

ಹೆಸರಿನ ಖದರ್ರು
ಹೆಸರಿನ ವಿಚಾರದಲ್ಲಿ ದಿಲ್ಲಿಗಿರುವಷ್ಟು ವೈವಿಧ್ಯವು ಇನ್ನೆಲ್ಲೂ ಇರುವುದು ಕಷ್ಟವೇನೋ. ಉದಾಹರಣೆಗೆ ಚಂಡೀಗಢವು ಭಾರತ ಸೃಷ್ಟಿಸಿದ ಮೊದಲ ವ್ಯವಸ್ಥಿತ ಶಹರವಾಗಿರಬಹುದು. ಅಸಲಿಗೆ ಚಂಡೀಗಢವನ್ನು ಕೇಕ್‌ ಒಂದನ್ನು ಕತ್ತರಿಸುವಂತೆ ವ್ಯವಸ್ಥಿತವಾಗಿ ತುಂಡರಿಸಿ ಸೆಕ್ಟರ್‌ಗಳನ್ನಾಗಿ ವಿಭಜಿಸಲಾಗಿದೆ. ಆದರೆ, ಶಹರದ ಭಾಗವೊಂದನ್ನು ಸಂಖ್ಯೆಯ ಜೊತೆಗಿರುವ ಸೆಕ್ಟರ್‌ ನೊಂದಿಗೆ ಕರೆಯುವುದು ಹೆಸರೆಂಬ ಐಡೆಂಟಿಟಿಯನ್ನು ಕಳೆದುಕೊಂಡಿರುವ ಖೈದಿಯ ಸಂಖ್ಯೆಯನ್ನು ಕರೆದಷ್ಟೇ ನೀರಸ. ಹರಿಯಾಣಾದ ಗುರುಗ್ರಾಮದಲ್ಲೂ ಬಹುತೇಕ ಇದೇ ಕಥೆ. ದಿಲ್ಲಿ ವಿಭಿನ್ನವಾಗಿ ನಿಲ್ಲುವುದು ಈ ವಿಚಾರದಲ್ಲೇ.

ರೋಹಿಣಿ, ಮಾಲವೀಯ ನಗರ, ಪೀತಂಪುರ, ಸಾಕೇತ್‌, ಇಂದ್ರಪ್ರಸ್ಥ, ಚಾಂದನೀ ಚೌಕ್‌, ದರಿಯಾ ಗಂಜ್‌, ಚಾಣಕ್ಯಪುರಿ, ಪ್ರಗತಿ ಮೈದಾನ್‌, ಝಂಡೇವಾಲಾ, ವೈಶಾಲಿ, ದ್ವಾರಕಾ, ಶಾಲಿಮಾರ್‌ ಬಾಗ್‌, ತುಘಲಕಾಬಾದ್‌, ಮುನಿಕಾರ್‌, ಕಶ್ಮೀರಿ ಗೇಟ್‌… ಒಂದೇ ಎರಡೇ ! ದೆಹಲಿಯಂತಹ ಅಪರೂಪದ ಶಹರದ ಬಹುತೇಕ ಎಲ್ಲಾ ಭಾಗಗಳಿಗೂ ಇಂಥ ಮುದ್ದಾದ ನಾಮಧೇಯಗಳಿದ್ದು ಹೆಸರಿನಲ್ಲೇ ಜೀವಂತಿಕೆಯು ಎದ್ದು ಕಾಣುವಂತಿದೆ. ಪ್ರತಿಯೊಂದು ಹೆಸರಿನ ಹಿಂದೆಯೂ ತರಹೇವಾರಿ ಹಿನ್ನೆಲೆ. ಐಐಟಿ, ಏಮ್ಸ್‌ಗಳಂಥ ದಿಲ್ಲಿಯ ಭಾಗಗಳು ಆಧುನಿಕ ಯುಗದ ಮೈಲುಗಲ್ಲುಗಳಿಂದ ತಮ್ಮ ಹೆಸರುಗಳನ್ನು ಪಡೆದಿದ್ದರೆ ತುಘಲಕಾಬಾದ್‌, ಸಾಕೇತ್‌ಗಳಂಥ ಸ್ಥಳಗಳಿಗೆ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳ ಸ್ವಾರಸ್ಯಕರ ಹಿನ್ನೆಲೆಯ ಅದೃಷ್ಟ.

