ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆಯನ್ನೆತ್ತಿಕೊಳ್ಳದೆ ಉಪನಿಷತ್ತು ವಿರಮಿಸುವಂತಿಲ್ಲ !

Team Udayavani, Sep 8, 2019, 5:30 AM IST

ನಾವು ಅನುಭವಿಸುತ್ತಿರುವ ಈ ನಮ್ಮ ಬದುಕು- ನಮ್ಮ ಅನುಭವಾಧೀನವಾಗಿದೆ ಎಂದು ಕಂಡುಬರುವ ಈ ಬದುಕು- ಇನ್ನೊಂದು ತುದಿಯಿಂದ ನೋಡಿದರೆ ಯಾರೋ ಒಡ್ಡಿದ ಒಂದು ದೊಡ್ಡ ಆಮಿಷದಂತೆಯೂ ಭಾಸವಾಗುವುದು! ಎರಡು ರೀತಿಗಳಲ್ಲಿ ಇದನ್ನು ನೋಡಬಹುದು. ಬದುಕಿನಲ್ಲಿ ಎಲ್ಲರೂ ಸುಖಾನುಭವವನ್ನೇ ಬಯಸುವರು. ಸುಖದ ಅನುಭವದಲ್ಲಿಯೇ ಸುಖವೆಂದರೇನೆಂಬ ಅದರ ಶೋಧನೆಯೂ ಆಳದಲ್ಲಿ ಅಡಗಿದ್ದರೂ ಆ ಶೋಧನೆಯತ್ತ ಯಾರೂ ಗಮನ ಹರಿಸರು. ಆದುದರಿಂದ ಮತ್ತೆ ಮತ್ತೆ ಬಯಸಿದ್ದನ್ನೇ ಬಯಸುವರು. ಅಂದರೆ, ಸುಖವೆಂಬುದು ಒಂದು ಅನುಭವವಾಗಿಯೂ ಆಮಿಷದಂತೆ ವರ್ತಿಸುವುದು!

ಬದುಕಿನಲ್ಲಿ ಸುಖಾನುಭವ ಮಾತ್ರವಲ್ಲ ದುಃಖ-ಸಂಕಟಗಳೂ ಇವೆಯಲ್ಲವೆ ಎಂದು ಕೇಳಬಹುದು. ಇದ್ದೇ ಇವೆ. ನಿಜ. ಈ ಸಂಕಟಗಳಲ್ಲಿ ಹಾಯುವಾಗ ಸಾಕುಸಾಕೆನಿಸುವುದೂ ನಿಜ. ಆದರೂ ಈ ದುಃಖದ ಕತ್ತಲೆಯೆಲ್ಲ ತೊಲಗಿ ಸುಖದ ಹಗಲು ಮೈದೋರಲಿದೆ ಎಂದು ಸುಖದ ಕನಸು ಕಾಣುತ್ತಲೇ ಇರುವೆವಲ್ಲದೆ- ಯಾಕೆ ಹೀಗೆಲ್ಲ ಆಗುತ್ತಿದೆ ನಮ್ಮಂಥ ಮನುಜರಿಗೆ ಎಂದು ಯಾರೂ ಶೋಧಿಸ ಹೊರಡುವುದಿಲ್ಲ. ಅಂದರೆ ಸುಖವೆಂಬುದೊಂದು ಆಮಿಷ. ಸುಖದ ಕನಸೂ ಆಮಿಷವೇ. ಆಮಿಷವು ಆಕರ್ಷಕ. ತನ್ನ ಆಕರ್ಷಕತೆಯನ್ನು ಸದಾ ಉಳಿಸಿಕೊಳ್ಳಲು ಯತ್ನಿಸುವುದೇ ಆಮಿಷದ ಲಕ್ಷಣ!ಯಾರು ಈ ಆಮಿಷವನ್ನು ಒಡ್ಡುವರು? ಯಾಕೆ ಒಡ್ಡುವರು? ಉಪನಿಷತ್ತು ಈ ಬಗೆಗೆ ಏನು ಹೇಳುವುದು? ನಚಿಕೇತನ ಕೇಳಿಕೆಯನ್ನು- ಅವನು ಕೇಳುತ್ತಿರುವ ಮೂರನೆಯವರನ್ನು- ಕೇಳಿ ಯಮನು ಒಮ್ಮೆಲೇ ಚಮತ್ಕೃತನಾದನು. ನಚಿಕೇತನ ಈ ಜಿಜ್ಞಾಸೆ ಅಷ್ಟು ಅನಿರೀಕ್ಷಿತವಾಗಿತ್ತು. ಆ ಜಿಜ್ಞಾಸೆ ಹೀಗಿತ್ತು :

