ತಿಂಡಿ ವಿಷಯಕ್ಕೆ ಮಕ್ಳು ಹಠ ಮಾಡ್ತಾರೆ!

ಇದು ಮನೆ ಮನೆ ಕಥೆ...

Team Udayavani, May 8, 2019, 6:00 AM IST

ಮಕ್ಕಳಿಗೆ ಕಷ್ಟಸುಖ ಏನೆಂದು ಗೊತ್ತಾಗುವ ರೀತಿಯಲ್ಲಿ ಬೆಳೆಸಬೇಕು. ಮುಂದೆ ಅವರಿಗೆ ಯಾವುದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಛಾತಿಯಿರಬೇಕು. ಅತಿಯಾದ ಅಕ್ಕರೆ ಮಕ್ಕಳನ್ನು ಅಶಿಸ್ತಿನ ವಾತಾವರಣಕ್ಕೆ ದಬ್ಬುತ್ತದೆ ಎಂಬುದು ನೆನಪಿರಲಿ.

ಪ್ಲೇ ಹೋಂಗೆ ಕಳುಹಿಸಲು ಮೂರೂವರೆ ವರ್ಷದ ಮಗುವನ್ನು ಸಿದ್ಧಪಡಿಸುತ್ತಿದ್ದಳು ಅಮ್ಮ. ಇವತ್ತು ಏನು ತಿಂಡಿ ಅಮ್ಮಾ ಎಂದು ಕೇಳಿದಾಗ ತಿಂಡಿಯನ್ನು ಪ್ಲೇಟಿನಲ್ಲಿ ಹಾಕಿ ಮಗುವಿನ ಎದುರು ತಂದಿಟ್ಟಳು. ತಕ್ಷಣ ಆ ಮಗು ಏನಮ್ಮಾ , ನಿನ್ನೇನೂ ಪಲಾವ್‌, ಇವತ್ತೂ ಅದೇ ತಿಂಡಿನಾ, ನನಗೆ ಬೇಡ. ಬೇರೇನಾದರೂ ಮಾಡಿಕೊಡು ಎಂದಾಗ ಅಮ್ಮನಿಗೆ ಆಶ್ಚರ್ಯವಾಯಿತು. ಏಕೆಂದರೆ, ಹಿಂದಿನ ದಿನ ಮಾಡಿ ಉಳಿದಿದ್ದ ಪಲಾವ್‌ನ ಮಸಾಲೆಯನ್ನು ಇಂದು ಮಾಡಿದ ಬಿಸಿ ಅನ್ನದ ಜೊತೆ ಕಲೆಸಿಕೊಟ್ಟಿದ್ದಳು. ಹಿಂದಿನ ದಿನದ ತಿಂಡಿಯನ್ನೇ ಅಮ್ಮ ತನಗೆ ಕೊಡುತ್ತಿದ್ದಾಳೆ ಎಂದು ಅದನ್ನು ನಿರಾಕರಿಸಿತ್ತು ಆ ಪುಟ್ಟ ಬಾಲೆ.

ಪುಟ್ಟ ಪುಟ್ಟ ಕಂದಮ್ಮಗಳ ಇಂಥ ಬೆಳವಣಿಗೆ ನಿಜಕ್ಕೂ ಆಶ್ಚರ್ಯವನ್ನೇ ಉಂಟುಮಾಡುತ್ತಿದೆ. ಕಾಲ ಬದಲಾಗುತ್ತಿದೆಯೋ ಅಥವಾ ನಾಗರೀಕತೆ ಬೆಳೆಯುತ್ತ ಹೋದಂತೆ ಮಕ್ಕಳ ಮಾನಸಿಕ ಸ್ಥಿತಿಯೂ ಕಾಲಕ್ಕನುಗುಣವಾಗಿ ಹೊಂದಿಕೊಳ್ಳುತ್ತಿದೆಯಾ! ಎಂಬ ಉತ್ತರಕ್ಕಾಗಿ ನಾವೀಗ ತಡಕಾಡಬೇಕಾಗುತ್ತದೆ.

