ಒಂದು “ರೀ..’ ಸರ್ಚ್‌!

Team Udayavani, Aug 29, 2018, 6:00 AM IST

ವಾರದ ಹಿಂದಷ್ಟೇ ಮದುವೆಯಾದ ಮಗಳು, ಗಂಡನನ್ನು ಏಕವಚನದಲ್ಲೇ ಮಾತಾಡಿಸುತ್ತಿದ್ದಾಳೆ. ಅದನ್ನು ಕಂಡು ಮಗಳ ಹೆತ್ತವರಿಗೆ ಬೇಸರ, ಗಾಬರಿ. ಅತ್ತೆ ಮನೆಯಲ್ಲೂ ಹೀಗೆಯೇ ಮಾತಾಡಿದರೆ ಅಲ್ಲಿರುವ ಹಿರಿಯರು ಸಿಟ್ಟಾಗುವುದಿಲ್ಲವೆ? ಈ ಕಾರಣಕ್ಕೆ ಮಗಳಿಗೂ, ತವರು ಮನೆಗೂ ಕೆಟ್ಟ ಹೆಸರು ಬಂದರೆ… ಎಂಬುದು ಅವರ ಅಂಜಿಕೆ… 

ಮಗಳು ಮುದ್ದಿನವಳಾದರೂ ಆಕೆ ಗಂಡನನ್ನು ಏಕವಚನದಲ್ಲಿ ಕರೆಯುವುದು ಅಮ್ಮನಿಗೆ ಹಿಡಿಸಿರಲಿಲ್ಲ. ಲಗ್ನವಾಗಿ ವಾರವಷ್ಟೇ ಕಳೆದಿದ್ದು ಅಳಿಯನನ್ನು ಎಗ್ಗಿಲ್ಲದೆ “ನೀನು, ನೀನು’ ಎನ್ನುವಾಗ ಅಮ್ಮನಿಗೆ ಇರುಸುಮುರುಸು. ಗುಟ್ಟಾಗಿ ಒಳಕರೆದು ಮೆಲ್ಲಗೆ ತಿಳಿಹೇಳಿದಳು; “ಅಪ್ಪನಿಗೆ ಹೇಳ್ತೇನೆ’ ಎಂದು ಹೆದರಿಸಿಯೂ ಆಯಿತು. ಏನೇನೂ ಉಪಯೋಗವಿಲ್ಲ. 

  “ಅಮ್ಮಾ, ಇದು ನಿನ್ನ ಕಾಲವಲ್ಲ. ನೀನು ಮದುವೆಯಾದಾಗ ನೀವಿದ್ದುದು ಕೂಡುಕುಟುಂಬದಲ್ಲಿ. ಗಂಡನಿಗೂ ಹೆಂಡತಿಗೂ ಹತ್ತು, ಹದಿನೈದು ವರ್ಷದ ಅಂತರ ಬೇರೆ. ನೀವು, ತಾವು, ಅವರು ಅಂತಲೇ ಕರೆಯತ್ತಿದ್ದಿರಿ. ಈಗ ನೋಡು. ನನಗೂ ಕಿಶನ್‌ಗೂ ಇರುವುದು ಒಂದೇ ವರ್ಷದ ವ್ಯತ್ಯಾಸ. ಹೀಗೆ ಕೂಗು, ಹಾಗೇ ಕರೆ ಎಂಬ ಕಂಡೀಶನ್‌ ಇಲ್ವೇ ಇಲ್ಲ. ನಾವು ಸ್ನೇಹಿತರ ಹಾಗಿದ್ದೇವೆ. ಅಲ್ಲದೆ ನಾವಿಬ್ಬರೂ ಸಮಾನ ವಿದ್ಯಾವಂತರು. ಒಂದೇ ರೀತಿಯ ನೌಕರಿಯಲ್ಲಿದ್ದೇವೆ. ಗೆಳೆಯನಂಥವನನ್ನು, ಒಡೆಯನನ್ನು ಕೂಗಿದ ಹಾಗೆ ಅವರು, ಇವರು, ನಮ್ಮೆಜಮಾನ್ರು ಎನ್ನಲು ನನಗಿಷ್ಟವಿಲ್ಲ. ಅವನು ಯಜಮಾನನಲ್ಲ; ನಾನು ದಾಸಿಯೂ ಅಲ್ಲ. ನಮ್ಮನ್ನು ನಮಗಿಷ್ಟ ಬಂದ ಹಾಗೆ ಇರಲು ಬಿಡು’ ಎಂದೆಲ್ಲಾ ದೀರ್ಘ‌ವಾಗಿಯೇ ಮಾತಾಡಿದಳು ಮಗಳು. ತಾಯಿಗೋ ಉಭಯ ಸಂಕಟ.

