ಪಗಡೆಯ ಆಟದಲಿ ಜೀವನಪಾಠ

Team Udayavani, Nov 13, 2019, 5:10 AM IST

ಪಗಡೆಯಾಟ ಇಂದು ನಿನ್ನೆಯದಲ್ಲ. ಋಗ್ವೇದದಲ್ಲಿ “ಅಕ್ಷ’ ಎಂಬ ಹೆಸರಿನಿಂದ ಈ ಆಟದ ಉಲ್ಲೇಖವಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯ ಮಾಡಿದರೆಂಬ ವರ್ಣನೆ ಅಥರ್ವಣ ವೇದದಲ್ಲಿದೆ. ಮಹಾದೇವನಿಗೂ ಪಗಡೆ ಅತ್ಯಂತ ಪ್ರೀತಿಯ ಆಟವೆಂಬ ಪ್ರತೀತಿ ಇದೆ. ಶಿವೆಯೊಂದಿಗೆ ಪಗಡೆಯಾಡುವ ಶಿವ, ಸುಂದರ ದಾಂಪತ್ಯ ಜೀವನದ ಪ್ರತೀಕ. ಇಂದಿಗೂ ಓಂಕಾರೇಶ್ವರದಂಥ ಶಿವಮಂದಿರಗಳಲ್ಲಿ ಶಯನಾರತಿಯ ಮೊದಲು ಪಗಡೆಯ ಪಟ್ಟವನ್ನು ಹಾಸಿಡುವ ಪದ್ಧತಿ ಇದೆ. ಅರ್ಜುನನ ಮಗನಾದ ಪರೀಕ್ಷಿತನ ರಾಜ್ಯದಲ್ಲಿ ಕಲಿ ಓಡಾಡುತ್ತಿದ್ದನಂತೆ. ಪರೀಕ್ಷಿತನ ಆಜ್ಞೆಯಂತೆ ದ್ಯುತದಲ್ಲಿ ವಾಸವಾದನಂತೆ. ಮಹಾಭಾರತದ ದೂತವಂತೂ ಕಲಿಗಾಲದ ಸಾಕ್ಷಾತ್‌ ಪ್ರಮಾಣ. ಪಗಡೆಯೆಂಬುದು ಬರೀ ಮನೋರಂಜಕ ಆಟವಲ್ಲ. ಅದು ಜೀವನದ ಪಾಠವನ್ನೂ ಹೇಳಿಕೊಡುವ ಅದೃಶ್ಯ ಗುರು. ಈ ಆಟದ ಒಂದೊಂದು ನಡೆಯಲ್ಲೂ ಎಂತೆಂಥ ಪಾಠಗಳಿವೆ ಗೊತ್ತಾ?

“ಸಾಬಕ್ಕಾ, ಲಗೂ ಲಗೂ ಊಟಾ ಕೆಲಸಾ ಮುಗಸರೀ.. ನಿಮ್ಮನಿಯವರೂ ಬಂದು ಕೂತಾರ ನಮ್ಮನ್ಯಾಗ. ಒಂಬತ್ತು ಹೊಡೀತಂತರೆವಾ, ಯಾವಾಗ ಶುರು ಮಾಡೋದು ಆಟಾ ಅಂತೇನಿ. ಮುಂಜಾನೆ ನಸಕಲೇ ಏಳಬೇಕು ಮತ್ತ…’ ಹಿತ್ತಲು ಬಾಗಿಲಿನಿಂದ ಸಾವಿತ್ರಿ ಬಾಯಿಯನ್ನು ಕೂಗಿದರು ರಾಧಕ್ಕ. “ಅಯ್ಯ, ಒಂಬತ್ತು ಹೊಡೀತಾ… ಬಂದೆ ಬಂದೆ. ತಡೀರೆವಾ…’ ಮುಂದೆಲೆ ಬಾಚಿಕೊಂಡು, ನಡುಮನೆಯ ಕಂಬದಲ್ಲಿ ಗಂಡಸರ ಎತ್ತರಕ್ಕೆ ಹೂತ ಕನ್ನಡಿಯಲ್ಲಿ ಕಾಲು ಎತ್ತರಿಸಿ, ಮುಖ ನೋಡಿಕೊಂಡು, ಕುಂಕುಮ ತೀಡಿಕೊಂಡು, ಕಚ್ಚೆ ಸರಿಮಾಡಿಕೊಂಡು, ಸೊಸೆಯಂದಿರಿಗೆ ಪಕ್ಕದ ಮನೆಗೆ ಹೋಗುವಂತೆ ಕಣನ್ನೆ ಮಾಡಿ ತಾನೂ ಹೊರಡಲು ತಯಾರಾಗುತ್ತಿದ್ದಳು ಅಜ್ಜಿ. ತೀರಾ ಚಿಕ್ಕ ಮಕ್ಕಳು ಮಲಗಿದ್ದಾರೋ ಇಲ್ಲೋ ಖಾತ್ರಿ ಪಡಿಸಿಕೊಂಡು, ಆಟ ಒಲ್ಲದ ವಯಸ್ಸಾದ ಹಿರಿಯರಿಗೆ ಮನೆ ನೋಡಿಕೊಳ್ಳುವಂತೆ ಹೇಳಿ, ಒಂದು ಲಾಟೀನು ಸಣ್ಣ ಉರಿ ಮಾಡಿ ಹಚ್ಚಿ ನಡುಮನೆಯ ಚೌಕಟ್ಟಿಗೆ ತೂಗು ಹಾಕಿ, ಬಾಗಿಲು ಹೊರಗಿನಿಂದ ಎಳೆದುಕೊಂಡರೆ ಅವಳ ಅಂದಿನ ದಿನಚರಿ ಮುಗಿಯಿತು.