ಮನುಜರೀ ಇಹದಿಂದ ತೆರಳಿದ ಮೇಲೆ ದೊಡ್ಡ ಸಂದೆಯವೊಂದು ಕಾಡುವುದು
ಇಹರೋ ಇಲ್ಲವೋ ಎಂಬ ಬಗೆಯಿಂದ.ಇಬ್ಬಣಗಳಿವೆ ವಾದಿಸುತಲೀ ಪರಿಯಲ್ಲಿ
ನಿಜವೇನು? ನೀ ಬಲ್ಲೆ. ಅರುಹು. ನೀ ತಿದ್ದು.ಈ ನಿಜವೆ ಬೇಕೆನಗೆ. ಇದೆ ಮೂರನೆಯ ಮಾತು ಸಾವಿನ ಅನಂತರ ಏನು ಎಂದು ಕೇಳುತ್ತಿದ್ದಾನೆ ಹುಡುಗ. ಇಹಕ್ಕೆ, ಸಂಸಾರಕ್ಕೆ, ಲೋಕಕ್ಕೆ ಸಾವೆಂಬುದು ಚಿರವಿದಾಯವೆ? ಸಾವಿನ ಭಯವೆಂಬ ಸಕಲ ಜೀವಿಗಳಿಗೂ ಸಹಜವಾದ ವಿದ್ಯಮಾನವು ಬದುಕುವ ಆಸೆಯಿಂದುಂಟಾದ ಬರಿಯ ಭಾವವಿಕಾರವೆ? ಅಥವಾ ಸಾವಿನಲ್ಲಿ ಅನಿರೀಕ್ಷಿತ, ಅಪರಿಚಿತ, ಅನೂಹ್ಯ ಅನುಭವಗಳು ಎದುರಾಗುವುವು ಎಂಬ ಸತ್ಯದ ಸೂಚನೆಯೆ? ಎಲ್ಲಕ್ಕಿಂತ ಹೆಚ್ಚಾಗಿ ಇದುವರೆಗಿನ ನಮ್ಮ ವ್ಯಕ್ತಿತ್ವವೇ ಸಾವಿನಲ್ಲಿ ಅಳಿಸಿಹೋಗುವುದೇ? ಅಳಿಸಿಹೋಗುವುದಾದರೆ, ಇದುವರೆಗೆ ನಮ್ಮದಿದು ಎಂದು ಭಾವಿಸಿಕೊಂಡಿರುವ ಈ ನಮ್ಮ ವ್ಯಕ್ತಿತ್ವವು ಕಲ್ಪಿತ ವ್ಯಕ್ತಿತ್ವವೆ? ಇದು ನಿಜವಾಗಿ ನಮ್ಮದಲ್ಲವೆ? ಬೇರೆಯೇ ವ್ಯಕ್ತಿಣ್ತೀವೊಂದು ಸಾವಿನಲ್ಲಿ ಅನಾವರಣಗೊಳ್ಳುವುದೆ? ಕಳೆದುಕೊಳ್ಳಲೇಬೇಕಾದುದನ್ನು ಕಳೆದುಕೊಳ್ಳದೆ- ಸಿಗಲೇಬೇಕಾದುದು ಸಿಗಲಾರದೆ?

