ಸಾವಿರದ ನಗೆ


Team Udayavani, Oct 13, 2019, 4:24 AM IST

e-2

ಸ್ಮಶಾನಗಳು ಕೂಡ ಪ್ರೇಕ್ಷಣೀಯ ಸ್ಥಳಗಳಾಗಬಲ್ಲವೆ? ಯಾಕಾಗಬಾರದು? ಯುರೋಪಿನ ರೊಮೇನಿಯಾ ದೇಶದ ಸಪಾಂತಾ ಎಂಬ ಹಳ್ಳಿಯಲ್ಲೊಂದು ಮಸಣಭೂಮಿ. ಈ ಊರಿಗೆ ಎಲ್ಲ ಪ್ರವಾಸಿಗರೂ ಸ್ಮಶಾನ ನೋಡಲಿಕ್ಕೆಂದೇ ಬರುವುದು !

ಮಲಗಿದ್ದಾಳೆ ನನ್ನ ಅತ್ತೇಮ್ಮ ಇಲ್ಲಿ,
ಈ ಶಿಲುಬೆಯ ಕೆಳಗೆ, ಜೋಕೆ!
ಮೂರು ದಿನ ಹೆಚ್ಚು ಬದುಕಿದ್ದರೆ,
ನಾನಲ್ಲಿರುತ್ತಿದ್ದೆ, ಇದನ್ನೋದುತ್ತಿದ್ದಳು ಆಕೆ
ಬದುಕೆಲ್ಲ ಪೀಡಿಸಿದ್ದಾಳೆ, ಅಪ್ಪಿ-
ತಪ್ಪಿಯೂ ಎಬ್ಬಿಸದಿರಿ ದಮ್ಮಯ್ಯ
ಎಬ್ಬಿಸಿದರೆ ಬಂದು ತಲೆ
ತಿಂತಾಳೆ ನನ್ನ ಅತ್ತೆಮ್ಮಯ್ಯ

ಒಂದಾದ ಮೇಲೊಂದರಂತೆ ಬರಹಗಳನ್ನೂ ಚಿತ್ರಗಳನ್ನೂ ನೋಡುತ್ತ ಹೋಗುತ್ತಿರುವಾಗ ಅದೊಂದು ಪದ್ಯ ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ಅದನ್ನು ಬರೆದವರು ಯಾರು? ಹೆಂಗಸೋ ಗಂಡಸೋ? ಹೆಂಗಸಾದರೆ ಆಕೆ ತನ್ನ ಗಂಡನ ತಾಯಿಯಿಂದ ಪಡಬಾರದ ವೇದನೆಯನ್ನೆಲ್ಲ ಉಂಡಿರಬೇಕು. ಈ ಮುದುಕಿ ಯಾಕಾದರೋ ನೆಗೆದುಬಿದ್ದು ಹೋಗೋಲ್ಲವೋ ಎಂದು ಆ ಹುಡುಗಿ ದಿನನಿತ್ಯ ಅತ್ತು ಕಣ್ಣೀರುಗರೆದು ಶಾಪ ಹಾಕಿರಬೇಕು. ಅಥವಾ ಅದನ್ನು ಬರೆದವರು ಗಂಡಸಾಗಿದ್ದರೆ? ತನ್ನ ಹೆಂಡತಿಯ ತಾಯಿಯಿಂದ ಆ ಪಾಪದ ಮನುಷ್ಯ ಅದೆಷ್ಟು ರಗಳೆ ತಿಂದಿದ್ದನೋ ಯಾರಿಗೆ ಗೊತ್ತು! ಬಹುಶಃ ಅದಕ್ಕೇ ಎಬ್ಬಿಸಬೇಡಿ ಎಂದು ಓದಿದವರಿಗೆ ದಮ್ಮಯ್ಯ ಹಾಕಿದ್ದಾನೆ. ಏನೇ ಇರಲಿ, ಅದು ಭಾರೀ ಘಾಟಿ ಹೆಂಗಸಾಗಿತ್ತು ಎಂಬುದರಲ್ಲೇನೂ ಸಂಶಯವಿಲ್ಲ. ಕಡೇ ಪಕ್ಷ ಒಬ್ಬರ ಬದುಕಿನಲ್ಲಾದರೂ ಆ ಅಜ್ಜಿ ಆಟವಾಡಿದೆ, ಕಿರುಕುಳ ಕೊಟ್ಟಿದೆ, ಸಂತಸಪಟ್ಟಿದೆ. ಈಗ ಇಲ್ಲಿ ಮಲಗಿದೆಯೆಂಬುದು ಆ ಸಾಲುಗಳನ್ನು ಬರೆದವರಿಗೆ ಅದೆಷ್ಟು ಖುಷಿ ತರುವ ವಿಷಯ!

