ಉಕ್ರೇನಿಯನ್‌ ಕತೆ: ತಂದೆಯ ಆಶೀರ್ವಾದ

Team Udayavani, Nov 3, 2019, 4:03 AM IST

ಒಬ್ಬ ರೈತನಿದ್ದ. ಅವನಿಗೆ ಮೂರು ಮಂದಿ ಗಂಡುಮಕ್ಕಳಿದ್ದರು. ತುಂಬ ವರ್ಷಗಳಾದ ಬಳಿಕ ರೈತನ ಹೆಂಡತಿ ಇನ್ನೊಂದು ಗಂಡುಮಗುವಿಗೆ ಜನ್ಮ ನೀಡಿದಳು. ರೈತ ಮಗುವಿಗೆ ಐವಾನ್‌ ಎಂದು ಹೆಸರಿಟ್ಟು ಪ್ರೀತಿಯಿಂದ ಸಲಹತೊಡಗಿದ. ಆದರೆ ಅಣ್ಣಂದಿರಿಗೆ ಐವಾನನನ್ನು ಕಂಡರೆ ಆಗುತ್ತಿರಲಿಲ್ಲ. ಅವನನ್ನು ದ್ವೇಷಿಸುತ್ತಿದ್ದರು. ಇದು ರೈತನಿಗೂ ತಿಳಿದಿತ್ತು. ಕೊನೆಗಾಲ ಸನ್ನಿಹಿತವಾದಾಗ ರೈತ ತನ್ನ ಹೊಲಗಳನ್ನು ಮೂರು ಮಂದಿ ಹಿರಿಯ ಮಕ್ಕಳಿಗೆ ಹಂಚಿ ಕೊಟ್ಟ. ಆಗ ಐವಾನ್‌ ತಂದೆ ತನಗೇನೂ ಕೊಡಲಿಲ್ಲವೆಂದು ಮುಖ ಚಿಕ್ಕದು ಮಾಡಿಕೊಂಡು ನಿಂತಿದ್ದ. ರೈತ ಮಗನನ್ನು ಬಳಿಗೆ ಕರೆದು ತಲೆ ನೇವರಿಸಿದ. “”ನಾನು ನಿನಗೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ. ನಿನ್ನನ್ನು ಪ್ರೀತಿಸದಿರುವ ಸಹೋದರರು ಅದಕ್ಕಾಗಿ ನಿನಗೆ ಖಂಡಿತ ಹಾನಿ ಮಾಡುತ್ತಾರೆ. ಆದರೆ ಅದಕ್ಕಿಂತ ಹೆಚ್ಚಿನದಾಗಿರುವ ನನ್ನ ತುಂಬು ಹೃದಯದ ಆಶೀರ್ವಾದವನ್ನು ನಿನಗೆ ಕೊಡುತ್ತಿದ್ದೇನೆ. ಪ್ರಾಮಾಣಿಕವಾಗಿ ಜೀವನ ಮಾಡು. ಅಕ್ಷಯವಾದ ಸುಖ ಸಂಪತ್ತು ನಿನಗೆ ದೊರೆಯುತ್ತದೆ” ಎಂದು ಹೇಳಿದ. ಐವಾನ್‌ ತಂದೆಯ ಮಾತಿಗೆ ಸಂತೋಷದಿಂದ ಒಪ್ಪಿಕೊಂಡ.

