ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !


Team Udayavani, May 20, 2018, 9:50 AM IST

o-24.jpg

ಒಂದು ಬದಿಯಲ್ಲಿ ವೀರಾರಾಧನೆ- ಅಂದರೆ ಕ್ಷತ್ರಿಯ ಮೌಲ್ಯಗಳು- ವಿಕ್ರಮಾರ್ಜುನ, ಸಾಹಸ ಭೀಮ ಇಂಥ ಕಿವಿ ಕಂಪಿಸುವ ಪದಗುಂಫ‌ನಗಳು; ಇನ್ನೊಂದು ಬದಿಯಲ್ಲಿ ವೈರಾಗ್ಯದ ಸಂವೇದನೆ, ಇವುಗಳ ಮೂಲಕ ಬದುಕಿನ ದ್ವಂದ್ವಗಳನ್ನು ನಿರ್ವಹಿಸುತ್ತ ನಡೆಯುತ್ತಿತ್ತು- ಕನ್ನಡ ಕಾವ್ಯ. ಇಂಥ ಕಾವ್ಯ ವಚನಯುಗದಲ್ಲಿ ವಚನಕಾರರ ವ್ಯಕ್ತಿತ್ವದಲ್ಲಿ ಸೆರೆಯಾಗಿ ಪ್ರಾಯಃ ಮೊದಲ ಬಾರಿಗೆ domesticate ಆಯಿತು! ಇದೊಂದು ನಾಟಕೀಯವಾದ ತಿರುವು. “ಬಯಲು’ ಎಂಬ ಪದವನ್ನು ಅಪೂರ್ವವಾಗಿ ಟಂಕಿಸಿದವರು ಕಾವ್ಯವನ್ನು ಆತ್ಮನಿಷ್ಠವನ್ನಾಗಿ, ಆಲಯನಿಷ್ಠವನ್ನಾಗಿ ಮಾಡಿದರು! ಸ್ವಾನುಭವ ಎಂಬ ಕಾವಿನಿಂದಲೇ ಒಡೆಯುವ ಮೊಟ್ಟೆಯಿಂದ ಹೊರಬರುವ ಮರಿಯಂತಾಯಿತು-ಕಾವ್ಯ! “ಜಗದ್‌ ವಿಲಕ್ಷಣ ಮೂರ್ತಿ ಬಸವಣ್ಣ’ ಎಂಬ ತಮ್ಮೊಂದು ಲೇಖನದಲ್ಲಿ ಬೇಂದ್ರೆಯವರು, “”ಶಂಕರ, ವಿದ್ಯಾರಣ್ಯರು ಹೋಗಲಿ, ಸರ್ವಜ್ಞ; ಪುರಂದರದಾಸರು ಅಷ್ಟೇ ಏಕೆ ರಾಮಾಯಣ, ಮಹಾಭಾರತಗಳಲ್ಲೂ
ಸ್ವಂತದ ಜೀವನಾನುಭವದ ಉಕ್ತಿಗಳನ್ನು ಹೆಕ್ಕಿ ತೆಗೆಯಬೇಕಾದೀತು. ಆದರೆ, ಬಸವಣ್ಣನ ಜೀವನವೇ ಸಾಹಿತ್ಯ-ಸಾಹಿತ್ಯವೇ ಜೀವನ” ಎಂದು ಇದೇ ಅರ್ಥದಲ್ಲಿ ಬರೆದರು. ಭಾವಗೀತೆಗಳ ಕವಿಯಾದ ಬೇಂದ್ರೆಯವರಿಗೆ ಆಧುನಿಕ ಭಾವಗೀತೆಗಳ ಒಸರು-ವಚನಗಳಲ್ಲೇ ಕಂಡಿದ್ದರೆ ಆಶ್ಚರ್ಯವಿಲ್ಲ. ಕಾವ್ಯವು ಹೀಗೆ ಸ್ವಾನುಭವನಿಷ್ಠವಾಗುವಾಗ ಪುರಾಣವು ವರ್ತಮಾನದಲ್ಲಿ ತನ್ನನ್ನು ಕಂಡುಕೊಳ್ಳಬೇಕಾದ ಅಗತ್ಯ ಒದಗಿತು. ಪುರಾಣವು ವರ್ತಮಾನದಲ್ಲಿ ಮರಳಿ ಜೀವಿಸಬೇಕಾಗಿ ಬಂತು. ಇದೊಂದು ಬಗೆಯ ಪುನರ್ಜನ್ಮವೇ ಸರಿ. ಈಗ ಭಾಷೆಯು ಹೊಚ್ಚಹೊಸ ನಾಟಕೀಯ ತಿರುವುಗಳನ್ನು ಪಡೆದುಕೊಳ್ಳಲೇಬೇಕಾಯಿತು. ಅಲ್ಲಮ ತನ್ನೊಂದು ವಚನದಲ್ಲಿ ಕಾಮನಿಗೆ-ತನ್ನ ಮೇಲೆ ನಿನ್ನ ಬಾಣವನ್ನೆಸೆಯದಿರು ಎನ್ನುತ್ತಾನೆ.