ದಿನಕ್ಕೊಂದು ತಿಂಡಿ ಬೇಕು…
ಇಂದಿನ ಜಗತ್ತನ್ನು ಪ್ರತಿನಿಧಿಸುತ್ತಿರುವ ಹೊಸ ಪೀಳಿಗೆಗಳು ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಲು ಹೆಣಗಾಡುತ್ತಿದ್ದಾರೆ. ಏಕೆಂದರೆ, ಇಂದಿನ ಅರ್ಥವ್ಯವಸ್ಥೆಗೆ ಹೊಂದಿಕೊಳ್ಳಲು ದಂಪತಿಗಳಿಬ್ಬರೂ ಹೊರಗೆ ದುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಇಬ್ಬರಿಗೂ ಕೈತುಂಬಾ ಸಂಬಳ ಬರುವಾಗ ಇರುವ ಒಂದು ಮಗುವನ್ನು ಹೇಗೆಂದರೆ ಹಾಗೆ ಬೆಳೆಸಲು ಮನಸ್ಸು ಒಗ್ಗೀತೇ!

ಹಾಗಾಗಿ, ಬೆಳಗಿನ ಫ‌ಲಾಹಾರಕ್ಕೆ ಮಾಡಿದ ತಿಂಡಿ ಆ ಸಮಯಕ್ಕೆ ಮಾತ್ರ. ಡಬ್ಬಿಗೆ ಮತ್ತೂಂದು, ಮಧ್ಯಾಹ್ನದ ಊಟಕ್ಕೆ ಮಗದೊಂದು, ಸಾಯಂಕಾಲ ಮನೆಗೆ ಬಂದ ನಂತರ ಯಾವುದಾದರೂ ಸ್ನ್ಯಾಕ್ಸ್‌ . ಇಂಥ ವಾತಾವರಣಕ್ಕೆ ಹೊಂದಿಕೊಂಡ ಮಗು ನಿನ್ನೆ ಮಾಡಿದ ತಿಂಡಿಯನ್ನೇ ಇಂದು ಕೊಟ್ಟರೆ ನಿರಾಕರಿಸುವುದರಲ್ಲಿ ತಪ್ಪೇನಿದೆ?

ತಮಗಿರುವ ಒಂದೇ ಮಗು ಊಟತಿಂಡಿಯನ್ನು ಸರಿಯಾಗಿ ಮಾಡುತ್ತಿಲ್ಲವೆಂಬ ಕಳವಳ ಪೋಷಕರಿಗೆ. ತಮ್ಮ ಮಗು ಮನೆಯಲ್ಲಿ ಮಾಡಿದ ತಿಂಡಿ, ತಿನಿಸುಗಳಿಗಿಂತ ಅಂಗಡಿಯಲ್ಲಿ ಮಾಡಿರುವ ಚಿಪ್ಸ್‌ , ಲೇಸ್‌, ಕುರ್‌ಕುರೆಗಳಂಥ ತಿಂಡಿಗಳನ್ನು, ಚಾಕಲೇಟ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆಂಬುದನ್ನು ಬಹುಶಃ ತಂದೆತಾಯಿಯರು ಮರೆತಿರಬಹುದು. ಸರಿ ಮನೆವೈದ್ಯರ (ಮಗುವಿನ ಸ್ಪೆಷಲಿಸ್ಟ್‌) ಬಳಿ ಧಾವಿಸುತ್ತಾರೆ. ಅವರು ಯಾವುದಾದರೊಂದು ಟಾನಿಕನ್ನು ಬರೆದುಕೊಟ್ಟರೆ ಮುಗಿಯಿತು. ಅವರಿಗಷ್ಟು ದುಡ್ಡು ತೆತ್ತು ಸಮಾಧಾನದಿಂದ ಮನೆಗೆ ತೆರಳುತ್ತಾರೆ. ಬೇರೆ ತಿಂಡಿಗಳನ್ನು ಗಬಗಬನೆ ತಿನ್ನುವ ಮಗು ಊಟವನ್ನು ಮಾತ್ರ ಏಕೆ ಮಾಡುತ್ತಿಲ್ಲ ಎಂಬುದನ್ನು ಯೋಚಿಸುವಷ್ಟು ವ್ಯವಧಾನವೆಲ್ಲಿರುತ್ತದೆ ಇಂದಿನ ಅಮ್ಮಂದಿರಿಗೆ.