ಪರದೇಶಗಳಲ್ಲಿ ಸ್ಮಶಾನವೆಂಬುದು ನಾಲ್ಕು ಗೋಡೆಗಳ ನಡುವಿನ ನಿರ್ಬಂಧಿತ ಪ್ರದೇಶವಾಗಿರುವುದಿಲ್ಲ. ಹೆಚ್ಚಿನೆಲ್ಲ ಮಸಣಗಳು ಊರ ನಡುವೆಯೇ ಪಾರ್ಕುಗಳ ಅಕ್ಕಪಕ್ಕದಲ್ಲಿರುತ್ತವೆ. ಅಲ್ಲಿ ಕಾಗೆ, ಹದ್ದುಗಳು ಹಾರಾಡುವುದಿಲ್ಲ. ಜನ ಕಸ-ತಿಪ್ಪೆ ಎಸೆಯುವುದಿಲ್ಲ. ನೋಡಿದರೆ ಅದೂ ಯಾರದ್ದೋ ಮನೆಯ ಜಾಗವೇ ಇರಬಹುದೇನೋ ಎನ್ನಿಸುವಷ್ಟು ಸ್ವತ್ಛವಾಗಿರುತ್ತವೆ. ಮಕ್ಕಳು ಅಲ್ಲಿ ಅಡ್ಡಾಡುತ್ತಾರೆ. ಪ್ರೇಮಿಗಳು ಕೆಲವೊಮ್ಮೆ ಆ ಸಮಾಧಿಗಳಿಗೆ ಬೆನ್ನೊರಗಿಸಿ ಪ್ರೇಮಸಲ್ಲಾಪದಲ್ಲೂ ತೊಡಗಿರುತ್ತಾರೆ! ಯಾವುದಾದರೂ ಗೋರಿಯ ಮೇಲೆ ತಾಜಾ ಹೂವುಗಳಿದ್ದರೆ ಅಲ್ಲಿ ಕುಟುಂಬಸ್ಥರು ಇಂದೋ ನಿನ್ನೆಯೋ ಭೇಟಿ ಕೊಟ್ಟಿದ್ದರು ಎಂದು ಭಾವಿಸಬಹುದು. ಅದೆಲ್ಲ ಇದ್ದರೂ ಆ ಸಮಾಧಿಗಳಲ್ಲಿ ಎಲ್ಲೋ ಅಪರೂಪಕ್ಕೆ ಕೀಟಲೆ ಅನ್ನಿಸುವ, ನಗು ತರಿಸುವ ಒಂದೆರಡು ಸಾಲುಗಳು ಸಿಗುತ್ತವೆ ಅಷ್ಟೆ. ಮಿಕ್ಕಂತೆ ಹೆಚ್ಚಿನೆಲ್ಲ ಸಮಾಧಿಶಿಲೆಗಳೂ ಖಾಲಿ ಖಾಲಿ. ಅಲ್ಲಿ, ಶಿಲೆಯ ಚಪ್ಪಡಿಯಡಿಯಲ್ಲಿ ಮಲಗಿದವರ ಹೆಸರೊಂದಿಗೆ ಹುಟ್ಟಿದ, ಸತ್ತ ದಿನಾಂಕಗಳಷ್ಟೇ ಇರುತ್ತವೆ. ಹುಟ್ಟುಸಾವುಗಳ ನಡುವಿನ ಜೀವನವನ್ನು ಒಂದು ಸಣ್ಣ – ಸಾಂಕೇತಿಸಿರುತ್ತದೆ.