ನಾವುಗಳೆಲ್ಲಾ ಮೊದಲೇ ಹೋಗಿ ಅಂದಿನ ಆಟವಿರುವವರ ಮನೆಯಲ್ಲಿ ವಿರಾಜಮಾನರಾಗಿರುತ್ತಿದ್ದೆವು. “ಲೇ, ನೀನು ಅಳ್ಳಿಗುಂಡಿ’ (ಆಟಕ್ಕುಂಟು ಲೆಕ್ಕಕ್ಕಿಲ್ಲ) ಎಂದು ಪಕ್ಕದ ಮನೆಯ ಶೀನ್ಯಾ ಅಂದನೋ, ದುಃಖ ಉಕ್ಕಿಬಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. “ಅಯ್ಯ ನಮ್ಮವ್ವಾ ಗಪ್ಪ… ಯಾಕೋ ಹುಡಗೀನ್ನ ಅಳಸ್ತೀಯಾ ಮಂಗ್ಯಾ…’ ಎಂದು ಶೀನ್ಯಾನ ಬೈದು, “ನಿಂದಾ ಮೊದಲನೇ ಕೈ. ಹಾಕು ಕವಡೀ..’ ಎನ್ನುತ್ತಾ ಅಜ್ಜಿ, ನನ್ನ ಕೈಗೆ ಕವಡೆ ಇಡುತ್ತಿದ್ದಳು. “ಅಯ್ಯ ಬಂಗಾರಗಟ್ಟಿ, ಪಂಚವೀಸ (ಇಪ್ಪತ್ತೈದು) ಬಿತ್ತು.. ಏನ ಫಾಶೀ ಕೈಯ ನಮ್ಮವ್ವಾ ನಿಂದೂ…’ ಅಜ್ಜಿಯ ಜೊತೆ ಅವ್ವ, ಕಾಕು, ಬಾಜೂಮನೀ ಶೀನ್ಯಾನ ಅಜ್ಜಿ ಸಹ ಲೊಚಲೊಚ ನನ್ನ ಗಲ್ಲಕ್ಕೆ ಮುತ್ತು ಕೊಡುತ್ತಿದ್ದಾಗ, ಯುದ್ಧದ ಕುದುರೆ ಏರಿ ಮುಂದೆ ಸಾಗಿದ ಚೆನ್ನಮ್ಮನ ಫೀಲು ನನ್ನ ಎದೆಯಲ್ಲಿ.