ಎಸೆಯದಿರು ಎಸೆಯದಿರು ಕಾಮಾ
ನಿನ್ನ ಬಾಣ ಹುಸಿಯಲೇಕೋ?
ಕಾಮಕ್ರೋಧ ಲೋಭ ಮೋಹ ಮದ ಮತ್ಸರ-ಇವು ಸಾಲದೆ
ನಿನಗೆ?
ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೆ? ಮರುಳು ಕಾಮಾ

ಬಾಣವನ್ನೆಸೆಯಲು ಸಿದ್ಧನಾಗಿರುವ ಕಾಮನ ಮೇಲೆ ಅಲ್ಲಮನಿಗೆ ಸಹಾನುಭೂತಿಯೇ ಇದೆ. “”ಹುಸಿಯಲೇಕೋ ನಿನ್ನ ಬಾಣ?” ಎನ್ನುತ್ತಾನೆ! ಇದು ಕಾಮನ ಬಗೆಗಿನ ಹೊಸ ನಿಲುವು. ಇದು ಹಳೆಯ ತಪಸ್ವಿಗಳ ನಿಲುವಲ್ಲ. ಕಾಮನನ್ನು ಸುಟ್ಟ ಶಿವನ ನಿಲುವೂ ಅಲ್ಲ. ಇದು ಕಾಮನ ಜೊತೆ ನಡೆಸುವ ಹೊಸ ಬಗೆಯ ಸಂವಾದ! ಅಲ್ಲಮನಿಗಿರುವ ಈ ಸಹಾನುಭೂತಿಗೆ ಕಾರಣವೇನೆಂದರೆ ಕಾಮನಂತೆ ಸುಡಲ್ಪಟ್ಟ- ಆದರೆ, ಇನ್ನೊಂದು ರೀತಿಯಲ್ಲಿ ಸುಡಲ್ಪಟ್ಟ ಅನುಭವ ಅಲ್ಲಮನಿಗೂ ಇರುವುದು! ಗುಹೇಶ್ವರ ಲಿಂಗದ ವಿರಹವೆನ್ನುವ ಉರಿಯಲ್ಲಿ ಬೆಂದು ಹೊಸ ಹುಟ್ಟು ಪಡೆದವನು ಅಲ್ಲಮ. ಅವನ ನುಡಿ ಕೂಡ ಹೊಸಹುಟ್ಟು ಪಡೆದಿದೆ. ಮಾತು ಜ್ಯೋತಿರ್ಲಿಂಗವಾಗಬೇಕಾದರೆ ಹೀಗೆ ಬೆಂದ ಅನುಭವದಿಂದಲೇ ಏನೋ.

