ನಮ್ಮ ಮನೆಯಂಗಳದಿ ಬೆಳೆದೊಂದು ಹೂವಿಂದ…

ಹೂ ಗಿಡವೆಂಬ ಬೆಳೆಯುವ ಕೂಸು

Team Udayavani, Aug 7, 2019, 5:04 AM IST

ಮನೆಯ ಮುಂದೊಂದು ಸುಂದರ ಹೂದೋಟ ಇರಬೇಕೆಂಬ ಬಯಕೆ ಹೆಚ್ಚಿನ ಹೆಂಗಳೆಯರಿಗೆ ಇರುತ್ತದೆ. ವಿಸ್ತಾರವಾದ ಮನಮೋಹಕ ಹೂ ತೋಟ ಅಲ್ಲದಿದ್ದರೂ, ಕೊನೇ ಪಕ್ಷ ನಾಲ್ಕಾರು ವೆರೈಟಿಯ ಹೂ ಗಿಡಗಳಿಂದ ಕೂಡಿರುವ ಪುಟ್ಟದಾದ ತೋಟವಾದರೂ ಇರಬೇಕೆಂಬ ಆಸೆ ಸಾಮಾನ್ಯ.

ನಾನಾ ನಮೂನೆಯ ಕೆಂಗುಲಾಬಿಗಳು, ಮಾರು ದೂರ ಸುವಾಸನೆ ಬೀರೋ ಮಲ್ಲಿಗೆ, ಸಂಪಿಗೆ, ದೇವಲೋಕದ ಸುಂದರ ಹೂ ಪಾರಿಜಾತ, ದೇವರ ಪೂಜೆಗೆ ಒಂದು ದಿನವೂ ತಪ್ಪದಂತೆ ಸದಾ ಲಭ್ಯವಿರುವ ಬಗೆಬಗೆಯ ದಾಸವಾಳಗಳು, ಲಂಬಾಸ್‌, ಸೇವಂತಿಗೆ, ಸದಾ ಅರಳುವ ನಿತ್ಯಪುಷ್ಪ, ಹೆಚ್ಚು ನೀರು ಬೇಡದ ಬಣ್ಣ ಬಣ್ಣದ ಕ್ರೋಟನ್‌ ಗಿಡಗಳು… ಹೀಗೆ, ಪಟ್ಟಿ ಮಾಡಲು ಕುಳಿತರೆ ಮುಗಿಯದಷ್ಟು ಸುಂದರ ಹೂಗಳು ಪ್ರಕೃತಿಯ ಮಡಿಲಲ್ಲಿವೆ. ಅವೆಲ್ಲವೂ ತನ್ನ ಮನೆಯಂಗಳಲ್ಲಿ ಪ್ರತಿ ದಿನ ಅರಳುತ್ತಿರಲಿ ಅನ್ನೋ ಬಯಕೆ ಅವಳದ್ದು. ಹೂವಿಗೂ ಮಹಿಳೆಗೂ ಇರುವ ಬಿಡಿಸಲಾರದ ನಂಟೇ ಈ ಆಸೆಗೆ ಕಾರಣವಿರಬೇಕು .

ಮಳೆಗಾಲ ಬಂತೆಂದರೆ ಈ ಆಸೆ ಇಮ್ಮಡಿಯಾಗೋ ಸಮಯ. ಏಕೆಂದರೆ, ಹೊಸ ಗಿಡಗಳು ಜೀವ ಪಡೆದುಕೊಳ್ಳಲು ಇದು ಸಕಾಲ. ಯಾರ ಮನೆಗೆ ಹೋದರೂ ಅವಳ ದೃಷ್ಟಿ ಮೊದಲು ಹಾಯುವುದು ಹೂತೋಟದ ಕಡೆ. ತನ್ನ ಮನೆಯಲ್ಲಿರದ ವಿಶಿಷ್ಟ ಗಿಡದ ರೆಂಬೆಯನ್ನೋ, ಬೀಜವನ್ನೋ ಪಡೆದ ನಂತರವೇ ಆಕೆ ಅಲ್ಲಿಂದ ತೆರಳುವುದು. ಸಂಜೆಯ ಹೊತ್ತು ವಾಕಿಂಗ್‌ ಹೋದಾಗ, ಬಸ್‌/ ಕಾರಲ್ಲಿ ಸಂಚರಿಸುವಾಗ ಸುಮ್ಮನೆ ಹೊರಗಡೆ ಕಣ್ಣು ಹಾಯಿಸೋ ಅವಳು, ದಾರಿಯುದ್ದಕ್ಕೂ ಕಾಣೋ ಹೂಗಿಡಗಳ ಸೆಳೆತದಿಂದ ಪಾರಾಗಲು ಸಾಧ್ಯವೇ ಇಲ್ಲ. ಆ ಮನೆಯಂಗಳದಲ್ಲಿ ಅರಳಿರೋ ಆ ಹೂ ಎಷ್ಟು ಚೆನ್ನಾಗಿದೆ, ನಮ್ಮನೆಯಲ್ಲಿ ಎಷ್ಟೇ ಕಷ್ಟ ಪಟ್ಟರೂ ಅಷ್ಟು ಚೆನ್ನಾಗಿ ಹೂ ಬರೋದಿಲ್ಲವಲ್ಲಾ, ಅಂಥಾ ಹೂವಿನ ಗಿಡವನ್ನು ನಮ್ಮನೆಗೂ ತರಬೇಕು…ಹೀಗೆ ಆಕೆಯ ಮನಸ್ಸಿನಲ್ಲಿ ಹೂಗಳದ್ದೇ ಯೋಚನೆ. ಎಲ್ಲೋ ನೋಡಿದ ಹೂ ಗಿಡವನ್ನು, ಎಲ್ಲೆಲ್ಲೋ ಹುಡುಕಾಡಿ ಮನೆಗೆ ತಂದು ನೆಟ್ಟು, ಆರೈಕೆ ಮಾಡೋ ಅವಳಿಗೆ, ಸಂಜೆಯ ಸಮಯ ಕಳೆಯಲು ನೆಚ್ಚಿನ ತಾಣವೂ ಹೂದೋಟವೇ. ಮನೆಯಂಗಳದಲ್ಲಿ ಬೆಳೆಸಿದ ತನ್ನ ಕೂಸನ್ನು ಆರೈಕೆ ಮಾಡುತ್ತಾ ಆ ಗಿಡಗಳು ಹೂ ಬಿಟ್ಟಾಗ ಆಗೋ ಸಂತಸ ಅತೀತ. ಮನೆಯಾಕೆಯ ಚುರುಕುತನ ಅವಳ ಗಾರ್ಡನ್‌ನ ಅಂದದಲ್ಲಿ ಪ್ರತಿಫ‌ಲಿಸುತ್ತದೆ.

