ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಎಂಬತ್ತು!

Team Udayavani, Jun 30, 2019, 5:00 AM IST

ಚೊಕ್ಕಾಡಿಯ ಮನೆಯ ದಾರಿಯಲ್ಲಿ ಕವಿ

ಅನಿತಾ ನರೇಶ್‌ ಮಂಚಿ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜೊಕ್ಕಾಡಿ ಎಂಬಲ್ಲಿ ಗುಡ್ಡದ ತಗ್ಗಿನಲ್ಲಿರುವ ಸುಬ್ರಾಯ ಚೊಕ್ಕಾಡಿಯವರ ಮನೆಯಿಂದ ತೇಕುತ್ತ ಗುಡ್ಡವೇರಿ ಮತ್ತಿಳಿದು ರಸ್ತೆಗೆ ತಲುಪಿದ ನಾನು, ನಮ್ಮ ಜೊತೆಗೆ ಆರಾಮವಾಗಿ ಹೆಜ್ಜೆ ಹಾಕುತ್ತ ಬಂದ ಚೊಕ್ಕಾಡಿಯವರನ್ನು ಕೇಳಿದ್ದೆ, ”ಪೇಟೆಗೆ ಹೋಗ್ಲಿಕ್ಕೆ ಇನ್ನೂ ದೂರ ಉಂಟಲ್ಲ, ಬಸ್ಸುಗಳು ಎಲ್ಲಾ ಹೊತ್ತಿನಲ್ಲಿ ಇರಲಾರದು, ಪ್ರತೀ ಸಾರಿ ಹೇಗೆ ಹೋಗ್ತೀರಿ?”


‘ಹಿಂದಿನ ಕಾಲದಲ್ಲಿ ಎಂತ ವಾಹನ ಇತ್ತು. ನಡೆದದ್ದೇ ಅಲ್ವಾ! ಈಗಲೂ ಹಾಗೆಯೇ’ ಎಂಬ ಟಿಪಿಕಲ್ ಉತ್ತರದ ನಿರೀಕ್ಷೆಯಲ್ಲಿದ್ದೆ. ಆದರವರು ನಗುತ್ತ ಹೇಳಿದ್ದು ಬೇರೆಯೇ. ”ನಾನು ಚೊಕ್ಕಾಡಿಯಲ್ಲಿ ವಲ್ಡ್ರ್ ಫೇಮಸ್‌ ಗೊತ್ತುಂಟಾ! ಇಲ್ಲಿ ಅತ್ತಿತ್ತ ಹೋಗುವ ಮಂದಿಯೆಲ್ಲ ಒಂದಾನೊಂದು ಕಾಲದಲ್ಲಿ ನನ್ನ ಶಿಷ್ಯನೋ ಶಿಷ್ಯೆಯೋ ಆಗಿದ್ದವರು. ಯಾರಾದರೂ ಅವರ ವಾಹನ ನಿಲ್ಲಿಸಿ ನನ್ನನ್ನು ಹತ್ತಿಸಿಕೊಂಡು ಪೇಟೆಗೆ ಬಿಡ್ತಾರೆ. ಅಲ್ಲಿಂದ ಬರುವಾಗಲೂ ಇದುವೇ ನಮ್ಮ ಸಾರಿಗೆ ವ್ಯವಸ್ಥೆ”

