ಎರಡು ಪುಟ್ಟ ಕತೆಗಳು

Team Udayavani, Oct 6, 2019, 5:23 AM IST

ಕನಸಿನ ಕತೆ

ಊಟದ ಬಿಡುವಿನಲ್ಲಿ ಮಕ್ಕಳೆಲ್ಲ ವೃತ್ತಾಕಾರವಾಗಿ ಕುಳಿತು ತಮ್ಮ ತಮ್ಮ ಮನೆಗಳಿಂದ ತಂದಿರುವ ಬುತ್ತಿ ಬಿಚ್ಚಿ ಎಲ್ಲರೂ ಹಂಚಿಕೊಂಡು ತಿಂದು, ಅಲ್ಲೇ ಆಟವಾಡುತ್ತಿದ್ದರು. ಊಟ ಮಾಡುವಾಗಲೂ ಮತ್ತು ಊಟ ಮುಗಿದ ಮೇಲೂ ಗಂಟೆ ಹೊಡೆಯುವವರೆಗೆ ಅವರ ಹರಟೆ ಮುಗಿಯುತ್ತಿರಲಿಲ್ಲ. ಅವರಲ್ಲಿ ಅತಿ ಹೆಚ್ಚು ಮಾತಾಡುವವಳು ಅವರ ನಡುವಿನಲ್ಲಿಯ ಅತ್ಯಂತ ಕಿರಿಯಳು. ಅವಳನ್ನು ಪುಟ್ಟಿ ಎನ್ನೋಣ.

ಈ ಪುಟ್ಟಿ ತನ್ನ ಅಕ್ಕ-ಅಣ್ಣಂದಿರ ಜೊತೆ ಊರ ಹೊರಗಿನ ಜೋಪಡಪಟ್ಟಿಯಲ್ಲಿ ವಾಸಿಸುತ್ತಿದ್ದಳು. ಅದನ್ನವಳು ಮನೆ ಎನ್ನುತ್ತಿದ್ದಳು. ಹಾಗೆ ಹೇಳುವುದಕ್ಕೂ ಕಾರಣವಿದೆ. ಯಾಕೆಂದರೆ, ಅವಳ ಕೆಲವು ಪರಿಚಿತರಂತೆ ಅವಳು ಫ‌ುಟ್‌ಪಾತ್‌ ಮೇಲೆ ವಾಸಿಸುತ್ತಿರಲಿಲ್ಲ. ಉಳಿದಂತೆ ಬಿಸಿಲು, ಗಾಳಿ, ನೀರು ಮುಂತಾದವುಗಳಲ್ಲಿ ಫ‌ುಟ್‌ಪಾತ್‌ನಲ್ಲಿರುವವರಿಗೂ ಅವರಿಗೂ ಅಂಥ ವ್ಯತ್ಯಾಸವೇನೂ ಇರಲಿಲ್ಲ. ಈ ಪುಟ್ಟಿಯ ಅಪ್ಪ ಮನೆ ಬಿಟ್ಟು ಎಲ್ಲೋ ಓಡಿಹೋಗಿದ್ದ. ಅಮ್ಮ ಮತ್ತು ಅಕ್ಕಂದಿರು ಅವರಿವರ ಮನೆ ಕಸ-ಮುಸುರೆ ಮಾಡಲು ಹೋಗುತ್ತಿದ್ದರು. ಅಣ್ಣಂದಿರೂ ಅಷ್ಟೆ, ಸಿಕ್ಕ ಕೂಲಿ ಮಾಡಿಕೊಂಡಿದ್ದರು. ಈ ಪುಟ್ಟಿಗೆ ಅಕ್ಕಂದಿರಂತೆ ಕೆಲಸ ಕೈಗೆತ್ತಿಕೊಳ್ಳುವಷ್ಟು ವಯಸ್ಸಾಗಿರಲಿಲ್ಲ. ಕಾಣಲು ಅಕ್ಕಂದಿರು ತಿಕ್ಕುವ ಮಧ್ಯಮ ಗಾತ್ರದ ಪಾತ್ರೆಯಂತೆ ಇದ್ದಳವಳು. ಹಾಗಾಗಿಯೇ ಸರಕಾರಿ ಪ್ರಾಥಮಿಕ ಶಾಲೆಗೆ ಬರುತ್ತಿದ್ದಳು. ಮಧ್ಯಾಹ್ನ ಬುತ್ತಿ ತರುವುದು ಅವಳಿಗೆ ಸಾಧ್ಯವಿರಲಿಲ್ಲ. ಅವಳು ತೊಡುವ ಬಟ್ಟೆ ಉಳಿದ ಮಕ್ಕಳಿಗೆ ಹೋಲಿಸಿದರೆ ಕೆಳಮಟ್ಟದ್ದಾಗಿತ್ತಾದರೂ, ಅವಳ ಮುಖದಲ್ಲಿದ್ದ ಮುಗ್ಧತೆ, ಸ್ನಿಗ್ಧತೆ ಉಳಿದ ಮಕ್ಕಳಿಗಿಂತ ಏನೇನೂ ಕಡಿಮೆಯಿರಲಿಲ್ಲ. ಉಳಿದ ಮಕ್ಕಳೂ ಅಷ್ಟೆ, ಮೇಲು-ಕೀಳು, ಬಡತನ-ಸಿರಿತನಗಳ ನಡುವಿನ ಕಂದಕಗಳನ್ನು ಅರಿಯುವಷ್ಟು ಬೆಳೆದಿರಲಿಲ್ಲ. ಹಾಗಾಗಿ, ಅವರೆಲ್ಲ ತಮ್ಮ ಬುತ್ತಿಯೊಳಗಿನ ಒಂದೊಂದು ತುತ್ತಿನಿಂದ ಅವಳ ಹಸಿವನ್ನು ಮರೆಸುತ್ತಿದ್ದರು.