ತಂದೆ ತೀರಿಕೊಂಡ ಬಳಿಕ ಐವಾನ್‌ ಮನೆಯಲ್ಲಿ ನಿಲ್ಲಲಿಲ್ಲ. ತನ್ನ ಅದೃಷ್ಟವನ್ನು ಹುಡುಕಿಕೊಂಡು ಮನೆಯಿಂದ ಹೊರಟ. ಒಂದೆಡೆ ಒಬ್ಬ ಜಮೀನ್ದಾರ ಕೆರೆ ತೋಡಿಸುವ ಕೆಲಸಕ್ಕೆ ಮುಂದಾಗಿದ್ದ. ಆದರೆ ಎಷ್ಟು ಆಳ ತೋಡಿದರೂ ನೀರು ಸಿಕ್ಕಿರಲಿಲ್ಲ. ಕೆಲಸದವರು ನಿರಾಶರಾಗಿ ಕೆಲಸ ನಿಲ್ಲಿಸಿ ಹೊರಟಿದ್ದರು. ಐವಾನ್‌ ಅಲ್ಲಿಗೆ ಹೋಗಿ, “”ಯಾಕೆ ಹಾಗೆಯೇ ಹೊರಟಿರಿ? ಆ ಮೂಲೆಯಲ್ಲಿ ಗುದ್ದಲಿಯಿಂದ ಅಗೆದು ನೋಡಿ. ಅಲ್ಲಿ ಭಾರೀ ಜಲರಾಶಿಯೇ ಇದೆ” ಎಂದು ಹೇಳಿದ. ಜಮೀನಾªರನಿಗೆ ಕೋಪ ಬಂತು. “”ಭಾರೀ ದೊಡ್ಡ ಜಲ ಪಂಡಿತನ ಹಾಗೆ ಬೊಗಳುತ್ತಿದ್ದೀಯಲ್ಲ, ನೀನೇ ಗುದ್ದಲಿಯಿಂದ ಅಗೆದು ನೀರು ಹರಿಸು ನೋಡೋಣ. ಇಷ್ಟು ದಿನದಿಂದ ನಾವು ಕೆಲಸ ಮಾಡುತ್ತಿದ್ದೇವೆ, ನಮ್ಮ ಕಣ್ಣಿಗೆ ಗೋಚರಿಸದ ನೀರು ನಿನಗೆ ಕಂಡಿತೆ? ನಿನ್ನ ಮಾತಿನಂತೆ ನೀರು ಸಿಗದೆ ಹೋದರೆ ಈ ಕೆರೆಯಲ್ಲಿ ನಿನ್ನನ್ನು ಸಮಾಧಿ ಮಾಡಿಹೋಗುತ್ತೇವೆ” ಎಂದು ಹೇಳಿ ಗುದ್ದಲಿಯನ್ನು ನೀಡಿದ.

ಐವಾನ್‌ ಗುದ್ದಲಿಯೊಂದಿಗೆ ಕೆರೆಗೆ ಇಳಿದು ಮೂಲೆಯಲ್ಲಿ ಅಗೆದದ್ದೇ ತಡ, ಪ್ರವಾಹದ ಹಾಗೆ ನೀರಿನ ಒಸರು ಉಕ್ಕಿ ಕೆರೆಯನ್ನು ತುಂಬತೊಡಗಿತು. ಜಮೀನಾªರ ಆಶ್ಚರ್ಯಚಕಿತನಾದ. ಇವನು ಯಾರೋ ಮಹಾತ್ಮನೇ ಇರಬೇಕು ಎಂದು ಭಾವಿಸಿದ. ತನ್ನ ಕಿಸೆಗೆ ಕೈ ಹಾಕಿದ. ಒಂಬತ್ತು ಚಿನ್ನದ ತುಂಡುಗಳು ಸಿಕ್ಕಿದವು. ಅದನ್ನು ಐವಾನನಿಗೆ ಬಹುಮಾನವೆಂದು ಕೊಟ್ಟು ಕಳುಹಿಸಿದ. ಮುಂದೆ ಬರುವಾಗ ಐವಾನ್‌ ತನ್ನ ತಂದೆಯ ಮಾತುಗಳನ್ನು ನೆನಪು ಮಾಡಿಕೊಂಡ. ಪ್ರಾಮಾಣಿಕವಾಗಿ ಇರಬೇಕು ಎಂದು ತಂದೆ ಹೇಳಿದ್ದನಲ್ಲವೆ? ತನಗೆ ಸಿಕ್ಕಿದ ಬಹುಮಾನ ಅಪ್ರಾಮಾಣಿಕವಾಗಿದ್ದರೆ ಇರಿಸಿಕೊಳ್ಳಬಾರದು ಎಂದುಕೊಂಡ. ಎದುರಿಗೆ ಹರಿಯುತ್ತಿದ್ದ ನೀರಿಗೆ ತನ್ನಲ್ಲಿದ್ದ ಚಿನ್ನದ ತುಂಡುಗಳನ್ನು ಹಾಕಿ, “”ಪ್ರಾಮಾಣಿಕವಾದ ಸಂಪಾದನೆಯಾಗಿದ್ದರೆ ತೇಲಿಕೊಂಡು ನನ್ನ ಬಳಿಗೆ ಬನ್ನಿ” ಎಂದು ಹೇಳಿದ. ಚಿನ್ನದ ತುಂಡುಗಳು ಮುಳುಗಲಿಲ್ಲ, ಪ್ರವಾಹದಲ್ಲಿ ಹರಿದು ಹೋಗಲಿಲ್ಲ. ನಿಧಾನವಾಗಿ ತೇಲುತ್ತ ಅವನ ಬಳಿಗೆ ಬಂದವು.