ಆ ಕಾಲವೊಂದಿತ್ತು…
ಒಮ್ಮೆ ತಮ್ಮ ತಂದೆ-ತಾಯಿಯರು ಬೆಳೆದ ರೀತಿ, ತಮ್ಮನ್ನು ಬೆಳೆಸಿದ ರೀತಿಯ ಬಗ್ಗೆ ಆಲೋಚಿಸಿ ಅತ್ತ ತಿರುಗಿ ನೋಡಿದರೆ ಬಹುಶಃ ಅವರಿಗೆ ಅರ್ಥವಾದೀತು. ಹಿಂದಿನ ಕಾಲದಲ್ಲಿ ತಾಯಂದಿರು ಬೆಳಿಗ್ಗೆ ಐದು ಗಂಟೆಗೇ ಎದ್ದು ಒಂದು ಅನ್ನ, ಸಾರು, ಹುಳಿ ಮಾಡಿಬಿಟ್ಟರೆ ಮುಗಿಯಿತು. ಒಂಬತ್ತು ಗಂಟೆಯ ಹೊತ್ತಿಗೆ ಎಲ್ಲರಿಗೂ ಹೊಟ್ಟೆತುಂಬಾ ಬಡಿಸಿಬಿಡುತ್ತಿದ್ದರು. ಶಾಲೆಯ ಡಬ್ಬಿಗೂ ಅದೇ ಊಟ. ತಂಗಳನ್ನ ಉಳಿದಿದ್ದರೆ ಚಿತ್ರಾನ್ನ ಅಥವಾ ಮೊಸರನ್ನವೇ ಬೆಳಗಿನ ನಮ್ಮ ಫ‌ಲಾಹಾರ. ಸಾಯಂಕಾಲ ಶಾಲೆಯಿಂದ ಹಿಂದಿರುಗಿದ ನಂತರ ಮತ್ತೂಮ್ಮೆ ಊಟ ಮಾಡಿಬಿಟ್ಟರಾಯಿತು. ರಾತ್ರಿ ಬೇಕಾದವರು ಊಟ ಮಾಡುತ್ತಿದ್ದರು.

ಕರಾವಳಿ ಭಾಗದಲ್ಲಂತೂ ಜನಜೀವನ ತೀರಾ ಭಿನ್ನವಾಗಿತ್ತು. ಗೃಹಿಣಿಯರು ಬೆಳಗಿನ ಜಾವ ನಾಲ್ಕೂವರೆಗೆ ಎದ್ದು ಕುಸಲಕ್ಕಿ ಗಂಜಿಯನ್ನು ಬೇಯಲು ಇಟ್ಟುಬಿಟ್ಟರೆ ಶಾಲಾ ಸಮಯಕ್ಕೆ ಬೆಂದಿರುತ್ತಿತ್ತು. ಉಪ್ಪಿನಕಾಯಿ, ತುಪ್ಪದೊಂದಿಗೆ ಊಟ ಮಾಡಿಕೊಂಡು ಹೋದರೆ ಎಷ್ಟು ಸೆಕೆಗಾಲದಲ್ಲೂ ಬಾಯಾರಿಕೆಯಾಗುತ್ತಿರಲಿಲ್ಲ. ತಿಳಿಯನ್ನು ಬಸಿದು ಅನ್ನವನ್ನು ಒಂದು ಬಾಕ್ಸ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.