ಕಳೆದ ಸಲ ಮಾಲಿನಿ ಗುರುಪ್ರಸನ್ನ , ಸಿಂಧೂ ರಾವ್‌, ಅವರೊಂದಿಗೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದಲ್ಲಿರುವ ನಮ್ಮ ಮನೆಗೆ ಬಂದಿಳಿದಿದ್ದರು. ಗೆಳತಿಯರಾದ ನಮ್ಮದು ಮುಗಿಯದ ಮಾತು. ಸಂಜೆ ಬಂದವರು ಮರುದಿನ ಬೆಳಗಿನಲ್ಲಿ ಹೊರಡುವವರಾದ್ದರಿಂದ ಇಡೀ ಜೀವಮಾನದ ಮಾತುಗಳನ್ನು ಆಗಲೇ ಆಡಿ ಮುಗಿಸುವ ಆತುರ ನಮ್ಮದು. ಊಟವಾಗಿ ಎಲ್ಲರ ನಿದ್ರೆಯ ಹೊತ್ತಾದರೂ ನಮಗೆ ಕಣ್ಣೆವೆ ಕೂಡುವಂತಿರಲಿಲ್ಲ. ಮನೆಯೊಳಗೆ ಮಲಗಿದವರಿಗೆ ನಮ್ಮ ಗಲಾಟೆಯಿಂದ ತೊಂದರೆಯಾಗದಿರಲಿ ಎಂದು ಹೊರಗಿನ ಮುಖಮಂಟಪದಲ್ಲಿ ಕುಳಿತು ಪಟ್ಟಾಂಗ ಶುರು ಮಾಡಿದ್ದೆವು. ಮೊದಲಿಗೆ ಸಣ್ಣ ಸ್ವರದಲ್ಲಿದ್ದ ಮಾತುಕತೆ ಅದ್ಯಾವಾಗ ಅಬ್ಬರದ ಬೊಬ್ಬೆಯೊಡನೆ ಗಹಗಹಿಸುವ ನಗುವಿನತ್ತ ತಿರುಗಿತ್ತೋ ಏನೋ. ಮೆತ್ತಗೆ ತೆರೆದ ಬಾಗಿಲಿನೊಳಗೆ ಚೊಕ್ಕಾಡಿ ನಿಂತಿದ್ದರು. ನಮ್ಮ ಹರಟೆಕಟ್ಟೆಗೆ ಅವರು ಸೇರಿದ ನಂತರ ಮಾತು ಕಾವ್ಯ, ಕಥನ, ಯಕ್ಷಗಾನ, ನಾಟಕ, ಸಿನೆಮಾಗಳೆಡೆಗೆ ತಿರುಗಿತ್ತು. ಅವರೀಗ ಪಕ್ಕಾ ಗುರುಗಳಾದರು. ನಾವು ವಿಧೇಯ ವಿದ್ಯಾರ್ಥಿಗಳು. ಸಿಂಧು ಮತ್ತು ಮಾಲಿನಿ ಇಬ್ಬರೂ ಕಾವ್ಯ ಪ್ರೀತಿಯವರಾದ ಕಾರಣ ಆ ಮೂವರ ಸಂಭಾಷಣೆ ರಂಗೇರಿತ್ತು, ನಾನು ಕೇಳುಗಳಾಗಿದ್ದೆ. ಗಡಿಯಾರದ ಮುಳ್ಳು ಎರಡರ ಹತ್ತಿರ ಬಂದಾಗಲೇ ಗುಡ್‌ ಮಾರ್ನಿಂಗ್‌ ಎಂದು ಹೇಳುತ್ತ ನಿದ್ರೆ ಮಾಡಲು ತೆರಳಿದ್ದೆವು. ಮರುದಿನ ನಮ್ಮೆಲ್ಲರಿಗಿಂತ ಬೇಗನೇ ಎದ್ದು ಲವಲವಿಕೆಯಿಂದ ನಮ್ಮ ಮನೆಯ ಪರಿಸರವನ್ನು ಕುತೂಹಲದಿಂದ ನೋಡಿದ ಚೊಕ್ಕಾಡಿಯವರಿಗೆ ಈಗ ಎಂಬತ್ತಂತೆ !