ಸ್ವರ್ಗದಂಥ ಸಮಾಧಿ
ಈ ಕಪ್ಪುಬಿಳುಪು ಚಲನಚಿತ್ರದಂಥ ನಿರ್ವ ರ್ಣ ಸಮಾಧಿಗಳಿಗೆ ಅಪವಾದ ರೊಮೇನಿಯಾದ ಸಪಾಂತಾ ಎಂಬ ಹಳ್ಳಿಯಲ್ಲಿರುವ ಮಸಣಭೂಮಿ. ಆ ಹಳ್ಳಿ ದೇಶದ ರಾಜಧಾನಿಯಾದ ಬುಕಾರೆಸ್ಟ್‌ನಿಂದ ವಾಯುವ್ಯ ದಿಕ್ಕಿನಲ್ಲಿ 600 ಕಿಮೀಗಳಷ್ಟು ದೂರದಲ್ಲಿದೆ. ನೂರಿನ್ನೂರು ವರ್ಷಗಳ ಹಿಂದೆ ಇದ್ದ ಲೋಕದಿಂದ ಯಾವುದೋ ಹಳ್ಳಿಯೊಂದನ್ನು ಕಿತ್ತು ತಂದು ಇಲ್ಲಿಟ್ಟಿದ್ದಾರೋ ಎನ್ನಿಸುವಂಥ ಹಳೆಕಾಲದ ಊರು ಅದು. ಬೆಟ್ಟಗುಡ್ಡಗಳ ಸಾಲು, ದಟ್ಟನೆ ಬೆಳೆದ ಹುಲ್ಲು, ನಿರಾತಂಕ ಮೇಯುತ್ತಿರುವ ಹಸುಗಳು, ತಲೆ-ಕೊರಳುಗಳನ್ನು ಮುಚ್ಚುವಂಥ ಸ್ಕಾಫ್ì ಹಾಕಿ ಪೇಟೆಗೆ ಹೊರಟಿರುವ ಲಂಗದಾವಣಿಯ ಚೆಲುವೆಯರು, ಮನೆಮುಂದಿನ ಕಟ್ಟೆಯಲ್ಲಿ ಆರಾಮಾಗಿ ಕೂತು ಹೊಗೆಬತ್ತಿ ಸೇದುತ್ತ ಪಟ್ಟಾಂಗ ಹೊಡೆಯುತ್ತಿರುವ ವೃದ್ಧರು, ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಓಡಾಡುವ ಕುದುರೆ ಸಾರೋಟು, ಮಿಕ್ಕಂತೆ ಅಲ್ಲೆಲ್ಲೋ ದೂರದಲ್ಲಿ ಹುಡುಗರ ಕೆಲೆದಾಟದ ಸದ್ದು. ಬೆಂಗಳೂರಂಥ ಕಿಷ್ಕಿಂಧೆಯಿಂದ ಹೋದವರಿಗೆ ಅದು ಸ್ವರ್ಗ ಎನ್ನಿಸಿದರೂ ಯುರೋಪಿನ ಬಹುತೇಕ ಹಳ್ಳಿಗಳಿರುವುದೇ ಹಾಗೆ. ಸಪಾಂತಾದ ಚಿತ್ರ ಅಲ್ಲಿನ ಯುರೋಪಿಯನ್ನರಿಗೇನೂ ವಿಶೇಷ ಎನ್ನಿಸಲಿಕ್ಕಿಲ್ಲ. ಆದರೂ ಅಲ್ಲಿ ನಿತ್ಯ ಪ್ರವಾಸಿಗರು ಎಲ್ಲೆಲ್ಲೋ ದೂರ ದೂರುಗಳಿಂದ ಹುಡುಕಿಕೊಂಡು ಬರುತ್ತಾರೆ. ಬಸ್ಸಿಳಿದ ಮಂದಿ ಕಣ್ಣಿಗೆ ಕಾಣಸಿಗುವ ಯಾರಾದರೂ ಊರವರಲ್ಲಿ ನಿಮ್ಮ… ಆ ಸ್ಮಶಾನ… ಎಂದರೆ ಸಾಕು, ಊರವರು ಹೀಗೆ ಹೋಗಿ, ಎಡಕ್ಕೆ ತಿರುಗಿ, ಅಲ್ಲಿ ಮೂಲೆಯಲ್ಲಿ ಬಲಕ್ಕೆ ತಿರುಗಿ ಎಂದೆಲ್ಲ ಹೇಳಿ ನಿರ್ದೇಶನ ಕೊಟ್ಟಾಗುತ್ತದೆ. ಯಾಕೆಂದರೆ ಈ ಊರಿಗೆ ಎಲ್ಲ ಪ್ರವಾಸಿಗರೂ ಬರುವುದು ಸ್ಮಶಾನ ನೋಡಲಿಕ್ಕೆಂದೇ ಎಂಬುದು ಊರಿನ ನಾಯಿ ಬೆಕ್ಕುಗಳಿಗೂ ಗೊತ್ತಿದೆ! ಕೇವಲ ಸ್ಮಶಾನಮಾತ್ರದಿಂದ ಹೀಗೆ ಹೆಸರು ವಾಸಿಯಾದ ಊರುಗಳು ಜಗತ್ತಿನಲ್ಲಿ ಎಷ್ಟಿವೆಯೋ ಗೊತ್ತಿಲ್ಲ!