ಐವಾನ್‌ ಚಿನ್ನದ ತುಂಡುಗಳನ್ನು ತೆಗೆದುಕೊಂಡು ಮುಂದೆ ಸಾಗಿದ. ಆಗ ಅವನಿಗೆ ಒಂಟೆಯ ಮೇಲೆ ಸರಕು ಹೇರಿಕೊಂಡ ಒಬ್ಬ ವ್ಯಾಪಾರಿ ಕಾಣಿಸಿದ. ವ್ಯಾಪಾರಿಯು ಅಸ್ವಸ್ಥನಾಗಿ ಮುಂದೆ ಹೋಗಲಾಗದೆ ಒದ್ದಾಡುತ್ತಿದ್ದ. ಐವಾನ್‌ ಅವನನ್ನು ಮಾತನಾಡಿಸಿದ. ಅವನು, “”ನಾನು ಧೂಪದ್ರವ್ಯವನ್ನು ಮಾರಾಟ ಮಾಡಲು ಹೊರಟಿದ್ದೇನೆ. ಆದರೆ ಕಾಯಿಲೆಯಿಂದ ಒಂದು ಹೆಜ್ಜೆ ಮುಂದಿಡಲಾಗದೆ ಕಷ್ಟಪಡುತ್ತಿದ್ದೇನೆ” ಎಂದು ಅಸಹಾಯನಾಗಿ ಹೇಳಿದ. ಐವಾನ್‌ ಮರುಕದಿಂದ, “”ನನ್ನ ಬಳಿ ಒಂಬತ್ತು ಚಿನ್ನದ ತುಂಡುಗಳಿವೆ. ನಿಮಗೆ ಇಷ್ಟವಿದ್ದರೆ ಇದನ್ನು ತೆಗೆದುಕೊಂಡು ಸರಕನ್ನು ನನಗೆ ಕೊಟ್ಟುಬಿಡಿ” ಎಂದು ಹೇಳಿದ. ವ್ಯಾಪಾರಿಯು ಸಂತೋಷದಿಂದ ಈ ಮಾತಿಗೆ ಒಪ್ಪಿ ಧೂಪದ್ರವ್ಯವನ್ನು ಕೊಟ್ಟು ತನ್ನ ಊರಿನ ದಾರಿ ಹಿಡಿದ.

ಬಳಿಕ ಐವಾನ್‌ ಧೂಪದ್ರವ್ಯವನ್ನು ತೆಗೆದು ಅದಕ್ಕೆ ಬೆಂಕಿ ಹಚ್ಚಿದ. ಅದರ ಪರಿಮಳ ಆಕಾಶದ ತನಕ ವ್ಯಾಪಿಸಿತು. ಅದರಿಂದ ಅಲ್ಲಿ ಸಾಗುತ್ತಿದ್ದ ಒಬ್ಬ ದೇವದೂತ ಸಂಪ್ರೀತನಾಗಿ ಕೆಳಗಿಳಿದು ಬಂದ. “”ನೀನು ನನ್ನ ಮನಸ್ಸನ್ನು ಗೆದ್ದುಕೊಂಡಿರುವೆ. ಪ್ರತಿಫ‌ಲವಾಗಿ ನಿನಗೆ ಮೂರು ವರಗಳಲ್ಲಿ ಯಾವುದಾದರೂ ಒಂದನ್ನು ಕೊಡಲು ಇಷ್ಟಪಡುತ್ತೇನೆ. ಕೈತುಂಬ ಹಣ ಬೇಕೇ, ರಾಜ್ಯದ ಅಧಿಕಾರ ಬೇಕೇ, ಒಳ್ಳೆಯ ಹೆಂಡತಿ ಬೇಕೇ? ನಿರ್ಧರಿಸಿ ಹೇಳು” ಎಂದು ಕೇಳಿದ. ಐವಾನ್‌ಗೆ ಇದಕ್ಕೆ ಉತ್ತರ ಗೊತ್ತಿರಲಿಲ್ಲ. “”ಈಗ ಯಾರಲ್ಲಾದರೂ ಕೇಳಿಬಂದು ಹೇಳುತ್ತೇನೆ” ಎಂದು ಹೇಳಿ ಸನಿಹದ ಹಳ್ಳಿಗೆ ಓಡಿದ. ಅಲ್ಲಿ ಹೊಲ ಉಳುತ್ತಿದ್ದ ಒಬ್ಬ ರೈತನೊಂದಿಗೆ ಇದನ್ನು ಕೇಳಿದ. ರೈತನು, “”ಹಣವಿದ್ದರೆ ಕಳ್ಳರ ಕಾಟ ತಪ್ಪಿದ್ದಲ್ಲ, ರಾಜ್ಯವಿದ್ದರೆ ಶತ್ರುಗಳು ಬದುಕಲು ಬಿಡುವುದಿಲ್ಲ. ಒಳ್ಳೆಯ ಹೆಂಡತಿ ಇದ್ದರೆ ಎಂಥ ಕಷ್ಟ ಬಂದರೂ ಜೊತೆಗಿರುತ್ತಾಳೆ” ಎಂದು ಹೇಳಿದ.