ಇರಬಹುದು… ಈ ವಯಸ್ಸು ಆಗಿದ್ದು ಅವರ ಅನುಭವಕ್ಕೆ, ಪಕ್ವತೆಗೆ, ಕಳಿತ ಫ‌ಲದಂತೆ ಸುವಾಸನೆ ಬೀರುವ ಬದುಕಿಗೆ. ಒಳಗಿರುವ ಮಕ್ಕಳಂಥ ಮನಸ್ಸಿಗಲ್ಲ. ಇನ್ನೂ ಕಲಿಯುವ, ಕಲಿಸುವ, ತಾನು ಕಂಡ ಬೆರಗನ್ನು ಎಲ್ಲರೊಡನೆ ಹಂಚಿಕೊಳ್ಳುತ್ತಲೇ…ಮೆಚ್ಚಿನ ಮಡದಿ, ಮಕ್ಕಳು ಮೊಮ್ಮಕ್ಕಳೊಡನೆ ಸಹಸ್ರಚಂದ್ರದರ್ಶನ ಕಂಡ ಕವಿ ಈಗಲೂ ಮೆಚ್ಚುಗೆೆಗೊಳಗಾಗುವುದು ಈ ರೀತಿ ಸಾಮಾನ್ಯರಲ್ಲಿ ಸಾಮಾನ್ಯನಾಗಿರುವುದಕ್ಕೇ! ಅವರ ಬಗ್ಗೆ , ಅವರ ಕವಿತೆಗಳ ಬಗ್ಗೆ ಮಾತನಾಡಲು ಸಿಂಧೂ ರಾವ್‌ ಅವರಿಗೆ ಖೋ ಕೊಡುತ್ತಿದ್ದೇನೆ.

