ಅಡಿಕೆಯ ವಡಪೆ

Team Udayavani, May 19, 2019, 6:00 AM IST

ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ ಎರಡು ಹೋಳು ಮಾಡಿ ಅದರ ಒಳ ಜಗತ್ತನ್ನು ಅರಿಯಲು ಪ್ರಯತ್ನಿಸುವುದು. ಹೆಸರು ಉಲ್ಲಾಸ. ಹವಿಗನ್ನಡ ಭಾಷೆಯವನು ಆತ. ಆದರೆ, ಇಡೀ ಕಾಲೇಜಿನಲ್ಲಿ ಎಲ್ಲ ಹುಡುಗಿಯರು ಆತ ಕೊಂಕಣಿ ಮಾತನಾಡುವವನೆಂದೇ ಭಾವಿಸಿದ್ದರು. ನಿರರ್ಗಳವಾಗಿ ರಾಗ ಮಾಡಿ ಆತ ಕೊಂಕಣಿ ಮಾತನಾಡುತ್ತಿದ್ದುದೇ ಅದಕ್ಕೆ ಕಾರಣ. ಬೀಡಿ ಸೇದುತ್ತಿದ್ದ. ಪುರುಸೊತ್ತಿದ್ದಾಗ ಒಂದೆರಡು ತಾಸು ಕೆಂಪು ಅಂಗಿ, ಬಿಳಿ ಪ್ಯಾಂಟು ಹಾಕಿ ಕಾಲೇಜಿಗೆ ಬರುವುದು. ಸುಂದರಾಂಗ ಆತ. ಆದರೆ, ಗಮ್ಮೆನ್ನುವ ಬೀಡಿಯ ವಾಸನೆ. ಸುಂದರ ಹುಡುಗಿಯರ ಬೆನ್ನು ಬೀಳುತ್ತಿದ್ದ, ಅದೇ ಕೆಲಸ. ಹುಡುಗಿಯರಿಗೆ ಹೆಚ್ಚು ಕಡಿಮೆ ಎಲ್ಲ ಸುಂದರಿಯರ ಹಿಂದೆ ಆತ ಬೀಳುತ್ತಾನೆ ಎಂದು ಗೊತ್ತಿತ್ತು.ಎಲ್ಲ ಚಂದದ ಹುಡುಗಿಗೂ “ತೋ ಮೆಗೆಲ್‌ಪಾಂಜಿ’ (ಅವಳು ನನ್ನ ಲವರ್‌)ಎಂದು ಹೇಳುತ್ತಿದ್ದ. ಆದರೆ, ಯಾಕೋ ಯಾವ ಹುಡುಗಿಯೂ ಆತನಿಗೆ ಪೂರ್ತಿಯಾಗಿ ಲೈಕ್‌ ಆಗುವಂತೆ ಅನ್ನಿಸುತ್ತಿರಲಿಲ್ಲ. ಒಮ್ಮೊಮ್ಮೆ ಹುಡುಗಿಯೊಬ್ಬಳ ಕುರಿತಾಗಿ “ಫಿಗರ್‌ ಮಸ್ತ. ಆದರೆ ಮುಖ ನೋಡಲಾಗುವುದಿಲ್ಲ’ ಎನ್ನುತ್ತಿದ್ದ. ಆದರೆ, ತನ್ನೊಬ್ಬಳನ್ನೇ ಹುಡುಗನೊಬ್ಬ ಪ್ರೀತಿಸಬೇಕು ಎಂಬಂಥ ಮನಸ್ಸಿನ ರೋಮ್ಯಾಂಟಿಕ್‌ ಹುಡುಗಿಯರು ಆತನನ್ನು ಲೈಕ್‌ ಮಾಡುವ ಹಾಗೆ ಕಾಣಿಸುತ್ತಿರಲಿಲ್ಲ. ಹಾಗೆಂದು ಪಳದಿ ಹುಡುಗಿಯರೂ ಬೇಕಷ್ಟಿದ್ದರು. ಉದಾಹರಣೆಗೆ ರಾಮದಾಸ್‌ ವಕೀಲರ ಮಗಳು. ಆತನಿಗೆ ದೂರದಿಂದ ಕನ್ನಡಿಯ ಬೆಳಕು ಬಿಡುತ್ತಿದ್ದಳು. ಚಪ್ಪಾಳೆ ತಟ್ಟಿ ಕರೆಯುತ್ತಿದ್ದಳು. ಒಮ್ಮೊಮ್ಮೆ ಅವಳ ಕಡೆ ನೋಡುತ್ತಿದ್ದ. ಆದರೆ, ಆತ ಹೆಚ್ಚಾಗಿ ತಿರುಗುತ್ತಿದ್ದುದು ಉಷಾ ಹೆಗಡೆಯ ಹಿಂದೆ. ಅವಳ ಹೊನ್ನಿನ ಬಣ್ಣದ ಕೂದಲು “ಮಸ್ತ್ಬರೇ ಅಸಾ (ತುಂಬ ಸುಂದರ) ಮಾರಾಯಾ’ ಎಂದು ಖಾಸಗಿಯಾಗಿ ಅವನಿಗಿದ್ದ ಇಬ್ಬರೇ ಗೆಳೆಯರ ಬಳಿ ಹೇಳುತ್ತ ತಿರುಗುತ್ತಿದ್ದ. ಹಾಗೆ ಹೇಳುತ್ತ ಅವಳ ಹಿಂದೆ ಸೈಕಲ್‌ ಹೊಡೆದುಕೊಂಡು ಸಿಳ್ಳೆ ಹಾಕುತ್ತ ಹೋಗುತ್ತಿದ್ದ. ಆದರೆ, “ರಾಮದಾಸ ವಕೀಲರ ಮಗಳ ಕಣ್ಣೂ ಮಸ್ತ್ ಅಸಾ’ ಎನ್ನುತ್ತಿದ್ದ. ಇವಳ ಕಣ್ಣುಗಳನ್ನು, ಉಷಾ ಹೆಗಡೆಯ ಕೂದಲುಗಳನ್ನು ಒಂದೇ ಹುಡುಗಿಯಲ್ಲಿ ಆತ ಹುಡುಕುತ್ತಿರುವಂತಿದ್ದ. ಹಳೆಯ ರೋಮ್ಯಾಂಟಿಕ್‌ ಹಾಡುಗಳನ್ನು ಸಿಳ್ಳೆ ಹಾಕುತ್ತಿದ್ದ, ಹುಡುಗಿಯರ ಹಿಂದೆಯೇ ಕುಳಿತು. ಆದರೆ, ಯಾಕೋ ಯಾವ ಹುಡುಗಿಯೂ ಪೂರ್ತಿಯಾಗಿ ಅವನ ಮನಸ್ಸನ್ನು ತುಂಬುತ್ತಿರಲಿಲ್ಲ ಅನಿಸುತ್ತಿದೆ. ಹಿಂದಿನ ಬೆಂಚಿನಲ್ಲಿ ಕುಳಿತು ಅರೆಮನಸ್ಸಿನಲ್ಲಿ ಅರ್ಧ ತಾಸು ಕ್ಲಾಸು ಕೇಳಿ “ಬೋರ್‌ ರೇ’ ಎಂದು ಹೇಳಿ ಎದ್ದು ಹೋಗಿ ಬಿಡುತ್ತಿದ್ದ. ಉಳಿದರ್ಧ ತಾಸು ಗೇರುಮರದಡಿ ಕುಟಕುಟಿ ಆಡಿ ಅಥವಾ ಗಾಳಿಮರಗಳ ಕೆಳಗೆ ಕುಳಿತು ಹೋಗಿ ಬಿಡುತ್ತಿದ್ದ.