ಐವಾನ್‌ ದೇವದೂತನ ಬಳಿಗೆ ಬಂದು ಒಳ್ಳೆಯ ಹೆಂಡತಿಯನ್ನು ಕೊಡುವಂತೆ ಬೇಡಿದ. ದೇವದೂತನು, “”ನಾಳೆ ಬೆಳಗ್ಗೆ ಸೂರ್ಯ ಉದಯಿಸುವ ಹೊತ್ತಿಗೆ ಸನಿಹದಲ್ಲಿರುವ ಸರೋವರದ ದಂಡೆಯಲ್ಲಿ ಕಾದು ಕುಳಿತಿರು. ಆಕಾಶ ಮಾರ್ಗದಲ್ಲಿ ಮೂರು ಹಂಸಗಳು ಹಾರುತ್ತ ಬಂದು ಕೆಳಗಿಳಿದು ಹಂಸದ ರೆಕ್ಕೆಯನ್ನು ಕಳಚಿ ಸ್ತ್ರೀರೂಪ ಧರಿಸುತ್ತವೆ. ಅವು ಜಲಕ್ರೀಡೆಗಾಗಿ ನೀರಿಗಿಳಿದಾಗ ಒಂದು ಹಕ್ಕಿಯ ರೆಕ್ಕೆಗಳನ್ನು ಅಡಗಿಸಿಡು. ಅವಳು ಬಂದು ಕೇಳಿದಾಗ ಕೊಡಬೇಡ. ನಿನ್ನನ್ನು ಮದುವೆಯಾಗುವಂತೆ ಕೇಳಿಕೋ. ಅವಳು ಒಪ್ಪಿಕೊಳ್ಳುತ್ತಾಳೆ. ಅವಳನ್ನು ವಿವಾಹವಾಗಿ ಸುಖವಾಗಿರು” ಎಂದು ಹೇಳಿದ.

ಅದೇ ಪ್ರಕಾರ ಐವಾನ್‌ ಮರುದಿನ ಸರೋವರದ ಬಳಿ ಕಾದುಕುಳಿತ. ಮೂರು ಹಂಸಗಳು ಬಂದವು. ರೆಕ್ಕೆ ಕಳಚಿ ಸುಂದರ ಸ್ತ್ರೀಯರಾಗಿ ಸರೋವರಕ್ಕಿಳಿದವು. ಅವನು ಒಬ್ಬಳ ರೆಕ್ಕೆಗಳನ್ನು ಅಪಹರಿಸಿದ. ರೆಕ್ಕೆಗಳು ಸಿಗದೆ ಅವಳು ಮರಳಿ ಹಂಸವಾಗುವಂತಿರಲಿಲ್ಲ. ತನ್ನನ್ನು ವಿವಾಹವಾಗುವಂತೆ ಅವನು ಕೇಳಿಕೊಂಡ. ಅವಳು ಸಮ್ಮತಿಸಿ ಅವನ ಜೊತೆಗೆ ಬಂದಳು. ಸಮೀಪದ ಕಾಡಿನ ಬಳಿ ಐವಾನ್‌ ಒಂದು ಗುಡಿಸಲು ಕಟ್ಟಿಕೊಂಡು ಸಂಸಾರ ಆರಂಭಿಸಿದ.