ಸಿಂಧೂ ರಾವ್‌…

ಸುಬ್ರಾಯ ಚೊಕ್ಕಾಡಿಯವರು ನಮ್ಮ ನಡುವಿನ ಹಿರಿಯ ಕವಿಚೇತನ. ಜನಿಸಿದ್ದು 1940ರ ಜೂನ್‌ 29ರಂದು. ವಯಸ್ಸು, ಪಕ್ವತೆ, ಸಹೃದಯತೆ, ಮತ್ತು ಸ್ಪಷ್ಟ ನೇರ ಅಭಿಪ್ರಾಯಗಳಲ್ಲಿ ಮಾದರಿಯಾಗಿ ಮಾಗಿರುವ ಈ ಜೀವ, ಮನೆಯ ಹಿರಿಯಜ್ಜನ ಹಾಗೆ, ಪುಟ್ಟ ಶಾಲೆಯ ಮಾಸ್ತರರ ಹಾಗೆ, ಅವರೊಡನಾಡುವವರೊಡನೆ ಎನಗಿಂತ ಕಿರಿಯರಿಲ್ಲ ಎಂಬಂತಿರುತ್ತಾರೆ. ಸಮವಯಸ್ಕ ರೊಡನೆಯ ಕೆಳೆತನದ ಮಾತುಕತೆ ಇರಬಹುದು, ಕಿರಿಯ ಬರಹಗಾರರೊಡನೆಯ ಬರಹ ವಿಶ್ಲೇಷಣೆ ಇರಬಹುದು, ಹೊಸ ಬರಹಗಾರರಿಗೆ ಹೇಳುವ ಕಿವಿಮಾತಿರಬಹುದು, ಅವರಿಗಿಂತ ಹಿಂದಿನ ಸಾಹಿತಿಗಳ ನೆನಪಿನ ಕ್ಷಣಗಳಿರಬಹುದು- ಎಲ್ಲದರಲ್ಲೂ ಚೊಕ್ಕಾಡಿಯವರ ಶಿಸ್ತು, ಶ್ರದ್ಧೆ, ಮತ್ತು ಅಕ್ಕರೆ, ನೋಯಿಸದೆಯೂ ಸ್ಪಷ್ಟ ಅಭಿಪ್ರಾಯ ದಾಖಲು ಮಾಡುವ ಋಜುತ್ವ ಎದ್ದು ಕಾಣುತ್ತದೆ. ಅವರ ವಿಮರ್ಶೆಯ ಬರಹಗಳಲ್ಲಂತೂ ವಿಷಯ ಖಾಚಿತ್ಯ, ಮಂಡನೆ, ದ್ವಂದ್ವ, ಶ್ಲೇಷೆಗಳಿಲ್ಲದ ನಿಖರ ಅಭಿಪ್ರಾಯ ಅನುಕರಣೀಯವಾಗಿದೆ. ಒಂದು ವಿಷಯ, ಕಥೆ, ಕವಿತೆ ಅಥವಾ ಕಾದಂಬರಿಯನ್ನು ಓದಿ ಚೊಕ್ಕಾಡಿಯವರು ಅಭಿಪ್ರಾಯ ಕೊಟ್ಟರೆ ಅದು ಆಮೂಲಾಗ್ರವೆಂದೇ ತಿಳಿಯಬಹುದು. ನವ್ಯದ ಕವಿಗಳ ರಾಜಮಾರ್ಗದಲ್ಲಿ ಹಾದು ಹೋದರೂ, ನನ್ನ ಹಳ್ಳಿಯ ದಾರಿಯೇ ನನಗಿರಲಿ ಎಂದು ತನ್ನತನವನ್ನು ಛಾಪುಗಟ್ಟುತ್ತ ಸಾಹಿತ್ಯ ಶಕ್ತಿ, ಪ್ರಕಟಣೆ ಮತ್ತು ಪ್ರದರ್ಶನ ಕೇಂದ್ರದಿಂದ ದೂರವೇ ಉಳಿದುಬಿಟ್ಟವರು ಚೊಕ್ಕಾಡಿಯವರು. ಅವರ ಬರಹದ ಮೊದಮೊದಲ ಕಾಲದಲ್ಲಿ ಬಹಳ ಉಜ್ವಲವಾಗಿ ಬೆಳಗುತ್ತಿದ್ದ ದ. ರಾ. ಬೇಂದ್ರೆಯವರು ಮತ್ತು ಗೋಪಾಲ ಕೃಷ್ಣ ಅಡಿಗರ ಕಾವ್ಯದ ಪ್ರಭಾವಕ್ಕೆ ಒಳಗಾಗಿಯೂ, ಅವುಗಳನ್ನು ದಾಟಿ ತನ್ನದೇ ಲಯವನ್ನು ಹಿಡಿಯಬೇಕಾದ ಸಂಕ್ರಮಣಕಾಲದಲ್ಲಿ ಇದ್ದವರು ಚೊಕ್ಕಾಡಿಯವರು. ಅದಲ್ಲದೆ ಸದಾ ಸೃಷ್ಟಿಶೀಲತೆಯ ಹಲವು ದಿಗ್ಗಜರ ನೆಲೆವೀಡಾದ ಕರಾವಳಿಯ ಸಾಂಸ್ಕೃತಿಕ ಪ್ರಭಾವ ಮತ್ತು ನಡಾವಳಿಗಳ ಮಧ್ಯೆ ಇವೆಲ್ಲವನ್ನೂ ಸೇರಿಯೂ ಇವುಗಳಿಗಿಂತ ಬೇರೆಯದೇ ಆಗಿ, ಬೆಳೆಯುತ್ತ ಬಂದಿದ್ದು ಇವರ ವಿಶೇಷ. ಚೊಕ್ಕಾಡಿಯವರಿಗೆ ಹೊಸಬರು, ಹಳಬರು, ಸ್ಥಾಪಿತರು, ಉದಯೋನ್ಮುಖರು ಎಂಬ ಎಲ್ಲ ‘ವರ್ಣ’ಬೇಧವಿಲ್ಲ. ಬರಿಯ ಸಾಹಿತ್ಯದಲ್ಲಿ ಅಲ್ಲ ಇವರು ನಿಜಜೀವನದಲ್ಲೂ ಸಮಾನತೆಯನ್ನು ಮೆರೆಯುವುದನ್ನು ನಾನು ಕಣ್ಣಾರೆ ಕಂಡಿರುವೆ. ‘ಬನ್ನಿ ಒಳಗೆ ಇಲ್ಲಿ ಕೂತುಕೊಳ್ಳಿ’ ಎಂದು ತಮ್ಮ ಪಕ್ಕದ ಕುರ್ಚಿಯಲ್ಲಿ ಕೂರಿಸಿ ಊಟದ ಮನೆಯಲ್ಲಿಯೇ ಎಲ್ಲರೊಡನೆ ನಮ್ಮ ವಾಹನಚಾಲಕನಿಗೂ ಉಣಬಡಿಸಿದರು.

