ಜೋಪಾನ! ಇದು ಅಪರಿಚಿತರ ಜಗತ್ತು

Team Udayavani, Aug 21, 2019, 5:06 AM IST

ನಿಮಗೆ ಬೇಕಾದ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರು ಫೇಸ್‌ಬುಕ್‌ ಬಳಕೆದಾರರಾಗಿದ್ದರೆ ಸುಲಭವಾಗಿ ಹುಡುಕಬಹುದು. ಇದು ಫೇಸ್‌ಬುಕ್‌ನ ಹೆಗ್ಗಳಿಕೆ. ವಿಶ್ವಾದ್ಯಂತ ನೆಲೆಸಿರುವ ಸ್ನೇಹಿತರನ್ನು ಬೆಸೆಯುವ ಉದ್ದೇಶದಿಂದಲೇ ಬಳಕೆಗೆ ಬಂದ ಈ ಜಾಲತಾಣ, ಇಂದು ಮೂಲ ಉದ್ದೇಶವನ್ನು ಮೀರಿ ವಿಸ್ತರಿಸಿದೆ.

ಇಂಥ ಜಾಲತಾಣಗಳಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ಅದರ ದುರ್ಬಳಕೆಯೂ ನಡೆಯುತ್ತಿದೆ. ಅದರಲ್ಲೂ ಹೆಣ್ಣುಮಕ್ಕಳು ಫೇಸ್‌ಬುಕ್‌ ಗೆಳೆಯರನ್ನು ನಂಬಿ ಮೋಸ ಹೋಗುವುದೂ, ಬ್ಲಾಕ್‌ಮೇಲ್‌ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಅಶ್ಲೀಲ ಕಮೆಂಟ್‌ನಿಂದ ಖನ್ನತೆಗೆ ಒಳಗಾಗುವುದು ನಡೆಯುತ್ತಿದೆ.

ನನ್ನ ಫೇಸ್‌ಬುಕ್‌ ಗೆಳತಿಯೊಬ್ಬರು, ಅನುಮತಿ ಪಡೆಯದೆ ತಮ್ಮ ಫೋಟೋಗಳನ್ನು ಶೇರ್‌ ಮಾಡಿಕೊಂಡ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಜಗ್ಗಾಡಿ, ಹಾಗೆಯೇ ಶೇರ್‌ ಆಗಿದ್ದ ಅನೇಕ ಹೆಣ್ಣು ಮಕ್ಕಳ ಫೋಟೋಗಳನ್ನು ಆತನ ವಾಲ್‌ನಿಂದ ತೆಗೆಸುವಲ್ಲಿ ಸಫ‌ಲರಾದರು. ಆದರೆ ಬಹುತೇಕ ಹೆಣ್ಣುಮಕ್ಕಳು ಹೀಗೆ ಪ್ರತಿಭಟಿಸುವ ಗೋಜಿಗೆ ಹೋಗುವುದಿಲ್ಲ. ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ನೆಪದಲ್ಲಿ ನಡೆಯುವ ಶೋಷಣೆಗಳನ್ನು ಸಹಿಸಿಕೊಂಡಿರುತ್ತಾರೆ. ಸಾಕ್ಷಿಗಳು ಇದ್ದರೂ ಹೇಳಿಕೊಳ್ಳಲು ಹಿಂಜರಿಕೆ. ಯಾಕಂದ್ರೆ, “ನನಗೂ ಆತ ಫ್ರೆಂಡ್‌. ಯಾವತ್ತೂ ಹಾಗೆ ನಡೆದುಕೊಂಡಿಲ್ಲವಲ್ಲ’ ಅಂತ ಯಾರಾದರೊಬ್ಬರು ಹೇಳಿದರೆ, ಅಲ್ಲಿಗೆ ಮುಗಿಯಿತು. ದೂರು ಹೇಳಿದವಳ ನಡತೆಯನ್ನೇ ಅನುಮಾನಿಸುತ್ತಾರೆ. ಅಷ್ಟಲ್ಲದೆ, ಫೇಸ್‌ಬುಕ್‌ ಬಳಕೆ ವಿರೋಧಿಸುವ ಹೆತ್ತವರಿಂದ ಎಂಥ ಪ್ರತಿಕ್ರಿಯೆ ಬರಬಹುದು ಎನ್ನುವ ದಿಗಿಲು ಹುಡುಗಿಯರಿಗೆ ಸಹಜ.