ಅಂದ ಹಾಗೆ, ಹೂ ತೋಟ ಮಾಡಲು ಆಕೆಗೆ ದೊಡ್ಡ ಜಾಗವೇ ಬೇಕಿಲ್ಲ. ಮನೆಯ ತಾರಸಿಯ ಕುಂಡಗಳಲ್ಲಿ ಅಚ್ಚುಕಟ್ಟಾಗಿ ಹೂ ಗಿಡಗಳನ್ನು ಬೆಳೆಸುವ, ಮನೆಯ ಒಳಗಡೆ ಮನಿಪ್ಲಾಂಟ್‌,ಆರ್ಕಿಡ್‌, ಅಲೋವೆರಾಗಳನ್ನು ಬೆಳೆಸಿ ಮನೆಯಚಂದವನ್ನು ಇಮ್ಮಡಿಗೊಳಿಸುವುದೂ ಆಕೆಗೆ ಗೊತ್ತಿದೆ. ಪುಟ್ಟ ಸಸಿ ನೆಟ್ಟು, ಅದರ ಸುತ್ತ ಮರ ಗಿಡಗಳ ಸೊಪ್ಪುಗಳು, ಅಡಿಕೆ ಸಿಪ್ಪೆ, ತರಕಾರಿ/ಹಣ್ಣುಗಳ ಸಿಪ್ಪೆ, ಪಾತ್ರೆ ತೊಳೆದ ನೀರು, ಕಾಫಿ-ಚಹಾದ ಪುಂಟೆಗಳನ್ನೇ ಹಾಕಿ ಗಿಡ ಬೆಳೆಸುವುದು ಆಕೆಯ ಜಾಣತನ. ತಿಂಗಳಿಗೊಮ್ಮೆ ಹಸುವಿನ ಸಗಣಿ/ ಗೋಮೂತ್ರ ಹಾಕಿ, ಸುಂದರವಾದ ಹೂಗಳು ಗಾರ್ಡನ್‌ ತುಂಬಾ ನಳನಳಿಸುವಾಗ ಆಕೆಯ ಸಂಭ್ರಮ ನೋಡಬೇಕು!

ಹೂ ಆಗಿ ಮುಗಿದ ನಂತರ ಆ ಗೆಲ್ಲುಗಳನ್ನು ಟ್ರಿಮ್‌ ಮಾಡಿದರೆ ಮಾತ್ರ, ಮತ್ತೆ ಆ ಗಿಡ ಚಿಗುರಿ ಹೊಸತಾಗಿ ಮೊಗ್ಗು ಮೂಡಲು ಸಾಧ್ಯ. ತಾನು ನೆಟ್ಟ ಗಿಡವನ್ನು ತನ್ನದೇ ಕೈಯಾರೆ ಕತ್ತರಿಸುವಾಗ, ಮುಂದಿನ ವರ್ಷ ಇನ್ನಷ್ಟು ಚೆನ್ನಾಗಿ ಬೆಳೆಯಲಿ ಎಂಬ ಆಸೆ ಇರುತ್ತದೆ.

ಮಳೆಗಾಲ ಮುಗಿದು, ಬಿಸಿಲು ಬೀಳುತ್ತಿದ್ದಂತೆ ಗಿಡಗಳ ಸುತ್ತಮುತ್ತ ಬೆಳೆದ ಕಳೆಗಳನ್ನೆಲ್ಲಾ ಕಿತ್ತು, ನೀರುಣಿಸುವ ಕೆಲಸಕ್ಕಿಳಿಯುತ್ತಾಳೆ ಆಕೆ. ಹೀಗೆ ವರ್ಷದ ಮುನ್ನೂರೈವತ್ತೂ ದಿನ ಒಂದಲ್ಲಾ ಒಂದು ರೀತಿಯಲ್ಲಿ ಗಿಡಗಳ ನಡುವೆ ಕಳೆವ ಆಕೆಗೆ, ಗಿಡ ಕೇವಲ ಗಿಡವಷ್ಟೇ ಅಲ್ಲ. ಅದು ಆಕೆಯ ಜೀವಂತಿಕೆಯ ಕೂಸು!

-ವಂದನಾ ರವಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