  ಮಗಳು ಪತಿಯ ಜೊತೆ ಸಂತೋಷದಲ್ಲಿದ್ದಾಳೆ. ಆದರೆ, ಮನೆಯ ಹಿರಿಯರ ಕಣ್ಣು ಆಕೆಯ ನಿರ್ಭಿಡೆಯ ನಡವಳಿಕೆಯನ್ನು ಮೌನವಾಗಿ ಪ್ರಶ್ನಿಸುತ್ತಿದೆ. ಬೇರೆಯವರು ಬಿಡಿ. ಮಗಳ ಅಪ್ಪನಿಗೇ ಸುತರಾಂ ಸಮಾಧಾನವಿಲ್ಲ. ಹೊಸ ನೆಂಟರ ಎದುರಿಗೇ ಪತಿಯನ್ನು “ಅವನು’, “ಹೋದ’, “ಬಂದ’, “ಬಾ ಇಲ್ಲಿ’, “ನಿಂತ್ಕೊಳ್ಳೋ’, “ನಿನ್ನನ್ನೇ’, “ನಿನಗೇ ಹೇಳ್ತಿರೋದು’ ಹೀಗೆಲ್ಲ ಹಳೆಯ ಒಡನಾಡಿಗಳ ಹಾಗೆ ಕರೆದು ಓಡಾಡುವಾಗ ಅಪ್ಪನ ಮೊರೆ ಬಿಗಿದುಕೊಳ್ಳುತ್ತದೆ. ಮಗಳೇನೋ ಮುದ್ದಿನವಳು. ಆದರೆ, ಲಗ್ನ ಮಾಡಿದ ನಂತರ ಅವಳು ಬೇರೆ ಮನೆಯ ಸೊಸೆ. ಅಲ್ಲೂ ಹಿರಿಯರಿರುತ್ತಾರೆ. ನಾಳೆ ಅವರು ಆಕ್ಷೇಪಿಸಿದರೆ ತವರಿಗೆ ಹೆಸರು ಬರುತ್ತದೆ. ಅಪ್ಪನ ಈ ಭೀತಿ ಅಮ್ಮನನ್ನೂ ಬಿಟ್ಟಿಲ್ಲ.