ಪುಟ್ಟಿ ಕಲಿಕೆಯಲ್ಲಿ ಅಷ್ಟೇನೂ ಚುರುಕಾಗಿರಲಿಲ್ಲ, ಆದರೆ ಸುತ್ತಮುತ್ತಲಿನ ಕತೆಗಳನ್ನು ಬಲು ತನ್ಮಯತೆಯಿಂದ ಹಾವಭಾವಗಳೊಂದಿಗೆ ಹೇಳುವುದರಲ್ಲಿ ನಿಸ್ಸೀಮಳಾಗಿದ್ದಳು. ಉಳಿದ ಮಕ್ಕಳು ಸಂಕೋಚದಿಂದಾಗಿ ತುಸು ಕಡಿಮೆ ಮಾತಾಡುತ್ತಿದ್ದುದರಿಂದ ಪುಟ್ಟಿ ಕಟ್ಟುವ ಮಾತಿನ ಮಂಟಪ ಎಲ್ಲರಿಗೂ ಇಷ್ಟವಾಗುತ್ತಿತ್ತು. ಹಾಗಾಗಿಯೇ ಪುಟ್ಟಿಯನ್ನು ಎಲ್ಲರೂ ಹತ್ತಿರ ಕರೆಯುವವರೆ!

ಅಷ್ಟೇ ಅಲ್ಲ, ಅವಳ ಪಕ್ಕದಲ್ಲಿ ಸೀಟು ಗಿಟ್ಟಿಸಿಕೊಳ್ಳುವುದಕ್ಕಾಗಿ ಸಂಗೀತ ಕುರ್ಚಿ ಮಾದರಿಯ ಓಟವೂ ಅರಿವಿಲ್ಲದೆ ನಡೆಯುತ್ತಿತ್ತು. ಇವರೆಲ್ಲರು ಕೊಟ್ಟದ್ದನ್ನು ತಿನ್ನುವ ನಾನು ಇವರಿಗೆ ತಕ್ಕಮಟ್ಟಿನ ಮನೋರಂಜನೆ ನೀಡದಿದ್ದರೆ ಹೇಗೆ ಎಂಬುದು ತಿಳಿದೋ-ತಿಳಿಯದೆಯೋ ಪುಟ್ಟಿಯ ಪುಟ್ಟ ಹೃದಯದ ಮೂಲೆಯಲ್ಲಿ ಮೂಡಿತ್ತು. ಹಾಗಾಗಿಯೇ ಅವಳು ಪ್ರತಿದಿನವೂ ಒಂದಿಲ್ಲೊಂದು ಕತೆ ಕಟ್ಟುತ್ತಿದ್ದಳು.