ಅಪರೂಪಕ್ಕೊಮ್ಮೆ ದೋಸೆ, ಇಡ್ಲಿ, ಒತ್ತುಶ್ಯಾವಿಗೆಯು ಫ‌ಲಾಹಾರಕ್ಕೆ ಸಿದ್ಧವಿರುತ್ತಿತ್ತು. ಅದು ಮಾಡಿದ ದಿವಸ ಬೆಳಗಿನಿಂದ ಸಂಜೆಯವರೆಗೆ ಅದೇ ತಿಂಡಿ. ಬೇಸರ ಪಟ್ಟುಕೊಂಡರೆ ನಮಗೇ ಪಂಗನಾಮ. ಹಾಗಾಗಿ ಎಲ್ಲರೂ ಮರುಮಾತನಾಡದೆ ತಣ್ಣಗಿದ್ದರೂ ಅದನ್ನೇ ತಿನ್ನುತ್ತಿದ್ದೆವು. ಬಿಸಿ ಮಾಡುವ ಪ್ರಮೇಯವೇ ಇರಲಿಲ್ಲ. ಹಬ್ಬ , ಹರಿದಿನಗಳಲ್ಲಿ ವಿಶೇಷ ತಿಂಡಿತಿನಿಸುಗಳು ತಯಾರಾಗುತ್ತಿದ್ದವು. ಎಲ್ಲರೂ ಬಹಳ ಇಷ್ಟಪಟ್ಟು ಸವಿಯುತ್ತಿದ್ದೆವು. ಹಾಗಾಗಿ ಒಂದೊಂದು ಹಬ್ಬಕ್ಕೆ ಒಂದೊಂದು ರೀತಿಯ ತಿಂಡಿ ಗಳನ್ನು ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಮನೆಯಲ್ಲಿ ಅರ್ಧ, ಒಂದು ಡಜನ್‌ ಮಕ್ಕಳಿರುತ್ತಿದ್ದ ಆ ದಿನಗಳಲ್ಲಿ ಒಬ್ಬೊಬ್ಬರಿಗೂ ಇಷ್ಟವಾಗುವ ತಿಂಡಿಗಳನ್ನು ಮಾಡಿಕೊಡುವುದು ಅಸಾಧ್ಯದ ವಿಷಯವೇ ಸರಿ.

ಈ ದಿನಗಳಲ್ಲಿ ಎಲ್ಲವೂ ಅಯೋಮಯವಾಗಿದೆ. ಹೈಟೆಕ್‌ ಅಮ್ಮಂದಿರಿಗೆ ಸೂರ್ಯ ಉದಯವಾಗುವುದೇ ಏಳು ಗಂಟೆಯ ನಂತರ. ಅವರಿಗೆ ಮಕ್ಕಳನ್ನು ಬೆಳೆಸುವ ರೀತಿಯ ಅರಿವಿಲ್ಲವೋ, ಅಥವಾ ಅವರ ಕೈಯಲ್ಲಿರುವ ಕಾಂಚಾಣದ ಪ್ರಭಾವವೋ, ಅಥವಾ ತಮ್ಮ ಮಕ್ಕಳ ಬಗೆಗಿರುವ ಅತೀವ ಕಾಳಜಿಯೋ ಗೊತ್ತಿಲ್ಲ. ಮಕ್ಕಳ ಮಾನಸಿಕ ಬೆಳವಣಿಗೆಯಂತೂ ಈ ರೀತಿ ವ್ಯಕ್ತವಾಗುತ್ತಿದೆ. ಮಕ್ಕಳು ಹೇಳಿದಂತೆ ಕೇಳುತ್ತಾ ಅವರು ಹಾದಿತಪ್ಪಲು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳೂ ಮನೆಯ ಊಟೋಪಚಾರಗಳನ್ನು ಮರೆತು ಹೊರಗಿನ ತಿಂಡಿತೀರ್ಥಗಳತ್ತ ಮನಸೋಲುತ್ತಿದ್ದಾರೆ.