ಕಳೆದುಕೊಂಬ-ಪಡೆದುಕೊಂಬ ಈ ಆಟವೇನಿದು? ಇದರ ನಿಜವೇನು? ಇಲ್ಲಿನ ವ್ಯಕ್ತಿತ್ವವು ನಾವು ನೀಗಿಕೊಳ್ಳಬೇಕಾದದ್ದು ಎಂಬ ಅರಿವಿನಲ್ಲಿ ಇಲ್ಲಿ ಬದುಕುವುದು ಕಡುಕಷ್ಟವಲ್ಲವೆ? ಕಷ್ಟವನ್ನು ಸಹಿಸಿಯೂ ಇದು ಸಾಧ್ಯವಾದರೆ, ಆಗ ಸಾವಿನ ಅನುಭವವು ಇಲ್ಲೇ ಪರೋಕ್ಷವಾಗಿ ಸಾಧಿತವಾಗುವುದೆ? ಅಂದರೆ ಭೌತಿಕವಾಗಿ ಎಂದೋ ನಡೆಯಲಿರುವ ಸಾವು, ಮಾನಸಿಕವಾಗಿ ಇಂದೇ ನಡೆದಂತಾಗುವುದೆ? ಯಮನೊಡನೆ ಭೇಟಿ ಎಂದರೆ ಇದೇ ಏನು? ಅಂದರೆ ಭೌತಿಕ ಕಾಲವನ್ನು ಮಾನಸಿಕ ಕಾಲವು ಮೀರಿ ನಡೆಯುವುದೆ? ಮತ್ತು ಭೌತಿಕ ಕಾಲವು ಮಾನಸಿಕ ಕಾಲವನ್ನು ಹಿಂಬಾಲಿಸುತ್ತಿದೆಯೆ? ಇಲ್ಲ ; ಇಹದಲ್ಲಿಯಾದರೋ ಭೌತಿಕ ಕಾಲವನ್ನು ಮನೋಕಾಲವೇ ಹಿಂಬಾಲಿಸುತ್ತಿರುವಂತೆ ಅನುಭವವಾಗುತ್ತಿದೆಯಲ್ಲ ! ಈ ಅನುಭವಕ್ಕೆ ಇನ್ನೊಂದು ಪ್ರತಿಮುಖವೂ ಇದೆ; ಮತ್ತು ಆ ಮುಖವೇ ನಿಜವೆ? ಮುಂದೆ ನಡೆಯಲಿರುವುದನ್ನು ಇಂದೇ ಕಾಣಬಲ್ಲ ಮನಸ್ಸು ಹಾಗೆ ಕಾಣುವಾಗ ತನ್ನ ಸಾವನ್ನೂ ಕಾಣುವುದೇ? ಸಾವಿನ ಅನುಭವವನ್ನು ಹೀಗೆ ಮಾನಸಿಕವಾಗಿ ಅನುಭವಿಸುವುದೇ ಹುಟ್ಟು-ಸಾವುಗಳ ನಡುವೆ ಹರಿಯುತ್ತಿರುವ ಈ ಮನುಜ ಬದುಕಿನ ಅತಿ ಗಹನವಾದ ಅನುಭವವೇ? ಈ ಅನುಭವದಲ್ಲಿ ಸಾವಿನ ಭಯವೆಂಬುದು ಕಳೆದುಹೋಗುವುದೇ? ಅನುಭವಿಸದೆ ಈ ಭಯವು ಕಳೆದುಹೋಗದೆ? ಅನುಭವದಲ್ಲಿ ಮುಳುಗಿದವನಿಗೆ ಯಾತರ ಭಯವೂ ಇಲ್ಲವೆ? ಅನುಭವಿಸಿ ಕಳೆದುಕೊಳ್ಳುವುದಕ್ಕಾಗಿಯೇ ಪ್ರಕೃತಿಯು ಈ ಭಯವನ್ನು ಜೀವಿಯ ಆಳದಲ್ಲಿ ಬಿತ್ತಿದೆಯೆ? ಭಯವಿಲ್ಲದೆ ಇದ್ದಾಗಲೇ ಮನಸ್ಸು ನಿಚ್ಚಳವಾಗಿ ಎಲ್ಲವನ್ನೂ ಗ್ರಹಿಸಬಲ್ಲುದೇ? ಹೀಗೆ ಬಿಡುಗಡೆಗೊಂಡು ನಿಚ್ಚಳವಾದ ಮನಸ್ಸಿನ ಮುಂದೆ ಮಾತ್ರ ಬದುಕಿನ ಆಳದ ರಹಸ್ಯಗಳೆಲ್ಲ ತಮ್ಮನ್ನು ತಾವು ತೆರೆದು ತೋರಿಸಿಕೊಳ್ಳಬಲ್ಲವೆ? ಹಾಗೆ ತೆರೆದುಕೊಂಡಾಗಲೇ ಅವೂ ತಾವು ನಿರಾಳವಾಗಬಲ್ಲುವಲ್ಲವೆ?