ಕತೆ-ಕತೆ ಕಾರಣ
ಚಿರಾಗ್‌ ದಿಲ್ಲಿ ಎಂಬ ಭಾಗದ ಹೆಸರಿನ ಹಿಂದಿರುವುದು ಸಂತ ನಿಜಾಮುದ್ದೀನ್‌ ಔಲಿಯಾರ ಪವಾಡ. ಚಿರಾಗ್‌ ಎಂದರೆ ದೀಪ. ಇಲ್ಲಿ ಔಲಿಯಾರು ಎಣ್ಣೆಯ ಬದಲು ನೀರಿನಿಂದಲೇ ದೀಪವನ್ನು ಬೆಳಗಿದ್ದರು ಎಂಬ ಮಾತಿದೆ. ಇಂದ್ರಪ್ರಸ್ಥ ಹೆಸರಿಗೆ ಮಹಾಭಾರತದ ಹಿನ್ನೆಲೆಯಿದೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮದನಮೋಹನ ಮಾಲವೀಯರ ಹೆಸರು ಮಾಲವೀಯ ನಗರ್‌ ಆಗಿದ್ದರೆ, ಮತ್ತೋರ್ವ ಸ್ವಾತಂತ್ರ್ಯ ಸೇನಾನಿಯಾಗಿದ್ದ ಲಾಲಾ ಲಜಪತರಾಯ್‌ರವರ ಹೆಸರು ಲಾಜಪತ್‌ ನಗರ್‌ ಆಗಿಬಿಟ್ಟಿದೆ. ದಿಲ್ಲಿಯ ದರಿಯಾ ಗಂಜ್‌ ಹೆಸರಿನ ಹಿಂದಿರುವುದು ಯಮುನೆ. ದರಿಯಾ ಎಂದರೆ ನದಿ. ಇನ್ನು ನ್ಯಾಯ-ಅನ್ಯಾಯಗಳು ಚರ್ಚೆಯಾಗುತ್ತಿದ್ದ “ಚಾವಡಿ’ಯ ಹೆಸರು ಚಾವಡಿ ಬಜಾರ್‌ ಆಗಿದೆಯಂತೆ. “ಚವನ್ನಿ’ (ನಾಲ್ಕಾಣೆ) ಎಂಬ ಪದವೂ ಕೂಡ ಮುಂದೆ “ಚಾವಡಿ’ಯಾಗಿರಬಹುದು ಎಂಬ ವಾದಗಳೂ ಇಲ್ಲಿವೆ.

ಸಾಮಾನ್ಯವಾಗಿ ಧರಣಿ-ಸತ್ಯಾಗ್ರಹಗಳಿಂದಲೇ ಹೆಚ್ಚು ಸುದ್ದಿ ಮಾಡುವ ದಿಲ್ಲಿಯ ಜಂತರ್‌-ಮಂತರ್‌ ಪ್ರದೇಶದ ಹೆಸರಿನ ಮೂಲಪದವೇ ಯಂತ್ರ-ಮಂತ್ರ. ಹಲವು ದೇಶಗಳ ರಾಯಭಾರ ಕಚೇರಿಗಳನ್ನು ಹೊಂದಿದ್ದು ಸಮೃದ್ಧವಾಗಿ ಕಾಣುವ ಚಾಣಕ್ಯಪುರಿ ಪ್ರದೇಶವು ತನ್ನ ಹೆಸರಿನಲ್ಲೇ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ “ಚಾಣಕ್ಯ’ನನ್ನು ಹೊಂದಿದೆ. ಇಂದು ಹಾಝ್ ಖಾಸ್‌ ಎಂದು ಕರೆಯಲ್ಪಡುವ ಪ್ರದೇಶವು ಒಂದು ಕಾಲಮಾನದಲ್ಲಿ ಹಾಝ್-ಎ-ಅಲೈ ಆಗಿತ್ತು. ದಿಲ್ಲಿಯ ಸುಲ್ತಾನನಾಗಿದ್ದ ಖುಸ್ರೋ ಖಾನ್‌ನನ್ನು ತುಘಲಕ್‌ ವಂಶದ ಸಂಸ್ಥಾಪಕನಾಗಿದ್ದ ಯಾಸುದ್ದೀನ್‌ ತುಘಲಕ್‌ ಇಲ್ಲೇ ಮಣಿಸಿದ್ದ. ಮುಂದೆ ಈತನಿಂದ ದಿಲ್ಲಿಯಲ್ಲಿ ತುಘಲಕಾಬಾದ್‌ ಜನ್ಮತಾಳಿತು. ಇನ್ನು ಮುಂಬೈಯಲ್ಲಿರುವ ಕಾಮಾಟಿಪುರದಂತೆ ದಿಲ್ಲಿಯ ರೆಡ್‌ ಲೈಟ್‌ ಏರಿಯಾ ಆಗಿರುವ ಜಿ. ಬಿ.ರೋಡ್‌ ಹೆಸರು ಬ್ರಿಟಿಷ್‌ ಕಮಿಷನರ್‌ ಆಗಿದ್ದ ಗಾಸ್ಟಿìನ್‌ ಬ್ಯಾಸ್ಟಿಯನ್‌ ನಿಂದ ಬಂದಿದ್ದು, ಮುಜ್ರಾಗಳೆಂದು ಹೆಸರಾಗಿರುವ ನೃತ್ಯಕಾರ್ಯಕ್ರಮಗಳಿಗೆ ಈ ಸ್ಥಳವು ಹಿಂದಿನಿಂದಲೂ ಅನ್ವರ್ಥನಾಮದಂತಿದೆ.