ಆದರೆ, ಭಯ ಪಡುವ ಅಗತ್ಯವಿಲ್ಲ. ಇಂಥ ಸಮಸ್ಯೆಗಳನ್ನು ಮನಗಂಡಿರುವ ಫೇಸ್‌ಬುಕ್‌ ಸಹ, ಬಳಕೆದಾರರ ಸುರಕ್ಷತೆಯನ್ನು ಕಾಪಾಡುವತ್ತ ಗಮನ ಹರಿಸಿದೆ. ಅದರ ಜೊತೆಗೆ, ಫೇಸ್‌ಬುಕ್‌ ಬಳಸುವಾಗ ನಾವು ಕೆಲವು ನಿಯಮ-ನಿಬಂಧನೆಗಳನ್ನು ಪಾಲಿಸಿದರೆ ಸಮಸ್ಯೆಗಳು ಎದುರಾಗುವುದಿಲ್ಲ.

-ಫ್ರೆಂಡ್‌ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವಾಗ, ವ್ಯಕ್ತಿಯ ಖಾತೆಯನ್ನು ಪರೀಕ್ಷಿಸಿ.
-ನಿಮಗೆ ಕಿರಿಕಿರಿಯಾಗುವಂತೆ ನಡೆದುಕೊಳ್ಳುತ್ತಿರುವ ವ್ಯಕ್ತಿಯನ್ನು ತಕ್ಷಣ ಬ್ಲಾಕ್‌ ಮಾಡಿ.
-ಪ್ರೊಫೈಲ್‌ ಚಿತ್ರವನ್ನು ಕದಿಯದಂತೆ ಪ್ರೈವೆಸಿಗಾರ್ಡ್‌ ಹಾಕಿಕೊಳ್ಳಿ. ಆಗ ಚಿತ್ರದ ಸ್ಕ್ರೀನ್‌ಶಾಟ್‌ ಸಹ ತೆಗೆಯಲು ಸಾಧ್ಯವಿಲ್ಲ.
– ನೀವು ಹಾಕುವ ಪೋಸ್ಟ್‌ಗಳನ್ನು ನಿಮ್ಮ ಗೆಳೆಯರಿಗೆ ಮಾತ್ರ ಕಾಣುವಂತೆ ಸೆಟ್‌ ಮಾಡಬಹುದು. ಇದರಿಂದಾಗಿ ಅಪರಿಚಿತರು ನಿಮ್ಮ ಪೋಸ್ಟ್ ಗಳನ್ನು ಅವರ ಖಾತೆಯ ಮೂಲಕ ಹಂಚಿಕೊಳ್ಳಲಾಗದು.
-ನಿಮ್ಮ ಮೊಬೈಲ್‌ ಸಂಖ್ಯೆ, ಜನ್ಮದಿನ ಸೇರಿದಂತೆ ಮುಂತಾದ ಮಾಹಿತಿಗಳನ್ನು ನಿಮಗೆ/ ನಿಮ್ಮ ಸ್ನೇಹಿತರಿಗೆ ಮಾತ್ರ ಕಾಣುವಂತೆ ಸೆಟ್‌ ಮಾಡಬಹುದು.
-ಖಾಸಗಿ ಜೀವನದ ಎಲ್ಲವನ್ನೂ ಹಂಚಿಕೊಳ್ಳುವ ತುಡಿತಕ್ಕೆ ಕಡಿವಾಣ ಹಾಕಿ. ಉತ್ತಮ ಮಾಹಿತಿ, ಆಸಕ್ತಿ, ಅಭಿವ್ಯಕ್ತಿಗಳನ್ನು ಹಂಚಲು ಫೇಸ್‌ಬುಕ್‌ ಮೀಸಲಿರಲಿ.
-ಫೋಟೊಗಳನ್ನು ತೆಗೆದುಕೊಂಡು, ಸ್ಥಳದ ಲೊಕೇಶನ್‌ ಜೊತೆಗೇ ಶೇರ್‌ ಮಾಡುವುದನ್ನು ನಿಲ್ಲಿಸಿ.
-ಅಸಭ್ಯ ಕಮೆಂಟ್‌ ಬಂದರೆ ತಕ್ಷಣ ಡಿಲೀಟ್‌ ಮಾಡಿ.
-ಅಪರಿಚಿತರು ಮೆಸೇಜ್‌ ಮಾಡಿದಾಗ ಉತ್ತರಿಸಬೇಡಿ. ಉತ್ತರಿಸುವುದಿದ್ದರೂ ಯೋಚಿಸಿ ಉತ್ತರಿಸಿ.
-ಅಶ್ಲೀಲ ಚಿತ್ರಗಳನ್ನು ಕಳಿಸಿದ ವ್ಯಕ್ತಿಯ ಜೊತೆಗೆ ಅನಗತ್ಯ ಚರ್ಚೆಗೆ ಇಳಿಯುವ ಬದಲು ತಕ್ಷಣ ಬ್ಲಾಕ್‌ ಮಾಡಿ. ರಿಪೋರ್ಟ್‌ ಮಾಡಿ.
-ನಿಮ್ಮ ಚಿತ್ರಗಳ ದುರ್ಬಳಕೆ ಮಾಡುತ್ತೇವೆಂದು ಹೆದರಿಸಿದರೆ, ತಕ್ಷಣವೇ ಅದನ್ನು ಪೋಷಕರ ಗಮನಕ್ಕೆ ತಂದು, ಅಂಥವರ ವಿರುದ್ಧ ದೂರು ದಾಖಲಿಸಿ.
-ನಿಮ್ಮ ಹವ್ಯಾಸ, ಅಭಿರುಚಿಗೆ ತಕ್ಕವರನ್ನೇ ಸ್ನೇಹಿತರಾಗಿ ಸ್ವೀಕರಿಸಿ. ಯಾರನ್ನೂ ಅಗತ್ಯ ಮೀರಿ ಹಚ್ಚಿಕೊಳ್ಳಬೇಡಿ.
-ಎಷ್ಟು ಆತ್ಮೀಯರೆನ್ನಿಸಿದರೂ ಕಾರಣವಿಲ್ಲದೇ ವೈಯಕ್ತಿಕ ವಿವರಗಳನ್ನು ಕೊಡಬೇಡಿ.