ಸಾವಿನ ದೊರೆಯಾದ ಯಮನು ಮತ್ತೆ ಚಮತ್ಕೃತನಾದನು. ಎಲ್ಲೋ ಅಡಗಿರುವ ಉತ್ತರವು ತಾನು ಪ್ರಕಟವಾಗುವುದಕ್ಕಾಗಿ ಹೇಗೆ ನಿಜವಾದ ಒಂದು ಪ್ರಶ್ನೆಯನ್ನು ಕಾದುಕೊಂಡು, ಹೊಂಚು ಹಾಕಿದಂತೆ ಅಡಗಿರುತ್ತದೆ ಎಂಬ ಭಾವ ಅವನಲ್ಲಿ ಹಾದುಹೋಗಿರಬೇಕು! ಸಾವು ಹೊಂಚು ಹಾಕಿದಂತೆ ಎಂದು ಮನುಜರ ಭಾಷೆ. ಈ ಭಾಷೆಯನ್ನು ಆತಂಕದಿಂದ ಆಡುವರೇನೋ. ಆದರೆ ಬದುಕನ್ನು ಸಾವಿನ ಹೊಂಚು ಎಂದು ಬಗೆದೆವಾದರೆ ಕ್ಷಣ ಕ್ಷಣವೂ ಜೀವಂತ!

ಯಮನು ನಚಿಕೇತನನ್ನು ಇನ್ನೊಮ್ಮೆ ನೋಡಿದನು. ಮಾನವರ ಸ್ತರದಲ್ಲಿ ಭೌತಿಕ ಕಾಲವನ್ನು ಮಾನಸಿಕ ಕಾಲವು ಹಿಂಬಾಲಿಸುತ್ತಿದೆ. ಅಂದರೆ ನಾವು ಕಾಲವಶರಾಗಿ ವರ್ತಿಸುವೆವು. ದೇವತೆಗಳ ಸ್ತರದಲ್ಲೂ ಇದು ಏಕೆ ನಡೆಯಬಾರದು? ಅತಿಥಿ ಸತ್ಕಾರವನ್ನು ಎಂದೂ ಮರೆಯದ ದೊಡ್ಡ ಗೃಹಸ್ಥನಾದ ಯಮನಿಗೆ ನಚಿಕೇತನನ್ನು ನೋಡುತ್ತಲೇ ಹುಡುಗನ ಮೇಲೆ ತಂದೆಯಂತೆ ವಾತ್ಸಲ್ಯ ಉಕ್ಕಿ ಬಂತು!
ಯಮನು ನಚಿಕೇತನನ್ನು ಇನ್ನೊಮ್ಮೆ ನೋಡಿದನು. ಮಾನವರ ಸ್ತರದಲ್ಲಿ ಭೌತಿಕ ಕಾಲವನ್ನು ಮಾನಸಿಕ ಕಾಲವು ಹಿಂಬಾಲಿಸುತ್ತಿದೆ. ಅಂದರೆ ನಾವು ಕಾಲವಶರಾಗಿ ವರ್ತಿಸುವೆವು. ದೇವತೆಗಳ ಸ್ತರದಲ್ಲೂ ಇದು ಏಕೆ ನಡೆಯಬಾರದು? ಅತಿಥಿ ಸತ್ಕಾರವನ್ನು ಎಂದೂ ಮರೆಯದ ದೊಡ್ಡ ಗೃಹಸ್ಥನಾದ ಯಮನಿಗೆ ನಚಿಕೇತನನ್ನು ನೋಡುತ್ತಲೇ ಹುಡುಗನ ಮೇಲೆ ತಂದೆಯಂತೆ ವಾತ್ಸಲ್ಯ ಉಕ್ಕಿಬಂತು!
“ನಿನ್ನನ್ನು ಯಮನಿಗೆ ಕೊಟ್ಟು ಬಿಟ್ಟಿದ್ದೇನೆ’- ಎಂಬೊಂದು ಮಾತಿನಿಂದ ಈ ಚರಿತ್ರೆ ಮೊದಲಾಗಿತ್ತು. ಯಮನ ಬಳಿಗೆ ತೆರಳಿದವರು ಮತ್ತೆ ಹಿಮ್ಮರಳುವುದುಂಟೆ?- ಎಂಬ ಲೋಕದ ಗ್ರಹಿಕೆ ಈ ಮಾತಿನಲ್ಲಿ ಅಡಗಿದ್ದಿರಬೇಕು. ಈಗ ನಚಿಕೇತನಾಡುತ್ತಿರುವ ಈ ಮೂರನೆಯ ಮಾತನ್ನು ಕೇಳಿದರೆ- ಮತ್ತೆ ಯಮನೊಡನೆಯೇ “ನನ್ನನ್ನು ಯಾರಿಗೆ ಕೊಡುತ್ತೀಯೆ’ ಎಂದು ಕೇಳುವಂತೆ ಇದೆ. ಈಗಲೀಗ ಯಮನಾದರೋ- ಕೈಗೆ ಬಂದ ಮಗ, ವಿರಕ್ತನಾದಾಗ ತಲ್ಲಣಗೊಂಡ ತಂದೆ-ತಾಯಿಯಂತಾಗಿಬಿಟ್ಟನು!