ಮಗಳೇನು ಹೇಳುತ್ತಾಳೆ?
“ಅತ್ತೆ ಮಾವಂದಿರಿಗೆ ಅಂಜಿ, ಸುತ್ತೇಳು ನೆರೆಗಂಜಿ; ಮತ್ತೆ ನಲ್ಲನ ದನಿಗಂಜಿ ನಡೆದರೆ ಎಂಥ ಉತ್ತಮರ ಮಗಳೆಂದ ಸರ್ವಜ್ಞ’ ಎನ್ನುವ ಕಾಲ ಈಗಿಲ್ಲ. ಅಂದಿಗೆ ಮನೆ ಸೊಸೆಯನ್ನು ಹಿಡಿತದಲ್ಲಿರಿಸಿಕೊಳ್ಳಲು ಹಾಗೆ ಹೊಗಳಿ, ಬೋಧಿಸಿ, ಮುಷ್ಟಿಯಲ್ಲಿರಿಸಿಕೊಂಡಿರುತ್ತಿದ್ದರು. ಅದನ್ನೇ ನಂಬಿ ತನ್ನ ಸ್ವಂತಿಕೆಯನ್ನು ಮನಸ್ಸಿದ್ದೋ, ಇಲ್ಲದೆಯೋ ಬದಿಗಿರಿಸಿ, ಹಾಕಿದ ಪಾತ್ರೆಗೆ ಹೊಂದಿಕೊಂಡ ನೀರಿನ ಹಾಗೆ ತನ್ನ ವ್ಯಕ್ತಿತ್ವವನ್ನು ತಿದ್ದಿಕೊಂಡ ಹಾಗೆ ನಾನಿರುತ್ತೇನೆ ಎಂದುಕೊಂಡರೆ ಅದು ನಿನ್ನ ನಂಬಿಕೆ ಮಾತ್ರ. ನನ್ನನ್ನು ನನ್ನ ಹಾಗಿರಲು ಬಿಡು ಅಮ್ಮ. ನಿಮ್ಮ ಕಾಲದ ಪತಿ, ಪತ್ನಿಯ ಜೀವನಕ್ಕೂ ಇಂದಿನದಕ್ಕೂ ಅಜಗಜಾಂತರವಿದೆ. ಆಗೆಲ್ಲ ಪತಿಯು ದನಿ ಎತ್ತರಿಸಿ ಗದರಿದರೆ, ಬೈಸಿಕೊಂಡು, ಹೊಡೆದರೆ ಹೊಡೆಸಿಕೊಂಡು ಇರಲು ನಾವೆಲ್ಲ ತಯಾರಿಲ್ಲ. ನಿಮ್ಮ ಹಿರಿಯರು ಮದುವೆಯಾದ ಮನೆಗೆ ಹೊಂದಿಕೊಂಡಿರುವಂಥ ಪಾಠವನ್ನು ಹೆಣ್ಮಕ್ಕಳಿಗೆ ಕಲಿಸಿದರೇ ಹೊರತು ಸ್ವಂತವಾಗಿ ಬದುಕು ರೂಪಿಸಿಕೊಂಡು, ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ಕಲಿಸಿಕೊಟ್ಟೇ ಇಲ್ಲ…

  ಲಗ್ನ ನಿಶ್ಚಯಿಸುವಾಗ ಅಂದಿಗೆ ಕನ್ಯೆಗೆ ಮತ್ತು ಮದುಮಗನಿಗೆ ವಯಸ್ಸಿನ ವ್ಯತ್ಯಾಸ ಹೆಚ್ಚಿಗೆ ಇರಲಿ ಎನ್ನುವುದಕ್ಕೆ ಕಾರಣ, ಸೊಸೆಗೆ ನಾಲ್ಕಾರು ಮಕ್ಕಳಾದ ಮೇಲೆ ಮುದುಕಿ ಆಗುತ್ತಾಳೆ ಅಂತಲೂ ಇತ್ತಂತೆ. ನಂಗೊತ್ತು, ಗಂಡ ಹತ್ತಾರು ವರ್ಷ ದೊಡ್ಡವನಿದ್ದರೆ ಪತ್ನಿ ಹೇಳಿದ ಹಾಗೆ ಕೇಳುತ್ತಾಳೆ ಅಂತಲೂ ಆಗಿರಬಹುದಲ್ವಾ ಅಮ್ಮಾ? ಹಿರಿಯರಿಗೆ ಸಮಾನವಾಗಿ ಕೂರಬೇಡ, ಅವರಿಗಿಂತ ಮೊದಲೇ ಹಸಿದರೂ ಉಣಬೇಡ. ಅವರು ಬಂದಾಗ ಬಾಗಿಲ ಹಿಂದೆ ಸರಿದು ನಿಲ್ಲು ಅಂತಲೇ ತಿದ್ದಿ ತೀಡಿದ್ದೀರಿ. 