ಸುತ್ತಮುತ್ತಲ ಸಮಾನ ಮನಸ್ಕ, ಹಿರಿ-ಕಿರಿಯರನ್ನು ಸೇರಿಸಿಕೊಂಡು ಸುಮನಸಾ ಸಾಹಿತ್ಯ ವೇದಿಕೆಯನ್ನು ಕಟ್ಟಿ ಅತ್ಯುತ್ತಮ ಸಾಹಿತ್ಯದ ಓದು, ವಿಮರ್ಶೆ, ಮತ್ತು ಸ್ವಂತರಚನೆಗಳಿಗೆ ಒಂದು ಸಮುದಾಯವನ್ನೇ ತಯಾರು ಮಾಡಿದ ಕೀರ್ತಿ ಚೊಕ್ಕಾಡಿಯವರಿಗೆ ಸಲ್ಲಬೇಕು.

ಇತ್ತೀಚೆಗೆ ಎಲ್ಲೋ ಓದಿದೆ. ನಾರ್ವೆದೇಶದ ದ್ವೀಪವೊಂದು ತನ್ನ ಊರು ಸಮಯಾತೀತವಾಗಿದೆ ಎಂದು ಘೋಷಿಸಿಕೊಳ್ಳಲು ಸಜ್ಜಾಗಿದೆಯಂತೆ. ಇದು ಪ್ರವಾಸೋದ್ಯಮದ ಹೊಸ ಆಶೆಬುರುಕುತನದ ಐಸ್‌ಕ್ಯಾಂಡಿ! ಕೊಳ್ಳಲು ಬಲ್ಲವರು ಹೊಸಹೊಸದಕ್ಕೆ ಚಾಚಿಕೊಳ್ಳುತ್ತ ಇರುವ ಈ ಹೊತ್ತಿನಲ್ಲಿ ಯಾರೂ, ಎಲ್ಲಿಯೂ, ಎಷ್ಟು ಹೊತ್ತಿಗೂ ಬೇಕೆಂದ ಕಡೆಗೆ ಬೇಕಾದ ರೀತಿಯಲ್ಲಿ ಹೋಗಲು ಇರಲು ಸಾಧ್ಯವಾಗುವ ಹಾಗೆ ಮಾಡುವ ಅತ್ಯಂತ ಸರಳ ವಿಧಾನವಾಗಿ ಕಾವ್ಯ ನಮಗಾಗಿಯೇ ಅನಾದಿಕಾಲದಿಂದ ಇದೆ. ಅಂತಹ ಕವಿತೆಗಳನ್ನು ನಮಗಿತ್ತ ಕವಿ ಚೊಕ್ಕಾಡಿಯವರಿಗೆ ಎಂಬತ್ತರ ಶುಭಾಶಯಗಳು.

ಈಗ ಅವರ ಕವಿತೆಗಳ ಬಗ್ಗೆ ಮಾಲಿನಿ ಗುರುಪ್ರಸನ್ನ ಮತ್ತಷ್ಟು ಮಾತನಾಡುತ್ತಾರೆ.