ನಚಿಕೇತನನ್ನು ಕುರಿತು ಯಮನ ಮುಖದಿಂದ ಈಗ ಕೇಳಬರುತ್ತಿದೆ- ನೀನು ಸಂಸಾರಕ್ಕೆ ಮರಳು ಮಗುವೆ ಎಂಬ ಮಾತು! ಈ ಪ್ರಶ್ನೆಯೊಂದನ್ನು ಬಿಟ್ಟುಬಿಡು, ಉತ್ತರಕ್ಕಾಗಿ ಪಟ್ಟು ಹಿಡಿಯಬೇಡ ಎಂಬ ಮಾತು! ಸತ್ತಮೇಲೆ ಏನುಳಿಯುತ್ತದೆ ಎಂಬ ಪ್ರಶ್ನೆಯನ್ನು ನಿನ್ನ ಈ ಎಳೆ ನಾಲಗೆಯಿಂದ ನಾನು ಕೇಳಬೇಕಾಗಿ ಬಂತೇ ಎಂಬ ಕಳಕಳಿಯ ಮಾತು! ಈ ಪ್ರಶ್ನೆಗೆ ಉತ್ತರವನ್ನು ಬಯಸದಿದ್ದರೆ ಅದಕ್ಕೆ ಬದಲಿಯಾಗಿ ನಿನ್ನ ಬದುಕಿನ ಕಾಲುವೆಯಲ್ಲಿ ಜೀವನರಸಧಾರೆಯನ್ನೇ ಹರಿಸುವೆನೆಂಬ ಮಾತು! ಯೌವನ, ಆರೋಗ್ಯ, ಮುಗಿಯದ ಐಸಿರಿ, ಧನ-ಕನಕ-ವಸ್ತು-ವಾಹನ-ಭೋಗ, ಗೆಳೆಯ-ಗೆಳತಿಯರ ಒಡನಾಟ, ಹಾಡು-ಹಸೆ-ಕುಣಿತ-ಮಣಿತ-ಕಾವ್ಯಕಲಾಪಗಳ ಅಭೂತಪೂರ್ವ ಸಮಾರಾಧನ, ಹೊತ್ತು ಮೂಡಿದ್ದು ; ಹೊತ್ತು ಮುಳುಗಿದ್ದೇ ತಿಳಿಯದೆಂಬಂಥ ಬದುಕಿನ ಸಂಭ್ರಮ, ಯಾವ ಕ್ಷೋಭೆಯೂ ಇಲ್ಲದ ಸಾಮ್ರಾಜ್ಯ, ಚಿರಜೀವಿತ- ಈ ಎಲ್ಲವನ್ನೂ ನೀಡುವೆನೆಂಬ ಮಾತು!