ಒಂದು ದಿನ ಪಕ್ಕದ ಊರಿನ ಜಮೀನ್ದಾರ ಕುದುರೆಯ ಮೇಲೇರಿಕೊಂಡು ತನ್ನ ಮಗನ ಜೊತೆಗೆ ಅದೇ ದಾರಿಯಾಗಿ ಬಂದ. ಐವಾನ್‌ನ ಹೆಂಡತಿಯನ್ನು ಕಂಡು ಬೆಕ್ಕಸ ಬೆರಗಾದ. ಇಂತಹ ರೂಪವತಿ ಭೂಮಿಯಲ್ಲಿರಲು ಸಾಧ್ಯವಿಲ್ಲ. ನೋಡಿದರೆ ದೇವಲೋಕದವಳ ಹಾಗೆ ಕಾಣಿಸುತ್ತಿದ್ದಾಳೆ. ತನ್ನ ಮಗನಿಗೆ ಇವಳನ್ನು ಮದುವೆ ಮಾಡಿಸಬೇಕು ಎಂದುಕೊಂಡ. ಐವಾನನ ಬಳಿಗೆ ಬಂದ. “”ಈ ಊರಿನಲ್ಲಿ ಒಂದು ವಿಚಿತ್ರ ಪದ್ಧತಿಯಿದೆ. ಹೊಸಬನಾದ ನಿನಗಿದು ತಿಳಿದಿರಲಿಕ್ಕಿಲ್ಲ. ನಾನು ಎರಡು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ ನನ್ನ ಸಂಪತ್ತು ಪೂರ್ಣವಾಗಿ ನಿನಗೆ ದೊರಕುತ್ತದೆ. ಉತ್ತರ ಹೇಳಲು ಕಷ್ಟವಾದರೆ ನಿನ್ನ ಹೆಂಡತಿ ನನಗೆ ಸೊಸೆಯಾಗಬೇಕು. ಇದಕ್ಕೆ ಆಗುವುದಿಲ್ಲ ಎಂದು ನುಣುಚಿಕೊಂಡರೆ ಊರಿನ ನಿಯಮದಂತೆ ನಿನ್ನ ರುಂಡ ಮುಂಡದಿಂದ ಬೇರ್ಪಡುತ್ತದೆ” ಎಂದು ಹೇಳಿದ.

ವಿಧಿಯಿಲ್ಲದೆ ಐವಾನ್‌, “”ಸರಿ, ಪ್ರಶ್ನೆ ಕೇಳಿ” ಎಂದು ಹೇಳಿದ. ಜಮೀನಾªರ, “”ಸಂಜೆ ಸೂರ್ಯನು ಅಸ್ತಮಿಸುವ ವೇಳೆಗೆ ಕೆಂಪುಬಣ್ಣ ತಳೆಯುವುದು ಯಾಕೆ? ನರಕವೆಂದರೆ ಹೇಗಿರುತ್ತದೆ? ಈ ಎರಡು ಪ್ರಶ್ನೆಗಳಿಗೆ ಉತ್ತರ ಬೇಕು” ಎಂದು ಹೇಳಿದ. ಐವಾನ್‌ ಉತ್ತರ ತಿಳಿಯದೆ ತಲೆ ಕೆರೆಯುತ್ತಿದ್ದಾಗ ಹೆಂಡತಿ ಮನೆಯೊಳಗೆ ಕರೆದಳು. “”ಮೊದಲ ಪ್ರಶ್ನೆಗೆ ಉತ್ತರ ಹೇಳುತ್ತೇನೆ, ಹೋಗಿ ಹೇಳು. ನಾನು ಸೂರ್ಯನ ಮಗಳು. ನಾವು ಮೂವರು ಅವನಿಗೆ ಕಣ್ಣುಗಳಂತಿರುವ ಪುತ್ರಿಯರು. ಸಂಜೆ ನಾವು ವಿಹಾರಕ್ಕಾಗಿ ಹೊರಬಂದಾಗ ಅವನು ಕಣ್ಣು ಕಾಣಿಸದೆ ಕೆಂಪಗಾಗುತ್ತಾನೆ” ಎಂದಳು. ಐವಾನ್‌ ಜಮೀನಾªರನ ಬಳಿಗೆ ಹೋಗಿ ಇದನ್ನು ತಿಳಿಸಿದ. “”ಸರಿ, ಎರಡನೆಯ ಪ್ರಶ್ನೆಗೆ ಉತ್ತರ ಹೇಳು” ಎಂದು ಕೇಳಿದ ಜಮೀನ್ದಾರ.