ಬಿ.ಎಸ್‌ಸಿ. ಯಲ್ಲಿ ಆತ ಒಂದನೆಯ ರ್‍ಯಾಂಕ್‌. ಆದರೆ, ಓದು ಆತನ ಮುಖ್ಯ ಕೆಲಸವಿರಲಿಲ್ಲ. ಅಡಿಕೆ ವ್ಯಾಪಾರ ಮೇನ್‌. ಅಡಿಕೆ ವ್ಯಾಪಾರಿಗಳ ಜತೆ ಅಡಕತ್ರಿ ಕಿಸೆಯಲ್ಲಿ ಹಾಕಿ ತಿರುಗುವುದು ಅವನಿಗೆ ತುಂಬ ಸಂತಸ ನೀಡುವ ಚಟುವಟಿಕೆ. ಅದರ ಎರಡು ದವಡೆಗಳ ನಡುವೆ ಅಡಿಕೆ ಸಿಕ್ಕಿಸಿ “ಕಚಕ್‌’ ಎಂದು ನಿಪುಣ ಕೈಚಳಕದಲ್ಲಿ ಕತ್ತರಿಸುವುದು ಅವನಿಗೆ ಪುಳಕ ತರುವ ಕ್ರಿಯೆ. ಒಂದೇ ಒತ್ತಿಗೆ ಕಲ್ಲಬ್ಬೆ ಚಾಲಿ ಕತ್ತರಿಸಿ ಎರಡು ವಡಪೆ ಮಾಡಿ ಬೀಸಾಕುತ್ತಿದ್ದ.ಎರಡು ವಡಪೆಗಳಲ್ಲಿ ಒಂದು ಸುಮಾರಾಗಿ ಹುಳು ಬಿದ್ದು ಹೋಗುತ್ತಿದ್ದುದ್ದರ ಬಗ್ಗೆ ಬೇಸರಪಡುತ್ತಿದ್ದ. ಬೇರೊಂದು ಅಡಿಕೆಯ ಒಳ್ಳೆಯ ತುಕಡಿಯನ್ನು ಇನ್ನೊಂದು ಅಡಿಕೆಯ ವಡಪೆಗೆ ಜೋಡಿಸಿ ಒಂದು ಸಂಪೂರ್ಣ ಅಡಿಕೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದ. ಒಂದನೆಯ ಅರವತ್ತು, ಎರಡನೆಯ ಆರು ಎಂದು ವಿಂಗಡ ವೂಡಿ ಅಡಿಕೆ ಕಂಟಕ್ಕೆ ಕಟ್ಟಿ ತೂಗುವುದೂ ಅವನಿಗೆ ತುಂಬ ಆಸಕ್ತಿಯ ಚಟುವಟಿಕೆ. ಬೀಡಿ ಸೇದಲು ಕಲಿಸಿದ್ದು ಹಮಾಲಿಗಳು. ವ್ಯಾಪಾರಿಗಳ, ಮಧ್ಯದಲ್ಲಿದ್ದಾಗ ಸೇದುವುದು ಸಿಗರೇಟು. ಅಡಕತ್ತರಿ ಕಿಸೆಯಲ್ಲಿ ಹಾಕಿ ರಾತ್ರಿ ಯಕ್ಷಗಾನಕ್ಕೆ ಹಮಾಲಿಗಳ ಜತೆ ಹೋಗುತ್ತಿದ್ದ- ಅಡಿಕೆ ಮೂಟೆಕಟ್ಟಿ ಮುಗಿದ ನಂತರ.