ಮಾಲಿನಿ ಗುರುಪ್ರಸನ್ನ …

ಕಾಯುವಿಕೆಯ ಬಂಧ. ಕಾಯುವಿಕೆಯಿಲ್ಲದ ಬಂಧ. ಕಾಯುವಿಕೆ ಎಂಬುದು ಚೊಕ್ಕಾಡಿಯವರ ಕಾವ್ಯದ ಮೂಲಸ್ರೋತ. ಅವರ ಎಲ್ಲ ಪದ್ಯಗಳಲ್ಲೂ ಈ ಕಾಯುವಿಕೆಯಿದೆ. ಏತಕಿಂತು ಎಂಬ ಶೀರ್ಷಿಕೆಯ ಪದ್ಯ ನೋಡಿ. ಅಲ್ಲಿ ಕಳೆದ ದಿನವ ಕತ್ತಲಲ್ಲಿ ಹುಡುಕುತ್ತಿರುವ ಅವರು ಬೆಳಕಿನ ಒಂದು ಸನ್ನೆಗಾಗಿ ಕಾಯುತ್ತಾರೆ. ಹಂಗು ಪದ್ಯವನ್ನು ನೋಡಿ. ಅದರಲ್ಲಿ ಅವರು ಮರದ ಕಾಯುವಿಕೆಯನ್ನು ಅದೆಷ್ಟು ಮಾರ್ಮಿಕವಾಗಿ ಹೇಳುತ್ತಾರೆ. ಮರವನ್ನೇ ಆಶ್ರಯ ಮಾಡಿಕೊಂಡು ಹಗಲಿನಲ್ಲಿ ರೆಕ್ಕೆ ಬಿಚ್ಚಿ ಆಗಸಕ್ಕೆ ಹಾರಿ ಮತ್ತೆ ಇಲ್ಲಿಗೆ ಹಿಂತಿರುಗಿ ತಮ್ಮೆಲ್ಲ ದುಗುಡಗಳನ್ನು ಕಟ್ಟಿ ಮರದ ಕೊಂಬೆಗೆ ನೇತು ಹಾಕಿ ನಿದ್ರೆಗೈಯ್ಯುವ ಹಕ್ಕಿಗಳು. ಹಾರಿದ ಹಕ್ಕಿಗಳ ಮರೆತು ತನ್ನ ಪಾಡಿಗೆ ತಾನು ನಿಂತಿರುವ, ಹಿಂತಿರುಗಿ ಬಂದ ಹಕ್ಕಿಗಳಿಗೆ ಆಶ್ರಯ ತಾಣವಾಗಿರುವ ಮರ ಅವೆರಡೂ ನಿದ್ರಿಸುವ ಹೊತ್ತಲ್ಲಿ ತಮ್ಮ ತಮ್ಮ ಚೈತನ್ಯವನ್ನು ಅದಲು ಬದಲು ಮಾಡಿಕೊಂಡು ಇತ್ತ ಮರ ಹಸಿರಾಗುತ್ತ ಅತ್ತ ರೆಕ್ಕೆ ಬಲಗೊಳ್ಳುತ್ತ ಹೋಗುವ ಪ್ರಕ್ರಿಯೆ ನಿಜವಾದ ಕಾಯುವಿಕೆಯಲ್ಲದ ಕಾಯುವಿಕೆ ! ಗೋಡೋ ಬಂದ ಪದ್ಯದಲ್ಲಿ ಕೊನೆಗುಳಿಯುವ ಅವರ ಕಾಯುವಿಕೆ ನೋಡಿ: ಒಣಗಿ ಜೋತು ಬಿದ್ದ ತೋರಣದಡಿಯಲ್ಲಿ ಹಿಂದಿರುಗಿದ ನಾವು / ಮತ್ತೆ ಕುಳಿತೆವು ಮುನ್ನಿನಂತೆಯೇ/ ಕಾಯುತ್ತ ಮುನ್ನಿನಂತೆಯೇ /ಶೂನ್ಯ ಬಯಲಿನ ಎದುರು ಬೀದಿಯ ಎದುರು ಮುನ್ನಿನಂತೆಯೇ…

ಇದು ಬೇರೆ ರೀತಿಯ ಕಾಯುವಿಕೆ. ಒಂದು ರೀತಿಯಲ್ಲಿ ವ್ಯರ್ಥ ಕಾಯುವಿಕೆ. ಇಂತಹುದೇ ಮತ್ತೂಂದು ಕಾಯುವಿಕೆಯನ್ನು ನಾವು ಯಾರೋ ಬರುತ್ತಾರೆಂದು ಸುಮ್ಮನೆ ಕಾದೆ ಪದ್ಯದಲ್ಲಿ ಕೂಡ ನೋಡಬಹುದು.