ಸಂಸಾರದ ಕಷ್ಟಗಳಿಗೆ ರೋಸಿ ಉಂಟಾಗಬಹುದಾದ ವೈರಾಗ್ಯವನ್ನೊಪ್ಪದೆ, ಕಷ್ಟಗಳಿಲ್ಲದಿದ್ದರೆ; ಸುಖವೇ ತುಂಬಿ ತುಳುಕುತ್ತಿದ್ದರೆ ವೈರಾಗ್ಯವು ಬರಲಾರದು ಎಂಬಂರ್ಥದಲ್ಲಿ ಗ್ರಹಿಸಿ, ನಿರಂತರ ಸುಖಾವಾಸವೆನ್ನುವಂತೆ ಸಾಂಸಾರಿಕ ಸುಖದ ಕಲ್ಪನೆಯನ್ನು ಮುಂದಿರಿಸಿ- ಇಂಥ ರಸ ಸಂದರ್ಭದಲ್ಲಿ ವಿರಕ್ತಿಯು ಇಣುಕಿಯಾದರೂ ನೋಡುವುದೇನು?- ಎಂದು ಕೇಳುವಂತಿದೆ ಯಮನ ಮಾತು. ಯಾರು ಒಡ್ಡುವರು ಈ ಆಮಿಷ? ಯಾಕೆ ಒಡ್ಡುವರು?- ಎಂಬ ಮಾತು ಹಿಂದೆ ಬಂದಿತ್ತು. ಆಹಾ! ಬಾಳೆಂಬುದು ಸಾವು ಒಡ್ಡಿದ; ಒಡ್ಡುತ್ತಿರುವ ಆಮಿಷ! ಎಂದು ಈಗ ಅರ್ಥವಾಯಿತು! ಯಾಕೆ ಒಡ್ಡುತ್ತಿದೆ?

ಸಾವು ಕರ್ತವ್ಯನಿರತವಾಗಿದೆ. ಕಾಲ ಪ್ರತಿಕ್ಷಣ ಸರಿಯುತ್ತಿದೆಯಲ್ಲವೆ? ಕಾಲವು ಸರಿಯುತ್ತಿರುವುದರಿಂದಲೇ ಹುಟ್ಟು-ಸಾವುಗಳೆಂಬ ಚಕ್ರ ತಿರುಗುತ್ತಿರುವುದಲ್ಲವೆ? ಚಕ್ರ ಎಂದಮೇಲೆ ಅದು ತಿರುಗಲೇಬೇಕಲ್ಲವೆ? ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆ; ಹುಟ್ಟುವ ಮೊದಲು ಏನಿತ್ತು ಎಂಬ ಪ್ರಶ್ನೆಯೂ ಆಗಿ, ಹುಟ್ಟು-ಸಾವುಗಳ ಚಕ್ರದ ಆಚೆಗೆ ಜಿಗಿಯುವ ದೊಡ್ಡದೊಂದು ಸಾಹಸದ ಮುಂಗಾಣೆRಯಾಗಿ- ಈ ಚಕ್ರವನ್ನು ತಿರುಗಿಸುವುದರಲ್ಲಿ ನಿರತವಾದ ಶಕ್ತಿಗಳು ಒಮ್ಮೆಲೇ ಬೆಚ್ಚುವಂತೆ ಮಾಡಬಲ್ಲ ಪ್ರಶ್ನೆಯೂ ಆಗಿದೆ !

ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆ ಲೋಕವೇ ಬೆಚ್ಚುವಂತೆ ಮಾಡಬಲ್ಲ ಪ್ರಶ್ನೆಯಾಗಿದೆ! ಈ ಪ್ರಶ್ನೆಯನ್ನೆತ್ತಿಕೊಳ್ಳದೆ ಉಪನಿಷತ್ತು ವಿರಮಿಸುವಂತಿಲ್ಲ.