ಶಂಭು ಹೆಗಡೆಯವರ ಜರಾಸಂಧ ಯಕ್ಷಗಾನ ನೋಡಿ ಬಂದ ಮರುದಿನ ಆತನದು ಉಳಿದ ವ್ಯಾಪಾರಿಗಳ ಜತೆ ಆಟದ್ದೇ ಸುದ್ದಿ. “ರಾಕ್ಷಸಿ ಗ್ರೇಟು. ಜರಾಸಂಧನನ್ನು ಹೇಗೆ ಕೂಡಿಸಿ ಜೀವ ತರಿಸಿದಳ್ಳೋ ಏನೋ. ಅವಳು ಈಗ ಜಗತ್ತಿನಲ್ಲಿ ಇಲ್ಲವೇ ಇಲ್ಲವೆಂದು ಕಾಣುತ್ತದೆ. ಇಲ್ಲವಾದರೆ ಈ ವಡಪೆಗಳನ್ನೆಲ್ಲ ಕೂಡಿಸಿ ಹಾಕಬಹುದಿತ್ತು. ಆದರೆ, ಈಗ ಹಾಗೆ ಇಲ್ಲ’. ಯಾಕೋ ವಿಷಾದ ಪಟ್ಟುಕೊಳ್ಳುತ್ತಿದ್ದ. ಕೂಡಿಸಲಾಗುವುದಿಲ್ಲ ಎನ್ನುವ ವಿಷಾದ. ಹೆಚ್ಚಾಗಿ ಆತ ಕಥೆಗಳಲ್ಲಿ ಬರೆಯುತ್ತಿದ್ದುದು ಅಡಿಕೆಯ ವಡಪೆ.