ಅಂದ ಹಾಗೆ ಆ ಸ್ಮಶಾನದ ವಿಶೇಷ ಏನಪ್ಪಾ ಎಂದರೆ ಅದು ನೋವು ಮರೆಸುವ ಸ್ಮಶಾನ. ನಗೆಯಾಡಿಸುವ ಸ್ಮಶಾನ. ಅಲ್ಲಿರುವುದು ಒಂದು ಸಣ್ಣ ಚರ್ಚು ಮತ್ತು ಅದರ ಹಿತ್ತಲಲ್ಲಿ ಸಾವಿರಕ್ಕೂ ಹೆಚ್ಚು ಗೋರಿಗಳು. ಬೇರೆಡೆಗಳಲ್ಲಿ ಶಿಲೆಯ ಫ‌ಲಕಗಳಿದ್ದರೆ ಇಲ್ಲಿರುವುದೆಲ್ಲ ಅಪ್ಪಟ ಓಕ್‌ ಮರದಿಂದ ಮಾಡಿದ ಫ‌ಲಕಗಳು. ಸಾವಿರ ಓಕ್‌ ಮರಗಳ ತೋಪಿನಂತೆ ಕಾಣುವ ಇದರಲ್ಲಿ ಎದ್ದುಕಾಣುವ ಬಣ್ಣ ಅಚ್ಚನೀಲಿ. ಅದನ್ನು ಸಪಾಂತಾ ನೀಲಿ ಎಂದೇ ಕರೆಯುತ್ತಾರಂತೆ. ಸ್ಮಶಾನವೋ ಸರ್ಕಸ್‌ ಜೋಕರುಗಳ ಬಟ್ಟೆಗಳನ್ನಿಟ್ಟ ಕಪಾಟೋ ಎಂದು ಗಲಿಬಿಲಿಯಾಗುವಂತೆ ಅಲ್ಲಿ ಕೆಂಪು, ಹಳದಿ, ನೀಲಿ, ಹಸಿರು, ಬಿಳಿ…ಬಣ್ಣಗಳ ಭರಾಟೆ. ಎಲ್ಲ ಶಿಲುಬೆಗಳ ಎತ್ತರವೂ ಹೆಚ್ಚುಕಡಿಮೆ ಒಂದೇ. ಪ್ರತಿ ಸಮಾಧಿಫ‌ಲಕದ ಮೇಲೂ ಒಂದೋ ಎರಡೋ ಚಿತ್ರ. ಚಿತ್ರದ ಕೆಳಗೆ ನಾಲ್ಕು ಸಾಲು. ಕೆಲವಕ್ಕೆ ಎಂಟೊಂಬತ್ತು ಸಾಲುಗಳ ದೀರ್ಘ‌ ಚರಮಗೀತೆ. ಲೂವ್ರ್ ಅಥವಾ ಲಂಡನ್‌ ಮ್ಯೂಸಿಯಮ್ಮಿನಲ್ಲಿ ಕಲಾಕೃತಿಗಳನ್ನು ಗಮನಿಸುತ್ತ ಮೆಚ್ಚುತ್ತ