ನಮ್ಮ ಪರಿಚಯದವರೊಬ್ಬರ ಮಗನ ವರ್ತನೆಯನ್ನು ಇಲ್ಲಿ ನಿದರ್ಶನವಾಗಿ ಕೊಡಬಹುದು. ಅವನಿಗೆ 10ನೇ ತರಗತಿಯಲ್ಲಿ ಒಳ್ಳೆಯ ಅಂಕಗಳು ಬಂದ ಕಾರಣ, ಒಂದು ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆದರೆ, ಅವನು ಅಲ್ಲಿಗೆ ಸೇರಲು ಬಯಸದೆ ಬೇರೆ ಕಾಲೇಜನ್ನು ಆಯ್ಕೆಮಾಡಿಕೊಂಡದ್ದು ಎಲ್ಲರಿಗೂ ಬೇಸರ ಉಂಟುಮಾಡುತ್ತಿತ್ತು. ಕಾರಣ ಕೇಳಿದಾಗ ಅವನಿಂದ ಬಂದ ಉತ್ತರ: ಆ ಕಾಲೇಜಿನ ಕ್ಯಾಂಟೀನ್‌ ಚೆನ್ನಾಗಿಲ್ಲ. ನಾನು ಈಗ ಸೇರಿರುವ ಕಾಲೇಜಿನ ಕ್ಯಾಂಟೀನ್‌ ಸೂಪರ್‌ ಆಗಿದೆ. ಅವನ ಮಾತು ಕೇಳಿ, ಎಲ್ಲರೂ ಒಮ್ಮೆ ದಂಗಾಗಿ ಹೋದರು.

ಇದನ್ನೆಲ್ಲ ಗಮನಿಸುವಾಗ ನಾವು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಎಡವುತ್ತಿದ್ದೇವೆಂದು ಭಾಸವಾಗುತ್ತಿದೆ. ಭವಿಷ್ಯದ ಪರಿಸ್ಥಿತಿಯನ್ನು ಅರಿಯಲು ಯಾರಿಗೂ ಸಾಧ್ಯವಿಲ್ಲ. ಯಾವಾಗ ಏನಾಗುತ್ತದೋ ಯಾರೂ ಅರಿಯರು. ಹಾಗಾಗಿ, ಮಕ್ಕಳಿಗೆ ಕಷ್ಟಸುಖ ಏನೆಂದು ಗೊತ್ತಾಗುವ ರೀತಿಯಲ್ಲಿ ಬೆಳೆಸಬೇಕು. ಮುಂದೆ ಅವರಿಗೆ ಯಾವುದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಛಾತಿಯಿರಬೇಕು. ಅತಿಯಾದ ಅಕ್ಕರೆ ಮಕ್ಕಳನ್ನು ಅಶಿಸ್ತಿನ ವಾತಾವರಣಕ್ಕೆ ದಬ್ಬುತ್ತದೆ ಎಂಬುದು ನೆನಪಿರಲಿ. ಗಿಡವಾಗಿ ಬಗ್ಗದ್ದು ಮರವಾದ ಮೇಲೆ ಖಂಡಿತಾ ಬಗ್ಗಲಾರದು. ಆದ್ದರಿಂದ ಎಳವೆಯಿಂದಲೇ ಮಕ್ಕಳ ಮನಸ್ಸನ್ನು ಹೇಳಿದ್ದನ್ನು ಅರ್ಥಮಾಡಿಕೊಳ್ಳುವಂಥ ಮನಃಸ್ಥಿತಿಗೆ ಒಗ್ಗಿಸಿ. ಹಾಗಾದಾಗ ಮಾತ್ರ ಭವಿಷ್ಯದಲ್ಲಿ ಅವರಿಂದ ಸದ್ವರ್ತನೆಯನ್ನು ನಿರೀಕ್ಷಿಸಲು ಸಾಧ್ಯ.

ಪುಷ್ಪಾ ಎನ್‌.ಕೆ. ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

  • ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು...

  • ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ....

  • ಹೆತ್ತವರ ಕಷ್ಟಕ್ಕೆ ಹೆಣ್ಣುಮಕ್ಕಳು ಬೇಗ ಕರಗುತ್ತಾರೆ. ಅಪ್ಪ-ಅಮ್ಮನನ್ನು ಮಗನಿಗಿಂತ, ಮಗಳೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವುದು ನೂರಕ್ಕೆ ನೂರು ಸತ್ಯ....

ಹೊಸ ಸೇರ್ಪಡೆ