ಕಾಮನಂತೆ ಒಮ್ಮೆ ಉರಿದುಹೋದ ಅನುಭವ ಅಲ್ಲಮನಿಗೂ ಬಂದಿರುವುದರಿಂದ ಕಾಮನ ಮನಸ್ಸು ಅರ್ಥವಾಗುವುದಿದ್ದರೆ ಅದು ಅಲ್ಲಮನಂಥವರಿಗೇ. ಆದುದರಿಂದಲೇ ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ? ಎಂದು ಕೇಳುತ್ತಾನೆ. ಸುಡುವ ಭಾಷೆಯಲ್ಲಿ ಮಾತನಾಡುವುದು ಕಾಮನೊಟ್ಟಿಗೇ ಮೀಸಲು! ಕಾಮನಿಗೆ ಅರ್ಥವಾಗುವಂತೆ ಇದು ಬೇರಾರಿಗೆ ಅರ್ಥವಾದೀತು? ಅಲ್ಲಮ ಇಲ್ಲಿ ಇನ್ನೊಬ್ಬ
ಕಾಮನೇ ಆದ! ಇನ್ನೊಂದು ಬಗೆಯಲ್ಲಿ ಮಾತನಾಡುವ ಶಿವನೂ ಆದ! ಕಾವ್ಯವು ಸ್ವಾನುಭವದಲ್ಲಿ ಆಸರೆಪಡೆಯದೆ- ಅಂದರೆ ಪುರಾಣ ಪರಿಕಲ್ಪನೆಗಳನ್ನು ತನ್ನ ಅನುಭವದಲ್ಲಿ ನೋಡದೆ- ಇಂಥ ಅವಸ್ಥಾಂತರಗಳು ಸಂಭವಿಸಲಾರವು. ಅವಸ್ಥಾಂತರಗಳು ಸಂಭವಿಸದೆ- ಅಂದರೆ ಕಾಮ; ಶಿವ; ಅಲ್ಲಮ ಬೇರೆಯಾಗಿಯೂ ಒಂದೇ ಆಗಿದ್ದಾರೆ ಎನ್ನುವ ಭಾವಾವಸ್ಥೆ ಉಂಟಾಗದೆ- ಭಾಷೆಯು ವಾಚ್ಯದಿಂದ ಸೂಕ್ಷ್ಮ ಇಂಗಿತವಾಗುವತ್ತ ನಡೆಯದು. ಈ ಅಂಕಣದಲ್ಲಿ ಇದುವರೆಗೆ ನಾನು ಮಂಡಿಸುತ್ತ ಬಂದಂತೆ, ಕಾವ್ಯದಲ್ಲಿ “ನಾನು-ನೀನು’ ಎನ್ನುವ ಇಮ್ಮುಖ ಪರಿಕಲ್ಪನೆಯು ವಾಚ್ಯವು ಬಚ್ಚಿಟ್ಟ ಇಂಗಿತಗಳನ್ನೆಲ್ಲ-ಅವುಗಳ ಸೊಗಸನ್ನು ಕೆಡಿಸದೆ-ಹೊರಗೆಳೆಯುವ ಒಂದು ಉಪಾಯವಾಗಿರುವುದು. ಈ  ಪರಿಕಲ್ಪನೆಯು ಮತ್ತೆ ವಚನಗಳಲ್ಲಿಯೇ ಪ್ರಾರಂಭಗೊಂಡುದು. “ನಾನು-ನೀನು’ ಎನ್ನುವ ಪರಿಭಾಷೆಯಲ್ಲಿಯೇ ಮಾತನಾಡುವ ಅಲ್ಲಮನ ಅಪೂರ್ವವಾದ ಈ ವಚನವನ್ನು ನೋಡಿ:

ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?
ಮುನ್ನ ನೀ ಬಾಯಮುಚ್ಚಿಕೊಂಡಿದ್ದೆ ಎಂಬುದ,
ನಾ ನಿನ್ನ ಕಣ್ಣಿಂದ ಕಂಡೆನು.ಎನ್ನ ನಾನರಿತ ಬಳಿಕ ಇನ್ನು ನೀ ಬಾಯೆ¤ರೆದು ಮಾತನಾಡಿದಡೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಚಿನ ನೋಟ ಒಂದೇ
ನೋಡಾ!
ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿತೆ ನೋಡಾ