ನಿಧಾನವಾಗಿ ಸಾಗುವ ಕಲಾರಸಿಕರಂತೆ ಜನ ಇಲ್ಲಿ ಆ ಶಿಲುಬೆಗಳ ಮಧ್ಯದಲ್ಲಿ ಒಂದೊಂದೇ ಫ‌ಲಕಗಳನ್ನು ನೋಡುತ್ತ ತುಟಿಯಂಚಲ್ಲಿ ನಗುತ್ತ ಮುಂದೆ ಸಾಗುತ್ತಾರೆ. ದೂರದಿಂದ ನೋಡುವವರಿಗೆ ಚಲನೆ-ನಿಶ್ಚಲನೆ, ಮೃತ್ಯು-ಜೀವನ ಹೀಗೆ ಏನೇನೋ ದ್ವಂದ್ವಗಳನ್ನೆಬ್ಬಿಸಿ ವಿಚಿತ್ರ ಅನುಭೂತಿ ಸೃಷ್ಟಿಸುವ ಸನ್ನಿವೇಶ.

ಸಾವಿನೊಂದಿಗೆ ಹಾಸ್ಯ
ಸ್ಟಾನ್‌ ಇಯಾನ್‌ ಪಾತ್ರಾಸ್‌ ಹುಟ್ಟಿದ್ದು 1908ರಲ್ಲಿ, ಅದೇ ಊರಲ್ಲಿ. ತನ್ನ 14ನೇ ವಯಸ್ಸಿನಲ್ಲಿ ಆ ಹುಡುಗ ಊರ ಸ್ಮಶಾನಕ್ಕಾಗಿ ಶಿಲುಬೆ ಕೆತ್ತುವ ಕಾಯಕ ಶುರುಮಾಡಿದನಂತೆ. ಬಹುಶಃ ಅವನ ತಂದೆಯ ಕಾಯಕ ಅದಿದ್ದಿರಬೇಕು. ಮೊದಮೊದಲು ಅವನು ಕೆತ್ತಿದ್ದು ಸಾದಾಸೀದಾ ಫ‌ಲಕಗಳನ್ನೇ. ಆದರೆ, ತನ್ನ 27ನೆಯ ವಯಸ್ಸಿನಲ್ಲಿದ್ದಾಗ ಹುಡುಗನಿಗೆ ಒಂದು ಹುಂಬ ಧೈರ್ಯ ಬಂತು. ಶಿಲುಬೆಗಳ ಮೇಲೆ ಯಾಕೆ ಒಂದಷ್ಟು ಕೈಚಳಕ ತೋರಿಸಬಾರದು ಅನ್ನಿಸಿತು. ನಡುವಯಸ್ಕನೊಬ್ಬ ಕುಡಿತ ಹೆಚ್ಚಾಗಿ ಸತ್ತಿದ್ದ. ಸ್ಟಾನ್‌, ಸತ್ತಿದ್ದ ಆ ಕುಡುಕನ ಶಿಲುಬೆ ಮಾಡುವಾಗ ತನ್ನ ಕ್ರಿಯಾಶೀಲತೆ ತೋರಿಸಿದ. ಕುಡುಕನ ಚಿತ್ರ ಬರೆದು ಬಣ್ಣ ಕೊಟ್ಟು, ಅದರ ಕೆಳಗೆ ಒಂದೆರಡು ಹಸಿ ಹಸಿ ಹಾಸ್ಯದ ಸಾಲುಗಳನ್ನು ಸೇರಿಸಿದ. ಸಾರಾಸಗಟಾಗಿ ತಿರಸ್ಕೃತವಾಗುತ್ತದೆ ಎಂದು ಭಾವಿಸಿದ್ದವನಿಗೆ ಅಚ್ಚರಿಯಾಗುವಂತೆ ಆ ಶಿಲುಬೆ ಕುಡುಕನ ಮನೆಯವರಿಗೆ ಇಷ್ಟವಾಯಿತು. ಸತ್ತವನ ಜೀವನದ ನಗ್ನಸತ್ಯವನ್ನು ಈ ಶಿಲುಬೆ ಎತ್ತಿ ತೋರಿಸುವಂತಿದೆ ಎಂದು ನೋಡಿದವರೂ ಮೆಚ್ಚಿ ಬೆನ್ನು ತಟ್ಟಿದ್ದರು. ಸ್ಟಾನ್‌ ಹೀಗೆ ಹೊಸ ಕೆಲಸಕ್ಕೆ ತೆರೆದುಕೊಂಡ.