ಮಲ್ಟಿ ನ್ಯಾಶನಲ್‌ ಫಾರ್ಮಾಸೂಟಿಕಲ್‌ ಕಂಪೆನಿಯಲ್ಲಿ ದೊಡ್ಡ ಅಧಿಕಾರಿಯಾದ- ಪಿ.ಎಚ್‌ಡಿ ಮುಗಿದ ನಂತರ. ಪ್ರೇಮಿಸಿ ವಿವಾಹವಾದ. ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ನೌಕರಿ. ಹೆಂಡತಿ ತುಂಬ ಸುಂದರಿ. ಕಪ್ಪು ಕಪ್ಪು ಗುಂಗುರು ಕೂದಲು. ಹೊಳೆವ ಕಣ್ಣುಗಳು. ಬಿಳಿ ನಗುವ ಕೆಂಪು ಲಿಪ್‌ಸ್ಟಿಕ್‌ ತುಟಿಗಳು. ಪ್ರೀತಿಸಿ ಮದುವೆಯಾಗಿದ್ದು. ಅವನ ಆಫೀಸ್‌ನಲ್ಲೇ ಎಕ್ಸಿಕ್ಯೂಟಿವ್‌ ಆಗಿದ್ದವಳು, ದೆಹಲಿಯಲ್ಲಿ. ಉತ್ತರ ಪ್ರದೇಶದವಳು. ಬಿಚ್ಚು ಮನಸ್ಸಿನವಳು. ಈತನ ಸಿಗರೇಟ್‌ ವಾಸನೆ ಅವಳಿಗೆ ಮತ್ತು ಬರಿಸುತ್ತದೆ. ಅವರಿಬ್ಬರೂ ಜೋಡಿ ಹಕ್ಕಿಗಳಂತೆ ಹಾರಾಡಿದ್ದರು. ಮದುವೆಯಾದರು. ದೊಡ್ಡ ಸಂಬಳ. ಸ್ವರ್ಗದಂಥ ಜೀವನ. ಮೊದಲು ಯಾವಾಗಲೂ ಅವಳಿಗೆ ಪತ್ರ ಬರೆದಿರಲಿಲ್ಲ. ನೇರ ಪ್ರೇಮ, ಪ್ರೀತಿ, ಪ್ರಣಯ. ಆತ ಅವಳಿಗೆ ಬರೆದಿದ್ದು ಒಂದೇ ಚೀಟಿ: ಕೂಡಿ ಇರಲಾಗುವುದಿಲ್ಲ. ನೀನು ಬದುಕಬೇಕು. ನಾನು ಹೋಗುತ್ತಿದ್ದೇನೆ.

ಆತನ ಹೆಂಡತಿಯ ಪ್ರಕಾರ…
ಒಳಗೆ ಆತ ಹೊರಗೆ ಕಂಡ ಹಾಗೆ ಇಲ್ಲ ಎನ್ನುವುದು ಯಾಕೋ ಅನಿಸುತ್ತಿತ್ತು. ವಿಷಯ ಹೇಳಬಾರದು. ಯಾಕೋ ಆತ ನಮ್ಮಿಬ್ಬರ ನಡುವೆ ಬೆಂಕಿ ಉರಿಯುತ್ತಿರುವಾಗಲೇ ತಣ್ಣಗಾಗುತ್ತಿದ್ದ. ತಣ್ಣಗಾದ ಎಂದು ಅಡ್ಡ ಮಲಗಿಕೊಂಡ ಕೆಲವೇ ನಿಮಿಷಗಳಲ್ಲಿ ಬೆಂಕಿಯಾಗುತ್ತಿದ್ದ. “ಐ ಲವ್‌ ಹಿಮ್‌. ಸಾರಿ ಟು ಹ್ಯಾವ್‌ ಲೊಸ್ಟ ಹಿಮ್‌. ಸಮ್‌ ಹೌ ಹೀ ಲೈಕ್‌ಡ್‌ ಹಿಸ್‌ ಅರೇಕಾ ಬಿಸ್‌ನೆಸ್‌ ಮೊರ್‌. ಯಾಕೋ ಊರಿಗೆ ಹೋದವನು ಬೇಗ ಬಂದ. ಒಂದೇ ವಾರದಲ್ಲಿ. ದೆನ್‌ ಏನೋ ಆಯಿತು. ಮಿಸ್‌ ಹಿಮ್‌’.