ಅತ್ಯಪೂರ್ವ ವಚನವಿದು. ಅರಿವು-ಮರೆವು, ಕಣ್ಣು-ಬಾಯಿ, ನೋಟ-ನುಡಿ, ನಾನು-ನೀನು ಇವೆಲ್ಲ ಒಂದರೊಳಗೊಂದು ತಳುಕು ಹಾಕಿಕೊಂಡಿರುವುದನ್ನು ಹೇಳುತ್ತಿದ್ದಾನೆ ಅಲ್ಲಮ. ಈ ಮೂಲಕ, ಅರಿವೆಂದರೆ- ಈ ಪರಸ್ಪರ ತಳಕು ಹಾಕಿಕೊಂಡಿರುವುದನ್ನು ಬೇರ್ಪಡಿಸಿ ನಮ್ಮ ಪೂರ್ವಾಗ್ರಹಗಳಿಗೆ ತಕ್ಕಂತೆ ನೋಡುವುದಲ್ಲ- ಇವುಗಳ ಪರಸ್ಪರ ಸಂಬಂಧಿತ ಸ್ಥಿತಿಯಲ್ಲೇ ಇವುಗಳನ್ನು ಅರಿಯುವುದು ಎನ್ನುತ್ತಿದ್ದಾನೆ! ನನ್ನನ್ನೇ ನಾನು ಮರೆತಿರುವಾಗಲೂ ಆ ಮರೆವನ್ನೂ ಅರಿತಿರುವೆ ಇನ್ನೊಂದು- ಅಂದರೆ “ನೀನು’- ನನ್ನಲ್ಲೇ ಇದ್ದೆ. ಆದರೆ, ನೀನು ಬಾಯಮುಚ್ಚಿಕೊಂಡಿದ್ದೆ. ಏಕೆ ಎಚ್ಚರಿಸಲಿಲ್ಲ ನೀನು ನನ್ನನ್ನು? ಏಕೆನ್ನುವುದನ್ನು ನಿನ್ನ ಕಣ್ಣು ಹೇಳುತ್ತಿತ್ತು. ಬಾಯಿ ಮುಚ್ಚಿಕೊಂಡಿತು. ಆದರೆ, ಕಣ್ಣು ಹೇಳುತ್ತಿತ್ತು. ಏನು ಹೇಳುತ್ತಿತ್ತು? ಬಾಯಿಬಿಟ್ಟು ಹೇಳಬಹುದಾದರೂ ಹಾಗೆ ಹೇಳುವುದು ಸಲ್ಲದು ಎನ್ನುವ ಅರ್ಥವನ್ನು ಕಣ್ಣು ಸೂಸುತ್ತಿತ್ತು. ಏಕೆಂದರೆ-ಅದು ಹೇಳದೇ ತಿಳಿಯಬೇಕು! ಹೇಳದೇ ತಿಳಿದಾಗಲೇ ಅರಿವಿನ ಎಲ್ಲ ರೋಮಾಂಚನವೂ. ಹೇಳಿ ತಿಳಿದಾಗ ಅಲ್ಲ. ಅಲ್ಲದೇ ಹೇಳದೇ ತಿಳಿಯುವುದು ಸಾಧ್ಯವಿರುವಾಗ-ಹೇಳಿ ಬಿಟ್ಟರೆ- ಆ ಸಾಧ್ಯತೆಯನ್ನೇ ಹತ್ತಿಕ್ಕಿದಂತೆ. ಸಾಧ್ಯತೆಯನ್ನು ಎಂದೂ ಕೆಡಿಸಬಾರದು. ಅಥವಾ ಹೇಳಿ ತಿಳಿಯಿತೆನ್ನುವುದು ಕೂಡ ನಿಜವಾಗಿ ತಿಳಿಯುವುದು ತಾನಾಗಿ ತಿಳಿದಾಗಲೇ! ಆದುದರಿಂದ ತಿಳಿದೂ ಬಾಯಿಮುಚ್ಚಿಕೊಂಡಿದ್ದೆ ನೀನು ಎಂದು ನಿನ್ನ ಕಣ್ಣು ನೋಡಿದರೆ ತಿಳಿಯಿತು!