ಅಲ್ಲಿಂದ ಮುಂದಕ್ಕೆ ಆತ ವಿರಮಿಸಲೇ ಇಲ್ಲ. ಊರಲ್ಲಿ ಯಾರಾದರೂ ಪರಮನೆಂಟಾಗಿ ವಿರಮಿಸಿದರು ಎಂದರೆ ಸ್ಟಾನ್‌ಗೆ ಮೈತುಂಬ ಕೆಲಸ! ಪಕ್ಕದ ಕಾಡಿನಿಂದ ಒಳ್ಳೆಯ ಜಾತಿಯ ಓಕ್‌ ಮರವನ್ನು ತಾನೇ ಖುದ್ದಾಗಿ ಕತ್ತರಿಸಿ ತಂದು ಹಲಗೆ ಮಾಡಿ ಅದರಲ್ಲಿ ಸತ್ತವರ ಬದುಕಿನ ವಿವರಗಳನ್ನು ಚಿತ್ರದಲ್ಲೂ ಅಕ್ಷರಗಳಲ್ಲೂ ಬರೆದು ಬಣ್ಣ ತುಂಬಿ ಶಿಲುಬೆ ತಯಾರಿಸುವುದೆಂದರೆ ಅದು ಮೂರ್ನಾಲ್ಕು ವಾರಗಳನ್ನು ಬೇಡುವ ಕೆಲಸ. ಆದರೆ, ಅದರಲ್ಲಿ ಸ್ಟಾನ್‌ಗೆ ಏಕತಾನತೆಯೇನೂ ಕಾಡಲಿಲ್ಲ. ಸತ್ತವರಿಗಾಗಿ ಹೀಗೆ ಶಿಲುಬೆ ತಯಾರಿಸುವುದೇ ಅವನ ನಿತ್ಯದ ಕಾಯಕವಾಗಿಬಿಟ್ಟಿತು. ಮುಂದಿನ ನಲವತ್ತು ವರ್ಷಗಳ ಕಾಲ ಸ್ಟಾನ್‌ ಬಿಟ್ಟೂಬಿಡದೆ ಅದೊಂದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತ ಬಂದ! ಲೋಕದಲ್ಲೇನು ಸಾವಿಗೆ ಬರವೇ!

ನೋಡಿ ಇವನು ಇಯಾನ್‌ ತೊದೇರೂ,
ಕುದುರೆಗಳೆಂದರೆ ಇವನಿಗಿಷ್ಟ.
ಮತ್ತೂಂದು ಸಂಗತಿಯೂ ಇಷ್ಟ – ಬಾರಲ್ಲಿ
ಹೆರವರ ಹೆಂಡತಿಯರೊಂದಿಗೆ ಕೂರುವುದು
– ಇದು ಸ್ಟಾನ್‌ ಬರೆದ ಒಂದು ಫ‌ಲಕ! ಇನ್ನೊಂದು:
ತುಂಬ ದುಡ್ಡು ಗಳಿಸಲೆಂದು
ಹೋದೆನು ಪರವೂರಿಗೆ
ಅಲ್ಲಿ ಲಾರಿ ಬಡಿದು ಸತ್ತೆ
ದುಡ್ಡು ಬೇಕು ಯಾರಿಗೆ?