ನಾವು ಸಣ್ಣವರಿದ್ದಾಗ, ದೀಪಾವಳಿ ಹಬ್ಬದ ಸಮಯದಲ್ಲಿ ತಿಂಗಳುಗಟ್ಟಲೇ ಪಗಡೆಯಾಟ ನಡೆಯುತ್ತಿತ್ತು. ಈಗಿನಂತೆ ಆಡಂಬರವಿರಲಿಲ್ಲ. ಆದರೆ ಆತ್ಮೀಯತೆ ಇತ್ತು. ರಾತ್ರಿಯ ಹೊತ್ತು ಪಗಡೆಯಾಟ ದಿನಾ ಒಬ್ಬೊಬ್ಬರ ಮನೆಯಲ್ಲಿ . ಯಾವಾಗ ರಾತ್ರಿಯಾದೀತೋ, ಯಾವಾಗ ಪಗಡೆಯಾಟ ಶುರುವಾದೀತೋ ಎಂದು ಅಬಾಲವೃದ್ಧರಾಗಿ ಎಲ್ಲರೂ ಕಾಯುತ್ತಿದ್ದೆವು. ರಾತ್ರಿಯ ಊಟ ಮುಗಿಸಿ ಎಲ್ಲರೂ ಓಣಿಯ ಒಂದು ಮನೆ ಸೇರುತ್ತಿದ್ದರು. ಸಾಮಾನ್ಯವಾಗಿ, ರಾತ್ರಿಯೆಲ್ಲಾ ಆಟ ನಡೆಯುತ್ತಿತ್ತು. ಆ ಮನೆಯವರು ನಡುರಾತ್ರಿ ಚಹಾದ ವ್ಯವಸ್ಥೆಯನ್ನೂ ಮಾಡಿರುತ್ತಿದ್ದರು. ಎಷ್ಟೋ ಬಾರಿ ಜಗಳಗಳೂ ಆಗುತ್ತಿದ್ದವು. ಚಹಾ ಬರುತ್ತಿದ್ದಂತೆ ಜಗಳ ಮಾಯ.

ಪಗಡೆ ಪಟ್ಟಾ, ಈ ಆಟದ ಮುಖ್ಯ ಭೂಮಿಕೆ. ಅದರೊಂದಿಗೆ ಆರು ಕವಡೆಗಳು, ತಂಡಕ್ಕೆ ತಕ್ಕಂತೆ ಬಣ್ಣದ ಪಗಡೆ ಕಾಯಿಗಳು. (ಆಕಳು, ಆನೆ, ಕುದುರೆ, ಕತ್ತೆ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಜನ ಜಾಸ್ತಿ ಇರುವಾಗ ಎರಡೆರಡು ಸೆಟ್‌ ಬೇಕಾಗುತ್ತದೆ) ಪಗಡೆಯ ಪಟ್ಟಾ ಒಟ್ಟು 96 ಮನೆ(ಖಾನೆ)ಯದ್ದಾಗಿದೆ. ಆದರೆ, 74 ಮನೆಯಲ್ಲಿ ಮಾತ್ರ ಆಟ ನಡೆಯುತ್ತಿರುತ್ತದೆ. ಎರಡು ತಂಡಗಳ ಮಧ್ಯೆ ಆಟ. ಒಂದು ತಂಡದಲ್ಲಿ 6 ಜನ ಮಾತ್ರ. ಬೇಕೆಂದಲ್ಲಿ ಎರಡೂ ಕಡೆ ಸದಸ್ಯರ ಸಂಖ್ಯೆಯನ್ನು ಸಮನಾಗಿ ಹೆಚ್ಚಿಸಬಹುದು. ಹಿರಿಯ ಅನುಭವಸ್ಥರೇ ಆಟವನ್ನು ಮುನ್ನಡೆಸುತ್ತಿರುತ್ತಾರೆ. ಸರತಿಯ ಮೇಲೆ ಒಬ್ಬರಾದ ಮೇಲೊಬ್ಬರು ಕವಡೆಗಳನ್ನು ಎಸೆದಂತೆ ತಮ್ಮ ತಂಡದ ಕಾಯಿ (ಪಗಡೆ) ಗಳನ್ನು ಬಿಡುವ ಹೊಣೆಗಾರಿಕೆ ಇವರದು. ಸ್ವಲ್ಪ ಯಾಮಾರಿಸಿ, ಒಂದು ಹೆಚ್ಚು ಕಡಿಮೆ ಮನೆಗಳನ್ನು ಎಣಿಸಿ ಬಿಟ್ಟರೂ ಜಗಳ ಆಗುವುದರಿಂದ, ಪರಿಣತರಿಗೆ ಈ ಹೊಣೆಗಾರಿಕೆ ವಹಿಸಿಕೊಡಲಾಗಿರುತ್ತದೆ. ಮೊದಲು ದಹ(ಹತ್ತು) ಅಥವಾ ಇಪ್ಪತ್ತೈದು ಬಿದ್ದರೆ ಮಾತ್ರ ಮುಂದೆ ಆಡಲು ಅವಕಾಶ. ಅಲ್ಲಿಯವರೆಗೆ ಸುಮ್ಮನೆ ಕುಳಿತು ಬೇರೆಯವರು ಆಡುವುದನ್ನು ನೋಡಬೇಕು. ಯಾರ ಎಲ್ಲ ಕಾಯಿಗಳು ಮೊದಲು ಹಣ್ಣಾಗುತ್ತವೆಯೋ (ಪಟ್ಟದ ಮಧ್ಯದ ಮನೆ ಸೇರಿಕೊಳ್ಳುವುದು.) ಅವರು ಗೆದ್ದಂತೆ.