‌ುವುದು ಪರಸ್ಪರ ಮಾತನಾಡುವುದಕ್ಕಲ್ಲ ; ಮಾತನ್ನು ಮೀರಿದ ಇಂಗಿತವನ್ನು ನೋಟಗಳ ಮೂಲಕ ಪಡೆಯುವುದಕ್ಕೆ! ನೋಟದ ಮೂಲಕ ಪಡೆದದ್ದು ನಿಜ. ಮಾತಿಗಿಂತ ಹೆಚ್ಚು ನಿಜ. ಮಾತು ಕಂಗೆಡಿಸಬಾರದು ಎನ್ನುವುದಕ್ಕೆ ಈಗ ವಿಶೇಷವಾದ ಅರ್ಥವೇ ಹುಟ್ಟಿಕೊಂಡಿತು ಮತ್ತೆ ಹೇಳುತ್ತಾನೆ ಅಲ್ಲಮ - ನೀನೇಕೆ ಬಾಯಿಮುಚ್ಚಿಕೊಂಡಿದ್ದೆ ಎಂದು ನನಗೆ ತಿಳಿದಾಗ ನಾನಾರೆಂದು ನನಗೆ ತಿಳಿದು ಹೋಯಿತು!  ನಾನಗೆ ತಿಳಿಯಿತೆಂದು ನಿನಗೂ ತಿಳಿಯಿತು. ಈಗ ನೀನು ಮಾತನಾಡಬೇಕೆಂದು ಕೊಂಡಿರುವೆ; ಅಲ್ಲವೆ? ಅಂದರೆ ನನ್ನನ್ನು ನಾಚಿಸಬೇಕೆಂದುಕೊಂಡಿರುವೆಯೇನು? ನನ್ನ ನೋಟದಲ್ಲೇ ನನ್ನ ನಾಚಿಕೆ ನಿನಗೆ ಕಾಣುತ್ತಿಲ್ಲವೆ? ಇದು ಶಬ್ದದ ಲಜ್ಜೆ ಮಾತ್ರ ಅಲ್ಲ , ನೋಟದ ಲಜ್ಜೆಯೂ ಹೌದು. ನನ್ನ ನಾಚಿಕೆ ಈಗ ನಿನ್ನ ನಾಚಿಕೆಯೂ ಅಲ್ಲವೆ? ಏಕೆಂದರೆ, ಪರಸ್ಪರ ಇಂಗಿತ ತಿಳಿದಾಗ ನಮ್ಮ ನಾಲ್ಕು ಕಣ್ಣುಗಳ ನೋಟವೂ ಒಂದೇ ಆಗಲಿಲ್ಲವೆ? ಈ ಅನುಭವವನ್ನು ಸಂಚಿನ ನೋಟ ಒಂದೇ ನೋಡಾ ಎಂದು ಅಲ್ಲಮ ಅದ್ಭುತವಾಗಿ ಹೇಳುತ್ತಾನೆ. ಸಂಚಿನ ನೋಟ ಒಂದೇ ನೋಡಾ ಎನ್ನುವಾಗ ಗಂಡು-ಹೆಣ್ಣುಗಳ ನೆಲೆಯಲ್ಲೂ ಇದು ಅರ್ಥವನ್ನು ತೆರೆಯುತ್ತದೆ. ಲೋಕ ವ್ಯವಹಾರದಲ್ಲಿ ಹೆಣ್ಣು-ಗಂಡುಗಳ ನಡುವಣ ವ್ಯವಹಾರದಲ್ಲಿ ಅನುಭವಕ್ಕೆ ಬರುವ  ಸಂಚಿನ ನೋಟ, ನೋಟದ ಸಂಚನ್ನು ಅಲ್ಲಮ ನೆನಪಿಸುತ್ತಾನೆ. ಈ ಸಂಚಿನ ನೋಟವನ್ನು ಅತ್ಯಂತ ಆಪ್ತವಾದ ಆಧಾತ್ಮಿಕ ಅನುಭವವನ್ನು ಸೂಚಿಸಲು ಬಳಸುತ್ತಾನೆ. ಆ ಮೂಲಕ, ನಾನು-ನೀನುಗಳ ನಡುವಣ ಸಂಬಂಧದ ಅರಿವನ್ನು ಪಡೆದರೆ ಆ ಅರಿವಿನಲ್ಲಿ ಲೋಕಾನುಭವ ಸರ್ವಸ್ವವೂ ಅಡಗಿದೆ. ಲೋಕಾನುಭವವೊಂದು ಆಧ್ಯಾತ್ಮಿಕ ಅನುಭವಕ್ಕಿಂತ ಬೇರೆಯಾಗಿ ನಿಲ್ಲುವಂಥಾದ್ದಲ್ಲ ಎನ್ನುತ್ತಿದ್ದಾನೆ.