ಸ್ಟಾನ್‌ ಬರೆದ 800ಕ್ಕೂ ಹೆಚ್ಚಿನ ಫ‌ಲಕಗಳಲ್ಲಿ ಒಂದಕ್ಕಿಂತ ಒಂದು ಭಿನ್ನ. ಕೆಲವು ಸಾವುಗಳು ಸಹಜ. ಕಾರಣ ವೃದ್ಧಾಪ್ಯ. ಇನ್ನು ಕೆಲವು ಅಪಘಾತಗಳು. ಲಾರಿಯೋ ಕಾರೋ ಢಿಕ್ಕಿ ಹೊಡೆದು ಜೀವ ಕಳೆದುಕೊಂಡವರ ಕತೆಗಳು. ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ಬೀದಿಗೆ ಬಿದ್ದು ಸತ್ತವನು, ಕುಡಿದು ಹೆಚ್ಚಾಗಿ ಕಾಯಿಲೆ ಬಿದ್ದು ಸತ್ತವನು, ನಡುವಯಸ್ಸಿನಲ್ಲೇ ಹೃದಯಾಘಾತವಾಗಿ ಸತ್ತವನು, ಯುದ್ಧಕ್ಕೆ ಹೋದ ಗಂಡನ ನೆನಪಿನಲ್ಲಿ ಕೊರಗಿ ಕಾದು ಸತ್ತವಳು… ಹೀಗೆ ಒಬ್ಬೊಬ್ಬರ ಸಾವಿನ ಹಿಂದೆಯೂ ಒಂದೊಂದು ಕತೆ, ಒಂದೊಂದು ವ್ಯಥೆ. ಐದೇ ಐದು ಸಾವಿರ ಜನಸಂಖ್ಯೆ ಇರುವ ಹಳ್ಳಿಯಾದ್ದರಿಂದ ಆ ಊರಲ್ಲಿ ಎಲ್ಲರ ಕತೆ, ಉಪಕತೆ, ಒಳಕತೆಗಳೂ ಎಲ್ಲರಿಗೂ ಗೊತ್ತು. ಹಾಗಾಗಿ, ಸತ್ತವರ ಫ‌ಲಕಗಳಲ್ಲಿ ಸ್ಟಾನ್‌ ವಾಸ್ತವ ಬರೆದಾಗ ಯಾರೂ ಆಕ್ಷೇಪ ಎತ್ತಲಿಲ್ಲ. ಕೆಲವರಂತೂ ತಮ್ಮ ಫ‌ಲಕಗಳಲ್ಲಿ ಸ್ಟಾನ್‌ ಸತ್ಯ ಬರೆಯಲಿ ಎಂದೇ ಗುಟ್ಟಾಗಿ ಬಯಸುತ್ತಿದ್ದರಂತೆ! ನಮ್ಮವನ ಫ‌ಲಕದಲ್ಲಿ ಏನಾದರೂ ಭಿನ್ನವಾದದ್ದನ್ನು ಬರೆ; ಈಗಾಗಲೇ ಬರೆದಿರುವ ಹಳೆ ಸಾಲು ಯಾವುದೂ ಬೇಡ ಎಂದು ಕೆಲವರು ಡಿಮ್ಯಾಂಡೂ ಇಡುತ್ತಿದ್ದರಂತೆ. ಪುಟ್ಟ ಹಳ್ಳಿಯವರ ಬದುಕಿನಲ್ಲಿ ಎಷ್ಟು ವೈವಿಧ್ಯ ಇರಲು ಸಾಧ್ಯ? ಆದರೂ ಸ್ಟಾನ್‌ ತನ್ನ ಕೆಲಸವನ್ನು ಸಾಯುವವರೆಗೂ ನಿಷ್ಠೆಯಿಂದ, ಅತ್ಯಂತ ಪ್ರಾಮಾಣಿಕವಾಗಿ ಮಾಡಿದ.