ಪಗಡೆಯಾಟದ ಇಷ್ಟೆಲ್ಲಾ ಸವಿನೆನಪುಗಳಿದ್ದರೂ “ಕೌರವರು, ಪಾಂಡವರು ಲೆತ್ತವಾಡಿ ಸೋತರಂತೆ… ರಂಗವಿಠಲ ಬರಬೇಕಂತೆ..’ ಎಂಬ ಹಾಡು ಹಾಡುತ್ತಾ ಅಜ್ಜಿಯ ಕಣ್ಣಲ್ಲಿ ನೀರು ತುಂಬುತ್ತಿದ್ದುದನ್ನು ನೋಡುತ್ತಿದ್ದಾಗ ಮನಸ್ಸು ಖಸ್‌ ಎನಿಸುತ್ತಿತ್ತು. ಅಜ್ಜಿಯ ಬಾಯಲ್ಲಿ ದೂತದ ಕಥೆ ಕೇಳಿದ ಮೇಲಂತೂ, ಪಗಡೆಯಾಟ ಒಂಚೂರೂ ಇಷ್ಟವಾಗುತ್ತಿರಲಿಲ್ಲ. ಮಹಾಭಾರತದ ಮಾರಣಹೋಮಕ್ಕೆ, ಸರ್ವನಾಶಕ್ಕೆ ಮೂಲ ಅದೇ ಎಂಬ ಭಾವನೆ ಮನಸ್ಸಿನಲ್ಲಿ ಬೇರೂರಿಬಿಟ್ಟಿತ್ತು.

ಮದುವೆಯಾಗಿ ಮೊದಲನೇ ದೀಪಾವಳಿ.. ಅಳಿಯತನ, ಬೀಗರು, ಮನೆಯವರು ಎಲ್ಲಾ ಸೇರಿ ಮನೆಯಲ್ಲಿ ಮೂವತ್ತು ಜನ. ನೀರು ತುಂಬುವ ಹಬ್ಬದ ದಿನ ರಾತ್ರಿ ತವರಿಗೆ ಹೋದವರಿಗೆ ಭರ್ಜರಿ ಆತಿಥ್ಯ. ಶ್ಯಾವಿಗೆಪಾಯಸ, ಹಪ್ಪಳ, ಸಂಡಿಗೆ ತಿಳಿಸಾರು ಅನ್ನದ ಊಟ. ಮರುದಿನ ನರಕಚತುರ್ದಶಿ ಆರತಿಯೊಂದಿಗೆ ಅಳಿಯನ ಕೈಗೆ ಕೊಟ್ಟ ಉಡುಗೊರೆಯ ಜೊತೆಗೆ ಪಗಡೆಯ ಪಟ್ಟ, ಪಗಡೆ ಕವಡೆಯ ಡಬ್ಬಿ… ಇದ್ಯಾಕೆ ಎನ್ನುವಂತೆ ಆಶ್ಚರ್ಯದಿಂದ ಕಣ್ಣರಳಿಸಿದ್ದ ನನ್ನನ್ನು ಅಜ್ಜಿ ಕಣನ್ನೆಯಿಂದ ಸುಮ್ಮನಾಗಿಸಿದ್ದಳು.