ಇಂಗಿತಗಳಲ್ಲಿ ಲೋಕವೇ ಅಡಗಿದೆ. ಅಥವಾ ಕಾಣುತ್ತಿರುವ ಲೋಕ, ಇಂಗಿತವೊಂದನ್ನು ಸೂಚಿಸುತ್ತಿರುವ ಸಂಚಿನ ನೋಟವೂ ಹೌದು. ಭಾಷೆಯನ್ನು ಇಂಗಿತವಾಗಿಸುವುದೇ ಕಾವ್ಯದ ಮುಖ್ಯ ಕಾಯಕವೆಂದು ಅಲ್ಲಮನಂಥವರು ಸೂಚಿಸುವಂತಿದೆ. ಈ ಅರ್ಥದಲ್ಲಿ ವಚನಯುಗ, ೊಸದೃಷ್ಟಿಕೋನವನ್ನೇ ತೆರೆದ ಯುಗವೂ ಹೌದು. ಬೇಂದ್ರೆಯವರ “”ನೀ ಹೀಂಗ ನೋಡಬ್ಯಾಡ ನನ್ನ” ಎಂಬ ದುಃಖ ಗೀತೆ ನೆನಪಾಗುತ್ತಿದೆ. “ಸಂಚಿನ ನೋಟ ಒಂದೇ ನೋಡಾ’ ಎನ್ನುವ ಅಲ್ಲಮನ ವಚನದೊಡನೆ ಬೇಂದ್ರೆಯವರ ಈ ಕವಿತೆ ಹೊಂದಿಕೆಯಾಗುವ ಬಗೆಗೆ ಅಚ್ಚರಿಯಾಗುತ್ತದೆ! ಈ ಎರಡು ಕೃತಿಗಳ ಅನುಭವವು ವಿ-ದೃಶವಾದರೂ, “”ನೀ ಹೀಂಗ ನೋಡಬ್ಯಾಡ ನನ್ನ, ನೀ ಹೀಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ” ಎನ್ನುವ ಬೀಜಮಾತು, ಈಗ ನನ್ನ ಹಾಡಲು ಬಿಡು ಎಂದು ಕೇಳಿಕೊಳ್ಳುವಂತಿದೆ-ಆರ್ತವಾಗಿ. ಅಲ್ಲಮನಿಗೆ ಮಾತನ್ನು ಮೀರಿದ ದೃಷ್ಟಿಕೋನ ಮುಖ್ಯ. ತಿಳಿದ
ಮೇಲೂ ಮಾತನಾಡಿದರೆ ಆ ಮಾತಿಗೆ ನೋಟವು ಸಹಜ ಲಜ್ಜಿತವಾಗುವುದು ಮುಖ್ಯ. ಬೇಂದ್ರೆಯವರಿಗೆ ದಾರುಣವಾದ ಅನುಭವವೊಂದನ್ನು ತೋಡಿಕೊಳ್ಳುವಲ್ಲಿ ದುಃಖದ ಮಾತಿನ ಹೊನಲಿಗೆ “ನೋಟ’ವು ಸಾಕ್ಷಿಯಾಗುವುದು ಮುಖ್ಯ. ಬೇಂದ್ರೆ ಮುಖ್ಯವಾಗಿ ಕವಿ. ಅಲ್ಲಮನಾದರೋ
ಅನುಭಾವಿ. ಅಲ್ಲಮನಿಗೆ ಅನುಭವದ ತೀವ್ರತೆಯಷ್ಟೇ ಸಾಕು. ಇನ್ನಾವುದರ ಜೊತೆಗೇ ಅನುಭವದ ವಿನಿಮಯ ಬೇಕಿಲ್ಲ. ವಿನಿಮಯ ಮಾಡಲು ಸಾಧ್ಯವೂ ಇಲ್ಲ. ಆದರೆ, ಕವಿಯ ನಿಲುವು-ಅನುಭವಕ್ಕೆ ಸಹಜವಾಗಿ ಕೆಲವು ವಿನಿಮಯಗಳಿವೆ; ಅದು ಅನುಭವದ ಭಾಗವೇ ಆಗಿದೆ ಎಂಬ ನಿಲುವು. ಇದು ವಿಶದವಾಗಬೇಕಾದರೆ ಬೇಂದ್ರೆಯವರ ಕರುಳು ಎನ್ನುವ ಕವಿತೆಯನ್ನು ನೋಡಬೇಕು:

ತಾಮ್ರಪರ್ಣಿಯ ಒಡಲ ರಾಜಮೌಕ್ತಿಕದ ಭಂ-ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ ಮರುದಿನವು ಅಣಿಗೊಳುವದಕೆ ಕೂಳುತುತ್ತು. ಮನ ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನು, ಕೈ ಹಿಡಿದ ಮೈಯನು ತಣಿಸಲೆಂದು ದುಡಿವನೊ! ಮುತ್ತು ಗಾರ ಭಾಗ್ಯವನು ಲೆಕ್ಕಿಸನವನು. ತಾಯ ಮಡದಿಯ ಹರ್ಷಬಾಷ್ಪವೇ ಅವನ ಬದುಕಿನ ಹುರುಳ