ಪುಟ್ಟಿ ಹೆಚ್ಚಾಗಿ ತಾನು ರಾತ್ರಿ ಕಂಡ ಕನಸುಗಳ ಕುರಿತಾಗಿ ಹೇಳುತ್ತಿದ್ದಳು. ಅವಳು ಕಂಡ ಕನಸುಗಳು ಹೀಗಿರುತ್ತಿದ್ದವು: ನಿನ್ನೆ ನಾನು ಕನಸಲ್ಲಿ ಮರದ ರೆಂಬೆ-ಕೊಂಬೆಗಳಲ್ಲೆಲ್ಲ ರೊಟ್ಟಿ ತೂರಾಡುತ್ತಿರುವುದನ್ನು ಕಂಡೆ. ನಿನ್ನೆ ನನ್ನ ಕನಸಿನಲ್ಲಿ ಒಂದು ಉಗಿಬಂಡಿ ಬಂದಿತ್ತು. ಆದರೆ ಅದರಲ್ಲಿ ಚಕ್ರಗಳೇ ಇರಲಿಲ್ಲ. ಆ ಜಾಗದಲ್ಲಿ ಇದ್ದದ್ದೆಲ್ಲ ದೊಡ್ಡ-ದೊಡ್ಡ ರೊಟ್ಟಿಗಳು. ನಿನ್ನೆ ಕನಸಿನಲ್ಲಿ ನಾನೊಂದು ರೊಟ್ಟಿ ಹಿಡಿದುಕೊಂಡು ಕುಳಿತಿದ್ದೆ. ದೊಡ್ಡ ಆಕಾರದ ಮಾಯಾವಿ ರಕ್ಕಸನೊಬ್ಬ ಬಂದು ನನ್ನ ಕೈಯಲ್ಲಿದ್ದ ರೊಟ್ಟಿಯನ್ನು ಹಾರಿಸಿಕೊಂಡು ಹೋದ. ನಿನ್ನೆಯ ನನ್ನ ಕನಸಿನಲ್ಲಿ ಒಬ್ಬಳು ದೇವಕನ್ಯೆ ಬಂದಿದ್ದಳು. ಅವಳು ಜಾದೂಗಾರರ ಕೋಲನ್ನು ನನ್ನ ಕೈಗೆ ಕೊಟ್ಟಳು. ನಾನದನ್ನು ಒಂದು ಸುತ್ತು ತಿರುಗಿಸಿದ್ದಷ್ಟೆ, ರಾಶಿ-ರಾಶಿ ರೊಟ್ಟಿಗಳು ನನ್ನ ಹತ್ತಿರ ಬಂದವು. ನಾನು ನಿಮಗೆಲ್ಲರಿಗೂ ಹಂಚಿದೆ. ಆಮೇಲೆ ನಾವೆಲ್ಲ ಸೇರಿ ಆಟವಾಡಿದೆವು.

ಹೀಗೆಯೆ ಒಂದು ದಿನ ಅವಳೊಂದು ಕತೆ ಹೇಳಲು ಪೀಠಿಕೆ ಹಾಕುತ್ತಿದ್ದಳು, ನಿನ್ನೆ ನಾನು ಕನಸಿನಲ್ಲಿ ಎಂಥ ರೊಟ್ಟಿ ನೋಡಿದೆ ಅಂದರೆ…

“”ನಿಲ್ಲು ಪುಟ್ಟಿ… ಸ್ವಲ್ಪ ತಡೆ! ಯಾವಾಗ ನೋಡಿದರೂ ನೀನು ರೊಟ್ಟಿಯ ಕನಸಿನ ಬಗ್ಗೆಯೇ ಹೇಳ್ತಿಯಲ್ಲವಾ, ನಿನಗೆ ಬೇರೆ ಯಾವುದೇ ಕನಸು ಬೀಳ್ಳೋದಿಲ್ಲವಾ?” ಇದು ಅವಳ ಸಹಪಾಠಿಯೊಬ್ಬನ ಸಾಂದರ್ಭಿಕ ಪ್ರಶ್ನೆಯಾಗಿತ್ತು.