ರಾತ್ರಿ ಪಗಡೆ ಆಟ ಆರಂಭವಾಯಿತು. ಬೀಗರೇ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳು. ಬೀಗರ ಕಡೆಯೂ ಜಿದ್ದಿಗೆ ಆಡುವ ಹಿರಿಯರು.. ಬೇಕೂಂತಲೇ ಮನೆ ತಪ್ಪು ಎಣಿಸಿದ್ದು ನನಗೆ ಗೊತ್ತಾಗಿ, ಜಗಳಕ್ಕೆ ಹೋಗಬೇಕೆಂದವಳನ್ನು ಕೈ ಜಗ್ಗಿ ಎಳೆದು ಕೂಡಿಸಿದ್ದಳು ಅಜ್ಜಿ.. “ಕೆಲವೊಮ್ಮೆ ಎದುರಿಗಿನವರನ್ನೂ ಗೆಲ್ಲಲು ಬಿಡಬೇಕು ಪುಟ್ಟಿ..’ ಕಿವಿಯಲ್ಲಿ ಹೇಳಿದಳು. ಅನ್ಯಾಯದಾಟ ಎಂದು ಗೊತ್ತಿದ್ದರೂ… ನನ್ನ ಕಡೆಗೆ ಬಗ್ಗಿ “ಹೂಂ. ಒಮ್ಮೊಮ್ಮೆ ಕಾದು ನೋಡಬೇಕು’ ಅಂದಿದ್ದಳು. ಐದು ನಿಮಿಷದಲ್ಲಿ ಮುಂದಿನವರು ತಾವಾಗಿಯೇ ಮುಂದೆ ಇಟ್ಟ ಕಾಯಿ ಹಿಂದೆ ಸರಿಸಿಟ್ಟಾಗ ನನ್ನ ಕಣ್ಣುಗಳು ಮಿನುಗಿದ್ದವು. ನಮ್ಮ ಕಾಯಿ ಕಡಿಯುವ ಅವಕಾಶ ಇದ್ದಾಗಲೂ ಕಡಿಯದ ಅವರ ಕಣ್ಣುಗಳಲ್ಲಿ ಮಿನುಗಿದ ಪ್ರೀತಿ, ನೂರೆಂಟು ಪಾಠ ಹೇಳಿಕೊಟ್ಟಿತ್ತು. ಅದೇ ವಿಚಾರ ಮಾಡುತ್ತಾ ತಪ್ಪು ಕಾಯಿ ಬಿಟ್ಟಾಗ ಇಟ್ಟ ಮನೆ ಪಟ್ಟ ಚೀರಿದ್ದರು ಎದುರಾಳಿಗಳು. “ಒಮ್ಮೆ ಇಟ್ಟ ಕಾಯಿ ಮರಳಿ ಹಿಂತೆಗೆಯಲಾಗದು. ನೋಡು, ಹಿಂಗ ಅಲಕ್ಷ ಮಾಡಿ ತಪ್ಪು ಹೆಜ್ಜೆ ಇಟ್ರ ಜೀವನಪರ್ಯಂತ ಹಿಂತೆಗೆಯಲಿಕ್ಕೆ ಬರಂಗಿಲ್ಲಾ. ಯಾವುದೇ ಆಗಿರಲಿ ನೋಡಿ, ತಿಳಿದು ನಿರ್ಧಾರ ಮಾಡಬೇಕು. ತಿಳೀತಾ…’ ಅಜ್ಜಿ ಸಣ್ಣ ದನಿಯಲ್ಲಿ ಹೇಳಿದ್ದಳು. ದಹ ಪಂಚವೀಸ ದಹ…( ಹತ್ತು, ಇಪ್ಪತ್ತೈದು, ಹತ್ತು) ಮುಳುಗಿತು… ಚೀರಿದರು ಎಲ್ಲಾ. ಹೌದು, ಒಟ್ಟಿಗೇ ಈ ಥರ ಸಂಖ್ಯೆಗಳು ಬಿದ್ದರೆ ಆ ಆಟ ಮುಳುಗಿದಂತೆ. ಜೀವನದಲ್ಲಿ ಒಟ್ಟೊಟ್ಟಿಗೇ ಎಲ್ಲವನ್ನೂ ಬಾಚಿಕೊಳ್ಳುತ್ತೇನೆಂಬ ದುರಾಸೆ ಬೇಡ, ಹಾಗಾದರೆ ಎಲ್ಲಾ ಮುಳುಗುವುದು ಪಕ್ಕಾ. ಆನೆಯಾಗಿ ಕಬ್ಬು ತಿನ್ನುವುದಕ್ಕಿಂತ, ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸು ಪುಟ್ಟಿ… ಓಹ್‌ ಅಜ್ಜಿಯ ಮಾತು ಮನದಲ್ಲಿ ಅಚ್ಚೊತ್ತಿದ್ದವು. ಒಮ್ಮೆ ಸೋತಂತೆ ಅನ್ನಿಸುತ್ತಿದ್ದರೆ, ಮರುಕ್ಷಣವೇ ದಾಳಗಳಲ್ಲಿ ಬಯಸಿದ ಅಂಕಿ ಬಂದು ಆಟ ನಮ್ಮ ಕಡೆಗೆ ತಿರುಗುತ್ತಿತ್ತು. ಹೀಗೇ ಜೀವನ. ಯಾವುದೇ ಕಷ್ಟ, ದುಃಖ-ಅನುಗಾಲ ಇರದು. ಸ್ವಲ್ಪ ಸ್ವಪ್ರಯತ್ನ, ದೈವಬಲವಿದ್ದರೆ ಮರುಕ್ಷಣವೇ ಬಯಸಿದ ಫ‌ಲ… ಆಟ ಕಲಿಸುತ್ತಿದ್ದ ಜೀವನದ ಪಾಠ ಕಂಡು ಆಶ್ಚರ್ಯವಾಗಿತ್ತು.