ದಿನವೂ ಆಳ ನೀರಿಗೆ ಧುಮುಕಿ ಮುತ್ತು ಹೆಕ್ಕುವ ಕುಂಗನ ಚಿತ್ರವಿಲ್ಲಿದೆ. ಅವನ ಅನುಭವವೇನು? ಅದು ಆಳದ ಅನುಭವ. ಮುತ್ತು ಹೆಕ್ಕುವ ಅನುಭವ. ನಿತ್ಯವೂ ಜೀವನ್ಮರಣ ಹೋರಾಟದ ಅನುಭವ! ಆದರೆ ಬದುಕಿನ ವಿಚಿತ್ರವೆಂದರೆ- ತನ್ನ ಈ ಅನುಭವವು ಮುಖ್ಯವೆಂದು ಅವನಿಗೆ ಅನ್ನಿಸುವುದೇ ಇಲ್ಲ.  “”ಮುತ್ತುಗಾರ ಭಾಗ್ಯವನು ಲೆಕ್ಕಿಸನವನು”. ಅವನು ಲೆಕ್ಕಿಸುವುದು ಯಾವುದನ್ನು? ತನ್ನ ತಾಯ, ಮಡದಿಯ ಹರ್ಷಬಾಷ್ಪವನ್ನು. ಈ ಬಾಷ್ಪ ಬಿಂದುಗಳೇ ಅವನು ಹೆಕ್ಕುವ ಮುತ್ತುಗಳು! ಕವಿಗೆ ಈ ವಿನಿಮಯ ಮುಖ್ಯ. ಈ ವಿನಿಮಯದಲ್ಲಿ ಒಂದು ಸಾದೃಶ್ಯವೂ ಇದೆ. ಕಣ್ಣಹನಿಗಳು ಮುತ್ತುಗಳಂತಿವೆ! ಈ ಸಾದೃಶ್ಯದಲ್ಲಿ ಕವಿಗೆ ಎಲ್ಲ ಚೆಲುವೂ ಕಾಣುತ್ತದೆ. 

ಅಲ್ಲಮನ ನೆಲೆ ಬೇರೆ. ತಾಮ್ರಪರ್ಣಿಯ ನೀರಿಗೆ ಧುಮುಕುತ್ತಾನಲ್ಲ-ಕುಂಗ. ಅಲ್ಲಿ ಆಳಕ್ಕಿಳಿದು, ಉಸಿರುಕಟ್ಟಿ ಮುತ್ತು ಹುಡುಕುತ್ತಾನಲ್ಲ- ಕುಂಗ, ಈ ಅನುಭವವನ್ನು ನೆಚ್ಚಿದರೆ ಸಾಕು- ಅವನಿಗೆ ತಿಳಿಯುತ್ತದೆ; ಲೋಕವೆಲ್ಲ- ತನ್ನ ತಾಯಿ; ಮಡದಿಯೂ ಸೇರಿ ಬದುಕಿಡೀ ಉಸಿರುಕಟ್ಟಿ ಇನ್ನಾವುದನ್ನೋ ಹೆಕ್ಕಲು ಹಂಬಲಿಸುತ್ತಿದ್ದಾರೆಂದು! ಎಲ್ಲರೂ- ತನ್ನನ್ನು ಈ ಕೆಲಸಕ್ಕೆ ಹಚ್ಚಿದ ಸಾವುಕಾರನೂ ಸೇರಿ- ಮುಳುಗಿರುವವರೇ ಎಂದು. ಇದು ಅರಿವು. ಈ
ಅರಿವನ್ನು ಯಾವುದರೊಡನೆಯೂ ವಿನಿಮಯ ಮಾಡಲಾಗುವುದಿಲ್ಲ. ಏಕೆಂದರೆ, ಇದು ಎಲ್ಲವನ್ನೂ ಒಳಗೊಳ್ಳುವ ಅರಿವು. ಆದುದರಿಂದಲೇ ಇದು ಎಲ್ಲವನ್ನೂ ಸಹಾನುಭೂತಿಯಿಂದ ನೋಡುತ್ತದೆ. ನಿನ್ನ ಬಾಣ ಹುಸಿಯಲೇಕೋ ಎಂದು ಕಾಮನನ್ನೂ ಕೇಳುತ್ತದೆ!

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.