ಆ ಕ್ಷಣಕ್ಕೆ ಯಶೋದೆಯಾಗುವ ಆಸೆಯಾಯ್ತು…

Team Udayavani, Aug 6, 2019, 5:05 AM IST

ಆಗಷ್ಟೇ ಹಾಲು ಕುಡಿದು ಸಂತೃಪ್ತಗೊಂಡ ಮಗು, ಸಿಹಿನಿದ್ದೆಗೆ ಜಾರಿತು. ಮಗುವನ್ನು ಮಲಗಿಸಿದ ತಾಯಿ, ವಾರ್ಡ್‌ನಿಂದ ಹೊರಬಂದರೆ ಮತ್ತೆ ಮಗು ಅಳುವ ಸದ್ದು! ಈಗ ಅಳುವಿನ ಶಬ್ದ ಬರುತ್ತಿದ್ದುದು, ಪಕ್ಕದ ವಾರ್ಡ್‌ನಿಂದ. ಕುತೂಹಲದಿಂದ ಇಣುಕಿದರೆ, ಮಗುವೊಂದು ಹಸಿವಿಂದ ಅಳುತ್ತಿದೆ, ತಾಯಿಯೂ ಅಳುತ್ತಿದ್ದಾಳೆ…

“ಅಮ್ಮನಾಗಿ ಮಗುವಿಗೆ ಹಾಲು ಕುಡಿಸುವಾಗ ಸಿಗುವ ಸಂತೋಷ ಯಾವ ಗ್ರ್ಯಾಂಡ್‌ ಸ್ಲಾಮ್‌ ವಿಜಯಕ್ಕಿಂತ ಕಡಿಮೆ ಇಲ್ಲ’.
ಇದು ಟೆನ್ನಿಸ್‌ ಡಬಲ್ಸ್‌ನಲ್ಲಿ 6 ಗ್ರ್ಯಾಂಡ್‌ ಸ್ಲಾಮ್‌ ಗೆದ್ದ ಸಾನಿಯಾ ಮಿರ್ಜಾಳ ಹೇಳಿಕೆ.

ಯಾರೂ ಅಮ್ಮ ಎಂದು ಕರೆಸಿಕೊಳ್ಳಬಹುದು, ತಂದೆಯೂ ತಾಯಿಯ ಕೆಲಸ ಮಾಡಬಹುದು. ಆದರೆ, ಎದೆ ಹಾಲು ಕುಡಿಸುವ ಭಾಗ್ಯ ಹೊತ್ತು, ಹೆತ್ತವಳಿಗೆ ಮಾತ್ರ! ಈ ವಿಷಯದಲ್ಲಿ ದೇವರು ಖಂಡಿತ ಪಕ್ಷಪಾತಿ, ಮಗುವಿಗೆ ಹಾಲು ಕುಡಿಸುವ ಭಾಗ್ಯವನ್ನು ಹೆಣ್ಣಿಗೆ ಮಾತ್ರ ಕೊಟ್ಟಿದ್ದಾನೆ.

ಅಣುವಾಗಿ ದೇಹ ಸೇರಿದ ಅವನು.. ಮೊದಲ ನಾಲ್ಕು ತಿಂಗಳು ವಾಂತಿ, ತಲೆಸುತ್ತು, ಸಾಕಪ್ಪಾ ಸಾಕು. ಐದು ತಿಂಗಳಾಗುತ್ತಿದ್ದಂತೆ ಕೈ ಕಾಲಿಗೆ ಶಕ್ತಿ ಬಂತವನಿಗೆ, ಹೊತ್ತಿಲ್ಲ, ಗೊತ್ತಿಲ್ಲ. ತುಳಿದಾಟ ಶುರುಮಾಡಿದ. ಕಿವಿ ಹಿಂಡಿ ಬುದ್ಧಿ ಕಲಿಸೋಣವೆಂದರೆ ಹೊಟ್ಟೆಯಲ್ಲಿ ಅಡಗಿದ್ದಾನೆ, ಹೊರಗೆ ಬರಲಿ ಮಾಡುತ್ತೇನೆ ಅವನಿಗೆ. ಎಂಟು ತಿಂಗಳಿಗೆ ಚೆನ್ನಾಗಿ ತಿಂದುಂಡು ಗುಂಡಗಾದ ಉಂಡಾಡಿ ಭಟ್ಟ, ಮತ್ತೂ ಭಾರವಾದ. ಒಂಬತ್ತು ತಿಂಗಳಾಗುತ್ತಿದ್ದಂತೆ ಆದಷ್ಟು ಬೇಗ ಹೊರಗೆ ಬರುವ ತವಕ ಶುರುವಾಯ್ತು ಅವನಿಗೆ. ಎಲ್ಲವನ್ನೂ ನೋಡುತ್ತೇನೆ, ಕೇಳುತ್ತೇನೆ, ನಡೆದಾಡಿ ಜಗವನ್ನೇ ಜಯಿಸುತ್ತೇನೆ ಎಂಬ ಉತ್ಸಾಹ ಬೇರೆ.