“”ಬೇರೆ ಕನಸುಗಳೂ ಇರುತ್ತವಾ?” ಆಶ್ಚರ್ಯ ಮಿಶ್ರಿತ ಮುಗ್ಧತೆಯಿಂದ ಕೇಳಿದ ಪುಟ್ಟಿಯ ಪದಪುಂಜಗಳಲ್ಲಿ ಪ್ರಶ್ನೆ ಮತ್ತು ಉತ್ತರ ಒಂದೇ ಆಗಿತ್ತು.

ಪ್ರಶ್ನೆ ಒಂದು ಉತ್ತರ ಹಲವು

ಅವನು ತೀರಾ ಹಿಂದುಳಿದ ಕೊಪ್ಪದಿಂದ ಶಾಲೆಗೆ ಬರುತ್ತಿದ್ದ. ಅಲ್ಲಿ ಕಡು ಬಡವರದೇ ಏಕಚಕ್ರಾಧಿಪತ್ಯವಿತ್ತು. ಸರಕಾರಿ ಶಾಲೆಯಲ್ಲಿ ಯಾವುದೇ ಶುಲ್ಕ ಕೊಡಲಿಕ್ಕಿರಲಿಲ್ಲ. ಮೇಲಾಗಿ ಅವನನ್ನು ದುಡಿಮೆಗೆ ದೂಡುವ ವಯಸ್ಸು ಇನ್ನೂ ಆಗಿರಲಿಲ್ಲ. ಈ ಕಾರಣಗಳಿಂದಾಗಿಯೇ ಅಪ್ಪ-ಅಮ್ಮ ಅವನನ್ನು ಶಾಲೆಗೆ ಸೇರಿಸಿದ್ದರು.

ಇವತ್ತು ಶಾಲೆಗೆ ಇನ್ಸ್‌ಪೆಕ್ಟರ್‌ ಬರುವವರಿದ್ದರು. ಗುರುಗಳು ಆ ನಿಟ್ಟಿನಲ್ಲಿ ಮಕ್ಕಳನ್ನು ವಿಶೇಷವಾಗಿ ತರಬೇತುಗೊಳಿಸುತ್ತಿದ್ದರು. ಅವನು ಎಂದಿನಂತೆ ಇಂದೂ ಬಂದ. ಎಂದಿನಂತೆ ಬಾಯಿಗೆ ಬಂದಹಾಗೆ ಉಗಿಸಿಕೊಂಡು ಹಿಂದಿನ ಬೆಂಚಿನ ಮೇಲೆ ಹೋಗಿ ನಿಂತುಕೊಂಡ.

ಭೂಗೋಲದ ಮಾಸ್ಟ್ರೆ ತುಂಬಾ ಜೋರಿನವರು. ಶಿಸ್ತಿಗೆ ಇನ್ನೊಂದು ಹೆಸರು ಎಂಬಂತಿದ್ದರು. ಬಂದವರೇ ಪ್ರಶ್ನೆ ಕೇಳಲು ಮೊದಲು ಆಯ್ಕೆ ಮಾಡಿಕೊಂಡಿದ್ದು ಹಿಂದಿನ ಬೆಂಚಿನ ಮೇಲೆ ನಿಂತವನನ್ನು! ಅವರ ಪ್ರಶ್ನೆ: “”ಭಾರತದ ಯಾವ ಪ್ರಾಂತದಲ್ಲಿ ಗೋಧಿಯ ಕಣಜವಿದೆ?”