ತನ್ನ ಕೊನೆಗಾಲ ಸಮೀಪಿಸಿದೆ ಎಂಬುದು ಗೊತ್ತಾದಾಗ ತನ್ನ ಶಿಲುಬೆಯ ಹಲಗೆ ಯನ್ನು ತಾನೇ ಹದ ಮಾಡಿ ಚಿತ್ರ ಬರೆದು ಒಂದು ಕವಿತೆಯನ್ನೂ ಬರೆದು ತಯಾರಾಗಿಟ್ಟ.

ಅವನು 1977ರಲ್ಲಿ ಸತ್ತಾಗ ಊರ ಜನ ಅವನನ್ನು ಸಮಾಧಿ ಮಾಡಿ, ಅವನೇ ತಯಾರಿಸಿಟ್ಟಿದ್ದ ಆ ಫ‌ಲಕವನ್ನು ಅಲ್ಲಿ ನಿಲ್ಲಿಸಿ ಅವನಿಗಾಗಿ ನಾಲ್ಕು ಹನಿ ಕಣ್ಣೀರು ಹಾಕಿದರು. ಸ್ಟಾನ್‌ ತೀರಿಕೊಂಡ ಮೇಲೆ ಅವನ ಕಾಯಕವನ್ನು ಶಿಷ್ಯ ದುಮಿತ್ರು ಪೊಪ್‌ ಟಿಂಚು ಎಂಬಾತ ಮುಂದುವರಿಸಿದ್ದಾನೆ. ಸ್ಮಶಾನದಲ್ಲಿ ಗೋರಿಗಳ ಸಂಖ್ಯೆ ಸಾವಿರ ದಾಟಿದೆ. ಸ್ಟಾನ್‌ ಬಳಸುತ್ತಿದ್ದ ಬಣ್ಣಗಳ ಸಂಯೋಜನೆ, ಹಕ್ಕಿ-ಹೂವುಗಳ ಸಂಕೇತಗಳ ಬಳಕೆ, ನಗೆಯುಕ್ಕಿಸುವ ಪದ್ಯಗಳ ರಚನೆ- ಇವನ್ನೆಲ್ಲ ಶಿಷ್ಯನೂ ಮುಂದುವರಿಸಿದ್ದಾನೆ. ಒಂದೊಂದು ಶಿಲುಬೆಯ ರಚನೆಗೂ 30ರಿಂದ 50 ಸಾವಿರ ರೂಪಾಯಿಗಳಷ್ಟು ಖರ್ಚು ತಗುಲುತ್ತದೆ. ವರ್ಷದಲ್ಲಿ 15ರಿಂದ 20 ಸಾವುಗಳು ಮಾಮೂಲಿಯಾದ್ದರಿಂದ ದುಮಿತ್ರುವಿಗೆ ಕೂಡ ಕೈತುಂಬ ಕೆಲಸ ಇದ್ದೇ ಇದೆ. ಅವನಿಗೀಗ 65 ವರ್ಷ. ಶಿಷ್ಯನೊಬ್ಬನನ್ನು ತಯಾರು ಮಾಡಬೇಕು, ತಾನು ವಿರಮಿಸಬೇಕು ಎಂದು ಅವನಿಗೂ ಅನ್ನಿಸಿದೆ. ಏನೇ ಇರಲಿ, ಇಂಥವರೊಬ್ಬರು ಊರಲ್ಲಿದ್ದರೆ ಸತ್ತ ಮೇಲೆ ಹೇಗೋ ಏನೋ ಎಂದು ಯಾರೂ ಚಿಂತೆಯಿಂದ ಕೊರಗಬೇಕಾದ್ದಿಲ್ಲ; ಸತ್ತ ಮೇಲೂ ನಾಲ್ಕು ಜನರ ತುಟಿಯಂಚಿನಲ್ಲಿ ನಗೆಯುಕ್ಕಿಸುವಂತೆ ಅಜರಾ-ಮರರಾಗಿ ಮಲಗಿರಬಹುದು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.