  ಹೊಡೆದರೆ, ಬಡಿದರೆ, ಉಪವಾಸ ಕೆಡವಿದರೆ ಅದು ಗಂಡನ ಪರಮಾಧಿಕಾರ. ಸಹನೆ, ತಾಳ್ಮೆ ಹೆಂಡತಿಗೆ ಮುಖ್ಯ ಎಂದು ಹೇಳಿದವರು ಹಲವರು. ಆದರೆ, ಅದೇ ಸಹನೆ, ತಾಳ್ಮೆ ಗಂಡನಿಗೂ ಇರಲಿ ಅಂತ ಬೋಧಿಸಿದವರಿಲ್ಲ. ಮಾತಿಗೆ ಎದುರಾಡಬೇಡ, ನೀನು ಉಪವಾಸವಿದ್ದರೂ ಪರವಾಗಿಲ್ಲ; ಗಂಡ, ಮಕ್ಕಳು, ಹಿರಿಯರಿಗೆ ಬಡಿಸಿ ಎರಡು ಲೋಟ ನೀರು ಕುಡಿದು ಹೊಟ್ಟೆ ತುಂಬಿಸ್ಕೋ ಎಂದು ಹೇಳಿದ ಹೆತ್ತವರೆಲ್ಲ ಸರಿದು ಹೋದರು. ನಾವುಗಳೆಲ್ಲ ಇದ್ದುದನ್ನು ಹಂಚಿ ಉಣ್ಣುವಾ ಅನ್ನುವ ಮನೋಭಾವದವರು. ಇದು ನಮ್ಮ ವಿಚಾರ. ನೀವು ಮಗ, ಮಗಳು ಎಂಬ ಭೇದವಿಲ್ಲದೆ ವಿದ್ಯೆ ಕೊಡಿಸಿದ್ದೀರಿ ಅಲ್ವಾಮ್ಮ?

  ಹಿಂದಿನ ಗಂಡಸರ ಹಾಗೆ ದರ್ಪ, ದಬ್ಟಾಳಿಕೆ, ಅಧಿಕಾರಶಾಹಿ ಮನೋಭಾವ ತಗ್ಗಿ ಹೋಗಿ ಪತ್ನಿ ತನ್ನ ಜೀವನಸಂಗಾತಿಯೆ ಹೊರತು ಬಿಟ್ಟಿ ಸಿಕ್ಕ ದಾಸಿಯಲ್ಲ ಎಂಬ ಅರಿವು ವಿದ್ಯೆ, ಸಂಸ್ಕಾರವಿರುವ ಕುಟುಂಬಗಳ ಗಂಡು ಮಕ್ಕಳಿಗೆ ಉಂಟಾಗಿದೆ. ಹೆಣ್ಣುಮಕ್ಕಳಿದ್ದರೆ ಕಷ್ಟ ಎಂದು ಯೋಚಿಸಿ ಅವರನ್ನು ಅಸಡ್ಡೆಯಿಂದ ನೋಡಿದ್ದರ, ತಾತ್ಸಾರ ಮಾಡಿದ್ದರ ಪರಿಣಾಮ ಈಗ ಲಗ್ನಕ್ಕೆ ಕನ್ಯೆ ಅಲಭ್ಯವಾಗಿದ್ದು. ಹಿಂದಿನ ದಿನಗಳ ಹಿಂಜರಿಕೆ, ಭೀತಿ, ಕೀಳರಿಮೆ ಇಂದಿನ ಯುವತಿಯರಲ್ಲಿಲ್ಲ. ಅದು ಉತ್ತಮ ಬೆಳವಣಿಗೆ. ವಿದ್ಯೆ ವ್ಯಕ್ತಿತ್ವವನ್ನು ಎತ್ತಿ ಹಿಡಿದು ಬೆಳೆಸಿದೆ.