ಎಲ್ಲ ಕಾಯಿಗಳೂ ಪಟಪಟನೆ ಹಣ್ಣಾದ ಮೇಲೆ ನಮ್ಮ ಕಡೆ ಉಳಿದಿದ್ದು ಒಂದೇ ಕಾಯಿ. ಪದೇ ಪದೇ ಕಡಿತ ಅದಕ್ಕೆ. ಒಂಟಿಗಾಯಿಗೆ ಎಂಟು ಲತ್ತೆ. ನೋಡು ಯಾವಾಗಲೂ ಸಂಸಾರದಲ್ಲಿ ಒಬ್ಬಂಟಿಯಾದರೆ ನೂರೆಂಟು ಪೆಟ್ಟುಗಳು. ಒಬ್ಬರೇ ಸಹಿಸಬೇಕು, ಎದುರಿಸಬೇಕು. ಅದಕ್ಕೇ ತುಂಬಿದ ಮನೆಯಲ್ಲಿ ಹೊಂದಿಕೊಂಡು ಇರಬೇಕು ಕಣೆ, ಸಣ್ಣ ಪುಟ್ಟ ವಿಷಯಕ್ಕೆಲ್ಲ ಸಿಡಿದು ನಿಂತಿಯಾದರೆ ಒಬ್ಬಳೇ ಏಗುವುದು ಬಹಳ ಕಷ್ಟ ಜೀವನದಲ್ಲಿ….ಸೋತು ಗೆಲ್ಲಬೇಕು ಯಾವಾಗಲೂ…

ಪಗಡೆಯಾಟ ಬರೀ ಮನೋರಂಜಕ ಆಟವಲ್ಲ. ತಾಳ್ಮೆ , ಮುನ್ನುಗುವ ಧೈರ್ಯ, ಪಾರಾಗುವ ತಂತ್ರ ಎಲ್ಲವನ್ನೂ ಕಲಿಸುತ್ತದೆ. ಪಗಡೆಯಾಟದ ವೈಭವವನ್ನು, ಅದು ಕಲಿಸಿದ ಪಾಠವನ್ನು ಮತ್ತೆಮತ್ತೆ ನೆನೆಯುವುದಕ್ಕೆ ಇಷ್ಟು ಸಾಕಲ್ಲವೆ?

-ದೀಪಾ ಜೋಶಿ, ಧಾರವಾಡ


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