ಹೀಗೆ ದಿಲ್ಲಿಯಲ್ಲಿ ಕಥೆಗಳನ್ನು ಹುಡುಕಿಕೊಂಡು ಹೋಗಬೇಕೆಂದಿಲ್ಲ. ಶಹರದ ಭಾಗಗಳಲ್ಲಿ ಆಯಾ ಸ್ಥಳಮಹಿಮೆಯ ಕಥೆಗಳು ಸ್ವತಃ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಹವೆಯಲ್ಲಿ ಅತ್ತರಿನ ಘಮವನ್ನು ಹೊಂದಿರುವ ಗಲ್ಲಿಗಳು ಸುಮ್ಮನೆ ಪಿಸುಗುಡುತ್ತವೆ. ಇನ್ನುಳಿದಿರುವುದು ಇಲ್ಲಿಯ ಕಥೆಗಳಲ್ಲಿ ಕಳೆದುಹೋಗುವುದಷ್ಟೇ!

ಪ್ರಸಾದ್‌ ನಾೖಕ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಮೊನ್ನೆ ಕೇರಳದ ಚಲನಚಿತ್ರ ನಟಿ ಮಂಜು ವಾರಿಯರ್‌ತಂಡ ಇದೇ ಛತ್ರುವಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಸೆಟಲೈಟ್‌ ಫೋನಿನ ಮೂಲಕ ಅವರನ್ನು ರಕ್ಷಿಸಲಾಯಿತು ಎಂಬ...

  • ದೇವರು ಪ್ರಾಣಿಗಳನ್ನೆಲ್ಲ ಸೃಷ್ಟಿಸಿದ ಬಳಿಕ ಅವುಗಳ ಸಭೆ ಕರೆದ. ""ನಾನು ತುಂಬ ಶ್ರಮವಹಿಸಿ ಬೇರೆ ಬೇರೆ ವಿಧದ ಪ್ರಾಣಿಗಳನ್ನು ಸೃಷ್ಟಿಸಿದ್ದೇನೆ. ನಿಮಗಾಗಿ ಎಲ್ಲ...

  • (ಈ ಕತೆಯಲ್ಲಿ ವರ್ಷಕಾಲದ ಭೀಕರ ಚಿತ್ರಣವಿದೆ. ಇದು ಕತೆಯ ಪೂರ್ಣಪಾಠವಲ್ಲ.) ಸಿಡಿಲು ಗುಡುಗು, ಮಿಂಚು, ಗಾಳಿ, ಮಳೆ- ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು....

  • ಹೊಸ ಅಂಕಣ... ಪ್ರತಿದಿನ ಬೆಳಗ್ಗೆ ಏಳರ ಹೊತ್ತಿಗೆ 70 ಜನ ಕೂರಬಹುದಾದ ಎಟಿಆರ್‌ ವಿಮಾನವೊಂದು ಬೆಂಗಳೂರಿನಿಂದ ಕೊಚ್ಚಿನ್‌ ಮಾರ್ಗವಾಗಿ ಲಕ್ಷದ್ವೀಪ ಸಮೂಹದ ಅಗತ್ತಿ...

  • ತಿರುಗಾಟ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಹಜವಾಗಿ ನಮಗಾಗುವ ವೈವಿಧ್ಯಮಯ ಅನುಭವಗಳೂ ವಿಸ್ತೃತವಾಗುತ್ತವೆ. ಬಹುಶಃ "ದೇಶ ಸುತ್ತು ಕೋಶ ಓದು' ಎಂಬ ಗಾದೆ ನಮಗೆ ಅರ್ಥ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...