ಕೃತಕತೆ ಬೇಕಿಲ್ಲ…
  ನಮ್ಮ ದಾಂಪತ್ಯದಲ್ಲಿ ನಾವು ಚೆನ್ನಾಗಿದ್ದೇವೆ. ಸಹಜವಾಗಿರೋಣ, ಕೃತಕತೆ, ಮೇಲು, ಕೀಳು, ಬಹುವಚನದ ಗೌರವ ಬೇಕಿಲ್ಲ; ನೀನು ನನಗೆ ನೀವು ಎಂದು ಕರೆದರೆ, ನಾನೂ ನಿನ್ನನ್ನು ಬಹುವಚನದಲ್ಲೇ ಕರೀತೇನೆ ಅಂದಿದ್ದಾನೆ ನನ್ನ ಪತಿ. ಅವನ ತಾಯ್ತಂದೆಗೂ ಅದೇ ಹಿತ. ನೀವು ಪ್ರೀತಿಯಿಂದ ಹೊಂದಿಕೊಂಡಿರುವುದು ಮುಖ್ಯವೇ ಹೊರತು ಏಕವಚನ, ಬಹುವಚನ ಅದೆಲ್ಲ ಪುರಾತನ ಕಾಲದಲ್ಲಿ ಮಾಡಿಟ್ಟ ಅಲಿಖೀತ ಕಾನೂನುಗಳು. ಬದಲಾವಣೆ ಬದುಕಿನ ಧರ್ಮ ಅಂದಿದ್ದಾರೆ ಬಲ್ಲವರು.

   ಸೋ, ಅಮ್ಮಾ, ಅಪ್ಪನಿಗೂ ಹೇಳು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಗಂಡನನ್ನು ಹೆಂಡತಿ ಏನಂತ ಕರೀತಾಳೆ ಎನ್ನುವುದಕ್ಕಿಂತ ಮುಖ್ಯ, ಅವರು ಹೇಗೆ ದಾಂಪತ್ಯದಲ್ಲಿ ಹೊಂದಿಕೊಳ್ತಾರೆ ಎನ್ನುವುದು. ಅಂದಿನ ಕಾಲದ ಹಾಗೆ ಹತ್ತು, ಹದಿನೈದು ವರ್ಷದ ವಯಸ್ಸಿನ ಅಂತರವಿರುವ ಪತಿ, ಪತ್ನಿಗೆ ಹೊಂದಾಣಿಕೆಗೆ ಸುದೀರ್ಘ‌ ಸಮಯ ಬೇಕಾಗಬಹುದು. ಆದರೆ ಸಮವಯಸ್ಕ ಪತಿ, ಪತ್ನಿಗೆ ಸ್ನೇಹಿತರ ಹಾಗಿನ ಬದುಕು ಒಂದಾಗಿ ನಿಲ್ಲಲು ಕಲಿಸುತ್ತದೆ. ಸಹಜೀವನದ ಅಮೋದ, ಪ್ರಮೋದ ಬೊಗಸೆ ತುಂಬಾ ಸವಿಯುತ್ತೇವೆ. ನೀವು, ನಿಮಗೆ, ನಿಮ್ಮನ್ನು ಎಂದು ಕರೆದರೆ ನಮಗಿಬ್ಬರಿಗೂ ಅದು ಒಪ್ಪಿಗೆಯಿಲ್ಲ. ಏಕವಚನದಿಂದ ಪ್ರೀತಿ, ಆತ್ಮೀಯತೆ, ಸಾಮರಸ್ಯ ಹೆಚ್ಚುತ್ತದೆಯೇ ಹೊರತು ಆ ಕಾರಣಕ್ಕೆ ತಗ್ಗುವುದಿಲ್ಲ…

  ತುಂಬಾ ಸಮಾಧಾನದಿಂದ, ಆದರೆ ಸ್ಪಷ್ಟವಾಗಿ ಈ ಮಾತುಗಳನ್ನು ಅಮ್ಮನ ಮುಂದೆ ಹೇಳಿಬಿಟ್ಟಿದ್ದಾಳೆ ಮಗಳು. ಮಗಳು ಚೆನ್ನಾಗಿದ್ರೆ ಸಾಕು; ಏನೂ ತೊಂದರೆ ಆಗದಿದ್ರೆ ಸಾಕು ಅಂದುಕೊಂಡೇ ಹೆತ್ತವರು ಸುಮ್ಮನಾಗಿದ್ದಾರೆ.

ಕೃಷ್ಣವೇಣಿ ಕಿದೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ,...

  • ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ,...

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

ಹೊಸ ಸೇರ್ಪಡೆ