ಐವಾನ್‌ ಮತ್ತೆ ಹೆಂಡತಿಯ ಮುಖ ನೋಡಿದ. ಅವಳು ಜಮೀನ್ದಾರನಿಗೆ, “”ನರಕ ಹೇಗಿದೆಯೆಂಬುದನ್ನು ಅಲ್ಲಿಗೆ ಹೋಗಿ ನೋಡಿ ಹೇಳಬೇಕಲ್ಲವೆ? ನನ್ನ ಗಂಡ ಒಬ್ಬನೇ ಹೋಗಿಬಂದರೆ ನಿಮಗೆ ನಂಬಿಕೆ ಬರಲಾರದು. ಜೊತೆಗೆ ನಿಮ್ಮ ಮಗನನ್ನೂ ಕಳುಹಿಸಿ. ಸ್ವಲ್ಪ ಹೊತ್ತಿನ ಬಳಿಕ ಕೂಗಿ ಕೇಳಿದರೆ ನಿಮ್ಮ ಮಗನೇ ಉತ್ತರ ಕೊಡುತ್ತಾನೆ” ಎಂದಳು. ಜಮೀನ್ದಾರ ಮಗನನ್ನು ಕಳುಹಿಸಿದ. ಅವಳು ಅವನನ್ನು ಮನೆಯ ಹಿಂಬದಿಗೆ ಕರೆದುಕೊಂಡು ಹೋಗಿ ಅವನ ತಲೆಯನ್ನು ಗಟಾರದ ಕೊಳಕು ನೀರು ಹೊರ ಬರುವ ತೂಬಿನೊಳಗೆ ತೂರಿಸಿ ಬಿಗಿಯಾಗಿ ಹಿಡಿದುಕೊಂಡಳು. ಸ್ವಲ್ಪ ಹೊತ್ತಿನಲ್ಲಿ ಜಮೀನಾªರ ಹೊರಗೆ ನಿಂತು, “”ಮಗನೇ ಎಲ್ಲಿದ್ದೀಯಾ, ನರಕ ಹೇಗಿದೆ?” ಎಂದು ಕೇಳಿದ. “”ಅಪ್ಪಾ, ದುರ್ಗಂಧದಿಂದ ಉಸಿರುಕಟ್ಟುತ್ತಿದೆ, ನರಕ ಭಯಾನಕವಾಗಿದೆ. ಬೇಗನೆ ನನ್ನನ್ನು ಮರಳಿ ಕರೆಸಿಕೊಳ್ಳದಿದ್ದರೆ ಸತ್ತುಹೋಗುತ್ತೇನೆ” ಎಂದು ಹೇಳಿದ ಮಗ.

“”ನನ್ನ ಮಗನನ್ನು ವಾಪಾಸು ಕರೆಸಿ” ಎಂದ ಜಮೀನ್ದಾರ. ಐವಾನನ ಹೆಂಡತಿ ಒಪ್ಪಲಿಲ್ಲ. “”ಎರಡೂ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತಲ್ಲವೆ? ಮೊದಲು ನಿಮ್ಮ ಸಕಲ ಆಸ್ತಿಯನ್ನೂ ನಮಗೆ ನೀಡಿರುವುದಾಗಿ ಬರೆದುಕೊಡಿ. ಇಲ್ಲವಾದರೆ ನರಕದಲ್ಲಿಯೇ ನಿಮ್ಮ ಮಗ ಸತ್ತುಹೋಗುತ್ತಾನೆ” ಎಂದು ಹೇಳಿದಳು. ಜಮೀನ್ದಾರ ಹಾಗೆಯೇ ನಡೆದುಕೊಂಡು ಮಗನ ಜೊತೆಗೆ ತಲೆ ತಗ್ಗಿಸಿ ಹೊರಟುಹೋದ.

ಪರಾಶರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು...

  • ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ...

  • ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ...

  • ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ...

  • ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. "ಅದ್ವಿಕಾ' ಎಂದು ಉತ್ತರ ಬಂತು....

ಹೊಸ ಸೇರ್ಪಡೆ