ಲೋಕಪ್ರಸಿದ್ಧ ಧ್ಯಾನಸ್ಥ ಪದ್ಯದಲ್ಲಿನ ಪಾರಿಜಾತದ ಕಾಯುವಿಕೆಯ ಸೊಬಗೇ ಬೇರೆ. ತ್ರಿಭಂಗಿ ನಿಲುವಿನಲ್ಲಿ ನಿಂತು ಆಕಾಶಕ್ಕೆ ಲಗ್ಗೆಯಿಟ್ಟ ದೇವಲೋಕದ ಪಾರಿಜಾತದ್ದು ಎಲ್ಲಿಂದ ಬಂದಿತೋ ಅಲ್ಲಿಯ ಕಡೆಗೇ ನೋಟ.

ಈ ಕಾಯುವಿಕೆಗೆ ಇರುವುದು ಹಂಬಲ ಮಾತ್ರ. ಅಲ್ಲಿಗೆ ಹೋಗಲಾಗದೆಂದು ಗೊತ್ತಿದ್ದೂ ಅದನ್ನೇ ಧ್ಯಾನಿಸುವ ಹಂಬಲ. ಈ ಕಾಯುವಿಕೆಯ ಅನನ್ಯತೆ ಮೈಮರೆಸುತ್ತದೆ.

ಅವರ ದಿನ ಹೀಗೆ ಜಾರಿದೆ ನೀನೀಗ ಬಾರದೆ ಪದ್ಯದಲ್ಲಿನ ಕಾಯುವಿಕೆಯ ರೀತಿ ಹೃದಯ ಕಲಕುವಂಥಾದ್ದು. ಅವರ ಎಲೆ ಪದ್ಯದಲ್ಲಿನ ಕಾಯುವಿಕೆ ನಿಜವಾಗಿಯೂ ಡಿವೈನ್‌.

ಎರಡೂ ದಡಗಳ ಜೀವ ಚಟುವಟಿಕೆಗಳ ಗದ್ದಲ

ಗಮನಿಸಿಯೂ ಗಮನಿಸದೆ

ನದಿಯೊಡನೆ ಅಂಟಿರದ ನಂಟ ಕಾಪಾಡುತ್ತ

ಆಗಸದ ಹಕ್ಕಿಗಳ ಚಿಲಿಪಿಲಿಯ

ಸ್ವರಗಳಲೆಗಳ ನಡುವೆ

ತನ್ನದೇ ಪೂರ್ಣತೆಯಲ್ಲಿ

ನಿರಂತರವಾಗಿ ಕಾಯುತ್ತಲೇ ಇದೆ ಎಲೆ.

ಪುಟ್ಟ ಮಗುವಿಗೆ

ಹೊಸ ಹಗಲಿನ ನಗುವಿಗೆ

ಇದು ನಿಜವಾದ ಕಾಯುವಿಕೆ. ಪ್ರಕೃತಿಯ ರೀತಿಯ ಕಾಯುವಿಕೆ. ಯಾವುದೇ ನಿರೀಕ್ಷೆಯಿಲ್ಲದ ಕಾಯುವಿಕೆ. ಇಂಥ ಕಾಯುವಿಕೆಯೇ ಸಂಬಂಧಗಳಲ್ಲಿ ಇರಬೇಕಾದ್ದಾ? ಗೊತ್ತಿಲ್ಲ. ಅವರ ಕವನಗಳನ್ನು ಓದಲು ಕಾಯುವ ನಿರೀಕ್ಷೆಯ ಸುಖ ನಮ್ಮದು. ಜನ್ಮದಿನದ ಶುಭಾಶಯಗಳು ಸರ್‌.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