ಹೊರಗೆ ಬರುವಾಗ, ಸುಮ್ಮನೆ ಬರಬಾರದೆ, ನೋವೇಕೆ? ಸುಲಭದಲ್ಲಿ ದಕ್ಕಿದ್ದು ಸುಲಭದಲ್ಲಿ ಮರೆತು ಹೋಗುತ್ತದೆ ಎನ್ನುವ ಜೀವನದ ಪಾಠವಿರಬಹುದು. ಬಂದವನೇ ಬೇ..ಬೇ ಎನ್ನುತ್ತ ಸೂರು ಹಾರಿ ಹೋಗುವ ಹಾಗೆ ಅಳಲು ಶುರು ಮಾಡಿದ. ಅಲ್ಲಾಇಷ್ಟು ಹೊತ್ತು ನೋವಿನಿಂದ ಅತ್ತದ್ದು ನಾನು, ಈಗ ಅವನ ಮುಖ ನೋಡಿ ನಾನು ನಕ್ಕರೆ, ಅವನು ನನ್ನ ಮುಖ ನೋಡಿ ಅಳುತ್ತಿದ್ದಾನೆ. “ಮಾರಾಯ, ಅಳಬೇಡ. ಗಟ್ಟಿಗನಾಗು. ಈ ಜಗತ್ತು, ಅಳುವವರನ್ನು ಮತ್ತೂ ಅಳಿಸುತ್ತದೆ’ ಅಂತ ಹೇಳಬೇಕೆನಿಸಿತು.

ಸ್ವತ್ಛವಾಗಿ ಬಿಳಿ ದೋತರ ಉಟ್ಟವನು ಮಡಿಲು ಸೇರಿದ. ಸಿಸ್ಟರ್‌ ಬಂದು, “ಮಗುವಿಗೆ ಹಾಲು ಕುಡಿಸಲು ಪ್ರಯತ್ನಿಸಿ, ಮಗು ಚೀಪಲಿ’ ಎಂದರು. ಮುಖ ಕೆಂಪಗೆ ಮಾಡಿಕೊಂಡು ಅಳುತ್ತಿದ್ದವನನ್ನು ಎದೆಗವಚಿಕೊಂಡಿದ್ದೇ ತಡ, ಚೀಪತೊಡಗಿದ. ಗಪ್‌ ಚುಪ್‌, ಅಳುವಿಲ್ಲ! ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವಂತೆ ಸದ್ದಿಲ್ಲದೆ ಹೀರುತ್ತಿದ್ದಾನೆ. ಇಷ್ಟೆಲ್ಲಾ ಅತ್ತಿದ್ದು ಇದಕ್ಕಾಗಿಯೇ? ಆ ಕ್ಷಣದಿಂದ ನಾನೂ ಬದಲಾದೆ ಅನಿಸಿತು. ಅಲ್ಲಿಯವರೆಗೆ ನಾನೂ ಹುಡುಗಾಟದ ಬುದ್ಧಿಯವಳು, ಹುಟ್ಟು ಗುಣ ಗಟ್ಟ ಹತ್ತಿದರೂ ಬಿಡಲಾರದಂತೆ ಅಂತಾರಲ್ಲ; ಹಾಗೆ. ಮದುವೆಯಾದರೂ ನನ್ನಲ್ಲಿ ಅಂಥ ಬದಲಾವಣೆ ಆಗಿರಲಿಲ್ಲ. ತಾಯಿಯಾಗಿ ಮಗುವಿಗೆ ಹಾಲು ಕುಡಿಸಿದಾಗ ಏನೋ ಜವಾಬ್ದಾರಿ ಬಂದಂತಾಯಿತು. ಅವನು ಕೃಷ್ಣ-ನಾನು ಯಶೋದೆ, ಅವನು ರಾಮ-ನಾನು ಕೌಸಲ್ಯೆ ಹೀಗೆ ಏನೇನೋ ಭಾವನೆಗಳು.