ರಾಮದಾಸ ವಕೀಲರ ಮಗಳು/ಉಷಾ ಹೆಗಡೆ/…
ಎಷ್ಟೋ ವರ್ಷಗಳ ನಂತರ ಮೊನ್ನೆ ಮೊನ್ನೆ ಉಲ್ಲಾಸ ನಮ್ಮ ಮನೆಗೆ ಬಂದ, ನಾನು ಮೂರನೆಯ ಮಗುವಿಗೆ ಹಾಲುಣಿಸುತ್ತಿದ್ದೆ. ಕಾಲೇಜಿಗೆ ಹೋಗುತ್ತಿದ್ದಾಗ ಆತ ಪತ್ರ ಬರೆಯುತ್ತಿದ್ದ. ಎಷ್ಟೊಂದು ಪತ್ರಗಳು! ಕೆಲವರ ಕೂದಲು ಕೆಂಚು ಇರುತ್ತದೆ. ನನ್ನದೂ ಹಾಗೇ. ಅಷ್ಟೇ. ನಾನು ಮದುವೆಯಾಗುವುದು ಅಪ್ಪ ಅಡ್ಡಿ ಇಲ್ಲ ಎಂದು ಹೇಳಿದವರನ್ನು ಮಾತ್ರ ಎಂದು ಆತನಿಗೆ ಸ್ಪಷ್ಟವಾಗಿ ಹೇಳಿದ್ದೆ. ಇಪ್ಪತ್ತರಲ್ಲೇ, ಈತ ಎಮ್‌.ಎಸ್‌ಇಗೆ ಹೋದಾಗಲೇ ನನ್ನ ಮದುವೆಯಾಗಿ ಹೋಯಿತಲ್ಲ!

“ಮಜ್ಜಿಗೆ ಬೇಕಾ’ ಕೇಳಿದೆ. “ಊಟ ಮಾಡು’ ಹೇಳಿದೆ. “ನಿನ್ನ ಹೆಂಡ್ತಿ ಆರಾಮಿದ್ದಾಳಾ?’ ಕೇಳಿದೆ. “ಹೂಂ’ ಎಂದ.
ಮಕ್ಕಳಿಗೆ ಏನೇನೋ ಕೊಟ್ಟ. “ನಮ್ಮ ಯಜಮಾನರದು ಪೌರೋಹಿತ್ಯ ಮತ್ತು ಎಲೆ ವ್ಯಾಪಾರ’ ಎಂದು ಹೇಳಿದೆ. ಸುಮ್ಮನೆ ಕೂತ. ಎದ್ದು ಹೋದ. “ಊರಿಗೆ ಬಂದಾಗ ಬಾ’ ಎಂದೆ. “ಮುದ್ದಾಂ’ ಎಂದು ಹೇಳಿ ಹೋದ.
.
ಒಳಮನಸ್ಸನ್ನು ಬಿಚ್ಚಿಡುವ ಅವನ ಕಥೆಗಳು ಅವನು ಹೋದ ನಂತರ ಪುಸ್ತಕವಾಗಿ ಬಂದವು.

ಆರ್‌. ಜಿ. ಹೆಗಡೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರಿಗೆ ಲಿಖೀತ ದಾಖಲೆ ಸಲ್ಲಿಕೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ...

  • ಹೊಸದಿಲ್ಲಿ: ಪ್ರಸಕ್ತ ವರ್ಷ ಶೇ.3 ರಷ್ಟು ಕುಸಿತ ಕಂಡಿರುವ ವಿಶ್ವದ ಒಟ್ಟಾರೆ ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿತ ಕಾಣಲಿದೆ. ಆ ಸಂದರ್ಭದಲ್ಲಿ...

  • ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನವು ನವೆಂಬರ್‌ 18ರಿಂದ ಡಿಸೆಂಬರ್‌ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಸಂಸದೀಯ ವ್ಯವಹಾರಗಳ...

  • ಬೀಜಿಂಗ್‌: ವಾಣಿಜ್ಯ ಉದ್ದೇಶಗಳಿಗಾಗಿ ಹಾರಿಬಿಡುವ ಉಪಗ್ರಹಗಳ ಉಡಾವಣೆಯು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಚೀನ, ಹೊಸ ತಲೆಮಾರಿನ ರಾಕೆಟ್‌ಗಳ...

  • ಗಡಿಯಾಚೆಗಿನಿಂದ ಸತತವಾಗಿ ಕದನ ವಿರಾಮ ಉಲ್ಲಂ ಸುತ್ತಾ ನಾಗರಿಕರನ್ನು ಮತ್ತು ಯೋಧರನ್ನು ಗುರಿ ಮಾಡಿಕೊಂಡು ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ...