ಟ್ರಾಫಿಕ್‌ ಜಾಮ್‌ಗಳು ಇನ್ನು ಆಗಸದಲ್ಲೂ ಆದರೆ ಅಚ್ಚರಿಯಿಲ್ಲ !

ದಿಲ್‌ವಾಲೋಂಕೀ ದಿಲ್ಲಿ

Team Udayavani, Jul 7, 2019, 5:00 AM IST

m-6

ಶೂಟೌಟ್‌ ಅಟ್‌ ವಡಾಲಾ ಚಿತ್ರದಲ್ಲಿ ಮಾನ್ಯಾ ಸುರ್ವೇ ಪಾತ್ರವು ಅಬ್ಬರಿಸುವ ಇಂಥದ್ದೊಂದು ಡೈಲಾಗಿದೆ. ಮುಂಬೈ ಭೂಗತಪಾತಕಿಗಳ ಲೋಕದಲ್ಲಿ ಬಹುತೇಕ ಎಲ್ಲರಿಗೂ “ಮುಂಬೈ ಕಾ ಬಾಪ್‌’ ಆಗುವ ಖಯಾಲಿ ಯಾಕೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ಆದರೆ, ಇದ್ದಿದ್ದಂತೂ ಸತ್ಯ. ಮುಂಬೈ ಇಂಥ ಕಲ್ಪನೆಗೊಂದು ಉದಾಹರಣೆ ಮಾತ್ರ. ದೇಶದ ಉಳಿದ ಮಹಾನಗರಗಳಲ್ಲಿ ಇಂಥ ನೋಟಗಳು ಮೇಲ್ನೋಟಕ್ಕೆ ಕಾಣದಿದ್ದರೂ ಆಂತರ್ಯದಲ್ಲಿ ಇವೆಲ್ಲದರ ಇರುವಿಕೆಯನ್ನು ತಳ್ಳಿಹಾಕಲಂತೂ ಆಗುವುದಿಲ್ಲ. ಇಂದು ಮಹಾನಗರಿಗಳೆಂದರೆ ಸಂಪತ್ತಿನ ಗಣಿ. ಮಹಾನಗರಿಗಳೆಂದರೆ ನಿರಂತರವಾಗಿ ಬಂದುಹೋಗುತ್ತಿರುವ, ಅಲ್ಲಿ ನೆಲೆಸಿದರೂ ನಗರವನ್ನು ತಮ್ಮದಾಗಿಸಿಕೊಳ್ಳದ, ಮಹಾನಗರಿಯ ಅನ್ನ ತಿನ್ನುತ್ತಿದ್ದರೂ ಮಣ್ಣಿನೊಂದಿಗೆ ಪರಕೀಯ ಭಾವವನ್ನು ಮೈಗೂಡಿಸಿಕೊಂಡಿರುವ ಗೊಂದಲಮಯ ಜನಜಂಗುಳಿಯ ತಾಣ. ಹೀಗಿದ್ದಾಗ ಮಹಾನಗರಿಯೊಂದನ್ನು ಶಾಶ್ವತವಾಗಿ ತನ್ನ ಬಿಗಿಹಿಡಿತದಲ್ಲಿಟ್ಟುಕೊಳ್ಳಲು ಓರ್ವ ವ್ಯಕ್ತಿಯೋ, ಸಂಸ್ಥೆಯೋ, ಉದ್ಯಮವೋ, ವ್ಯವಸ್ಥೆಯೋ ಒಳಗೊಳಗೇ ಹಪಹಪಿಸುತ್ತಿದ್ದರೆ ಅಚ್ಚರಿಯೇನಿಲ್ಲ.

ಹಾಗಿದ್ದರೆ “ದಿಲ್ಲಿ’ ಯಾರದ್ದು?
ಎಲ್ಲಾ ಮಹಾನಗರಗಳಂತೆ ದಿಲ್ಲಿ ಶಹರವೂ ಕೂಡ ಎಲ್ಲರಿಗೆ ಸೇರಿಯೂ, ಯಾರಿಗೂ ಸೇರದ್ದು ! ಶಹರದಲ್ಲೊಮ್ಮೆ ಸುಮ್ಮನೆ ನಡೆದಾಡಿದರೆ ಸಾಕು. ಜಗತ್ತಿನ ಮತ್ತು ದೇಶದ ಮೂಲೆಮೂಲೆಗಳಿಂದ ಅದೆಷ್ಟು ಮಂದಿ ಈ ದಿಲ್ಲಿಯೆಂಬ ಶಹರದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ ಎಂಬುದು ಅಚ್ಚರಿಯಾಗುತ್ತದೆ. ಕಟ್ಟಡ ಕಾಮಗಾರಿಗಳ ಸೈಟುಗಳಲ್ಲಿ ದುಡಿಯುತ್ತಿರುವ ಬಿಹಾರ, ಉತ್ತರಪ್ರದೇಶ ಮೂಲದ ಕೂಲಿಕಾರ್ಮಿಕರು, ಮೋಮೋ ಸ್ಟಾಲುಗಳನ್ನು ಹಾಕಿರುವ ನೇಪಾಲಿ ಮೂಲದವರು, ಮನೆಕೆಲಸಗಳಲ್ಲಿ ತೊಡಗಿಕೊಂಡಿರುವ ಜಾರ್ಖಂಡ್‌-ಛತ್ತೀಸ್‌ಗಢ ಮೂಲದ ಹೆಂಗಸರು, ಉದ್ಯಮಗಳಲ್ಲಿ ವ್ಯಸ್ತರಾಗಿರುವ ಗುಜರಾತಿಗಳು, ಚಿಕ್ಕಪುಟ್ಟ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಈಶಾನ್ಯ ಭಾಗದವರು, ಹೊಟೇಲುಗಳಲ್ಲಿ ಕಾಣಿಸಿಕೊಳ್ಳುವ ದಕ್ಷಿಣಭಾಗದವರು… ಹೀಗೆ ದಿಲ್ಲಿ ಶಹರವೆಂಬುದು ಒಂದು ರೀತಿಯಲ್ಲಿ ಮಿನಿ ಭಾರತವೇ. ಇಡೀ ದೇಶವನ್ನೇ ತನ್ನೊಡಲಿನಲ್ಲಿ ಹುದುಗಿಸಿಕೊಂಡ ಪುಟ್ಟ ಭೂಭಾಗ.

ಇದು ದೇಶದೊಳಗಿನ ವಲಸೆಯಾದರೆ ಅಂತಾರಾಷ್ಟ್ರೀಯ ಮಟ್ಟದ ವಲಸೆಗಳೂ ದಿಲ್ಲಿಗೆ ಹೊಸದಲ್ಲ. ಛತರ್ಪುರ್‌ ಸೇರಿದಂತೆ ಕೆಲ ಆಯ್ದ ಭಾಗಗಳಲ್ಲಿ ಆಫ್ರಿಕನ್ನರ ಸಮೂಹವೇ ನೆಲೆಸಿದೆ. ದುಬಾರಿಯಲ್ಲದ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಷೇತ್ರದ ಸೌಲಭ್ಯಗಳನ್ನು ಪಡೆಯುವುದಕ್ಕೆಂದೇ ವಿಶೇಷವಾಗಿ ಆಫ್ರಿಕನ್ನರು ದಿಲ್ಲಿಯಂಥ ಶಹರಗಳತ್ತ ಬರುತ್ತಾರೆ. ಒಟ್ಟಿನಲ್ಲಿ ಮಹಾನಗರಗಳಿಗೆ ವಲಸೆಗಳು ಹೊಸತಲ್ಲ ಮತ್ತು ವಲಸಿಗರಿಗೆ ಮಹಾನಗರಿಗಳೂ.

ನಗರೀಕರಣದ ವರಸೆ, ನಿಲ್ಲದ ವಲಸೆ
ಸದ್ಯ ದಿಲ್ಲಿಯು ದೇಶದ ಬಹುಭಾಗಗಳಿಂದ ವಲಸೆ ಬರುತ್ತಿರುವ ಜನರ ನೆಚ್ಚಿನ ತಾಣಗಳಲ್ಲೊಂದಾಗಿದೆ ಎಂದರೆ ತಪ್ಪಲ್ಲ. 2016ರ ನಂತರ ದಿಲ್ಲಿಯಲ್ಲಿ ದಿನನಿತ್ಯವೂ ಏರಿಕೆಯಾಗುತ್ತಿದ್ದ ಪ್ರತೀ ಸಾವಿರದ ಸಂಖ್ಯೆಯಲ್ಲಿ ಮುನ್ನೂರರಷ್ಟು ವಲಸಿಗರದ್ದೇ ಪ್ರಾಬಲ್ಯ. ಶಹರದ ಒಟ್ಟು ಜನಸಂಖ್ಯೆಯಲ್ಲಿ ವಲಸಿಗರ ಪಾಲು ಮೂವತ್ತು ಪ್ರತಿಶತಕ್ಕೂ ಹೆಚ್ಚಿದೆ ಎಂದರೆ ದೇಶದೊಳಗೇ ದಿಲ್ಲಿಯಂಥ ಮಹಾನಗರಿಗಳತ್ತ ನಡೆಯುತ್ತಿರುವ ಆಂತರಿಕ ವಲಸೆಯ ಮಟ್ಟವನ್ನು ಲೆಕ್ಕಹಾಕಬಹುದು. ಅಕ್ಷಯಪಾತ್ರೆಯಂತಿರುವ ಆರ್ಥಿಕತೆ ಮತ್ತು ನಮ್ಮ ರಾಜ್ಯಗಳಲ್ಲೇ ಉತ್ತಮ ಎನಿಸುವಷ್ಟು ಪರ್‌ಕ್ಯಾಪಿಟಾ ಆದಾಯವನ್ನು ಹೊಂದಿರುವ ಅಂಶಗಳು ವಲಸಿಗರನ್ನು ದಿಲ್ಲಿಯತ್ತ ಇನ್ನಿಲ್ಲದಂತೆ ಆಕರ್ಷಿಸುತ್ತಿದೆಯಂತೆ. 2018ರಲ್ಲಿ ವಿಶ್ವ ಸಂಪತ್ತು ವರದಿಯು ದಿಲ್ಲಿಯನ್ನು ಭಾರತದ ಎರಡನೆಯ ಸಂಪದ್ಭರಿತ ಪ್ರದೇಶವೆಂದು ಉಲ್ಲೇಖೀಸಿತ್ತು.

2017ರ ಭಾರತೀಯ ಆರ್ಥಿಕ ಸಮೀಕ್ಷೆಯ ಪ್ರಕಾರ 2011 ಮತ್ತು 2016ರ ನಡುವೆ ದೇಶದೊಳಗಿನ ಆಂತರಿಕ ವಲಸೆಯ ಸಂಖ್ಯೆ ಒಂಬತ್ತು ಮಿಲಿಯನ್‌ನಷ್ಟಾಗಿತ್ತು. ಹೊಸ ಅವಕಾಶಗಳನ್ನು ಅರಸಿಕೊಂಡು ಬರುತ್ತಿರುವ ಗ್ರಾಮೀಣ ಭಾರತದ ಜನಸಂಖ್ಯೆಯೇ ಇಲ್ಲಿ ಹೆಚ್ಚು. ಅಷ್ಟಕ್ಕೂ ಈ ವಲಸಿಗರು ಯಾವ ಕಡೆಗಳಿಂದ ಹೆಚ್ಚಾಗಿ ಬರುತ್ತಿದ್ದಾರೆ ಎಂಬುದನ್ನು ನೋಡಿದರೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯದ ಮೂಲದವರು ವಲಸಿಗರ ಪಟ್ಟಿಯಲ್ಲೇ ಮುಂಚೂಣಿಯಲ್ಲಿದ್ದರು. ನಂತರದ ಸ್ಥಾನಗಳಲ್ಲಿ ಬಂದಿದ್ದು ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್‌, ಪಶ್ಚಿಮಬಂಗಾಳದಂಥ ರಾಜ್ಯಗಳು. ಇನ್ನು ವಲಸೆಯ ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಂದಿನಂತೆ ದಿಲ್ಲಿ, ಮುಂಬೈ ಮತ್ತು ಅಹ್ಮದಾಬಾದ್‌ನಂಥ ಮಹಾನಗರಗಳೇ ಇವರೆಲ್ಲರಿಗೂ ಹೊಸಜೀವನದ ಭರವಸೆಗಳಾಗಿದ್ದವು. ಇತ್ತ ಬಹುರಾಷ್ಟ್ರೀಯ ಉದ್ಯಮಗಳು ಮೆಲ್ಲಗೆ ತಮ್ಮ ರೆಕ್ಕೆ ಬಿಚ್ಚತೊಡಗಿದಾಗ ವಿದ್ಯಾವಂತ ಯುವಸಮೂಹವೂ ಇತ್ತ ದೃಷ್ಟಿ ಹರಿಸಿದ್ದು ವಾಸ್ತವದ ಸಂಗತಿ.

ಎಲ್ಲ ರಸ್ತೆಗಳು ದಿಲ್ಲಿಯತ್ತ !
ಅಷ್ಟಕ್ಕೂ ದಿಲ್ಲಿಯ ಆಡಳಿತ ವ್ಯವಸ್ಥೆಯು ಇದನ್ನು ನಿರೀಕ್ಷಿಸದ್ದೇನೂ ಇರಲಿಲ್ಲ. ದೇಶದ ಬಹುತೇಕ ಮೂಲೆಗಳಿಂದ ಹೊಸ ಅವಕಾಶಗಳನ್ನು ಅರಸುತ್ತ¤ ಬರುವ ಜನಜಂಗುಳಿಯು ದಿಲ್ಲಿಯನ್ನಷ್ಟೇ ತಲುಪಿದರೆ ಶಹರದ ಜನಸಂಖ್ಯೆಯು ಮಿತಿಮೀರಿಹೋಗಲಿರುವ ಅಂದಾಜು ಎಂಬತ್ತರ ದಶಕದ ಮಧ್ಯಭಾಗದಲ್ಲೇ ಬಂದಿತ್ತು. ಈ ವಲಸೆಯನ್ನು ಕೊಂಚ ಚದುರಿಸುವ ಉದ್ದೇಶದಲ್ಲೇ ಹುಟ್ಟಿಕೊಂಡಿದ್ದು ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ (ಎನ್‌ಸಿಆರ್‌) ಅನ್ನು ಅಭಿವೃದ್ಧಿಗೊಳಿಸುವ ಕಲ್ಪನೆ. ಈ ಕನಸಿನ ಕೂಸೇ 1985ರಲ್ಲಿ ಆರಂಭವಾಗಿದ್ದ ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ ಪ್ಲಾನಿಂಗ್‌ ಬೋರ್ಡ್‌ (ಎನ್‌ಸಿಆರ್‌ಪಿಬಿ).

ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದಡಿಯಲ್ಲಿ ಆರಂಭವಾಗಿದ್ದ ಎನ್‌.ಸಿ.ಆರ್‌.ಪಿ.ಬಿ. ಮಾಡಿದ ಮೊದಲ ಕೆಲಸವೆಂದರೆ ಉದ್ಯೋಗಾವಕಾಶಗಳು ಮತ್ತು ಸಂಬಂಧಿ ವಲಸೆಯ ಒಳಹರಿವನ್ನು ದಿಲ್ಲಿಗಷ್ಟೇ ಸೀಮಿತಗೊಳಿಸದೆ ಆಸುಪಾಸಿನ ನಾಲ್ಕು ರಾಜ್ಯಗಳ ಆಯ್ದ ಭಾಗಗಳಿಗೂ ವಿಸ್ತರಿಸಿದ್ದು. ಇನ್ನು ಇವುಗಳನ್ನು ಹೊರತುಪಡಿಸಿ ಕೌಂಟರ್‌ ಮ್ಯಾಗ್ನೆಟ್‌ ಏರಿಯಾಗಳ ಪರಿಕಲ್ಪನೆಯತ್ತಲೂ ಗಮನಹರಿಸಿದ ಸಮಿತಿಯು ಅಂಬಾಲಾ, ಪಟಿಯಾಲಾ, ಬರೇಲಿ, ಹಿಸ್ಸಾರ್‌ ಗಳನ್ನೂ ಕೂಡ ಇಂಥಾ ತಾಣಗಳಾಗಿ ಪರಿವರ್ತಿಸುವ ಬಗ್ಗೆ ಚಿಂತಿಸತೊಡಗಿತು. ಫೋಬ್ಸ್ì ಇಂಡಿಯಾದಂಥಾ ಮಾಧ್ಯಮಗಳು ಎನ್‌.ಸಿ.ಆರ್‌.ಪಿ.ಬಿಯಲ್ಲಿರುವ ಲೋಪದೋಷಗಳನ್ನು ಎತ್ತಿತೋರಿಸಿರುವುದು ಸತ್ಯವಾದರೂ ಇಂಥಾ ಪ್ರಯತ್ನಗಳು ವಲಸಿಗರ ಒಳಹರಿವನ್ನು ತಕ್ಕಮಟ್ಟಿಗಾದರೂ ಸಹನೀಯಗೊಳಿಸಿದ್ದರಲ್ಲಿ ಸಂದೇಹವೇನಿಲ್ಲ.

ದಿಲ್ಲಿಯು ಮಹಾನಗರಿಯ ವೇಗಕ್ಕೆ ತಕ್ಕಂತೆ ಬೆಳೆಯುತ್ತಲೇ ಇದೆ. ಹಲವು ಕನಸು, ನಿರೀಕ್ಷೆಗಳನ್ನು ಹೊತ್ತು ದಿಲ್ಲಿಯತ್ತ ಬರುತ್ತಿರುವ ವಲಸಿಗರು ಹೆಚ್ಚುತ್ತಲೇ ಇದ್ದಾರೆ. ಇತ್ತ ಜನಸಂಖ್ಯೆ ಹೆಚ್ಚುತ್ತ ಹೋದಂತೆ ಸಂಪನ್ಮೂಲಗಳ ಬೇಡಿಕೆಯೂ ಹೆಚ್ಚಾಗಿದೆ. ಸ್ಲಮ್ಮುಗಳು ಲೆಕ್ಕವಿಲ್ಲದಷ್ಟಾಗಿವೆ. ನಗರೀಕರಣದ ಭರದಲ್ಲಿ ಶಹರವು ಮತ್ತಷ್ಟು ಫ್ಲೈ-ಓವರುಗಳನ್ನು, ಸಬ್‌-ವೇಗಳನ್ನು ವಿಧಿಯಿಲ್ಲವೆಂಬಂತೆ ನಿರ್ಮಿಸುತ್ತಲೂ ಇದೆ. ರೋಪ್‌ವೇಗಳು ಭಾರತದ ಸಾರಿಗೆ ವ್ಯವಸ್ಥೆಯ ಹೊಸ ಭರವಸೆಯೆಂಬ ಚರ್ಚೆಗಳು ಈಚೆಗೆ ದೊಡ್ಡಮಟ್ಟಿನಲ್ಲಿ ಶುರುವಾಗಿದ್ದಲ್ಲದೆ ದೇಶದ ಕೆಲ ಭಾಗಗಳಲ್ಲಿ ಕಾಮಗಾರಿಗಳನ್ನಾರಂಭಿಸುವ ಪ್ರಯತ್ನಗಳೂ ನಡೆದಿವೆ.

ಟ್ರಾಫಿಕ್‌ ಜಾಮ್‌ಗಳು ಇನ್ನು ಆಗಸದಲ್ಲೂ ಆದರೆ ಅಚ್ಚರಿಯಿಲ್ಲವೇನೋ!

ಪ್ರಸಾದ್‌ ನಾೖಕ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.