ನನ್ನ ಕೃಷ್ಣ ನಿದ್ದೆ ಮಾಡಿದಾಗ, ಆಸ್ಪತ್ರೆಯ ಹಾಸಿಗೆಯಿಂದ ಇಳಿದು ಸಣ್ಣದಾಗಿ ತಿರುಗಾಟ ಶುರು ಮಾಡಿದೆ. ಪಕ್ಕದ ವಾರ್ಡ್‌ನಲ್ಲಿ ಮಗುವಿನ ಅಳು ತಾರಕಕ್ಕೇರಿತ್ತು. ಹೋಗಿ ನೋಡಿದರೆ, ಮಗು ಹಳದಿ ಬಣ್ಣಕ್ಕೆ ತಿರುಗಿತ್ತು. ಮಗುವಿನ ಅಮ್ಮ ಒಂದೇ ಸಮನೆ ಕಣ್ಣೀರು ಸುರಿಸುತ್ತಿದ್ದಳು. ಮಕ್ಕಳಿಲ್ಲದೆ ಕಂಡ ದೇವರಿಗೆಲ್ಲಾ ಹರಕೆ ಹೊತ್ತು 7-8 ವರ್ಷಗಳ ನಂತರ ಬಸುರಿಯಾಗಿ

ಹೆತ್ತ ಹೆಣ್ಣು ಮಗುವದು. ಆದರೆ ಅಳುವ ಮಗುವಿಗೆ ಕುಡಿಸಲು ಅವಳಲ್ಲಿ ಹಾಲಿಲ್ಲ. ಹಸಿದ ಮಗುವಿನ ಆಕ್ರಂದನ, ಅಮ್ಮನ ಅಸಹಾಯಕತೆಯ ಕಣ್ಣೀರು ನನ್ನನ್ನು ಹಿಡಿದು ನಿಲ್ಲಿಸಿತು. ಇದಕ್ಕೆ ಬೇರೆ ದಾರಿ ಇಲ್ಲವೇ? ಈ ಮಗುವಿಗೆ ನಾನ್ಯಾಕೆ ಯಶೋದೆಯಾಗಬಾರದು ಅನಿಸಿತು. ಆ ಯೋಚನೆಯನ್ನು ವೈದ್ಯರ ಮುಂದಿಟ್ಟೆ. ಡಾಕ್ಟರ್‌ “ಓಕೆ’ ಎನ್ನುತ್ತಿದ್ದಂತೆ ಮಗು ನನ್ನ ಮಡಿಲು ಸೇರಿತು. ಮರುಕ್ಷಣವೇ ಮಗು ಪಚ್‌ ಪಚ್‌ ಶಬ್ದ ಮಾಡುತ್ತಾ ಹಾಲು ಕುಡಿಯಿತು. ಎಷ್ಟು ದಿನದಿಂದ ಹಸಿವಿನಿಂದ ಇದ್ದಳ್ಳೋ? ಮಗುವಿನ ಅಮ್ಮ ಬೆರಗಾಗಿ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಮಗು ಹಾಲು ಕುಡಿದು, ನನ್ನ ಹೆಗಲ ಮೇಲೆ “ಡರ್‌’ ಎಂದು ತೇಗಿ ನಿದ್ದೆಗೆ ಜಾರಿದಾಗ ಸಂತೋಷದ ಕಣ್ಣೀರು ಜಿನುಗಿ, ಸಾರ್ಥಕತೆ ಮೂಡಿತು.