ಭೇಟಿಗೂ ಮುನ್ನ ಎಚ್ಚರ
ಫೇಸ್‌ಬುಕ್‌ನಲ್ಲಿ ಅಪರಿಚಿತರು ಬಹುಬೇಗ ಸ್ನೇಹಿತರಾಗಿ, ಆಕರ್ಷಣೆ ಬೆಳೆದು, ಭಾವನೆಗಳು ಪ್ರೀತಿಗೆ ತಿರುಗಬಹುದು. ನಿಮ್ಮ ಭಾವನೆಗಳನ್ನು ಥಟ್ಟನೆ ಗ್ರಹಿಸಿ ಸ್ಪಂದಿಸುತ್ತಾನೆಂದಾಗಲಿ, ಕಷ್ಟ ಸುಖಗಳನ್ನು ಆಸಕ್ತಿಯಿಂದ ಕೇಳುತ್ತಾನೆಂದಾಗಲಿ ಕೇವಲ ಒಂದೆರಡು ತಿಂಗಳ ಸಂವಾದದಿಂದ ಆ ವ್ಯಕ್ತಿಯನ್ನು ಪೂರ್ತಿಯಾಗಿ ನಂಬಬೇಡಿ. ಎಲ್ಲರೂ ಹಾಗಲ್ಲದಿದ್ದರೂ ನಿಮ್ಮ ಎಚ್ಚರಿಕೆ ನಿಮಗಿರಲಿ..ನಿಮ್ಮ ಸ್ನೇಹಿತ ನಿಮ್ಮನ್ನು ಭೇಟಿಯಾಗಲು ಬಯಸಿ, ನಿಮಗೂ ಇಚ್ಛೆ ಇದ್ದರೆ ಆದಷ್ಟು ಜನಸಂಚಾರವಿರುವ ಸ್ಥಳವನ್ನು ನೀವೇ ನಿರ್ಧರಿಸಿ. ಅವನನ್ನು ಭೇಟಿಯಾಗುತ್ತಿರುವ ವಿಷಯವನ್ನು ಆತ್ಮೀಯರಿಂದ ಮುಚ್ಚಿಡಬೇಡಿ. ಅವನ ವರ್ತನೆ ಅಸಹಜವೆನ್ನಿಸಿದರೆ, ಅನಿರೀಕ್ಷಿತವಾಗಿ ಭೇಟಿಯ ಸ್ಥಳ ಬದಲಿಸಿದರೆ, ಆ ಹೊಸ ಸ್ಥಳಕ್ಕೆ ಹೋಗಬೇಡಿ.

– ಕವಿತಾ ಭಟ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ,...

  • ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ,...

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

ಹೊಸ ಸೇರ್ಪಡೆ