ಅವನು ಸುಮ್ಮನಿದ್ದ. ಸೊಂಯ್‌ ಸದ್ದಿನೊಂದಿಗೆ ತೋಳಿಗೆ ಬೆತ್ತದ ಏಟು ಬಿತ್ತು. ಪಂಜಾಬ್‌, ಅಷ್ಟೂ ಗೊತ್ತಿಲ್ವಾ, ಎಂಬಂತಿತ್ತು. ಆದರೆ ಬೆತ್ತದ ಭಾಷೆ ಅವನಿಗೆಲ್ಲಿ ತಿಳಿಯಬೇಕು? ಹಸಿವಿನಿಂದ ಚುರುಗುಡುತ್ತಿರುವ ಹೊಟ್ಟೆಯನ್ನು ಆ ಕೈಯಿಂದ ಜೋರಾಗಿ ಉಜ್ಜಿಕೊಂಡ.

ಮಾಸ್ಟ್ರೆ ಸಿಟ್ಟಿನಿಂದ ಮತ್ತೂಂದು ಪ್ರಶ್ನೆ ಕೇಳಿದರು, “”ಸರಿ ಹಾಗಾದರೆ, ಭಾರತದಲ್ಲಿ ಅತ್ಯಧಿಕ ಬಟ್ಟೆಯ ಗಿರಣಿಗಳು ಎಲ್ಲಿವೆ?”
ಅವನು ಈಗಲೂ ಸುಮ್ಮನಿದ್ದ. ಸೊಂಯ್‌ ಸದ್ದಿನೊಂದಿಗೆ ಅವನ ತೋಳಿಗೆ ಇನ್ನೊಂದು ಏಟು ಬಿತ್ತು. ಮುಂಬೈ, ಅಂತ ಹೇಳ್ಳೋದಕ್ಕೆ ಅಷ್ಟೂ ಗೊತ್ತಿಲ್ವಾ, ಎಂಬಂತಿತ್ತು. ಆದರವನಿಗೆ ಈಗಲೂ ಬೆತ್ತದ ಭಾಷೆ ಅರ್ಥವಾಗಲಿಲ್ಲ.

ಸುಮ್ಮನಿದ್ದ. ಅವನ ಕಣ್ಣುಗಳು ತುಂಬಿಬಂದವು. ಅವನ ಒಂದು ಕೈ ಹರಿದಿದ್ದ ಚಡ್ಡಿಯ ಭಾಗವನ್ನು ಮುಚ್ಚಿಹಿಡಿದಿತ್ತು. ಇನ್ನೊಂದು ಕೈ ತೋಳಿನಿಂದ ಗಲ್ಲಗಳನ್ನು ದಾಟಿ ಬರುತ್ತಿರುವ ಕಣ್ಣೀರನ್ನು ಒರಸಲಾರಂಭಿಸಿದ. ಅಂಗಿಯ ತೋಳು ಹರಿದುಹೋಗಿತ್ತು. ಹಾಗಾಗಿ ಕಣ್ಣೀರು ಕೈಯಿಂದ ಇಳಿದು ಕಂಕುಳ ಮಾರ್ಗವಾಗಿ ಕೆಳಗೆ ಇಳಿಯುವಂತಾಯಿತು.

ಭಾರತದಲ್ಲಿ ಗೋಧಿಯ ಕಣಜವೂ ಇಲ್ಲ, ಬಟ್ಟೆ ಗಿರಣಿಗಳೂ ಇಲ್ಲ… ಕಣ್ಣುಜ್ಜಿಕೊಳ್ಳುತ್ತ ಜೋರಾಗಿ ಕಿರುಚಿ ಹೇಳಬೇಕೆನಿಸಿತಾದರೂ ಅವನು ಸುಮ್ಮನಿದ್ದ.

ಮಾಸ್ಟ್ರೆ ಬಯಸುವುದು ಒಂದು ಪ್ರಶ್ನೆಗೆ ಒಂದೇ ಉತ್ತರವನ್ನು, ಹಲವು ಉತ್ತರಗಳನ್ನಲ್ಲ!

ಹಿಂದಿ ಮೂಲ : ಘನಶ್ಯಾಮ್‌ ಅಗ್ರವಾಲ್‌
ಕನ್ನಡಕ್ಕೆ : ಮಾಧವಿ ಎಸ್‌.ಭಂಡಾರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