ಆಸ್ಪತ್ರೆಯಲ್ಲಿದ್ದ ಎರಡೂರು ದಿನ ನನ್ನ ಮಗನಿಗೆ ಹಾಲು ಕುಡಿಸಿದವಳು ಆ ಮಗುವಿಗೂ ಹಾಲು ಕುಡಿಸಿದೆ. ನಾನೇ ಅದೃಷ್ಟವಂತಳು, ಎರಡು ಮಕ್ಕಳು ಕುಡಿಯುವಷ್ಟು ಹಾಲಿತ್ತು ನನ್ನಲ್ಲಿ. ನನ್ನ ಸಂಬಂಧಿಗಳು, ಯಾರ್ಯಾರದೋ ಮಗುವಿಗೆ ಹಾಲು ಕುಡಿಸಬೇಡ’

ಎಂದು ತಡೆಯುತ್ತಿದ್ದರೂ, ಆ ಮಗುವಿನ ಅಮ್ಮನ ಸಹಾಯಕ್ಕೆ ಹೋಗುವಂತೆ ಒಳಮನಸ್ಸು ಎಚ್ಚರಿಸುತ್ತಲೇ ಇತ್ತು…
ಇದು ಸತ್ಯ, ಅವರೇ ಹೊತ್ತು, ಹೆತ್ತು ಮಗುವಿಗೆ ಹಾಲು ಕುಡಿಸುವ ಸಂತೋಷದ ಹತ್ತು ಪಟ್ಟು ಪರರ ಅಸಹಾಯಕ ಮಗುವಿಗೆ ಹಾಲು ಕುಡಿಸಿದಾಗ ಆಗುತ್ತದೆ.

-ಗೀತಾ ಕುಂದಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೊದಲೆಲ್ಲ ರೆಸ್ಟೋರೆಂಟ್‌ಗಳಿಗೆ ಹೋದಾಗ ತಪ್ಪದೇ ಪನೀರ್‌ನ ಖಾದ್ಯಗಳನ್ನು ಆರ್ಡರ್‌ ಮಾಡುತ್ತಿದ್ದೆವು. ಆದರೀಗ ಎಲ್ಲರ ಮನೆಯಲ್ಲೂ ಪನೀರ್‌ನ ತಿನಿಸುಗಳು ಸಿದ್ಧಗೊಳ್ಳುತ್ತಿವೆ....

  • ‌ನಮ್ಮ ಮನೆಯಲ್ಲಿ ಆಗ ದೂರವಾಣಿ ಇರಲಿಲ್ಲ. ಹಾಗಾಗಿ, ಮಾತುಕತೆ ಎÇÉಾ ಅಂಚೆ ಕಾಗದಗಳ ಮೂಲಕವೇ ನಡೆಯುತ್ತಿತ್ತು. ಹೀಗಿದ್ದಾಗಲೇ, ನಮ್ಮ ಅತ್ತೆ ಬರೆದ ಕಾಗದ, ನಮ್ಮಪ್ಪ...

  • ಯಾವುದೇ ಸೃಜನಶೀಲ ಕಲೆ ಸಮಯವನ್ನು ಬೇಡುತ್ತದೆ. ಅಲಂಕಾರಕೂಡಾ ಅಂಥ ಒಂದು ಕಲೆಯೇ. ನೀಟಾಗಿ ಕಾಡಿಗೆ ತೀಡುವುದು, ಜಡೆ ಹೆಣೆಯುವುದು, ಉಗುರಿಗೆ ಬಣ್ಣ ಹಚ್ಚುವುದು ಅಲಂಕಾರದ...

  • ಸೌಂದರ್ಯ ಬಾಹ್ಯ ಸಂಗತಿಯಲ್ಲ ಅದು ಆಂತರ್ಯದ ವಿಷಯ ಎಂಬುದನ್ನು ಬಹುತೇಕ ಹುಡುಗಿಯರು ಅರ್ಥ ಮಾಡಿಕೊಳ್ಳುವುದಿಲ್ಲ. ನಾನು ಕಪ್ಪಗಿದ್ದೇನೆ, ದಪ್ಪಗಿದ್ದೇನೆ, ನನ್ನ...

  • ಒಂದು ಕಥೆ ಇದೆ. ಒಂದೂರಲ್ಲಿ ಒಬ್ಬ ರಾಜಕುಮಾರ. ಮದುವೆಯಾಗಲು ಚತುರಕನ್ಯೆಯನ್ನು ಹುಡುಕುತ್ತಿರುತ್ತಾನೆ. ಒಬ್ಬ ಜಾಣ ಕನ್ಯೆಯ ಬಗೆಗೆ ಆತನಿಗೆ ಯಾರೋ ಹೇಳುತ್ತಾರೆ....

ಹೊಸ ಸೇರ್ಪಡೆ