ಬದುಕೆನ್ನುವುದು “ಕ್ಷಣಿಕ’ ಎನ್ನುವುದೇ ಸಾವಿನ ಕಾಣೆRಯಾಗಿರುವುದರಿಂದ, ವಿಚಿತ್ರವೆನ್ನುವಂತೆ, ಕ್ಷಣಿಕತೆಯೇ ವಿರಕ್ತಿಗಿಂತ ಹೆಚ್ಚಾಗಿ ಬದುಕಿನಲ್ಲಿ ರುಚಿಯನ್ನು ಉದ್ದೀಪಿಸುವ ಭಾವವೂ ಆಗಿರುವುದರಿಂದ, ಅಂದರೆ- ಮುಗಿಯುವ ಮುನ್ನ ಆದಷ್ಟು ಸವಿಯೋಣ ಎಂದು ತೀವ್ರವಾಗಿ ಅನ್ನಿಸುವುದರಿಂದ- ಬದುಕನ್ನು ಸವಿಯುವುದಿಲ್ಲವೇನು? ಎಂದು ಸಾವೇ ಕೇಳುತ್ತಿರುವಂತೆ ಉಪನಿಷತ್ತು ಚಿತ್ರಿಸುತ್ತದೆ!
ಯಮಧರ್ಮನ ಇಷ್ಟೆಲ್ಲ ಮಾತುಗಳಿಗೂ ತನ್ನ ಪ್ರಶ್ನೆಯ ಮಹಣ್ತೀವನ್ನು ಮತ್ತೂಮ್ಮೆ ತನಗೇ ಮನವರಿಕೆ ಮಾಡಿಕೊಟ್ಟಂತಾಯಿತೆಂದು ನಚಿಕೇತನಿಗೆ ಹೊಳೆಯಿತೆಂಬುದು, ಉಪನಿಷತ್ತು “ಶ್ರದ್ಧೆ’ಯನ್ನು ಲಾಲಿಸುವ ಹೃದ್ಯವಾದ ಪರಿ!
(ಉಪನಿಷತ್ತುಗಳ ಹತ್ತಿರದಿಂದ… ಅಂಕಣಕ್ಕೆ ತಾತ್ಕಾಲಿಕ ವಿರಾಮ )

-ಲಕ್ಷ್ಮೀಶ ತೋಳ್ಪಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಮೊನ್ನೆ ಕೇರಳದ ಚಲನಚಿತ್ರ ನಟಿ ಮಂಜು ವಾರಿಯರ್‌ತಂಡ ಇದೇ ಛತ್ರುವಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಸೆಟಲೈಟ್‌ ಫೋನಿನ ಮೂಲಕ ಅವರನ್ನು ರಕ್ಷಿಸಲಾಯಿತು ಎಂಬ...

  • ದೇವರು ಪ್ರಾಣಿಗಳನ್ನೆಲ್ಲ ಸೃಷ್ಟಿಸಿದ ಬಳಿಕ ಅವುಗಳ ಸಭೆ ಕರೆದ. ""ನಾನು ತುಂಬ ಶ್ರಮವಹಿಸಿ ಬೇರೆ ಬೇರೆ ವಿಧದ ಪ್ರಾಣಿಗಳನ್ನು ಸೃಷ್ಟಿಸಿದ್ದೇನೆ. ನಿಮಗಾಗಿ ಎಲ್ಲ...

  • (ಈ ಕತೆಯಲ್ಲಿ ವರ್ಷಕಾಲದ ಭೀಕರ ಚಿತ್ರಣವಿದೆ. ಇದು ಕತೆಯ ಪೂರ್ಣಪಾಠವಲ್ಲ.) ಸಿಡಿಲು ಗುಡುಗು, ಮಿಂಚು, ಗಾಳಿ, ಮಳೆ- ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು....

  • ಹೊಸ ಅಂಕಣ... ಪ್ರತಿದಿನ ಬೆಳಗ್ಗೆ ಏಳರ ಹೊತ್ತಿಗೆ 70 ಜನ ಕೂರಬಹುದಾದ ಎಟಿಆರ್‌ ವಿಮಾನವೊಂದು ಬೆಂಗಳೂರಿನಿಂದ ಕೊಚ್ಚಿನ್‌ ಮಾರ್ಗವಾಗಿ ಲಕ್ಷದ್ವೀಪ ಸಮೂಹದ ಅಗತ್ತಿ...

  • ತಿರುಗಾಟ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಹಜವಾಗಿ ನಮಗಾಗುವ ವೈವಿಧ್ಯಮಯ ಅನುಭವಗಳೂ ವಿಸ್ತೃತವಾಗುತ್ತವೆ. ಬಹುಶಃ "ದೇಶ ಸುತ್ತು ಕೋಶ ಓದು' ಎಂಬ ಗಾದೆ ನಮಗೆ ಅರ್ಥ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...